ಟಿಕೆಟ್‌ಗಾಗಿ ಬಂಡಾಯದ ಬಿಸಿ: ಬಿಜೆಪಿಗೆ ಮಡಿಲ ಕೆಂಡವಾಗಲಿದೆಯೇ ಕೆಜೆಪಿ ನಂಟು?
COVER STORY

ಟಿಕೆಟ್‌ಗಾಗಿ ಬಂಡಾಯದ ಬಿಸಿ: ಬಿಜೆಪಿಗೆ ಮಡಿಲ ಕೆಂಡವಾಗಲಿದೆಯೇ ಕೆಜೆಪಿ ನಂಟು?

ಕೆಜೆಪಿ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ನ ಹಳೆಯ ನಂಟು ಈಗ ಬಿಜೆಪಿಯನ್ನು ಬಾಧಿಸಲು ಆರಂಭಿಸಿವೆ. ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಬಿ. ಶ್ರೀರಾಮುಲು ವಿರುದ್ಧ ನಡೆದ ಪ್ರತಿಭಟನೆ ಬಂಡಾಯದ ಆರಂಭದ ಬಿಸಿಯಷ್ಟೆ.

ಮೊಳಕಾಲ್ಮೂರು ಕ್ಷೇತ್ರಕ್ಕೆ ಬಿಜೆಪಿ ಬಿ. ಶ್ರೀರಾಮುಲು ಹೆಸರನ್ನು ಅಂತಿಮಗೊಳಿಸಿದ ದಿನದಿಂದ ಈ ಭಾಗದಲ್ಲಿ ಹಾಲಿ ಶಾಸಕ ಎಸ್‌. ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ ಹೆಚ್ಚುತ್ತಲೇ ಇದೆ. ಶುಕ್ರವಾರ ನಾಯಕನಹಟ್ಟಿಯ ತಿಪ್ಪೇಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ಶ್ರೀರಾಮುಲು ತಿಪ್ಪೇಸ್ವಾಮಿ ಬೆಂಬಲಿಗರ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

ತಿಪ್ಪೇಸ್ವಾಮಿ ದೇವಸ್ಥಾನಕ್ಕೆ ಬಂದ ಶ್ರೀರಾಮುಲು ಕಾರಿನ ಮೇಲೆ ತಿಪ್ಪೇಸ್ವಾಮಿ ಬೆಂಬಲಿಗರು ಚಪ್ಪಲಿ ಹಾಗೂ ಕಲ್ಲುಗಳನ್ನು ತೂರಿದ್ದಾರೆ. ಇದು ಮೇಲ್ನೋಟಕ್ಕೆ ಕೇವಲ ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶದಂತೆ ಕಾಣುತ್ತಿದ್ದರೂ ಇದರ ಹಿಂದಿರುವುದು ಹಾಲಿ ಶಾಸಕ ಎಸ್‌.ತಿಪ್ಪೇಸ್ವಾಮಿ ಅಸಮಾಧಾನ. ತಿಪ್ಪೇಸ್ವಾಮಿ ತಮ್ಮ ಅಸಮಾಧಾನವನ್ನು ತಮ್ಮ ಬೆಂಬಲಿಗರ ಮೂಲಕ ಹೊರಹಾಕುತ್ತಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾತ್ರವಲ್ಲ ಹಿಂದೆ ಬೆಂಗಳೂರಿನ ಚಿಕ್ಕಪೇಟೆ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಕಡೆ ಬಿಜೆಪಿ ಟಿಕೆಟ್‌ ವಂಚಿತರು ತಮ್ಮ ಬೆಂಬಲಿಗರನ್ನು ಬೀದಿಗಿಳಿಸಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಈ ಹಿಂದೆ ಬಿಜೆಪಿಯಿಂದ ಹೊರ ಬಂದ ಯಡಿಯೂರಪ್ಪ ಕೆಜೆಪಿ ಸೇರಿದ್ದರೆ ಬಿ.ಶ್ರೀರಾಮುಲು ಬಿಎಸ್‌ಆರ್‌ ಕಾಂಗ್ರೆಸ್‌ ಎಂಬ ಹೊಸ ಪಕ್ಷ ಹುಟ್ಟುಹಾಕಿದ್ದರು. ಕೆಜೆಪಿ ಇನ್ನೂ ತಮ್ಮದೇ ಎಂದು ಪ್ರಸನ್ನ ಕುಮಾರ್‌ ಬಡಬಡಿಸುತ್ತಿದ್ದರೆ ಬಿಎಸ್‌ಆರ್‌ ಕಾಂಗ್ರೆಸ್‌ ಬಿಜೆಪಿ ಜತೆಗೆ ವಿಲೀನಗೊಂಡಿದೆ.

ಇಷ್ಟು ದಿನ ರಾಜಕೀಯ ಚರ್ಚೆಗಳಿಂದ ಹೊರಗಿದ್ದ ಕೆಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ ಚುನಾವಣೆ ಹತ್ತಿರವಾಗಿರುವ ದಿನಗಳಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಹಿಂದೆ ಈ ಎರಡೂ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿ 2013ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದ್ದ ಅಭ್ಯರ್ಥಿಗಳಲ್ಲಿ ಕೆಲವರು ಈ ಬಾರಿ ಬಿಜೆಪಿಯಿಂದ ತಮಗೇ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ನಿರೀಕ್ಷೆ ಈಗ ಹುಸಿಯಾಗಿದೆ.

ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲವರು ಪಕ್ಷೇತರರಾಗಿ ಸ್ಪರ್ಧಿಸುವ ಅಥವಾ ಬೇರೆ ಪಕ್ಷ ಸೇರುವ ಮಾತನ್ನಾಡುತ್ತಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿ ಮತ ಬ್ಯಾಂಕ್‌ ಒಡೆಯುವ ಲಕ್ಷಣಗಳು ಕೆಲವೆಡೆ ಕಾಣುತ್ತಿವೆ.

ಟಿಕೆಟ್‌ಗಾಗಿ ಬಂಡಾಯದ ಬಿಸಿ: ಬಿಜೆಪಿಗೆ ಮಡಿಲ ಕೆಂಡವಾಗಲಿದೆಯೇ ಕೆಜೆಪಿ ನಂಟು?

ಬಿಜೆಪಿಗೆ ವಾಪಸ್

2013ರ ವಿಧಾನಸಭಾ ಚುನವಾಣೆಯಲ್ಲಿ 204 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕೆಜೆಪಿ ಗೆದ್ದಿದ್ದು ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ. ಯಡಿಯೂರಪ್ಪ ಮುಂದಾಳತ್ವದಲ್ಲಿ ಕೆಜೆಪಿ ರಾಜಕೀಯ ಹೆಚ್ಚು ದಿನ ನಡೆಯಲಿಲ್ಲ. ಬಿಜೆಪಿ ವಿರುದ್ಧ ಸಿಟ್ಟಾಗಿ ಪಕ್ಷ ತೊರೆದಿದ್ದ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಿದ್ದು ಆಗ ಅವರ ಜತೆಗಿದ್ದ ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಕೆಜೆಪಿ ಸೇರುವಾಗ ಹಲವರ ಜತೆಗೆ ಸಭೆ ನಡೆಸಿದ್ದ ಯಡಿಯೂರಪ್ಪ ಕೆಜೆಪಿ ಬಿಟ್ಟು ಮತ್ತೆ ಬಿಜೆಪಿಗೆ ಬರುವಾಗ ಜತೆಗಿದ್ದ ಯಾರ ಅಭಿಪ್ರಾಯವನ್ನೂ ಕೇಳಲಿಲ್ಲ ಎಂಬ ಕಾರಣ ಬಿಎಸ್‌ವೈ ಜತೆಗಿದ್ದ ಕೆಲವರು ಅವರಿಂದ ದೂರಾಗಿದ್ದರು. ಅಂದು ಕೆಜೆಪಿಯಲ್ಲಿ ಯಡಿಯೂರಪ್ಪ ಜತೆಗೆ ಕಾಣುತ್ತಿದ್ದ ವಿ. ಧನಂಜಯ್‌ ಕುಮಾರ್‌ ಕೊನೆಗೆ ಆಶ್ರಯಿಸಿದ್ದು ಕಾಂಗ್ರೆಸ್‌.

ಕೆಜೆಪಿಯಿಂದ ಬಿಜೆಪಿಗೆ ಬಂದ ಬಳಿಕ ಯಡಿಯೂರಪ್ಪ ಕೆ.ಎಸ್‌.ಈಶ್ವರಪ್ಪ ವಿರೋಧ ಎದುರಿಸಬೇಕಾಯಿತು. ಬಿಎಸ್‌ವೈ ರಾಜ್ಯದಲ್ಲಿ ಬಿಜೆಪಿ ಬಿಟ್ಟು ಕೆಜೆಪಿಗೆ ಹೋದಾಗ ಪಕ್ಷ ಮುನ್ನಡೆಸಿದ್ದು ನಾವು, ಮತ್ತೆ ಅವರು ಬಿಜೆಪಿಗೆ ಮರಳಿದಾಗ ರಾಜಾಧ್ಯಕ್ಷ ಹುದ್ದೆ ಕೊಟ್ಟಿದ್ದು ಸರಿಯಲ್ಲ ಎಂದು ಈಶ್ವರಪ್ಪ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು.

ಈಶ್ವರಪ್ಪ ಸಿಟ್ಟು ಇಷ್ಟಕ್ಕೇ ನಿಲ್ಲಲಿಲ್ಲ. ರಾಯಣ್ಣ ಬ್ರಿಗೇಡ್‌ ಹೆಸರಿನಲ್ಲಿ ಪ್ರತ್ಯೇಕ ಸಂಘಟನೆ ರೂಪಿಸಲು ಮುಂದಾಗಿದ್ದ ಈಶ್ವರಪ್ಪ ಹಲವು ಬಾರಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದರು. ರಾಜ್ಯ ಬಿಜೆಪಿಯಲ್ಲಿ ಇಬ್ಬರು ಪ್ರಮುಖ ಮುಖಂಡರ ಈ ರೀತಿಯ ವೈಮನಸ್ಸನ್ನು ತಹಬದಿಗೆ ತರಲು ಬಿಜೆಪಿಯ ರಾಷ್ಟ್ರೀಯ ನಾಯಕರು ಹರಸಾಹಸ ಪಡಬೇಕಾಯಿತು.

ಟಿಕೆಟ್‌ಗಾಗಿ ಬಂಡಾಯದ ಬಿಸಿ: ಬಿಜೆಪಿಗೆ ಮಡಿಲ ಕೆಂಡವಾಗಲಿದೆಯೇ ಕೆಜೆಪಿ ನಂಟು?

ಬಿಜೆಪಿ ಕಾಡುತ್ತಿರುವ ಆಂತರಿಕ ಸಮಸ್ಯೆ

ರಾಜ್ಯದಲ್ಲಿ ಬಿಜೆಪಿಯನ್ನು ಮೊದಲಿನಿಂದಲೂ ಕಾಡುತ್ತಿರುವುದು ಪಕ್ಷದೊಳಗಿನ ಆಂತರಿಕ ಸಮಸ್ಯೆಗಳು. ಈ ಆಂತರಿಕ ಸಮಸ್ಯೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಪರಿಹರಿಸಿಕೊಂಡಿರುವ ಉದಾಹರಣೆಗಳು ಕಡಿಮೆ ಎಂಬುದು ರಾಜಕೀಯ ತಜ್ಞರ ಮಾತು.

“ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಿಜೆಪಿ ಸರಿಯಾಗಿ ನಿಭಾಯಿಸಿದ್ದು ಕಡಿಮೆ. ಜತೆಗೆ ಕ್ಷೇತ್ರಗಳನ್ನು ಬದಲಿಸುವ ಸಮಸ್ಯೆ ಬಿಜೆಪಿಗಿದೆ. ಮೊಳಕಾಲ್ಮೂರಿನಲ್ಲಿ ಎದುರಾಗಿರುವ ಸಮಸ್ಯೆ ಮುಂದೆ ಹಲವು ಕಡೆ ಮರುಕಳಿಸಬಹುದು. ಈ ಅಸಮಾಧಾನ ಬಿಜೆಪಿಗೆ ತಕ್ಕಮಟ್ಟಿಗೆ ಪೆಟ್ಟುಕೊಡಲಿದೆ” ಎಂಬುದು ಹಿರಿಯ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ ಅವರ ಮಾತು.

“ಹಿಂದೆ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದವರು ಆರ್‌ಎಸ್‌ಎಸ್ ಕಾರ್ಯಕರ್ತರು. ಆರ್‌ಎಸ್‌ಎಸ್‌ ಕಾರ್ಯಕರ್ತರು ಅಧಿಕಾರ ಬಯಸುತ್ತಿರಲಿಲ್ಲ. ಬಿಜೆಪಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಬಿಟ್ಟು ಸ್ಥಳೀಯ ನಾಯಕರನ್ನು ಚುನಾವಣಾ ಸ್ಪರ್ಧೆಗಾಗಿ ಹುಡುಕಲು ಶುರು ಮಾಡಿದ ಬಳಿಕ ಸ್ಥಳೀಯ ಮಟ್ಟದ ಮುಖಂಡರು ಪ್ರಮುಖ ನಾಯಕರ ವಿರುದ್ಧವೇ ಸ್ಪರ್ಧಿಸಲು ಮನಸ್ಸು ಮಾಡುವ ಸ್ಥಿತಿ ನಿರ್ಮಾಣವಾಯಿತು. ಇಂದು ಜಿಲ್ಲಾ ಪಂಚಾಯ್ತಿಯಲ್ಲಿ ಗೆದ್ದು ಬಂದವರು ಪ್ರಮುಖ ಮುಖಂಡರ ಕ್ಷೇತ್ರಗಳಲ್ಲೇ ಸ್ಪರ್ಧಿಸುವ ಮಾತನಾಡುತ್ತಿದ್ದಾರೆ. ಇದೇ ಬಿಜೆಪಿಯ ನಿಜವಾದ ಸಮಸ್ಯೆ” ಎನ್ನುತ್ತಾರೆ ರಾಮಸ್ವಾಮಿ.

ಹಿಂದೆ ಕೆಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ನಲ್ಲಿ ಇದ್ದವರು ಈ ಬಾರಿ ಟಿಕೆಟ್‌ ವಂಚಿತರಾಗಿರುವುದು ಬಿಜೆಪಿಗೆ ಖಂಡಿತವಾಗಿ ಹೊಡೆತ ಕೊಡಲಿದೆ
- ಡಾ. ಹರೀಶ್‌ ರಾಮಸ್ವಾಮಿ, ರಾಜಕೀಯ ವಿಶ್ಲೇಷಕ
ಟಿಕೆಟ್‌ಗಾಗಿ ಬಂಡಾಯದ ಬಿಸಿ: ಬಿಜೆಪಿಗೆ ಮಡಿಲ ಕೆಂಡವಾಗಲಿದೆಯೇ ಕೆಜೆಪಿ ನಂಟು?

ಬಿಜೆಪಿಗೆ ಪೆಟ್ಟು ಕೊಟ್ಟಿದ್ದ ಕೆಜೆಪಿ

2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ ಸೇರಿ ಬೆಜೆಪಿಗೆ ತೀವ್ರ ಪೆಟ್ಟು ಕೊಟ್ಟಿದ್ದವು. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಸಮೀಪಕ್ಕೆ ಬಂದು ಸೋಲು ಕಂಡಿದ್ದರು. ಬಿಜೆಪಿಯ ಮತಗಳನ್ನು ಕೆಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ ಒಡೆದಿದ್ದು ಕಾಂಗ್ರೆಸ್‌ಗೆ ಅನುಕೂಲವಾಗಿತ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

“ಕಳೆದ ಬಾರಿಯ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್ ಒಟ್ಟಾಗಿ ಸುಮಾರು 44 ಕ್ಷೇತ್ರಗಳಲ್ಲಿ ಬಿಜೆಪಿಗೆ ಬರುವ ಮತಗಳ ದಾರಿ ತಪ್ಪಿಸಿದ್ದವು. 38 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ನೇರವಾಗಿ ಕೆಜೆಪಿ ಕಾರಣವಾಗಿತ್ತು” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್‌.

ಟಿಕೆಟ್‌ ಹಂಚಿಕೆಯ ಅಸಮಾಧಾನ ಎಲ್ಲಾ ಪಕ್ಷಗಳಲ್ಲೂ ಇದ್ದಿದ್ದೇ. ಅಸಮಾಧಾನವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಪಕ್ಷಗಳು ಮಾಡುತ್ತವೆ. ಈ ರೀತಿಯ ಅಸಮಾಧಾನ ಎಲ್ಲಾ ಪಕ್ಷಗಳ ಮತ ಹಂಚಿಕೆಯ ಮೇಲೂ ಪರಿಣಾಮ ಬೀರುತ್ತದೆ
- ಮಹದೇವ ಪ್ರಕಾಶ್, ರಾಜಕೀಯ ವಿಶ್ಲೇಷಕ

ಆದರೆ, ಈ ಬಾರಿ ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ನ ಸಂತ್ರಸ್ತರ ಅಸಮಾಧಾನ ಬಿಜೆಪಿಗೆ ದೊಡ್ಡ ಮಟ್ಟದ ಪೆಟ್ಟುಕೊಡುವುದು ಕಷ್ಟ. ಯಾವುದೇ ರಾಜಕೀಯ ನಾಯಕ ಪಕ್ಷ ಬದಲಿಸುವುದು ಅವರ ಅಭಿಮಾನಿ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂಬುದು ಅವರ ಅನಿಸಿಕೆ.

ಟಿಕೆಟ್‌ಗಾಗಿ ಬಂಡಾಯದ ಬಿಸಿ: ಬಿಜೆಪಿಗೆ ಮಡಿಲ ಕೆಂಡವಾಗಲಿದೆಯೇ ಕೆಜೆಪಿ ನಂಟು?

“ಬಿಜೆಪಿ ತೊರೆದು ಕೆಜೆಪಿಗೆ ಹೋಗಿದ್ದ ಯಡಿಯೂರಪ್ಪ ಜತೆಗೆ ಅವರ ಬಹುತೇಕ ಹಿಂಬಾಲಕರು ಹೋಗಿದ್ದರು. ಯಡಿಯೂರಪ್ಪ ಕೆಜೆಪಿಯಿಂದ ಮತ್ತೆ ಬಿಜೆಪಿಗೆ ಬಂದಾಗ ಬಹುತೇಕ ಅವರ ಹಿಂಬಾಲಕರೆಲ್ಲರೂ ಮತ್ತೆ ಬಿಜೆಪಿ ಸೇರಿದರು. ಕೆಲವರು ಆಗ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ, ಯಡಿಯೂರಪ್ಪ ಅವರ ನಿಷ್ಠ ಹಿಂಬಾಲಕರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ. ರಾಜಕೀಯ ನಾಯಕ ಪಕ್ಷ ಬದಲಿಸುವುದು ಅವರ ಮತ ಬ್ಯಾಂಕ್‌ ಮೇಲೆ ತುಂಬಾ ದೊಡ್ಡ ಪರಿಣಾಮವನ್ನೇನೂ ಬೀರುವುದಿಲ್ಲ” ಎಂಬುದು ಮಹದೇವ ಪ್ರಕಾಶ್‌ ಅಭಿಪ್ರಾಯ.

ಒಂದು ಕಡೆಗೆ ಟಿಕೆಟ್‌ ವಂಚಿತರ ಬಂಡಾಯ, ಮತ್ತೊಂದು ಕಡೆಗೆ ಪಕ್ಷದ ಆಂತರಿಕ ಸಮಸ್ಯೆಗಳು ಸದ್ಯ ಬಿಜೆಪಿಯನ್ನು ಕಾಡುತ್ತಿವೆ. ಇದರ ಜತಗೇ ರಾಜ್ಯದಲ್ಲಿ ಪಕ್ಷದ ನಾಯಕತ್ವ ವಿಚಾರದಲ್ಲಿಯೂ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಗೆ ಬಂಡಾಯದ ಬಿಸಿ ತಟ್ಟದೇ ಇರದು.