samachara
www.samachara.com
ಕ್ಷಮಿಸಿ, ಈ ವರದಿಗೆ ತಲೆಬರಹ ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ :(
COVER STORY

ಕ್ಷಮಿಸಿ, ಈ ವರದಿಗೆ ತಲೆಬರಹ ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ :(

8 ವರ್ಷದ ಮುಗ್ಧ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದ ಸುದ್ದಿ ಕೇಂದ್ರಕ್ಕೆ ಬಂದಿದೆ. ದೇಶದ ಜನ ಬಾಲಕಿಯ ಪರವಾಗಿ ನಿಂತಿದ್ದರೆ, ಹಿಂದೂ ರಾಷ್ಟ್ರೀಯತಾವಾದಿಗಳು ಪ್ರಕರಣವನ್ನು ಮುಚ್ಚಿಹಾಕಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಅದು ಜನವರಿ ತಿಂಗಳ ಮೊದಲ ದಿನಗಳು. ಕಾಶ್ಮೀರದ ಹುಲ್ಲುಗಾವಲಿನಲ್ಲಿ ನೇರಳೆ ಬಣ್ಣದ ಬಟ್ಟೆ ತೊಟ್ಟಿದ್ದ ಎಂಟು ವರ್ಷದ ಪುಟ್ಟ ಹುಡುಗಿ ಕುದುರೆಗಳಿಗೆ ಹುಲ್ಲು ಮೇಯಿಸುತ್ತಿದ್ದಳು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಸನ್ನೆ ಮಾಡಿ ಕರೆದ. ಆತನನ್ನು ಹಿಂಬಾಲಿಸಿ, ಕಾಡಿಗೆ ನಡೆದಳು.

ಆತ ಆ ಪುಟ್ಟ ಹುಡುಗಿಯನ್ನು ಕರೆದೊಯ್ದಿದ್ದು ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ. ಆಕೆ ಬರಲು ಹಿಂದೇಟು ಹಾಕಿದಾಗ ಅವಳ ಕುತ್ತಿಗೆಯನ್ನಿಡಿದು ಎಳೆದೊಯ್ದ ಆ ವ್ಯಕ್ತಿ, ಗೆಳೆಯನ ಸಹಾಯದೊಂದಿಗೆ ಆಕೆಗೆ ಮದ್ದಿನ ಮಾತ್ರೆಯನ್ನು ನೀಡಿದ್ದ.

ನಂತರ ಆ ಪುಟ್ಟ ಬಾಲಕಿ ಮೂರು ದಿನಗಳ ಕಾಲ ನರಕವನ್ನು ಅನುಭವಿಸಿದ್ದಳು. ಇಬ್ಬರೂ ಗೆಳೆಯರು ಮೂರು ದಿನಗಳ ಕಾಲ ಮುಗ್ಧ ಬಾಲಕಿ ಮೇಲೆ ಸತತವಾಗಿ ಅತ್ಯಾಚಾರ ನಡೆಸಿದ್ದರು. ಕೊನೆಗೊಮ್ಮೆ ಅವರಲ್ಲೇ ಒಬ್ಬ ಆಕೆ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಂದ.

ಯಾವ ತಪ್ಪೂ ಮಾಡಿರದಿದ್ದ ಪುಟ್ಟ ಬಾಲೆ ಅಮಾನುಷ ಕ್ರೌರ್ಯದಿಂದ ತತ್ತರಿಸಿದ್ದಳು. ಕೊನೆಗೆ ಹೆಣವಾಗಿ ಹೋದಳು.

ಬಾಲಕಿಯ ಮೃತ ದೇಹ.
ಬಾಲಕಿಯ ಮೃತ ದೇಹ.

ಮಾರನೇ ದಿನ ಬಾಲಕಿಯ ಅದೇ ನೇರಳ ಬಣ್ಣದ ಬಟ್ಟೆ ತೊಟ್ಟ ದೇಹ ಕಾಡಿನಲ್ಲಿ ಪತ್ತೆಯಾಯಿತು. ರಕ್ತದಿಂದ ತೊಯ್ದು ಮುದ್ದೆಯಾಗಿತ್ತು. ಬಾಲಕಿಯ ಸ್ವಗ್ರಾಮದಲ್ಲಿ ಬಾಂಧವರ ಆಕ್ರಂದನ ಮುಗಿಲು ಮುಟ್ಟಿ, ಆಕ್ರೋಶಕ್ಕೆ ತಿರುಗಿತ್ತಾದರೂ ನೀಚ ಕ್ರೌಯ್ರವೆಸಗಿದವರು ಮಾತ್ರ ಅರಾಮಾಗಿ ತಿರುಗಾಡಿಕೊಂಡಿದ್ದರು. ಲಂಚ ಪಡೆದಿದ್ದ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಿದ್ದರು.

ಮೂರು ತಿಂಗಳ ಬಳಿಕ ಈ ನೀಚ ಘಟನೆ ಮರುಹುಟ್ಟು ಪಡೆದುಕೊಂಡಿದೆ. ಬಾಲಕಿಯ ಸಮುದಾಯ ಪ್ರತಿಭಟನೆಯನ್ನು ತೀವ್ರಗೊಳಿಸಿದ ಬೆನ್ನಲ್ಲಿ ಮತ್ತೆ ದೇಶದ ಸುದ್ದಿ ಕೇಂದ್ರಕ್ಕೆ ಬಂದಿದೆ. ಈ ಕುಕೃತ್ಯಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ದೇವಸ್ಥಾನದ ಮೇಲ್ವಿಚಾರಕ ಸಂಜಿರಾಮ್‌, ಪೊಲೀಸ್‌ ಅಧಿಕಾರಿ ಸುರೇದರ್‌ ವರ್ಮ ಪ್ರಮುಖ ಆರೋಪಿಗಳಾಗಿದ್ದಾರೆ. ಬಂಧನಕ್ಕೆ ಒಳಗಾಗಿರುವವರ ಪೈಕಿ ಇಬ್ಬರು ಪೊಲೀಸ್‌ ಅಧಿಕಾರಿಗಳಗಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿ ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂಬ ಆರೋಪ ಇವರ ಮೇಲಿದೆ.

ಪ್ರಮುಖ ಆರೋಪಿಗಳು.
ಪ್ರಮುಖ ಆರೋಪಿಗಳು.

ಬಂಧಿತರ ಪೈಕಿ ಒಬ್ಬ ತನ್ನ ವಯಸ್ಸು 15 ಎಂದಿದ್ದು, ವೈದ್ಯಕೀಯ ಪರೀಕ್ಷೆಗಳು ಆತ 19 ವರ್ಷದ ಒಳಗಿನ ವ್ಯಕ್ತಿ ಎಂದು ತಿಳಿಸಿವೆ. ಅತ್ಯಾಚಾರ ಮತ್ತು ಕೊಲೆ ನಡೆಸಿರುವವರಿಗೆ ಸಂಬಂಧಿಸಿದಂತೆ ಸಾಕ್ಷಿಗಳು ಹಾಗೂ ಡಿಎನ್‌ಎ ವರದಿಗಳು ಲಭ್ಯವಿದ್ದು, ಬಾಲಕಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರೆಯುವುದಾಗಿ ಪೊಲೀಸರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿರುವ ಹಿಂದೂ ರಾಷ್ಟ್ರೀಯತಾ ವಾದಿಗಳು:

ಕ್ಷಮಿಸಿ, ಈ ವರದಿಗೆ ತಲೆಬರಹ ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ :(

ಈ ಕುಕೃತ್ಯ ನಡೆಸಲು ಕಾರಣವಾದ ಅಂಶ ಈಗ ದೇಶದಲ್ಲಿ ಮತ್ತೊಂದು ಕೋಲಾಹಲವನ್ನು ಉಂಟುಮಾಡಿದೆ. ಆಕೆ ಬಖೇರ್‌ ವಾಲ್‌ ಎಂಬ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಬಾಲಕಿಯಾಗಿದ್ದಳು. ಕತುವಾ ಪ್ರದೇಶದಿಂದ ಬಕರ್‌ವಾಲ್‌ ಸುಮುದಾಯವನ್ನು ಒಕ್ಕಲೆಬ್ಬಿಸುವ ಕಾರಣಕ್ಕಾಗಿ ಈ ಕೃತ್ಯ ನಡೆಸಿರುವುದಾಗಿ ಬಂಧಿತರು ತಿಳಿಸಿದ್ದಾರೆ. ಈಗ ಈ ವಿಷಯ ದೇಶದಲ್ಲಿ ಹಿಂದೂ ಮುಸ್ಲಿಂ ಧರ್ಮ ಯುದ್ಧವಾಗಿ ರೂಪ ತಳೆದಿದ್ದು, ಇಡೀ ದೇಶ ಈ ಕುರಿತು ಮಾತನಾಡತೊಡಗಿದೆ. ಮಹಿಳಾ ದೌರ್ಜನ್ಯ ಹಾಗೂ ಧಾರ್ಮಿಕ ಅಭ್ರದತೆಗಳ ನೆಲೆಯಲ್ಲಿ ಪುಟ್ಟ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸದ್ದು ಮಾಡುತ್ತಿದೆ.

ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 8 ಮಂದಿ ಕೂಡ ಹಿಂದೂ ಸಮುದಾಯದವರು. ಈ ಕಾರಣ ಹಿಂದೂ ರಾಷ್ಟ್ರೀಯತಾವಾದಿಗಳು ಸಂತ್ರಸ್ತೆ ಬಾಲಕಿಗೆ ನ್ಯಾಯ ಒದಗಿಸುವ ಬದಲು, ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ತನಿಖೆಯಲ್ಲಿ ಭಾಗವಹಿಸಿರುವ ಪೊಲೀಸರಲ್ಲಿ ಕೆಲವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ನಂಬಲಾಗುವುದಿಲ್ಲ ಎಂದು ಹಿಂದುತ್ವವಾದಿಗಳು ವಾದಿಸುತ್ತಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮೊಕದ್ದಮೆಯನ್ನು ರಾಜ್ಯ ಪೊಲೀಸರ ಕೈಯಿಂದ ಸಿಬಿಐಗೆ ಒಪ್ಪಿಸಬೇಕು ಎಂಬ ವಾದವೂ ಕೂಡ ಹಿಂದೂ ರಾಷ್ಟ್ರೀಯತಾವಾದಿಗಳಿಂದ ಕೇಳಿ ಬಂದಿದೆ. ಹಿಂದುತ್ವದ ಅಜೆಂಡಾವನ್ನು ಹೊಂದಿರುವ ಬಿಜೆಪಿಗೆ ಸಿಬಿಐಅನ್ನು ನಿಯಂತ್ರಿಸಲು ಸಾಧ್ಯವಿರುವುದರಿಂದ ಹಿಂದೂ ಸಮುದಾಯದ ಪರವಾಗಿಯೇ ತೀರ್ಪು ದೊರೆಯಬಹುದು ಎನ್ನುವ ಉದ್ದೇಶದಿಂದ ಸಿಬಿಐಗೆ ತನಿಖೆಯನ್ನು ವಹಿಸಬೇಕು ಎನ್ನಲಾಗುತ್ತಿದೆ.

ಕೋರ್ಟ್‌ನಲ್ಲಿ ಕೇಸು ದಾಖಲಿಸಲು ತೆರಳಿದ್ದ ಪೊಲೀಸರನ್ನು ಹಲವು ಮಂದಿ ಹಿಂದೂ ವಕೀಲರು ಕೋರ್ಟ್‌ ಪ್ರಾಂಗಣವನ್ನು ಪ್ರವೇಶಿಸದಂತೆ ತಡೆದಿರುವ ಘಟನೆ ಕೂಡ ವರದಿಯಾಗಿದೆ. ನಂತರದಲ್ಲಿ ಪೊಲೀಸರು ಸಂಜೆಯ ವೇಳೆ ನ್ಯಾಯಾಧೀಶರ ಮನೆಗೆ ತೆರಳಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಮೃತ ಬಾಲಕಿಯ ಪರವಾಗಿ ವಾದಿಸಲು ನಿಂತ ವಕೀಲೆ ದೀಪಿಕಾ ಸಿಂಗ್‌ ವಿರುದ್ಧ ಜಮ್ಮು ಕಾಶ್ಮೀರದ ಬಾರ್‌ ಅಸೋಸಿಯೇಷನ್‌ ತಿರುಗಿ ಬಿದ್ದಿದೆ. “ ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಹೇಗೆ ನಿಲ್ಲಿಸಬೇಕು ಎಂದು ನಮಗೆ ತಿಳಿದಿದೆ” ಎಂದು ಹಿರೀಯ ವಕೀಲರೊಬ್ಬರು ಬೆದರಿಕೆ ಹಾಕಿರುವುದಾಗಿ ದೀಪಿಕಾ ಸಿಂಗ್‌ ತಿಳಿಸಿದ್ದಾರೆ. ಏನೇ ಅದರೂ ವಾದಿಸಿಯೇ ತೀರುತ್ತೇನೆ ಎಂದು ನಿಂತಿರುವ ದೀಪಿಕಾ ಸಿಂಗ್‌ ಜತೆಗೆ ಬೆಂಬಲಿಗರಾಗಿ ದೇಶದ ಹಲವಾರು ಟ್ವಿಟ್ಟಿಗರು ನಿಂತಿದ್ದಾರೆ.

ಮೃತ ಬಾಲಕಿಳಿಗೆ ನ್ಯಾಯ ಒದಗಿಸುವ ಸಲುವಾಗಿ ಕೆಲವರು ನ್ಯಾಯಾಂಗದ ಮೂಲಕ ಹೋರಾಟಕ್ಕೆ ಇಳಿದಿದ್ದಾರೆ. ಮತ್ತೊಂದು ಕಡೆ ಬಂಧಿತರ ಪರವಾಗಿ ಜನ ಬೀದಿಗಿಳಿದಿದ್ದಾರೆ. ಹೋರಾಟ ಮತ್ತು ಪ್ರತಿಹೋರಾಟಗಳು ದೇಶದ ಹಲವಾರು ಭಾಗಗಳಿಗೆ ಪಸರಿಸಿದೆ.

ಬುಧವಾರ ಕಾಶ್ಮೀರದ ಕತುವಾ ಮತ್ತು ಇನ್ನಿತರ ಚಿಕ್ಕ ಪುಟ್ಟ ಪಟ್ಟಣಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಹಿಂದೂ ಮಹಿಳೆಯರೂ ಕೂಡ ಬೀದಿಗಿಳಿದಿದ್ದು, ರಸ್ತೆ ತಡೆ ನಡೆಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಡಿಯಿಟ್ಟಿದ್ದಾರೆ. ಮುಸಲ್ಮಾನರು ಹಿಂದೂ ಧರ್ಮದ ವಿರೋಧಿಗಳು ಎಂದಿರುವ ಮಹಿಳೆಯರು, ಬಂಧಿತರನ್ನು ಬಿಡುಗಡೆಗೊಳಿಸದಿದ್ದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಂಧಿತರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ಮಹಿಳೆಯರು.
ಬಂಧಿತರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ಮಹಿಳೆಯರು.

ಕುಕೃತ್ಯದ ಹಿಂದಿನ ಪಾತಕಿ:

ಬಾಲಕಿಯ ಮೇಲಿನ ಅತ್ಯಾಚಾರ ದೇವಸ್ಥಾನದಲ್ಲಿ ನಡೆದಿರುವುದು ಮತ್ತಷ್ಟು ಪ್ರಕರಣ ಹೊತ್ತಿ ಉರಿಯಲು ಕಾರಣವಾಗಿದೆ. ಪೊಲೀಸರು ಹೇಳುವಂತೆ, ದೇವಸ್ಥಾನದ ಮೇಲ್ವಿಚಾರಕ ಸಂಜಿರಾಮ್‌ ಈ ಕುಕೃತ್ಯದ ರುವಾರಿ. ಬಖೇರ್‌ವಾಲ್‌ ಎಂಬ ಮುಸ್ಲಿಂ ಸಮುದಾಯವನ್ನು ಹೆದರಿಸುವ ಸಲುವಾಗಿ ಈ ಯೋಜನೆ ಸಿದ್ಧವಾಗಿದ್ದು, ಮೃದು ಸ್ವಭಾವದ ಆಕೆಯನ್ನು ಈ ದುಷ್ಕೃತ್ಯಕ್ಕಾಗಿ ಬಳಸಿಕೊಳ್ಳಲಾಗಿದೆ.

ಬಖೇರ್‌ವಾಲ್‌ ಕಾಶ್ಮೀರದ ಪರ್ವತ ಹಾಗೂ ಸಮತಟ್ಟು ಪ್ರದೇಶಗಳಲ್ಲಿರುವ ಅಲೆಮಾರಿ ಸಮುದಾಯ. ಸಾಕುಪ್ರಾಣಿಗಳೇ ಈ ಸಮುದಾಯದ ಜೀವನಾಧಾರ. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದ ಕತುವಾ ಪ್ರದೇಶದಲ್ಲಿ ಬಖೇರ್‌ವಾಲ್‌ ಸಮುದಾಯದ ವಿರುದ್ಧ ಆಂದೋಲನಗಳು ಪ್ರಾರಂಭವಾಗಿದ್ದವು. ಹಿಂದೂ ಸಮುದಾಯದ ಜನ ಮುಸಲ್ಮಾನರಾಗಿದ್ದ ಬಖೇರ್‌ವಾಲ್‌ ಜನರನ್ನು ಶೋಷಿಸಲು ಆರಂಭಿಸಿದ್ದವು. ಈ ಆಂದೋಲನಗಳ ಮುಖ್ಯ ನಾಯಕ ಇದೇ ಸಂಜಿರಾಮ್‌.

ಮುಖ್ಯ ಆರೋಪಿ ಸಂಜಿರಾಮ್‌.
ಮುಖ್ಯ ಆರೋಪಿ ಸಂಜಿರಾಮ್‌.
NDTV.com

ಬಾಲಕಿ ಮೇಲಿನ ಅತ್ಯಾಚಾರದ ಪ್ರಕರಣ ದೇಶಾದ್ಯಂತ ಹರಡುತ್ತಿರುವಲ್ಲೇ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. #JusticeForAsifa ಮತ್ತು #Asifa ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣದ ತುಂಬ ತುಂಬಿವೆ. ರಾಜಕಾರಣಿಗಳಿಂದ ಹಿಡಿದು ಸಿನಿಮಾ ತಾರೆಯರವರೆಗೂ ಎಲ್ಲರೂ ಬಾಲಕಿ ಪರ ದನಿ ಎತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಆರೋಪಿಗಳ ಪರ ನಿಂತ ಹಿಂದೂ ರಾಷ್ಟ್ರೀಯತಾವಾದಿಗಳ ವಿರುದ್ಧ ಸೋನಮ್‌ ಕಪೂರ್‌ ಟ್ವಿಟ್ಟರ್‌ ವಾರ್‌ ನಡೆಸಿದ್ದಾರೆ. ಬಾಲಕಿ ಕುರಿತಾದ ಹಲವರ ಟ್ವಿಟ್‌ಗಳನ್ನು ರೀಟ್ವಿಟ್‌ ಮಾಡಿದ್ದಾರೆ.

ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನವನ್ನು ತೆಗೆದಿದೆ. ನ್ಯೂಯಾರ್ಕ್‌ ಟೈಮ್ಸ್‌ನ ವರದಿಯನ್ನು ಉಲ್ಲೇಖಿಸಿ ಸಾನಿಯಾ ಮಿರ್ಜಾ ಟ್ವಿಟ್‌ ಮಾಡಿದ್ದಾರೆ.

ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾದ ಮುಗ್ಧ ಬಾಲಕಿ ಈಗ ದೇಶದ ಸುದ್ದಿ ಕೇಂದ್ರ. ದೇಶದಲ್ಲಿ ಹಿಂದೂ ಮುಸ್ಲಿಂ ಕೋಮುದಳ್ಳುರಿ ಭುಗಿಲೇಳಲು ಪ್ರೇರಕ ಅಂಶವಾಗಿ ಅತ್ಯಾಚಾರ ಮತ್ತು ಕೊಲೆ ಕಾಣಿಸಿಕೊಂಡಿದೆ. ಒಂದೆಡೆ ಆಕೆ ಸಾವಿಗೆ ನ್ಯಾಯ ಒದಗಿಸುವ ಸಲುವಾಗಿ ದೇಶದ ಒಂದು ವರ್ಗ ಟೊಂಕ ಕಟ್ಟಿ ನಿಂತಿದೆ. ಮತ್ತೊಂದೆಡೆ ಪ್ರಕರಣವನ್ನು ಹಳಿ ತಪ್ಪಿಸುವ ಸಲುವಾಗಿ ಹಿಂದೂ ರಾಷ್ಟ್ರೀಯತಾವಾದಿಗಳು ರಸ್ತೆಗಿಳಿದಿದ್ದಾರೆ. ಎರಡು ಬಣಗಳ ಜಿದ್ದಾಜಿದ್ದಿನ ನಡುವೆ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ದೊರೆಯುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.