samachara
www.samachara.com
ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ
COVER STORY

ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ

ಇಷ್ಟು ದಿನ ಕಂಡೂ ಕಾಣದಂತಿದ್ದ ರಾಜ್ಯ ಚುನಾವಣಾ ಕಾವಿನ ಬಿಸಿ ಈಗ ಏರತೊಡಗಿದೆ. ಪಕ್ಷಗಳು ಒಂದೊಂದಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಇದರೊಂದಿಗೆ ವಿಧಾನಸಭಾ ಚುನಾವಣೆಯ ಕಣ ಕೊನೆಗೂ ಒಂದು ಲಯಕ್ಕೆ ಬಂದಿದೆ.

ದಯಾನಂದ

ದಯಾನಂದ

ರಾಜ್ಯ ರಾಜಕೀಯದ ಚುನಾವಣಾ ಕಾವು ಈಗ ಏರತೊಡಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ಸಂಜೆ ಜನಾಶೀರ್ವಾದ ಯಾತ್ರೆಯನ್ನು ಸಮಾರೋಪಗೊಳಿಸಿದ ಹಿಂದೆಯೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತ ಕಾಂಗ್ರೆಸ್‌ ಕೂಡಾ ಸೋಮವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಚುನಾವಣೆ ಸಮೀಪಿಸುತ್ತಿರುವ ದಿನಗಳಿಂದ ಹಿಡಿದು ಚುನಾವಣಾ ಆಯೋಗ ಮತದಾನದ ದಿನಾಂಕ ಪ್ರಕಟಿಸುವವರೆಗೂ ರಾಜ್ಯದ ಬಹುತೇಕ ಭಾಗಗಳಲ್ಲಿ ಚುನಾವಣೆಯ ಬಿಸಿ ಕಂಡು ಬಂದಿರಲಿಲ್ಲ. ವಿವಿಧ ರಾಜಕೀಯ ಪಕ್ಷಗಳ ಟಿಕೆಟ್‌ ಆಂಕಾಕ್ಷಿಗಳು ಉತ್ಸವ, ಜಾತ್ರೆ ಹೆಸರಿನಲ್ಲಿ ಊಟ ಹಾಕಿಸಿದ್ದು, ಉಡುಗೊರೆ ಹಂಚಿದ್ದು ಬಿಟ್ಟರೆ ಜನರಲ್ಲಿ ಚುನಾವಣೆಯ ಕಾವು ಕಂಡಿರಲಿಲ್ಲ.

ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಬೆನ್ನಲ್ಲೇ ಟಿಕೆಟ್‌ ವಂಚಿತರ ಅಸಮಾಧಾನದ ಹೊಗೆಯೂ ಎದ್ದಿದೆ. ಅಭ್ಯರ್ಥಿಗಳ ಟಿಕೆಟ್‌ ಹಂಚಿಕೆಯ ವಿಚಾರದಲ್ಲಿ ಇಂಥ ಅಸಮಾಧಾನಗಳು ಹೊಸತೇನಲ್ಲ. ಆದರೆ, ಕೆಲ ಹಾಲಿ ಶಾಸಕರ ಈ ಬಗೆಯ ಅಸಮಾಧಾನ ಈ ಬಾರಿ ಟಿಕೆಟ್‌ ಪಡೆದಿರುವವರಿಗೆ ಯಾವ ರೀತಿಯ ಹೊಡೆತ ಕೊಡಲಿದೆ ಎಂಬುದಕ್ಕೆ ಸದ್ಯಕ್ಕೆ ಉತ್ತರ ಸಿಗುವುದು ಕಷ್ಟ.

ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶುರು ಮಾಡುವ ಮೊದಲೇ ಜೆಡಿಎಸ್‌ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಇತ್ತ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಒಳಗೂ ಟಿಕೆಟ್‌ ಹಂಚಿಕೆ ಕುರಿತು ಜಿದ್ದಾಜಿದ್ದಿ ಶುರುವಾಗಿತ್ತು. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್‌ ಮುಖಂಡರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ತೀವ್ರವಾಗಿ ತಲೆಕೆಡಿಸಿಕೊಂಡಿದ್ದರು. ಸಂಭವನೀಯ ಪಟ್ಟಿಗೆ ಹೆಸರು ಸೇರಿಸಲು ಒಪ್ಪದ ನಾಯಕರ ವಿರುದ್ಧ ಕೆಲವರು ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದರು.

ಕಾಂಗ್ರೆಸ್‌ ಬಿಟ್ಟು ಎಲ್ಲ ಪಕ್ಷಗಳೂ ಸದ್ಯ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್‌ ಒಂದೇ ಬಾರಿಗೆ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಿದೆಯೇ ಎಂಬ ಕೂತೂಹಲ ಇನ್ನೂ ಜೀವಂತವಾಗಿದೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ಯಾರ ಪಾಲಿಗೆ ಸಿಹಿಯಾಗಲಿದೆ ಮತ್ತು ಯಾರಿಗೆ ಕಹಿಯಾಗಲಿದೆ ಎಂಬುದಕ್ಕೆ ಪಟ್ಟಿ ಬಿಡುಗಡೆಯ ನಂತರವೇ ಉತ್ತರ ಸಿಗಲಿದೆ.

ಉಳಿದಿರುವುದು ಮೋದಿ ಮಂತ್ರ

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಶತಾಯಗತಾಯ ಮಣಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಧ್ವಜ ಹಾರಿಸಬೇಕೆಂದು ಪಣತೊಟ್ಟಿರುವ ಬಿಜೆಪಿ ರಾಜ್ಯದಲ್ಲಿ ಈವರೆಗೆ ಪ್ರಯೋಗಿಸಿರುವ ಅಸ್ತ್ರಗಳು ಹೆಚ್ಚಿನ ಪರಿಣಾಮವನ್ನೇನೂ ಬೀರಿಲ್ಲ.

ಪ್ರಾದೇಶಿಕ ಶಕ್ತಿಯಾಗಿರುವ ಜೆಡಿಎಸ್‌ಗಿಂತ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ ತನ್ನ ನೇರ ಎದುರಾಳಿ ಎಂದುಕೊಂಡಿರುವ ಬಿಜೆಪಿ ಕರ್ನಾಟಕದ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ದಕ್ಷಿಣ ಭಾರತದಲ್ಲಿ ಖಾತೆ ತೆರೆಯಬೇಕೆಂಬ ಹವಣಿಕೆಯಲ್ಲಿದೆ.

ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ

ಬಿಜೆಪಿಯ ರಾಜಕೀಯ ಚಾಣಕ್ಯ, ಚುನಾವಣೆ ಗೆಲ್ಲಿಸುವ ತಂತ್ರಗಾರ, ಮಾತಿನ ಮೋಡಿಗಾರ ಎಂದೆಲ್ಲಾ ಕರೆಯಲಾಗುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾತು ಕರ್ನಾಟಕದಲ್ಲಿ ಹೇಳಿಕೊಳ್ಳುವ ಪರಿಣಾಮವನ್ನೇನೂ ಬೀರಿಲ್ಲ.

ಅಮಿತ್‌ ಶಾ ರಾಜ್ಯದಲ್ಲಿ ಈವರೆಗೆ ಭಾಗವಹಿಸಿದ ಸಮಾವೇಶಗಳಲ್ಲಿ ಸಿದ್ದರಾಮಯ್ಯ ಸರಕಾರ ಭ್ರಷ್ಟ ಸರಕಾರ, ಕಮಿಷನ್‌ ಸರಕಾರ ಎಂಬ ಹಳೆಯ ಆರೋಪಗಳನ್ನೇ ಮಾಡುತ್ತಿದ್ದಾರೆಯೇ ಹೊರತು ಕಾಂಗ್ರೆಸ್‌ ವಿರುದ್ಧ ಪ್ರಯೋಗಿಸಲು ಅಮಿತ್‌ ಶಾ ಬತ್ತಳಿಕೆಯಲ್ಲೂ ಶಕ್ತಿಯುತವಾದ ಬಾಣಗಳಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

Also read: ‘ರೀಲ್’ ಸಂವಾದದಲ್ಲಿ ‘ರಿಯಲ್’ ಪ್ರಶ್ನೆಗಳು: ತಬ್ಬಿಬ್ಬಾದ ಶಾ ಮತ್ತು  ರೈಲ್ವೆ ಇಲಾಖೆ!

ಇನ್ನು ಬಿಜೆಪಿಯ ‘ಫೈರ್‌ ಬ್ರಾಂಡ್‌’ಗಳ ಹೇಳಿಕೆಗಳು ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಎಷ್ಟು ಬೇಕೋ ಅಷ್ಟು ಘಾಸಿ ಮಾಡಿ ಆಗಿದೆ. ಸಂವಿಧಾನ ವಿರೋಧಿ ಹಾಗೂ ದಲಿತ ವಿರೋಧಿ ಹೇಳಿಕೆ ನೀಡುತ್ತಲೇ ಬಂದಿರುವ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ. ಈ ನಡುವೆ ಅನಂತಕುಮಾರ್ ಹೆಗಡೆ ಹಾಗೂ ಪ್ರತಾಪ್‌ ಸಿಂಹ ಸದ್ಯ ತಣ್ಣಗಾಗಿದ್ದಾರೆ.

ಹೀಗಾಗಿ ಬಿಜೆಪಿಗೆ ಸದ್ಯ ಭರವಸೆಯಾಗಿ ಉಳಿದಿರುವುದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಏಪ್ರಿಲ್‌ 15ರ ನಂತರ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಆದರೆ, 2014ರಲ್ಲಿದ್ದ ಮೋದಿ ಹವಾ ಈಗಲೂ ಅದೇ ಮಟ್ಟದಲ್ಲಿ ಇಲ್ಲ ಎಂಬುದು ಈ ಹಿಂದೆ ಮೋದಿ ರಾಜ್ಯಕ್ಕೆ ಬಂದು ಹೋದಾಗಲೇ ಗೊತ್ತಾಗಿದೆ. ಮೋದಿ ಮಾತು ಕೂಡಾ ರಾಜ್ಯದಲ್ಲಿ ಬಿಜೆಪಿಗೆ ಭಾರೀ ಮತಗಳನ್ನು ತಂದುಕೊಡುವುದು ಅನುಮಾನ.

ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ

ರೆಡ್ಡಿ ಬಲ ಕಳೆದುಕೊಂಡ ಬಿಜೆಪಿ

2008ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಾಣಲು 20-20 ಅಧಿಕಾರಕ್ಕೆ ಬಿಜೆಪಿ ಜತೆಗೆ ಕೈ ಜೋಡಿಸಿದ್ದ ಜೆಡಿಎಸ್‌ನ ಎಚ್‌,ಡಿ.ಕುಮಾರಸ್ವಾಮಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರ ಕೊಟ್ಟು ಕಿತ್ತುಕೊಂಡು ಮೋಸ ಮಾಡಿದರು ಎಂಬ ಅನುಕಂಪ ಕೆಲಸ ಮಾಡಿತ್ತು. ಬಿಎಸ್‌ವೈ ಪರವಾದ ಈ ಅನುಕಂಪದ ಜತೆಜತೆಗೇ ಕೆಲಸ ಮಾಡಿದ್ದು ಬಳ್ಳಾರಿ ರೆಡ್ಡಿಗಳ ಹಣ.

2008ರ ಚುನಾವಣೆಯ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮುನ್ನೆಲೆಗೆ ಬಂದವರು ಗಣಿ ಉದ್ಯಮಿಗಳಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಹಾಗೂ ಬಿ.ಶ್ರೀರಾಮುಲು. ದಶಕದ ಹಿಂದೆ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದ ಬಳ್ಳಾರಿ ರೆಡ್ಡಿ ಸೋದರ ಪ್ರಭಾವ ಈಗ ಬಹುತೇಕ ಮಂಕಾಗಿದೆ. ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದ ಬಳಿಕ ರೆಡ್ಡಿ ಸೋದರರನ್ನು ಸಲಹುವ ಕೈಗಳು ಬಿಜೆಪಿ ಹೈಕಮಾಂಡ್‌ನಲ್ಲಿಲ್ಲ.

ಈ ಮಧ್ಯೆಯೇ “ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ” ಎಂದು ಅಮಿತ್ ಶಾ ಹೇಳಿರುವುದು ರೆಡ್ಡಿ ಸೋದರರು ಬಿಜೆಪಿ ಬಗ್ಗೆ ಸಿಟ್ಟಾಗುವಂತೆ ಮಾಡಿದೆ. ಹೀಗಾಗಿ ರೆಡ್ಡಿಗಳ ಬಳಿ ಇನ್ನೂ ಉಳಿದಿರುವ ಹಣ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹರಿಯಲಿದೆಯೇ ಎಂಬುದು ಅನುಮಾನ.

Also read: ಲಿಂಗಾಯತ ಸ್ವತಂತ್ರ ಧರ್ಮ; ನಾಗಮೋಹನ್‌ ದಾಸ್‌ ವರದಿಗೆ ಸಂಪುಟ ಅಸ್ತು

ಲಿಂಗಾಯತರ ಬೆಂಬಲ

ರಾಜ್ಯ ರಾಜಕೀಯದಲ್ಲಿ ಈ ಬಾರಿ ಮಠ ಹಾಗೂ ಸ್ವಾಮೀಜಿಗಳ ಪಾತ್ರವೂ ಹೆಚ್ಚಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ಬೆಳವಣಿಗೆ ಈ ಬಾರಿಯ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂಬ ಮಾತುಗಳಿವೆ.

ಇತ್ತ ಬಸವ ಧರ್ಮ ಪೀಠದ ಮಾತೆ ಮಹಾದೇವಿ ಲಿಂಗಾಯತರು ಕಾಂಗ್ರೆಸ್‌ಗೆ ಮತ ನೀಡಿ ಎಂದು ಬಹಿರಂಗವಾಗಿ ಕಾಂಗ್ರೆಸ್‌ ಬೆಂಬಲ ಘೋಷಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಕೇಂದ್ರಕ್ಕೆ ಶಿಫಾರಸು ಕಳಿಸಿ ಕಾಂಗ್ರೆಸ್‌ ಸರಕಾರವೇನೂ ತನ್ನ ಕೆಲಸ ಮುಗಿಸಿ ಸುಮ್ಮನಾಗಿದೆ. ಆದರೆ, ಈ ಶಿಫಾರಸು ಸದ್ಯ ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ.

ಈ ಹಿಂದೆ “ಯಡಿಯೂರಪ್ಪಗೆ ಮತ ನೀಡಿ” ಎಂದಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಈ ಬಾರಿಯ ಚುನಾವಣೆಯ ಬಗ್ಗೆ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಈ ಮಧ್ಯೆ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಮುಖಂಡರು ಶಿವಕುಮಾರ ಸ್ವಾಮೀಜಿ ಭೇಟಿಯಾಗಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡಾ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಕೋರಿದ್ದಾರೆ.

ದಕ್ಷಿಣ ಕರ್ನಾಟಕದ ಒಕ್ಕಲಿಗರ ಮೇಲೆ ನೇರ ಹಿಡಿತ ಹೊಂದಿರುವ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಬೇಟಿಯಾಗಿದ್ದಾರೆ. ಈ ಎರಡೂ ಪಕ್ಷಗಳನ್ನೂ ಬಿಟ್ಟು ಮಠ ತನ್ನ ಜನಾಂಗದ ನಾಯಕರ ಪಕ್ಷವಾದ ಜೆಡಿಎಸ್‌ನ ಕೈ ಹಿಡಿಲಿದೆಯೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

Also read: ಲಿಂಗಾಯತ ಸ್ವತಂತ್ರ ಧರ್ಮ; ಲಾಭ- ನಷ್ಟದ ಲೆಕ್ಕಾಚಾರದಲ್ಲಿ ಇಬ್ಬರಿಗೂ ಸಮಪಾಲು?

ಬಿಜೆಪಿ ವಿರೋಧ ಕಾಂಗ್ರೆಸ್‌ಗೆ ಲಾಭ

ಬಿಜೆಪಿ ಬಗ್ಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಎದ್ದಿರುವ ವಿರೋದ ಕಾಂಗ್ರೆಸ್‌ಗೆ ಲಾಭ ಮಾಡಿಕೊಡುವ ಸಾಧ್ಯತೆಯೇ ಹೆಚ್ಚಾಗಿದೆ. ದಲಿತ ವಿರೋಧಿ, ಬಡವರ ವಿರೋಧಿ, ಬಾಯಿ ಮಾತಿನ ಬಡಾಯಿ ರಾಜಕಾರಣ ಎಂಬ ಹಣೆಪಟ್ಟಿಗಳನ್ನು ಹೊತ್ತಿರುವ ಬಿಜೆಪಿ ಬಗ್ಗೆ ದೇಶದ ತಳ ವರ್ಗದಲ್ಲಿ ತೀವ್ರ ಅಸಮಾಧಾನವಿದೆ. ಈ ಬಿಜೆಪಿ ವಿರೋಧಿ ಅಲೆ ಈ ಬಾರಿಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಮತ ಗಳಿಕೆಯಲ್ಲಿ ನೆರವಿಗೆ ಬರಲಿದೆ ಎಂಬ ಅಂದಾಜಿದೆ.

ಗುಜರಾತ್‌ನ ವಡಗಾಂವ್‌ ಕ್ಷೇತ್ರದ ಶಾಸಕ ಜಿಗ್ನೇಶ್‌ ಮೇವಾನಿ ಕೂಡಾ ಬಿಜೆಪಿ ಸೋಲಿಸಿ ಎಂದೇ ಪ್ರಚಾರ ಮಾಡುತ್ತಾ ಬರುತ್ತಿದ್ದಾರೆ. ಉತ್ತರ ಭಾರತದಲ್ಲಿ ನಡೆದ ದಲಿತರ ಪ್ರತಿಭಟನೆಗಳ ಸಿಟ್ಟು ವ್ಯಕ್ತವಾಗಿದ್ದು ನೇರವಾಗಿ ಬಿಜೆಪಿ ವಿರುದ್ಧವೇ. ಈ ಎಲ್ಲಾ ಅಂಶಗಳು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಬಹುದು.

Also read: ಬಿಜೆಪಿಗೆ ಪೆಟ್ಟು ಕೊಡಲಿದೆಯೇ ಉತ್ತರ ಭಾರತದ ದಲಿತರ ಸಿಟ್ಟು?

ಸಿದ್ದರಾಮಯ್ಯ ಸಂಕಷ್ಟ

ಬಿಜೆಪಿ ವಿರುದ್ಧದ ಅಲೆ ಕಾಂಗ್ರೆಸ್‌ಗೆ ಮತಗಳನ್ನು ತಂದುಕೊಡುವ ಲೆಕ್ಕಾಚಾರ ಒಂದು ಕಡೆಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ವಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಾಗಿದೆ. ಸ್ವಕ್ಷೇತ್ರ ವರುಣಾ ಅನ್ನು ಈ ಬಾರಿ ಮಗ ಯತೀಂದ್ರಗೆ ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಆದರೆ, ಒಕ್ಕಲಿಗರೇ ಹೆಚ್ಚಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‌ನ ಜಿ.ಟಿ. ದೇವೇಗೌಡ ಪ್ರಭಾವ ಹೆಚ್ಚಾಗಿದೆ.

ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ

ಒಂದು ಕಡೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರವಾದ ಚಾಮುಂಡೇಶ್ವರಿ ಮತ್ತೊಂದು ಕಡೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಬಾದಾಮಿ ಕಡೆಗೂ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಎರಡೂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಠುಸ್‌ ಆದ ಬಿಎಸ್‌ವೈ ಬ್ರೇಕಿಂಗ್‌

ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ಸ್ಫೋಟಕ ಸುದ್ದಿ ಬಹಿರಂಗ ಮಾಡುವುದಾಗಿ ಹೇಳುತ್ತಲೇ ಬಂದಿದ್ದ ಬಿ.ಎಸ್‌.ಯಡಿಯೂರಪ್ಪ ಮಾರ್ಚ್‌ 16ರಂದು ‘ಬ್ರೇಕಿಂಗ್‌ ನ್ಯೂಸ್‌’ ಕೊಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆದರೆ, ಮಾರ್ಚ್‌ 16ರ ಸಂಜೆ ವೇಳೆಗೆ ಬಿಎಸ್‌ವೈ ಬ್ರೇಕಿಂಗ್‌ ಠುಸ್‌ ಆಗಿತ್ತು. ಯಡಿಯೂರಪ್ಪ ಹೊಸ ಹಗರಣವನ್ನೇನೋ ಬಯಲು ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿತ್ತು.

ಬ್ರೇಕಿಂಗ್‌ ನ್ಯೂಸ್‌ ಹೆಸರಿನಲ್ಲಿ ರಾಜ್ಯ ಸರಕಾರದ ಹಳೆಯ ವೈಫಲ್ಯಗಳನ್ನೇ ಪಟ್ಟಿಯಾಡಿದ್ದ ಬಿಎಸ್‌ವೈ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಡಲಿಗೆ ಈಡಾಗಿದ್ದರು. ಆನಂತರ ಸಿದ್ದರಾಮಯ್ಯ ಸರಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿದ್ದ ಚಾರ್ಜ್‌ಶೀಟ್‌ ಕೂಡಾ ಇದರ ಮುಂದುವರಿದ ಪ್ರಹಸನದಂತಾಗಿತ್ತು.

Also read: ಬ್ರೇಕಿಂಗ್‌ ನ್ಯೂಸ್‌; ಸಾಮಾಜಿಕ ಜಾಲತಾಣಗಳಲ್ಲಿ ಬಿಎಸ್‌ವೈ ‘ಸಂತಾ-ಬಂತಾ’!

ಪರ್ಯಾಯ ರಾಜಕಾರಣ?

ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳ ಜಿದ್ದಾಜಿದ್ದಿಯ ನಡುವೆಯೇ ಪರ್ಯಾಯ ರಾಜಕಾರಣದ ಸಣ್ಣ ಧ್ವನಿಗಳೂ ಈ ಬಾರಿಯ ಚುನಾವಣೆಯಲ್ಲಿ ಕೇಳಿಬರುತ್ತಿವೆ. ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಸಂಘಟನೆಯ ಸದಸ್ಯರು ಕೆಲ ಕ್ಷೇತ್ರಗಳಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸ್ವರಾಜ್‌ ಇಂಡಿಯಾ ಪಕ್ಷದಿಂದ 6 ಮಂದಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ರೈತ ಸಂಘದ ಕೆ.ಎಸ್‌. ಪುಟ್ಟಣ್ಣಯ್ಯ ನಿಧನದ ಅನುಕಂಪ ಅವರ ಮಗ ದರ್ಶನ್‌ ಅವರಿಗೆ ತಕ್ಕಮಟ್ಟಿಗೆ ಅನುಕೂಲವಾಗಬಹುದು ಎಂಬ ಮಾತಿದೆ. ಆದರೆ, ಜೆಡಿಎಸ್‌ ಸಂಸದ ಪುಟ್ಟರಾಜು ಈ ಬಾರಿ ಮೇಲುಕೋಟೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿರುವುದು ಪುಟ್ಟಣ್ಣಯ್ಯ ಮಗ ದರ್ಶನ್‌ ಅವರಿಗೆ ತೊಡಕಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಟಿಕೆಟ್ ಹಂಚಿಕೆ, ರಾಜಕೀಯ ಲೆಕ್ಕಾಚಾರ & ಕೊನೆಗೂ ಲಯಕ್ಕೆ ಬಂದ ಚುನಾವಣಾ ಕಣ

“ಪುಟ್ಟಣ್ಣಯ್ಯ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಅವರ ತತ್ವ ಸಿದ್ಧಾಂತಗಳೇನೂ ಇದ್ದರೂ ಜನ ಕೊನೆಗೆ ಕೇಳುವುದು ಶಾಸಕ ತನ್ನ ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದಾನೆ ಎಂಬುದನ್ನು. ಹಾಗೆ ನೋಡಿದರೆ ಪುಟ್ಟಣ್ಣಯ್ಯ ಕೆಲಸ ಮಾಡಿದ್ದಕ್ಕಿಂತ ಮಾತನಾಡಿದ್ದೇ ಹೆಚ್ಚು. ಅವರ ಮಗ ದರ್ಶನ್‌ ಕೂಡಾ ತಂದೆಯೊಂದಿಗೆ ಹೆಚ್ಚು ರಾಜಕೀಯ ವೇದಿಕೆಗಳಲ್ಲಿ ಗುರುತಿಸಿಕೊಂಡಿರಲಿಲ್ಲ. ಪುಟ್ಟಣ್ಣಯ್ಯ ಸಾವಿನ ಅನುಕಂಪ ದರ್ಶನ್‌ ಗೆಲ್ಲುವಷ್ಟು ಮತಗಳನ್ನು ತಂದುಕೊಡುವುದು ಕಷ್ಟ” ಎನ್ನುತ್ತಾರೆ ಮೇಲುಕೋಟೆ ಕ್ಷೇತ್ರದ ದುದ್ದ ಗ್ರಾಮದ ಶ್ರೀಕಂಠ.

ಇತ್ತ ಬೆಂಗಳೂರಿನ ಜಯನಗರದಿಂದ ಸ್ಪರ್ಧಿಸಲು ಸಜ್ಜಾಗಿರುವ ರವಿಕೃಷ್ಣಾ ರೆಡ್ಡಿ ಅವರಿಗೆ ಸ್ವರಾಜ್‌ ಇಂಡಿಯಾ ಪಕ್ಷ ಹಾಗೂ ಪ್ರಗತಿಪರರು ಬೆಂಬಲ ಘೋಷಿಸಿದ್ದಾರೆ. 2013ರ ಚುನಾವಣೆಯಲ್ಲಿ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದಿಂದ ಸ್ಪರ್ಧಿಸಿ 6,596 ಮತ ಗಳಿಸಿದ್ದ ರವಿಕೃಷ್ಣಾ ರೆಡ್ಡಿ ಈ ಬಾರಿ ಜಯನಗರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಒಂದು ಕಡೆ ಬೇಸಿಗೆಯ ಬಿಸಿಯ ಜತೆಗೇ ಏರುತ್ತಿರುವ ಚುನಾವಣಾ ಕಾವು, ಮತ್ತೊಂದೆಡೆ ಅಭ್ಯರ್ಥಿಗಳ ಟಿಕೆಟ್‌ ಹಂಚಿಕೆ ಜಟಾಪಟಿ ಇದರ ಮಧ್ಯೆ ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ಮತದಾರ ಇನ್ನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಎಲ್ಲಾ ಪಕ್ಷಗಳೂ ತಮ್ಮ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಪ್ರಚಾರ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ನಂತರ ಚುನಾವಣೆಯ ರಂಗು ರಾಜ್ಯದಲ್ಲಿ ಕಾಣಬಹುದು.