samachara
www.samachara.com
ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!
COVER STORY

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ಚೀನಾದ ಆಕ್ರಮಣ ನಡೆದಾಗ ಟಿಬೆಟನ್ನರಿಗೆ ಆಶ್ರಯ ನೀಡಿದ್ದ ಪ್ರಮುಖ ರಾಷ್ಟ್ರ ಭಾರತ. ಆದರೆ, ಈಗ ಬಹುತೇಕ ಟಿಬೆಟನ್ನರು ಭಾರತ ತೊರೆಯುತ್ತಿದ್ದಾರೆ. ಅದಕ್ಕೆ ಕಾರಣ ನಿರಾಶ್ರಿತರಿಗೆ ಕಾಡುತ್ತಿರುವ ಹೊಸ ಅಭದ್ರತೆ. 

ದಯಾನಂದ

ದಯಾನಂದ

ಟಿಬೆಟನ್ನರು ಚೀನಾದ ದಬ್ಬಾಳಿಕೆಗೆ ಹೆದರಿ ಭಾರತಕ್ಕೆ ಬಂದು 2019ಕ್ಕೆ 60 ವರ್ಷ ತುಂಬುತ್ತದೆ. ಚೀನಾ ಟಿಬೆಟ್‌ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಸಾವಿರಾರು ಟಿಬೆಟನ್ನರ ಮಾರಣಹೋಮ ನಡೆಸಿದಾಗ ಅಲ್ಲಿಂದ ಓಡಿಬಂದವರಿಗೆ ನೆಲೆ ನೀಡಿದ ದೇಶಗಳ ಪೈಕಿ ಭಾರತವೂ ಒಂದು. ಆರು ದಶಕಗಳ ಹಿಂದೆ ಟಿಬೆಟನ್ನರಿಗೆ ಆಶ್ರಯತಾಣವಾಗಿದ್ದ ಭಾರತ, ಹೊಸ ತಲೆಮಾರಿನ ಟಿಬೆಟನ್ನರಿಗೆ ಬೇಡವೆನಿಸಿದೆ.

ಬೌದ್ಧ ಧಾರ್ಮಿಕ ಶಿಕ್ಷಣದಿಂದ ಹೊರ ಬಂದು ಉನ್ನತ ಶಿಕ್ಷಣ ಪಡೆದಿರುವ ಹೊಸ ತಲೆಮಾರಿನ ಟಿಬೆಟನ್ನರಿಗೆ ಭಾರತ ಇನ್ನೆಷ್ಟು ದಿನ ತಮ್ಮನ್ನು ಸಲಹಬಹುದು ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ಸದ್ಯ 82 ವರ್ಷ ವಯಸ್ಸಾಗಿರುವ ದಲೈಲಾಮಾ ಸಾವಿನ ನಂತರ ತಮ್ಮ ಸ್ಥಿತಿ ಏನಾಗಲಿದೆ ಎಂಬ ಆತಂಕ ಟಿಬೆಟನ್ನರಲ್ಲಿ ಮನೆಮಾಡಿದೆ.

ಟಿಬೆಟನ್ನರ ಹೊಸ ತಲೆಮಾರು ಮಾತ್ರವಲ್ಲ, ಹಳೆಯ ತಲೆಮಾರಿನ ಬಹುತೇಕರು ಕೂಡಾ ಭಾರತವೇ ತಮ್ಮ ಖಾಯಂ ನೆಲೆ ಎಂದುಕೊಂಡಿಲ್ಲ. ಬದಲಿಗೆ ಮುಂದೆ ಯಾವತ್ತಾದರೂ ನಾವು ಟಿಬೆಟ್‌ಗೆ ಮರಳುತ್ತೇವೆ. ಟಿಬೆಟ್‌ ಪ್ರಾಂತ್ಯ ನಮ್ಮದಾಗುತ್ತದೆ ಎಂಬ ನಂಬಿಕೆ ಇದೆ.

ಹಳೆಯ ಟಿಬೆಟನ್ನರು ಹಿಂದಿರುಗಿ ಟಿಬೆಟ್‌ ಕಡೆ ನೋಡುತ್ತಿದ್ದರೆ ಹೊಸಬರು ಅಮೆರಿಕ, ತೈವಾನ್‌, ಜಪಾನ್‌ ಸೇರಿದಂತೆ ಬೇರೆ ದೇಶಗಳ ಕಡೆಗೆ ಮುಖ ಮಾಡಿದ್ದಾರೆ. ಭಾರತದಲ್ಲಿ ತಮಗೆ ಭದ್ರ ಭವಿಷ್ಯವಿದೆ ಎಂಬ ನಂಬಿಕೆ ಉನ್ನತ ಶಿಕ್ಷಣ ಪಡೆದಿರುವ ಟಿಬೆಟನ್ನರಿಗೆ ಇಲ್ಲ. ಹೀಗಾಗಿ ಭಾರತ ಬಿಟ್ಟು ಬೇರೆ ದೇಶಗಳಲ್ಲಿ ತಮ್ಮ ಭವಿಷ್ಯದ ಹುಡುಕಾಟದಲ್ಲಿ ಹೊಸತಲೆಮಾರಿನ ಟಿಬೆಟನ್ನರಿದ್ದಾರೆ.

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ಭಾರತದಲ್ಲಿ ಟಿಬೆಟನ್ನರು

1959ರಲ್ಲಿ ಟಿಬೆಟ್‌ ಮೇಲೆ ಚೀನಾದ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾದಾಗ ಅದನ್ನು ಸಹಿಸಲಾಗದೆ ದಲೈಲಾಮಾ ನೇತೃತ್ವದಲ್ಲಿ ಸುಮಾರು 80 ಸಾವಿರ ಟಿಬೆಟನ್ನರು ಭಾರತಕ್ಕೆ ಬಂದರು. ನಿರಾಶ್ರಿತರಾಗಿ ಉತ್ತರಾಖಂಡದ ಮಸೂರಿಗೆ ಬಂದ ಟಿಬೆಟನ್ನರಿಗೆ ಗಟ್ಟಿ ನೆಲೆ ಸಿಕ್ಕಿದ್ದು ಕರ್ನಾಟಕದ ಬೈಲುಕುಪ್ಪೆಯಲ್ಲಿ.

1960ರಲ್ಲಿ ಬೈಲುಕುಪ್ಪೆಯಲ್ಲಿ ನಿರಾಶ್ರಿತರ ತಾಣ ನಿರ್ಮಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೆರವು ನೀಡಿದ್ದವು. ಉತ್ತರ ಭಾರತದಲ್ಲಿ ಮಸೂರಿಯಿಂದ ಹಿಮಾಚಲ ಪ್ರದೇಶಕ್ಕೆ ಬಂದ ಟಿಬೆಟನ್ನರು ಧರ್ಮಶಾಲಾದಲ್ಲಿ ತಮ್ಮ ಆಂತರಿಕ ಸರಕಾರ ರಚಿಸಿಕೊಂಡರು.

ಭಾರತದಲ್ಲಿ ಒಟ್ಟು 39 ಟಿಬೆಟನ್‌ ನಿರಾಶ್ರಿತರ ತಾಣಗಳಿವೆ. ಟಿಬೆಟನ್ನರ ವಿಷಯ ಬಂದಾಗ ಹಿಮಾಚಲ ಪ್ರದೇಶದ ಧರ್ಮಶಾಲಾ ಬಿಟ್ಟರೆ ಹೆಚ್ಚಾಗಿ ಕೇಳಿಬರುವುದು ಕರ್ನಾಟಕದ ಬೈಲುಕುಪ್ಪೆ. ಕರ್ನಾಟಕದಲ್ಲಿ ಬೈಲುಕುಪ್ಪೆ ಬಿಟ್ಟರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ವಡೇರಪಾಳ್ಯದಲ್ಲಿ ಟಿಬೆಟನ್‌ ನಿರಾಶ್ರಿತರ ತಾಣಗಳಿವೆ.

ಭಾರತವೂ ಸೇರಿದಂತೆ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿರುವ ಟಿಬೆಟ್‌ನ ಹಳೆಯ ತಲೆಗಳು ಇಂದಿಗೂ ಟಿಬೆಟ್‌ ನಮ್ಮದೇ ಎಂದು ಹೇಳುತ್ತಾರೆ. ಆದರೆ, ಆರು ದಶಕಗಳಲ್ಲಿ ಚೀನಾ ಟಿಬೆಟ್‌ ಪ್ರಾಂತ್ಯದಲ್ಲಿ ಟಿಬೆಟನ್ನರನ್ನು ಮೆಟ್ಟಿನಿಂತಿದೆ. ಅಲ್ಲಿಂದ ಇಲ್ಲಿಯವರೆಗೆ ಟಿಬೆಟ್‌ ಸಂಸ್ಕೃತಿಯನ್ನು ಹಂತ ಹಂತವಾಗಿ ನಾಶ ಮಾಡಿದೆ. ಟಿಬೆಟ್‌ನಿಂದ ಹೊರಗಿರುವ ಬಹುತೇಕ ಟಿಬೆಟನ್ನರಿಗೆ ಈ ಕಹಿಸತ್ಯವನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲ.

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ನಿರಾಶ್ರಿತರಲ್ಲ, ವಿದೇಶಿಯರು?

ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟನ್ನರನ್ನು ನಿರಾಶ್ರಿತರು ಎಂದು ಒಪ್ಪಿಕೊಳ್ಳಲು ಹಿಂದಿನಿಂದಲೂ ಭಾರತ ಸರಕಾರ ಹಿಂದೇಟು ಹಾಕುತ್ತಲೇ ಬಂದಿದೆ. ವಿಶ್ವಸಂಸ್ಥೆಯ 1951ರ ನಿರಾಶ್ರಿತರ ಸಮಾವೇಶದ ಒಪ್ಪಂದದಿಂದಲೂ ಭಾರತ ದೂರವೇ ಉಳಿದಿದೆ.

ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟನ್ನರಿಗೆ ಸರಕಾರ ವಿಶೇಷ ಸವಲತ್ತುಗಳನ್ನು ನೀಡುತ್ತಿದೆಯೇ ಹೊರತು ಅವರನ್ನು ನಿರಾಶ್ರಿತರು ಎಂದು ಒಪ್ಪುತ್ತಿಲ್ಲ. ಬದಲಿಗೆ ಅವರನ್ನು ‘ವಿದೇಶಿಯರು’ ಎಂದೇ ಸರಕಾರ ಪರಿಗಣಿಸಿದೆ.

ಭಾರತಕ್ಕೆ ಬಂದ ಬಳಿಕ ಇಲ್ಲಿ ಜನಿಸಿರುವ ಟಿಬೆಟನ್ನರಿಗೆ ಪೌರತ್ವ ನೀಡಲು ಸರಕಾರ ಸಿದ್ಧವಿದೆ. ಆದರೆ, ಪೌರತ್ವ ಪಡೆಯಲು ಟಿಬೆಟನ್ನರಿಗೆ ಇಷ್ಟವಿಲ್ಲ. ಒಮ್ಮೆ ಭಾರತದ ಪೌರತ್ವ ಪಡೆದರೆ ಈಗ ಸಿಗುತ್ತಿರುವ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂಬ ಭಯದಿಂದ ಅವರಲ್ಲಿದೆ.

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ಚೀನಾ ಕೆಂಗಣ್ಣು

ದಲೈಲಾಮಾ ಸೇರಿದಂತೆ ಹಲವು ಟಿಬೆಟನ್ನರಿಗೆ ಆಶ್ರಯ ನೀಡಿರುವುದಕ್ಕೆ ಭಾರತದ ವಿರುದ್ಧ ಚೀನಾ ಮೊದಲಿನಿಂದಲೂ ಕೆಂಗಣ್ಣಾಗಿದೆ. ದಲೈಲಾಮಾ ಭೇಟಿ ವಿಚಾರವಾಗಿ ಚೀನಾ ದೋಕಲಾಂ ಗಡಿ ವಿಚಾರ ಕೆದಕಿದ್ದ ಘಟನೆ ಇತ್ತೀಚೆಗೆ ತಣ್ಣಗಾಗಿದೆ.

ಹೀಗೆಂದು ಭಾರತ ದಲೈಲಾಮಾ ಅವರನ್ನು ಬಿಟ್ಟುಕೊಡಲೂ ತಯಾರಿಲ್ಲ, ಚೀನಾದ ವಿರೋಧ ಕಟ್ಟಿಕೊಳ್ಳಲೂ ತಯಾರಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೋದ ನಂತರ ‘ಟಿಬೆಟ್‌ ಮೇಲೆ ಚೀನಾದ ಪರಮಾಧಿಕಾರ ಸರಿ’ ಎಂದು ಭಾರತ ಒಪ್ಪಿಕೊಂಡಿದ್ದನ್ನು ದಲೈಲಾಲಾ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಈ ವಿಚಾರವಾಗಿ ಭಾರತದ ಬಗ್ಗೆ ಟಿಬೆಟನ್ನರಿಗೂ ಸಿಟ್ಟಿದೆ.

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ಇರುವಲ್ಲೇ ಟಿಬೆಟ್!

ಟಿಬೆಟ್‌ನಿಂದ ಹೊರ ಬಂದ ಹಳೆಯ ಜನರಿಗೆ ಆಶ್ರಯ ನೀಡಿದ ದೇಶಗಳ ಬಗ್ಗೆ ಗೌರವವಿದೆ. ಹಲವರು ಸ್ಥಳೀಯ ಭಾಷೆಗಳನ್ನೂ ಕಲಿತಿದ್ದಾರೆ. ಆದರೆ, ಅವರು ಎಲ್ಲೇ ಇದ್ದರೂ ಅಲ್ಲೊಂದು ಟಿಬೆಟ್‌ ಹೊಂದಿದ್ದಾರೆ!

ಟಿಬೆಟ್‌ನಲ್ಲಿರುವ ವಾತಾವರಣ ಇರುವಂಥ ಕಡೆಗಳಲ್ಲೇ ಅವರಿಗೆ ನಿರಾಶ್ರಿತರ ತಾಣಗಳನ್ನು ಸರಕಾರ ನಿರ್ಮಿಸಿಕೊಟ್ಟಿದೆ. ಹೀಗಾಗಿ ತಮ್ಮ ಸೆಟಲ್‌ಮೆಂಟ್‌ಗಳಲ್ಲಿ ತಮ್ಮದೇ ನಾಡನ್ನು ಕಟ್ಟಿಕೊಂಡಿರುವ ಟಿಬೆಟನ್ನರು ಸ್ಥಳೀಯರ ಜತೆಗೆ ಬೆರೆಯುವುದು ಕಡಿಮೆ.

“ಬೈಲುಕುಪ್ಪೆಗೆ ಬಂದು ಸುಮಾರು 60 ವರ್ಷವಾದರೂ ಟಿಬೆಟನ್ನರು ಇಲ್ಲಿನ ಸ್ಥಳೀಯರ ಜತೆಗೆ ಹೆಚ್ಚಾಗಿ ಬೆರೆಯುವುದಿಲ್ಲ. ಅವರ ಜಮೀನು, ಮನೆಗಳಲ್ಲಿ ಕೆಲಸ ಮಾಡುವವರ ಜತೆಗೆ ಮಾತ್ರ ಅವರ ಸಂಪರ್ಕ. ಹೊರ ಜಗತ್ತಿನೊಂದಿಗೆ ಅವರ ನಂಟು ಕಡಿಮೆ” ಎನ್ನುತ್ತಾರೆ ಬೈಲುಕುಪ್ಪೆಯ ಸ್ಥಳೀಯರೊಬ್ಬರು.

“ಸರಕಾರ ಅವರಿಗೆ ಭೂಮಿ ಕೊಟ್ಟಿದೆ. ಹಳೆಯ ತಲೆಮಾರಿನವರು ಕೃಷಿ ಮಾಡುತ್ತಾರೆ. ಹೊಸಬರು ಹೆಚ್ಚಾಗಿ ವ್ಯವಹಾರ ಮನಸ್ಥಿತಿಯವರು. ಕೆಲವರು ದುಡ್ಡು ಮಾಡಬೇಕೆಂದು ಅಡ್ಡದಾರಿ ಹಿಡಿದಿದ್ದಾರೆ. ಗಾಂಜಾ, ಕಳ್ಳ ಸಾಗಣೆಯ ದಂಧೆಗಳಲ್ಲಿ ಬೈಲುಕುಪ್ಪೆಯ ಕೆಲ ಟಿಬೆಟನ್‌ ಯುವಕರು ತೊಡಗಿಕೊಂಡಿರುವ ಆರೋಪವೂ ಇದೆ. ಆದರೆ, ಸ್ಥಳೀಯರೊಂದಿಗೆ ಜಗಳಕ್ಕಿಳಿಯುವುದು ಕಡಿಮೆ” ಎಂಬುದು ಅವರ ಮಾತು.

“ಭಾರತ ಸರಕಾರ ನಿರಾಶ್ರಿತ ಟಿಬೆಟನ್ನರಿಗೆ ‘ನೋಂದಣಿ ಪ್ರಮಾಣಪತ್ರ’ (ಆರ್‌ಸಿ) ನೀಡಿದೆ. ಇದನ್ನು ಪ್ರತಿ ಐದು ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳಬೇಕು. ಆದರೆ, ಅದೆಷ್ಟೋ ಟಿಬೆಟನ್ನರ ಬಳಿ ಈ ಪ್ರಮಾಣಪತ್ರಗಳೇ ಇಲ್ಲ. ಸರಕಾರ ಪೌರತ್ವ ನೀಡಲು ಸಿದ್ಧವಿದ್ದರೂ ಟಿಬೆಟನ್‌ ಮುಖಂಡರೇ ಪೌರತ್ವ ಪಡೆಯದಂತೆ ತಮ್ಮವರಿಗೆ ನಿರ್ಬಂಧ ಹಾಕಿದ್ದಾರೆ” ಎನ್ನುತ್ತಾರೆ ಅವರು.

“ಟಿಬೆಟನ್ನರಲ್ಲೂ ಜಾತಿ, ಸಮುದಾಯಗಳಿವೆ. ಅವರಲ್ಲೂ ಮೇಲು ಕೀಳು ವ್ಯವಸ್ಥೆ ಇದೆ. ಮೊದಲು ಸ್ಥಳೀಯರನ್ನು ಜೀತಕ್ಕೆ ಇಟ್ಟುಕೊಳ್ಳುತ್ತಿದ್ದ ಅವರು ಈಗ ಬಿಹಾರದಿಂದ ಆಳುಗಳನ್ನು ಕರೆಸಿಕೊಂಡು ದುಡಿಸಿಕೊಳ್ಳುತ್ತಾರೆ. ಸ್ಥಳೀಯರಿಗೆ ಹೋಲಿಸಿದರೆ ಬೈಲುಕುಪ್ಪೆಯಲ್ಲಿ ಟಿಬೆಟನ್ನರೇ ಪ್ರಭಾವಿಗಳು. ಹೀಗಾಗಿ ಯಾರೂ ಅವರನ್ನು ಪ್ರಶ್ನಿಸುವುದಿಲ್ಲ” ಎಂಬುದು ಅವರ ಮಾತು.

“ಬೈಲುಕುಪ್ಪೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಬೆಟನ್ನರಿದ್ದಾರೆ. ಇದು ಪ್ರವಾಸಿ ಸ್ಥಳವೂ ಆಗಿರುವುದರಿಂದ ನಿತ್ಯ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಇದರಿಂದ ಸ್ಥಳೀಯ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ. ಈ ಕಲುಷಿತ ನೀರು ಮುಂದೆ ಸೇರುವುದು ಕಾವೇರಿ ನದಿಗೆ. ಕಾವೇರಿ ನದಿ ಮಲಿನವಾಗಲು ಬೈಲುಕುಪ್ಪೆಯ ಟಿಬೆಟನ್ನರೂ ಕಾರಣ” ಎನ್ನುತ್ತಾರೆ ಅವರು.

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ಸಿರಿವಂತ ಕುಶಾಲನಗರ!

ಕೊಡಗು ಜಿಲ್ಲೆಯ ಇತರೆ ಪಟ್ಟಣಗಳಿಗೆ ಹೋಲಿಸಿದರೆ ಕುಶಾಲನಗರದಲ್ಲಿ ಹೆಚ್ಚು ಆರ್ಥಿಕ ಶ್ರಿಮಂತಿಕೆ ಕಾಣುತ್ತದೆ. ಇದಕ್ಕೆ ಟಿಬೆಟನ್ನರು ಕೂಡಾ ಕಾರಣ ಎನ್ನುತ್ತಾರೆ ಸ್ಥಳೀಯರು.

“ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟನ್ನರ ಬಳಿ ಆಗ ಕೈಯಲ್ಲಿ ಹಣವಿರಲಿಲ್ಲ. ಆರಂಭದಲ್ಲಿ ಅವರು ಏನಾದರೂ ಕೊಳ್ಳಬೇಕಿದ್ದರೆ ತಮ್ಮ ಜತೆಗೆ ತಂದಿದ್ದ ಚಿನ್ನವನ್ನು ಕೊಟ್ಟು ವಸ್ತುಗಳನ್ನು ಖರೀದಿ ಮಾಡುತ್ತಿದ್ದರು ಎಂಬ ಮಾತುಗಳಿವೆ. ಆದರೆ, ಹಿಂದಿನಿಂದಲೂ ಕೇಂದ್ರ ಸರಕಾರ ಹಾಗೂ ವಿದೇಶಗಳಿಂದ ಟಿಬೆಟನ್ನರಿಗೆ ಆರ್ಥಿಕ ನೆರವು ಚೆನ್ನಾಗಿದೆ. ಹೀಗಾಗಿ ಅವರು ಹೆಚ್ಚು ಖರ್ಚು ಮಾಡುತ್ತಾರೆ” ಎನ್ನುತ್ತಾರೆ ಸ್ಥಳೀಯರಾದ ಕಿರಣ್.

‘ಅವರಿಗೆ ಎಲ್ಲವೂ ಸಿಕ್ಕಿದೆ’:

ಟಿಬೆಟ್‌ನಿಂದ ಭಾರತಕ್ಕೆ ಬಂದ ಟಿಬೆಟನ್ನರಿಗೆ ಸರಕಾರ ಇಲ್ಲಿನ ನಾಗರಿಕರಿಗಿಂದ ಹೆಚ್ಚಿನ ಸವಲತ್ತುಗಳನ್ನೇ ನೀಡಿದೆ, ಅವರ ಎದುರು ನಾವು ಎರಡನೇ ದರ್ಜೆಯವರಿದ್ದಂತೆ ಎಂಬ ಅಸಮಾಧಾನ ಸ್ಥಳೀಯರಲ್ಲಿದೆ.

“ಟಿಬೆಟನ್ನರಿಗೆ ಎಲ್ಲವೂ ಸಿಕ್ಕಿದೆ. ಸರಕಾರ ಅವರಿಗೆ ಏನೇನು ಬೇಕೋ ಅದಕ್ಕಿಂತ ಹೆಚ್ಚಿನದನ್ನೇ ಮಾಡಿದೆ. ಅವರ ಬಳಿ ಹಣದ ಹರಿದಾಟ ಚೆನ್ನಾಗಿದೆ. ಹೀಗಾಗಿ ಬಹುತೇಕ ಟಿಬೆಟನ್ನರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಸ್ಥಳೀಯರು ಅವರ ಜಮೀನು, ಮನೆಗಳಲ್ಲಿ ಆಳುಗಳಾಗಿ ದುಡಿಯುತ್ತಿದ್ದಾರೆ. ಅವರಿಗೆ ಹೋಲಿಸಿದರೆ ಸ್ಥಳೀಯರಾದ ನಾವು ಎರಡನೇ ದರ್ಜೆಯ ನಾಗರಿಕರಿದ್ದಂತೆ” ಎನ್ನುತ್ತಾರೆ ಕೊಳ್ಳೇಗಾಲ ತಾಲ್ಲೂಕಿನ ವಡೇರಪಾಳ್ಯ ಬಳಿಯ ಕೃಷ್ಣಮೂರ್ತಿ.

ಬೈಲುಕುಪ್ಪೆಯಿಂದ ‘ವಿದೇಶಿಯರ’ ಗುಳೆ: ಭಾರತ ತೊರೆಯುತ್ತಿರುವ ಟಿಬೆಟನ್ನರು!

ಕಾಡುತ್ತಿರುವ ಅಭದ್ರತೆ

ಟಿಬೆಟ್‌ನಿಂದ ಹೊರ ಬಂದು ಬೇರೆ ಬೇರೆ ದೇಶಗಳಲ್ಲಿರುವ ಟಿಬೆಟನ್ನರನ್ನು ಅಭದ್ರತೆ ತೀವ್ರವಾಗಿ ಕಾಡುತ್ತಿದೆ. ಚೀನಾದ ವಶದಲ್ಲಿರುವ ಟಿಬೆಟ್‌ ಪ್ರಾಂತ್ಯದಲ್ಲೇ ಉಳಿದುಕೊಂಡಿರುವ ಟಿಬೆಟನ್ನರು ಕೂಡಾ ಟಿಬೆಟ್‌ ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಲೇ ಇದ್ದಾರೆ.

ಓದಲು ದೇಶ ಬಿಟ್ಟು ಬಂದಿರುವ ಬಹುತೇಕ ಟಿಬೆಟ್‌ ಯುವಜನರು ಕೂಡಾ ಟಿಬೆಟ್‌ಗೆ ಮರಳುತ್ತಿದ್ದಾರೆ. ಹೊರ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಳ್ಳುವುದು ಹೇಗೆ ಎಂಬ ಆತಂಕ ಹೊರಗಿನವರನ್ನು ಕಾಡುತ್ತಿದ್ದರೆ, ಟಿಬೆಟ್‌ನಲ್ಲೇ ಇರುವವರು ಅಲ್ಲಿ ತಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ.

“ಹೊಸ ಪೀಳಿಗೆಯ ಟಿಬೆಟನ್ನರಲ್ಲಿ ಧಾರ್ಮಿಕತೆ ಮನೋಭಾವ ಕಡಿಮೆಯಾಗಿದೆ. ಹೊಸವರಿಗೆ ಐಷಾರಾಮಿ ಬದುಕು ಬೇಕಾಗಿದೆ. ಹೆಚ್ಚು ಓದಿರುವವರು ವಿದೇಶಗಳಿಗೆ ಹೋಗುತ್ತಾರೆ. ಓದದವರು ಸ್ಥಳೀಯರೊಂದಿಗೆ ಸೇರಿ ಅಡ್ಡದಾರಿಯಲ್ಲಿ ಹಣ ಮಾಡಲು ಮುಂದಾಗುತ್ತಾರೆ” ಎನ್ನುತ್ತಾರೆ ಬೈಲುಕುಪ್ಪೆಯ ಚಂದ್ರಮೋಹನ್‌.

ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟನ್ನರ ಒಂದು ತಲೆಮಾರು ಭಾರತದಲ್ಲಿ ತಮಗೆ ನೆಲೆ ಸಿಕ್ಕಿತು ಎಂದುಕೊಂಡಿರುವಾಗ ಅವರ ಹೊಸ ತಲೆಮಾರು ಭಾರತದಿಂದ ಹೊರಗೆ ತಮ್ಮ ಸ್ವಂತ ನೆಲೆ ಕಂಡುಕೊಳ್ಳಲು ಜೀಕುತ್ತಿದೆ. ಒಂದು ಕಾಲಕ್ಕೆ ಭಾರತ ತಮಗೆ ನೆಮ್ಮದಿಯ ತಾಣ ಎಂದುಕೊಂಡಿದ್ದ ಟಿಬೆಟನ್ನರಿಗೆ ಈಗ ಭಾರತವೂ ಕೂಡಾ ನಮ್ಮದಲ್ಲ ಎನಿಸಿದೆ.