ಚೈನಾ-ಅಮೆರಿಕಾ ‘ಸುಂಕ ಸಮರ’: ಇಬ್ಬರ ಜಗಳದಲ್ಲಿ ಹೊಡೆತ ತಿನ್ನುತ್ತಿರುವ ಉದ್ಯಮಿಗಳು
COVER STORY

ಚೈನಾ-ಅಮೆರಿಕಾ ‘ಸುಂಕ ಸಮರ’: ಇಬ್ಬರ ಜಗಳದಲ್ಲಿ ಹೊಡೆತ ತಿನ್ನುತ್ತಿರುವ ಉದ್ಯಮಿಗಳು

ಅಮೆರಿಕಾದ ಸುಂಕ ಹೆಚ್ಚಳದ ನಿರ್ಧಾರಕ್ಕೆ ಪ್ರತ್ಯುತ್ತರ ನೀಡಿರುವ ಚೈನಾ, ತಾನೂ ಕೂಡ ಸುಂಕ ವಿಧಿಸಿ ತೊಡೆ ತಟ್ಟಿದೆ. ಎರಡು ಪ್ರಬಲ ರಾಷ್ಟ್ರಗಳ ನಡುವಿನ ಈ ಗುದ್ದಾಟ ಜಾಗತಿಕ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ಉದ್ಯಮಿಗಳ ನಿದ್ದೆ ಕೆಡಿಸಿದೆ.

ವಿಶ್ವದ ಪ್ರಬಲ ರಾಷ್ರಗಳ ಪೈಕಿ ಒಂದು ಎನಿಕೊಂಡಿರುವ ಚೈನಾ ಈಗ ಅಮೆರಿಕಾದ ಉತ್ಪನ್ನಗಳ ಮೇಲೆ ಸುಂಕ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ. ಹಂದಿ ಮಾಂಸ, ಕೆಲವು ಹಣ್ಣಿನ ಉತ್ಪನ್ನಗಳು ಸೇರಿದಂತೆ 128 ಉತ್ಪನ್ನಗಳನ್ನು ಚೈನಾದಲ್ಲಿ ಮಾರಲು ಏಪ್ರಿಲ್‌ 2ರಿಂದ ಅಮೆರಿಕಾ ಸುಂಕ ತೆರಬೇಕಿದೆ. 

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬೀಜಿಂಗ್‌ನ ಮೇಲೆ ಹೇರಿದ್ದ ವ್ಯಾಪಾರ ನಿರ್ಬಂಧವನ್ನು ಮುಂದುವರಿಸುವ ತೀರ್ಮಾನವನ್ನು ಕೈಗೊಂಡಿದ್ದರು. ಈ ನಿರ್ಬಂಧಕ್ಕೆ ಪ್ರತ್ಯುತ್ತರವಾಗಿ ಚೈನಾ ಸರಕಾರ ಸುಂಕ ವಿಧಿಸಲು ನಿರ್ಧರಿಸಿದೆ. ಇದೊಂತರ ಜಾಗತಿಕ ಪ್ರಬಲ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ಸುಂಕ ಸಮರ.

ಚೈನಾದಲ್ಲಿ ಅಮೆರಿಕಾದ ವಸ್ತುಗಳು ದುಬಾರಿಯಾದರೆ, ಗ್ರಾಹಕರು ಬೆಲೆ ತೆತ್ತು ಕೊಳ್ಳಲಾಗದೆ ಅನಿವಾರ್ಯವಾಗಿ ಇತರೆ ದೇಶಗಳ ವಸ್ತುಗಳ ಕಡೆಗೆ ಗಮನ ಹರಿಸುತ್ತಾರೆ. ಈವರೆಗೂ ಕಡಿಮೆ ಬೆಲೆಯ ವಸ್ತುಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಹಿಡಿತ ಸ್ಥಾಪಿಸಿಸಿದ ಚೈನಾದಲ್ಲಿ ಅಮೆರಿಕಾ ವಸ್ತುಗಳಿಗೆ ಬೇಡಿಕೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಕಮ್ಯುನಿಸ್ಟ್ ದೇಶ ಚೈನಾದಲ್ಲಿ ಹುಟ್ಟಿಕೊಂಡ ಹೊಸ ತಲೆಮಾರಿನ ಶ್ರೀಮಂತರು ಅಮೆರಿಕಾ ವಸ್ತುಗಳನ್ನು ಹೆಚ್ಚು ನೆಚ್ಚಿಕೊಂಡಿದ್ದರು. ಇದೀಗ ಅವುಗಳ ಮೇಲೆ ಸ್ಥಳೀಯ ಸುಂಕ ವಿಧಿಸುವ ಮೂಲಕ ಅಮೆರಿಕಾ ವಸ್ತುಗಳ ಬೆಲೆಯನ್ನು ಮಾರುಕಟ್ಟೆಯಲ್ಲಿ ದುಬಾರಿಯಾಗಿಸುವ ಕ್ರಮ ಕೈಗೊಂಡಿದೆ ಜಿ ಪಿಂಗ್ ಸರಕಾರ. ಇದರಿಂದಾಗಿ ಚೈನಾ ಮಾರುಕಟ್ಟೆಯಲ್ಲಿ ಅಮೆರಿಕಾ ವಸ್ತುಗಳ ಬೇಡಿಕೆ ಕಡಿಮೆಯಾಗುತ್ತದೆ ಎಂಬುದು ಅಂದಾಜು.

ಚೈನಾ-ಅಮೆರಿಕಾ ‘ಸುಂಕ ಸಮರ’: ಇಬ್ಬರ ಜಗಳದಲ್ಲಿ ಹೊಡೆತ ತಿನ್ನುತ್ತಿರುವ ಉದ್ಯಮಿಗಳು
ಚಿತ್ರ ಕೃಪೆ : ExecReview

ವಿಶ್ವದಲ್ಲೇ ಅತಿ ಹೆಚ್ಚು ಜನರನ್ನು ಹೊಂದಿರುವ ಚೈನಾದಲ್ಲಿ ವ್ಯವಹಾರ ನಡೆಸುತ್ತಿರುವ ಅಮೆರಿಕನ್‌ ಕಂಪನಿಗಳು ಅಪಾರ ಪ್ರಮಾಣದ ಲಾಭವನ್ನು ಅಮೆರಿಕಾಗೆ ತಂದು ಕೊಡುತ್ತಿವೆ. ಎರಡೂ ದೇಶಗಳ ನಡುವಿನ ಈ ಸುಂಕ ಸಮರ ನೇರವಾಗಿ ಲಾಭಕ್ಕೆ ಕತ್ತರಿ ಹಾಕಲಿದೆ.

ಚೈನಾ ಸರಕಾರದ ಈ ನಡೆ ಅಮೆರಿಕಾ ಅಧ್ಯಕ್ಷ ಟ್ರಂಪ್‌ರ ನಿರ್ಬಂಧಗಳ ಮುಂದುವರಿಕೆ ನಿರ್ಧಾರವನ್ನು ಬದಲಿಸಬಹುದು ಎನ್ನಲಾಗಿದೆ. ಇಲ್ಲವಾದರೆ ಅಮೆರಿಕಾ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳಲಿದೆ.

ಚೈನಾ ಸರಕಾರದ ಮುಖವಾಣಿ ಪ್ರತಿಕೆ 'ಪೀಪಲ್ಸ್‌ ಡೈಲಿ' ಸರಕಾರದ ಈ ನಿರ್ಧಾರವನ್ನು ಬಹಿರಂಗಗೊಳಿದೆ. "ಚೈನಾ ಅಮೆರಿಕಾದಿಂದ ಅಮದುಗೊಳ್ಳುವ ಹಂದಿ ಮಾಂಸ, ಹಣ್ಣಿನ ಉತ್ಪನ್ನಗಳು ಸೇರಿದಂತೆ 128 ವಸ್ತುಗಳ ಮೇಲೆ ಏಪ್ರಿಲ್‌ 2, ಸೋಮವಾರದಿಂದ ಸುಂಕವನ್ನು ವಿಧಿಸಲಿದೆ. ಚೈನಾದ ಸ್ಟೀಲ್‌ ಮತ್ತು ಅಲ್ಯೂಮಿನಿಯಂ ವಸ್ತುಗಳ ಮೇಲಿನ ನಿರ್ಬಂಧವನ್ನು ಮುಂದುವರೆಸಿರುವ ಅಮೆರಿಕಾದ ನಡೆಗೆ ಈ ಸುಂಕ ಪ್ರತ್ಯುತ್ತರವಾಗಿದೆ: ಆರ್ಥಿಕ ಸಚಿವಾಲಯ." ಎಂದು ಅದರ ಟ್ವೀಟ್ ಹೇಳಿದೆ.

2018ರ ಮಾರ್ಚ್‌ ತಿಂಗಳ ಆರಂಭದಲ್ಲಿ ಟ್ರಂಪ್‌, ಸ್ಟೀಲ್‌ ಮತ್ತು ಅಲ್ಯುಮಿನಿಯಂ ವಸ್ತುಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸಲು ತೀರ್ಮಾನಿಸಿದ್ದರು. ಆದರೆ ಹಲವಾರು ದೇಶಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಿದ್ದರು. ಚೈನಾದ ಹೆಸರು ಈ ವಿನಾಯಿತಿ ಪಡೆದ ದೇಶಗಳ ಪಟ್ಟಿಯಲ್ಲಿ ಇರಲಿಲ್ಲ.

ಮಾರ್ಚ್‌ ತಿಂಗಳ ಅಂತ್ಯದಲ್ಲಿ ಟ್ರಂಪ್ ಚೈನಾದ ವಸ್ತುಗಳ ಮೇಲೆ ಸುಮಾರು 60 ಬಿಲಿಯನ್‌ ಡಾಲರ್‌ಗಳಷ್ಟು ಸುಂಕ ವಿಧಿಸುವ ತೀರ್ಮಾನವನ್ನು ಕೈಗೊಂಡಿದ್ದರು. ಈ ನಡೆಯು ಅಮೆರಿಕಾದಲ್ಲಿ ಚೈನಾ ವಸ್ತುಗಳ ಪ್ರಾಬಲ್ಯವನ್ನು ಕುಸಿಯುವಂತೆ ಮಾಡಿ, ಹಿನ್ನೆಡೆಯನ್ನು ಉಂಟು ಮಾಡಿತ್ತು. ಅಲ್ಲದೆ ಚೈನಾದಲ್ಲಿನ ಸುಮಾರು 60,000 ಕಂಪನಿಗಳು ಬಾಗಿಲು ಮುಚ್ಚಿದ್ದವು. ಸುಮಾರು 60 ಲಕ್ಷ ಜನ ಉದ್ಯೋಗವನ್ನು ಕಳೆದುಕೊಂಡಿದ್ದರು.

ಅಮೆರಿಕನ್ನರಿಗೇ ತಲೆನೋವು:

ಡೊನಾಲ್ಡ್‌ ಟ್ರಂಪ್‌ರ ಈ ಏಕಪಕ್ಷೀಯ ನಡೆಗಳು ವಿಶ್ವದ ಇತರೆ ನಾಯಕರನಷ್ಟೇ ಅಲ್ಲದೇ ಹಲವಾರು ಅಮೆರಿಕನ್‌ ಉದ್ಯಮಿಗಳ ನಿದ್ದೆಯನ್ನೂ ಕೆಡಿಸಿದೆ. ಟ್ರಂಪ್‌ ಅಧಿಕಾರಕ್ಕೆ ಏರಿದಾಗಿನಿಂದಲೂ ಇಂತಹದ್ದೇ ತೀರ್ಮಾನಗಳನ್ನು ಕೈಗೊಂಡು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕಾದ ಪ್ರಾಬಲ್ಯವನ್ನು ಇಳಿಮುಖಗೊಳಿಸಿದ್ದಾರೆ. ಈಗ ಮತ್ತೊಂದು ಪ್ರಮುಖ ರಾಷ್ಟ್ರ ಚೈನಾದ ಜತೆಗಿನ ಈ ಸುಂಕ ಸಮರದಿಂದ ಅಮೆರಿಕಾದ ಜಾಗತಿಕ ಮಾರುಕಟ್ಟೆಯ ಪ್ರಾಬಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಟ್ರಂಪ್‌ ಅಮೆರಿಕಾ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಸಮಯದಿಂದಲೂ ಚೈನಾವನ್ನು ಹತ್ತಿಕ್ಕಲು ಹಲವಾರು ಅನ್ಯಾಯದ ವ್ಯಾವಹಾರಿಕ ನೀತಿಗಳನ್ನು ಕೈಗೊಳ್ಳುತ್ತಿದ್ದಾರೆ. ಈ ನೀತಿಗಳು ಅಮೆರಿಕಾದ ಉದ್ಯಮಿಗಳನ್ನೇ ಕಷ್ಟಕ್ಕೆ ನೂಕುತ್ತಿವೆ ಎನ್ನುವುದನ್ನು ಟ್ರಂಪ್‌ ಮನಗಂಡಿಲ್ಲ ಎಂಬ ಟೀಕೆಗಳೀಗ ಆರಂಭವಾಗಿವೆ.

ಟ್ರಂಪ್‌ನ ನಿರ್ಧಾರಕ್ಕೆ ತಕ್ಕಂತೆ ತಾಳ ಹಾಕುವ, ಹೇಳಿದ್ದೆಲ್ಲವೂ ಸರಿ ಎನ್ನುವ ಅಮೆರಿಕಾದ ಅಧಿಕಾರ ವರ್ಗ ಕೂಡ ಅಮೆರಿಕಾದ ಏಳು ಬೀಳುಗಳ ಕಡೆಗೆ ಗಮನ ಹರಿಸುತ್ತಿಲ್ಲ. ತನ್ನ ನಿರ್ಧಾರಗಳನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಕಾರಣಕ್ಕಾಗಿಯೇ ಟ್ರಂಪ್‌ ಹಲವಾರು ಪ್ರಜ್ಞಾವಂತರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು.

ಮತ್ತೊಂದು ಕಡೆ ಅಮೆರಿಕಾದಿಂದ ಹಲವಾರು ನಿರ್ಬಂಧಕ್ಕೆ ಒಳಗಾಗುತ್ತಿರುವ ಚೈನಾ ತನ್ನ ಮಾರುಕಟ್ಟೆಯನ್ನು ಇತರೆ ಪ್ರಬಲ ರಾಷ್ಟ್ರಗಳಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ತುಳಿಯಲು ಹವಣಿಸುತ್ತಿರುವ ಅಮೆರಿಕಾ ದೇಶವೇ ಇದರಿಂದ ತೊಂದರೆಗೆ ಒಳಗಾಗುವ ಸಾಧ್ಯತೆಗಳೂ ದಟ್ಟವಾಗಿವೆ.

ಈಗ ಅಮೆರಿಕಾದಲ್ಲಿನ ಹಲವಾರು ಉದ್ಯಮಗಳು ಅಮೆರಿಕಾದ ಈ ನಡೆಯನ್ನು ವಿರೋಧಿಸಿ ಎಚ್ಚರಿಕೆಯನ್ನು ನೀಡಿವೆ. ಹೆಚ್ಚು ಸುಂಕ ವಿಧಿಸುವ ನಿರ್ಧಾರಗಳು ಅಮೆರಿಕಾದ ಸಾಗರೋತ್ತರ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿವೆ ಎಂಬ ಉದ್ಯಮಿಗಳ ಎಚ್ಚರಿಕೆ ಅಧ್ಯಕ್ಷ ಟ್ರಂಪ್‌ ಹಾಗೂ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರೂಸ್‌ರ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮವನ್ನು ಬೀರಿದಂತಿಲ್ಲ.

ಕಳೆದ ವರ್ಷ ಚೈನಾ ಅಮರಿಕಾಗೆ ಸುಮಾರು 505 ಬಿಲಿಯನ್‌ ಡಾಲರ್‌ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಅಮೆರಿಕಾ ಚೈನಾಗೆ 135 ಬಿಲಿಯನ್‌ ಡಾಲರ್‌ ಮೊತ್ತದ ವಸ್ತುಗಳನ್ನು ರಫ್ತು ಮಾಡಿತ್ತು. ಈ ಎರಡೂ ಮೊತ್ತಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ಗುರುತಿಸಿರುವ ಟ್ರಂಪ್‌, ತಮ್ಮ ವ್ಯಾಪಾರ ಕುಂದಿದರೂ ಪರವಾಗಿಲ್ಲ ಎನ್ನುವ ಧೋರಣೆ ತಳೆದಂತಿದೆ.

ಚೈನಾವನ್ನು ಹತ್ತಿಕುವುದಷ್ಟೇ ತಮ್ಮ ಗುರಿ ಎಂದು ಎಣಿಸಿರುವಂತೆ ತೋರುವ ಟ್ರಂಪ್‌ ನಿರ್ಬಂಧಗಳನ್ನು ಮತ್ತಷ್ಟು ಹೆಚ್ಚಿಸಿ ಮಂದಹಾಸ ಬೀರುತ್ತಿದ್ದಾರೆ. ಪ್ರತ್ಯುತ್ತರವಾಗಿ ತಾನೂ ಕೂಡ ಸುಂಕ ವಿಧಿಸಿರುವ ಚೈನಾ. ತಾನೂ ಸಹ ಕಡಿಮೆ ಇಲ್ಲ ಎಂಬ ಭಾವವನ್ನು ಪ್ರದರ್ಶಿಸುತ್ತಿದೆ. ಈ ಎರಡು ಪ್ರಬಲ ರಾಷ್ಟ್ರಗಳ ನಡುವಿನ ಕಿತ್ತಾಟ ಜಾಗತಿಕ ಮಾರುಕಟ್ಟೆಯ ಮೇಲಿನ ಪರಿಣಾಮಗಳು ನಿಧಾನವಾಗಿ ಕಾಣಿಸಿಕೊಳ್ಳಲಿವೆ.