samachara
www.samachara.com
‘ಸಂಪೂರ್ಣ ಮಾಹಿತಿ’: ಉತ್ತರ ಭಾರತದಲ್ಲಿ ದಲಿತರು ಯಾಕೆ ಬೀದಿಗೆ ಇಳಿದರು? 
COVER STORY

‘ಸಂಪೂರ್ಣ ಮಾಹಿತಿ’: ಉತ್ತರ ಭಾರತದಲ್ಲಿ ದಲಿತರು ಯಾಕೆ ಬೀದಿಗೆ ಇಳಿದರು? 

ಒಂದು ವರ್ಗಕ್ಕೆ ಒಳಿತನ್ನು ನೀಡಲು ಬಯಸಿದ ಸುಪ್ರಿಂ ಕೋರ್ಟ್‌ ದೇಶದ ಮತ್ತೊಂದು ದೊಡ್ಡ ಸಮುದಾಯದ ಅವಮಾನಕ್ಕೆ ಮುಂದಾಗಿದೆ. ಸಾಮಾಜಿಕ ತಾರತಮ್ಯವನ್ನು ತೊಡೆಯಲೆಂದು ಬಂದ ಕಾಯ್ದೆಯನ್ನು ಬದಲಾಯಿಸಲು ಮುಂದಾಗಿ ದಲಿತ ವರ್ಗದ ಆಕ್ರೋಶಕ್ಕೆ ಗುರಿಯಾಗಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಸುಪ್ರಿಂ ಕೋರ್ಟ್‌ನ ತೀರ್ಪನ್ನು ವಿರೋಧಿಸಿ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ ಹಿಂಸಾ ಸ್ವರೂಪವನ್ನು ಪಡೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ ನೀಡಿರುವ ವಿಶೇಷ ಅವಕಾಶಗಳನ್ನು ಸುಪ್ರಿಂ ಕೋರ್ಟ್‌ ತನ್ನ ತೀರ್ಪಿನ ಮೂಲಕ ದುರ್ಬಲಗೊಳಿಸುತ್ತಿದೆ ಎಂದು ದಲಿತ ಸಂಘಟನೆಗಳು ದೇಶದ ಹಲವಾರು ರಾಜ್ಯಗಳಲ್ಲಿ ಬಂದ್‌ ಆಚರಿಸುತ್ತಿವೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್‌ ಹೇಳಿತ್ತು. ಈ ಕಾಯ್ದೆಯಡಿಯಲ್ಲಿ ದಾಖಲಾದ ಆರೋಪಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಪರಿಶೀಲಿಸಿ, ಖಚಿತ ಪಡಿಸಿಕೊಳ್ಳುವ ಸಲುವಾಗಿ ಪ್ರಾರ್ಥಮಿಕ ಹಂತದಲ್ಲಿ ಡಿಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್‌ ಮಾರ್ಚ್‌ 20ರಂದು ಆದೇಶಿಸಿತ್ತು. ಇಂತಹದ್ದೇ ಹಲವಾರು ಅಂಶಗಳನ್ನು ಸುಪ್ರಿಂ ಕೋರ್ಟ್‌ನ ಆದೇಶ ಒಳಗೊಂಡಿತ್ತು. ಇವು ದಲಿತ ಸಂಘಟನೆಗಳನ್ನು ಕೆರಳಿಸಿತ್ತು.

ಮಾರ್ಚ್‌ 20ರಂದು ಸುಪ್ರಿಂ ಆದೇಶ ಹೊರ ಬೀಳುತ್ತಲೇ ದಲಿತ ಸಂಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು. ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸೋಮವಾರದ ಭಾರತ್‌ ಬಂದ್‌ಗೆ ಕರೆ ನೀಡಿದ್ದವು. ಅದೀಗ ಹಿಂಸಾ ಸ್ವರೂಪವನ್ನು ಪಡೆದುಕೊಳ್ಳುವ ಮೂಲಕ ದೇಶದ ಗಮನ ಸೆಳೆದಿದೆ.

ರಾಂಚಿಯಲ್ಲಿ ನಡೆದ ದಲಿತರ ಪ್ರತಿಭಟನೆ ನಿಯಂತ್ರಿಸಲು ಲಾಠಿ ಬೀಸಿದ ಪೊಲೀಸರು. 
ರಾಂಚಿಯಲ್ಲಿ ನಡೆದ ದಲಿತರ ಪ್ರತಿಭಟನೆ ನಿಯಂತ್ರಿಸಲು ಲಾಠಿ ಬೀಸಿದ ಪೊಲೀಸರು. 
ಎಎಫ್‌ಪಿ

ಈಗಾಗಲೇ ಬಿಎಸ್‌ಪಿ ನಾಯಕಿ ಮಾಯಾವತಿ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸೇರಿದಂತೆ ಹಲವು ದಲಿತ ನಾಯಕರು ಪ್ರತಿಭಟನಾಕಾರರ ಬೇಡಿಕೆಗೆ ಒತ್ತಾಸೆಯಾಗಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಜಿಗ್ನೇಶ, “ಸುಪ್ರಿಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರ ಸರಿಯಾದ ಮರು ಪರಿಶೀಲನಾ ಅರ್ಜಿಯನ್ನು ದಾಖಲಿಸಬೇಕು. ಈ ದೇಶದಲ್ಲಿ ಪ್ರತಿ 15 ನಿಮಿಷಕ್ಕೆ ಒಬ್ಬ ದಲಿತ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ದೌರ್ಜನ್ಯ ತಡೆ ಕಾಯ್ದೆಯೇ ದುರ್ಬಲಗೊಂಡರೆ ಅವರನ್ನು ಯಾರು ರಕ್ಷಿಸಬೇಕು?’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

“ಒಂದು ವೇಳೆ, ಕೇಂದ್ರ ಸರಕಾರ ದಲಿತರ ಪರ ಸರಿಯಾದ ರೀತಿಯಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸದೇ ಹೋದರೆ, ಮಾ. 14ರಂದು ಅಂಬೇಡ್ಕರ್ ಜಯಂತಿಯಂದು ಯಾವ ಬಿಜೆಪಿ ನಾಯಕರೂ ಬಾಬಾ ಸಾಹೇಬರ ಪ್ರತಿಮೆ ಮುಟ್ಟದಂತೆ ತಡೆಯುವ ಕೆಲಸ ಮಾಡುತ್ತೀವಿ,’’ ಎಂದು ಜಿಗ್ನೇಶ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಯ ಹಲವು ಹಿರಿಯ ನಾಯಕರು ಹಿಂಸಾತ್ಮಕ ಪ್ರತಿಭಟನೆ ಬೆನ್ನಲ್ಲೇ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಸುಪ್ರಿಂ ತೀರ್ಪಿನ ಹಿನ್ನೆಲೆ:

ಇಷ್ಟಕ್ಕೂ ಏನಿದು ಸುಪ್ರಿಂ ಕೋರ್ಟ್ ತೀರ್ಪು ಎಂದು ಹುಡುಕಿಕೊಂಡು ಹೊರಟರೆ ಹಲವು ಸೂಕ್ಷ್ಮ ಅಂಶಗಳು ತೆರೆದುಕೊಳ್ಳುತ್ತವೆ. ಸದ್ಯ ಎದ್ದಿರುವ ವಿವಾದದ ಮೂಲವಿರುವುದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿನ ಸರಕಾರಿ ಫಾರ್ಮಸಿ ಕಾಲೇಜಿನಲ್ಲಿ ದಾಖಲಿಸಲಾದ ಒಂದು ದೂರಿನಲ್ಲಿ.

ಈ ಕಾಲೇಜಿನಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಭಾಸ್ಕರ್‌ ಗಾಯಕ್‌ವಾಡ್‌ ಎನ್ನುವ ದಲಿತರೊಬ್ಬರು ಆವರ ಹಿರಿಯ ಅಧಿಕಾರಿಯೊಬ್ಬರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನಿಂಧಿಸಿದ್ದರು. ಭಾಸ್ಕರ್‌ ಗಾಯಕ್‌ವಾಡ್ 2004ರ ಜನವರಿ 6ರಂದು ತನ್ನಿಬ್ಬರು ಹಿರಿಯ ಅಧಿಕಾರಿಗಳ ಮೇಲೆ, ಎಸ್‌ಸಿ/ಎಸ್‌ಟಿ ಕಾಯ್ದೆ 1989ರ ಅಡಿಯಲ್ಲಿ ಕೇಸು ದಾಖಲಿಸಿದ್ದರು. ಆಧಿಕಾರಿಗಳ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು.

ಸತತ 10 ವರ್ಷಗಳ ಕಾಲ ವಿಚಾರಣೆ ನಡೆದಿತ್ತು. 2016ರ ಮಾರ್ಚ್‌ 28ರಂದು ಮತ್ತೊಂದು ಮೊಕದ್ದಮೆಯನ್ನು ಭಾಸ್ಕರ್‌ ದಾಖಲಿಸಿದ್ದರು.

ಈ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡ ಸುಪ್ರಿಂ ಕೋರ್ಟ್‌ ಕಾಯ್ದೆಯಲ್ಲಿನ ಕೆಲವು ಅಂಶಗಳ ಬದಲಾವಣೆಗೆ ಮುಂದಾಗಿತ್ತು.

‘ಸಂಪೂರ್ಣ ಮಾಹಿತಿ’: ಉತ್ತರ ಭಾರತದಲ್ಲಿ ದಲಿತರು ಯಾಕೆ ಬೀದಿಗೆ ಇಳಿದರು? 

ಸುಪ್ರಿಂ ಕೋರ್ಟ್‌ ಆದೇಶದಲ್ಲಿ ಏನಿತ್ತು?

1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಹೇಳುವಂತೆ, ಈ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾದರೆ ತತ್‌ಕ್ಷಣವೇ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು. ಆರೋಪಿಗೆ ನಿರೀಕ್ಷಣಾ ಜಾಮೀನು ದೊರೆಯುತ್ತಿರಲಿಲ್ಲ.

ಕಾಯ್ದೆಯೊಳಗಿನ ಈ ಅಂಶವು ದುರ್ಬಳಕೆಯಾಗುತ್ತಿದೆ ಎಂದಿದ್ದ ಸುಪ್ರಿಂ ಕೋರ್ಟ್‌, ಕಾಯ್ದೆಯಲ್ಲಿನ ಕೆಲ ಅಂಶಗಳ ಬದಲವಾಣೆಗೆ ಮುಂದಾಗಿತ್ತು.

ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ನೀಡಬೇಕು ಎಂದು ಸುಪ್ರಿಂ ಕೋರ್ಟ್‌ ಮಾರ್ಚ್‌ 20ರಂದು ಆದೇಶಿಸಿತ್ತು.

ಸುಪ್ರಿಂ ಕೋರ್ಟ್‌ ನೀಡಿದ್ದ ತೀರ್ಪಿನನ್ವಯ ಆರೋಪಿಗಳನ್ನು ಏಕಾಏಕಿ ಬಂಧಿಸಿ, ಎಫ್‌ಐಆರ್‌ ದಾಖಲಿಸುವಂತಿರಲಿಲ್ಲ.

ಸರಕಾರಿ ಹುದ್ದೆಯಲ್ಲಿರುವವರನ್ನು ಸಂಬಂಧಿತ ಅಧಿಕಾರಿಗಳ ಅನುಮತಿಯಿಲ್ಲದೇ ಬಂಧಿಸುವಂತಿರಲಿಲ್ಲ. ಖಾಸಗಿ ವ್ಯಕ್ತಿಗಳನ್ನೂ ಕೂಡ ಸೂಕ್ತ ವಿಚಾರಣೆಯನ್ನು ನಡೆಸದೇ ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಕಾಯ್ದೆಗೆ ತಿದ್ದುಪಡಿ ಸೂಚಿಸಿತ್ತು.

ಈ ಕಾಯ್ದೆಯಡಿ ದಾಖಲಾದ ಕೇಸುಗಳ ಪ್ರಾರ್ಥಮಿಕ ತನಿಖೆಯನ್ನು ಉನ್ನತ ದರ್ಜೆಯ ಪೊಲೀಸ್‌ ಅಧಿಕಾರಿಗಳೇ ನಡೆಸಬೇಕು.

ಈ ಕಾಯ್ದೆಯನ್ನು ಬಳಸಿ ಬೆದರಿಕೆಯನ್ನು ಒಡ್ಡುತ್ತಿರುವವರಿಂದ ಸರಕಾರಿ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ಈ ಬದಲಾವಣೆಯನ್ನು ತರುತ್ತಿರುವುದಾಗಿ ಸುಪ್ರಿಂ ಕೋರ್ಟ್‌ ತಿಳಿಸಿತ್ತು.

ಮೊಕದ್ದಮೆ ದಾಖಲಾದ ಕೂಡಲೇ ಆರೋಪಿತರನ್ನು ಬಂಧಿಸುವುದನ್ನು ನಿರಾಕರಿಸಿದ್ದ ಸುಪ್ರಿಂ ಕೋರ್ಟ್‌, ಬಂಧನಕ್ಕೂ ಮೊದಲು ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದಿತ್ತು.

ದಲಿತರ ಅಸಮ್ಮತಿ ಏಕೆ?

ಸುಪ್ರಿಂ ಕೋರ್ಟ್‌ನ ತೀರ್ಪನ್ನು ಅಲ್ಲಗೆಳೆದಿರುವ ದಲಿತ ಸಂಘಟನೆಗಳು ನ್ಯಾಯಾಲಯ ಕಾಯ್ದೆಯನ್ನು ಹಲ್ಲಿಲ್ಲದ ಹವನ್ನಾಗಿಸಲು ಹೊರಟಿದೆ ಎಂದು ಆರೋಪಿಸಿದ್ದವು. ಸರ್ವೋಚ್ಛ ನ್ಯಾಯಾಲಯದ ಈ ಆದೇಶ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು.

ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿರುವ ಸಮುದಾಯಗಳನ್ನು ಮೇಲೆತ್ತುವ ಸಲುವಾಗಿ ಬಂದ ಕಾಯ್ದೆ, ದಲಿತರಿಗೆ ನೀಡಿದ್ದ ಹಕ್ಕುಗಳನ್ನು ಸುಪ್ರಿಂ ಕೋರ್ಟ್‌ ಮೊಟಕುಗೊಳಿಸುತ್ತಿದೆ ಎಂದು ದಲಿತ ಸಂಘಟನೆಗಳು ಕಿಡಿ ಕಾರಿದ್ದವು.

ಸುಪ್ರಿಂ ಕೋರ್ಟ್‌ ತೀರ್ಪನ್ನು ಮರು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದವು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಸಮಿತಿಗಳೂ ಕೂಡ, ಕಾಯ್ದೆಯು ಮೊದಲಿನಂತಾಗಬೇಕು ಎಂದಿದ್ದವು. ಯಾವುದೇ ಕಾಯ್ದೆ ದುರುಪಯೋಗ ಆಗುತ್ತಿದೆ ಎಂದ ಮಾತ್ರಕ್ಕೆ ಕಾಯ್ದೆಯನ್ನೇ ದುರ್ಬಲಗೊಳಿಸುವ ಕ್ರಮ ಸರಿಯಾದುದ್ದಲ್ಲ ಎಂಬುದನ್ನು ಪ್ರತಿಭಟನಾನಿರತರು ಹೇಳುತ್ತಿದ್ದಾರೆ.

ಕೇಂದ್ರ ಸರಕಾರದ ನಡೆ:

ಹಲವಾರು ಸುತ್ತಿನ ಮಾತುಕತೆಗಳ ನಂತರ ಕೇಂದ್ರ ಸರಕಾರ, 150 ಪುಟಗಳ ಮೇಲ್ಮನವಿಯನ್ನು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದೆ. ಈ ಮನವಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಈಗಲೂ ಸಾಮಾಜಿಕವಾಗಿ ದುರ್ಬಲವಾಗಿರುವ ಸಮುದಾಯಗಳು ಎಂದೇ ಕೇಂದ್ರ ಸರಕಾರ ಉಲ್ಲೇಖಿಸಿದೆ.

ಮೇಲ್ಮನವಿಯನ್ನು ಸಲ್ಲಿಸಿರುವ ಕೇಂದ್ರ ಸರಕಾರ, ಬೀಸುತ್ತಿದ್ದ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಈಗ ಮುಂದಿನ ಗುರಿ ಸುಪ್ರಿ ಕೋರ್ಟ್‌. ತನ್ನ ಆದೇಶ ದೇಶದಲ್ಲಿ ನೆತ್ತರನ್ನು ಹರಿಸದ ಮೇಲೂ ಸಹ ಸುಪ್ರಿಂ ಅದೇ ಧೋರಣೆಯನ್ನು ಮುಂದುವರೆಸುತ್ತದೆಯೋ ಅಥವಾ ಕಾಯ್ದೆಯನ್ನು ಯಥಾಸ್ಥಿತಿಯಲ್ಲಿರಲು ಅವಕಾಶ ಮಾಡಿಕೊಡುತ್ತದೋ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.