‘ಕೇಂಬ್ರಿಜ್‌ ಅನಾಲಿಟಿಕಾ ಹಗರಣ’: ಶ್ರೀಲಂಕಾ ಚುನಾವಣೆ; ಉಕ್ರೇನ್ ಹುಡುಗಿ ಮತ್ತು ಕುಟುಕು ಕಾರ್ಯಾಚರಣೆ!
COVER STORY

‘ಕೇಂಬ್ರಿಜ್‌ ಅನಾಲಿಟಿಕಾ ಹಗರಣ’: ಶ್ರೀಲಂಕಾ ಚುನಾವಣೆ; ಉಕ್ರೇನ್ ಹುಡುಗಿ ಮತ್ತು ಕುಟುಕು ಕಾರ್ಯಾಚರಣೆ!

ಚುನಾವಣೆಗಳು ಪ್ರಜಾಪ್ರಭುತ್ವದ ಪ್ರಮುಖ ಅಂಶ. ಅವುಗಳು ಅಡ್ಡದಾರಿ ಹಿಡಿದಿವೆ ಎಂಬುದು ಜನಪ್ರಿಯ ಸತ್ಯ. ಕೇಂಬ್ರಿಜ್ ಅನಲಿಟಿಕಾ ಹಗರಣ ಬಯಲಾಗುವ ಮೂಲಕ ಬದಲಾದ ಕಾಲದಲ್ಲಿ ಚುನಾವಣೆ ಅಕ್ರಮಗಳು ಹೇಗೆಲ್ಲಾ ನಡೆಯುತ್ತಿವೆ ಎಂಬುದು ಬಯಲಾಗಿದೆ. 

ಫೇಸ್‌ಬುಕ್‌ ಡೇಟಾ ಸೋರಿಕೆ, ಕೇಂಬ್ರಿಜ್‌ ಅನಾಲಿಟಿಕಾದ ವಾಮಮಾರ್ಗದ ಚುನಾವಣಾ ತಂತ್ರಗಳು, ಭಾರತದೊಂದಿಗೆ ಕೇಂಬ್ರಿಜ್‌ ಅನಾಲಿಟಕಾದ ನಂಟು ಹಾಗೂ ಈ ಬೆಳವಣಿಗೆಗಳಿಗೆ ರಾಜಕೀಯ ಮುಖಂಡರ ಪ್ರತಿಕ್ರಿಯೆಗಳು ಸದ್ಯ ಸುದ್ದಿಯ ಮುನ್ನೆಲೆಯಲ್ಲಿವೆ. ಆದರೆ, ನಿಜಕ್ಕೂ ಕೇಂಬ್ರಿಜ್‌ ಅನಾಲಿಟಿಕಾದ ಸತ್ಯಕಥೆ ಬಿಚ್ಚಿಕೊಂಡಿದ್ದು ಹೇಗೆ? ಫೇಸ್‌ಬುಕ್‌ ಡೇಟಾ ಮೊದಲಿಗೆ ಸೋರಿಕೆಯಾಗಿದ್ದು ಎಲ್ಲಿಂದ? ಕೇಂಬ್ರಿಜ್‌ ಅನಾಲಿಟಿಕಾ ಯಾವ ಯಾವ ದೇಶಗಳಲ್ಲಿ ಚುನಾವಣೆ ಮೇಲೆ ಹೇಗೆಲ್ಲಾ ಪ್ರಭಾವ ಬೀರಿದೆ? ಎಂಬುದನ್ನು ನೋಡಿದರೆ ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಗೆ ಎದುರಾಗಿರುವ ಕಂಟಕಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಕೇಂಬ್ರಿಜ್‌ ಅನಾಲಿಟಕಾ ಎಂಬ ಕಂಪೆನಿ ಹುಟ್ಟಿಕೊಂಡಿದ್ದು 2013, ಲಂಡನ್‌ನಲ್ಲಿ. ಈ ಕಂಪೆನಿಯ ಮಾತೃಸಂಸ್ಥೆ ಎಸ್‌ಸಿಎಲ್‌ ಸಮೂಹ 2005ರಲ್ಲಿ ಆರಂಭವಾಗಿದ್ದು ಇದರ ಕೇಂದ್ರ ಕಚೇರಿ ಅಮೆರಿಕದ ಟೆಕ್ಸಾಸ್‌ನ ಅರ್ಲಿಂಗ್ಟನ್‌ನಲ್ಲಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಎಸ್‌ಸಿಎಲ್‌ ಸಮೂಹದ ಅಂಗಸಂಸ್ಥೆಗಳಿವೆ.

ಮಾಹಿತಿ ಕಲೆ ಹಾಕುವುದು, ಮಾಹಿತಿಯ ಆಧಾರದ ಮೇಲೆ ಕೆಲಸ ಮಾಡುವುದು, ಮಾಹಿತಿ ವಿಶ್ಲೇಷಿಸುವುದು, ಮಾಹಿತಿ ತಲುಪಿಸುವುದು, ಸೇನೆ ಹಾಗೂ ಗುಪ್ತಚರ ಮಾಹಿತಿ ನಿರ್ವಹಣೆ ತಮ್ಮ ಸೇವೆ ಎಂದು ಎಸ್‌ಸಿಎಲ್‌ ಸಮೂಹ ಹೇಳಿಕೊಂಡಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳ ಸೇನಾ ಮಾಹಿತಿಯನ್ನು ನಿರ್ವಹಿಸುತ್ತಿರುವುದು ಇದೇ ಎಸ್‌ಸಿಎಲ್‌ ಸಮೂಹ. ಭಾರತದಲ್ಲಿ ಎಸ್‌ಸಿಎಲ್‌ ಸಮೂಹದ ಮುಖ್ಯಸ್ಥ ಒಬಿಐ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಮರೀಶ್‌ ತ್ಯಾಗಿ.

ಎಸ್‌ಸಿಎಲ್‌ ಇಂಡಿಯಾದ ವೆಬ್‌ಸೈಟ್‌ ಪುಟ
ಎಸ್‌ಸಿಎಲ್‌ ಇಂಡಿಯಾದ ವೆಬ್‌ಸೈಟ್‌ ಪುಟ

ಕೇಂಬ್ರಿಜ್‌ ಅನಾಲಿಟಿಕಾ ಮಾಡಿದ ತಪ್ಪೇನು?

ಕೇಂಬ್ರಿಜ್‌ ಅನಾಲಿಟಿಕಾ ಮಾಡಿರುವ ತಪ್ಪುಗಳು, ಚುನಾವಣಾ ಕಾರ್ಯತಂತ್ರಕ್ಕಾಗಿ ಹಿಡಿದಿರುವ ಮಾರ್ಗಗಳು ಪಟ್ಟಿ ರೂಪದಲ್ಲಿ ಬಿಚ್ಚಿಕೊಳ್ಳುತ್ತವೆ. ಜಗತ್ತಿನ ವಿವಿಧ ದೇಶಗಳ ಚುನಾವಣೆ ಸಂದರ್ಭದಲ್ಲಿ ತನ್ನ ಸೇವೆ ಪಡೆಯುವ ಪಕ್ಷ, ಅಭ್ಯರ್ಥಿಯ ಪರವಾಗಿ ಜನಾಭಿಪ್ರಾಯ ರೂಪಿಸುವುದು, ಎದುರಾಳಿ ಅಭ್ಯರ್ಥಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬುವುದು, ಎದುರಾಳಿ ಅಭ್ಯರ್ಥಿಯ ಚಾರಿರ್ತ್ಯವನ್ನು ಹಾಳು ಮಾಡುವುದು, ಜನರ ವೈಯಕ್ತಿಕ ಮಾಹಿತಿಯ ಆಧಾರದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸುವುದನ್ನು ಕೇಂಬ್ರಿಜ್‌ ಅನಾಲಿಟಿಕಾ ಮಾಡಿಕೊಂಡು ಬಂದಿದೆ.

ತನ್ನ ಕಾರ್ಯತಂತ್ರಗಳನ್ನು ಜಾರಿಗೊಳಿಸಲು ಕಂಪೆನಿ ವಾಮಮಾರ್ಗ ಬಳಸಿದ್ದನ್ನು ಕೇಂಬ್ರಿಜ್‌ ಅನಾಲಿಟಿಕಾದ ಹಿರಿಯ ಅಧಿಕಾರಿಗಳೇ ಬಾಯ್ಬಿಟ್ಟಿದ್ದಾರೆ. ಒಂದೆರಡು ಬಾರಿಯಲ್ಲ, ಬದಲಿಗೆ ಹಲವು ಬಾರಿ ತಾವು ಅಡ್ಡದಾರಿಯ ಮೂಲಕ ಚುನಾವಣೆ ಗೆಲ್ಲಿಸಿಕೊಟ್ಟಿದ್ದೇವೆ, ಅದರಲ್ಲಿ ತಾವು ನಿಪುಣರು ಎಂದು ಲಜ್ಜೆ ಬಿಟ್ಟು ಹೇಳಿಕೊಂಡಿದ್ದಾರೆ ಅಧಿಕಾರಿಗಳು.

ಎಸ್‌ಸಿಎಲ್‌ ಸಮೂಹದ ಅಂಗಸಂಸ್ಥೆಯಾಗಿರುವ ಕೇಂಬ್ರಿಜ್ ಅನಾಲಿಟಿಕಾ ವ್ಯವಹಾರಿಕ ಮತ್ತು ರಾಜಕೀಯ ಎಂಬ ಎರಡು ಶಾಖೆಗಳಡಿ ಕೆಲಸ ಮಾಡುತ್ತಿದೆ. ಅಕ್ರಮವಾಗಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿಟ್ಟುಕೊಂಡು ಆ ಮಾಹಿತಿಯ ಆಧಾರದ ಮೇಲೆ ಚುನಾವಣೆಗಳಲ್ಲಿ ಜನಾಭಿಪ್ರಾಯ ರೂಪಿಸುವುದು ಕೇಂಬ್ರಿಜ್‌ ರಾಜಕೀಯ ವಿಭಾಗ ಮಾಡಿಕೊಂಡು ಬಂದಿರುವ ಕೆಲಸ.

ಹಗರಣ ಬಯಲಾಗಿದ್ದು ಹೇಗೆ?

ಕೇಂಬ್ರಿಜ್‌ ಅನಾಲಿಟಿಕಾದ ಹಗರಣ ಬಯಲಾಗಿದ್ದು ಚಾನಲ್ 4 ಎಂಬ ಬ್ರಿಟನ್‌ ಸುದ್ದಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಿಂದ. ಶ್ರೀಲಂಕಾ ಚುನಾವಣೆಗೆ ಕೇಂಬ್ರಿಜ್‌ ಅನಾಲಿಟಿಕಾ ನೆರವು ಬೇಕೆಂದು ಮಾರುವೇಷದಲ್ಲಿ ನಡೆಸಿದ ಕುಟುಕು ಕಾರ್ಯಾಚರಣೆ ಇದಾಗಿತ್ತು. ಲಂಡನ್‌ನ ಐಷಾರಾಮಿ ಹೋಟೆಲ್‌ ಒಂದರಲ್ಲಿ ಮೊದಲು ಕಾರ್ಯಾಚರಣೆ ತಂಡವನ್ನು ಭೇಟಿ ಮಾಡಿದ್ದ ಕೇಂಬ್ರಿಜ್‌ ಅನಾಲಿಟಿಕಾದ ಗ್ಲೋಬಲ್‌ ಪೊಲಿಟಿಕ್ಸ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್‌ ಟರ್ನ್‌ಬುಲ್‌ ಮತ್ತು ಕಂಪೆನಿಯ ಚೀಫ್‌ ಡೇಟಾ ಆಫೀಸರ್ ಡಾ. ಅಲೆಕ್ಸ್‌ ಟೇಲರ್ ಮೊದಲ ಮಾತುಕತೆಯಲ್ಲೇ ತಮ್ಮ ಚುನಾವಣಾ ತಂತ್ರವನ್ನು ಬಿಚ್ಚಿಟ್ಟಿದ್ದರು.

“ನಮ್ಮ ಕಂಪೆನಿಯು ಅಮೆರಿಕಾ, ಆಫ್ರಿಕಾ, ಮೆಕ್ಸಿಕೊ, ಕೀನ್ಯಾ, ಬ್ರೆಝಿಲ್, ಚೀನಾ, ಆಸ್ಟ್ರೇಲಿಯಾದಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದೆ. ಡೇಟಾ ಆಧಾರದಲ್ಲಿ ನಾವು ಚುನಾವಣೆ ಗೆಲ್ಲಿಸಿಕೊಡುತ್ತೇವೆ” ಎಂದು ಮೊದಲ ಭೇಟಿಯಲ್ಲಿ ಮಾರ್ಕ್‌ ಮತ್ತು ಅಲೆಕ್ಸ್‌ ಮಾರುವೇಷದ ತಂಡದ ಸದಸ್ಯರಿಗೆ ಭರವಸೆ ನೀಡಿದ್ದರು.

ನಂತರದ ಭೇಟಿಯಲ್ಲಿ ತಮ್ಮ ಚುನಾವಣಾ ಕಾರ್ಯತಂತ್ರಗಳ ಒಳಮರ್ಮಗಳನ್ನು ಮಾರ್ಕ್‌ ಮತ್ತು ಅಲೆಕ್ಸ್‌ ಅನಾವರಣಗೊಳಿಸಿದ್ದರು. ಕೀನ್ಯಾದ ಚುನಾವಣೆಯಲ್ಲಿ ಹಿಂದಿನ ಪ್ರಧಾನಮಂತ್ರಿ ರೈಲಾ ಒಡಿಂಗಾ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಳಸಿದ್ದ ಕಾರ್ಯತಂತ್ರಗಳನ್ನು ಈ ಇಬ್ಬರೂ ಕುಟುಕು ಕಾರ್ಯಾಚರಣೆ ವೇಳೆ ಹೇಳಿಕೊಂಡಿದ್ದರು.

“ಬ್ರಿಟಿಷ್‌ ಗೃಹ ಇಲಾಖೆಯಡಿ ಕೆಲಸ ಮಾಡುವ ಇಂಟೆಲಿಜೆನ್ಸ್‌ ಏಜೆನ್ಸಿ MI5 ಮತ್ತು ಗುಪ್ತಚರ ಸಂಸ್ಥೆ ಬ್ರಿಟಿಷ್‌ ಸೀಕ್ರೆಟ್‌ ಏಜೆನ್ಸಿ MI6 ಜತೆಗೆ ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬುದು ನಮಗೆ ಗೊತ್ತಿದೆ. ಸೀಕ್ರೆಟ್‌ ಏಜೆನ್ಸಿಗಳ ಜತೆಗೆ ಕೆಲಸ ಮಾಡುವ ಖಾಸಗಿ ಸಂಸ್ಥೆಗಳ ಜತೆಗೆ ನಮ್ಮ ನಂಟು ಚೆನ್ನಾಗಿದೆ” ಎಂದು ಮಾರ್ಕ್‌ ಟರ್ನ್‌ಬುಲ್‌ ಹೇಳಿಕೊಂಡಿದ್ದರು.

ಉಕ್ರೇನ್‌ ಹುಡುಗಿಯರ ಬಳಕೆ?

ಕುಟುಕು ಕಾರ್ಯಾಚರಣೆ ತಂಡದ ಕೊನೆಯ ಹಂತದ ಮಾತುಕತೆಗೆ ಬಂದಿದ್ದು ಕೇಂಬ್ರಿಜ್‌ ಅನಾಲಿಟಿಕಾದ ಸಿಇಒ ಅಲೆಕ್ಸಾಂಡರ್‌ ನಿಕ್ಸ್‌. ಆವರೆಗೂ ಚುನಾವಣೆಯಲ್ಲಿ ಡೇಟಾ ತಂತ್ರಗಳ ಬಗ್ಗೆಯಷ್ಟೇ ಮಾರ್ಕ್‌ ಟರ್ನ್‌ಬುಲ್‌ ಮಾತಾಡಿದ್ದು ರಹಸ್ಯ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಆದರೆ, ನಿಕ್ಸ್‌ ಮಾತುಕತೆ ವೇಳೆ ಹನಿಟ್ರಾಪ್‌ಗೆ ಉಕ್ರೇನ್‌ ಹುಡುಗಿಯರ ಬಳಕೆ, ಟ್ರಂಪ್‌ ಪರವಾಗಿ ಹಿಲರಿ ವಿರುದ್ಧವಾಗಿ ಮಾಡಿದ ರಹಸ್ಯ ತಂತ್ರಗಳು, ಎದುರಾಳಿ ಅಭ್ಯರ್ಥಿಗಳ ಮುಖಕ್ಕೆ ಮಸಿಬಳಿಯುವುದು ಹೇಗೆ ಎಂಬೆಲ್ಲದ್ದರ ಬಗ್ಗೆ ಬಾಯ್ಬಿಟ್ಟಿದ್ದು ಕೂಡಾ ನಿಕ್ಸ್‌.

“ಎದುರಾಳಿ ಅಭ್ಯರ್ಥಿಗಳ ಬಳಿ ಸುಂದರ ಹುಡುಗಿಯರನ್ನು ಕಳಿಸಿ, ಅದರ ವಿಡಿಯೊ ರೆಕಾರ್ಡ್‌ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣ, ಇಂಟರ್‌ನೆಟ್‌ನಲ್ಲಿ ಹರಿಬಿಡುವುದು. ಚುನಾವಣಾ ಖರ್ಚಿಗಾಗಿ ಎದುರಾಳಿ ಅಭ್ಯರ್ಥಿಗಳು ಹಣವಂತರ ಜತೆಗೆ ನಂಟು ಬೆಳೆಸುವಂತೆ ಮಾಡುವುದು, ಅಭ್ಯರ್ಥಿ ಹಣ ತೆಗೆದುಕೊಂಡದ್ದನ್ನು ವಿಡಿಯೊ ರೆಕಾರ್ಟ್‌ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಡುವುದು. ಈ ಮೂಲಕ ಎದುರಾಳಿ ಅಭ್ಯರ್ಥಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜನರಲ್ಲಿ ಅವರ ಬಗ್ಗೆ ಕೆಟ್ಟ ಭಾವನೆ ಬಿತ್ತುವುದು ನಮ್ಮ ಕಾರ್ಯತಂತ್ರ” ಎಂದು ನಿಕ್ಸ್‌ ಹೇಳಿಕೊಂಡಿದ್ದಾರೆ.

“ಹನಿಟ್ರಾಪ್‌ಗಾಗಿ ನಾವು ಸ್ಥಳೀಯ ಹುಡುಗಿಯರನ್ನು ಬಳಸಿಕೊಳ್ಳುವುದಿಲ್ಲ. ಇದಕ್ಕಾಗಿ ಉಕ್ರೇನಿಯನ್‌ ಹುಡುಗಿಯರನ್ನು ಬಳಸಿಕೊಳ್ಳುತ್ತೇವೆ. ಉಕ್ರೇನ್‌ ಹುಡುಗಿಯರು ಬಹಳ ಸುಂದರವಾಗಿರುತ್ತಾರೆ” ಎಂದೂ ಮಾತುಕತೆ ವೇಳೆ ನಿಕ್ಸ್‌ ಬಾಯ್ಬಿಟ್ಟಿದ್ದಾರೆ.

Also read: 8 ವರ್ಷದ ಹಿಂದೆಯೇ ಭಾರತದಲ್ಲಿ ಕೆಲಸ ಮಾಡಿದೆ ‘ಕೇಂಬ್ರಿಜ್ ಅನಾಲಿಟಿಕಾ’ ಚುನಾವಣಾ ತಂತ್ರ!

ಬೇನಾಮಿ ವ್ಯವಹಾರ

ಕೇಂಬ್ರಿಜ್‌ ಅನಾಲಿಟಿಕಾದ ಹೆಸರಿನಲ್ಲಿ ವ್ಯವಹಾರ ಮಾಡದೆ ಬೇರೆ ಬೇರೆ ಕಂಪೆನಿಗಳ ಹೆಸರಿನಲ್ಲಿ ಹಣ ಪಡೆಯುವುದು ಈ ಕುಟುಕು ಕಾರ್ಯಾಚರಣೆ ವೇಳೆ ಬಯಲಾಗಿದೆ. “ವ್ಯವಹಾರ ನಡೆಯುವವರೆಗೆ ಬೇನಾಮಿ ಹೆಸರಿನಲ್ಲಿ ಒಪ್ಪಂದ ಮಾಡಿಕೊಳ್ಳುವುದು, ಇದಕ್ಕಾಗಿ ತಾತ್ಕಾಲಿಕ ಇಮೇಲ್‌ ವಿಳಾಸ ಬಳಸುವುದು, ವ್ಯವಹಾರ ಮುಗಿದ ಬಳಿಕ ಬಳಸಿದ ಇಮೇಲ್‌ ಐಡಿಗಳನ್ನು ಅಳಿಸಿ ಹಾಕುವುದು ನಮ್ಮ ವ್ಯವಹಾರದ ರೂಢಿ. ನಮ್ಮಲ್ಲಿ ಯಾವುದೇ ಪತ್ರ ದಾಖಲೆಗಳಿರುವುದಿಲ್ಲ. ನಾವು ನಮ್ಮ ಸೇವೆ ಪಡೆಯುವವರ ಮೂಲವನ್ನೂ ಬಿಟ್ಟುಕೊಡುವುದಿಲ್ಲ” ಎಂದು ಮಾರ್ಕ್‌ ಟರ್ನ್‌ಬುಲ್‌ ಹೇಳಿದ್ದಾನೆ.

‘ಕ್ರುಕ್ಕಡ್‌ ಹಿಲರಿ’ ಹರಿಬಿಟ್ಟ ಸಿಎ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಪರವಾಗಿ ಕೆಲಸ ಮಾಡುವ ಒಪ್ಪಂದ ಮಾಡಿಕೊಂಡಿದ್ದ ಕೇಂಬ್ರಿಜ್‌ ಅನಾಲಿಟಿಕಾ ಹಿಲರಿ ಕ್ಲಿಂಟನ್‌ ವಿರುದ್ಧ ಜನಾಭಿಪ್ರಾಯ ರೂಪಿಸಲು ವ್ಯಾಪಕವಾಗಿ ಸುಳ್ಳು ಹಬ್ಬಿತ್ತು. ಹಿಲರಿ ಕ್ಲಿಂಟನ್‌ ಅಮೆರಿಕದ ಸುರಕ್ಷತಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ, ಹಿಲರಿ ವಿಶ್ವಾಸ ಘಾತಕಿ ಎಂದು ಕೇಂಬ್ರಿಜ್‌ ಅನಾಲಿಟಿಕಾ ಅಪಪ್ರಚಾರ ಮಾಡಿತ್ತು.

ಹಿಲರಿ ಕ್ಲಿಂಟನ್‌ ವಿರುದ್ಧ ‘ಕ್ರುಕ್ಕಡ್‌ ಹಿಲರಿ’ (ವಿಶ್ವಾಸಘಾತಕಿ ಹಿಲರಿ) ಘೋಷಣೆಯನ್ನು ಹಬ್ಬಿಸಿದ್ದೂ ತಾವೇ ಎಂದು ಕೇಂಬ್ರಿಜ್‌ ಅನಾಲಿಟಿಕಾ ಅಧಿಕಾರಿಗಳು ಹೇಳಿದ್ದಾರೆ. ಹಿಲರಿ ಕ್ಲಿಂಟನ್‌ ಇಮೇಲ್‌ನಿಂದ ಅಮೆರಿಕದ ಮಾಹಿತಿ ಸೋರಿಕೆಯಾಗಿದೆ ಎಂಬ ಮೆಸೇಜ್, ವಿಡಿಯೊಗಳನ್ನು ಫೇಸ್‌ಬುಕ್‌, ಗೂಗಲ್‌ನಲ್ಲಿ ಕೇಂಬ್ರಿಜ್‌ ಅನಾಲಿಟಿಕಾ ಹರಿಬಿಟ್ಟಿತ್ತು. ಟ್ರಂಪ್‌ ಪರವಾಗಿ ಕೆಲಸ ಮಾಡುವ ಜತೆಗೆ ಹಿಲರಿ ಕ್ಲಿಂಟನ್‌ ಹೆಸರು ಕೆಡಿಸಿದ್ದೂ ತಾವೇ ಎಂಬುದನ್ನು ಕೇಂಬ್ರಿಜ್‌ ಅನಾಲಿಟಿಕಾ ಅಧಿಕಾರಿಗಳು ರಹಸ್ಯ ಕಾರ್ಯಾಚರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಸ್ಥಳೀಯ ಸಂಸ್ಥೆಗಳು ಹಾಗೂ ಕಾರ್ಯಕರ್ತರ ಗುಂಪುಗಳ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬುವುದು ತಮ್ಮ ಕಾರ್ಯತಂತ್ರದ ಭಾಗ ಎಂದಿರುವ ಕೇಂಬ್ರಿಕ್‌ ಅನಾಲಿಟಿಕಾದ ಅಧಿಕಾರಿಗಳು, ಹಿಲರಿ ಕ್ಲಿಂಟನ್‌ ವಿರುದ್ಧ ಸುಳ್ಳು ಸುದ್ದಿ ಹಬ್ಬಲು ರಷ್ಯನ್‌ ಆಕ್ಟಿವಿಸ್ಟ್‌ ಗ್ರೂಪ್‌ಗಳನ್ನು ಬಳಸಿಕೊಳ್ಳಲಾಗಿತ್ತು. ರಷ್ಯನ್‌ ಗ್ರೂಪ್‌ಗಳ ಪ್ರಭಾವ ಅಮೆರಿಕದ ಪ್ರಾಂತೀಯ ಮತದಾರರ ಮೇಲಾಗಿದೆ ಎಂದು ಹೇಳಿಕೊಂಡಿದ್ದಾರೆ.

‘ಕೇಂಬ್ರಿಜ್‌ ಅನಾಲಿಟಿಕಾ ಹಗರಣ’: ಶ್ರೀಲಂಕಾ ಚುನಾವಣೆ; ಉಕ್ರೇನ್ ಹುಡುಗಿ ಮತ್ತು ಕುಟುಕು ಕಾರ್ಯಾಚರಣೆ!

ಫೇಸ್‌ಬುಕ್‌ ಮಾಹಿತಿ ಸೋರಿಕೆಯಾಗಿದ್ದು ಹೇಗೆ?

ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕೇಂಬ್ರಿಜ್‌ ಅನಾಲಿಟಿಕಾ ಕದ್ದಿರುವುದು ಇತ್ತೀಚೆಗೇನಲ್ಲ. 2014ರಲ್ಲೇ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಈ ಮಾಹಿತಿ ಸಂಗ್ರಹಿಸಲು ಕೇಂಬ್ರಿಜ್ ಅನಾಲಿಟಿಕಾ ಬಳಸಿಕೊಂಡಿದ್ದು ಕೇಂಬ್ರಿಜ್‌ ವಿಶ್ವವಿದ್ಯಾಲಯದ ಡಾ. ಅಲೆಕ್ಸಾಂಡರ್‌ ಕೋಗೆನ್‌ ಎಂಬ ಮನಃಶಾಸ್ತ್ರ ಪ್ರಾಧ್ಯಾಪಕರನ್ನು.

ಕೇಂಬ್ರಿಜ್‌ ಅನಾಲಿಟಿಕಾ ಹುಟ್ಟಿದ್ದು ಹೇಗೆ, ಫೇಸ್‌ಬುಕ್‌ ಡೇಟಾ ಸೋರಿಕೆಯಾಗಿದ್ದು ಹೇಗೆ ಎಂಬುದನ್ನು ಕೇಂಬ್ರಿಕ್‌ ಅನಾಲಿಟಿಕಾದ ಮಾಜಿ ಉದ್ಯೋಗಿ ಕ್ರಿಸ್ಟೋಫರ್‌ ವೈಲಿ ಹೊರಹಾಕಿದ್ದಾರೆ. ಅಮೆರಿಕದ ವೈಟ್‌ ಹೌಸ್‌ನ ಚೀಫ್‌ ಸ್ಟ್ರಾಟಜಿಸ್ಟ್‌ ಹಾಗೂ ಬ್ರೀಟ್‌ಬಾರ್ಟ್‌ ನ್ಯೂಸ್‌ನ ಸಂಪಾದಕರಾಗಿದ್ದ ಸ್ಟೀಫನ್‌ ಬ್ಯಾನನ್‌ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಕೇಂಬ್ರಿಜ್‌ ಅನಾಲಿಟಿಕಾ ಹಗರಣದಲ್ಲಿ ಬ್ಯಾನನ್‌ ಪಾತ್ರವೂ ಇದೆ.

ಕೇಂಬ್ರಿಕ್‌ ಅನಾಲಿಟಿಕಾದ ಮಾಜಿ ಉದ್ಯೋಗಿ ಕ್ರಿಸ್ಟೋಫರ್‌ ವೈಲಿ
ಕೇಂಬ್ರಿಕ್‌ ಅನಾಲಿಟಿಕಾದ ಮಾಜಿ ಉದ್ಯೋಗಿ ಕ್ರಿಸ್ಟೋಫರ್‌ ವೈಲಿ

ಬ್ಯಾನನ್‌ ಮತ್ತು ಎಸ್‌ಸಿಎಲ್‌ ಸಮೂಹದಲ್ಲಿದ್ದ ನಿಕ್ಸ್‌ ಮೊದಲು ಭೇಟಿಯಾಗಿದ್ದು 2013ರಲ್ಲಿ. ಆಹೊತ್ತಿಗೆ ಎಸ್‌ಸಿಎಲ್‌ ಸಮೂಹ ಸೇರಿದ್ದ ಯುವ ಸಂಶೋಧಕ ವೈಲಿ ಬಗ್ಗೆ ನಿಕ್ಸ್‌ಗೆ ಹೆಚ್ಚಿನ ವಿಶ್ವಾಸವಿತ್ತು. 2013ರ ವರ್ಷಾಂತ್ಯದಲ್ಲಿ ನಿಕ್ಸ್‌, ವೈಲಿ, ಬ್ಯಾನನ್‌ ಮತ್ತು ರಿನಾಯ್ಸನ್ಸ್‌ ಟೆಕ್ನಾಲಜೀಸ್‌ನ ಸಿಇಒ ರಾಬರ್ಟ್‌ ಮರ್ಸರ್‌ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿದ್ದರು. ಈ ಭೇಟಿ ವೇಳೆ ಕೇಂಬ್ರಿಜ್‌ ಅನಾಲಿಟಿಕಾ ಕಂಪೆನಿ ಹುಟ್ಟುಹಾಕಲು 10 ದಶಲಕ್ಷ ಡಾಲರ್‌ ಹೂಡಿಕೆ ಪ್ರಸ್ತಾವವನ್ನು ರಾಬರ್ಟ್‌ ಮರ್ಸರ್‌ ಮುಂದಿಟ್ಟಿದ್ದರು. ತಮ್ಮ ಮಗಳು ರೆಬೆಕಾ ಮರ್ಸರ್‌ಗಾಗಿ ಈ ಕಂಪೆನಿ ಹುಟ್ಟು ಹಾಕುವ ಉದ್ದೇಶ ರಾಬರ್ಟ್‌ಗಿತ್ತು.

2013ರ ಡಿಸೆಂಬರ್‌ನಲ್ಲಿ ಆರಂಭವಾದ ಕೇಂಬ್ರಿಜ್‌ ಅನಾಲಿಟಿಕಾಗೆ ಸಿಇಒ ಆಗಿ ನೇಮಕವಾಗಿದ್ದು ಎಸ್‌ಸಿಎಲ್‌ ಸಮೂಹದಲ್ಲಿದ್ದ ನಿಕ್ಸ್‌. ಹೊಸ ತಲೆಮಾರಿನ ಒಲವುಗಳ ಬಗ್ಗೆ ಆಸಕ್ತಿ ಇದ್ದ ಹಾಗೂ ಫ್ಯಾಷನ್‌ ಡಿಸೈನ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದ ವೈಲಿಗೆ ಕೇಂಬ್ರಿಕ್‌ ಅನಾಲಿಟಿಕಾದಲ್ಲಿ ಡೇಟಾ ಅನಾಲಿಟಿಕ್ಸ್‌ ಹಾಗೂ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು.

ಮಗಳು ರೆಬೆಕಾ ಮರ್ಸರ್‌ ಜತೆ ರಾಬರ್ಟ್‌ ಮರ್ಸರ್‌
ಮಗಳು ರೆಬೆಕಾ ಮರ್ಸರ್‌ ಜತೆ ರಾಬರ್ಟ್‌ ಮರ್ಸರ್‌

ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿದ್ದ ಡಾ. ಅಲೆಕ್ಸಾಂಡರ್‌ ಕೋಗೆನ್‌ ಮೂಲಕ 2014ರಲ್ಲಿ “thisisyourdigitallife” (ದಿಸ್‌ ಇಸ್‌ ಯುವರ್ ಡಿಜಿಟಲ್ ಲೈಫ್) ಎಂಬ ಆಪ್‌ ಅಭಿವೃದ್ಧಿ ಪಡಿಸಿ ಅದರ ಮೂಲಕ ಫೇಸ್‌ಬುಕ್‌ ಡೇಟಾ ಕದ್ದ ಗಂಭೀರ ಆರೋಪ ಅಲೆಕ್ಸಾಂಡರ್‌ ನಿಕ್ಸ್‌ ಮೇಲಿದೆ. ರಸಪ್ರಶ್ನೆ (ಕ್ವಿಝ್‌) ಆಪ್‌ ಎಂಬ ಹೆಸರಿನಲ್ಲಿ ಇಂಟರ್‌ನೆಟ್‌ಗೆ ಲಗ್ಗೆ ಇಟ್ಟ ಈ ಆಪ್ ಮೂಲಕ ಫೇಸ್‌ಬುಕ್‌ ಬಳಕೆದಾರರು ಹಾಗೂ ಅವರ ಸ್ನೇಹಿತರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಹೆಕ್ಕಲಾಗಿದೆ. ಸಂಶೋಧನೆಯ ಉದ್ದೇಶದಿಂದ ಮಾಹಿತಿ ಕಲೆಹಾಕುತ್ತಿರುವುದಾಗಿ ಹೇಳಿ ಆ ಮಾಹಿತಿಯನ್ನು ಕೇಂಬ್ರಿಜ್‌ ಅನಾಲಿಟಿಕಾಗೆ ಹಸ್ತಾಂತರಿಸಿದ ಆರೋಪ ಕೋಗನ್‌ ಮೇಲಿದೆ.

ಫೇಸ್‌ಬುಕ್‌ ಲಾಗ್‌ಇನ್‌ ಮೂಲಕ ಕೆಲಸ ಮಾಡುತ್ತಿದ್ದ ಈ ಆಪ್‌ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಖಾತೆಗಳನ್ನು ನಿರ್ವಹಿಸಲು ಒಪ್ಪಿಗೆ ಕೇಳುತ್ತಿತ್ತು. ಫೇಸ್‌ಬುಕ್‌ ಬಳಕೆದಾರರ ಒಪ್ಪಿಗೆಯ ಮೇರೆಗೆ ಅವರ ಇನ್ನಿತರ ಫೇಸ್‌ಬುಕ್‌ ಗೆಳೆಯರ ವೈಯಕ್ತಿಕ ಮಾಹಿತಿಯನ್ನೆಲ್ಲಾ ಕದಿಯಲಾಗಿದೆ. ಹೀಗೆ ಸುಮಾರು 5 ಕೋಟಿಗೂ ಹೆಚ್ಚು ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಲಾಗಿದೆ.

ಇದೇ ಮಾಹಿತಿಯ ಆಧಾರದ ಮೇಲೆ ಬ್ರೆಕ್ಸಿಟ್‌ ಜನಮತ, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮೇಲೆ ಪ್ರಭಾವ ಬೀರಿರುವುದಾಗಿ ಕೇಂಬ್ರಿಜ್‌ ಅನಾಲಿಟಿಕಾ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಟ್ರಂಪ್‌ ಪರವಾಗಿ ಕೆಲಸ ಮಾಡಿದ ಆರೋಪ ಬ್ಯಾನನ್‌ ಮೇಲಿದೆ. ಟ್ರಂಪ್‌ ಆಪ್ತವಲಯದಲ್ಲಿ ಬ್ಯಾನನ್‌ ಕೂಡಾ ಒಬ್ಬರು.

ಸ್ಟೀವನ್‌ ಬ್ಯಾನನ್‌
ಸ್ಟೀವನ್‌ ಬ್ಯಾನನ್‌

ಆದರೆ, ಫೇಸ್‌ಬುಕ್‌ ಮಾಹಿತಿ ಕದ್ದು ಅದನ್ನು ಕೇಂಬ್ರಿಜ್‌ ಅನಾಲಿಟಿಕಾಗೆ ಮಾರಿಕೊಂಡ ಆರೋಪವನ್ನು ಡಾ. ಕೋಗನ್‌ ತಳ್ಳಿ ಹಾಕಿದ್ದಾರೆ. “ಈ ಹಗರಣದಲ್ಲಿ ನನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ” ಎಂದು ಡಾ. ಕೋಗನ್‌ ಹೇಳಿದ್ದಾರೆ. ಕ್ವಿಝ್‌ ಆಪ್‌ ರೂಪಿಸಲು ಗ್ಲೋಬಲ್‌ ಸೈನ್ಸ್‌ ರಿಸರ್ಚ್‌ (ಜಿಎಸ್‌ಆರ್‌) ಕೇಂಬ್ರಿಜ್‌ ಅನಾಲಿಟಿಕಾ ಜತೆಗೆ ಸುಮಾರು 8 ಲಕ್ಷ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಡೇಟಾ ಸಂಗ್ರಹ ಕಾರ್ಯಕ್ಕಾಗಿಯೇ ಬಹಳಷ್ಟು ಹಣ ಖರ್ಚಾಗಿದೆ. ಕ್ವಿಝ್‌ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಕೋಗನ್‌ ಹೇಳಿಕೊಂಡಿದ್ದಾರೆ.

ಕ್ಷಮೆ ಕೋರಿದ ಫೇಸ್‌ಬುಕ್‌

ಹಗರಣ ಬೆಳಕಿಗೆ ಬಂದ ಸುಮಾರು ಐದು ದಿನದ ಬಳಿಕ ಮಾಧ್ಯಮಗಳ ಮುಂದೆ ಬಂದ ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್ ಮಾಹಿತಿ ಸೋರಿಕೆಯಾಗಿರುವುದಕ್ಕೆ ಕ್ಷಮೆ ಕೋರಿದ್ದಾರೆ. ಈ ಬೆಳವಣಿಗೆಯಿಂದ ಜನ ಫೇಸ್‌ಬುಕ್‌ ಮೇಲಿಟ್ಟಿದ್ದ ನಂಬಿಕೆಗೆ ಧಕ್ಕೆಯಾಗಿದೆ ಎಂದಿದ್ದಾರೆ.

ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್
ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್

“ಈಗ ಆಗಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ. ಇಂಥ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಡಾ. ಕೋಗನ್‌ ಆಪ್‌ನಿಂದ ಡೇಟಾ ಸೋರಿಕೆಯಾಗಿದೆ. ವ್ಯಕ್ತಿತ್ವ ರಸಪ್ರಶ್ನೆಯ ಆಪ್‌ ರೂಪಿಸಿದ್ದ ಡಾ. ಕೋಗನ್‌ ಕೇಂಬ್ರಿಜ್‌ ಅನಾಲಿಟಿಕಾಗೆ ಡೇಟಾ ವರ್ಗಾಯಿಸಿದ್ದಾರೆ. ಡೇಟಾ ಡಿಲೀಟ್‌ ಮಾಡುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದ ಕೇಂಬ್ರಿಜ್‌ ಅನಾಲಿಟಿಕಾ ಡೇಟಾ ಡಿಲೀಟ್‌ ಮಾಡಿಲ್ಲ. ಹೀಗಾಗಿ ನಮ್ಮೆಲ್ಲಾ ಸೇವೆಗಳಿಂದ ಕೇಂಬ್ರಿಜ್‌ ಅನಾಲಿಟಿಕಾ ಕಂಪೆನಿಯನ್ನು ಅಮಾನತುಗೊಳಿಸಲಾಗಿದೆ. ಭಾರತದ ಮುಂಬರುವ ಚುನಾವಣೆಯ ಮೇಲೆ ಫೇಸ್‌ಬುಕ್‌ ಯಾವುದೇ ರೀತಿಯ ರಾಜಕೀಯ ಪ್ರಭಾವ ಬೀರುವುದಿಲ್ಲ” ಎಂದು ಝುಕರ್‌ಬರ್ಗ್‌ ಹೇಳಿದ್ದಾರೆ.

ಈ ನಡುವೆ ವಾಟ್ಸಾಪ್‌ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ‘ಡಿಲೀಟ್‌ ಫೇಸ್‌ಬುಕ್‌’ ಎಂದು ಟ್ವೀಟ್‌ ಮಾಡಿದ್ದು ಅಭಿಯಾನದ ಸ್ವರೂಪ ಪಡೆದುಕೊಳ್ಳುತ್ತಿದೆ. ವೈಯಕ್ತಿಕ ಮಾಹಿತಿಗೆ ಅಪಾಯ ತಂದೊಡ್ಡಿಕೊಳ್ಳುವ ಮೊದಲು ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಮಾಡುವುದೇ ಒಳ್ಳೆಯದು ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲೂ ಕೇಂಬ್ರಿಜ್‌ ಅನಾಲಿಟಿಕಾ ತಂತ್ರ 8 ವರ್ಷಗಳಷ್ಟು ಹಿಂದೆಯೇ ಪ್ರಯೋಗವಾಗಿದೆ. ಸದ್ಯ ಬ್ರಿಟನ್‌ ಮತ್ತು ಅಮೆರಿಕದಲ್ಲಿ ಫೇಸ್‌ಬುಕ್‌ ಮತ್ತು ಕೇಂಬ್ರಿಜ್‌ ಅನಾಲಿಟಿಕಾ ಕಂಪೆನಿಗಳ ವಿರುದ್ಧ ತನಿಖೆ ಆರಂಭವಾಗಿದೆ. ಈಗಾಗಲೇ ಕೇಂಬ್ರಿಜ್‌ ಅನಾಲಿಟಿಕಾದ ಬಣ್ಣ ಬಯಲಾಗಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಗಮನ ಕೊಡದ ಕಾರಣಕ್ಕೆ ಫೇಸ್‌ಬುಕ್‌ ಮೇಲಿನ ವಿಶ್ವಾಸಾರ್ಹತೆ ಕುಸಿದಿದೆ. ಕೇಂಬ್ರಿಜ್‌ ಅನಾಲಿಟಿಕಾದ ಕುಟಿಲ ತಂತ್ರಗಳ ಕಾರಣದಿಂದಾಗಿ ಪ್ರಜಾಪ್ರಭುತ್ವಕ್ಕೆ ಆತಂಕ ಎದುರಾಗಿದೆ ಎಂಬ ಮಾತು ಜಾಗತಿಕ ಮಟ್ಟದಲ್ಲಿ ಹಬ್ಬಿದೆ. ರಾಜಕೀಯವು ದೊಡ್ಡ ವ್ಯವಹಾರವಾದಾಗ ಆಗಬಹುದಾದ ಎಲ್ಲ ಕೆಟ್ಟ ಪರಿಣಾಮಗಳೂ ಕೇಂಬ್ರಿಜ್‌ ಅನಾಲಿಟಿಕಾ ಮೂಲಕ ಚುನಾವಣಾ ವ್ಯವಸ್ಥೆ ಮೇಲೆ ಆಗಿವೆ.