samachara
www.samachara.com
ಬೆಟ್ಟ ಕುರುಬರ ಹಾಡಿಯಿಂದ: ಹೆಸರಿನ ರಾಜಕೀಯ ಮತ್ತು ಮೀಸಲಾತಿಯ ಮಹಾಮೋಸ!
COVER STORY

ಬೆಟ್ಟ ಕುರುಬರ ಹಾಡಿಯಿಂದ: ಹೆಸರಿನ ರಾಜಕೀಯ ಮತ್ತು ಮೀಸಲಾತಿಯ ಮಹಾಮೋಸ!

ಅಳಿವಿನಂಚಿನಲ್ಲಿರುವ ಈ ಸಮುದಾಯದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಹಾಗೂ ಇವರ ತುತ್ತು ಇನ್ಯಾರದ್ದೋ ಪಾಲಾಗುವುದನ್ನು ಕೂಡಲೇ ತಪ್ಪಿಸಬೇಕಿದೆ.

ಬೆಟ್ಟಕುರುಬ ಸಮುದಾಯ ಕರ್ನಾಟಕದ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ವಾಸಿಸುವ ಪ್ರಮುಖ ಬುಡಕಟ್ಟು ಸಮುದಾಯ. ಪಶ್ಚಿಮಘಟ್ಟದ ದಟ್ಟವಾದ ಕಾಡುಗಳಲ್ಲಿ ವಾಸ ಮಾಡುತ್ತಿರುವ ಈ ಸಮುದಾಯದ ಜನರು, ಈ ಹಿಂದೆ ಬೆಟ್ಟಗಳ ಮೇಲೆ ವಾಸಮಾಡುತ್ತಿದ್ದುದ್ದರಿಂದ ಈ ಸಮುದಾಯದ ಜನರಿಗೆ ಬೆಟ್ಟಕುರುಬರು ಎಂಬ ಹೆಸರು ಬಂದಿದೆ.

ತಮ್ಮದೇ ಆದ ವಿಶಿಷ್ಟ ಭಾಷೆ, ಕುಲಾಚಾರ, ದೈವಗಳು, ನಿಯಮ, ನಿಷೇಧ, ನಂಬಿಕೆಗಳೊಂದಿಗೆ ಬಿಗಿಯಾದ ಕಟ್ಟುಪಾಡುಗಳನ್ನು ಈ ಸಮುದಾಯ ಇನ್ನೂ ಪಾಲಿಸಿಕೊಂಡು ಬಂದಿದೆ.

ಸಂವಿಧಾನದ 341 ಮತ್ತು 342ನೇ ಅನುಚ್ಛೇದದ ಪ್ರಕಾರ ಪರಿಶಿಷ್ಟ ಪಂಗಡ ಎಂದು ಘೋಷಿಸುವ ಅಧಿಕಾರವನ್ನು ನಮ್ಮ ದೇಶದ ರಾಷ್ಟ್ರಪತಿ ಹೊಂದಿದ್ದಾರೆ. ಜೊತೆಗೆ, ಕರ್ನಾಟಕ ಸರಕಾರವು ಈಗಾಗಲೇ 50 ಸಮುದಾಯಗಳನ್ನು ಪರಿಶಿಷ್ಟ ಪಂಗಡ ಎಂದು ಗುರುತಿಸಿದೆ.

ಬೆಟ್ಟ ಕುರುಬರ ಹಾಡಿಯಿಂದ: ಹೆಸರಿನ ರಾಜಕೀಯ ಮತ್ತು ಮೀಸಲಾತಿಯ ಮಹಾಮೋಸ!

ಪರಿಶಿಷ್ಟ ಪಂಗಡ ಎಂದು ಗುರುತಿಸಬೇಕಾದರೆ 5 ಮಾನದಂಡಗಳನ್ನು ಮುಖ್ಯವಾಗಿ ಅನುಸರಿಸಬೇಕಾಗುತ್ತದೆ:

  1. ಆದಿವಾಸಿ ಲಕ್ಷಣಗಳನ್ನು ಹೊಂದಿರಬೇಕು
  2. ವಿಶಿಷ್ಟವಾದ ಸಂಸ್ಕತಿಯನ್ನು ಹೊಂದಿರಬೇಕು
  3. ಭೌಗೋಳಿಕವಾಗಿ ಪ್ರತ್ಯೇಕವಾಗಿರಬೇಕು
  4. ನಾಚಿಕೆ ಮತ್ತು ಹಿಂಜರಿಕೆ ಸ್ವಭಾವವಿರಬೇಕು
  5. ಹಿಂದುಳಿದ ಸಮುದಾಯವಾಗಿರಬೇಕು

ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ನಡೆಸಿದ ಕುಲಶಾಸ್ತ್ರೀಯ ಅಧ್ಯಯನವನ್ನು ರಾಜ್ಯ ಸರಕಾರ ವಿಧಾನಸಭೆಯಲ್ಲಿ ಅನುಮೋದಿಸಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುತ್ತದೆ. ನಂತರ ಆ ಮಸೂದೆಯು ಸಂಸತ್ತಿನಲ್ಲಿ ರಾಷ್ಡ್ರಪತಿಗಳಿಂದ ಅಂಗಿಕಾರವಾಗುತ್ತದೆ.

ಭಾರತದಲ್ಲಿ ಈ ಬುಡಕಟ್ಟುಗಳ ಕುರಿತ ಅಧ್ಯಯನ ಪ್ರಾರಂಭವಾದದ್ದು ಬ್ರಿಟೀಷರ ಕಾಲದಲ್ಲಿ. ವಸಾಹತು ದೇಶಗಳಲ್ಲಿ ಆಡಳಿತದ ಅನುಕೂಲಕ್ಕಾಗಿ ಅಲ್ಲಿನ ಜನಜೀವನವನ್ನು ಅಧ್ಯಯನ ಮಾಡಬೇಕಾದ ಅಗತ್ಯ ಬ್ರಿಟೀಷರಿಗಿತ್ತು. ವಿದೇಶಿ ಮಾನವ ಶಾಸ್ತ್ರಜ್ಞರು ಈ ಆದ್ಯಯನವನ್ನು ಕೈಗೆತ್ತಿಕೊಂಡರು. ಆ ಸಮಯದಲ್ಲಿ ಅವರಿಗೆ ನೆರವಾದರು ಭಾರತೀಯ ವಿದ್ವಾಂಸರುಗಳು.

ಎಲ್. ಡಿ. ಲೂಯಿಸ್‍ ಕರ್ನಾಟಕದಲ್ಲಿ ಸುಮಾರು 27 ಬುಡಕಟ್ಟುಗಳು ಇರುವುದಾಗಿ ತಮ್ಮ ‘ Tribes of Mysore’ ಕೃತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಕ್ರಮ ಸಂಖ್ಯೆ ನಾಲ್ಕರಲ್ಲಿ ಬೆಟ್ಟಕರುಬರನ್ನು ಗುರುತಿಸಿದ್ದಾರೆ. ಮೈಸೂರು ರಾಜ್ಯವೂ ಕೂಡ ಬೆಟ್ಟಕುರುಬರನ್ನು ಗುರುತಿಸಿದೆ. ಗೆಝೆಟಿಯರ್‌ಗಳಲ್ಲೂ ಇವರ ಉಲ್ಲೇಖವಿದೆ. ಆ ಸಮಯದಲ್ಲಿ ನಡೆದ ಜಾತಿ ಗಣತಿಯಲ್ಲೂ ಇವರ ಜನಸಂಖ್ಯೆಯನ್ನು ಹೇಳಲಾಗಿದೆ.

ಬೆಟ್ಟ ಕುರುಬರ ಹಾಡಿಯಿಂದ: ಹೆಸರಿನ ರಾಜಕೀಯ ಮತ್ತು ಮೀಸಲಾತಿಯ ಮಹಾಮೋಸ!

ನಂತರದ ಸಮಯದಲ್ಲಿ ಈ ಬೆಟ್ಟಕುರುಬರು ಮತ್ತು ಜೇನುಕುರುಬರು ಎರಡೂ ಸಮುದಾಯದವರು ಕಾಡಿನಲ್ಲಿ ವಾಸಮಾಡುತ್ತಿದ್ದುದ್ದರಿಂದ ಒಟ್ಟಾಗಿ ಇವರನ್ನು ಕಾಡು ಕುರುಬರು ಎಂದು ಕರೆಯಲಾಯಿತು. ಆದರೆ ಆಮೇಲೆ ನಡೆದ ಅಧ್ಯಯನಗಳಲ್ಲಿ ಹಂತ ಹಂತವಾಗಿ ಬೆಟ್ಟಕುರುಬ ಎಂಬ ಹೆಸರಿನ ಜೊತೆಗೆ ಬೆಟ್ಟ ಪದದ ನಂತರ ಆವರಣದಲ್ಲಿ ಕಾಡು ಎಂಬ ಪದವನ್ನು ಸೇರಿಸಲಾಯಿತು.

1960-61ರಲ್ಲಿ ಸಮಾಜ ಕಲ್ಯಾಣ ಮಂತ್ರಿ ರಾಚಯ್ಯರ ಅಧ್ಯಕ್ಷತೆಯಲ್ಲಿ, ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ಹಾಗು ಮೊಟ್ಟಮೊದಲ ಬುಡಕಟ್ಟು ವಿಶೇಷ ಅಧಿಕಾರಿ ಇ. ಸಿ. ಮುತ್ತಪ್ಪ ಸೇರಿ ನಡೆಸಿದ ಸಭೆಯಲ್ಲಿ ಕ್ರಮ ಸಂಖ್ಯೆ ಮೂರಲ್ಲಿ ‘ಬೆಟ್ಟಕುರುಬ’ ಎಂಬ ಪದಕ್ಕೆ ಸಮಾನಾರ್ಥಕವಾಗಿ ಬೆಟ್ಟಕುರುಬರು, ಊರಳಿ ಕುರುಬರು, ಮತ್ತು ಕುರುಮನ್ಸ ಎಂಬ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಹೀಗೆ ಹಂತ ಹಂತವಾಗಿ ಬೇರೆ ಬೇರೆ ಸಮುದಾಯಗಳ ಹೆಸರುಗಳೊಂದಿಗೆ ಗುರುತಿಸಲ್ಪಟ್ಟ ಈ ಬೆಟ್ಟಕುರುಬ ಸಮುದಾಯದ ಹೆಸರನ್ನು 1975ರ ಹಾವನೂರರ ವರದಿಯಲ್ಲಿ ಸಂಪೂರ್ಣವಾಗಿ ಕೈಬಿಡಲಾಯಿತು. ಕಾಡುಕುರುಬ ಎಂಬ ಪದವನ್ನು ಮಾತ್ರ ಉಳಿಸಲಾಯಿತು.

ಅನಂತರದಲ್ಲಿ ಸರಕಾರಿ ದಾಖಲೆಗಳಲ್ಲೂ ಈ ಸಮುದಾಯದ ಹೆಸರನ್ನು ಇಲ್ಲದಂತೆ ಮಾಡಲಾಯಿತು. ಹಿಂದೆ ಜಾತಿ ಪ್ರಮಾಣ ಪತ್ರವನ್ನು ಬೆಟ್ಟಕುರುಬ ಎಂದೇ ನೀಡಲಾಗುತ್ತಿತ್ತು. ಅನಂತರದಲ್ಲಿ ಸರಕಾದ ಪರಿಶಿಷ್ಟ ಪಂಗಡದ ಪರಿಷ್ಕರಣೆ ಪಟ್ಟಿಯಲ್ಲಿ ಬೆಟ್ಟಕುರುಬ ಎಂಬ ಹೆಸರಿಲ್ಲದ ಕಾರಣ ಜಾತಿ ಪ್ರಮಾಣಪತ್ರವನ್ನು ಕೊಡಲು ನಿರಾಕರಿಸಲಾಯಿತು.

ದಿಕ್ಕು ತಪ್ಪಿದಂತಾದ ಈ ಸಮುದಾಯವು ಅಕ್ಷರಶಃ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಯಿತು. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು, ಸರಕಾರದ ಯೋಜನೆಯನ್ನು ಪಡೆಯಲು ಕೂಡ ಇವರು ವಿಫಲರಾದರು. ಬೆಟ್ಟ ಕುರುಬ ಎಂಬ ಪದದಲ್ಲಿ ಇದ್ದ ಒಂದು ಪ್ರತ್ಯೇಕ ಐಡೆಂಟಿಟಿಯು ಕಾಡು ಎಂದು ಬದಲಾದ ತಕ್ಷಣ ಮುಕ್ತವಾದಂತಾಯಿತು.

ಈ ಸಮಯದಲ್ಲಿ ಇತರೆ ಮುಂದುವರಿದ ಸಮುದಾಯಗಳೂ ಇದರ ಲಾಭವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಕಾಡುಕುರುಬ, ಬೆಟ್ಟಕುರುಬ ಎರಡೂ ಒಂದೇ ಎಂಬ ಸಮಾಜಾಯಿಷಿಕೆ ನೀಡುವುದರ ಮೂಲಕ ಕಾಡುಕುರುಬ ಎಂಬ ಜಾತಿ ಪ್ರಮಾಣ ಪತ್ರವನ್ನು ಪಡೆಯುವಂತೆ ಈ ಸಮುದಾಯದವರ ಒಪ್ಪಿಸಲಾಯಿತು. ಬೆಟ್ಟಕುರುಬ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಈ ಸಮುದಾಯದ ಅಳಲು.

ಕಾಡು ಕುರುಬ ಸಮುದಾಯದಲ್ಲಿ ಈಗಾಗಲೇ ಗುರುತಿಸಲ್ಪಡುತ್ತಿರುವ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಭಲರಾಗಿದ್ದು ಉನ್ನತ ಹುದ್ದೆಯಲ್ಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇತರೆ ಹಿಂದುಳಿದ ಬುಡಕಟ್ಟುಗಳಿಗೆ ಸಿಗುತ್ತಿರುವ ಪ್ರಾತಿನಿದ್ಯತೆ, ಅನುಕೂಲಗಳಿಂದ ಈ ಸಮುದಾಯ ವಂಚಿತವಾಗಿದೆ.

ವಿಶ್ವವಿದ್ಯಾಲಯಗಳೂ ಕೂಡ ಕಾಡುಕುರುಬರನ್ನು ಕುರಿತ ಹಲವು ಸಂಶೋಧನೆಗಳಲ್ಲಿ ಇವರು ಹಿಂದೆ ಪಲ್ಲವರ ವಂಶಸ್ಥರಾಗಿದ್ದವರು. ಬಲಿಷ್ಟರು ಮತ್ತು ಕ್ರೂರಿಗಳಾಗಿದ್ದವರು, ಅನಂತರದಲ್ಲಿ ಚೋಳ ಮೊದಲಾದವರಿಂದ ಆಕ್ರಮಣಕ್ಕೆ ಒಳಗಾಗಿ ದಿಕ್ಕಾಪಾಲಾಗಿ ಓಡಿ ಕಾಡು ಸೇರಿದವರು ಎಂದು ಉಲ್ಲೇಖಿಸುತ್ತಾರೆ. ಆದರೆ ಈ ಸಮುದಾಯವು ಇಂತಹ ಮಾತನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ.

‘ಕಾಡಿನಲ್ಲಿರುವ ನಾವು ಇಲ್ಲಿರುವ ಕಾಡು ಪ್ರಾಣಿಗಳೊಂದಿಗೂ ಇತರೆ ಸಮುದಾಯಗಳೊಂದಿಗೆ ಅನ್ಯೋನ್ಯವಾಗಿ ಬದುಕುತ್ತಿರುವವರು ನಾವು ಕ್ರೂರಿಗಳಾಗಲು ಹೇಗೆ ಸಾದ್ಯ? ಅಲ್ಲದೆ ನಮ್ಮ ಸಮುದಾಯದಲ್ಲಿ ಯಾರಾದರೂ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ಬದಲಿಗೆ ಅವನ ಮನ ಪರಿವರ್ತನೆ ಮಾಡುವ ದಿಕ್ಕಿನಲ್ಲಿ ಅವನನ್ನು ಪ್ರೇರೇಪಿಸಲಾಗುತ್ತದೆ. ಆಳು, ಅರಸ ಎಂಬ ಕಲ್ಪನೆಯೇ ನಮ್ಮ ಸಮುದಾಯದಲ್ಲಿಲ್ಲ. ಹಾಡಿಯಲ್ಲಿ ಎಲ್ಲರೂ ಸಮಾನರು, ಗುಂಪಿನ ಯಜಮಾನ ಕೂಡ ಗುಂಪಿಗೆ ಮನ್ನಣೆ ಕೊಡಬೇಕಾದೆ ಸಮಾನತೆಯ ತಳಹದಿಯ ಮೇಲೆ ನಮ್ಮ ಒಳಾಡಳಿತ ವ್ಯವಸ್ಥೆ ರೂಪುಗೊಂಡಿದೆ’ ಎಂಬ ಮಾತನ್ನು ಹೇಳುತ್ತಾರೆ.

ಬೆಟ್ಟ ಕುರುಬರ ಹಾಡಿಯಿಂದ: ಹೆಸರಿನ ರಾಜಕೀಯ ಮತ್ತು ಮೀಸಲಾತಿಯ ಮಹಾಮೋಸ!

ಕಾಡಿನಲ್ಲಿ ಖಾಸಗಿ ಆಸ್ತಿಯ ಕಲ್ಪನೆಯೇ ಇಲ್ಲದವರು ನಾವು ರಾಜರಾಗಿ ಯುದ್ದದ ಮೂಲಕ ರಾಜ್ಯವಿಸ್ತರಣೆ ಮಾಡುವ ಆಶಯವೂ ನಮಗಿರಲಿಲ್ಲ, ಇದೆಲ್ಲಾ ನಮ್ಮ ಮೇಲೆ ಆರೋಪಿಸಲಾಗಿರುವ ಕತೆಗಳಷ್ಟೇ ಎನ್ನುತ್ತಾರವರು. ಜೊತೆಗೆ, ಈ ಕುರುಬರು ಕುರಿಗಾಹಿಗಳು ಎಂಬ ಮಾತನ್ನು ಹೇಳುತ್ತಾರೆ. ದಟ್ಟ ಕಾಡಿನ ನಡುವೆ ಕುರಿಗಳನ್ನು ಎಂದೂ ಇವರು ಸಾಕಿದವರಲ್ಲ. ಮತ್ತೂ ಮುಂದುವರೆದು ಬೆಟ್ಟ ಕುರುಬರ ಪ್ರಮುಖ ಹಬ್ಬವಾದ ಕುಂಡೆ ಹಬ್ಬ. ಅವರ ಸಂಸ್ಕತಿ ಮೊದಲಾದವುಗಳನ್ನು ಬಳಸಿಕೊಂಡು ಕಾಡು ಕುರುಬರು ಬೆಟ್ಟಕುರುಬರೆಲ್ಲಾ ಒಂದೇ ಎಂಬುದನ್ನು ಸಮರ್ಥಿಸಿಕೊಳ್ಳುವಂತ ಸಂಶೋಧನೆಗಳೂ ಕೂಡ ಪ್ರಕಟಗೊಂಡಿವೆ.

ಹಿಂದೆ ಜೇನುಕುರುಬ ಕಾಡುಕುರುಬ ಬೆಟ್ಟಕುರುಬ ಎಲ್ಲರೂ ಒಂದೇ ಆಗಿದ್ದು, ಈ ಆಕ್ರಮಣದಲ್ಲಿ ಊರು ಸೇರಿದವರು ಊರು ಕುರುಬರಾದರು ಎಂಬ ಮಾತನ್ನು ಹೇಳುತ್ತಾರೆ. ಈ ಎಲ್ಲಾ ವಿಚಾರಗಳೂ ಉದ್ದೇಶಪೂರ್ವಕವಾಗಿಯೋ ಅಥವಾ ನಿರ್ಲಕ್ಷ್ಯವೋ, ಇಲ್ಲ ಮತ್ತಾರದ್ದೋ ಲಾಭಕ್ಕಾಗಿ ನಡೆದಿದೆ ಎಂಬುದು ಇವರ ವಾದ. ಇದಕ್ಕೆ ಪುಷ್ಟಿ ನೀಡುವಂತೆ ಪಾರ್ವತಮ್ಮರವರು ಬರೆದಿರುವ “ಮೀಸಲಾತಿ ಒಂದು ಗಗನ ಕುಸುಮ” ಎಂಬ ಪುಸ್ತಕದಲ್ಲಿ ಈ ಮೀಸಲಾತಿಯ ಉದ್ದೇಶವನ್ನು ಉಳ್ಳವರ ಪರವಾಗಿ ರೂಪಿಸಿಲ್ಪಟ್ಟ ಸತ್ಯವನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ.

ಈ ಕುರಿತು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಈ ಸಮುದಾಯದ ಹೋರಾಟಗಾರರು ದಾಖಲೆಗಳೊಂದಿಗೆ ತಮ್ಮ ವಾದವನ್ನು ಮುಂದಿಡುತ್ತಾರೆ. ತಾಲ್ಲೂಕು, ಜಿಲ್ಲೆ ರಾಜ್ಯ ಮಟ್ಟದಲ್ಲಿ ಗಿರಿಜನ ಅಭಿವೃದ್ದಿಗಾಗಿ ರೂಪಿಸಿರುವ ಯಾವುದೇ ಕಮಿಟಿಗಳಲ್ಲಿ ಈ ಸಮುದಾಯವನ್ನು ಪ್ರತಿನಿಧಿಸುವವರನ್ನು ಸರಕಾರ ನೇಮಿಸಿಲ್ಲ ಇದರಿಂದ ಇವರ ಗೋಳು ಸರಕಾರಕ್ಕೆ ಮುಟ್ಟಿಸುವವರು ಯಾರೂ ಇಲ್ಲದಂತಾಗಿದೆ.

ಇತ್ತೀಚೆಗೆ ಆರ್ಥಿಕ ಸಮಸ್ಯೆಗಳಿಂದ ಹಾಗು ತಮಗೆ ಸರಿಯಾದ ಮಾಹಿತಿ ಮತ್ತು ಬೆಂಬಲ ಸಿಗದಿರುವ ಕಾರಣ ಹೋರಾಟದ ಉತ್ಸಾಹವು ಬತ್ತಿಹೋಗುತ್ತಿದೆ. ಸರಕಾರ ಈ ಸಮುದಾಯದ ಕುಲಶಾಸ್ತ್ರೀಯ ಅದ್ಯಯನ ಮಾಡುವ ಜವಾಬ್ಧಾರಿಯನ್ನು ಮೈಸೂರಿನ ಗಿರಿಜನ ಸಂಶೋಧನಾ ಕೇಂದ್ರಕ್ಕೆ 2014ರಲ್ಲೇ ವಹಿಸಲಾಗಿದ್ದರೂ ಇದುವರೆಗೂ ವರದಿ ಸಲ್ಲಿಕೆಯಾಗಿಲ್ಲ. ಒಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಈ ಸಮುದಾಯದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಹಾಗೂ ಇವರ ತುತ್ತು ಇನ್ಯಾರದ್ದೋ ಪಾಲಾಗುವುದನ್ನು ಕೂಡಲೇ ತಪ್ಪಿಸಬೇಕಿದೆ.