samachara
www.samachara.com
‘ಮಾಂಸ ಪ್ರಿಯರ ಗಮನಕ್ಕೆ’: ಫಾರಂ ಕೋಳಿ ಮಾಂಸ ಕೊಂಡರೆ ಆಂಟಿ ಬಯೋಟಿಕ್ ಫ್ರೀ!
COVER STORY

‘ಮಾಂಸ ಪ್ರಿಯರ ಗಮನಕ್ಕೆ’: ಫಾರಂ ಕೋಳಿ ಮಾಂಸ ಕೊಂಡರೆ ಆಂಟಿ ಬಯೋಟಿಕ್ ಫ್ರೀ!

ಜನರಿಂದ ಬೇಡಿಕೆ ಬಾರದ ಹೊರತು, ಸರಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯಂತೂ ನಮ್ಮಲ್ಲಿಲ್ಲ. ಹೀಗಾಗಿ, ಕೋಳಿ ಪ್ರಿಯರೇ ಈ ಕುರಿತು ದನಿ ಎತ್ತುವ ಅಗತ್ಯವಿದೆ.

ಸದ್ಯ ನಾವು ಬಳಸುತ್ತಿರುವ ‘ಫಾರಂ ಕೋಳಿ’ ಮಾಂಸದ ಸುತ್ತ ಜಾಗತಿಕ ಮಟ್ಟದ ಚರ್ಚೆಯೊಂದು ಸದ್ದಿಲ್ಲದೆ ನಡೆಯುತ್ತಿದೆ. ಇದೇ ವರ್ಷದ ಜವನರಿ ತಿಂಗಳಿನಲ್ಲಿ ‘ಬ್ಯುರೋ ಆಫ್‌ ಇನ್ವೆಸ್ಟಿಗೇಟಿವ್ ಜರ್ನಲಿಸಂ’ ಭಾರತದ ಪೌಲ್ಟ್ರಿ ಉದ್ಯಮ ಮತ್ತು ಅದು ಕೋಳಿಗಳನ್ನು ಬೆಳಸಲು ಬಳಸುವ ಟನ್‌ಗಟ್ಟಲೆ ಅಪಾಯಕಾರಿ ಆಂಟಿ ಬಯೋಟಿಕ್‌ ಕುರಿತು ವಿಸ್ತೃತ ತನಿಖಾ ವರದಿಯೊಂದನ್ನು ಹೊರಗೆಡವಿತ್ತು.

ಅದರ ಬೆನ್ನಿಗೆ ಪೌಲ್ಟ್ರಿ ಲಾಬಿ, ‘ಟೈಮ್ಸ್‌ ಆಫ್‌ ಇಂಡಿಯಾ’ದ ದಿಲ್ಲಿ ಸಂಚಿಕೆಯ ಮುಖಪುಟದಲ್ಲಿ ಜಾಹೀರಾತೊಂದನ್ನು ನೀಡಿತ್ತು. ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಭಾರತದ ಪೌಲ್ಟ್ರಿ ಉದ್ಯಮ ಆಂಟಿಬಯೋಟಿಕ್‌ ಬಳಸುತ್ತಿದೆ; ಈ ಮೂಲಕ ಜಗತ್ತಿನ ಆರೋಗ್ಯಕ್ಕೆ ಮಾರಕವಾಗುವ ಹೊಸ ವೈರಸ್‌ಗಳನ್ನು ಸೃಷ್ಟಿಸುತ್ತಿದೆ ಎಂಬ ಆರೋಪವನ್ನು, ಪೌಲ್ಟ್ರಿ ಉದ್ಯಮ ಜಾಹೀರಾತಿನಲ್ಲಿ ಅಲ್ಲಗೆಳೆದಿತ್ತು.

ಆದರೆ, ‘ಬ್ಯುರೋ ಆಫ್‌ ಇನ್ವೆಸ್ಟಿಗೇಟಿವ್ ಜರ್ನಲಿಸಂ’, ತಾನು ಪ್ರಕಟಿಸಿದ ವರದಿ, ಆಧಾರಗಳನ್ನು ಹೊಂದಿದ್ದು, ವೈಜ್ಞಾನಿಕವಾಗಿಯೂ ಸರಿಯಾಗಿದೆ ಎಂದು ಎಂದು ಹೇಳಿದೆ.

ಏನಿದು ವಿವಾದ?:

ಬೆಳಗ್ಗೆ ಎದ್ದ ತಕ್ಷಣ ಹಲ್ಲುಚ್ಚುವ ಬ್ರಷ್, ಪೇಸ್ಟಿನಿಂದ ಹಿಡಿದು, ಸಂಜೆ ಮಲಗುವ ಮುಂಚೆ ಹಚ್ಚುವ ಸೊಳ್ಳೆ ಬತ್ತಿವರೆಗೆ, ಪ್ರತಿಯೊಂದು ವಸ್ತುಗಳ ಬಗ್ಗೆಯೂ ಒಂದಲ್ಲ ಒಂದು ಸಮಯದಲ್ಲಿ ಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ನಾವು ನಿತ್ಯ ಬಳಸುವ ಆಹಾರ ಪಾದಾರ್ಥಗಳು ಕೂಡ ಹೊರತಾಗಿಲ್ಲ.

ಅಡುಗೆ ಎಣ್ಣೆಯಿಂದ ಹಿಡಿದು ಮೆಣಸಿನ ಕಾಯಿ ಪುಡಿವರೆಗೆ ರಾಸಾಯನಿಕಗಳನ್ನು ಬಳಸಲಾಗುತ್ತದೆ; ಮತ್ತವು ಮನುಷ್ಯರ ಆರೋಗ್ಯಕ್ಕೆ ಅಪಾಯಕಾರಿ ಎಂದು ಮಾಹಿತಿ ನಿಮ್ಮ ಕಿವಿಯ ಮೇಲೆ ಬಿದ್ದಿರುತ್ತದೆ. ಇದೀಗ ಅದೇ ರೀತಿಯಲ್ಲಿ ಕೋಳಿ ಮಾಂಸದ ಬಗ್ಗೆಯೂ ಅನುಮಾನ ಮೂಡಿದೆ.

ಈ ಬಾರಿ ಕೊಂಚ ಆತಂಕ ಹೆಚ್ಚಾಗುವುದಕ್ಕೆ ಕೆಲವು ಪ್ರಮುಖ ಅಂಶಗಳಿವೆ. ‘ದಿ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ' ತನಿಖಾ ವರದಿಯ ಪ್ರಕಾರ, ಕೋಳಿಗಳು ತ್ವರಿತ ಗತಿಯಲ್ಲಿ ಬೆಳೆಯಬೇಕು ಮತ್ತು ಅಧಿಕ ಲಾಭವನ್ನು ತಂದುಕೊಡಬೇಕು ಎಂಬ ಉದ್ದೇಶದಿಂದ ಅವುಗಳಿಗೆ ‘ಕೋಲಿಸ್ಟಿನ್’ ಎಂಬ ಆಂಟಿ ಬಯಾಟಿಕ್‌ ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿಯನ್ನು ತಿಂದು ಬೆಳೆದ ಕೋಳಿಗಳನ್ನು ಸೇವಿಸುವ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಏನಿದು ಕೋಲಿಸ್ಟಿನ್‌? ಹೀಗೊಂದು ಆಂಟಿ ಬಯೋಟಿಕ್ ಹಿನ್ನೆಲೆಯನ್ನು ಹುಡುಕಿಕೊಂಡು ಹೋದರೆ, ಇದನ್ನು ನ್ಯುಮೋನಿಯಾ ಮತ್ತು ಇತರೆ ಸೋಂಕು ಸಂಬಂಧಿತ ರೋಗಗಳಿಗೆ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ ಎಂಬ ಮಾಹಿತಿ ಸಿಗುತ್ತದೆ.

ಬೇರೆ ಯಾವುದೇ ಔಷಧದಿಂದಲೂ ಕೆಲವು ನಿರ್ದಿಷ್ಟ ರೋಗಗಳು ಗುಣವಾಗುವುದಿಲ್ಲ ಎಂದಾಗ ಮಾತ್ರ ಕೋಲಿಸ್ಟನ್‌ನ್ನು ವೈದ್ಯರು ರೋಗಿಗೆ ನೀಡುತ್ತಾರೆ. ಇದು ರೋಗದ ವಿರುದ್ಧ (ರೋಗ ಹರಡುವ ಬ್ಯಾಕ್ಟೀರಿಯಾ) ಹೋರಾಡಿ ದೇಹಕ್ಕೆ ಒಂದು ರಕ್ಷಣಾ ಕವಚ ನೀಡುತ್ತದೆ. ಈ ಔಷಧವನ್ನು ಖಾಯಿಲೆ ಬಂದಾಗ ಮಾತ್ರವೇ ಸೇವಿಸಬೇಕು. ಆದರೆ ಆರೋಗ್ಯವಂತ ವ್ಯಕ್ತಿಯು ಇದನ್ನು ಸೇವಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತವೆ ವೈದ್ಯಕೀಯ ವರದಿಗಳು.

ಕೋಳಿಗಳಿಗೆ ನೀಡುತ್ತಿರುವ ಕೋಲಿಸ್ಟಿನ್‌. 
ಕೋಳಿಗಳಿಗೆ ನೀಡುತ್ತಿರುವ ಕೋಲಿಸ್ಟಿನ್‌. 

ಕೋಳಿ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಬೇಡಿಕೆಗೆ ತಕ್ಕಂತೆ ಅದನ್ನು ಪೂರೈಸುವುದಕ್ಕೋಸ್ಕರವೇ ಕೋಳಿ ಸಾಕಾಣಿಕೆ ಮಾಡುವವರು ತಾವು ಬೆಳೆಸುವ ಕೋಳಿಗಳಿಗೆ ಈ ಕೋಲಿಸ್ಟಿನ್ ಎಂಬ ಆಂಟಿ ಬಯಾಟಿಕ್ ಇಂಜೆಕ್ಟ್ ಮಾಡಲಾಗುತ್ತಿದೆ ಎಂದು ವರದಿ ಹೇಳುತ್ತಿದೆ. ಅಲ್ಲದೇ, ಔಷಧಕ್ಕಾಗಿಯೇ ಬಳಸುವ ಆಂಟಿ ಬಯಾಟಿಕ್‌ಗಳನ್ನು ಕೋಳಿಗಳಿಗೆ ನೀಡುವುದರಿಂದ, ಫಾರಂ ಕೋಳಿ ಮಾಂಸ ತಿನ್ನುವ ಆರೋಗ್ಯವಂತ ಮನುಷ್ಯ ದೇಹಗಳ ಮೇಲೆ ಪರಿಣಾಮ ಸಹಜವಾಗಿಯೇ ಬೀರುತ್ತಿದೆ.

ಪ್ರಾಣಿಗಳಿಗೆ ಆಂಟಿ ಬಯಾಟಿಕ್ ಮತ್ತು ಸಾವು:

ಮಾಂಸಾಹಾರಕ್ಕಾಗಿ ಸೇವಿಸುವ ಪ್ರಾಣಿಗಳಿಗೆ ಪ್ರತಿದಿನವೂ ಆಂಟಿ ಬಯೋಟಿಕ್ಸ್‌ ನೀಡಲಾಗುತ್ತಿದ್ದು, ಇದರ ಪರಿಣಾಮವಾಗಿ 2050ರ ಹೊತ್ತಿಗೆ ಒಟ್ಟಾರೆಯಾಗಿ ಸುಮಾರು 10 ದಶಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಇದೆ. ಆಂಟಿ ಬಯೋಟಿಕ್ಸ್ ಪ್ರಾಣಿಗಳ ದೇಹವನ್ನು ಪ್ರವೇಶಿಸಿದ ಮೇಲೆ ರೋಗ ನಿರೋಧಕವಾಗಿ ಅದು ಕೆಲಸ ಮಾಡುತ್ತದೆ. ಜನರು ಇದೇ ಪ್ರಾಣಿಯ ಮಾಂಸವನ್ನು ಆಹಾರವನ್ನಾಗಿ ಸ್ವೀಕರಿಸಿದಾಗ ಅದು ಅವರ ದೇಹವನ್ನು ಪ್ರವೇಶಿಸುತ್ತದೆ. ಹೀಗೆ ಪ್ರವೇಶ ಪಡೆಯುವ ಆಂಟಿ ಬಯಾಟಿಕ್‌ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯ ದೇಹಕ್ಕೆ ಅಪಾಯ ತಂದೊಡ್ಡುತ್ತದೆ.

ಆಲ್ ಇಂಡಿಯಾ ಪೌಲ್ಟ್ರಿ ಡೆವಲಪ್‌ಮೆಂಟ್ ಆ್ಯಂಡ್ ಸರ್ವಿಸಸ್, ‘ಕೋಳಿ ಮಾಂಸ ಆಂಟಿ ಬಯಾಟಿಕ್‌ನಿಂದ ಮುಕ್ತವಾಗಿದೆ’ ಎಂದು ಜಾಹೀರಾತನ್ನೇನೋ ನೀಡಿದೆ. ಆದರೆ ವಾಸ್ತವಾಂಶ ಏನೆಂದರೆ, ‘ಕೋಳಿ ಸಾಕಣೆ ಕೇಂದ್ರಗಳಲ್ಲಿ ಆಂಟಿ ಬಯಾಟಿಕ್‌ ಬಳಕೆ ಹೆಚ್ಚಾಗಿದೆ’ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ)ವೇ ಹೇಳಿದೆ. ಅಷ್ಟೇ ಅಲ್ಲದೇ ಕೋಳಿ ಉದ್ಯಮದಲ್ಲಿ ಆ್ಯಂಟಿ ಬಯಾಟಿಕ್ಸ್‌ ಬಳಕೆಯಿಂದಾಗಿ ಜನರ ಆರೋಗ್ಯವು ಆಪತ್ತಿನಲ್ಲಿದೆ ಎಂದು ಎಚ್ಚರಿಕೆಯನ್ನು ನೀಡಿದೆ.

‘ಮಾಂಸ ಪ್ರಿಯರ ಗಮನಕ್ಕೆ’: ಫಾರಂ ಕೋಳಿ ಮಾಂಸ ಕೊಂಡರೆ ಆಂಟಿ ಬಯೋಟಿಕ್ ಫ್ರೀ!

2014ರಲ್ಲಿ ವಿಜ್ಞಾನ ಮತ್ತು ಪರಿಸರ ಕೇಂದ್ರ, ಕೋಳಿ ಮಾಂಸಗಳ ಕುರಿತು ಅಧ್ಯಯನ ನಡೆಸಿತ್ತು. ‘ಭಾರತದ ಕೋಳಿ ಸಾಕಣೆ ಉದ್ಯಮದಲ್ಲಿ ಆಂಟಿ ಬಯಾಟಿಕ್ ಬಳಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಬೇಕೆಂದು, ಜೀವ ಉಳಿಸಲು ಬಳಸುವ ಕೊಲಿಸ್ಟಿನ್‌ನಂಥ ಔಷಧಗಳನ್ನೂ ಬಳಸಲಾಗುತ್ತಿದೆ. ಇದನ್ನು ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಕಾಣುತ್ತಿಲ್ಲ. ಕೋಳಿ ಸಾಕಣೆ ಕೇಂದ್ರಗಳು ರೋಗಾಣುಗಳ ತಾಣವಾಗುತ್ತಿವೆ' ಹೇಳಿತ್ತು. ಆದರೆ ಅಧ್ಯಯನ ವರದಿಯು ಇಷ್ಟೆಲ್ಲ ಹೇಳಿದರೂ ಪೌಲ್ಟ್ರಿ ಉದ್ಯಮದಲ್ಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ.

ಇವತ್ತಿಗೆ ಆಂಟಿ ಬಯಾಟಿಕ್ಸ್ ಬಳಕೆ ಜಗತ್ತಿನಾದ್ಯಂತ ವ್ಯಾಪಕವಾಗಿದೆ. ಪ್ರಾಣಿ, ಪಕ್ಷಿಗಳ ಸಾಕಾಣಿಕೆಗಾಗಿಯೇ 63,151 ಟನ್‌ನಷ್ಟು ಆಂಟಿ ಬಯಾಟಿಕ್ ಜಗತ್ತಿನಾದ್ಯಂತ ಬಳಸಲಾಗುತ್ತಿದೆ. ಪ್ರತಿವರ್ಷವೂ ವಿಶ್ವದಾದ್ಯಂತ ಸುಮಾರು 700,000 ಸಾವುಗಳಿಗೆ ಇದು ಹೊಣೆಯಾಗುತ್ತಿದೆ. ಅಮೆರಿಕದಲ್ಲಿ 23,000, ಯುರೋಪ್‌ನಲ್ಲಿ 25,000, ಭಾರತದಲ್ಲಿ 63,000ರಷ್ಟು ಸಾವುಗಳಿಗೆ ಇದು ಕಾರಣವಾಗುತ್ತಿದೆ. ನಾನಾ ಹೊಸ ರೋಗಗಳೂ ಸೃಷ್ಟಿಯಾಗುತ್ತಿವೆ ಎಂದು ಅಧ್ಯಯನಗಳು ಹೇಳುತ್ತವೆ.

ಆಧುನಿಕ ವೈದ್ಯ ವಿಜ್ಞಾನದಲ್ಲಿ ಆಂಟಿ ಬಯಾಟಿಕ್‌ಗಳನ್ನು ಔಷಧಿಯಾಗಿ ಬಳಸುತ್ತಾರೆ. ಇವು ರೋಗ ಹರಡುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಿ ಅವುಗಳನ್ನು ಕೊಲ್ಲುತ್ತವೆ. ಇವು ಸೋಂಕು ಹರಡುವ ವೈರಾಣುಗಳ ವಿರುದ್ಧ ಹೋರಾಡುತ್ತವೆ. ಈ ಮೂಲಕ ವ್ಯಕ್ತಿಯನ್ನು ಮತ್ತೆ ಆರೋಗ್ಯವಂತನಾಗುವಲ್ಲಿ ಪಾತ್ರ ವಹಿಸುತ್ತವೆ. ಜಗತ್ತಿನ ಮೊದಲ ಆಂಟಿ ಬಯಾಟಿಕ್ ಎಂದರೆ ಅದು ಪೆನ್ಸಿಲಿನ್. 1940ರಲ್ಲಿ ಮೊಟ್ಟ ಮೊದಲ ಬಾರಿಕೆ ಪೆನ್ಸಿನಿಲ್ ಬಳಕೆಯಾಯಿತು. ಇವತ್ತಿಗೆ ನೂರಾರು ಆಂಟಿ ಬಯಾಟಿಕ್‌ಗಳಿವೆ.

ಈಗಾಗಲೇ ಮೆಕ್‌ ಡೊನಾಲ್ಡ್‌, ಕೆಎಫ್‌ಸಿಯಂತಹ ಫಾಸ್ಟ್‌ ಫುಡ್‌ ಜಾಯಿಂಟ್‌ಗಳು ಮುಂದಿನ ಒಂದೆರಡು ವರ್ಷಗಳಲ್ಲಿ ಆಂಟಿಬಯೋಟಿಕ್ ಮುಕ್ತ ಕೋಳಿ ಮಾಂಸವನ್ನು ಅಮೆರಿಕಾ ಮತ್ತು ಯುರೋಪಿನ ಮಾರುಕಟ್ಟೆಗಳಲ್ಲಿ ಬಳಸುವುದಾಗಿ ಒಪ್ಪಿಕೊಂಡಿವೆ. ಆದರೆ, ಭಾರತದಲ್ಲಿ ಮಾತ್ರ ಅವು ಇದೇ ವಿಷಯುಕ್ತ ಮಾಂಸವನ್ನು ಜನರಿಗೆ ಮಾರಾಟ ಮಾಡುವುದನ್ನು ಮುಂದುವರಿಸುತ್ತವೆ. ಹೆಚ್ಚಿನ ಲಾಭದ ಹಿನ್ನೆಲೆಯಲ್ಲಿ ತಯಾರಾಗುವ ಕೋಳಿಗಳೇ ಭವಿಷ್ಯ ಆರೋಗ್ಯವಂತ ಸಮಾಜಕ್ಕೆ ಮಾರಕವಾಗುವ ಸಾಧ್ಯತೆಗಳಿವೆ.

ಇಷ್ಟಕ್ಕೂ ಕೋಳಿ ಮಾಂಸ ಭಾರತದ ಮಟ್ಟಿಗೆ ಅನಿವಾರ್ಯವಾದ ಮಾಂಸಾಹಾರ. ದೊಡ್ಡ ಸಂಖ್ಯೆ ಜನವರ್ಗ ಇದನ್ನು ತಮ್ಮ ಪೌಷ್ಟಿಕಾಂಶದ ಮೂಲವಾಗಿ ಬಳಸುತ್ತಿದೆ. ಹೀಗಿರುವಾಗ, ಪೌಲ್ಟ್ರಿ ಉದ್ಯಮ ಆಂಟಿ ಬಯೋಟಿಕ್ ಮುಕ್ತ ಕುಕ್ಕುಟ ಉದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಆಲೋಚನೆ ಮಾಡುವ ತುರ್ತು ಅಗತ್ಯವಿದೆ.

ಜನರಿಂದ ಬೇಡಿಕೆ ಬಾರದ ಹೊರತು, ಸರಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯಂತೂ ನಮ್ಮಲ್ಲಿಲ್ಲ. ಹೀಗಾಗಿ, ಕೋಳಿ ಪ್ರಿಯರೇ ಈ ಕುರಿತು ದನಿ ಎತ್ತುವ ಅಗತ್ಯವಿದೆ.