ಸಿರಿಯಾದಲ್ಲಿ ಯುದ್ದದ ಪರಿಣಾಮದ ಭೀಕರತೆ ತೋರಿಸುವ ಸಾಂದರ್ಬಿಕ ಚಿತ್ರ (ಕೃಪೆ: ಹಫಿಂಗ್‌ಟನ್ ಪೋಸ್ಟ್) 
COVER STORY

ಸಿರಿಯಾದಲ್ಲಿ ನೆತ್ತರ ಹೊಳೆ, ಅಧ್ಯಕ್ಷ ಅಸಾದ್ ಮತ್ತು ಐತಿಹಾಸಿಕ ಸತ್ಯಗಳು  

ಅದು 2011 ಮಾರ್ಚ್ 15. ಡೆಮಾಸ್ಕಸ್‌ನಲ್ಲಿ ಸಾವಿರಾರು ಜನ ಪ್ರಭುತ್ವದ ವಿರುದ್ಧ ಬೀದಿಗಿಳಿದ್ದರು.  ಸಾವಿರಾರು ಜನರ ಒಕ್ಕೊರಲಿನ ಕೂಗು ಒಂದೇ ಆಗಿತ್ತು. ಅದುವೇ ಪ್ರಜಾಸತ್ತಾತ್ಮಕ ಸುಧಾರಣೆ ಹಾಗೂ ಅಧ್ಯಕ್ಷ ಬಷರ್ ಅಲ್ ಅಸಾದ್ ರಾಜೀನಾಮೆ. ಅಂದು ನಡೆದ ಬೃಹತ್ ಪ್ರತಿಭಟನೆ ಅಧ್ಯಕ್ಷ ಅಸಾದ್ ಸರ್ಕಾರವನ್ನು ಪತನಗೊಳಿಸುವಲ್ಲಿ ವಿಫಲವಾಯ್ತು. ಅಸಾದ್, ಸಿರಿಯಾ ಸೈನ್ಯ ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕಿದ. ಅದು ಬಂದೂಕಿನ ನಳಿಕೆಯ ಮೂಲಕ.  ಅಂದು ಸಿರಿಯಾ ಅಧ್ಯಕ್ಷ ಅಸಾದ್ ತೆಗೆದುಕೊಂಡ ದಾಷ್ಟ್ಯದ ನಿರ್ಧಾರ ಇಂದು ಸಿರಿಯಾವನ್ನು ಅಕ್ಷರಶ: ನರಕ ಮಾಡಿದೆ.

ಸಿರಿಯಾದ ರಾಜಧಾನಿ ಡೆಮಾಸ್ಕಸ್ ಬಳಿಯಿರುವ ಪೂರ್ವ ಘೌಟಾದಲ್ಲಿ ನೆತ್ತರು ಹೊಳೆಯಂತೆ ಹರಿಯುತ್ತಿದೆ. ಇಡೀ ನಗರಕ್ಕೆ ನಗರವೇ ಸಂಪೂರ್ಣ ಸರ್ವನಾಶವಾಗಿದೆ. ಫೆಬ್ರವರಿ 18ರಂದು ಸಿರಿಯಾ ಸೇನೆ ನಡೆಸುತ್ತಿರುವ ಬಾಂಬ್ ದಾಳಿ ಅಮಾಯಕರ ಬಲಿ ಪಡೆಯುತ್ತಿದೆ. ಕೇವಲ 11 ದಿನಗಳಲ್ಲಿ 120 ಕ್ಕೂ ಹೆಚ್ಚು ಮಕ್ಕಳೂ ಸೇರಿದಂತೆ 556ಕ್ಕಿಂತ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

ವೈಮಾನಿಕ ದಾಳಿಯಲ್ಲಿ ಸಿಕ್ಕು ಪ್ರಾಣ ಕಳೆದುಕೊಳ್ಳುತ್ತಿರುವ ಹಾಗೂ ಗಾಯಗೊಂಡಿರುವ ಮಕ್ಕಳ ಕರುಣಾಜನಕ ಫೋಟೋಗಳು ಜಗತ್ತಿನ ಕಣ್ಣುಗಳನ್ನ ತೇವಗೊಳಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಿರಿಯಾ ಮಕ್ಕಳ ಆಕ್ರಂದನದ ವಿಡಿಯೋಗಳು ಹರಿದಾಡುತ್ತಿವೆ. ಆದರೆ ಇದು ಜಗತ್ತಿನ ಶಕ್ತಿಶಾಲಿ ವ್ಯಕ್ತಿ ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಆತನ ಮಿತ್ರ ಬಷರ್ ಅಲ್ ಅಸಾದ್‌ಗೆ ಕಾಣುತ್ತಿಲ್ಲ. ಅವರು ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ಪೂರ್ವ ಘೌಟಾದ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ.

ಚಿತ್ರಕೃಪೆ: ಸಿಎನ್‌ಎನ್‌
ಚಿತ್ರಕೃಪೆ: ಸಿಎನ್‌ಎನ್‌

ವಿಶ್ವಸಂಸ್ಥೆ ಎಂಬ ಹಲ್ಲಿಲ್ಲದ ಹಾವು:

ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ತಡೆದು, ಸಿರಿಯಾ ಮಕ್ಕಳ ಪ್ರಾಣ ಕಾಪಾಡುವ ತಾಕತ್ತು ವಿಶ್ವಸಂಸ್ಥೆಗೂ ಇಲ್ಲವಾಗಿದೆ. ವಿಶ್ವಸಂಸ್ಥೆ,  ಸಿರಿಯಾದಲ್ಲಿ  30 ದಿನಗಳ ಕದನ ವಿರಾಮ ಪರಿಹಾರಕ್ಕೆ ಮುಂದಾಗಿತ್ತು. ಸಿರಿಯಾವನ್ನು ಭೂಮಿ ಮೇಲಿನ ನರಕ ಅಂತಾ ಘೋಷಿಸಿ, 30 ದಿನಗಳ ಕದನ ವಿರಾಮ ಒಪ್ಪಂದ ಕುದುರಿಸಿತ್ತು. ವಿಶ್ವಸಂಸ್ಥೆಯಲ್ಲಿ 30 ದಿನಗಳ ಕದನ ವಿರಾಮಕ್ಕೆ ಸಿರಿಯಾ ಹಾಗೂ ರಷ್ಯಾ ತಲೆಯಾಡಿಸಿ ಒಪ್ಪಿಗೆ ಸೂಚಿಸಿದ್ದವು. ಆದರೆ ಸಿರಿಯಾದಿಂದ ಬರುತ್ತಿರುವ ವರದಿಗಳು ಪ್ರಕಾರ, ಕದನ ವಿರಾಮ ಜಾರಿಯಾಗಿಲ್ಲ.

ಸಿರಿಯಾ ಸೇನೆ, ಪೂರ್ವ ಘೌಟಾದಲ್ಲಿ ದಾಳಿ ಮುಂದುವರಿಸಿದೆ. ಜೊತೆಗೆ ರಷ್ಯಾ ಅಧ್ಯಕ್ಷ ಪುಟಿನ್ ನೀಡಿದ್ದ 5 ಗಂಟೆಗಳ ಕದನ ವಿರಾಮ ಥಿಯರಿಯು ಈ ವರದಿಗಳನ್ನು ಪುಷ್ಠಿಕರಿಸಿದೆ. ವಿಶ್ವಸಂಸ್ಥೆ 30 ದಿನ ಕದನ ವಿರಾಮ ಪಾಲಿಸಿ ಅಂತಾ ಹೇಳಿತ್ತು.  ಆದರೆ ಪುಟಿನ್ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆತನಕ ಒಟ್ಟಾರೆ ದಿನಕ್ಕೆ 5 ಗಂಟೆ ಮಾತ್ರ ಕದನ ವಿರಾಮ ಅಂತಾ ಹೇಳಿದ್ದಾರೆ. ಈ 5 ಗಂಟೆ ಘೌಟಾದಲ್ಲಿ ಸಿಲುಕಿರುವ ಜನರು ಹಾಗೂ ಗಾಯಾಳುಗಳನ್ನ ಸ್ಥಳಾಂತರಿಸಲು ಪುಟಿನ್ ನೀಡಿರುವ ಕಾಲಾವಧಿಯಷ್ಟೇ.  ಆದರೆ ವರದಿಗಳ ಪ್ರಕಾರ, ಈ ಐದು ಗಂಟೆಗಳ ಕದನ ವಿರಾಮವೂ ಜಾರಿಯಾಗುತ್ತಿಲ್ಲ. ಜನರನ್ನು ಸ್ಥಳಾಂತರ ಮಾಡುತ್ತಿರುವ ಕಾರಿಡಾರ್
ಗಳ ಮೇಲೆಯೂ ಬಾಂಬ್‌ ಸುರಿಮಳೆ ಬೀಳುತ್ತಿದೆ.

ಸಿರಿಯಾದಲ್ಲಿ ನಾಗರಿಕ ಯುದ್ಧದ ಉಗಮ:

ಸಿರಿಯಾದಲ್ಲಿ ಇಂದು ಮಕ್ಕಳ ಮಾರಣಹೋಮ, ಅಮಾಯಕರ ಕಗ್ಗೊಲೆ ಮತ್ತು ನಿತ್ಯ ಬಾಂಬಿನ ಮೊರೆತೆ ಯಾಕೆ ನಡೆಯುತ್ತಿದೆ ಗೊತ್ತಾ? ಇದರ ಬೆನ್ನು ಬಿದ್ದು ಹೊರಟರೆ, ಇತಿಹಾಸ ನಮ್ಮನ್ನು 70 ವರ್ಷ ಹಿಂದೆ ಕರೆದುಕೊಂಡು ಹೋಗುತ್ತದೆ. ಮೊದಲ ಮಹಾಯುದ್ಧದ ನಂತರ ಯುರೋಪಿಯನ್ (ಫ್ರೆಂಚ್ ಹಾಗೂ ಯುಕೆ) ರಾಷ್ಟ್ರಗಳು, ಮಧ್ಯಪ್ರಾಚ್ಯ ರಾಷ್ಟ್ರಗಳ ಗಡಿ ಗುರುತಿಸುತ್ತವೆ. ತಮಗೆ ಬೇಕಾದ ಹಾಗೆ ದೇಶಗಳನ್ನ ಸೀಳಿ, ಗೆರೆ ಹಾಕಿ ಗಡಿ ಗುರುತಿಸುತ್ತವೆ. ಒಂದೇ ದೇಶದಲ್ಲಿ ಹಲವು ಸಂಸ್ಕೃತಿ, ಧರ್ಮ, ಜನಾಂಗದ ಜನರನ್ನ ಸೇರಿಸುತ್ತವೆ. ಸಿರಿಯಾ ರಚನೆಯಾದದ್ದು ಸಹ ಯುರೋಪಿಯನ್ನರ ಪೆನ್ನು, ಪೆನ್ಸಿಲ್ ಗೀಟಿನಿಂದಲೇ. ಸಿರಿಯಾದಲ್ಲಿ ಅಲಾವೈಟ್, ಕುರ್ದಿಸ್, ಡ್ರೂಜ್ ಹಾಗೂ ಸುನ್ನಿ ಹೀಗೆ ಹಲವು ಧರ್ಮದ ಜನರಿದ್ದಾರೆ. ಹೀಗೆ ರಚನೆಯಾದ ಸಿರಿಯಾ ರಾಷ್ಟ್ರ ಎರಡನೇ ಮಹಾಯುದ್ಧದ ಬಳಿಕ ಫ್ರಾನ್ಸ್‌ನಿಂದ ಸ್ವಾತಂತ್ರ ಪಡೆಯುತ್ತದೆ.

ಚಿತ್ರಕೃಪೆ: ಬಿಬಿಸಿ
ಚಿತ್ರಕೃಪೆ: ಬಿಬಿಸಿ

ಸ್ವಾತಂತ್ರ್ಯದ ಬಳಿಕ ಮಿಲಿಟರಿ ಆಡಳಿತ, ಪ್ರಜಾಪ್ರಭುತ್ವ, ಸಂಸದೀಯ ಆಡಳಿತ, ಅಧ್ಯಕ್ಷೀಯ ಪ್ರಾಬಲ್ಯ ಹೀಗೆ ಹಲವು ಬಗೆಯ ಆಡಳಿತ ವ್ಯವಸ್ಥೆಗಳನ್ನ ಸಿರಿಯಾ ಕಂಡಿದೆ. ಜೊತೆಗೆ ಹಲವು ದಂಗೆಗಳನ್ನು ಅದು ಎದಿರಿಸಿದೆ. ಹಲವು ದಂಗೆಗಳ ಬಳಿಕ ಸಿರಿಯಾದಲ್ಲಿ ಗಟ್ಟಿಯಾಗಿ ನಿಂತಿದ್ದು ಅಧ್ಯಕ್ಷೀಯ ಆಡಳಿತ. ಸೇನೆಯನ್ನು ಹಾಗೂ ದೇಶದ ಅಧಿಕಾರವನ್ನು ಕೈಯಲ್ಲಿಟ್ಟುಕೊಂಡ ಅಲ್ಲಿನ ಅಧ್ಯಕ್ಷ ಪ್ರಬಲರಾಗುತ್ತಾರೆ. ಹೀಗೆ ಅಧಿಕಾರ ಹಿಡಿದವನೇ ಹಫೆಜ್ ಅಲ್ ಅಸಾದ್. 1971ರಲ್ಲೇ ಸಿರಿಯಾದ ಚುಕ್ಕಾಣಿ ಹಿಡಿದ ಹಫೆಜ್ ಅಲ್ ಅಸಾದ್, ತನ್ನ ಮರಣದವರೆಗೂ ಅಂದರೆ 2000 ಇಸ್ವಿಯವರೆಗೂ ಸಿರಿಯಾವನ್ನು ಆಳುತ್ತಾನೆ. ಹಫೆಜ್ ಸಾವಿನ ಬಳಿಕ ಮಗ ಬಷರ್ ಅಲ್ ಅಸಾದ್ (ಈಗಿನ ಅಧ್ಯಕ್ಷ) ಅಧಿಕಾರಕ್ಕೆ ಬರುತ್ತಾನೆ. ಅಲ್ಲಿಂದ ಈ ಕ್ಷಣದವರೆಗೆ ಬಷರ್ ಅಲ್ ಅಸಾದ್ ಸಿರಿಯಾದ ಎಲ್ಲ ಅಧಿಕಾರವನ್ನು ಹೊಂದಿರೋ ವ್ಯಕ್ತಿ.

ನಾಗರಿಕ ಯುದ್ಧಕ್ಕೆ ಕಾರಣ..?

ಕಳೆದ ಅರ್ಧ ಶತಮಾನದಿಂದ ಸಿರಿಯಾವನ್ನು ಅಸಾದ್ ಕುಟುಂಬ ಆಳುತ್ತಿದೆ. ಈ ಅಸಾದ್ ಕುಟುಂಬ ಅಲಾವೈಟ್ ಸಮುದಾಯಕ್ಕೆ ಸೇರಿದ ಕುಟುಂಬ. ಅಪ್ಪ ಹಫೆಜ್ ಅಸಾದ್ ಹಾಗೂ ಮಗ ಬಷರ್ ಅಸಾದ್, ಸಿರಿಯಾದ ಬಹುಸಂಖ್ಯಾತ ಸುನ್ನಿ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ ಅನ್ನೋ ಭಾವ ಮೊದಲಿನಿಂದಲೂ ಇದೆ. ಜೊತೆಗೆ, ಅಸಾದ್ ಕುಟುಂಬದ ದುರಾಡಳಿತದಿಂದ ಬೇಸತ್ತ ಜನರು ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಇಳಿಯುವಂತೆ ಮಾಡುತ್ತದೆ. ಈಜಿಪ್ತ್ರಾಷ್ಟ್ರಗಳಲ್ಲಿ ಪ್ರಭುತ್ವಗಳನ್ನ ಯಶಸ್ವಿಯಾಗಿ ಕಿತ್ತೊಗೆದ ಅರಬ್ ಸ್ಪ್ರಿಂಗ್, ಸಿರಿಯಾ ಜನರ ಹೋರಾಟಕ್ಕೂ ಸ್ಪೂರ್ತಿ ನೀಡಿತ್ತು. 2011ರಲ್ಲಿ ರಾಜಧಾನಿ ಡೆಮಾಸ್ಕಸ್‌ನಲ್ಲಿ
ಅಸಾದ್ ರಾಜೀನಾಮೆಗೆ ಆಗ್ರಹಿಸಿ ಜನರು ಹೋರಾಟ ಶುರು ಮಾಡಿದರು. ಆವತ್ತು ಅಧ್ಯಕ್ಷ ಅಸಾದ್, ಸೈನ್ಯವನ್ನು ಬಳಸಿ ಹಲವರನ್ನು ಕೊಂದೇ ಹಾಕಿ ಬಿಡುತ್ತಾನೆ. ಈ ಕ್ರೌರ್ಯದ ಜೊತೆಗೆ ಮತ್ತೊಂದು ದುರಂತ ನಡೆದು ಹೋಗುತ್ತದೆ. ಅದು ಖತೀಬ್ ಎನ್ನುವ ಬಾಲಕನ ಹತ್ಯೆ.

ಶಾಲೆಯೊಂದರ ಗೋಡೆ ಮೇಲೆ ಸರ್ಕಾರದ ವಿರುದ್ಧ ಘೋಷಣೆ ಬರೆದರು ಎನ್ನುವ ಆರೋಪದ ಮೇಲೆ ಸಿರಿಯಾ ಸರ್ಕಾರ, 15 ಬಾಲಕರನ್ನು ಬಂಧಿಸುತ್ತದೆ. ಅದರಲ್ಲಿ ಖತೀಬ್ ಸಹ ಇದ್ದ. ಸಿರಿಯಾ ಸೇನೆ 13 ವರ್ಷದ ಬಾಲಕ ಖತೀಬ್‌ಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡುತ್ತದೆ. ಖತೀಬ್ ಮೃತದೇಹದ ಮೇಲೆ ಮೂಡಿದ್ದ ಕ್ರೌರ್ಯದ ಕಲೆಗಳು ಅಸಾದ್ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡುತ್ತವೆ. ಅಸಾದ್, ಜನರ ಪ್ರತಿಭಟನೆ ಹತ್ತಿಕ್ಕಲು ಬಲವನ್ನು ಪ್ರಯೋಗಿಸಲು ಆರಂಭಿಸುತ್ತಾನೆ. ಹೀಗಾಗಿ ಜನರೂ ಸಹ ಸಿರಿಯಾ ಸೇನೆ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅಣಿಯಾಗುತ್ತಾರೆ. ತಮ್ಮ ಹಳ್ಳಿ, ಪಟ್ಟಣ, ಮತ್ತು ನಗರಗಳನ್ನು ವಶಕ್ಕೆ ಪಡೆದು ಸಿರಿಯಾ ಸೇನೆಗೆ ಸವಾಲು ಹಾಕುತ್ತಾರೆ. ಇಲ್ಲಿಂದಲೇ ಶುರುವಾಗಿದ್ದು ಸಿರಿಯಾ ನಾಗರಿಕ ಯುದ್ಧ. ಸಮುದಾಯದ ಕಾರಣಕ್ಕೆ ಮತ್ತು ಧರ್ಮದ ಕಾರಣಕ್ಕೆ ಐಎಸ್‌ನಂತಹ ಸಂಘಟನೆಗಳು ಸಿರಿಯಾ ಜನರ ಹೋರಾಟಕ್ಕೆ ಬೆಂಬಲ ನೀಡುತ್ತವೆ. ಸಿರಿಯಾ ಸೇನೆ ಹಾಗೂ ಬಂಡಾಯಗಾರರ ಹೋರಾಟದ ಫಲವಾಗಿ ಇಂದು ಸಿರಿಯಾಲ್ಲಿ ರಕ್ತ ಹರಿಯುತ್ತಿದೆ.

ಅಮೆರಿಕ ಮತ್ತು ರಷ್ಯಾ ಕೈಯಲ್ಲಿ ರಕ್ತದ ಕಲೆ..!

ಚಿತ್ರಕೃಪೆ: huffingtonpost.com
ಚಿತ್ರಕೃಪೆ: huffingtonpost.com

ಯುದ್ಧ ನಡೆಯುತ್ತಿರೋದು ಅಸಾದ್ ಹಾಗೂ ಆತನ ವಿರೋಧಿ ಗುಂಪಿನ ಮಧ್ಯೆಯಾದರೂ ಅದನ್ನ 8 ವರ್ಷಗಳಿಂದ ಜೀವಂತವಾಗಿಟ್ಟ ಅಪಕೀರ್ತಿ ಅಮೆರಿಕ ಹಾಗೂ ರಷ್ಯಾಗೆ ಸಲ್ಲುತ್ತದೆ. ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ನೆಪದಲ್ಲಿ ಅಮೆರಿಕ ದೇಶವು ಬಂಡಾಯಗಾರರಿಗೆ ಹಾಗೂ ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಲು ರಷ್ಯಾ ಅಸಾದ್‌ಗೆ ಬೆಂಬಲ ನೀಡುತ್ತಲೇ ಬಂದಿವೆ. ಈ ಎರಡು ದೇಶಗಳು ಪರಸ್ಪರ ವಿರೋಧಿ ಬಣಗಳಿಗೆ ಶಸ್ತ್ರಾಸ್ತ್ರ ಸಹಾಯ ಮಾಡುತ್ತಾ ಮುಗ್ಧ ಕಂದಮ್ಮಗಳ ಕಗ್ಗೊಲೆಯಲ್ಲಿ ಸಮಪಾಲು ಪಡೆಯುತ್ತಿವೆ. ಮಧ್ಯಪ್ರಾಚ್ಯದಲ್ಲಿ ಹಿಡಿತ ಸಾಧಿಸುವ ಅಮೆರಿಕ ಹಾಗೂ ರಷ್ಯಾಗಳ ಹಪಾಹಪಿ, ಸಿರಿಯಾ ದೇಶವನ್ನು ನರಕವಾಗಿಸಿದೆ. ಸಿರಿಯಾದ ಮಕ್ಕಳು ಮನುಷ್ಯತ್ವದ ಮೇಲೆ ನಂಬಿಕೆ ಕಳೆದುಕೊಂಡು, ದೇವರೇ ನಮ್ಮನ್ನು ಕಾಪಾಡು ಅಂತಾ ಆರ್ತನಾದ ಹೊರಡಿಸುವಂತಿವೆ.