‘ಸಮಾಚಾರ IMPACT’: ದೇವಿಶೆಟ್ಟಿ ಆಪರೇಷನ್‌ಗೆ ಎಳ್ಳು ನೀರು ಬಿಟ್ಟ ರಾಜ್ಯ ಸರಕಾರ!
COVER STORY

‘ಸಮಾಚಾರ IMPACT’: ದೇವಿಶೆಟ್ಟಿ ಆಪರೇಷನ್‌ಗೆ ಎಳ್ಳು ನೀರು ಬಿಟ್ಟ ರಾಜ್ಯ ಸರಕಾರ!

ಚುನಾವಣೆಯ ಪೂರ್ವದಲ್ಲಿ ಸರಕಾರಿ ಆಸ್ಪತ್ರೆಯನ್ನು ಖಾಸಗೀ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಜನರ ವಿರೋಧ ಕಟ್ಟಿಕೊಳ್ಳುವು ಬೇಡ ಎಂಬ ಕಾರಣಕ್ಕೋ ಅಥವಾ ಸಂಘಟನೆಗಳ ಪ್ರತಿರೋಧದ ಕಾರಣಕ್ಕೋ ಸರಕಾರ ಹಸ್ತಾಂತರ ಪ್ರಕ್ರಿಯೆಯನ್ನು ಕೈಬಿಟ್ಟಿದೆ. 

ಸಾರ್ವಜನಿಕರ ತೆರಿಗೆ ಹಣದಲ್ಲಿ ಸುಮಾರು 40 ಕೋಟಿ ರೂ.ಗಳಷ್ಟು ಖರ್ಚಿನಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿನಗರ ಬ್ರಾಡ್‌ವೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಾರಾಯಣ ಹೃದಯಾಲಯಕ್ಕೆ ಹಸ್ತಾಂತರಿಸಲು ಸರಕಾರ ಮುಂದಾಗಿತ್ತು. ಈ ಬಗ್ಗೆ ಕೊನೆಯ ಹಂತದ ಪ್ರಕ್ರಿಯೆ ನಡೆಯುತ್ತಿದ್ದಾಗ, ‘ಸಮಾಚಾರ’ ಸರಕಾರ ಕ್ರಮವನ್ನು ಪ್ರಶ್ನಿಸಿ ವರದಿ ಮಾಡಿತ್ತು. ಇದೀಗ ಆಸ್ಪತ್ರೆ ಹಸ್ತಾಂತರ ಪ್ರಕ್ರಿಯೆಯನ್ನು ನಿಲ್ಲಿಸಿದ್ದು, ಸರಕಾರವೇ ಆಸ್ಪತ್ರೆಯನ್ನು ನಡೆಸಲಿದೆ. ಸಾರ್ವಜನಿಕ ಆರೋಗ್ಯ ಸೇವೆಗೆ ಈ ತೀರ್ಮಾನ ಸ್ವಾಗತಾರ್ಹವಾಗಿದ್ದು, ಬಡ ಜನರಿಗೆ ಕಡಿಮೆ ದರದಲ್ಲಿ ಸೇವೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸಲಿದೆಯಾ ಎಂಬುದನ್ನು ಕಾದು ನೋಡಬೇಕು.

ಕರ್ನಾಟಕ ರಾಜ್ಯ ಜನಾರೋಗ್ಯ ಚಳವಳಿ ಮೊದಲ ಬಾರಿಗೆ ಆಸ್ಪತ್ರೆ ಹಸ್ತಾಂತರ ಪ್ರಕ್ರಿಯೆಯನ್ನು ಕೈಬಿಡುವಂತೆ ಕೋರಿ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿತ್ತು. ಅದರ ಬೆನ್ನಲ್ಲೇ ‘ಸಿದ್ದು ಸರಕಾರಕ್ಕೆ ‘ದೇವಿಶೆಟ್ಟಿ ಆಪರೇಶನ್’: ಜನರ ಹಣ; ಆಸ್ಪತ್ರೆ ಖಾಸಗೀಕರಣ?‘ ಎಂಬ ಶೀರ್ಷಿಕೆಯಲ್ಲಿ ಸರಕಾರ ಮತ್ತು ನಾರಾಯಣ ಹೃದಯಾಲಯ ನಡುವೆ ಆಗಿರುವ ಒಪ್ಪಂದ ಮತ್ತು ತರಾತುರಿಯಲ್ಲಿ ಕ್ಯಾಬಿನೆಟ್‌ ಅನುಮೋದನೆಗೆ ಹೊರಟಿರುವ ಬಗ್ಗೆ ವರದಿ ಮಾಡಿತ್ತು. ಆಸ್ಪತ್ರೆ ಖಾಸಗೀಕರಣದ ಹಿಂದೆ ಇರಬಹುದಾದ ಕಾಣದ ಕೈಗಳ ಪಿತೂರಿಯನ್ನೂ ವರದಿಯಲ್ಲಿ ಬಯಲು ಮಾಡಲಾಗಿತ್ತು. ಈಗ ಸರಕಾರ ಪ್ರಸ್ತಾವನೆಯನ್ನು ಕೈ ಬಿಡುವ ಮೂಲಕ ಸಾರ್ವಜನಿಕರ ಮತ್ತು ಜನಾರೋಗ್ಯ ಚಳವಳಿಯ ಮನವಿಗೆ ತಲೆಬಾಗಿದೆ.

ತಲೆಬಾಗಿದ ಸರಕಾರ:

ಪ್ರಗತಿಪರ ಚಿಂತಕರು ಹಾಗೂ ಬರಹಗಾರರಾದ ಜಿ. ರಾಮಕೃಷ್ಣರವರ ನೇತೃತ್ವದಲ್ಲಿ ರಾಜ್ಯದ 11 ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಫೆಬ್ರವರಿ 27ರಂದು ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್‌ರನ್ನು ಭೇಟಿ ಮಾಡಿದ್ದರು. ಯಾವುದೇ ಕಾರಣಕ್ಕೂ ಶಿವಾಜಿನಗರದ ಬ್ರಾಡ್ವೇ ರಸ್ತೆಯಲ್ಲಿನ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಬಾರದೆಂದು ಒತ್ತಾಯಿಸಿದರು. ಖಾಸಗಿ ವೈದ್ಯಕೀಯ ಸಂಸ್ಥೆಗೆ ಆಸ್ಪತ್ರೆಯನ್ನು ಹಸ್ತಾಂತರ ಮಾಡಿದಲ್ಲಿ ಸರಕಾರ ತನ್ನ ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ ಎಂದು ಮನವಿ ಮಾಡಿದ್ದರು.

ನಾಗರಿಕರನ್ನು ಖಾಸಗಿ ಆಸ್ಪತ್ರೆಗಳ ಲಾಭಖೋರತನಕ್ಕೆ ಬಲಿಕೊಟ್ಟು, ಖಾಸಗಿ ಸಂಸ್ಥೆಗಳು ಸರ್ಕಾರದ ಹಣ ಲೂಟಿ ಮಾಡಲು ಅವಕಾಶ ನೀಡಿದಂತಾಗುತ್ತದೆ ಎಂಬುದಾಗಿಯೂ ಹೇಳಿದ್ದರು. ಆಸ್ಪತ್ರೆಯನ್ನು ನಾರಾಯಣ ಹೆಲ್ತ್ ಸಂಸ್ಥೆಗೆ ಹಸ್ತಾಂತರಿಸುವ ಎಲ್ಲಾ ಒಪ್ಪಂದಗಳನ್ನು ರದ್ದು ಮಾಡುವಂತೆ ತಕ್ಷಣ ಆದೇಶ ಹೊರಡಿಸಬೇಕು ಮತ್ತು ಆಸ್ಪತ್ರೆಯ ಉಸ್ತುವಾರಿಯನ್ನು ಆರೋಗ್ಯ  ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆ ವಹಿಸಿಕೊಳ್ಳುವಂತೆ ತುರ್ತು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದರು.

ಭೇಟಿ ಮಾಡಿದ ಸಾಮಾಜಿಕ ಕಾರ್ಯಕರ್ತರಿಗೆ ರೋಷನ್‌ ಬೇಗ್‌ ಹಸ್ತಾಂತರ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಮಾತು ಕೊಟ್ಟಿದ್ದರು. ಒಂದು ವೇಳೆ ಜನರಿಗೆ ತಿಳಿಯದೇ ಕ್ಯಾಬಿನೆಟ್‌ ಅನುಮೋದನೆ ಆಗಿದ್ದಲ್ಲಿ, ಹಸ್ತಾಂತರ ಪ್ರಕ್ರಿಯೆ ಕೈಬಿಡಲು ಸಾಧ್ಯವಾಗುತ್ತಿರಲಿಲ್ಲ. ಜನರ ಒತ್ತಾಯದಿಂದಲೋ ಅಥವಾ ಮಾಡಲು ಹೊರಟಿದ್ದ ತಪ್ಪಿನ ಅರಿವಿನಿಂದಲೋ ಸದ್ಯಕ್ಕೆ ಆಸ್ಪತ್ರೆಯನ್ನು ಸರಕಾರವೇ ನಡೆಸುವಂತಾಗಿದೆ. ಸರಕಾರದ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಆಸ್ಪತ್ರೆಯ ಆಡಳಿತವನ್ನು ಬೌರಿಂಗ್‌ ಆಸ್ಪತ್ರೆಗೆ ನೀಡಲು ಸರಕಾರ ನಿರ್ಧರಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದ ನಂತರ ಬೌರಿಂಗ್‌ ಆಸ್ಪತ್ರೆಗೆ ಅಧಿಕಾರ ಹಸ್ತಾಂತರವಾಗಲಿದೆ.

ಮಂಗಳವಾರ ರೋಷನ್‌ ಬೇಗ್‌ ಭೇಟಿಯ ನಂತರ ಕರ್ನಾಟಕ ಜನಾರೋಗ್ಯ ಚಳವಳಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಪ್ರಕಟಣೆಯ ಪ್ರಕಾರ, “ಮುಖ್ಯವಾಗಿ, ಸರ್ಕಾರ ತನ್ನ ನಿರ್ಧಾರವನ್ನು ಈ ಒಂದು ಸಂಸ್ಥೆಗೆ ಮಾತ್ರ ಸೀಮಿತಗೊಳಿಸ ಬಾರದು. ಬದಲಿಗೆ, ಈ ವರೆಗೆ ಹಸ್ತಾಂತರವಾಗಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಮತ್ತು ಆರೋಗ್ಯ ಕೇಂದ್ರಗಳನ್ನು ಹಿಂಪಡೆದು ಈ ಮುಲಕ ಜನವಿರೋಧಿ ನೀತಿಗಳನ್ನು ಕೈಬಿಡಬೇಕು. ರಾಜ್ಯ ಸರಕಾರ ಈ ತರಹದ ಖಾಸಗೀಕರಣ ಪ್ರಕ್ರಿಯೆಗಳನ್ನು ಮುಂದುವರಿಸುವುದಿಲ್ಲ ಎಂಬ ನಿರ್ಧಾರ ಪಡೆಯಬೇಕು,” ಎಂದು ಕೋರಲಾಗಿದೆ.

ಏನಿದು ಪ್ರಕರಣ?:

ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ 2014ರಲ್ಲಿ ಶಿವಾಜಿನಗರದ ಬ್ರಾಡ್‌ವೇ ರಸ್ತೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಕೈಹಾಕಿತ್ತು. 20 ಸಾವಿರ ಚದರ ಅಡಿಯಲ್ಲಿ ಸುಮಾರು 40 ಕೋಟಿ ರೂಪಾಯಿ ಖರ್ಚಿನಲ್ಲಿ ಈಗ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಅಂತ್ಯಗೊಂಡಿದೆ. ಆಸ್ಪತ್ರೆಯಲ್ಲಿ 100 ಬೆಡ್‌ ವ್ಯವಸ್ಥೆಯಿದ್ದು, ಜನಸಾಮಾನ್ಯರಿಗೆ, ಪೌರಕಾರ್ಮಿಕರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಾರ್ವಜನಿಕರಿಗೆಂದು ಈ ಆಸ್ಪತ್ರೆಯನ್ನು ಬಿಬಿಎಂಪಿ ನಿರ್ಮಿಸುವ ಉದ್ದೇಶ ಹೊಂದಿತ್ತು.

ಆದರೆ ಆಸ್ಪತ್ರೆ ನಿರ್ಮಾಣ ಕಾರ್ಯ ಮುಗಿಯುತ್ತಲೇ, ಬಿಬಿಎಂಪಿ ಮತ್ತು ಸರಕಾರದ ನಿಲುವು ಬದಲಾದಂತಿದೆ. ಜನಸಾಮಾನ್ಯರಿಗೆ ಎಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ಬದಲು ಬರೋಬ್ಬರಿ 30 ವರ್ಷಗಳ ಕಾಲ ಭೋಗ್ಯಕ್ಕೆ ನೀಡಲು ಕ್ಯಾಬಿನೆಟ್‌ ಅನುಮೋದನೆ ಪಡೆಯಲು ಮುಂದಾಗಿದೆ. ಮುಂಬರುವ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಲಿದ್ದು, ಕೇವಲ ಬಿಬಿಎಂಪಿ ಆರೋಗ್ಯ ಇಲಾಖೆ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಕಾನೂನು ಮತ್ತು ಹಣಕಾಸು ಇಲಾಖೆಗಳು ಹಾಗೂ ಬಿಬಿಎಂಪಿಯ ಈ ‘ಖಾಸಗೀಕರಣ’ದ ಚಿಂತನೆಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಿತ್ತು.

ಒಂದೆಡೆ “ನಾವು ಸಾರ್ವತ್ರಿಕವಾಗಿ ಆರೋಗ್ಯ ಸೇವೆಗಳನ್ನು ನಾಡಿನ ಜನರಿಗೆ ಉಚಿತವಾಗಿ ನೀಡುತ್ತೇವೆ,” ಎಂದು ಸಾರುತ್ತ, ಮತ್ತೊಂದೆಡೆ ನಾಡಿನ ಜನರನ್ನು ಕಾರ್ಪೊರೇಟ್‌ ಶಕ್ತಿಗಳ ಔದಾರ್ಯದ ಭಿಕ್ಷೆ ಬೇಡುವಂತೆ ಮಾಡುವ ಹುನ್ನಾರ ಇದಾಗಿದೆ. ಈ ರೀತಿಯ ಅಭಿವೃದ್ಧಿ ಮಾದರಿಯ ಸಹಜವಾಗಿಯೇ ಆತಂಕ ಉಂಟುಮಾಡುತ್ತಿದೆ. ಅದರ ಜತೆಗೆ ಹಸ್ತಾಂತರ ಪ್ರಕ್ರಿಯೆಯನ್ನು ಗುಪ್ತವಾಗಿ ತರಾತುರಿಯಲ್ಲಿ ನಡೆಸುತ್ತಿರುವುದನ್ನು ಗಮನಿಸಿದಾಗ ಪಟ್ಟಬದ್ದ ಹಿತಾಸಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು.

ಹಸ್ತಾಂತರ ಪ್ರಕ್ರಿಯೆಗೆ ಕ್ಯಾಬಿನೆಟ್‌ ಅನುಮೋದನೆ ದೊರಕಿದ್ದೇ ಆದಲ್ಲಿ, ಬೆಂಗಳೂರಿನ ಸಾಮಾನ್ಯ ಜನ ಆರೋಗ್ಯ ಸೇವೆಗಾಗಿ ಕಾರ್ಪೊರೇಟ್‌ ಸಂಸ್ಥೆಯಾದ ನಾರಾಯಣ ಹೃದಯಾಲಯಕ್ಕೆ ಕೈ ಚಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. “ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಹೀಗಿರುವಾಗ ಸರಕಾರವೇ ಮುಂದೆ ನಿಂತು ಜನರ ಹಣದಲ್ಲಿ ನಿರ್ಮಿಸಿದ ಸುಸಜ್ಜಿತ ಆಸ್ಪತ್ರೆ ಕಟ್ಟಡವನ್ನು ಖಾಸಗಿಯವರಿಗೆ ನೀಡಲು ಹೊರಟಿರುವುದು ಅನುಮಾನ ಮೂಡಿಸುತ್ತಿದೆ,” ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಆದ ಖರ್ಚು 40 ಕೋಟಿ ರೂಪಾಯಿಗಳು. ಅದರ ಜತೆಗೆ ರಾಷ್ಟ್ರೀಯ ಅಕ್ರೆಡಿಟೇಶನ್ ಬೋರ್ಡ್ ಮಾನದಂಡಗಳಿಗೆ ಸರಿಹೊಂದಲು ಇನ್ನೂ 11.17 ಕೋಟಿ ರೂ ಖರ್ಚು ಮಾಡಬೇಕು ಎಂಬ ಷರತ್ತನ್ನು ನಾರಾಯಣ ಹೃದಯಾಲಯ ಹಾಕಿತ್ತು. ನಾರಾಯಣ ಹೃದಯಾಲಯ ಶೇಕಡ 10% ಹಾಸಿಗೆಗಳನ್ನು ಉಚಿತ ಹಾಸಿಗೆಗಳಾಗಿ ಮೀಸಲಿಟ್ಟು, ಉಳಿದ ಶೇಕಡ 90% ಹಾಸಿಗೆಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತು. ಈ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಸೇರುವ ಒಟ್ಟೂ ಲಾಭದ 3% ಆದಾಯವನ್ನು ಮಾತ್ರ ಉಚಿತ ಚಿಕಿತ್ಸೆಗೆ ನೀಡುವ ಪ್ರಸ್ತಾಪವಿಟ್ಟು, ಔಷದಿಗಳ ಮತ್ತು ಇನ್ನಿತರ ವೈದ್ಯಕೀಯ ಖರ್ಚಿನ ಹೊರೆಯನ್ನು ಮತ್ತೆ ಜನಸಾಮಾನ್ಯರ ಮೇಲೆ ಹೊರಿಸಲು ಮುಂದಾಗಿತ್ತು. ಹಸ್ತಾಂತರ ಪ್ರಕ್ರಿಯೆ ಆಗಿದ್ದಲ್ಲಿ, ನೂರರಲ್ಲಿ ಒಂದು ಆಸ್ಪತ್ರೆಯಾಗಿ ಜನರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿತ್ತು. ಮತ್ತು 30 ವರ್ಷಗಳ ಭೋಗ್ಯಕ್ಕೆ ನಾರಾಯಣ ಹೃದಯಾಲಯ ಕೊಡಲು ಸರಕಾರ ಕೇವಲ 20 ಕೋಟಿ ರೂಪಾಯಿಗಳಿಗೆ ಒಪ್ಪಿಕೊಂಡಿತ್ತು.

ಚುನಾವಣೆಯ ಪೂರ್ವದಲ್ಲಿ ಸರಕಾರಿ ಆಸ್ಪತ್ರೆಯನ್ನು ಖಾಸಗೀ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಜನರ ವಿರೋಧ ಕಟ್ಟಿಕೊಳ್ಳುವು ಬೇಡ ಎಂಬ ಕಾರಣಕ್ಕೋ ಅಥವಾ ಸಂಘಟನೆಗಳ ಪ್ರತಿರೋಧದ ಕಾರಣಕ್ಕೋ ಸರಕಾರ ಹಸ್ತಾಂತರ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಜನಾರೋಗ್ಯ ಚಳವಳಿ ಮಾಡಿರುವ ಬೇಡಿಕೆಯಂತೆ ಖಾಸಗಿ ಸಂಸ್ಥೆಗಳಿಗೆ ನೀಡಿರುವ ಎಲ್ಲಾ ಸರಕಾರಿ ಆರೋಗ್ಯ ಕೇಂದ್ರಗಳನ್ನು ಸರಕಾರ ಹಿಂಪಡೆದು, ಕಡಿಮೆ ದರದಲ್ಲಿ ಜನರಿಗೆ ಆರೋಗ್ಯ ಸೇವೆ ಕೊಡುವ ಕೆಲಸಕ್ಕೆ ಮುಂದಾಗಲಿ.