samachara
www.samachara.com
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ: ಖಾಸಗಿ ಲಾಬಿಯ ಮುಂದೆ ಮಂಡಿಯೂರಿದ ‘ಸದಾ ಸಿದ್ಧ ಸರ್ಕಾರ’  
COVER STORY

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ: ಖಾಸಗಿ ಲಾಬಿಯ ಮುಂದೆ ಮಂಡಿಯೂರಿದ ‘ಸದಾ ಸಿದ್ಧ ಸರ್ಕಾರ’  

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿ ಕೊನೆಯಲ್ಲಿ ಟುಸ್‌ ಪಟಾಕಿಯಂತಾದ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆಯ ನಿಯಮಾವಳಿಗಳನ್ನು ಕರ್ನಾಟಕ ಸರಕಾರ ಫೆ.9ರಂದು ಬಿಡುಗಡೆಗೊಳಿಸಿತ್ತು. ನಿಯಮಾವಳಿಗಳ ಕುರಿತಾದ ಆಕ್ಷೇಪಗಳನ್ನು ಮುಂದಿಡಲು ಕಳೆದ ಶನಿವಾರದವರೆಗೂ ಸಮಯಾವಕಾಶ ನೀಡಿತ್ತು. ಈ ನಿಯಮಾವಳಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ಹಲವಾರು ವಿರೋಧಗಳು ವ್ಯಕ್ತವಾಗಿವೆ.

ಕಳೆದ ವರ್ಷದ ಅಂತ್ಯದಲ್ಲಿ ಕರ್ನಾಟಕ ಸರಕಾರ ತರಲು ಹೊರಟ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಗೆ ಖಾಸಗಿ ವೈದ್ಯರಿಂದ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ವೈದ್ಯರು ನಡೆಸಿದ ಮುಷ್ಕರದಿಂದಾಗಿ ಹಲವಾರು ಜನ ಮೃತಪಟ್ಟು, ರೋಗಿಗಳು ಪರದಾಡುವಂತಾಗಿತ್ತು. ಮಸೂದೆಯನ್ನು ಹಿಂಪಡೆಯದಿದ್ದರೆ ವೈದ್ಯಕೀಯ ವೃತ್ತಿಯನ್ನೇ ತ್ಯಜಿಸುವುದಾಗಿ ಖಾಸಗಿ ವೈದ್ಯರು ಎಚ್ಚರಿಕೆ ನೀಡಿದ್ದರು.

ಮಸೂದೆಯೊಳಗಿನ ಅಂಶಗಳನ್ನು ಸರಿಯಾಗಿ ಗಮನಿಸದೇ ಖಾಸಗಿ ವೈದ್ಯರ ಪರ ನಿಂತ ಬಿಜೆಪಿ ಮತ್ತು ಜೆಡಿಎಸ್‌ಗಳಿಗೆ ಜನರ ಮುಂದೆ ಮುಖಭಂಗವಾಗಿತ್ತು. ಸಾರ್ವಜನಿಕ ವಲಯದಲ್ಲೂ ಮಸೂದೆ ಕುರಿತಾಗಿ ದೊಡ್ಡ ಚರ್ಚೆ ನಡೆದು, ಹಲವಾರು ಸಾಮಾಜಿಕ ಹೋರಾಟಗಾರರು ಸರಕಾರದ ಪರವಾಗಿ ಅಭಿಯಾನಗಳನ್ನು ನಡೆಸಿದ್ದರು. ಬಡವರ ಕಂಗಳಲ್ಲಿ ಭರವಸೆಯನ್ನು ಮೂಡಿಸಿದ್ದ ಈ ಮಸೂದೆ ಕೊನೆಗೆ ಹಲ್ಲಿಲ್ಲದ ಹಾವಿನಂತಾಗಿತ್ತು. ಈಗ ಕಾಯ್ದೆಯ ನಿಯಮಾವಳಿಗಳು ಜನರ ಭಾರವನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಹೊರೆಯನ್ನು ಹೇರುವ ಕಡೆಗೆ ಸಾಗುತ್ತಿವೆ.

ಏನಿದು ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ?

ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಮುಂದಾದ ಈ ಕಾಯ್ದೆ ಮೊದಲು ಬಂದಿದ್ದು 2007ರಲ್ಲಿ. ಖಾಸಗಿ ಆಸ್ಪತ್ರೆಗಳ ಸ್ಥಾಪನೆ ಮತ್ತು ಪಾಲಿಸಬೇಕಾದ ನಿಯಮಗಳನ್ನು ಈ ಕಾಯ್ದೆ ಹಾಕಿಕೊಟ್ಟಿತ್ತು. 2017ರಲ್ಲಿ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್‌ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಸರಕಾರದ ಕಾನೂನುಗಳ ಅಡಿಯಲ್ಲಿ ತರುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದರು. ವಿಕ್ರಮ್‌ ಜಿತ್‌ ಸೇನ್‌ ಸಮಿತಿ ಕರಡು ಮಸೂದೆಯನ್ನು ಸಿದ್ಧಪಡಿಸಿತ್ತು. ಸಮಿತಿಯ ವರದಿಯ ಜೊತೆಗೆ ಹಲವಾರು ಜನಪರವಾದ ಅಂಶಗಳನ್ನು ಸರಕಾರ ಮಸೂದೆಯಲ್ಲಿ ಸೇರಿಸಿತ್ತು.

ಈ ಮಸೂದೆಗೆ ಜನಸಾಮಾನ್ಯರು ಎಷ್ಟು ಸಂತಸಗೊಂಡಿದ್ದರೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡಾಕ್ಟರ್‌ಗಳ ಕಣ್ಣು ಕೆಂಪಗಾಗಿದ್ದವು. ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎಚ್‌.ಎನ್‌.ರವೀಂದ್ರ ಸಮಿತಿ ನೀಡಿದ ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕೆಂದು ವಾದಿಸಿದ್ದರು. ಸರಕಾರ ಮಸೂದೆಯಲ್ಲಿ ತಾನು ಸೇರಿಸಿರುವ ಅಂಶಗಳನ್ನು ತೆಗೆದುಹಾಕುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಾಖೀತು ಮಾಡಿದ್ದರು. ಯಾವ್ಯಾವ ಅಂಶಗಳು ಜನಪರ ಎನಿಸಿದ್ದವೋ ಆವೆಲ್ಲಾ ಖಾಸಗಿ ವೈದ್ಯರಿಗೆ ಕಂಟಕಪ್ರಾಯವಾಗಿದ್ದವು.

ವಿಕ್ರಮ್‌ಜಿತ್‌ ಸೇನ್‌ ತಮ್ಮ ವರದಿಯಲ್ಲಿ ಸರಕಾರಿ ಆಸ್ಪತ್ರೆಗಳು ಕೂಡ ಈ ವಿಧೇಯಕದ ನಿಯಮಗಳೊಳಗೆ ಕಾರ್ಯ ನಿರ್ವಹಿಸಬೇಕು ಎಂದಿದ್ದರು. ಆದರೆ ಈ ಅಂಶವನ್ನು ಸರಕಾರ ಪರಿಗಣಿಸದೇ ಕೇವಲ ಖಾಸಗಿ ವೈದ್ಯರ ಜುಟ್ಟು ಹಿಡಿಯಲು ಪ್ರಯತ್ನ ಪಟ್ಟಿದ್ದು, ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಜತೆಗೆ ಒಂದಿಡೀ ವೃತ್ತಿಪರ ಸಮುದಾಯವನ್ನೇ ಕ್ರಿಮಿನಲ್‌ಗಳಂತೆ ಸರಕಾರ ಬಿಂಬಿಸುತ್ತಿದೆ ಎಂಬ ವಾದ ವೈದ್ಯರ ಕಡೆಯಿಂದ ಬಂದಿತ್ತು.

ಈ ಮಸೂದೆಯಿಂದ ಬಡಜನರಿಗೆ ಅನಾನುಕೂಲವಾಗುತ್ತದೆ ಎಂಬ ಮಾತಿಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್‌ ಸುದ್ದಿ ಕೇಂದ್ರಕ್ಕೆ ಬಂದಿದ್ದರು. ಈ ಮಸೂದೆಯಿಂದ ಬಡವರಿಗೇನಾದರೂ ಅನ್ಯಾಯವಾದರೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಾರ್ವಜನಿಕ ಜೀವನದಿಂದ ಹೊರಗುಳಿಯುತ್ತೇನೆ ಎಂದು ಘೋಷಿಸಿದ್ದರು.

ಕಾಂಗ್ರೆಸ್‌ನ ಒಳಗೂ ಕೂಡ ಮಸೂದೆಯ ಕುರಿತಾಗಿ ವಿರೋಧಗಳಿದ್ದವು. ಮೆಡಿಕಲ್‌ ಕಾಲೇಜುಗಳನ್ನು ನಡೆಸುತ್ತಿದ್ದ ಹಲವಾರು ಗಣ್ಯರು ಕಾಂಗ್ರೆಸ್‌ನಲ್ಲೂ ಇದ್ದರು. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರದ್ದೇ ಸಿದ್ದಾರ್ಥ ಮೆಡಿಕಲ್‌ ಕಾಲೇಜ್‌ ಇದೆ. ಅದೇ ರೀತಿ ಕಾಂಗ್ರೆಸ್‌ನ ಹಲವು ಶಾಸಕರು ಖಾಸಗಿ ಆಸ್ಪತ್ರೆಗಳ ಮಾಲೀಕತ್ವ ಹೊಂದಿದ್ದಾರೆ.

ಮುಖ್ಯಮಂತ್ರಿಗಳ ಈ ನಡೆಗೆ ಕಾಂಗ್ರೆಸ್‌ ಶಾಸಕರುಗಳೇ ಅಸಮಾಧಾನ ಸೂಚಿಸಿದ್ದರು. ಸುತ್ತಲೂ ವಿರೋಧಗಳನ್ನು ಕಟ್ಟಿಕೊಂಡು ಜನಪರ ಕರಡು ಮಸೂದೆ ಮತ್ತೊಮ್ಮೆ ಪರಿಶೀಲನೆಗೆ ಒಳಪಟ್ಟಿತ್ತು. ರಮೇಶ್‌ ಕುಮಾರ್ ಹಠ ಸಾಧಿಸಿ ಮಸೂದೆಯನ್ನು ಮಂಡಿಸಿದರಾದರೂ ಜನಪರ ಎನ್ನಿಸಿದ್ದ ಅಂಶಗಳೆಲ್ಲಾ ತಿದ್ದುಪಡಿಯಿಂದ ಹೊರದೂಡಲ್ಪಟ್ಟಿದ್ದವು. ದೊಡ್ಡ ಬದಲಾವಣೆಯೊಂದು ಸಂಭವಿಸುತ್ತದೆಂಬ ನಿರೀಕ್ಷೆಯಲ್ಲಿದ್ದ ಜನಕ್ಕೆ ಮಸೂದೆ ನಿರಾಸೆಯನ್ನು ಬಿಟ್ಟು ಬೇರೇನನ್ನೂ ಒದಗಿಸಲಿಲ್ಲ.

ಮೊದಲ ಮಸೂದೆಯಲ್ಲಿ ಏನಿತ್ತು? ಈಗ ಏನಿಲ್ಲ?

ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬ ಅಂಶವಿತ್ತು, ಅದನ್ನು ಈಗ ಕೈಬಿಡಲಾಗಿದೆ. ಚಿಕಿತ್ಸಾ ದರವನ್ನು ಸರಕಾರವೇ ನಿಗಧಿ ಪಡಿಸುತ್ತದೆ ಎಂಬ ಅಂಶ ಮಂಡನೆಯಾದ ಮಸೂದೆಯಲ್ಲಿ ಇಲ್ಲವಾಗಿದೆ. ಸರಕಾರದ ಕೆಲವು ಯೋಜನೆಗಳಡಿಯಲ್ಲಿ ಒದಗಿಸಲಾಗುವ ಆರೋಗ್ಯ ಸೇವೆಗಳಿಗೆ ಮಾತ್ರವೇ ಸರಕಾರ ದರ ನಿಗಧಿ ಪಡಿಸಲಿದೆ. ಉಳಿದಂತೆ ಆಯಾ ಆಸ್ಪತ್ರೆಗಳು ತಮ್ಮ ಸೇವಾದರವನ್ನು ನಿಗಧಿ ಮಾಡಿಕೊಳ್ಳುತ್ತವೆ. ಸರಕಾರ ತಜ್ಞ ಸಮಿತಿಯನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಅದರಲ್ಲಿ ಮೂರನೇ ಒಂದು ಭಾಗ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಿರುತ್ತಾರೆ. ಈ ಸಮಿತಿಯು ಆಸ್ಪತ್ರೆಗಳನ್ನು ವಿಂಗಡಿಸಿ, ಪ್ರತಿಯೊಂದು ದರ್ಜೆಯ ಆಸ್ಪತ್ರೆಗೆ ಅಗತ್ಯವಿರುವಂತಹ ಮಾನದಂಡಗಳನ್ನು ನಿರ್ಧಾರ ಮಾಡುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಆ ದರ ಪಟ್ಟಿಯನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ವೆಬ್‌ ಸೈಟ್‌ನಲ್ಲಿ ಪ್ರದರ್ಶಿಸಬೇಕಿದೆ. ರೋಗಿಗಳನ್ನು ಹೆಚ್ಚಿಗೆ ಕಾಯಿಸದೇ, ಬೇಗ ಸಮಾಲೋಚನೆ ಮಾಡಬೇಕೆಂಬ ಅಂಶವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಸಮಾಲೋಚನೆಯ ಸಂದರ್ಭದಲ್ಲಿ ರೋಗಿಯ ಸಂಬಂಧಿ ಅಥವಾ ಸ್ನೇಹಿತರ ಉಪಸ್ಥಿತಿಗೆ ಅವಕಾಶವಿದೆ. ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಿಕರಿಗೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರೆ ಶವ ನೀಡದೇ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎನ್ನುವ ಅಂಶಗಳಿವೆ.

ರೋಗಿಗಳ ಹಕ್ಕು ಕಾಪಾಡಲು ಜಿಲ್ಲಾ ಮಟ್ಟದ ನೋಂದಣಾ ಮತ್ತು ದೂರು ನಿರ್ವಹಣಾ ಪ್ರಾಧಿಕಾರ ರಚನೆಯಾಗಲಿದ್ದು, ಈ ಸಮಿತಿಯಲ್ಲಿ ಡಿಎಚ್‍ಓ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ ಓರ್ವ ಪ್ರತಿನಿಧಿ, ಜಿಲ್ಲಾಮಟ್ಟದ ಮಹಿಳಾ ಪ್ರತಿನಿಧಿಗಳು ಇರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದಿಸಲು ಅವಕಾಶ ನೀಡಲಾಗಿದ್ದು, ಆರೋಪಿತ ವೈದ್ಯರು ಅಥವಾ ಸಂಸ್ಥೆ ವಕೀಲರನ್ನು ನೇಮಿಸಿಕೊಳ್ಳಬಹುದು.

ಮತ್ತಷ್ಟು ಸಮಸ್ಯೆಗಳಿಗೆ ಮುನ್ನುಡಿ ಬರೆದ ನಿಯಮಾವಳಿಗಳು:

ಫೆ.9ರಂದು ಬಿಡುಗಡೆಯಾದ ನಿಯಮಾವಳಿಗಳು ಹಲವಾರು ಗೊಂದಲಕ್ಕೆ ಎಡೆಮಾಡಿಕೊಟ್ಟಿವೆ. ಕಾಯ್ದೆಯಲ್ಲಿ ರೋಗಿಯ ಹಕ್ಕುಗಳ ಸನ್ನದು ಮತ್ತು ಖಾಸಗಿ ಆಸ್ಪತ್ರೆಗಳ ಜವಾಬ್ದಾರಿ ಸನ್ನದು ಎಂಬ ಎರಡು ಅಂಶಗಳಿವೆ. ಇವೆರಡೂ ಕೂಡ ರೋಗಿಗಳ ಹಕ್ಕುಗಳನ್ನು ಸರಂಕ್ಷಿಸುವ ಕಾರಣದಿಂದ ಬಂದಿರುವಂತವು. ಯಾವುದಾದರೂ ಖಾಸಗಿ ಆಸ್ಪತ್ರೆ, ಕಾಯ್ದೆಯಲ್ಲಿನ ಅಂಶಗಳನ್ನು ಉಲ್ಲಂಘಿಸಿದರೆ ನೊಂದಣಾ ಮತ್ತು ದೂರು ನಿರ್ವಹಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು.

ರೋಗಿಗಳು ತಾವು ಒಂದು ಆಸ್ಪತ್ರೆಯಲ್ಲಿ/ವೈದ್ಯರು ನೀಡಿರುವ ರಿಪೋರ್ಟ್‌ಗಳನ್ನು ಮತ್ತೊಬ್ಬ ವೈದ್ಯರ ಬಳಿ ಪರೀಕ್ಷಿಸುವ ಅವಕಾಶವನ್ನು ಕಾಯ್ದೆ ನೀಡಿದೆ. ಇಂತಹದೇ ಹಲವು ರೋಗಿಗಳಿಗೆ ಉಪಯುಕ್ತವಾಗಬಲ್ಲ ಕಾನೂನುಗಳು ಕಾಯ್ದೆಯಲ್ಲಿವೆಯಾದರೂ ಬಹುಪಾಲು ಅಂಶಗಳಿಗೆ ಸ್ಪಷ್ಟತೆಯನ್ನು ನೀಡುವಲ್ಲಿ ಸರಕಾರ ವಿಫಲವಾಗಿದೆ. ರೋಗಿಯ ಹಕ್ಕುಗಳ ಸನ್ನದು ಇದೆ, ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬ ಮಾರ್ಗಗಳು ನಿಯಮಾವಳಿಗಳಲ್ಲಿಲ್ಲ. ‘ಮಾಹಿತಿಯಳ್ಳ ಒಪ್ಪಿಗೆ’ ಎಂಬ ಅಂಶವನ್ನು ನಿಯಮಾವಳಿ ಒಳಗೊಂಡಿದೆ. ಅದರೆ ಹೀಗೆಂದರೇನು ಎಂಬುದನ್ನು ವಿವರಿಸಿಲ್ಲ.

ಕಾಯ್ದೆ ಸಾರ್ವಜನಿಕರಿಗೆ ಖಾಸಗಿ ಆಸ್ಪತ್ರೆ, ವೈದ್ಯರ ವಿರುದ್ಧ ದೂರು ನೀಡುವ ಹಕ್ಕನ್ನು ನಿಡಿದೆ. ಆದರೆ ಯಾರ ಬಳಿ ದೂರು ಸಲ್ಲಿಸಬೇಕು, ದೂರು ಪಡೆದವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ, ಅವರ ಜವಾಬ್ದಾರಿಯೇನು ಎಂಬ ಯಾವುದೇ ಸ್ಪಷ್ಟೀಕರಣಗಳನ್ನು ನಿಯಮಾವಳಿಗಳು ನೀಡಿಲ್ಲ ಎಂಬ ವಾದವಿದೆ. ‘ಸುಳ್ಳು ಮತ್ತು ತುಚ್ಛ ದೂರು ನೀಡುವವರ ವಿರುದ್ಧ 10,000 ರುಪಾಯಿ ದಂಡ ವಿಧಿಸಲಾಗುವುದು’ ಎಂದು ನಿಯಮಾವಳಿಗಳು ಹೇಳುತ್ತವೆ. ಆದರೆ ಈ ಸುಳ್ಳು ಮತ್ತು ತುಚ್ಛ ದೂರುಗಳು’ ಎಂದರೇನು ಎಂಬುದಕ್ಕೆ ಸ್ಪಷ್ಟತೆಯಿಲ್ಲ. ಒಂದು ವೇಳೆ ನೀಡಿದ ದೂರು ಸುಳ್ಳು ಎಂದಾಗಿದ್ದರೆ ಅದನ್ನು ಸಾಬೀತು ಮಾಡುವ ಪ್ರಕ್ರಿಯೆಯೇನು ಎಂಬುದು ತಿಳಿದಿಲ್ಲ. ಹೀಗೆ ಕಾಯ್ದೆಯ ನಿಯಮಾವಳಿಗಳು ಗೊಂದಲದ ಗೂಡಾಗಿವೆ.

ಮತ್ತೊಂದೆಡೆ, ರೋಗಿಗಳಿಗೆ ಒಬ್ಬರಲ್ಲದೇ ಮತ್ತೊಬ್ಬ ವೈದ್ಯರನ್ನು ಭೇಟಿಯಾಗಿ ರಿಪೋರ್ಟ್‌ಗಳನ್ನು ಪರಿಶೀಲಿಸಿಕೊಳ್ಳುವ ಅವಕಾಶವನ್ನು ಕಾಯ್ದೆ ನೀಡಿದೆ. ಆದರೆ, ಒಳರೋಗಿಯಾಗಿದ್ದವರಿಗೆ ತಮ್ಮ ರಿಪೋರ್ಟ್‌ಗಳು ದೊರೆಯುವುದಾದರೂ ಹೇಗೆ? ತಮ್ಮ ಚಿಕಿತ್ಸೆಯ ರಿಪೋರ್ಟ್‌ಗಳು, ಸ್ಕ್ಯಾನಿಂಗ್‌ ಮಾಹಿತಿಗಳು ಈ ಆಸ್ಪತ್ರೆಯ ವಶದಲ್ಲಿದ್ದಾಗ ರೋಗಿ ಮತ್ತೊಂದು ಆಸ್ಪತ್ರೆಯ ವೈದ್ಯರಿಗೆ ಅವನ್ನು ತೋರಿಸುವುದೇಗೆ? ಇವನ್ನು ಪಡೆಯುವ ಮಾರ್ಗಗಳ್ಯಾವುದು ಎಂಬ ನಿಖರತೆ ನಿಯಮಾವಳಿಗಳಲ್ಲಿಲ್ಲ.

ಇವು ಒಂದು ರೀತಿಯ ಗೊಂದಲಕಾರಿ ಅಂಶಗಳಾದರೆ ಮತ್ತೊಂದು ಅಪಾಯಕಾರಿ ಆಂಶವನ್ನು ಕಾಯ್ದೆ ಒಳಗೊಂಡಿದೆ. ಆಸ್ಪತ್ರೆಗಳಿಗೆ ಎನ್‌ಎಬಿಎಚ್‌(ನ್ಯಾಷನಲ್ ಅಕ್ರೆಡೆಷನ್‌ ಬೋರ್ಡ್‌ ಫಾರ್ ಹಾಸ್ಪಿಟಲ್ಸ್‌ ಅಂಡ ಹೆಲ್ತ್‌ಕೇರ್‌ ಪ್ರೊವೈಡೆರ್ಸ್‌)ನ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಅಂಶವನ್ನು ಕಾಯ್ದೆ ಹೇಳುತ್ತದೆ. ಈ ಎನ್‌ಎಬಿಎಚ್‌ ಸಂಸ್ಥೆ ಕ್ವಾಲಿಟಿ ಕೌನ್ಸಿಲ್‌ ಆಫ್‌ ಇಂಡಿಯಾದ ಭಾಗವಾಗಿದ್ದು, ಆಸ್ಪತ್ರೆಗಳಿಗೆ ಮಾನ್ಯತೆಯನ್ನು ಒದಗಿಸಿಕೊಡುವ ಜವಾಬ್ದಾರಿಯನ್ನು ಹೊಂದಿದೆ.

ವೈದ್ಯಕೀಯ ಪ್ರವಾಸೋದ್ಯಮಕ್ಕೆ ಪೂರಕವಾದ ಮಾನದಂಡಗಳನ್ನು ರಚಿಸುವ ಸಲುವಾಗಿ ಈ ಸಂಸ್ಥೆ ರೂಪುತಳೆದಿದ್ದು, ಎಲ್ಲಾ ಕಡೆಯೂ ಆರೋಗ್ಯಸೇವೆಯ ಬೆಲೆಯನ್ನು ಏರಿಸಿದೆ. ಬೆಲೆ ಕಡಿಮೆ ಮಾಡುತ್ತದೆಂಬ ಭರವಸೆ ಹುಟ್ಟಿಸಿದ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಹೀಗೆ ಬೆಲೆ ಏರಿಸುವ ಸಂಸ್ಥೆಯ ಮಾನದಂಡಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಹೀಗೇನಾದರೂ ಆದರೆ  ಈಗಾಗಲೇ ಬಸವಳಿದಿರುವ ರೋಗಿಯ ಮೇಲೆ ಮತ್ತೊಂದು ಆರ್ಥಿಕ ಬರೆ ಎಳೆದಂತಾಗುತ್ತದೆ. ಇನ್ನೊಂದು ಕಡೆ ಲಾಭಕ್ಕಾಗಿ ವೈದ್ಯಕೀಯ ಸೇವೆಯಲ್ಲಿ ನಿರತವಾಗಿರದ ಸಣ್ಣ, ಮಧ್ಯಮ ಮತ್ತು ದತ್ತಿ ಆಸ್ಪತ್ರೆಗಳು ಸಂಕಷ್ಟಕ್ಕೀಡಾಗುತ್ತವೆ. ಹೆಚ್ಚಾದ ಹೊರೆಯನ್ನು ರೋಗಿಗಳ ಮೇಲೆ ಹೇರುತ್ತವೆ.

ನಮ್ಮ ದೇಶದಲ್ಲಿ ಸರಕಾರದ್ದೇ ಆದ, ಸರಕಾರಿ ಆಸ್ಪತ್ರೆಗಳಿಗೆ ಅನ್ವಯಿಸುವ, ನಮ್ಮಂತಹ ಬಡದೇಶಕ್ಕೆ ಅನುಗುಣವಾದ ಉತ್ತಮ ಗುಣಮಟ್ಟದ ಮಾನದಂಡಗಳು ಐಪಿಎಚ್‌ಎಸ್‌(ಇಂಡಿಯನ್ ಪಬ್ಲಿಕ್‌ ಹೆಲ್ತ್‌ ಸ್ಟಾಂಡರ್ಡ್ಸ್)ನಲ್ಲಿವೆ. ಚಿಕ್ಕ ಉಪಕೇಂದ್ರಗಳಿಂದ ಹಿಡಿದು ಸರಕಾರವೇ ನಡೆಸುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳವರೆಗೂ ಈ ಮಾನದಂಡಗಳ ಬಳಕೆಯಾಗುತ್ತಿದೆ. ಬೆಲೆ ಇಳಿಸುವ ಚಿಂತನೆಯುಳ್ಳ ಸರಕಾರ ಇಂತಹ ಮಾನದಂಡಗಳನ್ನು ಬಳಸದೇ, ಬೆಲೆ ಏರಿಸುವ ಎನ್ಎಬಿಎಚ್‌ನ ಮಾನದಂಡಗಳನ್ನು ಏಕೆ ಆಳವಡಿಸಿಕೊಳ್ಳಲು ಸೂಚಿಸುತ್ತಿದೆ ಎಂಬ ಪ್ರಶ್ನೆ ಪ್ರಜ್ಞಾವಂತ ವಲಯದಲ್ಲಿ ಕೇಳಿಬಂದಿದೆ. ಬೆಲೆ ನಿಯಂತ್ರಣದ ಬದಲಾಗಿ ಬೆಲೆ ಏರಿಕೆಯ ಮಾನದಂಡಗಳನ್ನು ತರಹೊರಟಿರುವ ಸರಕಾರ ಖಾಸಗಿ ಲಾಬಿಗೆ ಒಳಗಾಗಿದೆಯೇ ಎಂಬ ಸಂಶಯವನ್ನು ಈ ಅಂಶ ಮೂಡಿಸುತ್ತದೆ.

ಸರಕಾರದ ತಜ್ಞರ ಸಮಿತಿಯಲ್ಲಿನ ಮತ್ತೊಂದು ಸಮಸ್ಯೆಯೆಂದರೆ ಪಿಎಚ್‌ಎಫ್‌ಐ(ಪಬ್ಲಿಕ್‌ ಹೆಲ್ತತ ಫೌಂಡೇಶನ್‌ ಆಫ್‌ ಇಂಡಿಯಾ)ದ ಹೆಸರನ್ನು ಒಳಗೊಂಡಿರುವುದು. ಕೇಂದ್ರ ಸರಕಾರದ ಹಣದಲ್ಲಿ ನಡೆಯುತ್ತಿರುವ ಈ ಸಂಸ್ಥೆಯ ಮಂಡಳಿಯಲ್ಲಿರುವುದು ದೊಡ್ಡ ದೊಡ್ಡ ಉದ್ಯಮಿಗಳು, ಬಹುರಾಷ್ಟ್ರೀಯ ಔಷಧಿ ಕಂಪನಿ ಮತ್ತು ದಾನಿ ಸಂಸ್ಥೆಗಳ ಪ್ರಮುಖರು. ಹೀಗೆ ಸರಕಾರದ ಹಣ ಪಡೆದು ಕಾರ್ಪೊರೇಟ್‌ಶಾಹಿ ಹಿತಾಸಕ್ತಿ ಹೊಂದಿರುವವರನ್ನು ಕಾಯ್ದೆಯೊಳಗೆ ತಂದರೆ ಜನಪರವಾದ ಕಾಳಜಿ ಉಳಿಯುವುದಾದರೂ ಹೇಗೆ ಎಂಬ ಪ್ರಶ್ನೆ ಕಾಯ್ದೆಗಾಗಿ ಹೋರಾಡಿದ ಸಂಘಟನೆಗಳಿಂದ ಕೇಳಿಬರುತ್ತಿದೆ.

ಇದುವರೆವಿಗೂ ಆರೋಗ್ಯದ ಬೆಲೆ ನಿಯಂತ್ರಣಕ್ಕಾಗಿ ಕಷ್ಟ ಪಟ್ಟ ಸಂಘಟನೆಗಳನ್ನು, ಸಾರ್ವಜನಿಕರನ್ನು ಸರಕಾರ ಒಳಗೊಳ್ಳಿಸಿಕೊಂಡಿಲ್ಲ. ಈ ಸಮಿತಿಯಲ್ಲಿನ ಪ್ರತಿನಿಧಿಗಳಿಗಿಂತಲೂ ವಲಯದ ಬಗ್ಗೆ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವವರನ್ನು ಕಡೆಗಣಿಸಿರುವುದು ಹೋರಾಟಗಾರರಲ್ಲಿ ಅಸಹನೆಗೆ ಕಾರಣವಾಗಿದೆ. ಏನೋ ಮಾಡಲು ಹೋಗಿ ಸಿದ್ಧರಾಮಯ್ಯ ಸರಕಾರ ಮತ್ತೇನನ್ನೋ ಮಾಡಿರುವಂತೆ ಭಾಸವಾಗುತ್ತಿದೆ.

ಕಾಯ್ದೆಯ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದ ಜನಾರೋಗ್ಯಕ್ಕಾಗಿ ಚಳವಳಿ ಸಂಘಟನೆಯ ಡಾ. ಅಖಿಲಾ ವಾಸನ್, “ಜನಪರವೆಂದು ಭಾವಿಸಿದ ಕಾಯ್ದೆಯೀಗ ಜನರ ವಿರುದ್ಧವಾಗುತ್ತಿದೆ. ನಿಯಮಾವಳಿಗಳಲ್ಲಿ ಸಾಕಷ್ಟು ನೂನ್ಯತೆಗಳಿವೆ, ಹಿತಾಸಕ್ತಿ ಸಂಘರ್ಷವಿದೆ. ಆರೋಗ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಆರೋಗ್ಯ ಸಚಿವರಿಗೆ ಈ ಕುರಿತು ಮಾಹಿತಿ ನೀಡಿದ್ದೇವೆ. ಮತ್ತೆ ಕರಡು ಪ್ರತಿಯನ್ನು ತಯಾರಿಸುವಂತೆ ಒತ್ತಾಯವನ್ನು ತಂದಿದ್ದೇವೆ, ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಒದಗಿಸುವವರೆಗೂ ಸುಮ್ಮನಾಗುವುದಿಲ್ಲ,” ಎಂದರು.

ಚುನಾವಣೆಯ ಹೊಸ್ತಿಲಲ್ಲಿ ಕಡಿಮೆ ದರದಲ್ಲಿಯೇ ವೈದ್ಯಕೀಯ ಸೇವೆಯನ್ನು ಕಲ್ಪಿಸುವ ಕನಸುಗಳನ್ನು ಹುಟ್ಟಿಸಿದ ಸಿದ್ಧರಾಮಯ್ಯ ನೇತೃತ್ವದ ‘ಸದಾ ಸಿದ್ಧ ಸರಕಾರ’ ಬಡವರ ಬೆನ್ನಿಗೆ ಮತ್ತೊಂದು ಬರೆ ಹಾಕಲು ಹೊರಟಿರುವ ಸೂಚನೆಗಳು ಅಸ್ಪಷ್ಟವಾಗಿ ಕಾಣುತ್ತಿವೆ. ಮತ್ತೊಂದು ಹೊಸ ಕರಡನ್ನು ಸಿದ್ಧಪಡಿಸಬೇಕು ಎಂಬ ಹೋರಾಟಗಾರರ ಹಕ್ಕೊತ್ತಾಯ ಮತ್ತು ಖಾಸಗಿ ಲಾಬಿ, ಯಾವ ದಾರಿಯನ್ನು ಆಳುವ ಸರಕಾರಗಳು ಅನುಸರಿಸಲಿವೆ ಎಂದು ಕಾದು ನೊಡಬೇಕಿದೆ.