ರವಿಕುಮಾರ್‌ ಕಂಚನಹಳ್ಳಿ
COVER STORY

ಶಿರಸ್ತೇದಾರ್‌ ವಿರುದ್ಧ ಹೈಕೋರ್ಟ್‌ನಲ್ಲಿ ದೂರು; ನ್ಯಾಯಾಂಗದ ಭ್ರಷ್ಟಾಚಾರದ ಚರ್ಚೆಗೆ ಮುನ್ನುಡಿ  

ನ್ಯಾಯಾಂಗದ ವಿರದ್ಧ ತುಟಿಬಿಚ್ಚಿದರೆ ‘ನ್ಯಾಯಾಂಗ ನಿಂದನೆ’ಯಾಗಿ ಪರಿಗಣಿಸುವ ಸಾಧ್ಯತೆಯಿಂದ ಮಾತನಾಡಲು ಜನ ಹೆದರುತ್ತಾರೆ. ಆದರೆ ನ್ಯಾಯಾಂಗದ ನ್ಯೂನ್ಯತೆಗಳನ್ನು ಸರಿಪಡಿಸಲು ಅಲ್ಲಿನ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ದನಿಯೆತ್ತುವ ಅಗತ್ಯವಿದೆ

ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಿ ಭ್ರಷ್ಟರನ್ನು ಶಿಕ್ಷಿಸುವ ನ್ಯಾಯಾಲಯದ ಆವರಣದಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಹೈಕೋರ್ಟಿನಲ್ಲಿ ಮಾಡಿದ್ದಾರೆ. ಜಿಲ್ಲಾ ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ಮತ್ತು ಸತ್ರ ನ್ಯಾಯಾಲಯದ ಶಿರಸ್ತೇದಾರ್‌ ವಿರುದ್ಧವೇ ದೂರು ದಾಖಲಿಸಲಾಗಿದೆ. ಈ ಮೂಲಕ ನ್ಯಾಯಾಲಯಗಳೂ ಭ್ರಷ್ಟಾಚಾರದಿಂದ ಹೊರತಲ್ಲ ಎಂಬ ಅಂಶ ಬಹಿರಂಗವಾಗಿದ್ದು, ನ್ಯಾಯಾಂಗದೊಳಗಿನ ಭ್ರಷ್ಟಾಚಾರದ ಬಗ್ಗೆ ಚರ್ಚೆಯ ಅಗತ್ಯತೆಯನ್ನು ಪ್ರಕರಣ ಸಾರಿದೆ.

ರಾಮನಗರ ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್‌ ಚಂದ್ರಶೇಖರಯ್ಯ ಮೇಲೆ ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ ಕಂಚನಹಳ್ಳಿ ದೂರು ದಾಖಲಿಸಿದ್ದಾರೆ. ಹೈಕೋರ್ಟ್‌ ವಿಚಕ್ಷಣಾ ವಿಭಾಗ ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗಿದೆ. ಮೂಲಗಳ ಮಾಹಿತಿಯ ಪ್ರಕಾರ ದೂರಿನ ಬೆನ್ನಲ್ಲೇ, ಶಿರಸ್ತೇದಾರ್‌ ವಿರುದ್ಧ ಹೈಕೋರ್ಟ್‌ ವಿಚಕ್ಷಣಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ?:

ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ ಹಲವು ವರ್ಷಗಳಿಂದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ವಿರುದ್ಧ ಏಕಾಂಗಿಯಾಗಿ ಕನಕಪುರದಲ್ಲಿ ಕಾನೂನು ಸಮರ ಮಾಡುತ್ತಾ ಬಂದವರು. ಹಲವು ಬಾರಿ ಅವರ ಮೇಲೆ ಮಾರಣಾಂತಿಕ ಹಲ್ಲೆಗಳೂ ನಡೆದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಕನಕಪುರದ ಟ್ರಾಫಿಕ್‌ ಸಬ್‌ ಇನ್ಸ್‌ಪೆಕ್ಟರ್‌ ಬಿ.ಪಿ. ಈಶ್ವರಪ್ಪ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪವನ್ನು ರವಿಕುಮಾರ್‌ ಮಾಡಿದ್ದರು. ಈ ಸಂಬಂಧ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ದೂರನ್ನು ಮಾನ್ಯ ಮಾಡಿದ್ದ ಜಿಲ್ಲಾ ನ್ಯಾಯಾಲಯ, ಆರೋಪಿ ಸರಕಾರಿ ನೌಕರನಾಗಿದ್ದು, ಕ್ರಮ ತೆಗೆದುಕೊಳ್ಳುವ ಕಾರ್ಯ ವ್ಯಾಪ್ತಿ ನ್ಯಾಯಾಲಯಕ್ಕೆ ಇದೆಯಾ ಎಂಬುದನ್ನು ತಿಳಿಸುವಂತೆ ಶಿರಸ್ತೇದಾರ್‌ ಚಂದ್ರಶೇಖರಯ್ಯ ಅವರಿಗೆ ತಿಳಿಸಿತ್ತು.

ನ್ಯಾಯಾಧೀಶರ ಆದೇಶದಂತೆ ಚಂದ್ರಶೇಖರಯ್ಯ ಉತ್ತರವನ್ನು ಕೊಡಬೇಕಿತ್ತು. ಆದರೆ ಚಂದ್ರಶೇಖರಯ್ಯ ಆಪಾದಿತ ಬಿ.ಪಿ. ಈಶ್ವರಪ್ಪರನ್ನು ಕಚೇರಿಗೆ ಕರೆದು ಮಾತನಾಡಿದ್ದಾರೆ. ಪ್ರಕರಣ ಆಗದಂತೆ ನೋಡಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರ ಆಮಿಷಕ್ಕೊಳಗಾಗಿ ಟಿಪ್ಪಣಿಯಲ್ಲಿ “ಪಿರ್ಯಾದುದಾರರು ಆರೋಪಿ ಈಶ್ವರಪ್ಪ ವಿರುದ್ಧ ಖಾಸಗಿ ದೂರನ್ನು ಸಲ್ಲಿಸಿದ್ದು, ಸರಕಾರಿ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ದೂರನ್ನು ದಾಖಲಿಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು. ಈ ಖಾಸಗಿ ದೂರನ್ನು ನೇರವಾಗಿ ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ ಅಥವಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಬಹುದು,” ಎಂಬುದಾಗಿ ನ್ಯಾಯಾಧೀಶರಿಗೆ ಮಾಹಿತಿ ನೀಡಿದ್ದರು.

“ಆರೋಪಿಯ ವಿರುದ್ಧ ದೂರು ದಾಖಲಿಸಲು ಪೂರ್ವಾನುಮತಿ ಬೇಕು ಎಂಬುದನ್ನು ನ್ಯಾಯಾಲಯ ಆಕ್ಷೇಪಪಿಸಿದಾಗ ನಾನು ಭ್ರಷ್ಟಾಚಾರ ಕಾಯಿದೆ 1988ರ ಅಡಿ ಪ್ರಕರಣ ದಾಖಲಿಸುವ ವೇಳೆ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ವಾದ ಮಂಡಿಸಿದೆ. ಆದರೂ ನ್ಯಾಯಾಧೀಶರು ಶಿರಸ್ತೇದಾರ್‌ ನೀಡಿದ್ದ ಆಕ್ಷೇಪಣೆಯ ಆಧಾರದ ಮೇಲೆ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿದರು,” ಎಂಬುದಾಗಿ ಹೈಕೋರ್ಟ್‌ಗೆ ನೀಡಿದ ದೂರಿನಲ್ಲಿ ದೂರುದಾರ ರವಿಕುಮಾರ್‌ ಉಲ್ಲೇಖಿಸಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ದೂರುದಾರ ರವಿಕುಮಾರ್‌, ಶಿರಸ್ತೇದಾರ್‌ ಹಣ ಪಡೆದು ನ್ಯಾಯಾಧೀಶರಿಗೆ ತಪ್ಪು ಮಾಹಿತಿ ನೀಡಿದ್ದರು ಎನ್ನುತ್ತಾರೆ. “ಈ ಹಿಂದೆಯೂ ಚುನಾವಣಾ ತಕರಾರು ಅರ್ಜಿಯನ್ನು ನಾನು ಸಲ್ಲಿಸಿದ್ದೆ. ನಾನು ನೀಡುವ ದೂರನ್ನು ಖುದ್ದು ನಾನೇ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತೇನೆ. ಚುನಾವಣಾ ತಕರಾರು ಅರ್ಜಿಗೆ 2,000 ರೂಪಾಯಿ ಠೇವಣಿ ಇಡಬೇಕಾಗಿತ್ತು. ಶಿರಸ್ತೇದಾರ್‌ ಚಂದ್ರಶೇಖರಯ್ಯ ಬೇಕಂತಲೇ ಠೇವಣಿಯನ್ನು ಬಹಳ ಕಾಲ ಕಟ್ಟಿಸಿಕೊಳ್ಳಲಿಲ್ಲ. ಪರಿಣಾಮ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾಯಾಲಯದ ಒಳಗೆ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅಗತ್ಯತೆ ಇದೆ. ಈ ಕಾರಣದಿಂದಲೇ ಚಂದ್ರಶೇಖರಯ್ಯ ಅವರ ಮೇಲೆ ದೂರು ನೀಡಿದ್ದೇನೆ,” ಎಂದು ಪ್ರತಿಕ್ರಿಯಿಸುತ್ತಾರೆ ರವಿಕುಮಾರ್‌.

ನ್ಯಾಯಾಲಯವನ್ನು ದಾರಿ ತಪ್ಪಿಸಿದ ನಂತರ, ರವಿಕುಮಾರ್‌ ಚಂದ್ರಶೇಖರಯ್ಯ ಅವರನ್ನು ಭೇಟಿ ಮಾಡಿದರು. ಯಾಕೆ ದೂರನ್ನು ದಾಖಲಿಸಲು ಪೂರ್ವಾನುಮತಿ ಬೇಕು ಎಂಬುದಾಗಿ ತಪ್ಪು ಮಾಹಿತಿ ಕೊಟ್ಟಿರಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಚಂದ್ರಶೇಖರಯ್ಯ, ನ್ಯಾಯಾಧೀಶರ ವಿರುದ್ಧವೇ ಸುಳ್ಳು ಆರೋಪ ಮಾಡಿದ್ದಾರೆ. ಅದನ್ನು ರವಿಕುಮಾರ್‌ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. “ನೀವು ದೂರು ಸಲ್ಲಿಸಿದ ನಂತರ ಸಾಹೇಬರು (ನ್ಯಾಯಾಧೀಶರು) ಕರೆದು ಪ್ರಕರಣ ನಮ್ಮ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಅದೇ ರೀತಿ ಆಕ್ಷೇಪಣೆ ಸಿದ್ಧಪಡಿಸಿ ಟಿಪ್ಪಣಿ ನೀಡಿ ಎಂದರು,” ಎಂಬುದಾಗಿ ನ್ಯಾಯಾಧೀಶರನ್ನೇ ತಪ್ಪಿತಸ್ಥರನ್ನಾಗಿಸುವ ಕೆಲಸ ಮಾಡಿದ್ದರು.

ನಂತರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ರವಿಕುಮಾರ್‌ ನ್ಯಾಯಾಧೀಶರಿಗೆ ಚಂದ್ರಶೇಖರಯ್ಯ ಹೇಳಿದ್ದನ್ನು ತಿಳಿಸಿದರು. ಇದನ್ನು ಮೊದಲಿಗೆ ಚಂದ್ರಶೇಖರಯ್ಯ ಒಪ್ಪಿಕೊಳ್ಳಲಿಲ್ಲ. ಆದರೆ ಯಾವಾಗ ರವಿಕುಮಾರ್‌ ಮೊಬೈಲಿನಲ್ಲಿ ಸೆರೆಹಿಡಿದ ದೃಶ್ಯವನ್ನು ತೋರಿಸುತ್ತೇನೆ ಎಂದಾಗ, ತಪ್ಪನ್ನು ಒಪ್ಪಿಕೊಂಡರು. ನಂತರ ಚಂದ್ರಶೇಖರಯ್ಯಗೆ ಛೀಮಾರಿ ಹಾಕಿದ ನ್ಯಾಯಾಲಯ, ಆರೋಪಿ ಈಶ್ವರಪ್ಪ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದೆ.

ಈಗಾಗಲೇ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಜತೆಗೆ ರಾಮನಗರ ಜಿಲ್ಲಾ ವರಿಷ್ಠಾಧಿಕಾರಿ ರಮೇಶ್‌ಗೆ ರವಿಕುಮಾರ್‌ ಪತ್ರ ಬರೆದಿದ್ದು, ಇದೇ ವರ್ಷದ ಜನವರಿ 31ರಂದು ನಿವೃತ್ತಿಯಾದ ಎಸ್‌ಐ ಈಶ್ವರಪ್ಪ ಅವರಿಗೆ ಅಂತಿಮ ಸವಲತ್ತುಗಳನ್ನು ಈ ಕೂಡಲೇ ನೀಡದಂತೆ ಮನವಿ ಮಾಡಿದ್ದಾರೆ. ರವಿಕುಮಾರ್‌ ಆರೋಪಿಸುವ ಪ್ರಕಾರ ಎಸ್‌ಐ ಈಶ್ವರಪ್ಪ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ಗಳಿಸಿದ್ದಾರೆ. ಅವರ ವಿರುದ್ಧ ದೂರುಗಳಾದಾಗ ಸಂಬಂಧಪಟ್ಟ ತನಿಖಾಧಿಕಾರಿಗಳನ್ನು, ನ್ಯಾಯಾಲಯವನ್ನು ಕೊಂಡುಕೊಳ್ಳುವ ಕೆಲಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ ಎಂಬ ಆರೋಪ ಈಶ್ವರಪ್ಪ ಮೇಲಿದೆ.

ನ್ಯಾಯಾಂಗದ ಭ್ರಷ್ಟಾಚಾರ:

ಈ ಹಿಂದೆ ನ್ಯಾಯಾಂಗದೊಳಗೆ ನಡೆಯುವ ಭ್ರಷ್ಟಾಚಾರದ ಬಗ್ಗೆ ಜನಾರ್ಧನ್‌ ರೆಡ್ಡಿ ಜೈಲು ಪಾಲಾದಾಗ ನಡೆದಿದ್ದ ಬಹುಕೋಟಿ ಡೀಲ್‌ ಸದ್ದು ಮಾಡಿತ್ತು. ಮಾಹಿತಿಯ ಪ್ರಕಾರ ಸುಮಾರು 20 ಕೋಟಿ ರೂ. ಗಳನ್ನು ಜನಾರ್ಧನ್‌ ರೆಡ್ಡಿ ಕಡೆಯವರು ಜಾಮೀನಿಗಾಗಿ ನ್ಯಾಯಾಧೀಶ ಪಟ್ಟಾಭಿರಾಮರಾವ್‌ಗೆ ಆಮಿಷ ಒಡ್ಡಿದ್ದರು. ಅದರಂತೆಯೇ 4.50 ಕೋಟಿ ರೂ. ಗಳನ್ನು ಮುಂಗಡವಾಗಿ ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಸಿಬಿಐ ಅಧಿಕಾರಿಗಳು ನ್ಯಾ. ಪಟ್ಟಾಭಿರಾಮರಾವ್‌ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ ನ್ಯಾಯಾಲಯಗಳೂ ಕೂಡ ಭ್ರಷ್ಟಾಚಾರದಿಂದ ಹೊರತಲ್ಲ ಎಂಬ ಮಾತುಗಳು ಕೇಳಿಬಂದಿತ್ತು.

ಆದರೆ, ಆ ಚರ್ಚೆ ಬಹಳ ಕಾಲ ಉಳಿಯಲಿಲ್ಲ. ಜತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಲು ಸಹಕಾರಿಯಾಗಲಿಲ್ಲ. ಆದರೆ ಈಗ ಕೋರ್ಟ್‌ ಆವರಣದೊಳಗೇ ಭ್ರಷ್ಟಾಚಾರ ನಡೆದಿರುವ ಆರೋಪ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಾಂಗ ಮತ್ತು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸುವ ಅಗತ್ಯತೆಯಿದೆ. ನ್ಯಾಯಾಲಯ ಮತ್ತು ನ್ಯಾಯಾಧೀಶರ ಭ್ರಷ್ಟಾಚಾರದ ಬಗ್ಗೆ ಹತ್ತಿರದಿಂದ ಗಮನಿಸುವ ಸಲುವಾಗಿಯೇ ವಿಚ‍ಕ್ಷಣಾ ದಳ ಇರುವುದು ನಿಜವಾದರೂ ಇಲ್ಲಿಯವರೆಗೂ ಯಾವುದೇ ಗಂಭೀರ ಪ್ರಕರಣವೂ ಬಯಲಾಗಿಲ್ಲ. ಹಣವೊಂದಿದ್ದರೆ ನ್ಯಾಯಾಂಗವನ್ನು ಖರೀದಿಸಬಹುದು ಎನ್ನುವಷ್ಟು ಆರೋಪಗಳು ನ್ಯಾಯಾಲಯಗಳ ಮೇಲಿವೆ.

ನ್ಯಾಯಾಧೀಶರ ಜತೆ ಡೀಲ್‌ ಮಾಡಿಸಲೆಂದೇ ಕೆಲ ವಕೀಲರು ಇದ್ದಾರೆ ಎಂಬ ಆರೋಪಗಳು ವಕೀಲರ ವಲಯಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು. ಇವೆಲ್ಲಾ ಊಹಾಪೋಹಗಳಿಗೆ ತಾರ್ಕಿಕ ಅಂತ್ಯ ಹಾಡುವ ಅವಕಾಶ ಈಗ ಹೈಕೋರ್ಟ್‌ ಮುಂದಿದ್ದು, ಪ್ರಕರಣ ಸಂಬಂಧ ಯಾವ ತೀರ್ಮಾನಕ್ಕೆ ಬರಲಿದೆ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಿದೆ. ನ್ಯಾಯಯುತವಾಗಿ ತನಿಖೆ ನಡೆದಲ್ಲಿ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರಕರಣ ಮೊದಲ ಹೆಜ್ಜೆಯಾಗಬಹುದು. ಮತ್ತು ಅದರ ಅವಶ್ಯಕತೆಯೂ ಸದ್ಯದ ಪರಿಸ್ಥಿತಿಯಲ್ಲಿದೆ.

ಹಣ ಮತ್ತು ಅಧಿಕಾರವಿದ್ದರೆ ಎಲ್ಲವನ್ನೂ ಕೊಳ್ಳಬಹುದು ಎಂಬ ಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಇಂಥಾ ಸಂದರ್ಭದಲ್ಲಿ ನ್ಯಾಯಾಲಯಗಳಿಗಿರುವ ಗೌರವವೂ ಸಾಮಾನ್ಯರಲ್ಲಿ ದಿನೇ ದಿನೇ ಕಡಿಮಾಯಾಗುತ್ತ ಹೋಗುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗೆ ತಕ್ಕ ಶಿಕ್ಷೆಯಾದಲ್ಲಿ ನ್ಯಾಯಾಲಯ ಮತ್ತು ಸಂವಿಧಾನವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದಂತಾಗಲಿದೆ.

ಸಾಮಾನ್ಯವಾಗಿ ನ್ಯಾಯಾಂಗದ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಲೂ ಜನ ಭಯ ಪಡುತ್ತಾರೆ. ನ್ಯಾಯಾಂಗದ ವಿರದ್ಧ ಏನೇ ಮಾತನಾಡಿದರೂ ‘ನ್ಯಾಯಾಂಗ ನಿಂದನೆ’ (ಕಂಟೆಪ್ಟ್‌ ಆಫ್‌ ಕೋರ್ಟ್‌) ಎಂದು ಪರಿಗಣಿಸುವ ಸಾಧ್ಯತೆಯಿಂದ ಮಾತನಾಡಲು ಹೆದರುತ್ತಾರೆ. ಆದರೆ ನ್ಯಾಯಾಂಗದ ನ್ಯೂನ್ಯತೆಗಳನ್ನು ಸರಿಪಡಿಸಲು ಅಲ್ಲಿನ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ದನಿಯೆತ್ತುವ ಅಗತ್ಯವಿದೆ. ಸಾರ್ವಜನಿಕರು ಮತ್ತು ನ್ಯಾಯವಾದಿಗಳು ಈ ಕಾರ್ಯಕ್ಕೆ ಮುಂದಾಗುತ್ತಾರ ಕಾದು ನೋಡಬೇಕಿದೆ.