ಬಿಜೆಪಿಯೊಳಗೆ 75ಕ್ಕೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ ಪಾಲಿಗೆ ಇಲ್ಲ ಭೀತಿ  
COVER STORY

ಬಿಜೆಪಿಯೊಳಗೆ 75ಕ್ಕೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ ಪಾಲಿಗೆ ಇಲ್ಲ ಭೀತಿ  

ಬಿಜೆಪಿ ಹುಟ್ಟಿನಿಂದ ಪಾಲಿಸಿಕೊಂಡು ಬಂದಿದ್ದ ’75 ವರ್ಷದ ವಯೋಮಿತಿ’ಯ ಕಾನೂನನ್ನು ಹೈಕಮಾಂಡ್‌ ಮುರಿದಿದೆ. ಇದನ್ನು ಬಿಎಸ್‌ವೈ ಗೆಲುವು ಎಂದು ಪರಿಗಣಿಸಬೇಕೇ? ರಾಜ್ಯ ಬಿಜೆಪಿಗೆ ಯಾರೂ ದಿಕ್ಕಿಲ್ಲ ಎಂದು ಪರಿಗಣಿಸಬೇಕೇ? ಎಂಬುದು ಸದ್ಯದ ಪ್ರಶ್ನೆ

ರಾಜ್ಯ ಭಾರತೀಯ ಜನತಾ ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಹೊರತುಪಡಿಸಿ ಇನ್ಯಾವುದೇ ನಾಯಕನಿಲ್ಲ ಎಂಬುದು ಬಿಜೆಪಿಯ ಹೈಕಮಾಂಡ್‌ಗೂ ಸ್ಪಷ್ಟವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಬಿಎಸ್‌ವೈ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ, ಬಿಜೆಪಿಯ ವಯೋಮಿತಿಯ ಕಟ್ಟುಪಾಡು ಕರ್ನಾಟಕ ಚುನಾವಣೆಯ ವಿಚಾರದಲ್ಲಿ ಇಲ್ಲ ಎಂಬುದಾಗಿ ಪ್ರಧಾನ ಮಂತ್ರಿ ಮೋದಿ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿ ಹುಟ್ಟಿನಿಂದ ಪಾಲಿಸಿಕೊಂಡು ಬಂದಿದ್ದ ’75 ವರ್ಷದ ವಯೋಮಿತಿ’ಯ ಕಾನೂನನ್ನು ಬಿಜೆಪಿ ಹೈಕಮಾಂಡ್‌ ಮುರಿದಿದೆ. ಇದನ್ನು ಬಿಎಸ್‌ವೈ ಗೆಲುವು ಎಂದು ಪರಿಗಣಿಸಬೇಕೇ? ಅಥವಾ ರಾಜ್ಯ ಬಿಜೆಪಿಗೆ ಯಾರೂ ದಿಕ್ಕಿಲ್ಲ ಎಂದು ಪರಿಗಣಿಸಬೇಕೇ? ಎಂಬುದು ಸದ್ಯದ ಪ್ರಶ್ನೆ.

ಸಿಎಂ ಅಭ್ಯರ್ಥಿ ಬಿಎಸ್‌ವೈ:

ಇದೇ ಮಂಗಳವಾರ ಬಿಜೆಪಿನ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ 75ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬಿಜೆಪಿಯ ಕಟ್ಟುಪಾಡುಗಳ ಪ್ರಕಾರ, 75 ವರ್ಷ ದಾಟಿದವರನ್ನು ಮುಖ್ಯಮಂತ್ರಿಯಾಗಲೀ ಅಥವಾ ಪ್ರಧಾನ ಮಂತ್ರಿಯ ಹುದ್ದೆಗಾಗಲೀ ಏರಿಸಬಾರದು. ಆದರೆ ಈ ಬಾರಿ ದಶಕಗಳ ಬಿಜೆಪಿ ನಿಯಮಾವಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಲಾಗಿದೆ. ಇದಕ್ಕೆ ಕಾರಣವಾಗಿರುವುದು ರಾಜ್ಯ ಬಿಜೆಪಿಯಲ್ಲಿನ ‘ಮಾಸ್‌ ಲೀಡರ್‌’ ಕೊರತೆ. ಬಿಎಸ್‌ವೈ 75ನೇ ವರ್ಷಕ್ಕೆ ಕಾಲಿಡುವುದರಿಂದ, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದಿಲ್ಲ, ಎರಡನೇ ಸಾಲಿನಲ್ಲಿರುವ ಯುವ ನಾಯಕರೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತಾರೆ ಎಂಬ ಮಾತುಗಳು ಈ ಹಿಂದೆ ಕೇಳಿಬರುತ್ತಿತ್ತು. ಆದರೆ ಯಡಿಯೂರಪ್ಪ ಪರ ಕೂಡ ವಾದವನ್ನು ಮಂಡಿಸಲಾಗಿತ್ತು. ಈಗ ಅವೆಲ್ಲಾ ಊಹಾಪೋಹಗಳಿಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪನವರೇ ಸಿಎಂ ಅಭ್ಯರ್ಥಿ ಎಂಬುದಾಗಿ ಹೇಳಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಕಳೆಗುಂದಿದ್ದ ಯಡಿಯೂರಪ್ಪ, ಇದರಿಂದಲಾದರೂ ಸ್ಥೈರ್ಯ ಪಡೆದುಕೊಂಡು ಚುನಾವಣಾ ಹೋರಾಟಕ್ಕೆ ಧುಮುಕಲಿದ್ದಾರಾ ಎಂಬುದನ್ನು ಕಾದು ನೋಡಬೇಕು. 2016ರ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸೋತ ನಂತರ ಯಡಿಯೂರಪ್ಪ ಅವರು ರಾಜಕೀಯವಾಗಿ ಮಂಕಾದಂತೆ ಕಾಣುತ್ತಿದ್ದರು. ಪಕ್ಷದೊಳಗಿನ ಅವರ ವಿರೋಧಿಗಳು ಇದನ್ನೇ ಬಳಕೆ ಮಾಡಿಕೊಂಡು, ಹೈಕಮಾಂಡ್‌ ಬಳಿ ಯಡಿಯೂರಪ್ಪ ವಿರುದ್ಧ ದೂರನ್ನೂ ದಾಖಲಿಸಿದ್ದರು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದಲ್ಲೆಲ್ಲಾ, ಯಡಿಯೂರಪ್ಪ ಭ್ರಷ್ಟ ರಾಜಕಾರಣಿ, ಜೈಲಿಗೆ ಹೋಗಿ ಬಂದವರು ಎನ್ನುವ ಮೂಲಕ, ಬಿಎಸ್‌ವೈಗೆ ಪದೇ ಪದೇ ಇರಿಯುತ್ತಲೇ ಬಂದರು. ಇವೆಲ್ಲದರಿಂದ ಸ್ವಲ್ಪ ಮಟ್ಟಿಗೆ ರಾಜಕೀಯ ಪ್ರಭಾವ ಕಳೆದುಕೊಂಡಿದ್ದ ಯಡಿಯೂರಪ್ಪ ಈಗ ಮೋದಿಯವರು ನೀಡಿದ ಆಶ್ವಾಸನೆಯ ನಂತರ ಚೇತರಿಸಿಕೊಳ್ಳುವ ಸಾಧ್ಯತೆಯನ್ನು ಪಕ್ಷದ ಸದಸ್ಯರು ಹೇಳುತ್ತಾರೆ.

ವಯೋಮಿತಿ ನಿಯಮಾವಳಿ ಮುರಿಯಲು ಕಾರಣವೇನು?:

ಬಿಜೆಪಿ ಪಕ್ಷ ಹುಟ್ಟಿನಿಂದ ವಯೋಮಿತಿಯ ನಿಯಮಾವಳಿಯನ್ನು ಮುರಿಯದಂತೆ ಪಾಲಿಸಿಕೊಂಡು ಬಂದ ಪಕ್ಷ. ಅದೇ ಕಾರಣಕ್ಕಾಗಿ, ಒಂದು ಕಾಲದ ಬಿಜೆಪಿಯ ಕಟ್ಟಾಳುಗಳಾದ ಹಿರಿಯ ರಾಜಕಾರಣಿ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್‌ ಜೋಶಿಯಂಥವರು ಇಂದು ಪಕ್ಷದಲ್ಲಿ ಇದ್ದೂ ಇಲ್ಲದಂತ್ತಿದ್ದಾರೆ. ಅದೇ ಸ್ಥಿತಿ ಯಡಿಯೂರಪ್ಪರಿಗೂ ಬರಲಿದೆ ಎಂದೇ ಸಾಮಾಜಿಕವಾಗಿ ಚರ್ಚೆಯಾಗುತ್ತಿತ್ತು. ಬಿಜೆಪಿ ಪಕ್ಷದಲ್ಲಿರುವ ಬಿಎಸ್‌ವೈ ವಿರೋಧಿ ಬಣ ಕೂಡ ಅದನ್ನೇ ನಂಬಿ ಕೆಲಸ ಮಾಡುತ್ತಿತ್ತು. ಆದರೆ ರಾಜ್ಯದಲ್ಲಿನ ರಾಜಕೀಯ ಸ್ಥಿತಿಗಳು, ಈ ಚರ್ಚೆಯನ್ನು ಅಲ್ಲಗಳೆಯುವಂತೆ ಮಾಡಿದೆ.

ರಾಜ್ಯದಲ್ಲಿ ಯಡಿಯೂರಪ್ಪ ಹೊರತುಪಡಿಸಿ ಮತ್ಯಾವಮ ಬಿಜೆಪಿ ನಾಯಕರೂ ಮಾಸ್‌ ಆಗಿ ಜನರನ್ನು ತಲುಪಲು ಸಾಧ್ಯವಿಲ್ಲ. ಪ್ರಬಲ ಜಾತಿಯಾದ ಲಿಂಗಾಯತ ಸಮುದಾಯದವರಾದ ಬಿಎಸ್‌ವೈ ಮಾತ್ರ ಹೆಚ್ಚು ಜನರನ್ನು ತಲುಪಲು ಸಾಧ್ಯ. ಬಿಜೆಪಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜಾತಿ ಬಲ, ಸಂಘಟನೆಯ ಅನುಭವ ಮತ್ತು ಜನಪ್ರಿಯತೆ ಹೊಂದಿರುವ ಏಕೈಕ ವ್ಯಕ್ತಿಯಾಗಿ ಯಡಿಯೂರಪ್ಪ ಕಾಣಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಅವರಿಂದ ಬಿಜೆಪಿ ಪಕ್ಷ ಬಹಳಷ್ಟು ಬಾರಿ ಮುಜುಗರಕ್ಕೆ ಒಳಗಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತು ಬಂಧನಕ್ಕೊಳಗಾದಾಗ ಪಕ್ಷ ಯಡಿಯೂರಪ್ಪ ಅವರನ್ನು ಕಡೆಗಣಿಸಿತ್ತು. ನಂತರ ಪಕ್ಷವನ್ನು ತೊರೆದು ಕೆಜೆಪಿ ಪಕ್ಷ ಕಟ್ಟಿದ್ದ ಯಡಿಯೂರಪ್ಪ, ಬಿಜೆಪಿಯ ಓಟನ್ನು ಒಡೆದಿದ್ದರು. ಒಮ್ಮೆ ಪಕ್ಷದ ದೋಣಿಯಿಂದ ಆಚೆ ಕಾಲಿಟ್ಟು, ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಯಡಿಯೂರಪ್ಪ ವಿರುದ್ಧ ಒಂದು ಕಾಲದ ಆಪ್ತ ಸ್ನೇಹಿತ ಈಶ್ವರಪ್ಪ ತೊಡೆ ತಟ್ಟಿ ನಿಂತರು.

ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸುವ ಮೂಲಕ ಕುರುಬ ಸಮುದಾಯದ ಪ್ರಮುಖ ನಾಯಕ ತಾನು ಎಂಬುದನ್ನು ಘೋಷಿಸಿಕೊಂಡರು. ಅಷ್ಟೇ ಅಲ್ಲದೇ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ತಾನೂ ಆಕಾಂಕ್ಷಿ ಎಂಬುದನ್ನು ಬಹಿರಂಗವಾಗಿಯೇ ಘೋಷಿಸಿಕೊಂಡರು. ಆದರೆ ಬಿಜೆಪಿ ಹೈಕಮಾಂಡ್‌ ಮಾಡಿದ ಸರ್ವೇ ಪ್ರಕಾರ ಕುರುಬ ಸಮುದಾಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತೇ ಅಂತಿಮ. ಹಾಗಿರುವಾಗ, ಈಶ್ವರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಸಾಧ್ಯವೇ ಇಲ್ಲ. ಜತೆಗೆ ಆಗಾಗ ವಿವಾದಗಳನ್ನು ಸೃಷ್ಟಿಮಾಡಿಕೊಳ್ಳುವಲ್ಲಿ ಈಶ್ವರಪ್ಪ ಎತ್ತಿದ ಕೈ.

ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕೊನೆಗೂ ಯಡಿಯೂರಪ್ಪ ಅವರ ಹೆಸರನ್ನೇ ಅಂತಿಮಗೊಳಿಸಿದ್ದಾರೆ. ಇವೆಲ್ಲದರ ನಡುವೆ ತಮಾಷೆಯ ಸಂಗತಿಯೆಂದರೆ, ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಯಡಿಯೂರಪ್ಪ, ಯಾವುದೇ ಫ್ಲಕ್ಸ್‌ಗಳಲ್ಲೂ 75ನೇ ಹುಟ್ಟುಹಬ್ಬ ಎಂಬುದಾಗಿ ಹಾಕಿಸಿಕೊಂಡಿಲ್ಲ. ಅಸಲಿಗೆ ಎಷ್ಟನೇ ಹುಟ್ಟುಹಬ್ಬ ಎಂಬುದನ್ನೇ ಹಾಕಿಸಿಕೊಂಡಿಲ್ಲ. ಆ ಮೂಲಕ ತಮ್ಮ ವಯಸ್ಸನ್ನು ಗುಪ್ತವಾಗಿಡಬಹುದು ಎಂಬ ಕಲ್ಪನೆಯಲ್ಲಿದ್ದರೇನೋ ಗೊತ್ತಿಲ್ಲ. ಇದು ಯಡಿಯೂರಪ್ಪ ಅವರೊಳಗಿರುವ ಭಯವನ್ನು ಹೊರಹಾಕಿದೆ. ಯಡಿಯೂರಪ್ಪ ಸಹಜವಾಗಿಯೇ ಪಕ್ಷದೊಳಗಿನ ಶತ್ರುಗಳ ಜತೆ, ಪಕ್ಷದ ಹೊರಗಿನ ಶತ್ರುಗಳ ಜತೆ ಹೊಡೆದಾಡುವುದರೊಟ್ಟಿಗೆ ವಯೋಮಿತಿಯ ನಿಯಮಾವಳಿಯ ಬಗ್ಗೆಯೂ ಭಯ ಹೊಂದಿದ್ದರು. ಈಗ ಯಡಿಯೂರಪ್ಪ ನಿರಾಳರಾಗಿರುವುದು ಸತ್ಯ.

ಜಾತಿ ಸಮೀಕರಣವೂ ಸುಲಭವಲ್ಲ:

ಬಿಜೆಪಿ ಹೈಕಮಾಂಡ್‌ ಪ್ರಕಾರ ಪ್ರಬಲ ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮುದಾಯ ಈ ಬಾರಿಯೂ ಯಡಿಯೂರಪ್ಪ ಜತೆ ನಿಲ್ಲಲಿದೆ. ಆದರೆ ವಾಸ್ತವದಲ್ಲಿ, ಎಂದಿಗೂ ಬಿಜೆಪಿಯ ಜತೆಯಲ್ಲಿದ್ದ ಲಿಂಗಾಯತ ಸಮುದಾಯದಲ್ಲಿಯೂ ಈಗ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಲಿಂಗಾಯತ ಸಮುದಾಯವನ್ನು ಇಬ್ಬಾಗ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯ ಎಸೆದ ಲಿಂಗಾಯತ ಸ್ವತಂತ್ರ ಧರ್ಮದ ಕಾರ್ಡ್‌ ಈಗಲೂ ಕೆಲಸ ಮಾಡುತ್ತಿದೆ ಮತ್ತು ಲಿಂಗಾಯತರನ್ನು ಗೊಂದಲದ ಗೂಡಾಗಿಸಿದೆ.

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಮತ್ತೆ ಬಂದರೆ ಲಿಂಗಾಯತ ಸ್ವತಂತ್ರ ಧರ್ಮ ರಚನೆಗೆ ಕ್ರಮ ಕೈಗೊಳ್ಳಬಹುದು. ಆ ಮೂಲಕ ಅಲ್ಪ ಸಂಖ್ಯಾತ ಧರ್ಮವಾಗಿ ಲಿಂಗಾಯತ ಸಮುದಾಯ ದಾಖಲಾಗುತ್ತದೆ. ಅದರಿಂದ ಈಗಿರುವ ಅಲ್ಪಸಂಖ್ಯಾತರ ಕೋಟಾಗಳು ಮತ್ತು ಸಕಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಲಿಂಗಾಯತ ಸಮುದಾಯದ ಬಹುತೇಕರು ಯೋಚಿಸುತ್ತಿದ್ದಾರೆ. ಅತ್ತ ವೀರಶೈವ ಸಮುದಾಯದವರೂ ‘ವೀರಶೈವ-ಲಿಂಗಾಯತ’ ಧರ್ಮವನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದೆ. ಸದ್ಯದ ಬೆಳವಣಿಗೆಯ ಅನ್ವಯ, ವೀರಶೈವ ಮತದಾರರು ಬಿಜೆಪಿ ಜತೆಗೇ ಇದ್ದಾರೆ, ಆದರೆ ಬಹುಪಾಲು ಲಿಂಗಾಯತರು ಕಾಂಗ್ರೆಸ್‌ ಕಡೆಗೆ ವಾಲಿದಂತಿದೆ.

ಈ ವಿಚಾರ ಬಿಜೆಪಿ ಹೈಕಮಾಂಡ್‌ ಅರಿವಿಗೆ ಇದ್ದರೂ ಅನಿವಾರ್ಯವಾಗಿ ಯಡಿಯೂರಪ್ಪ ಅವರಿಗೆ ಮಣೆ ಹಾಕಲಾಗಿದೆ. ಚುನಾವಣೆ ಎದುರಿಸಲು ಇನ್ಯಾವುದೇ ಪರಿಚಿತ ಮುಖ ಬಿಜೆಪಿಯಲ್ಲಿಲ್ಲ ಎಂಬುದನ್ನು ಪಕ್ಷದ ಸದಸ್ಯರು ಒಪ್ಪಿಕೊಳ್ಳುತ್ತಾರೆ. ಆದರೆ ಎಂಎಲ್‌ಸಿ ಲೆಹರ್‌ ಸಿಂಗ್‌ ಥರದವರು ಯಡಿಯೂರಪ್ಪ ಹೊರತು ಪಡಿಸಿ ಹತ್ತಕ್ಕೂ ಹೆಚ್ಚು ಮುಖ್ಯಮಂತ್ರಿ ಅಭ್ಯರ್ಥಿಗಳು ಬಿಜೆಪಿ ಪಕ್ಷದಲ್ಲಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತ ಬಂದಿದ್ದರು. ಜತಗೆ ಲೆಹರ್‌ ಸಿಂಗ್‌ ನರೇಂದ್ರ ಮೋದಿಯವರೊಂದಿಗೆ ನಿಕಟ ಸಂರ್ಕ ಹೊಂದಿರುವುದರಿಂದ, ಬಿಎಸ್‌ವೈಗೆ ಅಂತಿಮ ಹಂತದಲ್ಲಿ ಕೊಕ್‌ ನೀಡಲಾಗುವುದು ಎಂಬ ಮಾತು ಕೇಳಿ ಬಂದಿತ್ತು. ಈಗ ಅವೆಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು, ಇಷ್ಟವಿದೆಯೋ ಇಲ್ಲವೋ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಬೇಕಿದೆ.

ಕೇಂದ್ರದಲ್ಲಿ ಬಿಜೆಪಿಯ ಹಿರಿಯ ರಾಜಕಾರಣಿಗಳನ್ನು ಕೇವಲ ಮಾರ್ಗದರ್ಶನ ಸಮಿತಿಯಲ್ಲಿ ಸಲಹೆ ನೀಡಲು ಕೂರಿಸಲಾಗಿದೆ. ಆದರೆ ರಾಜ್ಯದಲ್ಲಿ ಅನಿವಾರ್ಯವಾಗಿ ಯಡಿಯೂರಪ್ಪ ಅವರಿಗೆ ಮತ್ತೆ ಪಟ್ಟ ಕಟ್ಟಲು ಬಿಜೆಪಿ ಮುಂದಾಗಿದೆ. ಈ ಮೂಲಕ ‘ಹಾಳೂರಲ್ಲಿ ಉಳಿದವನೇ ಗೌಡ’ ಎಂಬ ನಾಣ್ಣುಡಿ ಮತ್ತೆ ಅಸ್ತಿತ್ವ ಪಡೆಕೊಂಡಿದೆ.