samachara
www.samachara.com
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
COVER STORY

‘ಇತಿಹಾಸದ ಪುಟಗಳಿಂದ’: 150 ವರ್ಷಗಳ ನಂತರವೂ ಪಾಠ ಕಲಿಯದ ಭಾರತದ ಬ್ಯಾಂಕಿಂಗ್ ವ್ಯವಸ್ಥೆ  

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿನ ಹಗರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು ಒಂದೆಡೆಗಾದರೆ, ಇನ್ನೂ ಕೆಲವು ಹಗರಣಗಳು ಬೆಳಕಿಗೆ ಬರುವಂತಾಗಲು ಕಾರಣವೂ ಆಗಿದೆ. ದೇಶದ ಇತರೆ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ಲೆಕ್ಕಪತ್ರಗಳನ್ನು ಮತ್ತೊಮ್ಮೆ ಮರು ಪರಿಶೀಲನೆ ಮಾಡುವ ಕೆಲಸಕ್ಕೆ ಇಳಿದಿವೆ. ಇಂತಹ ಹಗರಣಗಳು ತಮ್ಮ ತಮ್ಮ ಬ್ಯಾಂಕ್‌ಗಳಲ್ಲಿ ಇಲ್ಲ ಎಂಬ ಭರವಸೆಯೂ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮೂಡಿವೆ.

ಭಾರತದ ಬ್ಯಾಂಕಿಂಗ್‌ ವಲಯವನ್ನು ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಅಲುಗಾಡಿಸಿದರು ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ. ಆದರೆ ಭಾರತದ ಮಟ್ಟಿಗೆ ಪಿಎನ್‌ಬಿ ಹಗರಣ ಹೊಸದಾದರೂ ಈ ರೀತಿಯ ಹಗರಣಗಳು ಹೊಸದೇನಲ್ಲ. ಇಂತಹ ಹಲವಾರು ಪ್ರಕರಣಗಳನ್ನು ಭಾರತ ಶತಮಾನಗಳ ಕಾಲದಿಂದಲೂ ಕಾಣುತ್ತಾ ಬಂದಿದೆ. ಮೋಸದ ಪ್ರಕರಣಗಳು ಮತ್ತು ಬ್ಯಾಂಕ್‌ಗಳ ಕುಸಿತ ಭಾರತದ ಆರ್ಥಿಕ ಇತಿಹಾಸದ ಅವಿಭಾಜ್ಯ ಅಂಗ ಎಂಬಂತೆ ನಡೆದುಕೊಂಡು ಬಂದಿವೆ.

ಅದು 1913ರ ಕಾಲಮಾನ, ಜಾನ್‌ ಮೈನಾರ್ಡ್‌ ಕೀನ್ಸ್‌ ಎಂಬಾತ ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯ ಕುರಿತು ಸಮೀಕ್ಷೆ ನಡೆಸಿದ್ದ. ತಾನು ಬರೆದ ‘ಇಂಡಿಯನ್ ಕರೆನ್ಸಿ ಅಂಡ್‌ ಫೈನಾನ್ಸ್’ ಎಂಬ ಪುಸ್ತಕದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯ ಕುರಿತು ಎಚ್ಚರಿಕೆಯನ್ನೂ ನೀಡಿದ್ದ. “ಭಾರತೀಯ ಬ್ಯಾಂಕ್‌ಗಳು ಅಪಾಯಕಾರಿ ಸ್ಥಿತಿಯನ್ನು ತಲುಪುತ್ತಿವೆ. ಈ ಸಂಧರ್ಭವನ್ನು ನಿವಾರಿಸಲು ಸುರಕ್ಷಿತವಾದ ಆಡಳಿತ ತತ್ವಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ,” ಎಂದು ಕೀನ್ಸ್ ಅಂದೇ ಹೇಳಿದ್ದ. ಭಾರತದ ಬ್ಯಾಂಕಿಂಗ್‌ ವ್ಯವಸ್ಥೆ ಅವನ ಎಚ್ಚರಿಕೆಯ ಕಡೆಗೆ ಗಮನವೇ ಹರಿಸಲಿಲ್ಲ ಎಂದೆನಿಸುತ್ತದೆ. ಆದಕಾರಣ ಬ್ಯಾಂಕ್‌ಗಳು ಅಪಾಯಕಾರಿ ಸ್ಥಿತಿಯಲ್ಲೇ ಕಾಲ ನೂಕುತ್ತಿವೆ.

ಇಂದಿಗೆ ಸುಮಾರು 150 ವರ್ಷಗಳಷ್ಟು ಹಿಂದೆಯೇ ಇಂತದ್ದೊಂದು ಬ್ಯಾಂಕಿಂಗ್ ಕುಸಿತ ಭಾರತದಲ್ಲಿ ಸಂಭವಿಸಿತ್ತು. ಪ್ರೆಸಿಡೆನ್ಸಿ ಬ್ಯಾಂಕ್‌ ಆಫ್ ಬಾಂಬೆ 1860ರ ದಶಕದ ಮಧ್ಯದಲ್ಲಿ ತನ್ನ ಗ್ರಾಹಕರಿಗೆ ಸಾಲ ನೀಡಿ ಹಿಂತಿರುಗಿಸಿಕೊಳ್ಳಲಾಗದೇ ಪರದಾಡಿತ್ತು. ಈ ಪ್ರೆಸಿಡೆನ್ಸಿ ಬ್ಯಾಂಕ್‌ ಆಫ್ ಬಾಂಬೆಯನ್ನು ಈಸ್ಟ್ ಇಂಡಿಯಾ ಕಂಪನಿ 1840ರಲ್ಲಿ ಸ್ಥಾಪಿಸಿತು. ಆಗ ಬಾಂಬೆ ಸಂಪೂರ್ಣವಾಗಿ ಹತ್ತಿ ಮಾರುಕಟ್ಟೆಯ ಮೇಲೆ ಅವಲಂಭಿತವಾಗಿತ್ತು. ಅದು ಅಮೆರಿಕಾದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಸಮಯ. ಕಾರಣವಾಗಿ ಅಮೆರಿಕಾದಿಂದ ದೊರೆಯುತ್ತಿದ್ದ ಹತ್ತಿ ಪ್ರಮಾಣ ಕುಸಿದ ಬೆನ್ನಲ್ಲೇ ಬಾಂಬೆ ಹತ್ತಿಗೆ ಬೇಡಿಕೆ ಏರಿತ್ತು.

ಬಾಂಬೆಯಲ್ಲಿ ಹಲವಾರು ಕಾಟನ್‌ ಕಂಪನಿಗಳು, ಬ್ಯಾಂಕ್‌ಗಳು ತಲೆ ಎತ್ತಲು ಅಮೆರಿಕಾ ಆಂತರಿಕ ಕದನ ದಾರಿ ಮಾಡಿಕೊಟ್ಟಿತು. ಉದ್ಯಮ ಸ್ಥಾಪಿಸಲು ಮುಂದೆ ಬಂದವರಿಗೆಲ್ಲಾ ಪ್ರೆಸಿಡೆನ್ಸಿ ಬ್ಯಾಂಕ್‌ ಆಫ್ ಬಾಂಬೆ ಸಾಲು ಕೊಟ್ಟು, ಹಿಂತಿರುಗಿಸುವವರಿಗಾಗಿ ಕಾದು ಕುಳಿತಿತ್ತು. ಆ ವೇಳೆಗೆ ಆಂತರಿಕ ಕದನದಿಂದ ಹೊರ ಅಮೆರಿಕಾ ತನ್ನ ಎಂದಿನ ಸ್ಥಿತಿಗೆ ಬಂದೊಡನೆ, ಇಲ್ಲಿ ಕಂಪನಿಗಳ ಆರ್ಥಿಕತೆ ಇಳಿಮುಖವಾಗತೊಡಗಿತು. ಭಾರತದ ಹತ್ತಿಗಿದ್ದ ಬೇಡಿಕೆ ಕಡಿಮೆಯಾಯಿತು. ಅಲ್ಲಿಯವರೆಗೂ ಸ್ಥಿರವಾಗಿದ್ದ ಬ್ಯಾಂಕ್‌ ಅತಿವೇಗದಲ್ಲಿ ತನ್ನ ಆರ್ಥಿಕ ಸ್ಥಿರತೆಯನ್ನು ಕಳೆದುಕೊಂಡು ಮುಚ್ಚಿಹೋಯಿತು.

ಇದಕ್ಕೂ ಮುಂಚೆಯೇ ಕಲ್ಕತ್ತಾದ ಸುತ್ತ ಕಾರ್ಯ ನಿರ್ವಹಿಸುತ್ತಿದ್ದ ಹಲವಾರು ಬ್ಯಾಂಕ್‌ಗಳು ಆರ್ಥಿಕ ದಿವಾಳಿಗೆ ಒಳಗಾಗಿದ್ದವು. ಅವು ಕೂಡ ಇದೇ ರೀತಿ ಸಾಲ ಹಿಂತಿರುಗಿಸಿಕೊಳ್ಳಲಾಗದೇ ಸೋತ ಬ್ಯಾಂಕ್‌ಗಳಾಗಿದ್ದವು. ಪ್ರಸಿಡೆನ್ಸಿ ಬ್ಯಾಂಕ್‌ನ ಕುಸಿತದ ನಂತರ ಬ್ರಿಟೀಷ್‌ ಆಡಳಿತ ಬ್ಯಾಂಕಿಂಗ್‌ ವ್ಯವಸ್ಥೆಯ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿತ್ತು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಕುಸಿತದ ಹಿನ್ನಲೆಯಲ್ಲಿ, ಬ್ಯಾಂಕ್‌ಗಳ ಖಾಸಗಿಕರಣಕ್ಕೆ ಮಣೆಹಾಕುವ ಮಾತುಗಳು ತೇಲಿಬಂದಿದ್ದವು. ಆದರೆ ಭಾರತದ ಇತಿಹಾಸದಲ್ಲಿ ಖಾಸಗಿ ಬ್ಯಾಂಕ್‌ಗಳೂ ಸಹ ಸೋತು ಮಂಡಿಯೂರಿವೆ. ಸ್ವತಂತ್ರ ಪೂರ್ವ ಅವಧಿಯಲ್ಲಿ ನಡೆದ ಸ್ವದೇಶಿ ಚಳವಳಿ ಖಾಸಗಿ ಬ್ಯಾಂಕ್‌ಗಳು ಮಣ್ಣು ಮುಕ್ಕಲು ದಾರಿ ಮಾಡಿಕೊಟ್ಟಿತ್ತು. 1913ರ ವೇಳೆಗೆ ಭಾರತದಲ್ಲಿ 451 ಬ್ಯಾಂಕಿಂಗ್‌ ಉದ್ಯಮಗಳು ಅಸ್ಥಿತ್ವದಲ್ಲಿದ್ದವು. ಆದೇ ವೇಳೆ ಚಾಲ್ತಿಗೆ ಬಂದ ಸ್ವದೇಶಿ ಚಳವಳಿ, ‘ಸ್ವದೇಶಿ ಬ್ಯಾಂಕ್‌ಗಳು ಸ್ವದೇಶಿ ಉದ್ಯಮಗಳ ಬೆಳವಣಿಗೆಗೆ ಹಣ ನೀಡಬೇಕು’ ಎಂಬ ಕರೆಯನ್ನು ನೀಡಿತು.

ಹೀಗೆ ಚಳವಳಿಯ ಜತೆ ಕೈಜೋಡಿಸಿದ ಕೆಲವು ಬ್ಯಾಂಕ್‌ಗಳು ಕೆಲವೇ ದಿನಗಳಲ್ಲಿ ಬಾಗಿಲು ಮುಚ್ಚಿದವು. ಅದೇ ಅವಧಿಯಲ್ಲಿ ಇಂಡಿಯನ್‌ ಸ್ಪೈಸ್‌ ಬ್ಯಾಂಕ್‌ ಪ್ರಾಮಾಣಿಕ ಆಭರಣಗಳ ಉದ್ಯಮಿಯೊಬ್ಬನಿಗೆ ಅಗಾಧ ಪ್ರಮಾಣದ ಸಾಲ ನೀಡಿತ್ತು. ಉದ್ಯಮಿಯ ವ್ಯಾಪಾರ ಕುಸಿದು ನಷ್ಟ ಉಂಟಾಯಿತು. ಅವನ ಕುಸಿತದ ಜೊತೆಗೆ ಸಾಲ ನೀಡಿದ ಬ್ಯಾಂಕ್‌ ಕೂಡ ಅಸ್ತಿತ್ವವನ್ನು ಕಳೆದುಕೊಂಡಿತು. ಪೀಪಲ್ಸ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಇಂತಹದ್ದೇ ರೀತಿಯಲ್ಲಿ ಕೊನೆಗೊಂಡಿತ್ತು. 1913ರಲ್ಲಿ ‘ದಿ ಕಲೋನಿಸ್ಟ್‌’ ಸುದ್ದಿ ಸಂಸ್ಥೆ ‘ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್‌ ಶೀಟ್‌ ಸಿದ್ಧ ಪಡಿಸಿದರೆ ಈ ರೀತಿಯ ಕುಸಿತದ ಮುನ್ಸೂಚನೆ ದೊರೆತು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು’ ಎಂದು ಪ್ರಕಟಿಸಿತ್ತು.

ಈ ಅವಧಿಯಲ್ಲಿ ಹೆಚ್ಚು ಬ್ಯಾಂಕ್‌ ವಿಫಲತೆಗಳು ಸಂಭವಿಸಿದ್ದು ಪಂಜಾಬ್‌ ಪ್ರಾಂತ್ಯದಲ್ಲಿ. 1913-14ರಲ್ಲಿ ಪತನ ಹೊಂದಿದ 54 ಬ್ಯಾಂಕ್‌ಗಳ ಪೈಕಿ 28 ಬ್ಯಾಂಕ್‌ಗಳು ಪಂಜಾಬ್‌ ಭಾಗದವಾಗಿದ್ದವು. 11 ಬ್ಯಾಂಕ್‌ಗಳು ಬಾಂಬೆ ಪ್ರಾಂತ್ಯದವು. ನಂತರ ಕಾಲಘಟ್ಟದಲ್ಲಿ ಈ ಭಾಗಗಳ ಬದಲಾಗಿ ದಕ್ಷಿಣ ಭಾರತ ಮತ್ತು ಪಶ್ಚಿಮ ಬಂಗಾಳದ ಬ್ಯಾಂಕ್‌ಗಳು ಪತನಗೊಳ್ಳಲು ಶುರುವಾಯಿತು. ಈ ಸರಣಿ ಕುಸಿತದಿಂದ ಜರ್ಜರಿತವಾದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ತಹಬದಿಗೆ ತರಲೆಂದು ಭಾರತದ ರಾಷ್ಟ್ರೀಯ ಬ್ಯಾಂಕ್‌ ಆದ ಆರ್‌ಬಿಐ 1934ರಲ್ಲಿ ಸ್ಥಾಪನೆಯಾಯಿತು. ಅದಾಗಲೇ ಭಾರತದಲ್ಲಿ 350 ಬ್ಯಾಂಕ್‌ಗಳು ಮುಚ್ಚಿಹೋಗಿದ್ದವು. ಆದರೆ ಆರ್‌ಬಿಐನ ಸ್ಥಾಪನೆಯಿಂದ ಮಹತ್ವದ ಬದಲಾವಣೆಯೇನೂ ಕಾಣಲಿಲ್ಲ. ಬಾಗಿಲು ಮುಚ್ಚುವ ಬ್ಯಾಂಕ್‌ಗಳ ಸಂಖ್ಯೆ ಏರುತ್ತಲೇ ಇತ್ತು.  1913ರಿಂದ 1966ರವರೆಗೆ ಸುಮಾರು 1800 ಬ್ಯಾಂಕ್‌ಗಳು ಆರ್ಥಿಕ ಕುಸಿತ ಕಂಡಿದ್ದವು. ಈ ಬ್ಯಾಂಕ್‌ಗಳ ಪೈಕಿ ಶೇ.25ರಷ್ಟು ಬ್ಯಾಂಕ್‌ಗಳು ಕೇರಳದವು. ಶೇ. 21% ಬ್ಯಾಂಕ್‌ಗಳು ಪಶ್ಚಿಮ ಬಂಗಾಳ ಮತ್ತು ಶೇ.20ರಷ್ಟು ಬ್ಯಾಂಕ್‌ಗಳು ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿದ್ದವು.

1969ರ ನಂತರ ಆರ್‌ಬಿಐ ಯಾವುದೇ ಹೊಸ ಬ್ಯಾಂಕ್‌ಗಳ ಸ್ಥಾಪನೆಗೆ ಪರವಾನಗಿ ನೀಡಲು ನಿರಾಕರಿಸಿತು. 1994ರವರೆಗೂ ಈ ಪರಿಸ್ಥಿತಿ ಹೀಗೆ ಮುಂದುವರೆದಿತ್ತು. 1994ರಲ್ಲಿ 10 ಬ್ಯಾಂಕ್‌ಗಳ ಸ್ಥಾಪನೆಗೆ ಅವಕಾಶ ನೀಡಲಾಯಿತು. 2000ಕ್ಕೆ ಮುಂಚೆ 2 ಬ್ಯಾಂಕ್‌ಗಳು ಸ್ಥಾಪನೆಯಾದವು. ನಂತರ 2014ರಲ್ಲಿ ಇನ್ನೆರಡು ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು. ವಿಶೇಷವಾಗಿ ಸ್ಥಳೀಯ ಬ್ಯಾಂಕ್‌, ಸಣ್ಣ ಪ್ರಮಾಣದ ಬ್ಯಾಂಕ್‌ಗಳ ಸ್ಥಾಪನೆಗೆ ಅವಕಾಶ ದೊರೆಯಿತು. ಈ ಎಲ್ಲಾ ಬೆಳವಣಿಗೆಗಳ ಜತೆಗೆ ಕಳೆದ ವರ್ಷ ರಾಜ್ಯ ಮಟ್ಟದ ಬ್ಯಾಂಕ್‌ಗಳು ಸ್ಟೇಟ್‌ ಬ್ಯಾಂಕ್‌ ಇಂಡಿಯಾದೊಳಗೆ ವಿಲೀನಗೊಂಡವು.

ಒಂದು ಕಡೆ ಬ್ಯಾಂಕ್‌ಗಳ ಸ್ಥಾಪನೆಯಾಗುತ್ತಿದೆ. ಆದರೆ ಅಸ್ತಿತ್ವದಲ್ಲಿರುವ ಬ್ಯಾಂಕ್‌ಗಳ ಸ್ಥಿತಿ ಸುಧಾರಿಸುತ್ತಿಲ್ಲ.  1992 ಮತ್ತು 2001ರಲ್ಲಿ ಬ್ಯಾಂಕಿಂಗ್‌ ವಲಯದಲ್ಲಿನ ಮೋಸದ ಕಾರಣದಿಂದಾಗಿ 1992 ಮತ್ತು 2001ರಲ್ಲಿ ‍ಷೇರು ಮಾರುಕಟ್ಟೆಯಲ್ಲಿ ಹಗರಣಗಳಾಗಿದ್ದವು. 1990ರ ದಶಕದಲ್ಲಿ ಸ್ಥಾಪನೆಯಾದ ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ 2001ರ ಷೇರು ಮಾರುಕಟ್ಟೆ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 1996ರಲ್ಲಿ ಇಂಡಿಯನ್‌ ಬ್ಯಾಂಕ್‌ನಲ್ಲಿ ವಂಚನೆಯಾಗಿತ್ತು. ಇವೆಲ್ಲದರ ಜತೆಗೆ 1980 ಹಾಗೂ 1990ರ ಅವಧಿಯಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ಹಿಂತಿರುಗಿಸದೇ ವಂಚಿಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದವು.

2011ರಲ್ಲಿ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ಐಡಿಬಿಐ ಬ್ಯಾಂಕ್‌ಗಳು 10,000 ಕೃತಕ ಬ್ಯಾಂಕ್‌ ಖಾತೆಗಳನ್ನು ತೆರೆದು 1,500 ಕೋಟಿ ರುಪಾಯಿಗಳನ್ನು ಜಮೆ ಮಾಡಿದ ವಿಷಯವನ್ನು ಸಿಬಿಐ ಬಯಲು ಮಾಡಿತ್ತು. 2014ರಲ್ಲಿ ಸುಮಾರು 700 ಕೋಟಿ ರುಪಾಯಿಗಳ ವಂಚನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು 9 ಪ್ರಥಮ ವರ್ತಮಾನ ವರದಿಗಳನ್ನು ದಾಖಲಿಸಿದ್ದರು. ಅದೇ ವರ್ಷ ಇಂಡಿಯನ್‌ ಬ್ಯಾಂಕ್‌ನಲ್ಲಿ 436 ಕೋಟಿ ರುಪಾಯಿಗಳ ಲೆಕ್ಕತಪ್ಪಿತ್ತು. ಕಳೆದ ವರ್ಷದ ವಿಜಯ್‌ ಮಲ್ಯ ಹಗರಣ ಇನ್ನೂ ಹಸಿಯಾಗಿಯೇ ಇದೆ.

ಬೆಂಗಳೂರಿನ ‘ಐಐಎಂ’ನ ವರದಿ ತಿಳಿಸುವಂತೆ 2012-16ರ ಅವಧಿಯಲ್ಲಿ ಬ್ಯಾಂಕ್‌ಗಳಿಗಾಗಿರುವ ಮೋಸದ ಪ್ರಮಾಣ ಸುಮಾರು 22,743 ಕೋಟಿ. ಇದು ಬ್ಯಾಂಕ್‌ಗಳಲ್ಲಿನ ತಮ್ಮ ಖಾತೆಗಳಿಗೆ ಜನಸಾಮಾನ್ಯರೇ ತುಂಬಿದ ಹಣ. ಜನರ ಬೆವರಿನ ಫಲವನ್ನು ಹೀಗೆ ಯಾರೂ ಕೆಲವರು ದೋಚುವ ಅವಕಾಶಗಳನ್ನು ಇಲ್ಲವಾಗಿಸಬೇಕಿದೆ. ಭಾರತದ ಕೇಂದ್ರ ಸರಕಾರ ಮತ್ತು ಬ್ಯಾಂಕ್‌ಗಳ ನಿರ್ವಹಣೆಯನ್ನು ಹೊತ್ತಿರುವ ಆರ್‌ಬಿಐ ಬ್ಯಾಂಕಿಂಗ್‌ ವ್ಯವಸ್ಥೆಯ ಇತಿಹಾಸವನ್ನು ಮತ್ತೊಮ್ಮೆ ಕೆದಕಿ ನೋಡುವ ಅಗತ್ಯವಿದೆ. ಹಗರಣಗಳಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ನಂತರ ದಿನಗಳಲ್ಲಿ ಕಣ್ಮರೆಯಾಗುತ್ತಲೇ ಹೋಗುತ್ತಿದ್ದರೆ ಬ್ಯಾಂಕಿಂಗ್‌ ವ್ಯವಸ್ಥೆ ಸ್ಥಿರವಾಗಿ ನಿಲ್ಲುವುದು ಸಾಧ್ಯವಿಲ್ಲ.

ಮಾಹಿತಿ ಮೂಲ: livemint