samachara
www.samachara.com
‘ಮತ ಹಾಕುವ ಮುನ್ನ...’: ಪಿಐಎಲ್‌ ವಿಷಯ; ಪ್ರಜಾಪ್ರತಿನಿಧಿ ಕಾಯ್ದೆಯ ಪರಿಚಯ
COVER STORY

‘ಮತ ಹಾಕುವ ಮುನ್ನ...’: ಪಿಐಎಲ್‌ ವಿಷಯ; ಪ್ರಜಾಪ್ರತಿನಿಧಿ ಕಾಯ್ದೆಯ ಪರಿಚಯ

ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ವ್ಯಕ್ತಿ ರಾಜಕೀಯ ಪಕ್ಷವೊಂದರ ಅಧ್ಯಕ್ಷ ಅಥವಾ ಆ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಎಷ್ಟು ಸರಿ? ಎಂಬ ಚರ್ಚೆಯನ್ನು ಸುಪ್ರೀಂಕೋರ್ಟ್‌ನ ಸೋಮವಾರದ ಕಲಾಪ ಮುನ್ನೆಲೆಗೆ ತಂದಿದೆ.

“ಅಪರಾಧ ಹಿನ್ನೆಲೆಯ ವ್ಯಕ್ತಿ ರಾಜಕೀಯ ಪಕ್ಷದ ಅಧ್ಯಕ್ಷನಾಗಲು ಹೇಗೆ ಸಾಧ್ಯ?” ಎಂದು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ನಿಯಮಗಳಡಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ವ್ಯಕ್ತಿಗಳು ಪರೋಕ್ಷವಾಗಿ ಚುನಾವಣಾ ವ್ಯವಸ್ಥೆಯಲ್ಲಿ ಭಾಗಿಯಾಗುವ ಹಿಂದಿನ ತರ್ಕ ಎಂಥದ್ದು ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಈ ವರದಿ ಪರಿಚಯಿಸುತ್ತಿದೆ.

ಚರ್ಚೆಯ ಹಿನ್ನೆಲೆ:

“ಅಪರಾಧ ಹಿನ್ನೆಲೆಯ ವ್ಯಕ್ತಿಗಳು ರಾಜಕೀಯ ಪಕ್ಷ ಸ್ಥಾಪಿಸಿದರೆ ಅಥವಾ ರಾಜಕೀಯ ಪಕ್ಷಗಳ ಪ್ರಮುಖ ಸ್ಥಾನಗಳಲ್ಲಿದ್ದರೆ ಅಂತಹ ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗ ರದ್ದುಗೊಳಿಸಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು” ಎಂದು ದೆಹಲಿ ಬಿಜೆಪಿ ವಕ್ತಾರರೂ ಆಗಿರುವ ಸುಪ್ರೀಂಕೋರ್ಟ್‌ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡಿದೆ ಎತ್ತಿಕೊಂಡಿದೆ. ಇಂತಹ ವ್ಯವಸ್ಥೆಯ ಸುಧಾರಣೆ ಅಗತ್ಯ ಎಂದು ಈ ಸಮಯದಲ್ಲಿ ಅಭಿಪ್ರಾಯಪಟ್ಟಿದೆ. ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕಾಲಾವಕಾಶ ಕೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಎರಡು ವಾರ ಮುಂದೂಡಿದೆ.

ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್‌ ಚೌಟಾಲ ಅವರ ಹೆಸರುಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. “ಕೊಲೆ, ಅತ್ಯಾಚಾರ, ಕಳ್ಳಸಾಗಣೆ ಮುಂತಾದ ಅಪರಾಧ ಕೃತ್ಯಗಳನ್ನು ಎಸಗಿರುವವರು ಕೂಡ ಸದ್ಯ ರಾಜಕೀಯ ಪಕ್ಷವನ್ನು ಸ್ಥಾಪಿಸಬಹುದು ಮತ್ತು ಪಕ್ಷದ ಅಧ್ಯಕ್ಷರಾಗಬಹುದು. ಇದನ್ನು ನಿಯಂತ್ರಿಸುವ ಸುಧಾರಣೆ ಅಗತ್ಯ” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.“ಸ್ವತಂತ್ರ ಅಭ್ಯರ್ಥಿಗಳು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದನ್ನು ನಿಯಂತ್ರಿಸುವ ವ್ಯವಸ್ಥೆ ಜಾರಿಗೆ ಬರಬೇಕು.

ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯ ಬಳಿಕ ಆಡಳಿತಕ್ಕೆ ಬರುವ ಪಕ್ಷಕ್ಕೆ ಹಾರುತ್ತಾರೆ. ಚುನಾವಣಾ ವ್ಯವಸ್ಥೆ ಭ್ರಷ್ಟವಾಗಲು ಸ್ವತಂತ್ರ ಅಭ್ಯರ್ಥಿಗಳ ಪಾಲೂ ಹೆಚ್ಚಾಗಿದೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಗಳ ಮೇಲೆ ನಿಯಂತ್ರಣ ಹೇರಬೇಕು” ಎಂದು ಅರ್ಜಿಯಲ್ಲಿ ಕೋರಲಾಗಿದೆ.ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 8 ಮತ್ತು 8ಎ ಪ್ರಕಾರ, ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಕೋಮು ಸಾಮರಸ್ಯ ಕದಡುವಿಕೆ, ಜಾತಿ ನಿಂದನೆಯಂತಹ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ, ಚುನಾವಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಾಜಕೀಯ ಪಕ್ಷಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಅಥವಾ ಪಕ್ಷದ ಪ್ರಮುಖ ಸ್ಥಾನಗಳಿಗೆ ಎಂಥವರು ಆಯ್ಕೆಯಾಗಬೇಕು; ರಾಜಕೀಯ ಪಕ್ಷ ಸ್ಥಾಪಿಸಲು ಬೇಕಾದ ಅರ್ಹತೆ ಹಾಗೂ ಪಕ್ಷದೊಳಗಿನ ಪದಾಧಿಕಾರಿಗಳ ಅರ್ಹತೆ ಏನಿರಬೇಕು ಎಂಬ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆ ಏನನ್ನೂ ಹೇಳುವುದಿಲ್ಲ.

ರಾಜಕೀಯ ಪಕ್ಷಗಳ ನೋಂದಣಿ

ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಪ್ರಕಾರ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ದೇಶದಲ್ಲಿರುವ ರಾಜಕೀಯ ಪಕ್ಷಗಳೆಲ್ಲವೂ ತಮ್ಮ ಆಂತರಿಕ ನಿಯಮ ಹಾಗೂ ಪಕ್ಷದ ಧ್ಯೇಯೋದ್ದೇಶಗಳ ಮಾಹಿತಿಯೊಂದಿಗೆ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ಎನ್ನುತ್ತದೆ 1992ರ ಮಾರ್ಚ್‌ 23ರಂದು ಚುನಾವಣಾ ಆಯೋಗದ ಆದೇಶ.

ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಪ್ರಕಾರ ರಾಜಕೀಯ ಪಕ್ಷಗಳ ನೋಂದಣಿಯ ನಿಯಮಗಳು ಹೀಗಿವೆ:

  • ರಾಜಕೀಯ ಪಕ್ಷ ಅಸ್ಥಿತ್ವಕ್ಕೆ ಬಂದ 30 ದಿನಗಳೊಳಗೆ ಚುನಾವಣಾ ಆಯೋಗಕ್ಕೆ ಪಕ್ಷದ ಲೆಟರ್ ಹೆಡ್‌ನಲ್ಲಿ ವಿವರವಾದ ಅರ್ಜಿ ಸಲ್ಲಿಸಬೇಕು.
  • ‘ಅಧೀನ ಕಾರ್ಯದರ್ಶಿ, ಚುನಾವಣಾ ಆಯೋಗ, ನವದೆಹಲಿ’ ಇವರ ಹೆಸರಿನಲ್ಲಿ ಅರ್ಜಿ ಶುಲ್ಕವಾಗಿ ರೂ. 10 ಸಾವಿರದ ಡಿ.ಡಿ. ತೆಗೆದು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಪಕ್ಷದ ಆಂತರಿಕ ನಿಯಮಗಳು, ಪಕ್ಷದ ನೀತಿ ಸಂಹಿತೆ, ಬೈಲಾದ ಸಂಪೂರ್ಣ ಮಾಹಿತಿಯನ್ನು ಅರ್ಜಿ ಜತೆಗೆ ನೀಡಬೇಕು.
  • ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸದಸ್ಯರು, ಪದಾಧಿಕಾರಿಗಳ ಹೆಸರುಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಪಕ್ಷದ ಚಿಹ್ನೆಯ ಮಾಹಿತಿ ಒದಗಿಸಬೇಕು.
  • “ನಾವು ಬೇರೆ ಪಕ್ಷದ ಸದಸ್ಯತ್ವ ಹೊಂದಿಲ್ಲ” ಎಂಬ ಪ್ರಮಾಣಪತ್ರವನ್ನು ಪಕ್ಷದ ಪ್ರಮುಖರು ನೀಡಬೇಕು.
  • ಪಕ್ಷದ ಬ್ಯಾಂಕ್‌ ಖಾತೆಯ ಮಾಹಿತಿ ನೀಡಬೇಕು.
  • ಪಕ್ಷದ ಸದಸ್ಯ ಬಲ, ರಾಷ್ಟ್ರೀಯ ಪಕ್ಷವೇ, ಪ್ರಾದೇಶಿಕ ಪಕ್ಷವೇ ಎಂಬ ಮಾಹಿತಿಯನ್ನು ಒದಗಿಸಬೇಕು.
  • ಭಾರತದ ಸಂವಿಧಾನಕ್ಕೆ, ರಾಷ್ಟ್ರದ ಸಮಗ್ರತೆಗೆ, ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ತತ್ವಗಳಿಗೆ ತಮ್ಮ ಪಕ್ಷ ಬದ್ಧವಾಗಿರುತ್ತದೆ ಎಂಬ ಘೋಷಣಾ ಪತ್ರ ಸಲ್ಲಿಸಬೇಕು.
  • ಈಗಾಗಲೇ ಅಸ್ಥಿತ್ವದಲ್ಲಿರುವ ಪಕ್ಷಗಳು ಕೂಡಾ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು 1992ರ ಮಾರ್ಚ್‌ 23ರ ಆದೇಶದಲ್ಲಿ ಚುನಾವಣಾ ಆಯೋಗ ತಿಳಿಸಿತ್ತು.

ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಹೀಗೆ ರಾಜಕೀಯ ಪಕ್ಷಗಳ ನೋಂದಣಿ ಬಗ್ಗೆ ಮಾತ್ರ ಹೇಳುತ್ತದೆಯೇ ಹೊರತು ರಾಜಕೀಯ ಪಕ್ಷಗಳನ್ನು ಸ್ಥಾಪಿಸುವವರಿಗೆ ಇರಬೇಕಾದ ಅರ್ಹತೆ ಹಾಗೂ ರಾಜಕೀಯ ಪಕ್ಷದೊಳಗಿನ ಪದಾಧಿಕಾರಿಗಳ ಅರ್ಹತೆಯ ಬಗ್ಗೆ ಯಾವ ನಿಯಮಗಳನ್ನೂ ಹೊಂದಿಲ್ಲ. ಇದು ಈ ಕಾಯ್ದೆಯ ಮಿತಿ, ಈ ಬಗ್ಗೆ ಕಾಯ್ದೆಗೆ ತಿದ್ದುಪಡಿಯಾಗಬೇಕು ಎನ್ನುತ್ತಾರೆ ಕಾನೂನು ತಜ್ಞರು.“ಪ್ರಜಾಪ್ರತಿನಿಧಿ ಕಾಯ್ದೆ ಜಾರಿಗೆ ಬಂದು ಆರು ದಶಕಗಳು ಕಳೆದಿವೆ. ಈ ಕಾಯ್ದೆಗೆ ಕೆಲವು ತಿದ್ದುಪಡಿಗಳೂ ಆಗಿವೆ. ಯಾವುದೇ ಕಾಯ್ದೆ ಕಾಲಕಾಲಕ್ಕೆ ತಿದ್ದಪಡಿಯಾಗಬೇಕಾಗುತ್ತದೆ. ಜನಜೀವನದಲ್ಲಿ ವೇಗದ ಬದಲಾವಣೆಗಳಾಗುತ್ತಿರುವ ದಿನಗಳಲ್ಲಿ ಕಾಯ್ದೆಗಳ ಪ್ರಸ್ತುತತೆಯ ಬಗ್ಗೆಯೂ ಸರಕಾರ ಯೋಚಿಸಬೇಕಾಗುತ್ತದೆ. ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವ ಹಂತದಲ್ಲೇ ಅರ್ಹತೆಗಳ ಮಾನದಂಡವನ್ನು ಸರಿಯಾಗಿ ನಿಗದಿಪಡಿಸಬೇಕಾಗಿದೆ. ಜೈಲಿನಲ್ಲಿದ್ದುಕೊಂಡು ಚುನಾವಣೆಗೆ ನಾಮಪತ್ರ ಸಲ್ಲಿಸುವ ವ್ಯವಸ್ಥೆ ಮೊದಲು ಕೊನೆಯಾಗಬೇಕು” ಎಂಬುದು ಕಾನೂನು ಪ್ರಾಧ್ಯಾಪಕ ಚಂದ್ರಶೇಖರ ಐಜೂರು ಅಭಿಮತ.“ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅರ್ಹತೆಗಳನ್ನು ನಿಗದಿ ಪಡಿಸಿರುವಂತೆ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೂ ಅರ್ಹತೆ ನಿಗದಿಪಡಿಸಬೇಕು. ಇದಕ್ಕಾಗಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಗೆ ತಿದ್ದುಪಡಿ ತಂದು ಕೆಲವು ನಿಯಮಗಳನ್ನು ಸೇರಿಸಬೇಕು.

ಒಬ್ಬ ಅಭ್ಯರ್ಥಿ ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶವಿರುವ ಸೆಕ್ಷನ್‌ 33ರ 7ನೇ ಸಬ್‌ ಸೆಕ್ಷನ್‌ ಅನ್ನು ತೆಗೆದುಹಾಕಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ಘೋಷಣೆ, ಅಪರಾಧ ಹಿನ್ನೆಲೆಯ ಆಧಾರದ ಮೇಲೆ ಆಯಾ ಅಭ್ಯರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂಥ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಇಲ್ಲವಾದರೆ ಅಭ್ಯರ್ಥಿಗಳು ಸಲ್ಲಿಸುವ ಆಸ್ತಿ, ಅಪರಾಧದ ಮಾಹಿತಿಯನ್ನು ಆಯೋಗ ಆದಾಯ ತೆರಿಗೆ ಇಲಾಖೆ ಮತ್ತು ಗೃಹ ಇಲಾಖೆಗೆ ಕಳಿಸಿ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವಂಥ ವ್ಯವಸ್ಥೆ ಜಾರಿಗೆ ಬರಬೇಕು” ಎನ್ನುತ್ತಾರೆ ಅವರು.

“ಚುನಾವಣಾ ಆಯೋಗಕ್ಕೆ ಮುಖ್ಯ ಆಯುಕ್ತರಾಗಿ ಬರುವವರು ಇಚ್ಛಾಶಕ್ತಿ ಹೊಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ. ಟಿ.ಎನ್‌. ಶೇಷನ್, ಜೆ.ಎಂ. ಲಿಂಗ್ಡೊ ಅವರಂಥ ಅಧಿಕಾರಿಗಳು ಈ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದರು. ಚುನಾವಣಾ ಆಯುಕ್ತರಾಗಿ ಬಂದವರು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ರಾಜಕೀಯ ಭ್ರಷ್ಟಾಚಾರವನ್ನು ಬೇರು ಮಟ್ಟದಲ್ಲೇ ಕಿತ್ತು ಹಾಕಲು ಸಾಧ್ಯವಿದೆ. ಕಾನೂನುಗಳೆಲ್ಲವೂ ಆದರ್ಶ ತತ್ವಗಳ ಮೇಲೆ ರಚನೆಯಾಗಿರುತ್ತವೆ. ಆದರೆ, ವಾಸ್ತವ ಹಾಗಿರುವುದಿಲ್ಲ. ಹೀಗಾಗಿ ಕಾಯ್ದೆಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿ ಅವನ್ನು ಪ್ರಸ್ತುತಗೊಳಿಸಬೇಕು” ಎಂಬುದು ಅವರ ಮಾತು.

ಸೆಕ್ಷನ್‌ 33 (7) ಯಾಕೆ ರದ್ದಾಗಬೇಕು?

ರಾಜಕೀಯ ಪಕ್ಷಗಳ ನಿಯಮ ಸುಧಾರಣೆಯ ಜತೆಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 33 (7) ಅನ್ನು ರದ್ದುಗೊಳಿಸಬೇಕು ಎಂದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ. “ಅಭ್ಯರ್ಥಿಯೊಬ್ಬ ಒಂದೇ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಸೆಕ್ಷನ್ 33ರ 7ನೇ ಸಬ್‌ ಸೆಕ್ಷನ್ ಅವಕಾಶ ಕಲ್ಪಿಸುತ್ತದೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಒಬ್ಬನೇ ಅಭ್ಯರ್ಥಿ ಗೆದ್ದರೆ ಒಂದು ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕಾಗುತ್ತದೆ. ಇಂತಹ ಕಡೆಗಳಲ್ಲಿ ಮರು ಚುನಾವಣೆ ನಡೆಸುವುದು ಸರಕಾರಕ್ಕೆ ಹೆಚ್ಚುವರಿ ಹೊರೆ. ಹೀಗೆ ಒಂದು ಚುನಾವಣೆಯ ಹಿಂದೆಯೇ ಮರು ಚುನಾವಣೆ ನಡೆಸುವುದು ಜನರ ತೆರಿಗೆ ಹಣವನ್ನು ಪೋಲು ಮಾಡಿದಂತೆ. ಹೀಗಾಗಿ ಒಂದೇ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಬೇಕು. ಇದಕ್ಕೆ ಅವಕಾಶ ನೀಡುತ್ತಿರುವ ಸೆಕ್ಷನ್ 33ರ 7 ನೇ ಸಬ್ ಸೆಕ್ಷನ್ ಅನ್ನು ಅಸಿಂಧುಗೊಳಿಸಬೇಕು” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಪ್ರಸ್ತಾವ ಇದೇ ಮೊದಲೇನಲ್ಲ

ಅಂದಹಾಗೆ ಸೆಕ್ಷನ್ 33ರ 7ನೇ ಸಬ್‌ ಸೆಕ್ಷನ್ ಅನ್ನು ಅಸಿಂಧುಗೊಳಿಸುವಂತೆ ಕೇಳಿಬರುತ್ತಿರುವ ಒತ್ತಾಯ ಇದೇ ಮೊದಲೇನಲ್ಲ. 2004ರ ಜುಲೈನಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್. ಕೃಷ್ಣಮೂರ್ತಿ ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿದ್ದ ತಿದ್ದುಪಡಿ ಪ್ರಸ್ತಾವನೆಯಲ್ಲಿ ಈ ಒತ್ತಾಯ ಮಾಡಿದ್ದರು. “ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 33ರ 7ನೇ ಸಬ್‌ ಸೆಕ್ಷನ್ ಒಬ್ಬ ಅಭ್ಯರ್ಥಿ ಒಂದೇ ಬಾರಿಗೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದೆ. ಇದರಿಂದ ಚುನಾವಣಾ ಹೊರೆ ಹೆಚ್ಚುತ್ತದೆ. ಕಾಯ್ದೆಗೆ ತಿದ್ದುಪಡಿ ತಂದು ಸೆಕ್ಷನ್‌ 33ರ 7ನೇ ಸಬ್‌ ಸೆಕ್ಷನ್ ಅನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದರು.