samachara
www.samachara.com
ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!
COVER STORY

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

ಪೆಟ್ರೋಲ್‌ ಬೆಲೆ 74.09 ರೂ, ಡೀಸೆಲ್‌ ಬೆಲೆ 64.69 ರೂ, ಅಡುಗೆ ಅನಿಲದ ಬೆಲೆ (ಸಿಲಿಂಡರ್‌ಗೆ) 736 ರೂ, ವಾಹನದ ಗ್ಯಾಸ್‌ 1 ಲೀಟರ್‌ಗೆ 44.07 ರೂ. ಗಗನಕ್ಕೇರಿರುವ ಈ ಬೆಲೆಗೆ ಕಾರಣ ಯಾರು ಎಂಬ ಬಗ್ಗೆ ಸಾರ್ವಜನಿಕರು ಚಿಂತಿಸುವ ಅಗತ್ಯವಿದೆ

ಒಂದೆಡೆ ಖಾಸಗಿ ತೈಲೋತ್ಪನ್ನ ಸಂಸ್ಥೆಗಳು ಸರಕಾರೀ ಸ್ವಾಮ್ಯದ ತೈಲ ಸಂಸ್ಥೆಗಳನ್ನೂ ಮೀರಿ ಬೆಳೆದು ನಿಂತಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಮತ್ತಿತರ ಇಂಧನಗಳ ಬೆಲೆಯನ್ನು ಸರಕಾರದ ಬದಲಾಗಿ ಖಾಸಗಿ ಸಂಸ್ಥೆಗಳೇ ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ, ಮಂಗಳವಾರ ಮಧ್ಯಾಹ್ನ ಕೇರಳದ ಕೊಚ್ಚಿಯಲ್ಲಿರುವ 'ತೈಲ ಮತ್ತು ನೈಸರ್ಗಿಕ ಅನಿಲ ನಿಗಮ' (ಒಎನ್‌ಜಿಸಿ)ಗೆ ಸೇರಿದ ಸರಕಾರಿ ಶಿಪ್‌ ಯಾರ್ಡ್‌ನಲ್ಲಿ ನೀರು ತುಂಬಿದ್ದ ಟ್ಯಾಂಕರ್‌ ಸ್ಫೋಟವಾಗಿದೆ. ದುರ್ಘಟನೆಯಲ್ಲಿ ಐವರು ಅಸುನೀಗಿದ್ದರೆ, 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ನಡೆದಿರುವ ಘಟನೆ ಹಿನ್ನೆಲೆಯಲ್ಲಿ ದೇಶದ ತೈಲ ರಾಜಕೀಯ ಮತ್ತು ಸರಕಾರಿ ಸ್ವಾಮ್ಯದ ಒಎನ್‌ಜಿಸಿ ಸುತ್ತ ಕೆಲವು ಅಪರೂಪದ ಮಾಹಿತಿಯನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ.

ಇಂದಿನ ಘಟನೆ:

ಮಧ್ಯಾಹ್ನ ಸುಮಾರು 12.30ರ ವೇಳೆಗೆಲ್ಲಾ ಕೇರಳದ ಕೊಚ್ಚಿಯಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತದ ಶಿಪ್‌ ಯಾರ್ಡ್‌ನಲ್ಲಿ ಅಗ್ನಿ ಅವಗಢ ಸಂಭವಿಸಿದೆ.

ಅದಕ್ಕೆ ಕಾರಣಗಳು ಹಲವು ರೀತಿ ಕೇಳಿ ಬರುತ್ತಿದ್ದು, ಕೊಚ್ಚಿ ಪೊಲೀಸ್‌ ಆಯುಕ್ತ ಎಂ.ಪಿ. ದಿನೇಶ್‌ ಅವರ ಪ್ರಕಾರ, ಮೇಲ್ನೋಟಕ್ಕೆ ಗ್ಯಾಸ್‌ ವೆಲ್ಡಿಂಗ್‌ ಮೆಷಿನ್‌ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಹತ್ತಿಕೊಂಡಿದ್ದು, ಇಡೀ ಡ್ರೈ ಡಾಕ್‌ ಯಾರ್ಡ್‌ ಹೊಗೆಯಿಂದ ಆವೃತವಾಗಿದೆ. ಇದರಿಂದಾಗಿ ಐವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ವರದಿ.

'ಸಾಗರ್‌ ಭೂಷಣ್‌' ಎಂಬ ಹೆಸರಿನ ಹಡಗು ಸೋಮವಾರ ರಿಪೇರಿಗೆಂದು ಬಂದಿತ್ತು. ರಿಪೇರಿ ಸಮಯದಲ್ಲಿ ತೈಲೋತ್ಪನ್ನಗಳನ್ನು ಹಡಗಿನಲ್ಲಿ ಸಾಗಿಸುವುದಿಲ್ಲವಾದ್ದರಿಂದ, ಹೆಚ್ಚಿನ ಹಾನಿ ತಪ್ಪಿದೆ. ಒಂದು ವೇಳೆ ತೈಲೋತ್ಪನ್ನಗಳನ್ನು ಸಾಗಿಸುವಾಗ ಸ್ಫೋಟವಾಗಿದ್ದರೆ, ಶಿಪ್ ಯಾರ್ಡ್‌ ಮತ್ತು ಸುತ್ತಲಿನ ಒಂದೆರಡು ಕಿಲೋಮೀಟರ್‌ ಪ್ರದೇಶ ಸುಟ್ಟು ಕರಕಲಾಗುತ್ತಿತ್ತು. ಅದೃಷ್ಟವಶಾತ್‌ ಕೊಚ್ಚಿಯಲ್ಲಿರುವುದು ಡ್ರೈ ಡಾಕ್‌ ಆಗಿದ್ದು, ಹಡಗುಗಳು ಕೇವಲ ರಿಪೇರಿಗಾಗಿ ಬರುತ್ತವೆ.

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

ರಿಪೇರಿಗೆಂದು ಬಂದಿದ್ದ ಸಾಗರ್ ಭೂಷಣ್‌ ಹಡಗನ್ನು ಮುಂಜಾನೆಯಿಂದ ರಿಪೇರಿ ಮಾಡಲಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ, ಗ್ಯಾಸ್‌ ವೆಲ್ಡಿಂಗ್‌ ಮೆಷಿನ್‌ನಿಂದ ರಿಪೇರಿ ಕೆಲಸ ಮುಂದಿವರಿದಿತ್ತು. ಆಗ ವೆಲ್ಡಿಂಗ್‌ ಮೆಷಿನ್‌ ಶಾರ್ಟ್‌ ಸರ್ಕ್ಯೂಟ್‌ ಅಥವಾ ಮತ್ತಿನ್ಯಾವುದಾದರೂ ಕಾರಣದಿಂದ ಸ್ಫೋಟಗೊಂಡಿದೆ. ಹಡಗಿನೊಳಗಿದ್ದ ಇತರ ಪರಿಕರಗಳೂ ಅದರೊಟ್ಟಿಗೇ ಕರಕಲಾಗಿದೆ.

"ಬೆಂಕಿಯಿಂದ ಹೊಗೆ ತುಂಬಿಕೊಂಡಿದ್ದು, ಆಮ್ಲಜನಕದ ಕೊರತೆಯಿಂದ ಹಡಗಿನಲ್ಲಿ ಸಿಲುಕಿಕೊಂಡಿದ್ದ ಐವರು ಮೃತಪಟ್ಟಿದ್ದಾರೆ. ಇನ್ನುಳಿದ 6 ಜನರನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರಿಸ್ಥಿತಿಯ ಮೇಲೆ ಹತೋಟಿ ಸಾಧಿಸಿದ್ದೇವೆ," ಎಂಬುದಾಗಿ ಕೊಚ್ಚಿ ಪೊಲೀಸ್‌ ಆಯುಕ್ತ ಎಂ.ಪಿ. ದಿನೇಶ್‌ ಸ್ಥಳೀಯ ಪತ್ರಕರ್ತರಿಗೆ ತಿಳಿಸಿದ್ದಾರೆ.

'ಸಮಾಚಾರ'ದ ಜತೆ ಮಾತನಾಡಿದ, scroll.in ಕೇರಳ ವರದಿಗಾರ ಟಿ.ಎಸ್‌. ಅಮೀರುದ್ದೀನ್‌, ಕೊಚ್ಚಿಯಲ್ಲಿ ನಡೆದ ಘಟನೆಯ ವಾಸ್ತವತೆಯನ್ನು ತಿಳಿಸಿದರು. "ಪೊಲೀಸ್‌ ಆಯುಕ್ತರ ಪ್ರಕಾರ ಹೊಗೆ ಕಟ್ಟಿಕೊಂಡಿದ್ದರಿಂದ ಉಸಿರಾಡಲಾಗದೇ ಐವರು ಮೃತಪಟ್ಟಿದ್ದಾರೆ. ಆದರೆ ಅನಧಿಕೃತ ಮಾಹಿತಿಯ ಪ್ರಕಾರ ಗ್ಯಾಸ್‌ ವೆಲ್ಡಿಂಗ್‌ ಮೆಷಿನ್‌ ಸ್ಫೋಟಗೊಂಡಿದೆ. ಇದನ್ನು ಇಲಾಖೆ ಮತ್ತು ಒಎನ್‌ಜಿಸಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಈಗಾಗಲೇ ತನಿಖೆಗೆ ಆದೇಶಿಸಿದ್ದು, ಶೀಘ್ರ ಸ್ಫೋಟಕ್ಕೆ ಕಾರಣ ಹೊರಬೀಳಬಹುದು," ಎನ್ನುತ್ತಾರೆ ಅಮೀರುದ್ದೀನ್‌.

ಘಟನೆಯ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಜತೆಗೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇನ್ನಿತರ ವ್ಯಕ್ತಿಗಳು ಚೇತರಿಸಿಕೊಂಡ ನಂತರ ಅವರ ಹೇಳಿಕೆಗಳನ್ನು ದಾಖಲಿಸಲು ಪೊಲೀಸರು ಕಾಯುತ್ತಿದ್ದಾರೆ. ಇನ್ನೊಂದೆಡೆ ಓಎನ್‌ಜಿಸಿ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ಒಎನ್‌ಜಿಸಿಯ ನೌಕರರಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇದೊಂದು ಆಕಸ್ಮಿಕ ಅವಗಢ ಎಂಬ ವಾದ ಕೆಲವರದ್ದಾದರೆ, ಒಎನ್‌ಜಿಸಿಗೆ ಕೆಟ್ಟ ಹೆಸರು ತರುವ ಸಲುವಾಗಿ ಮಾಡಿರುವ ವ್ಯವಸ್ಥಿತ ಪಿತೂರಿ ಎಂಬ ಮಾತುಗಳೂ ಸ್ಥಳೀಯರಿಂದ ಕೇಳಿ ಬರುತ್ತಿದೆ. ಈ ಎಲ್ಲ ಊಹಾಪೋಹಗಳು ಮತ್ತು ಶಂಕೆಗಳಿಗೆ ತನಿಖೆಯೊಂದೇ ಉತ್ತರವಾಗಬಲ್ಲದು.

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

ಓಎನ್‌ಜಿಸಿ ಇತಿಹಾಸ:

1947-1960 ನಡುವೆ ದೇಶದ ಈಶಾನ್ಯ ಭಾಗದಲ್ಲಿ ಅಸ್ಸಾಂ ತೈಲ ಸಂಸ್ಥೆ ಮತ್ತು ವಾಯುವ್ಯ ಭಾಗದಲ್ಲಿ ಅಟ್ಟಾಕ್‌ ತೈಲ ಸಂಸ್ಥೆಯನ್ನು ಹೊರತುಪಡಿಸಿ ಬೇರೆ ಯಾವುದೇ ತೈಲ ಉತ್ಪನ್ನ ಸಂಸ್ಥೆಗಳೂ ಭಾರತದಲ್ಲಿ ಇರಲಿಲ್ಲ. ಭಾರತೀಯ ಸಂರಕ್ಷಿತ ಬೇಸಿನ್‌ಗಳಲ್ಲಿ ಬಹುಪಾಲು ಭಾಗ ತೈಲಗಾರಿಕೆಗೆ ಅನರ್ಹ ಎಂದು ಪರಿಗಣಿಸಲಾಗಿತ್ತು.ಸ್ವಾತಂತ್ರ್ಯದ ನಂತರ, ತೈಲ ಮತ್ತು ಗ್ಯಾಸ್‌ ಉತ್ಪನ್ನಗಳ ಮಹತ್ವವನ್ನು ಸರಕಾರ ಅರಿತಿತ್ತು. ಕಾರ್ಖಾನೆಗಳ ಬೆಳವಣಿಗೆಗಳಿಗೆ, ಮೆಷಿನ್‌ಗಳ ಬಳಕೆಯಲ್ಲಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಇಂಧನದ ಮಹತ್ವ ಅರಿವಾದ ಬೆನ್ನಲ್ಲೇ ತೈಲೋತ್ಪನ್ನಗಳ ಅಭಿವೃದ್ಧಿಗೆ ಸರಕಾರ ಮುಂದಾಯಿತು.

ಅದರ ಜತೆಜತೆಗೆ ಕೈಗಾರಿಕಾ ನೀತಿಯನ್ನು 1948ರಲ್ಲಿ ಜಾರಿಗೆ ತರುವ ವೇಳೆ, ಹೈಡ್ರೋಕಾರ್ಬನ್ ಉದ್ಯಮವನ್ನು ಬಹುಮುಖ್ಯ ಎಂದು ಪರಿಗಣಿಸಲಾಯಿತು.1955ರವರೆಗೆ ಖಾಸಗಿ ಸಂಸ್ಥೆಗಳು ಮಾತ್ರ ದೇಶದಲ್ಲಿ ಹೈಡ್ರೋಕಾರ್ಬನ್‌ ಉತ್ಪನ್ನಗಳನ್ನು ಪರಿಶೋಧಿಸುತ್ತಿದ್ದವು. ಅಸ್ಸಾಂ ತೈಲ ಸಂಸ್ಥೆ, ಅಸ್ಸಾಂ ರಾಜ್ಯದ ಡಿಬೋಗಿ ಎಂಬ ಪ್ರದೇಶದಲ್ಲಿ ತೈಲಗಳ ಉತ್ಪನ್ನ ಮಾಡುತ್ತಿತ್ತು. 1889ರಲ್ಲೇ ತೈಲದ ಇರುವಿಕೆಯನ್ನು ಪತ್ತೆ ಹಚ್ಚಲಾಗಿತ್ತು. ನಹರ್ಕತಿಯಾ ಮತ್ತು ಮೋರನ್‌ಗಳಲ್ಲಿ (ಭಾರತ ಮತ್ತು ಬರ್ಮಾ ಗಡಿ) ಎರಡು ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುತ್ತಿತ್ತು. ಈ ಕಾರ್ಯದಲ್ಲಿ ಭಾರತ ಸರಕಾರ ಮತ್ತು ಬರ್ಮಾ ಸರಕಾರ ಎರಡೂ ಶೇಕಡ 50% ಶೇರು ಹೊಂದಿದ್ದವು.

ಭಾರತ ಮತ್ತು ಅಮೆರಿಕಾದ ಸ್ಟಾಂಡರ್ಡ್‌ ವ್ಯಾಕ್ಯೂಮ್‌ ತೈಲ ಸಂಸ್ಥೆ ಪಶ್ಚಿಮ ಬಂಗಾಳದಲ್ಲಿ ಇಂಡೊ-ಸ್ಟಾನ್ವಾಕ್‌ ತೈಲೋತ್ಪನ್ನದ ಒಪ್ಪಂದ ಮಾಡಿಕೊಂಡು ತೈಲ ಪರಿಶೋಧನೆಯಲ್ಲಿ ತೊಡಗಿದವು. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ತೈಲೋತ್ಪನ್ನದ ಪ್ರಾಮುಖ್ಯತೆ ಅರಿವಾಗಿದ್ದು ನಿಜವಾದರೂ, ದೊಡ್ಡ ಮಟ್ಟದ ಸಂಚಿತ ಪ್ರದೇಶಗಳನ್ನು ಸರಕಾರ ತಲುಪಲೇ ಇಲ್ಲ. ಸರಕಾರ ಅಭಿವೃದ್ಧಿ ಮತ್ತು ಪರಿಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ತೈಲ ನಿಕ್ಷೇಪ ಪ್ರದೇಶಕ್ಕಿಂತ ಹೆಚ್ಚು ನಿಕ್ಷೇಪಗಳಿದ್ದವು. ಆದರೆ ಅವನ್ನು ಗುರುತಿಸುವಲ್ಲಿ ಸರಕಾರ ವಿಫಲವಾಗಿತ್ತು.

ಪಂಚವಾರ್ಷಿಕ; ತೈಲ ಕನಸು:

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

1955ರಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ವಲಯದ ಅಭಿವೃದ್ಧಿಯ ಭಾಗವಾಗಿ ಕೇಂದ್ರ ಸರಕಾರ ತೈಲ ಮತ್ತು ನೈಸರ್ಗಿಕ ಗ್ಯಾಸ್‌ ಸಂಪನ್ಮೂಲಗಳ ಅಭಿವೃದ್ಧಿ ಕಾರ್ಯಕ್ಕೆ ತೊಡಗಿಸಿಕೊಳ್ಳಲು ನಿರ್ಧರಿಸಿತು. ಈ ಉದ್ದೇಶಕ್ಕಾಗಿಯೇ, 'ನೈಸರ್ಗಿಕ ಸಂಪನ್ಮೂಲ ಮತ್ತು ವೈಜ್ಞಾನಿಕ ಸಂಶೋಧನಾ ಸಚಿವಾಲಯ'ದ ಅಡಿಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿರ್ದೇಶನಾಲಯವನ್ನು 1955ರಲ್ಲಿ ಆರಂಭಿಸಲಾಯಿತು. ಈ ಇಲಾಖೆಯನ್ನು ಆರಂಭಿಸುವಾಗ ಭೂವಿಜ್ಞಾನಿಗಳನ್ನು ಅದರ ಭಾಗವನ್ನಾಗಿಸಿಕೊಳ್ಳಲಾಯಿತು.

ಅಂದಿನ ನೈಸರ್ಗಿಕ ಸಂಪನ್ಮೂಲಗಳ ಸಚಿವ ಕೆ.ಡಿ. ಮಾಲ್ವಿಯಾ ನೇತೃತ್ವದ ನಿಯೋಗ ಪ್ರಪಂಚದ ಹಲವು ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ನೈಸರ್ಗಿಕ ಅನಿಲ ಮತ್ತು ತೈಲ ಉತ್ಪನ್ನ ಕಾರ್ಯಗಳನ್ನು ಅಧ್ಯಯನ ಮಾಡಿದರು. ಭಾರತದ ಸಿಬ್ಬಂದಿಗಳಿಗೆ ಬೇರೆ ದೇಶಗಳ ತಜ್ಞರಿಂದ ತರಬೇತಿ ನೀಡುವ ಬಗ್ಗೆಯೂ ಮಾತುಕತೆಗಳಾದವು. ಅಮೆರಿಕಾ, ಜರ್ಮನಿ, ರೊಮೇನಿಯಾ ಮತ್ತಿತರ ದೇಶದ ತಜ್ಞರು ಭಾರತಕ್ಕೆ ಭೇಟಿ ಕೊಟ್ಟರು. ಈ ಮೂಲಕ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ಮಾಡುವಲ್ಲಿ ಭಾರತಕ್ಕೆ ನಿಪುಣ ತೈಲೋತ್ಪನ್ನ ದೇಶಗಳಿಂದ ನೆರವು ನೀಡಲಾಯಿತು. ಭೌಗೋಳಿಕ ಸಮೀಕ್ಷೆಗಳು ಮತ್ತು ತೈಲೋತ್ಪನ್ನ ಉತ್ಪಾದನೆಗಾಗಿ ಬೇಕಿದ್ದ ಇನ್ನಷ್ಟು ಸವಲತ್ತುಗಳು ಮತ್ತು ಕುಶಲತೆ ಸೋವಿಯತ್‌ ರಾಷ್ಟ್ರಗಳ ನೆರವಿನಿಂದ ಅಂತಿಮವಾಗಿ ಸಿಕ್ಕಿತ್ತು. ಅದರ ನಂತರ ಎರಡನೇ ಪಂಚ ವಾರ್ಷಿಕ ಯೋಜನೆ (1956 - 1961)ಯಲ್ಲಿ ತೈಲ ಬಾವಿಯನ್ನು ಕೊರೆಯುವ ಕೆಲಸ ದೇಶದಲ್ಲಿ ಆರಂಭವಾಯಿತು.

1956ರ ಏಪ್ರಿಲ್‌ ತಿಂಗಳಿನಲ್ಲಿ ಭಾರತ ಮೊದಲ ಬಾರಿಗೆ ಕೈಗಾರಿಕಾ ನೀತಿ ನಿರ್ಣಯವನ್ನು ಕೈಗೆತ್ತಿಕೊಂಡಿತ್ತು. ಮಿನರಲ್‌ ತೈಲಗಳ ಕಾರ್ಖಾನೆಗಳು ಕೈಗಾರಿಕಾ ನೀತಿಯಲ್ಲಿ ಮೊದಲ ಶ್ರೇಣಿಯಲ್ಲಿ ಸ್ಥಾನ ಪಡೆದಿತ್ತು. ಮಿನರಲ್‌ ತೈಲ ಸಂಶೋಧನೆ ಹಾಗೂ ಉತ್ಪಾದನೆಯ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಕ್ಷೇಪಗಳಿರುವ ಆಯಾ ರಾಜ್ಯಗಳಿಗೆ ನೀಡಲಾಗಿತ್ತು.

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

ತೈಲ ಮತ್ತು ನೈಸರ್ಗಿಕ ಅನಿಲ ನಿರ್ದೇಶನಾಲಯ ರಚನೆಯ ನಂತರ, ಸೀಮಿತ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರಗಳೊಂದಿಗೆ ನಿರ್ದೇಶನಾಲಯವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಯಿತು. ಆದ್ದರಿಂದ ಆಗಸ್ಟ್, 1956ರಲ್ಲಿ, ನಿರ್ದೇಶನಾಲಯವು ಅಧಿಕೃತ ಅಧಿಕಾರದೊಂದಿಗೆ ಆಯೋಗದ ಸ್ಥಾನಮಾನಕ್ಕೆ ಏರಿತು, ಆದರೂ ಅದು ಸರ್ಕಾರದ ಅಡಿಯಲ್ಲಿಯೇ ಮುಂದುವರೆಯಿತು. ಅಕ್ಟೋಬರ್ 1959ರಲ್ಲಿ, ಆಯೋಗವನ್ನು ಶಾಸನಬದ್ಧ ಅಂಗವಾಗಿ ಪರಿವರ್ತಿಸಲಾಯಿತು.

ಅದು ಆಯೋಗದ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಿತು. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ಮುಖ್ಯ ಕಾರ್ಯಗಳು ಕಾಯ್ದೆಯನ್ನು ಜಾರಿಗೊಳಿಸುವುದು ಮತ್ತು ನಿಬಂಧನೆಗಳನ್ನು ಕಾರ್ಯರೂಪಕ್ಕೆ ತರುವುದಾಗಿತ್ತು. "ಪೆಟ್ರೋಲಿಯಂ ಸಂಪನ್ಮೂಲಗಳ ಅಭಿವೃದ್ಧಿಯ ಯೋಜನೆಗಳನ್ನು ಯೋಜಿಸಲು, ಉತ್ತೇಜಿಸಲು, ಸಂಘಟಿಸಲು ಮತ್ತು ಕಾರ್ಯಗತಗೊಳಿಸಲು ಮತ್ತು ಅದಕ್ಕೆ ಉತ್ಪಾದಿಸಿದ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ," ಆಯೋಗದ ಮುಖ್ಯ ಕಾರ್ಯಗಳಾಗಿದ್ದವು.

ಕೇಂದ್ರ ಸರ್ಕಾರವು ಕಾಲಕಾಲಕ್ಕೆ, ಕಾಯ್ದೆಗೆ ತಿದ್ದುಪಡಿ ತರುವುದು ಮತ್ತು ಒಎನ್‌ಜಿಸಿ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಮತ್ತು ಕ್ರಮಗಳನ್ನು ಕಾಲಾನುಸಾರ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಆಯೋಗದ ಮೇಲಿತ್ತು.

1961ರಿಂದ 1990:

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

ಆರಂಭದಿಂದಲೂ, ಒಎನ್‌ಜಿಸಿ ದೇಶದ ಸೀಮಿತ ವಲಯವನ್ನು ಹಿಗ್ಗಿಸುವ ಮತ್ತು ದೊಡ್ಡ ಕಾರ್ಯಕ್ಷೇತ್ರವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಎನ್‌ಜಿಸಿ ಭಾರತದಾದ್ಯಂತ ಮತ್ತು ಸಾಗರೋತ್ತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಚಟುವಟಿಕೆಗಳಿಗೆ ಇಳಿಯಿತು. ಒಳನಾಡಿನ ಪ್ರದೇಶಗಳಲ್ಲಿ, ಅಸ್ಸಾಂನಲ್ಲಿ ಹೊಸ ಸಂಪನ್ಮೂಲಗಳನ್ನು ಕಂಡುಹಿಡಿಯುವ ಜತೆಗೆ ಅಸ್ಸಾಂನ ಅರಾಕಾನ್ ಪ್ರದೇಶಗಳು ಮತ್ತು ಪೂರ್ವ ಕರಾವಳಿಯ ಜಲಾನಯನ ಪ್ರದೇಶಗಳಲ್ಲಿ ಹೊಸ ಪೆಟ್ರೋಲಿಫರಸ್ ಪ್ರದೇಶಗಳನ್ನು ಕೂಡ ಕಂಡುಹಿಡಿಯಲಾಯಿತು. ಈ ಮೂಲಕ ಹೊಸ ತೈಲ ಪ್ರಾಂತ್ಯವನ್ನು ಕ್ಯಾಂಬೆ ಜಲಾನಯನ ಪ್ರದೇಶದಲ್ಲಿ (ಗುಜರಾತ್) ಒಎನ್‌ಜಿಸಿ ಸ್ಥಾಪಿಸಿತು.

ಈ ಹುಡುಕಾಟದ ಫಲವಾಗಿ ಬಾಂಬೇ ಹೈ ಅಥವಾ ಮುಂಬೈ ಹೈ ತೈಲ ನಿಕ್ಷೇಪಗಳು ಸ್ಥಾಪಿತವಾಯಿತು. ಸದ್ಯ ಮುಂಬೈ ಹೈ ಸುಮಾರು 146 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತೈಲ ನಿಕ್ಷೇಪ ಹೊಂದಿದೆ. ಈ ಎಲ್ಲ ಸಂಶೋಧನೆಗಳು ಪಶ್ಚಿಮದ ಕಡಲಾಚೆಯ ಭಾರೀ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ತಲುಪಲು ಸಾಧ್ಯವಾಗುವಂತೆ ಮಾಡಿತು. ಆ ಹೊತ್ತಿಗೆ ದೇಶದ ತೈಲ ಉತ್ಪನ್ನದ ಸನ್ನಿವೇಶಗಳೂ ಬದಲಾಗಿದ್ದವು.

ಜಾಗತೀಕರಣದ ಪ್ರಭಾವ:

1991ರ ಜುಲೈನಲ್ಲಿ ಭಾರತ ಸರಕಾರ ಅಳವಡಿಸಿಕೊಂಡ ಉದಾರೀಕರಣ ಆರ್ಥಿಕ ನೀತಿ ಮತ್ತು ಜಾಗತೀಕರದಿಂದ ಸಾರ್ವಜನಿಕ ವಲಯದ ಪಾಲುದಾರಿಕೆ ಬೇರೆ ಕ್ಷೇತ್ರಗಳಂತೆ ತೈಲ ಉತ್ಪಾದನೆಯಲ್ಲೂ ಆರಂಭವಾಯಿತು. ಬಂಡವಾಳ ಹೂಡಿಕೆಯಲ್ಲಿ ಪೆಟ್ರೋಲಿಯಂ ಕ್ಷೇತ್ರ ಪ್ರಮುಖ ಪಾಲು ಪಡೆಯಿತು. ಅದು ಸರಕಾರಿ ಸ್ವಾಮ್ಯದ ಒಎನ್‌ಜಿಸಿಗೆ ವರದಾನವಾಗುವ ಬದಲಿಗೆ, ತಲೆನೋವಾಗಿ ಪರಿಣಮಿಸಿತು. ಖಾಸಗಿ ಸಂಸ್ಥೆಗಳು ಮತ್ತು ಒಎನ್‌ಜಿಸಿ ನಡುವೆ, ದೊಡ್ಡ ಪೈಪೋಟಿ ಆರಂಭವಾಯಿತು.

ಅದರ ಭಾಗವಾಗಿ ಒಎನ್‌ಜಿಸಿ ಆಯೋಗದಿಂದ, ನಿಗಮವಾಗಿ ಬದಲಾಯಿತು. 1994ರ ಫೆಬ್ರವರಿಯಲ್ಲಿ ಕಂಪನಿ ಆಕ್ಟ್ ಅಡಿಯಲ್ಲಿ ಒಎನ್‌ಜಿಸಿಯನ್ನು ಮರು ಸಂಘಟಿಸಲಾಯಿತು.ಹಿಂದಿನ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ವ್ಯವಹಾರವನ್ನು 1993ರಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತವಾಗಿ ಪರಿವರ್ತಿಸಿದ ನಂತರ, ಸ್ಪರ್ಧಾತ್ಮಕ ಹರಾಜಿನ ಮೂಲಕ ಸರ್ಕಾರ ತನ್ನ ಶೇರುಗಳಲ್ಲಿ ಶೇಕಡ 2% ಅನ್ನು ವಿತರಿಸಿತು. ಸ್ಪರ್ದಾತ್ಮಕ ಹರಾಜಿನಲ್ಲಿ ವಿತರಿಸಿದ ಶೇರನ್ನು ವಾಪಸ್‌ ಪಡೆಯಲು, ಒಎನ್‌ಜಿಸಿ ಉದ್ಯೋಗಿಗಳಿಗೆ ಒಟ್ಟಾರೆಯಾಗಿ ಶೇಕಡ 2% ಷೇರುಗಳನ್ನು ನೀಡುವ ಮೂಲಕ ವಿಸ್ತರಿಸಿತು.

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

ಮಾರ್ಚ್ 1999ರಲ್ಲಿ ಒಎನ್‌ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಗ್ಯಾಸ್‌ ಮಾರ್ಕೆಟಿಂಗ್‌ ಮಾಡುವ ಸಂಸ್ಥೆಯಾದ ಭಾರತೀಯ ಅನಿಲ ಪ್ರಾಧಿಕಾರ ನಿಗಮದ ಜತೆ ಪರಸ್ಪರರ ಷೇರುಗಳಲ್ಲಿ ಅಡ್ಡ ಹಿಡುವಳಿ ಹೊಂದಲು ಒಪ್ಪಿಕೊಂಡಿತು. ಇದರ ಪರಿಣಾಮವಾಗಿ ಸರ್ಕಾರ ಒಎನ್‌ಜಿಸಿಯ ಶೇಕಡಾ 10ರಷ್ಟು ಷೇರುಗಳನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ಗೆ ಮತ್ತು ಶೇಕಡ 2.5ರಷ್ಟು ಷೇರನ್ನು ಭಾರತೀಯ ಅನಿಲ ಪ್ರಾಧಿಕಾರ ನಿಗಮಕ್ಕೆ ನೀಡಲಾಯಿತು.

ಇದರೊಂದಿಗೆ ಒಎನ್‌ಜಿಸಿ ಶೇಕಡ 84.11ರಷ್ಟು ಷೇರನ್ನು ತನ್ನ ಬಳಿಯೇ ಉಳಿಸಿಕೊಂಡಿತು.2002-03ರಲ್ಲಿ, ಎ.ವಿ. ಬಿರ್ಲಾ ಗ್ರೂಪಿನಿಂದ ಎಂ.ಆರ್‌.ಪಿ.ಎಲ್‌ ಸಂಸ್ಥೆಯನ್ನು ಒಎನ್‌ಜಿಸಿ ಸ್ವಾಧೀನಪಡಿಸಿಕೊಂಡಿತು. ನಂತರ, ಒಎನ್‌ಜಿಸಿ ಕೆಳಮಟ್ಟದ ಪೆಟ್ರೋಲಿಯಮ್‌ ಉತ್ಪನ್ನಗಳ ಉತ್ಪಾದನೆಯ ವಲಯದಲ್ಲಿ ಬೇರೂರಿತು.

ಒಎನ್‌ಜಿಸಿ ತನ್ನ ಅಂಗಸಂಸ್ಥೆ ಒಎನ್‌ಜಿಸಿ ವಿದೇಶ್ ಲಿಮಿಟೆಡ್ (ಒವಿಎಲ್) ಮೂಲಕ ಜಾಗತಿಕ ಕ್ಷೇತ್ರವನ್ನೂ ಪ್ರವೇಶಿಸಿತು. ವಿಯೆಟ್ನಾಂ, ಸಖಲಿನ್, ಕೊಲಂಬಿಯಾ, ವೆನೆಜುವೆಲಾ, ಸುಡಾನ್, ಮತ್ತಿತರ ದೇಶಗಳಲ್ಲಿ ಒಎನ್‌ಜಿಸಿ ಹೂಡಿಕೆಗಳನ್ನು ಮಾಡಿತು. ವಿಯೆಟ್ನಾಂನಲ್ಲಿ ತನ್ನ ಹೂಡಿಕೆಯಿಂದ ಮೊದಲ ಹೈಡ್ರೋಕಾರ್ಬನ್ ಸಾಗರೋತ್ತರ ಆದಾಯವನ್ನು ಸಹ ಗಳಿಸಿತು.

ಸದ್ಯದ ಸ್ಥಿತಿ-ಗತಿ:

ಇಷ್ಟು ದೊಡ್ಡ ಇತಿಹಾಸ ಹೊಂದಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಇಂದು ಬೇರೆಯದೇ ಸಮಸ್ಯೆಗಳನ್ನು ಎದುರಿಸುತ್ತಿದೆ. ಜಾಗತೀಕರಣದ ಬಿಸಿ ಪೆಟ್ರೋಲಿಯಂ ಉತ್ಪಾದನೆ ವಲಯವನ್ನೂ ಆವರಿಸಿಕೊಂಡಿದೆ. ಅದರ ಜತೆಗೆ ಭಾರತ ಮೂಲದ ಬಹುರಾಷ್ಟ್ರೀಯ ಸಂಸ್ಥೆಯಾದ ರಿಲಯನ್ಸ್‌ ನೈಸರ್ಗಿಕ ಸಂಪನ್ಮೂಲ ಸಂಸ್ಥೆ, ಒಎನ್‌ಜಿಸಿಗಿಂತ ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ.

ಆಂಧ್ರ ಪ್ರದೇಶದ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದಲ್ಲಿ ಒಎನ್‌ಜಿಸಿಯನ್ನು ಹಿಂದಿಕ್ಕಿ ಕಚ್ಚಾ ತೈಲವನ್ನು ರಿಲಯನ್ಸ್‌ ಉತ್ಪಾದಿಸುತ್ತಿದೆ. ಜತೆಗೆ ಖಾಸಗಿ ಸಂಸ್ಥೆಯಾದ್ದರಿಂದ ಕಚ್ಚಾ ತೈಲಗಳ ಬೆಲೆ ನಿಗದಿ ಮತ್ತು ಅದರ ಸಂಸ್ಕರಣೆಯ ಬೆಲೆ ನಿಗದಿಯನ್ನು ಸರಕಾರವೂ ಪ್ರಶ್ನಿಸುವಂತಿಲ್ಲ. ಒಎನ್‌ಜಿಸಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ನಿವೃತ್ತ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, "ಇಂದು ರಿಲಯನ್ಸ್‌ ನೈಸರ್ಗಿಕ ಸಂಪನ್ಮೂಲ ಸಂಸ್ಥೆ ಸರಕಾರವನ್ನೂ ಮೀರಿ ಬೆಳೆದು ನಿಂತಿದೆ. ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲಾ ತೈಲೋತ್ಪನ್ನಗಳ ಬೆಲೆ ನಿಗದಿಯನ್ನೂ ರಿಲಯನ್ಸ್‌ ಮಾಡುತ್ತಿದೆ."

ವೈಎಸ್‌ಆರ್‌ ಅನುಮಾನಾಸ್ಪದ ಸಾವು:

ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

2009ರಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್‌ ರಾಜಶೇಖರ್‌ ರೆಡ್ಡಿ, ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದಲ್ಲಿ ರಿಲಯನ್ಸ್‌ ನಡೆಸುತ್ತಿರುವ ಅನಿಲ ಉತ್ಪಾದನೆಯನ್ನು ಆಂಧ್ರ ಪ್ರದೇಶ ಸರಕಾರಕ್ಕೆ ಹಸ್ತಾಂತರಿಸಬೇಕು ಎಂದು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ರಿಗೆ ಪತ್ರ ಬರೆದಿದ್ದರು. ನೈಸರ್ಗಿಕ ಅನಿಲ ಸಾರ್ವಜನಿಕ ಆಸ್ತಿ, ಅದನ್ನು ಹಿಂತುರಿಗಿಸುವ, ಬಿಡುವ ಅಧಿಕಾರ ಅನಿಲ್‌ ಅಂಬಾನಿ ಒಡೆತನದ ಸಂಸ್ಥೆಗಿಲ್ಲ ಎಂದು ಗಟ್ಟಿಯಾಗಿ ರೆಡ್ಡಿ ಧ್ವನಿಯೆತ್ತಿದ್ದರು. ರೆಡ್ಡಿ ಮಾಡಿರುವ ಮನವಿ ಕಾನೂನಾತ್ಮಕವಾಗಿ ಸರಿಯಾಗಿಯೇ ಇತ್ತು. ಇದರಿಂದ ಅಂಬಾನಿ ಒಡೆತನದ ರಿಲಯನ್ಸ್‌ ಸಂಸ್ಥೆ ಸಾವಿರಾರು ಕೋಟಿ ರೂ. ನಷ್ಟ ಅನುಭವಿಸುವ ಸಾಧ್ಯತೆಯಿತ್ತು. ಅದಾಗಿ ಕೆಲವೇ ದಿನಗಳಲ್ಲಿ, ಅಂದರೆ 2009ರ ಸೆಪ್ಟೆಂಬರ್‌ 2ರಂದು ಹೆಲಿಕಾಪ್ಟರ್‌ ದುರಂತದಲ್ಲಿ ವೈ.ಎಸ್‌. ರಾಜಶೇಖರ್‌ ರೆಡ್ಡಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇದರ ಬೆನ್ನಲ್ಲೇ ರಷ್ಯಾ ಮೂಲದ ತನಿಖಾ ಪತ್ರಿಕೆಯೊಂದು ವೈ.ಎಸ್‌.ಆರ್‌ ಸಾವು ಅಪಘಾತವಲ್ಲ, ಅಂಬಾನಿ ಕುಟುಂಬ ಅದರ ಹಿಂದಿದೆ ಎಂಬುದಾಗಿ ಸುದ್ದಿ ಪ್ರಕಟಿಸಿತ್ತು.

'ಬೆಲ್‌ 430 ಹೆಲಿಕಾಪ್ಟರಿನಲ್ಲಿ ವೈ.ಎಸ್‌. ರಾಜಶೇಖರ್‌ ರೆಡ್ಡಿಯವರನ್ನು ಹತ್ಯೆ ಮಾಡಲು ಅನಿಲ್‌ ಅಂಬಾನಿ 1 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದೊಂದು ಪೂರ್ವ ನಿಯೋಜಿತ ಹತ್ಯೆ, ಅಪಘಾತವಲ್ಲ,' ಎಂದು ರಷ್ಯಾದ ಎಕ್ಸೈಲ್‌ ಮ್ಯಾಗಜಿನ್‌ ವರದಿ ಹೇಳುತ್ತದೆ. ಅದು ಜಾಗತಿಕವಾಗಿ ಸಂಚಲನ ಮೂಡಿಸುವುದರ ಜತೆಗೆ ಕೆಲ ಕಾಲ ಆಂಧ್ರ ಪ್ರದೇಶದಲ್ಲಿ ರಿಲಯನ್ಸ್‌ ಮತ್ತು ಅಂಬಾನಿ ವಿರುದ್ಧ ಸಾರ್ವಜನಿಕರು ಸಿಟ್ಟಿಗೆದ್ದಿದ್ದರು. ರಿಲಯನ್ಸ್‌ ಕಚೇರಿಯ ಮೇಲೆ ಸಾರ್ವಜನಿಕರು ದಾಳಿಯನ್ನು ಸಹ ಮಾಡಿದ್ದರು.

ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ರಿಲಯನ್ಸ್‌ ಬಂದ ನಂತರ ಒಎನ್‌ಜಿಸಿ ಮತ್ತು ಸಾರ್ವಜನಿಕರು ಸಾಕಷ್ಟು ಹೊಡೆತ ತಿಂದಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತವೆ. ಆದರೆ ಇಷ್ಟೆಲ್ಲಾ ಆದ ನಂತರವೂ ಭಾರತ ಸರಕಾರ ನೈಸರ್ಗಿಕ ಅನಿಲ ಮತ್ತು ತೈಲ ಉತ್ಪಾದನೆಯಲ್ಲಿ ಖಾಸಗೀ ವಲಯದ ಪಾಲುದಾರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ, ಇಂದು ಕೇರಳದ ಕೊಚ್ಚಿಯಲ್ಲಿ ನಡೆದ ಅಗ್ನಿ ದುರಂತವೂ ಪೂರ್ವ ನಿಯೋಜಿತವೇ ಅಥವಾ ಕೇವಲ ಅಪಘಾತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆಲ್ಲದರ ನಡುವೆ ಇಂದಿನ ಪೆಟ್ರೋಲ್‌ ಬೆಲೆ 74.09 ರೂ, ಡೀಸೆಲ್‌ ಬೆಲೆ 64.69 ರೂ, ಅಡುಗೆ ಅನಿಲದ ಬೆಲೆ (ಸಿಲಿಂಡರ್‌ಗೆ) 736 ರೂ, ವಾಹನದ ಗ್ಯಾಸ್‌ 1 ಲೀಟರ್‌ಗೆ 44.07 ರೂ. ಗಗನಕ್ಕೇರಿರುವ ಈ ಬೆಲೆಗೆ ಕಾರಣ ಯಾರು ಎಂಬ ಬಗ್ಗೆ ಸಾರ್ವಜನಿಕರು ಚಿಂತಿಸುವ ಅಗತ್ಯ ಒಂದು ಕಡೆಗಾದರೆ, ಕಡಿವಾಣ ಹಾಕುವತ್ತ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಿದೆ.