‘ಹೇಳತೇನ ಕೇಳ’: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೂರನೇ ಕನ್ನಡಿಗ ಕಂಬಾರ
COVER STORY

‘ಹೇಳತೇನ ಕೇಳ’: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೂರನೇ ಕನ್ನಡಿಗ ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ. 2013ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿ ಕಂಬಾರರು ಆಯ್ಕೆಯಾಗಿದ್ದರು. ಆಗ ವಿಶ್ವನಾಥ ಪ್ರಸಾದ್ ತಿವಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಕಾಡೆಮಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು.

ವಿ.ಕೃ. ಗೋಕಾಕ್‌ ಮತ್ತು ಯು.ಆರ್. ಅನಂತಮೂರ್ತಿ ಅವರ ಬಳಿಕ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಗಾದಿಗೇರುತ್ತಿರುವ ಮೂರನೇ ಕನ್ನಡಿಗರು ಕಂಬಾರ. 1983ರಲ್ಲಿ ಆಯ್ಕೆಯಾಗಿದ್ದ ವಿ.ಕೃ. ಗೋಕಾಕ್ ಅಕಾಡೆಮಿಯ ಮೊದಲ ಕನ್ನಡಿಗ ಅಧ್ಯಕ್ಷರೆನಿಸಿದರೆ, 1993ರಲ್ಲಿ ಯು. ಆರ್‌. ಅನಂತಮೂರ್ತಿ ಈ ಹುದ್ದೆಗೇರಿದ್ದ ಎರಡನೆಯ ಕನ್ನಡಿಗರಾಗಿದ್ದರು.ಈ ಬಾರಿಯ ಅಧ್ಯಕ್ಷ ಹುದ್ದೆಗೆ ಮರಾಠಿ ಸಾಹಿತಿ ಬಾಲಚಂದ್ರ ನೇಮಾಡೆ ಮತ್ತು ಒರಿಯಾ ಸಾಹಿತಿ ಪ್ರತಿಭಾ ರಾಯ್ ಅವರು ಸ್ಪರ್ಧಿಸಿದ್ದರು.

ಅಕಾಡೆಮಿಯ ಸಾಮಾನ್ಯ ಸಭೆಯ ಸದಸ್ಯರ 89 ಮತಗಳಲ್ಲಿ ಕಂಬಾರ 56 ಮತಗಳನ್ನು ಗಳಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾದವ್ ಕೌಶಿಕ್ ಚುನಾಯಿತರಾಗಿದ್ದಾರೆ.1937 ಜನವರಿ 2 ರಂದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದ ಚಂದ್ರಶೇಖರ ಕಂಬಾರರು ಜನಪದ ಶೈಲಿಯಲ್ಲಿ ಆಧುನಿಕ ಭಾರತವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟ ಭಾರತದ ಪ್ರಮುಖ ಕವಿ ಎಂದು ವಿಮರ್ಶಕರು ಗುರುತಿಸಿದ್ದಾರೆ. ಕಂಬಾರರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.

ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿಎಚ್.ಡಿ ಪದವಿ ಪಡೆದರು. 1968ರಿಂದ 1971ರವರೆಗೆ ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ. ನಂತರ 1971ರಿಂದ 1991ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ಕಂಬಾರರು ಸೇವೆ ಸಲ್ಲಿಸಿದ್ದಾರೆ. ಕವಿ, ನಾಟಕಕಾರ, ಕಾದಂಬರಿಕಾರ, ಜಾನಪದ ತಜ್ಞರಾಗಿ ಹಲವಾರು ಕೃತಿಗಳನ್ನು ಕಂಬಾರರು ರಚಿಸಿದ್ದಾರೆ.

‘ಅಣ್ಣತಂಗಿ’, ‘ಕರಿಮಾಯಿ’, ‘ಸಿಂಗಾರವ್ವ ಮತ್ತು ಅರಮನೆ’, ‘ಜಿ.ಕೆ. ಮಾಸ್ತರ ಪ್ರಣಯ ಪ್ರಸಂಗ’ ಕಂಬಾರರ ಕಾದಂಬರಿಗಳು. ‘ಬೆಂಬತ್ತಿದ ಕಣ್ಣು’, ‘ಚಾಳೇಶ’, ‘ನಾರ್ಸಿಸಿಸ್’, ‘ಋಷ್ಯಶೃಂಗ’, ‘ಜೋಕುಮಾರ ಸ್ವಾಮಿ’, ‘ಸಂಗ್ಯಾಬಾಳ್ಯಾ ಅನಬೇಕೊ ನಾಡೊಳಗ’, ‘ಜೈಸಿದನಾಯಕ’, ‘ಕಾಡುಕುದುರೆ’, ‘ನಾಯಿಕತೆ’ – ನಾಟಕಗಳು. ‘ಮುಗುಳು’, ‘ಹೇಳತೇನ ಕೇಳ’, ‘ಸಾವಿರದ ನೆರಳು’ – ಪ್ರಮುಖ ಕವನ ಸಂಕಲನಗಳು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ, ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ ಕಂಬಾರರು ಸೇವೆ ಸಲ್ಲಿಸಿದ್ದಾರೆ.

ಜ್ಞಾನಪೀಠ ಪುರಸ್ಕಾರ, ಪದ್ಮಶ್ರೀ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಕಬೀರ ಸಮ್ಮಾನ್, ‘ವರ್ಧಮಾನ’ ಪ್ರಶಸ್ತಿ, ಕೇಂದ್ರ ಸಂಗೀತ- ನಾಟಕ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, ನಂದಿಕಾರ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಕಂಬಾರರಿಗೆ ಸಂದಿವೆ.

ಸಾಹಿತ್ಯ ಅಕಾಡೆಮಿಯ ಹಿನ್ನೆಲೆ

ಕೇಂದ್ರ ಸಾಹಿತ್ಯ ಅಕಾಡೆಮಿ ಸ್ಥಾಪನೆಯ ಪ್ರಸ್ತಾವನೆ ಸ್ವಾತಂತ್ರ್ಯ ಪೂರ್ವದಲ್ಲೇ ಇತ್ತು. 1944ರಲ್ಲಿ ರಾಯಲ್‌ ಏಷಿಯಾಟಿಕ್ ಸೊಸೈಟಿ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಗೆ ಬ್ರಿಟಿಷ್ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. 1952ರ ಡಿಸೆಂಬರ್‌ 15ರಂದು ಕೇಂದ್ರ ಸರಕಾರ ಸಾಹಿತ್ಯ ಅಕಾಡೆಮಿ ರಚನೆಯ ಪ್ರಸ್ತಾವವನ್ನು ಅಂಗೀಕರಿಸಿತು. 1954ರಲ್ಲಿ ಸ್ಥಾಪನೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದವರು ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರೂ.1954ರ ಮಾರ್ಚ್‌ 12ರಂದು ನವದೆಹಲಿಯಲ್ಲಿ ಸಾಹಿತ್ಯ ಅಕಾಡೆಮಿಯನ್ನು ಉದ್ಘಾಟಿಸಲಾಯಿತು.

ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್‌ ಕಲಾಂ ಆಜಾದ್, ಸಿ. ರಾಜಗೋಪಾಲಾಚಾರಿ, ಕೆ.ಎಂ.ಪಣಿಕ್ಕರ್, ಕೆ.ಎಂ. ಮುನ್ಷಿ, ಜಾಕಿರ್ ಹುಸೇನ್, ಉಮಾಶಂಕರ್ ಜೋಶಿ, ಮಹಾದೇವಿ ವರ್ಮಾ, ಡಿ.ವಿ.ಜಿ. ಮೊದಲಾದವರ ಸಾಹಿತ್ಯ ಅಕಾಡೆಮಿಯ ಮೊದಲ ಸಾಮಾನ್ಯ ಸಭೆಯ ಸದಸ್ಯರಾಗಿದ್ದರು.ಭಾರತೀಯ ಭಾಷೆಗಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು, ಸಾಹಿತ್ಯ ಸಂವಾದಕ್ಕೆ ವೇದಿಕೆ ಕಲ್ಪಿಸುವುದು ಸಾಹಿತ್ಯ ಅಕಾಡೆಮಿಯ ಪ್ರಮುಖ ಉದ್ದೇಶ. ಭಾರತೀಯ ಭಾಷೆಗಳ ಉತ್ತಮ ಕೃತಿಗಳಿಗೆ ಪ್ರತಿ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುತ್ತದೆ. ಪ್ರತಿವರ್ಷ ಹಿರಿಯ ಸಾಹಿತಿಯೊಬ್ಬರಿಗೆ ಭಾಷಾ ಸಮ್ಮಾನ್ ಪುರಸ್ಕಾರ ನೀಡಲಾಗುತ್ತದೆ. ಯುವ ಲೇಖಕರನ್ನು ಉತ್ತೇಜಿಸಲು ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಹಾಗೂ ಅನುವಾದ ಮತ್ತು ಬಾಲ ಸಾಹಿತ್ಯದ ಉತ್ತಮ ಕೃತಿಗಳಿಗೂ ಪ್ರತಿವರ್ಷ ಅಕಾಡೆಮಿ ಪ್ರಶಸ್ತಿ ನೀಡುತ್ತಿದೆ.ಸಾಹಿತ್ಯ ಅಕಾಡೆಮಿ ವಿಚಾರ ಸಂಕಿರಣಗಳು, ಸಾಹಿತ್ಯ ಉತ್ಸವಗಳನ್ನು ಆಯೋಜಿಸುವುದರ ಜತೆಗೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದೆ. ಪ್ರತಿವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳನ್ನು ಎಲ್ಲಾ ಭಾರತೀಯ ಭಾಷೆಗಳಿಗೂ ಅನುವಾದ ಮಾಡಿಸುವ ಕಾರ್ಯವನ್ನು ಅಕಾಡೆಮಿ ನಿರ್ವಹಿಸುತ್ತಿದೆ.

ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಭಾರತೀಯ ಸಾಹಿತ್ಯದ ಬೆಳವಣಿಗೆ ದೃಷ್ಟಿಯಿಂದ ಪ್ರಮುಖವಾದ ಸ್ಥಿತ್ಯಂತರ. ಕನ್ನಡ ಭಾಷೆಯ ಸಾಹಿತ್ಯವನ್ನು ಮಾತ್ರವಲ್ಲ ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯವನ್ನು ವಿಶ್ವದ ಮಟ್ಟಕ್ಕೆ ತೆಗೆದುಕೊಂಡು ಹೋಗುವ ದೂರಸೃಷ್ಟಿ ಕಂಬಾರರಲ್ಲಿದೆ. ಕಂಬಾರರ ಆಯ್ಕೆ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ
– ನರಹಳ್ಳಿ ಬಾಲಸುಬ್ರಹ್ಮಣ್ಯ, ವಿಮರ್ಶಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಲಿಯ ನಿಕಟಪೂರ್ವ ಸದಸ್ಯ