‘ಧರ್ಮ ವಿಭಜನೆ’ ರಾಜಕೀಯ ತಂತ್ರದಿಂದ ರಾಜಸ್ಥಾನದಲ್ಲಿ ಮುಗ್ಗರಿಸಿದ ಬಿಜೆಪಿ 
COVER STORY

‘ಧರ್ಮ ವಿಭಜನೆ’ ರಾಜಕೀಯ ತಂತ್ರದಿಂದ ರಾಜಸ್ಥಾನದಲ್ಲಿ ಮುಗ್ಗರಿಸಿದ ಬಿಜೆಪಿ 

ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಸರಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿಂಗ್ ಯಾದವ್ , “ನೀವು ಹಿಂದೂ ಆಗಿದ್ದರೆ, ನನಗೆ ಮತ ನೀಡಿ. ನೀವು ಮುಸ್ಲಿಂ ಆಗಿದ್ದರೆ, ಕಾಂಗ್ರೆಸ್‌ಗೆ ಮತ ನೀಡಿ," ಎಂದು ಹೇಳುವ ಮೂಲಕ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಮುಂದಾಗಿದ್ದರು. ಧರ್ಮ ವಿಭಜನೆಯ ರಾಜಕೀಯ ತಂತ್ರಕ್ಕೆ ಜನರು ಸರಿಯಾಗಿ ಪಾಠ ಕಲಿಸಿದ್ದಾರೆ ಎನ್ನುತ್ತವೆ ವಿಶ್ಲೇ‍ಣೆಗಳು.

ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಸರಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ.

ರಾಜಸ್ಥಾನದಲ್ಲಿ 2 ಲೋಕಸಭಾ ಕ್ಷೇತ್ರಗಳು ಮತ್ತು 1 ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 29ರಂದು ಉಪ ಚುನಾವಣೆ ನಡೆದಿತ್ತು. ಇದರ ಫಲಿತಾಂಶವು ನಿನ್ನೆ(ಗುರುವಾರ) ತಾನೇ ಹೊರಬಿದ್ದಿದ್ದು, ಮೂರು ಕಡೆಗಳಲ್ಲಿಯೂ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.

ಈ ಫಲಿತಾಂಶ ವರ್ಷಾಂತ್ಯದಲ್ಲಿ ನಡೆಯುವ ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎನ್ನಲಾಗಿತ್ತು. ಹಾಗಾಗಿ, ಕಾಂಗ್ರೆಸ್‌ನ ಗೆಲುವು ಬಿಜೆಪಿಗೆ ಸಹಜವಾಗಿಯೇ ನಿದ್ದೆಗೆಡಿಸಿದೆ.ಮತ್ತೊಂದು ಕಡೆ, ಪಶ್ಚಿಮ ಬಂಗಾಳದ 1 ವಿಧಾನಸಭೆ (ನೋಪರಾ) ಮತ್ತು 1 ಲೋಕಸಭೆ (ಉಲ್ಬೇರಿಯಾ) ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು, ಇದರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜಯ ಸಾಧಿಸಿದೆ. ಇಲ್ಲಿಯೂ ಬಿಜೆಪಿ ಸೋಲನ್ನಪ್ಪಿ, ಮುಂದಿನ ಚುನಾವಣೆ ಬಗ್ಗೆ ಈಗಾಗಲೇ ಲೆಕ್ಕಾಚಾರ ಪ್ರಾರಂಭಿಸಿದೆ.

ರಾಜಸ್ಥಾನ ಉಪಚುನಾವಣೆ:

ರಾಜಸ್ಥಾನದಲ್ಲಿ ಉಪ ಚುನಾವಣೆ ನಡೆಯಲು ಕಾರಣ, ಅಜ್ಮೀರ್‌ ಮತ್ತು ಅಲ್ವರ್‌ ಲೋಕಸಭಾ ಕ್ಷೇತ್ರಗಳ ಬಿಜೆಪಿ ಸದಸ್ಯರಾದ ಸನ್ವರಲಾಲ್‌ ಜಾಟ್‌ ಮತ್ತು ಮಹಾಂತ್‌ ಚಂದ್ರನಾಥ್‌ ಅವರ ಅಕಾಲಿಕ ನಿಧನ. ಅಷ್ಟೇ ಅಲ್ಲದೇ, ಮಂಗಲಗಢದ ಬಿಜೆಪಿ ಶಾಸಕಿ ಕೀರ್ತಿಕುಮಾರಿ ಅವರೂ ಅಕಾಲಿಕ ನಿಧನ ಹೊಂದಿದ್ದರು. ಹಾಗಾಗಿ ಈ  ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು.

ರಾಜಸ್ಥಾನದಲ್ಲಿ ನಡೆದ ಈ ಉಪ ಚುನಾವಣೆ ಬಿಜೆಪಿಗೆ ಭಾರೀ ಮಹತ್ವದ್ದಾಗಿತ್ತು. ಯಾಕೆಂದರೆ ರಾಜ್ಯದ ಆಡಳಿತದ ಚುಕ್ಕಾಣಿಯೇ ಬಿಜೆಪಿ ಕೈಯಲ್ಲಿತ್ತು.  ಅಷ್ಟೇ ಅಲ್ಲದೇ, ಅಕಾಲಿಕ ನಿಧನ ಹೊಂದಿದ ಬಿಜೆಪಿ ನಾಯಕರ ಕಾರಣದಿಂದ ಅನುಕಂಪದ ಅಲೆಯಿಂದ ಮತಗಳು ಸಹಜವಾಗಿಯೇ ತಮ್ಮತ್ತ ಹರಿದು ಬರುತ್ತವೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆದರೆ ‘ಪದ್ಮಾವತ್‌’ ಚಿತ್ರ ವಿವಾದದ ಹಿನ್ನೆಲೆಯಲ್ಲಿ ರಜಪೂತರ ಮತಗಳ ಬಗ್ಗೆ ಬಿಜೆಪಿ ಆತಂಕಗೊಂಡಿತ್ತು. ಈಗ ರಾಜ್ಯದ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದು, ಬಿಜೆಪಿ ಸೋಲೊಪ್ಪುವ ಮೂಲಕ, ವರ್ಷಾಂತ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಗೆ ರಾಜ್ಯದ ಜನರ ಮನಸ್ಸಿನಲ್ಲೇನಿದೆ ಎಂದು ಸ್ಪಷ್ಟವಾಗಿ ತಿಳಿದುಕೊಂಡಂತಾಯಿತು.

ರಾಜಸ್ಥಾನದ ಅಲ್ವರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರಣ್ ಸಿಂಗ್ ಯಾದವ್ ಬಿಜೆಪಿಯ ಜಸ್ವಂತ್ ಸಿಂಗ್ ಯಾದವ್ ವಿರುದ್ಧ ಸ್ಫರ್ಧಿಸಿದ್ದರು. ಮತ್ತೊಂದು ಲೋಕಸಭಾ ಕ್ಷೇತ್ರವಾದ ಅಜ್ಮೀರ್‌ನಲ್ಲಿ ಬಿಜೆಪಿಯ ರಾಮ್ ಸ್ವರೂಪ್ ಲಾಂಬಾ (ಇವರು ನಿಧನರಾದ ಕೇಂದ್ರ ಸಚಿವ ಸನ್ವರಲಾಲ್‌ ಜಾಟ್‌ ಪುತ್ರ) ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ರಘು ಶರ್ಮಾ ಸ್ಪರ್ಧಿಸಿದ್ದರು. ಇದಲ್ಲದೇ, ವಿಧಾನಸಭಾ ಕ್ಷೇತ್ರ ಮಂಡಲಗಢದಲ್ಲಿ ಕಾಂಗ್ರೆಸ್‌ನ ವಿವೇಕ್ ಧಾಕಡ್ ಅವರು ಕಣಕ್ಕಿಳಿದಿದ್ದರು.

ಅಲ್ವರ್‌ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿಂಗ್ ಯಾದವ್ ಅವರು, “ನೀವು ಹಿಂದೂ ಆಗಿದ್ದರೆ, ನನಗೆ ಮತ ನೀಡಿ. ನೀವು ಮುಸ್ಲಿಂ ಆಗಿದ್ದರೆ, ಕಾಂಗ್ರೆಸ್‌ಗೆ ಮತ ನೀಡಿ," ಎಂದು ಚುನಾವನೆಗೂ ಮುನ್ನ ಹೇಳಿಕೆ ಕೊಟ್ಟಿದ್ದರು. ಈ ಮೂಲಕ ಹಿಂದೂತ್ವದ ಹೆಸರಿನಲ್ಲಿ ಮತಗಳಿಸಿಲು ಅವರು ಮುಂದಾಗಿದ್ದರು. ಆದರೆ ಜಾತ್ಯಾತೀತ ರಾಷ್ಟ್ರದ ಚುನಾವಣೆಯೊಂದರಲ್ಲಿ ಹೀಗೆ 'ಧರ್ಮ ರಾಜಕಾರಣ' ಮಾಡಲು ಹೋಗಿ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಕಾಂಗ್ರೆಸ್‌ನ ಕರಣ್ ಸಿಂಗ್ ಯಾದವ್ , ರಘು ಶರ್ಮಾ ಮತ್ತು ವಿವೇಕ್ ಧಾಕಡ್ ಮೂವರೂ ಕಾಂಗ್ರೆಸ್‌ ನಾಯಕರು ಉಪ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಕರಣ್‌ ಸಿಂಗ್‌ ಯಾಧವ್‌ 1.97 ಲಕ್ಷ ಮತಗಳಿಂದ ಗೆದ್ದರೆ, ವಿವೇಕ್ ಧಾಕಡ್, 12,976 ಮಂತಗಳ ಅಂತರದಿಂದ ಗೆದ್ದಿರುವುದು ಕಾಂಗ್ರೆಸ್‌ ಸಂತಸಕ್ಕೆ ಮತ್ತಷ್ಟು ಕಾರಣವಾಗಿದೆ. ಪಕ್ಷದ ಗೆಲುವಿನ ಕುರಿತು ಸಂತಸರಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಕೇಂದ್ರದ ಬಿಜೆಪಿ ನಾಯಕರು ರಾಜಸ್ಥಾನದ ಉಪಚುನಾವಣೆ ಬಗ್ಗೆ ತಲೆ ಹಾಕದೇ, ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ವಸುಂಧರಾ ರಾಜೇ ಅವರಿಗೆ ವಹಿಸಿದ್ದರು. ರಾಜಸ್ಥಾನ ಬಿಜೆಪಿ ಮತ್ತು ಕೇಂದ್ರ ಬಿಜೆಪಿಯ ಮದ್ಯ ಬಹುಶಃ ಎಡವಟ್ಟು ಸಂಭವಿಸಿದೆ. ಇದೇ ಕಾರಣಕ್ಕೆ ಕೇಂದ್ರ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಅಷ್ಟೇ ಅಲ್ಲದೇ, "ವಸುಂದರಾ ರಾಜೇ ಕುರಿತು ರಾಜ್ಯದ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದ್ದು, ಅದು ಉಪ ಚುನಾವಣೆಯಲ್ಲಿ ಈ ರೀತಿಯಾಗಿ ಪರಿಣಾಮ ಬೀರಿದೆ," ಎನ್ನುತ್ತವೆ ಪಕ್ಷದ ಆಂತರಿಕ ಮೂಲಗಳು.

ಬಿಜೆಪಿ ಸೋಲಿಗೆ ಕಾರಣಗಳೇನು?

  • ರಾಜಸ್ಥಾನದಲ್ಲಿ ‘ಪದ್ಮಾವತ್‌’ ಚಿತ್ರ ನಿಷೇಧಿಸುವಲ್ಲಿ ವಸುಂಧರಾ ರಾಜೇ ಸರಕಾರ ವಿಫಲ' ಎನ್ನುವ ರಜಪೂತರ ಅಸಮಾಧಾನ
  • ರಾಜಸ್ಥಾನ ಸರಕಾರದಿಂದ ರಜಪೂತ ಸಮುದಾಯದ ಕುಖ್ಯಾತ ಗ್ಯಾಂಗಸ್ಟರ್‌ ಆನಂದ ಸಿಂಗ್‌ ಪಾಲ್‌ನ ಎನ್‌ಕೌಂಟರ್‌
  • ಆಡಳಿತ ಪಕ್ಷದ (ಬಿಜೆಪಿ) ನಾಯಕರ ಸಾವಿನ ಅನುಕಂಪದ ಅಲೆ ಮತಗಳಾಗಿ ಪರಿವರ್ತನೆಯಾಗದೇ ಇರುವುದು
  • ರಜಪೂತ ಸಮುದಾಯ ಬಿಜೆಪಿಯಿಂದ ಅಸಮಾಧಾನಗೊಂಡು ಕಾಂಗ್ರೆಸ್‌ಗೆ ಬಹಿರಂಗ ಬೆಂಬಲ ಘೋಷಣೆ ಮಾಡಿದ್ದು
  • 'ನೀವು ಹಿಂದೂ ಆಗಿದ್ದರೆ, ನನಗೆ ಮತ ನೀಡಿ. ನೀವು ಮುಸ್ಲಿಂ ಆಗಿದ್ದರೆ, ಕಾಂಗ್ರೆಸ್‌ಗೆ ಮತ ನೀಡಿ.' (ಜಸ್ವಂತ್ ಸಿಂಗ್ ಯಾದವ್ ಹೇಳಿಕೆ)
  • ರಜಪೂತರು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದು.
  • ಮುಖ್ಯಮಂತ್ರಿ ವಸುಂದರಾ ರಾಜೇ ಅವರ ಪ್ರಭಾವ ರಾಜಸ್ಥಾನದಲ್ಲಿ ಕುಗ್ಗುತ್ತಿರುವುದು.
  • ಪ್ರಧಾನಿ ನರೇಂದ್ರ ಮೋದಿ ಮೇಲಿನ ನಂಬಿಕೆ ಮತ್ತು ಭರವಸೆಯನ್ನು ಜನರು ಕಳೆದುಕೊಳ್ಳುತ್ತಿರುವುದು.
  • 2014ಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಮತದಾನ ಶೇ 20ರಷ್ಟು ಕುಸಿತ.

ಉಪ ಚುನಾವಣಾ ಫಲಿತಾಂಶ: ಟ್ವಿಟರ್‌ನಲ್ಲಿ ಕಂಡು ಬಂದ ಅಭಿಪ್ರಾಯಗಳು;

ರಾಜಸ್ಥಾನದ ಜನರು ಪ್ರಧಾನಿ ಮೋದಿಯವರನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಿದ್ದಾರೆ. ಇದಕ್ಕೆ ಪ್ರಧಾನಿಯ ಪೊಳ್ಳು ಭರವಸೆಗಳೇ ಕಾರಣ.

2014ಕ್ಕೆ ಹೋಲಿಸಿದರೆ, 2018ರಲ್ಲಿ ಬಿಜೆಪಿ ಮತಗಳಿಕೆಯಲ್ಲಿ ಶೇ.20 ರಷ್ಟು ಕುಸಿತ.

ಈ ಮೊದಲು, ಬಿಜೆಪಿ ಆಕ್ರಮಿಸಿಕೊಂಡಿದ್ದ ಮೂರೂ ಕ್ಷೇತ್ರಗಳನ್ನು ಈಗ ಕಾಂಗ್ರೆಸ್ ಗೆದ್ದಿದೆ. ಇದಕ್ಕೆ ಕರ್ಣಿ ಸೇನಾ ಮಾಡಿದ ಹಿಂಸಾಚಾರ ಮತ್ತು ಗಲಭೆಗಳೇ ಕಾರಣವಾ? ಅಥವಾ ಸಿಎಂ ವಸುಂದರಾ ರಾಜೇ ಬಗ್ಗೆ ರಾಜ್ಯದ ಜನರಲ್ಲಿರುವ ತೀವ್ರ ಸಮಾಧಾನ ಕಾರಣವಾ?

ರಾಜಸ್ಥಾನದ ಉಪಚುನಾವಣೆಯ ಫಲಿತಾಂಶವು ಪ್ರಧಾನಿ ಮೋದಿಯ ಅಲೆಯು ಕುಸಿತವಾಗುತ್ತಿರುವ ಸೂಚಕ.