ಬೆಂಗಳೂರು ಉಪನಗರ ರೈಲ್ವೆ ಸೇವೆಗೆ ಬಜೆಟ್ ಅಂಗೀಕಾರ: ನನಸಾಗುವ ಹಾದಿಯಲ್ಲಿ ಬಹುಕಾಲದ ಕನಸು
COVER STORY

ಬೆಂಗಳೂರು ಉಪನಗರ ರೈಲ್ವೆ ಸೇವೆಗೆ ಬಜೆಟ್ ಅಂಗೀಕಾರ: ನನಸಾಗುವ ಹಾದಿಯಲ್ಲಿ ಬಹುಕಾಲದ ಕನಸು

ಬೆಂಗಳೂರು ಟ್ರಾಫಿಕ್‌ ಜಂಜಾಟದಲ್ಲಿ ಮಿಂದೆದ್ದ ಜನರ ಸುದೀರ್ಘ ದಿನಗಳ ಬೇಡಿಕೆಗೆ ಗುರುವಾರದ ಬಜೆಟ್‌ನಲ್ಲಿ ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಉಪನಗರಗಳನ್ನು ಸಂಪರ್ಕಿಸುವ, ಸಬ್‌ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಒಟ್ಟು 17,000 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಮುಂದಿನ ಒಂದೆರಡು ವರ್ಷಗಳ ಅಂತರದಲ್ಲಿ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಈಗ ನಿಚ್ಚಳವಾಗಿದೆ. 

ಬೆಂಗಳೂರು ಬೆಳೆದುನಿಂತ ನಗರ. ಜನಸಂಖ್ಯೆ ಕೋಟಿ ಮೀರಿದೆ. ಪ್ರತಿನಿತ್ಯ ಲಕ್ಷಾಂತರ ಜನ ನಾನಾ ಕಾರಣಗಳಿಗಾಗಿ ಸಂಚಾರ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಇವತ್ತಿಗೂ ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿ ಕೆಲಸ ಮಾಡುತ್ತಿರುವುದು ಬಿಎಂಟಿಸಿ ಅಥವಾ ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥೆ. ಒಂದು ಅಂದಾಜಿನ ಪ್ರಕಾರ ಪ್ರತಿನಿತ್ಯ ಬಿಎಂಟಿಸಿ ಹತ್ತಿ ಇಳಿಯುವವರ ಸಂಖ್ಯೆ 60 ಲಕ್ಷ ಮುಟ್ಟಿದೆ. ಇದಕ್ಕೆ ಹೋಲಿಸಿದರೆ, 40 ಸಾವಿರ ಕೋಟಿ ಯೋಜನೆಯಾದ ಮೆಟ್ರೊ ರೈಲು ಕೇವಲ 5 ಲಕ್ಷ ಜನರಿಗೆ ಸಾರಿಗೆ ವ್ಯವಸ್ಥೆ ಒದಗಿಸಲಷ್ಟೆ ಶಕ್ತವಾಗಿದೆ. ಇಂತಹ ಸಮಯದಲ್ಲಿ ಬೆಂಗಳೂರು ಜನರ ನಿತ್ಯ ಸಂಚಾರಕ್ಕೆ ನಾನಾ ಸಾರಿಗೆ ವ್ಯವಸ್ಥೆಗಳ ಅಗತ್ಯತೆಯನ್ನು ಹಲವು ದಶಕಗಳಿಂದ ಪ್ರತಿಪಾದಿಸುತ್ತಲೇ ಬರಲಾಗುತ್ತಿತ್ತು. ಅಂತಹ ಪರ್ಯಾಯ ಯೋಜನೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದು 'ಕಮ್ಯುಟರ್ ರೈಲ್ವೆ ವ್ಯವಸ್ಥೆ'. ಅದೇ ಈಗ 'ಉಪನಗರ ರೈಲ್ವೆ ವ್ಯವಸ್ಥೆ' ಹೆಸರಿನಲ್ಲಿ ಕೇಂದ್ರ ಸರಕಾರದಿಂದ ಅಂಕಿತ ಪಡೆದುಕೊಂಡಿದೆ.

ಸುದೀರ್ಘ ಕನಸು: 

ಬೆಂಗಳೂರಿನ ಹೃದಯಭಾಗದಲ್ಲಿರುವ ಮೆಜೆಸ್ಟಿಕ್‌ನ ಕೇಂದ್ರ ರೈಲ್ವೆ ನಿಲ್ದಾಣ ದೇಶಾದ್ಯಂತ ಸಂಪರ್ಕವನ್ನು ಕಲ್ಪಿಸುತ್ತದೆ. ಬೆಂಗಳೂರಿನಿಂದ ಹೊರಗೆ ಹೋಗುವ ಈ ರೈಲ್ವೆ ಹಳಿಗಳು ಹಲವು ಉಪನಗರಗಳನ್ನು ಸಂಪರ್ಕಿಸುತ್ತವೆ. ಈಗಾಗಲೇ ಜನ ಎಕ್ಸ್‌ಪ್ರೆಸ್‌ ರೈಲುಗಳನ್ನು ಹೊರತುಪಡಿಸಿ, ಪ್ಯಾಸೆಂಜರ್‌ ರೈಲುಗಳ ಮೂಲಕ ಬೆಂಗಳೂರು ಹೊರಭಾಗದ ಪ್ರದೇಶಗಳಿಗೆ ಸಂಚಾರ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಈ ಸಂಖ್ಯೆ ಸುಮಾರು 2.5 ಲಕ್ಷ. ಕೆಂಗೇರಿ, ವೈಟ್‌ಫೀಲ್ಡ್‌ ಸೇರಿದಂತೆ ರಾಮನಗರ, ಚಿಕ್ಕಬಳ್ಳಾಪುರ, ಕುಣಿಗಲ್ ಹಾಗೂ ಬಂಗಾರಪೇಟೆಗಳಿಂದ ನಿತ್ಯ ಬೆಂಗಳೂರನ ಕೇಂದ್ರ ಜನ ಕೆಲಸಕ್ಕೆಂದು ಬರುತ್ತಾರೆ ಮತ್ತು ನಿತ್ಯ ವಾಪಾಸ್ ತೆರಳುತ್ತಿದ್ದಾರೆ. ಇವರಿಗೆಲ್ಲಾ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿರುವುದು ಪ್ಯಾಸೆಂಜರ್‌ ರೈಲುಗಳು. ಹೀಗಾಗಿ, ಇದೇ ರೈಲ್ವೆ ವ್ಯವಸ್ಥೆಯನ್ನು ಉಪನಗರ ರೈಲ್ವೆ ಸೇವೆಯಾಗಿ ಬದಲಾಯಿಸಿದರೆ, ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎಂಬುದು ಯೋಜನೆಯ ಒಟ್ಟು ಸಾರ.

ಸುಮಾರು 18 ವರ್ಷಗಳ ಹಿಂದೆ ರೈಟ್ಸ್‌ ಸಂಸ್ಥೆ ಉಪನಗರ ರೈಲ್ವೆ ಸೇವೆಗಾಗಿ ಯೋಜನೆಯೊಂದನ್ನು ತಯಾರಿಸಿತ್ತು. ಅವತ್ತಿಗೆ ಅಂದಾಜಿಸಿದ್ದ ಮೊತ್ತ ಸುಮಾರು 1. 5 ಸಾವಿರ ಕೋಟಿ ರೂಪಾಯಿಗಳು. ನಂತರದ ದಿನಗಳಲ್ಲಿ ಸಮಗ್ರ ಸಾರಿಗೆ ಮತ್ತು ಸಂಚಾರಿ ಯೋಜನೆ (ಸಿಟಿಟಿಪಿ) ಹೆಸರಿನಲ್ಲಿ ತಯಾರಿಸಲಾದ ಯೋಜನೆಯಲ್ಲಿ ಇದೇ ಯೋಜನೆಗೆ 3060 ಕೋಟಿ ರೂಪಾಯಿಗಳನ್ನು ಅಂದಾಜಿಸಲಾಗುತ್ತು.

ಯೋಜನೆ ಕಾಗದದ ಮೇಲೆ ಇತ್ತಾದರೂ, ಅನುಷ್ಠಾನಕ್ಕೆ ನಾನಾ ತೊಡಕುಗಳು ಎದುರಾಗಿದ್ದವು. ಅವುಗಳಲ್ಲಿ ಪ್ರಮುಖವಾದುದು ಮೆಟ್ರೊ ರೈಲು ಯೋಜನೆ.

ಬೆಂಗಳೂರಿನಲ್ಲಿ ಮೆಟ್ರೊ ಯೋಜನೆಗೆ ಕಲ್ಲು ಬಿದ್ದಿದ್ದು 2005ರಲ್ಲಿ. ಅಲ್ಲೀಂದೀಚೆಗೆ ಸುಮಾರು 15 ಸಾವಿರ ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಸುರಿಯಲಾಯಿತು. ಅಂದುಕೊಂಡ ಸಮಯವನ್ನು ಮೀರಿದ ಮೆಟ್ರೋ ಯೋಜನೆ ಇವತ್ತಿಗೂ ತನ್ನ ಮೊದಲ ಹಂತವನ್ನಷ್ಟೆ ಪೂರೈಸಲು ಸಾಧ್ಯವಾಗಿದೆ. ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಇನ್ನಷ್ಟು ಜಂಜಡವಾಗಿದೆ. 2013-14 ಸುಮಾರಿಗೆ ಕಮ್ಯುಟರ್ ರೈಲು ಅಥವಾ ಉಪನಗರ ರೈಲ್ವೆ ಸೇವೆಯ ಕುರಿತು ಮಾತುಗಳು ಕೇಳಿಬಂದವಾದರೂ, ಮೆಟ್ರೊ ಲಾಬಿ ಹಾಗೂ ಖಾಸಗಿ ಬಸ್‌ಲಾಬಿಗಳು ಅದನ್ನು ಅನುಷ್ಠಾನಕ್ಕೆ ತರಲು ಬಿಡಲಿಲ್ಲ ಎನ್ನುತ್ತಾರೆ ಸಂಚಾರ ವ್ಯವಸ್ಥೆ ತಜ್ಞರು.

ಇದೀಗ ಇಂತಹ ಎಲ್ಲಾ ಅಡೆತಡೆಗಳನ್ನು ಮೀರಿ ಉಪನಗರ ರೈಲ್ವೆ ಸೇವೆಗೆ ಅನುಮೋದನೆ ಸಿಕ್ಕಿದೆ. ಬಜೆಟ್‌ನಲ್ಲಿಯೇ ಘೋಷಣೆಯಾಗಿರುವುದರಿಂದ ಮುಂದಿನ ಒಂದೆರಡು ವರ್ಷಕ್ಕೆ ಹಲವು ದಿನಗಳ ಕನಸು ಈಡೇರುತ್ತದೆ ಎಂಬ ಭರವಸೆ ಸಿಕ್ಕಿದೆ.

ಅನುಷ್ಠಾನ ಮುಖ್ಯ: 

"ಯೋಜನೆಗೆ ಅಂಗೀಕಾರ ಸಿಕ್ಕಿದೆ. ಈ ಹಿಂದೆಯೇ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿತ್ತು. ಕೇಂದ್ರ ಸರಕಾರ ಇತ್ತೀಚೆಗಷ್ಟೆ ರೈಟ್ಸ್‌ ಸಂಸ್ಥೆ ಕಡೆಯಿಂದಲೇ ಮತ್ತೊಂದು ಫಿಸಿಬಿಲಿಟಿ ವರದಿ ತಯಾರಿಸಿತ್ತು. ಅದರಲ್ಲಿ ಭೂ ಸ್ವಾಧೀನ, ರೈಲ್ವೆ ಕೋಚ್‌ಗಳು, ಹೊಸ ಹಳಿಗಳ ನಿರ್ಮಾಣ ಹೀಗೆ ಯೋಜನೆ ಅನುಷ್ಠಾನಕ್ಕೆ ಒಟ್ಟು 17 ಸಾವಿರ ಕೋಟಿ ಅಂದಾಜಿಸಲಾಗಿತ್ತು. ಅದನ್ನು ಕೇಂದ್ರ ಸರಕಾರವೂ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಗುದ್ದಾಟಗಳನ್ನು ಪಕ್ಕಕ್ಕಿಟ್ಟು ಅನುಷ್ಠಾನಕ್ಕೆ ತರಬೇಕಿದೆ,'' ಎನ್ನುತ್ತಾರೆ ಉಪನಗರ ರೈಲ್ವೆ ಸೇವೆಗಾಗಿ ಹೋರಾಟ ನಡೆಸಿಕೊಂಡು ಬಂದ ಸಂಜೀವ್ ದ್ಯಾಮಣ್ಣನವರ್.

ಕೇಂದ್ರ ಸರಕಾರ ಬಜೆಟ್ ಘೋಷಣೆ ಕುರಿತು ಹರ್ಷವನ್ನು ವ್ಯಕ್ತಪಡಿಸಿದ ಅವರು, "ಒಂದು ವೇಳೆ ಮುಂದಿನ ಒಂದೆರಡು ವರ್ಷಗಳಲ್ಲಿ ಯೋಜನೆ ಅಂಗೀಕಾರವಾದರೆ ಖಂಡಿತಾ ಉತ್ತಮ ಫಲಿತಾಂಶವೂ ದೊರೆಯಲಿದೆ. ಹೆಚ್ಚು ಹೆಚ್ಚು ಜನ ಈ ಸೇವೆಯನ್ನು ಬಳಸುವ ಸಾಧ್ಯತೆ ಇದೆ,'' ಎಂದರು.

"ಇದೊಂದು ಸುದೀರ್ಘ ಹೋರಾಟ. ಒಂದು ದಶಕದ ಹಿಂದೆಯೇ ಯೋಜನೆ ಅನುಷ್ಠಾನಗೊಂಡಿದ್ದರೆ ಭೂಮಿ ಬೆಲೆಯೂ ಕಡಿಮೆ ಇತ್ತು. ಯೋಜನಾ ವೆಚ್ಚವೂ ಕಡಿಮೆಯಾಗುತ್ತಿತ್ತು. ಲಾಬಿಗಳ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗಲಾದರೂ ಅಂಗೀಕಾರ ಸಿಕ್ಕಿದೆ. ಆದಷ್ಟು ಬೇಗ ಅನುಷ್ಠಾನವಾಗಬೇಕು. ರಾಜ್ಯದಲ್ಲಿ ಹೊಸ ಸರಕಾರ ರಚನೆಗೆ ಹೆಚ್ಚು ಸಮಯ ಇಲ್ಲ. ಕೇಂದ್ರ ಸರಕಾರದ ಬಳಿಯೂ ಹೆಚ್ಚು ಸಮಯ ಉಳಿದುಕೊಂಡಿಲ್ಲ. ಇಂತಹ ತಾಂತ್ರಿಕ ಮಿತಿಗಳ ಆಚೆಗೆ ಯೋಜನೆ ಜಾರಿ ಬರಲಿ ಎಂದು ಹಾರೈಸೋಣ,'' ಎನ್ನುತ್ತಾರೆ ಇನ್ನೊಬ್ಬ ಸಂಚಾರ ತಜ್ಞ ವಿನಯ್ ಬೈಂದೂರ್.