samachara
www.samachara.com
ಕಲ್ಲು ತೂರುವ ಕಾಶ್ಮೀರಿಗಳ ಕೈಗೆ ಬಂದೂಕು ಸಿಗುವ ಮುನ್ನ ದಿಲ್ಲಿ ಆಡಳಿತ ಎಚ್ಚೆತ್ತುಕೊಳ್ಳಲಿ
COVER STORY

ಕಲ್ಲು ತೂರುವ ಕಾಶ್ಮೀರಿಗಳ ಕೈಗೆ ಬಂದೂಕು ಸಿಗುವ ಮುನ್ನ ದಿಲ್ಲಿ ಆಡಳಿತ ಎಚ್ಚೆತ್ತುಕೊಳ್ಳಲಿ

ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ರಕ್ತದ ಕೋಡಿ ಹರಿದಿದೆ. ಮತದಾನದ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಎಂದಿನಂತೆ ಕಾಶ್ಮೀರಿಗರ ಕಡೆಯಿಂದ ಕಲ್ಲು ತೂರಾಟ ನಡೆದಿದ್ದರೆ; ಭದ್ರತಾ ಪಡೆಗಳು ಗುಂಡಿನ ಮಳೆಗೆರೆದಿದ್ದಾರೆ. ಪರಿಣಾಮ 20 ರ ಆಸುಪಾಸಿನ ಜನ ಯುವಕರು ಸಾವನ್ನಪ್ಪಿದ್ದಾರೆ. ಸುಮಾರು 300 ನಾಗರಿಕರು, 100 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಹಿನ್ನಲೆ ಹಾಗೂ ದೇಶದ'ಗಣತಂತ್ರ' ಬಗೆಗಿನ ಅಲ್ಲಿನ ಜನರ ಆಕ್ರೋಶ ಮತ್ತು ಅಸಡ್ಡೆಯ ಪ್ರತಿರೂಪ ಎಂಬಂತೆ ಕೇವಲ ಶೇಕಡಾ 7.14ರಷ್ಟು ಮತದಾನವಾಗಿದೆ. ಆತಂಕದ ಬೆಳವಣಿಗೆ ಏನೆಂದರೆ, ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ದಾಖಲಾದ ಅತ್ಯಂತ ಕಳಪೆ ಮತದಾನ.

ಶ್ರೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶ್ರೀನಗರ, ಬುದ್ಗಾಮ್, ಗಂಡೆರ್ಬಾಲ್ ಜಿಲ್ಲೆಗಳ 1500 ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭಾರಿ ಭದ್ರತೆಯೊಂದಿಗೆ ನಿನ್ನೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುರಕ್ಷಿತ ಮತದಾನಕ್ಕಾಗಿ ಭದ್ರತಾ ಪಡೆಗಳು ಮತಗಟ್ಟೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದವು. ಆದರೆ ಮತದಾನವಾಯಿತಾ ಎಂದರೆ ಇಲ್ಲ. ಬದಲಿಗೆ ಮತದಾನಕ್ಕಿಂತ ಹೆಚ್ಚು ಪ್ರತಿಭಟನೆಗಳು, ನಾಗರಿಕರ ಸಾವು, ಕಡಿಮೆ ಮತದಾನವೇ ಗಮನಸೆಳೆಯಿತು.

ಉಪಚುನಾವಣೆಯ ಹಿನ್ನಲೆ:

2016ರ ಜುಲೈ 8ರಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿಯನ್ನು ಸೇನಾಪಡೆಗಳು ಹೊಡೆದುರುಳಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು. ಈ ವೇಳೆ ಅಲ್ಲಿನ ನಾಗರಿಕರ ಮೇಲೆ ದೌರ್ಜನ್ಯಗಳು ನಡೆಯಿತು ಎಂಬ ಕಾರಣ ಮುಂದೊಡ್ಡಿ ಶ್ರೀನಗರ ಸಂಸತ್ ಸದಸ್ಯ ಪಿಡಿಪಿಯ ತಾರಿಕ್ ಹಮೀದ್ ಕರ್ರಾ ರಾಜೀನಾಮೆ ನೀಡಿದ್ದರು. ಹೀಗೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತುಯಾವ ಕಾರಣ ನೀಡಿ ತಾರಿಕ್ ರಾಜೀನಾಮೆ ನೀಡಿದರೋ ಅದೇ ಉಪಚುನಾವಣೆ ಮತದಾನದ ವೇಳೆಯಲ್ಲೂ ಮರುಕಳುಹಿಸಿದ್ದು ಮಾತ್ರ ವಿಪರ್ಯಾಸ. ಜತೆಗೆ ಅಲ್ಲಿನ ಜನ ಈ ಬಾರಿಚುನಾವಣೆಯನ್ನೇ ಸರಾಸಗಟಾಗಿ ತಿರಸ್ಕರಿಸಿದರು.

ಇಂಥಹದ್ದೊಂದು ತೀರ್ಮಾನಕ್ಕೆ ಜನರು ಬರಬಹುದು ಎಂಬ ಅರಿವು ಇಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಿತ್ತು. ಇದೇ ಕಾರಣಕ್ಕೆ ಕಣಕ್ಕಿಳಿದಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ನಜೀರ್ ಅಹ್ಮದ್ ಖಾನ್ ಆಗಲೀ, 81ರ ಇಳಿ ವಯಸ್ಸಿನಲ್ಲಿ ಸತ್ವ ಪರೀಕ್ಷೆ ಎದುರಿಸಲು ಹೊರಟ ನ್ಯಾಷನಲ್ ಕಾನ್ಫರೆನ್ಸ್ ನೇತಾರ ಫಾರುಕ್ ಅಬ್ದುಲ್ಲಾ ಅವರಾಗಲಿ ಎಂದೂ ಪ್ರಚಾರಕ್ಕೆ ಇಳಿಯಲೇ ಇಲ್ಲ. 12.61ಲಕ್ಷ 'ಮತದಾರ ಪ್ರಭು'ಗಳನ್ನು ಎದುರಿಸುವ ಬದಲು ಕ್ಷದ ಕಾರ್ಯಕರ್ತರಿಗಷ್ಟೇ ತಮ್ಮ ಪ್ರಚಾರ ಸೀಮಿತಗೊಳಿಸಿದ್ದರು. ಪರಿಣಾಮ ಕೇವಲ ಶೇಕಡಾ 7.14(ಅಂದಾಜು 90,000)ಮತ ಚಲಾವಣೆಯಾಗಿವೆ. ಇದು ಕಳೆದ ಮೂರು ದಶಕಗಳಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಾದ ಕನಿಷ್ಠ ಮತದಾನ ಎಂಬುದನ್ನು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

ನೀರಸ ಮತದಾನ:

ಈ ಹಿಂದಿನ ವಿಧಾನಸಭೆ ಚುಣಾವಣೆಯಲ್ಲಿ ಶೇಕಡಾ 59.11 ರಷ್ಟು ಭರ್ಜರಿ ಮತದಾನವಾಗಿದ್ದ ಬುದ್ಗಾಮ್ ನ ಹಲವು ಮತಗಟ್ಟೆಗಳಲ್ಲಿ 50, 100 ಮತಗಳಷ್ಟೆ ಚಲಾವಣೆಯಾಗಿವೆ. ಅದೇ ರೀತಿ ಕಳೆದ ಬಾರಿ ಶೇಕಡಾ 74.59 ರಷ್ಟು ಮತ ಚಲಾವಣೆಯಾಗಿದ್ದ ಬಿರ್ವಾಹ್ ನಲ್ಲಿ ಹಿಂಸಾಚಾರಕ್ಕೆ ಮತದಾನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ನಸ್ರುಲ್ಲಾಹ್ ಪೊರಾ ಮತಗಟ್ಟೆಯಲ್ಲಿ 14 ಜನ ನಾಗರಿಕರು ಮತ್ತು 7 ಜನ ಧಿಕಾರಿಗಳು ಹಿಂಸಾಚಾರಕ್ಕೆ ಗಾಯಗೊಂಡರು. ಇಲ್ಲಿನ ಇವಿಎಂನ್ನು ಪ್ರತಿಭಟನಾಕಾರರು ಹೊತ್ತೊಯ್ದರುದಾಳಿಯಿಂದಾಗಿ ಸುಮಾರು 60 ರಷ್ಟು ಮತಗಟ್ಟೆಗಳನ್ನು ಅನಿವಾರ್ಯವಾಗಿ ಬಂದ್ ಮಾಡಬೇಕಾಯಿತು. ಕೆಲವು ಕಡೆಗಳಲ್ಲಿ ಮತಗಟ್ಟೆ ಬಂದ್ ಮಾಡಿಸಿ ಅಧಿಕಾರಿಗಳನ್ನು ಪ್ರತಿಭಟನಾಕಾರರು ಹಿಂದಕ್ಕೆ ಕಳುಹಿಸಿದರುಮೇಲ್ನೋಟಕ್ಕೆ ಇದು ಮತದಾನ ವಿರೋಧಿಸಿ ನಡೆದ ನಾಗರಕರ ಪ್ರತಿರೋಧದಂತೆ ಕಾಣಿಸಿದರೂ, ಆಳದಲ್ಲಿ ಕಣಿವೆ ರಾಜ್ಯದಲ್ಲಿ ಭಾರತದ ಗಣತಂತ್ರ ವ್ಯವಸ್ಥೆ ವಿರುದ್ಧ ಸಿಡಿದೆದಿದ್ದರು ಜನರ ಆಕ್ರೋಶದ ಅಭಿವ್ಯಕ್ತಿಯಾಗಿದೆ. 

ಪರಿಸ್ಥಿತಿ ಹದಗೆಟ್ಟಿದೆ:

ಕಣಿವೆ ರಾಜ್ಯದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಅಧಿಕಾರಿಗಳ ಪ್ರಕಾರ ಇದೊಂದು ವಿಫಲ ಚುನಾವಣೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡಾ, "ಹಿಂದೆಂದೂ ಹೀಗೆ ನಡೆದಿದ್ದು ನೆನಪಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಹೇಗೆ ಹದಗೆಟ್ಟಿದೆ ಎಂಬುದನ್ನು ಇದು ತೋರಿಸುತ್ತಿದೆ,” ಎಂದು ಹೇಳಿದ್ದಾರೆ.

ರಾಜಕಾರಣಿಗಳು ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ಸಿಟ್ಟು ಇಲ್ಲಿನ ಜನರಿಗಿದೆ. ಇವೆಲ್ಲದರ ಮಧ್ಯೆ ಹೇಳಿಕೆ ನೀಡಿರುವ ಅಭ್ಯರ್ಥಿ ಫಾರೂಕ್ ಅಬ್ದುಲ್ಲಾ, "ಚುನಾವಣೆಗಳು ಶಾಂತಿಯಿಂದ ನಡೆಯಬೇಕು. ಜನ ಬಂದು ತಮ್ಮ ಹಾಜರಾತಿ ತೋರಿಸಬೇಕು ಮತ್ತು ತಮಗೆ ಬೇಕಾದವರನ್ನು ಬೆಂಬಲಿಸಬೇಕು. ಇದು ದೇಶದ ಸ್ವಾತಂತ್ರ್ಯಕ್ಕೆ ಅಗತ್ಯ,” ಎಂದಿದ್ದಾರೆ.

ಪ್ರತ್ಯೇಕತಾವಾದ ಬಿರುಸು: 

ಆದರೆ ಕಾಶ್ಮೀರದ ಜನ ಚುನಾವಣೆಯಲ್ಲಿ ಬಂದು ಪಾಲ್ಗೊಳ್ಳುವ ಯಾವೊಂದು ಲಕ್ಷಣಗಳನ್ನು ತೋರಿಸುತ್ತಿಲ್ಲ. ಅಲ್ಲಿ ಪ್ರತ್ಯೇಕತಾವಾದಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದರೆ ಅದಕ್ಕೊಂದು ಪರಿಹಾರ ರೂಪಿಸುವಲ್ಲಿ ದೆಹಲಿ ರಾಜಕಾರಣ ಸ್ಪಷ್ಟವಾಗಿ ಸೋತಿದೆ ಎಂಬ ಭಾವನೆ ಕಾಶ್ಮೀರಿಗರೂ ಸೇರಿದಂತೆ ದೇಶದ ಜನರಲ್ಲಿದೆ.

ಬುರ್ಹಾನ್ ವನಿ ಸಾವಿನ ನಂತರ ಹುಟ್ಟಿಕೊಂಡ 'ಕಾಶ್ಮೀರ ಸಂಘರ್ಷ'ಕ್ಕೆ ಯಾವೊಂದು ಪರಿಹಾರವೂ ಸಿಕ್ಕಿಲ್ಲ. ನವೆಂಬರಿನಲ್ಲಿ ಮಾಜಿ ವಿದೇಶಾಂಗ ಸಚಿವ ಯಶವಂತ್ ಸಿನ್ಹಾ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಒಂದಷ್ಟು ಪರಿಸ್ಥಿತಿ ಸುಧಾರಿಸಿತ್ತು.ಆದರೆ ಅದಾದ ನಂತರ ಮತ್ತೆ ಪ್ರಕ್ಷುಬ್ಧ ವಾತಾವರಣ ಮುಂದುವರಿಯಿತು. ದೆಹಲಿ ರಾಜಕಾರಣವೂ ಪರಿಸ್ಥಿತಿ ಸುಧಾರಿಸಲು ಮುಂದಾಗಲಿಲ್ಲ. ಸದ್ಯ ಬಂಡುಕೋರರನ್ನು ಹೊಡೆದುರುಳಿಸಿದರೆ ಎಲ್ಲಾ ಸರಿಯಾಗುತ್ತದೆ ಎಂಬ ಭಾವನೆಯಲ್ಲಿ ಸರಕಾರವಿದ್ದಂತೆ ಕಾಣಿಸುತ್ತಿದೆಆದರೆ ಆತಂಕದ ವಿಚಾರವೆಂದರೆ ಯುವಕರು ಹೆಚ್ಚಾಗಿ ಬಂಡುಕೋರ ಸಂಘಟನೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ‘2014ರ ನಂತರ ಅತೀ ಹೆಚ್ಚಿನ ಯುವಕರು ಬಂಡುಕೋರ ಸಂಘಟನೆ ಸೇರಿದ್ದಾರೆ' ಎಂಬ ಮಾಹಿತಿಯನ್ನು ಲೋಕಸಭೆಯಲ್ಲೇ ನೀಡಲಾಗಿದೆ. ಇತ್ತೀಚೆಗೆ ಬಂಡುಕೋರರನ್ನು ಸದೆಬಡಿಯಲು ಹೋದಾಗೆಲ್ಲಾ ರಕ್ಷಣಾ ಪಡೆ ಮೇಲೆಯೇ ಕಲ್ಲು ತೂರಾಟಗಳು ನಡೆದಿವೆ. ಈ ಮೂಲಕ ಈ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ತಮ್ಮ ಪರೋಕ್ಷ ಬೆಂಬಲವನ್ನು ಅಲ್ಲಿನ ಜನ ದಾಖಲಿಸುತ್ತಾ ಬಂದಿದ್ದಾರೆ.

ಕಲ್ಲು ತೂರುವ ಕಾಶ್ಮೀರಿಗಳ ಕೈಗೆ ಬಂದೂಕು ಸಿಗುವ ಮುನ್ನ ದಿಲ್ಲಿ ಆಡಳಿತ ಎಚ್ಚೆತ್ತುಕೊಳ್ಳಲಿ

ಹದಿಹರೆಯದ ಬಿಸಿ ರಕ್ತದ ಯುವಕರು ಕಾಶ್ಮೀರದ ಪ್ರತ್ಯೇಕತಾವಾದಕ್ಕೆ ಬಲಿಯಾಗಲು ಸಿದ್ದವಾದಂತೆ ಕಾಣಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. “ಅದೃಷ್ಟಾವಶಾತ್ ಕಾಶ್ಮೀರ ಯುವಕರ ಕೈಯಲ್ಲಿ ಕಲ್ಲಿದೆ. ಆಕ್ರೋಶದಿಂದ ಕಲ್ಲು ತೂರುತ್ತಿದ್ದಾರೆಇದೇ ಯುವಕರ ಕೈಗೆ ಶಸ್ತ್ರಾಸ್ತ್ರಗಳು ಸಿಕ್ಕರೆ ಅವರು ಅದನ್ನು ಬಳಸದೆ ಬಿಡಲಾರರು. ಈ ಶಸ್ತ್ರಾಸ್ತ್ರಗಳು ಅಲ್ಲೇ ಗಡಿಯಾಚೆಗಿವೆ,” ಎಂದು ಅಪಾಯದ ಮುನ್ಸೂಚನೆ ನೀಡುತ್ತಾರೆ ಪತ್ರಕರ್ತ ಪ್ರೇಮ್ ಶಂಕರ್ ಝಾ.

ಗಡಿಯಾಚೆಗಿನ ಶಸ್ತ್ರಾಸ್ತ್ರಗಳು ಯುವಕರ ಕೈ ತಲುಪುವ ಮುನ್ನ ದೆಹಲಿ ಆಡಳಿತ ಎಚ್ಚೆತ್ತುಕೊಳ್ಳಲೇಬೇಕಾಗಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕೊನೆಯದಾಗಿ..:

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾಪ್ರಭುತ್ವ' ಎಂದು ಹೇಳಿದವರು ಅಬ್ರಹಾಂ ಲಿಂಕನ್ಇದೇ ಪ್ರಜಾಪ್ರಭುತ್ವದ ಹೆಸರಿನಲ್ಲಿಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಭಾನುವಾರ ನಡೆದ ಉಪಚುನಾವಣೆಯಲ್ಲಿ ಚಲಾವಣೆಯಾಗಿದ್ದು ಕೇವಲ ಶೇಕಡಾ 7.14 ಮತಗಳು ಮಾತ್ರ. ಇಲ್ಲಿ ಗೆದ್ದವರನ್ನು ಜನಪ್ರತಿನಿಧಿಗಳು ಎಂದು ಎಷ್ಟರಮಟ್ಟಿಗೆ ಕರೆಯಬಹುದು? ಶೇಕಡಾ97 ಜನ ಮತದಾನವನ್ನೇ ತಿರಸ್ಕರಿಸಿರುವಾಗ ಇದು ಪ್ರಜಾಪ್ರಭುತ್ವ ಹೇಗಾಗುತ್ತದೆ. ಹೀಗೆ ಶ್ರೀನಗರದ ಮತದಾನ ಏಕಕಾಲಕ್ಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ; ಆತಂಕಗಳನ್ನು ತೆರೆದಿಟ್ಟಿದೆ;ಜತೆಗೆ ಎಚ್ಚರಿಕೆಯ ಸಂದೇಶವನ್ನು ತಲುಪಿಸಬೇಕಾದವರಿಗೆ ತಲುಪಿಸಿದೆ. ಆದರೆ ಈ ಸಂದೇಶಗಳನ್ನು ಅರ್ಥಮಾಡಿಕೊಳ್ಳುವ ಸಂಯಮ ಆಳುವ ಸರಕಾರಕ್ಕಿದೆಯಾ ಎಂಬುದೇ ಯಕ್ಷ ಪ್ರಶ್ನೆ

ಕಲ್ಲು ತೂರುವ ಯುವಕರನ್ನು ಸೇನೆ ಹೊಡೆದು ಹಾಕಿದರೆ ಅದು ಶೌರ್ಯ ಪ್ರದರ್ಶನ ಎಂಬ ಬೊಬ್ಬಿರಿಯುವ ಹಾಸ್ಯಾಸ್ಪದ ವಿಚಾರಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಸದ್ಯದ ಶ್ರೀನಗರ ಬೆಳವಣಿಗೆ ಅಪಾಯದ ಮುನ್ಸೂಚನೆಯಾಗಿದೆ.