‘ರಾಜಭವನ ಕರ್ಮಕಾಂಡ’: ಗುಜರಾತಿ ಭ್ರಷ್ಟ ಅಧಿಕಾರಿಗೆ ಮಣೆ ಹಾಕಿದ ವಾಜೂಬಾಯಿ ವಾಲಾ
COVER STORY

‘ರಾಜಭವನ ಕರ್ಮಕಾಂಡ’: ಗುಜರಾತಿ ಭ್ರಷ್ಟ ಅಧಿಕಾರಿಗೆ ಮಣೆ ಹಾಕಿದ ವಾಜೂಬಾಯಿ ವಾಲಾ

ಕರ್ನಾಟಕದ ರಾಜಭವನದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈತನ ಹಿನ್ನೆಲೆಯನ್ನು ಹುಡುಕಿಕೊಂಡು ಹೋದರೆ, ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡಿರುವುದು ಬೆಳಕಿಗೆ ಬಂದಿದೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ, ಸಿಬಿಐ ತನಿಖೆಯಲ್ಲಿ ಕ್ರಮಕ್ಕೆ ಶಿಫಾರಸುಗೊಂಡಿರುವ ಅಧಿಕಾರಿಯೊಬ್ಬರಿಗೆ ರಾಜ್ಯಪಾಲ ವಾಜೂಬಾಯಿ ವಾಲಾ ಮಣೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಡಾ. ಅಜಿತ್ ಸಿಂಗ್ ರಾಣಾ ಎಂಬ ಗುಜರಾತ್ ಮೂಲದ ಅಧಿಕಾರಿಯನ್ನು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದ ರಾಜಭವನದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈತನ ಹಿನ್ನೆಲೆಯನ್ನು ಹುಡುಕಿಕೊಂಡು ಹೋದರೆ, ಹಿಂದೆ ಸೇವೆ ಸಲ್ಲಿಸುತ್ತಿದ್ದ 'ರಾಷ್ಟ್ರೀಯ ಶಿಕ್ಷಕರ ಶೈಕ್ಷಣಿಕ ಪರಿಷತ್' (ಎನ್‌ಸಿಟಿಇ)ಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡಿರುವುದು ಬೆಳಕಿಗೆ ಬಂದಿದೆ.

ಮೇಲಾಗಿ, ಸಿಬಿಐ ತನಿಖೆಯೂ ನಡೆದಿದ್ದು, ಕ್ರಮ ಕೈಗೊಳ್ಳುವಂತೆ ತನಿಖಾ ಸಂಸ್ಥೆ ರಾಣಾ ವಿರುದ್ಧ ವರದಿಯನ್ನು ನೀಡಿದೆ. ಹೀಗಿರುವಾಗಲೇ, ರಾಜ್ಯಪಾಲ ವಾಜೂಬಾಯಿ ವಾಲಾ ಅಧಿಕಾರಿ ರಾಣಾಗೆ ಕರ್ನಾಟಕದ ರಾಜಭವನದಲ್ಲಿ 'ಆಶ್ರಯ' ನೀಡಿದ್ದಲ್ಲದೆ, ಉನ್ನತ ಹುದ್ದೆಯನ್ನು ನೀಡುವ ಮೂಲಕ 'ಸ್ವಜನ ಪಕ್ಷಪಾತ'ವನ್ನು ಮರೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ನಡೆ ಇದು ಎಂದು ದೂರುಗಳು ಕೇಳಿಬಂದಿವೆ.

ಏನಿದು ಪ್ರಕರಣ?:

ಅಜಿತ್‌ ಸಿಂಗ್‌ ರಾಣಾ ಜೈಪುರದಲ್ಲಿರುವ 'ಎನ್‌ಸಿಟಿಇ'ನಲ್ಲಿ 2007- 08ರಲ್ಲಿ ಪ್ರಾದೇಶಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಡಾ. ಎಚ್. ಎಸ್. ಕಾಂತಾಲಯ್ಯ ಎಂಬುವವರಿಗೆ ಸೇರಿದ ಆಧಿನಾಥ್ ಶಿಕ್ಷಾ ಸಂಸ್ಥಾನ (ಬಿಎಡ್‌ ಕಾಲೇಜು)ಕ್ಕೆ 2007-08ರಲ್ಲಿ ಅನುಮತಿ ನೀಡುವ ವಿಚಾರದಲ್ಲಿ ಗುರುತರ ಆರೋಪವನ್ನು ಹೊತ್ತುಕೊಂಡಿದ್ದರು. ಯಾವುದೇ ಕಾಲೇಜಿಗೆ ಅನುಮತಿ ನೀಡಬೇಕು ಎಂದರೆ ಕಾಲೇಜಿನ ಕಟ್ಟಡವು ಕನಿಷ್ಟ 1500 ಚದರ ಮೀಟರ್ ಪ್ರದೇಶದಲ್ಲಿ ಇರಬೇಕು. ಒಟ್ಟು 2500 ಚದರ ಮೀಟರ್ ಇರಬೇಕು ಎಂಬ ನಿಯಮವನ್ನು ಎನ್‌ಸಿಟಿಇ ಹಾಕಿದೆ. ಆದರೆ ಸದರಿ ಕಾಲೇಜು ತನ್ನ ಬಳಿ ಇರುವ ಭೂಮಿ ವಿಚಾರದಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿತ್ತು.

ಇದರ ಜತೆಗೆ, ಎನ್‌ಸಿಟಿಇ ಕಡೆಯಿಂದ ಪರೀಕ್ಷಣೆ ನಡೆಸಿದ ವರದಿಯಲ್ಲಿಯೂ ಲೋಪಗಳಾಗಿದ್ದವು. ಮರು- ಪರಿವೀಕ್ಷಣೆಗೆ ಆದೇಶ ನೀಡಿದ ಪ್ರತಿಯನ್ನು ತಿದ್ದಿದ ಗುರುತರದ ಆರೋಪ ರಾಣಾ ಕಡೆಯಿಂದ ನಡೆದಿತ್ತು. ಈ ಮೂಲಕ ಅನರ್ಹ ಕಾಲೇಜಿಗೆ ಅನುಮತಿ ಸಿಗುವ ಹಾಗೆ ನೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಬಿಐ ಅಜಿತ್‌ ಸಿಂಗ್ ರಾಣಾ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿತ್ತು.

ಇದು ಸಿಬಿಐ ನೀಡಿದ ವರದಿಯ ಮೊದಲ ಪುಟ. 
ಇದು ಸಿಬಿಐ ನೀಡಿದ ವರದಿಯ ಮೊದಲ ಪುಟ. 

ಅಷ್ಟೊತ್ತಿಗಾಗಲೇ ರಾಣಾ ಅಹಮದಾಬಾದ್‌ನ ಸಬರ್ಮತಿಯಲ್ಲಿರುವ ಆರ್‌ಬಿ ಸಾಗರ್ ಕಾಲೇಜ್ ಆಫ್ ಎಜುಕೇಶನ್‌ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಸ್ಥಳಾಂತರಗೊಂಡಿದ್ದರು. ಸರಕಾರ ರಾಣಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಐ ಶಿಫಾರಸ್ಸುಗಳನ್ನು ಉಲ್ಲೇಖಿಸಿ ಕಾಲೇಜಿಗೆ ಪತ್ರವನ್ನು ಬರೆದಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸೆ. 2015ರಲ್ಲಿ ರಾಣಾಗೆ ನೋಟಿಸ್ ನೀಡಿದ್ದಾಗಿ ಎನ್‌ಸಿಟಿಇಗೆ ಪತ್ರವನ್ನು ಬರೆದಿತ್ತು. ಇದಾದ ಐದು ದಿನಗಳಿಗೆ ಮತ್ತೆ ಕಾಲೇಜಿನ ಕಡೆಯಿಂದ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳನ್ನು ನೀಡುವಂತೆ ಪತ್ರ ಬರೆಯಲಾಯಿತು. .

ಇದಾಗಿ ಒಂದೂವರೆ ವರ್ಷಗಳ ನಂತರ ಕಳೆದ ಡಿಸೆಂಬರ್ 3ರಂದು ಮತ್ತೆ ಎನ್‌ಸಿಟಿಇಗೆ ಪತ್ರ ಬರೆದ ಕಾಲೇಜು ಆಡಳಿತ ಮಂಡಳಿ, ಸದರಿ ಪ್ರಕರಣದಲ್ಲಿ ರಾಣಾಗೆ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಲಿಖಿತ ಉತ್ತರವನ್ನು ಬರೆದಿದ್ದಾರೆ. ಆದರೆ ಅದು ಸಮಾಧಾನಕರವಾಗಿಲ್ಲ. ಹೀಗಾಗಿ ಕ್ರಮಕ್ಕೆ ಮಾರ್ಗಸೂಚಿಗಳನ್ನು ನೀಡುವಂತೆ ಕೋರಿತ್ತು.

ಎನ್‌ಸಿಟಿಇ ಬರೆದ ಪತ್ರ. 
ಎನ್‌ಸಿಟಿಇ ಬರೆದ ಪತ್ರ. 

ವಿಶೇಷ ಅಂದರೆ, ಇಷ್ಟೊತ್ತಿಗಾಗಲೇ ರಾಣಾ ಕರ್ನಾಟಕ ರಾಜಭವನದಲ್ಲಿ ವಿರಾಜಮಾನರಾಗಿದ್ದರು. ರಾಜ್ಯಪಾಲ ವಾಜೂಬಾಯಿ ವಾಲಾ ಅವರ ಆಯಕಟ್ಟಿನ ಜಾಗದಲ್ಲಿ ಬಂದು ಕುಳಿತಾಗಿತ್ತು.

ರಾಜಭವನದಲ್ಲಿ ಮಣೆ:

ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಷ್ಟೂ ದಾಖಲೆಗಳನ್ನು ಮೈಸೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಡಾ. ಶೇಖರ್ ಎಸ್ ಅಯ್ಯರ್ ಪಡೆದುಕೊಂಡಿದ್ದಾರೆ. ಮಂದಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಅವರು ಸಲ್ಲಿಸಲಿದ್ದಾರೆ.

"ಅಜಿತ್ ಸಿಂಗ್ ರಾಣಾ ಅವರನ್ನು 2016ರ ಆರಂಭದಲ್ಲಿಯೇ ಗುಜರಾತಿನಿಂದ ಕರ್ನಾಟಕ ರಾಜಭವನಕ್ಕೆ ಕರೆಸಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಯಾವುದೇ ಸರಕಾರಿ ಆದೇಶಗಳು ಇರಲಿಲ್ಲ. ಆದರೂ ರಾಣಾ ಕೆಲಸ ಆರಂಭಿಸಿದ್ದರು. ನಂತರ ಅವರನ್ನು ಹೆಚ್ಚುವರಿ ಕಾರ್ಯದರ್ಶಿಯಾಗಿ ರಾಜ್ಯಪಾಲರು ನೇಮಕಾತಿ ಮಾಡಲಾಯಿತು,'' ಎನ್ನುತ್ತಾರೆ ಅಯ್ಯರ್.

ಒಂದು ಕಡೆ ಪ್ರಧಾನಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ ಮುಕ್ತ ಆಡಳಿತದ ಘೋಷಣೆಗಳನ್ನು ಮೊಳಗಿಸುತ್ತಿದೆ. ಹೀಗಿರುವಾಗಲೇ ಅವರ ಪಕ್ಷದಿಂದ ನೇಮಕಗೊಂಡ ರಾಜ್ಯಪಾಲ ವಾಜೂಬಾಯಿ ವಾಲಾ ಅವರ ಕಚೇರಿಗೆ ಭ್ರಷ್ಟಾಚಾರ ಆರೋಪ ಹೊತ್ತವರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.

ಈ ಹಿಂದೆ, ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ವಿರೋಧಗಳ ಆಚೆಗೂ ಸರಕಾರ ಶಾಮ್‌ ಭಟ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಇದಕ್ಕೆ ವಾಜೂಬಾಯಿ ವಾಲಾ ಅನುಮೋದನೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ವಾಲಾ ಅವರ ಕಚೇರಿಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ರಾಣಾ ಅವರ ನೇಮಕಾತಿ ನಡೆದಿದೆ. ಇದನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ. ಇದು ರಾಜ್ಯ ಸರಕಾರ ಮತ್ತು ರಾಜಭವನಗಳ ನಡುವೆ ನಡೆಯುವ 'ಅನುಸಂಧಾನ'ಗಳು ಹೇಗಿರುತ್ತವೆ ಎಂಬುದನ್ನು ಸಾರಿ ಹೇಳುತ್ತಿದೆ.