samachara
www.samachara.com
‘ಗೋಕರ್ಣ ಹೈಡ್ರಾಮ’: ರಾಮಚಂದ್ರಾಪುರ ಮಠದ ವಕ್ತಾರಿಕೆ ಆರಂಭಿಸಿದವರು; ಮತ್ತವರ ‘ಅರ್ಧ ಸತ್ಯ’ಗಳು!
COVER STORY

‘ಗೋಕರ್ಣ ಹೈಡ್ರಾಮ’: ರಾಮಚಂದ್ರಾಪುರ ಮಠದ ವಕ್ತಾರಿಕೆ ಆರಂಭಿಸಿದವರು; ಮತ್ತವರ ‘ಅರ್ಧ ಸತ್ಯ’ಗಳು!

‘ಲಾಜಿಕಲ್’ ಆದ ಅಂತಿಮ ತೀರ್ಪನ್ನು ನೀಡುವ ದುಸ್ಸಾಹಸ ನಡೆದಿದ್ದು ಇಡೀ ಪ್ರಹಸನ ಒಟ್ಟು ಹೋರಣ. ನಿರೀಕ್ಷೆಯಂತೆಯೇ ಶುಕ್ರವಾರ ಕೆಲವು ದಿನ ಪತ್ರಿಕೆಗಳು ಮಠದ ಪರವಾಗಿ ಬ್ಯಾಟಿಂಗ್ ಮಾಡಲು ಅಖಾಡಕ್ಕೆ ಇಳಿದಿರುವುದು ಪ್ರಹಸನದ ಮುಂದುವರಿದ ಭಾಗ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಘವೇಶ್ವರ ಸ್ವಾಮಿಯ ರಾಮಚಂದ್ರಾಪುರ ಮಠದಿಂದ ಸರಕಾರ ಮರಳಿ ವಶಕ್ಕೆ ಪಡೆಯಲಿದೆ ಎಂಬ ವಿಚಾರದಲ್ಲಿ ಗುರುವಾರ 'ಹೈ ಡ್ರಾಮಾ'ವೊಂದು ನಡೆಯಿತು.

'ಸುವರ್ಣ ನ್ಯೂಸ್'ನಲ್ಲಿ ಕಾವೇರಿದ ಚರ್ಚೆಗೆ ಅದು ನಾಂದಿ ಹಾಡಿತು. ವಾಸ್ತವದಲ್ಲಿ ಏನೂ ಬೆಳವಣಿಗೆ ಕಾಣದ ಸುದ್ದಿಯೊಂದಕ್ಕೆ ರೆಕ್ಕೆಪುಕ್ಕಗಳನ್ನು ಬಿಡಿಸಿ, ರಾಜ್ಯಕ್ಕೆ ಮತ್ತೊಂದು ಮಹಾ ಕಂಟಕ ನಡೆದು ಹೋಗಲಿದೆ ಎಂದು ಬಿಂಬಿಸಿ, ಅಷ್ಟೆ ವೇಗವಾಗಿ ಅದಕ್ಕೊಂದು 'ಲಾಜಿಕಲ್' ಆದ ಅಂತಿಮ ತೀರ್ಪನ್ನು ನೀಡುವ ದುಸ್ಸಾಹಸ ನಡೆದಿದ್ದು ಇಡೀ ಪ್ರಹಸನ ಒಟ್ಟು ಹೋರಣ. ನಿರೀಕ್ಷೆಯಂತೆಯೇ ಶುಕ್ರವಾರ ಕೆಲವು ದಿನ ಪತ್ರಿಕೆಗಳು ಮಠದ ಪರವಾಗಿ ಬ್ಯಾಟಿಂಗ್ ಮಾಡಲು ಅಖಾಡಕ್ಕೆ ಇಳಿದಿರುವುದು ಪ್ರಹಸನದ ಮುಂದುವರಿದ ಭಾಗ.

ಆಡಳಿತಾಧಿಕಾರಿ ನೇಮಕ:

ಕಳೆದ ತಿಂಗಳು, ಸೆಪ್ಟೆಂಬರ್ 14ರಂದು ಹೈಕೋರ್ಟಿನಲ್ಲಿ ವಿಚಾರಣೆಯೊಂದು ನಡೆದಿತ್ತು. ಇದರಲ್ಲಿ ಹೈಕೋರ್ಟ್ ‘ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸಿ ಶ್ರೀಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂಬ ಮನವಿಯ ವಿಚಾರಣೆ ಯಾವ ಹಂತದಲ್ಲಿದೆ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.

ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ, ಎದುರ್ಕುಳ ಈಶ್ವರ ಭಟ್‌ ಸೇರಿದಂತೆ ಆರು ಜನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಪ್ರಶ್ನೆ ಮಾಡಿತ್ತು. ಇವರೆಲ್ಲಾ ಮಠದಲ್ಲಿ ಅಕ್ರಮ ನಡೆದಿದೆ, ಹಣ ದುರುಪಯೋಗವಾಗಿದೆ ಎಂದು ದೂರು ಸಲ್ಲಿಸಿದ್ದರು.

ವಿಚಾರಣೆ ವೇಳೆ ಸರ್ಕಾರಿ ವಕೀಲ ವೆಂಕಟೇಶ್‌ ಎಚ್‌. ದೊಡ್ಡೇರಿ ಅವರು, ‘ಈಗಾಗಲೇ ಹೈಕೋರ್ಟ್‌ ನಿರ್ದೇಶನದ ಅನುಸಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನವಿಯ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್‌ ನೀಡಲಾಗಿದ್ದು, ಎರಡು ಬಾರಿ ವಿಚಾರಣೆ ನಡೆಸಲಾಗಿದೆ’ ಎಂದು ವಿವರಿಸಿದರು. ಇದರ ಬಗ್ಗೆ ಮಾಹಿತಿ ನೀಡಲು ನ್ಯಾಯಪೀಠ ನಾಲ್ಕು ವಾರಗಳ ಗಡುವು ನೀಡಿ ವಿಚಾರಣೆ ಮುಂದೂಡಿತ್ತು. ಇದನ್ನು 'ಪ್ರಜಾವಾಣಿ' ವರದಿ ಮಾಡಿತ್ತು.

ಇದಾದ ಬಳಿಕ, “ದೇವಾಲಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ತಮ್ಮಿಂದ ಹಿಂಪಡೆಯುವ ತೀರ್ಮಾನ ತೆಗೆದುಕೊಳ್ಳಬಾರದು,” ಎಂದು ಸೆಪ್ಟೆಂಬರ್ 24ರಂದೇ ರಾಘವೇಶ್ವರ ಆಗ್ರಹಿಸಿದ್ದರು. ಸರಕಾರವೇನಾದರೂ ಈ ನಿರ್ಧಾರ ತೆಗೆದುಕೊಂಡರೆ ಬೀದಿಗಿಳಿಯುವ ಬೆದರಿಕೆಯನ್ನೂ ಒಂದಷ್ಟು ಮಠಾಧಿಪತಿಗಳು ಹಾಕಿದ್ದರು.

ಹೀಗೆ ಆಡಳಿತಾಧಿಕಾರಿ ನೇಮಿಸುತ್ತಾರಂತೆ ಎಂಬ ವಿಚಾರ ಮುನ್ನಲೆಗೆ ಬಂದಿತ್ತು.

ವಿವಾದದ ಮೂಲ:

ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು, ಆಡಳಿತ ಮಂಡಳಿ ನಡೆಸಿಕೊಂಡು ಬರುತ್ತಿತ್ತು. ಆದರೆ ಈ ಟ್ರಸ್ಟಿನಲ್ಲಿದ್ದ 5ವರಲ್ಲಿ ನಾಲ್ವರು ಕಾಲಾನಂತರ ತೀರಿಕೊಂಡರು. ಕೊನೆಗೆ ಪರಂಪರಾಗತವಾಗಿ ದೇವಾಲಯದ ಆಡಳಿತ ನೋಡಿಕೊಂಡು ಬಂದ ಶ್ರೀ ವಿ.ಡಿ ದೀಕ್ಷಿತರು ಮಾತ್ರ ಉಳಿದುಕೊಂಡಿದ್ದರು. “ಇವರಿರುವಾಗಲೇ ಸ್ವಾಮಿಗೆ (ರಾಘವೇಶ್ವರ್ ಭಾರತಿ ಸ್ವಾಮಿ) ದೇವಾಲಯದ ಆಡಳಿತದ ಮೇಲೆ ಕಣ್ಣಿತ್ತು,” ಎನ್ನುತ್ತಾರೆ ಪರಂಪರಾಗತ ದೇವಸ್ಥಾನದ ಅರ್ಚಕ ಮನೆತನಕ್ಕೆ ಸೇರಿದ ಶೇಷಾನಂದ್ ಅಡಿ. ಮುಂದೆ ದೀಕ್ಷಿತರು ತೀರಿಕೊಂಡಾಗ ದೇವಾಲಯ ಅನಾಥವಾಯಿತು. ಹೀಗಿದ್ದೂ ಅಲ್ಲಿನ ಜನರ ಒಟ್ಟುಗೂಡುವಿಕೆಯಲ್ಲಿ ಮೂರು ನಾಲ್ಕು ವರ್ಷಗಳ ಕಾಲ ದೇವಾಲಯ ಆಡಳಿತ ಸಾಂಗವಾಗಿಯೇ ನಡೆಯಿತು.

“ಕೊನೆಗೊಂದು ದಿನ ಇದೇ ರಾಘವೇಶ್ವರ ಗೋಕರ್ಣದ ಆಡಳಿತ ನೋಡಿಕೊಳ್ಳುವುದಾಗಿ ಸರಕಾರಕ್ಕೆ ಸರಣಿ ಅರ್ಜಿ ಹಾಕಿದರು. ಆರಂಭದಲ್ಲಿ ದೇವಸ್ಥಾನ ಮಂಜೂರಾಗಲಿಲ್ಲ. ಕೊನೆಗೆ 2008ರಲ್ಲಿ ಯಡಿಯೂರಪ್ಪನವರು ಡಿನೋಟಿಫೈ ಮಾಡಿಕೊಟ್ಟರು,” ಎನ್ನುತ್ತಾರೆ ಶೇಷಾನಂದ್ ಅಡಿ.

ಅಲ್ಲಿಂದ ಸಮಸ್ಯೆ ಆರಂಭವಾಯಿತು. ಪರಂಪರಾಗತವಾಗಿ ಅರ್ಚಕರಾಗಿದ್ದವರನ್ನು ರಾಘವೇಶ್ವರ ಹೊರಗಟ್ಟಿದರು. ಮಠ ಮತ್ತು ಮಠದ ವಿರುದ್ಧ ನಿಂತವರ ನಡುವೆ ಸಮರೋಪಾದಿಯಲ್ಲಿ ದೂರು ಪ್ರತಿದೂರುಗಳು ದಾಖಲಾಗತೊಡಗಿದವು. ಒಂದಷ್ಟು ಜನ ಕೋರ್ಟ್ ಮೆಟ್ಟಲೇರಿದರು. ಇದರ ವಿಚಾರಣೆಗಳು ಇನ್ನೂ ನಡೆಯುತ್ತಿವೆ.

ಇವುಗಳ ಪೈಕಿಒಂದು ಪ್ರಕರಣದಲ್ಲಿ, ಇಡೀ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇದರ ಬಿಸಿ ಮಠದ ಬುಡಕ್ಕೆ ತಟ್ಟಲು ಶುರುವಾಗಿದೆ.

ಸರಕಾರ ಮಟ್ಟದಲ್ಲಿ:

ಮುಖ್ಯಕಾರ್ಯದರ್ಶಿ ಈ ಪ್ರಕರಣದ ವಿಚಾರಣೆಯನ್ನಷ್ಟೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ಅಂತಿಮ ತೀರ್ಮಾನಗಳೂ ಆಗಿಲ್ಲ. ‘ಸಮಾಚಾರ’ದ ಜೊತೆ ಮಾತನಾಡಿದ ಮುಜುರಾಯಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, “ಸರಕಾರದ ಬಳಿ ಈ ಪ್ರಸ್ತಾವನೆ (ಆಡಳಿತಾಧಿಕಾರಿ ನೇಮಕ) ಇಲ್ಲ. ಒಂದಷ್ಟು ಜನ ಕೋರ್ಟಿಗೆ ಹೋಗಿದ್ದಾರೆ. ನನಗೂ ಇದರ ಬಗ್ಗೆ ಮಾಹಿತಿ ಇಲ್ಲ. ಕೋರ್ಟ್ ಏನು ಸ್ಟ್ಯಾಂಡ್ ತೆಗೆದುಕೊಳ್ಳುತ್ತದೆ ನೋಡಬೇಕು. ಕೋರ್ಟ್ ಹೇಳಿದರೆ ಸರಕಾರ ವಿಚಾರ ಮಾಡಬೇಕಾಗುತ್ತದೆ. ಇದೊಂದು ಸೂಕ್ಷ್ಮ ವಿಚಾರ,” ಎಂದರು.

ವಕ್ತಾರಿಕೆ ಇಳಿದರು:

ಆಡಳಿತಾಧಿಕಾರಿ ನೇಮಕದ ಸುತ್ತ ಗುರುವಾರ ಯಾವುದೇ ಬೆಳವಣಿಗೆ ನಡೆಯದಿದ್ದಾಗೂ, 'ಸುವರ್ಣ ನ್ಯೂಸ್' ತೀರಾ ತುರ್ತು ಅಗತ್ಯ ಎಂಬಂತೆ ಈ ಸುದ್ದಿಯನ್ನು ಕೈಗೆತ್ತಿಕೊಂಡಿದ್ದು ದಿನದ ವಿಶೇಷವಾಗಿತ್ತು. ಬೆಳಿಗ್ಗೆಯಿಂದ SMS ಪೋಲ್ ನಡೆಸಿದ ವಾಹಿನಿ, ಸಂಜೆ ವೇಳೆಗೆ ಈ ವಿಚಾರದಲ್ಲಿ ಪ್ಯಾನೆಲ್  ಚರ್ಚೆಯನ್ನೂ ಕೈಗೆತ್ತಿಕೊಂಡಿತು.

‘ಸರಕಾರಕ್ಕೆ ಬೇಕಂತೆ ಗೋಕರ್ಣ’, ‘ದೇಗುಲಗಳ ಮೇಲೆ ಸರಕಾರದ ಕಣ್ಣು’, ‘ಗೋಕರ್ಣದ ಗುಡಿ ವಶಕ್ಕೆ ತೆಗೆದುಕೊಳ್ಳುತ್ತಾರಂತೆ’, ‘ಧೈರ್ಯ ಇದ್ರೆ ಚರ್ಚು-ಮಸೀದಿ ಮುಟ್ಟಲಿ’ ಎಂಬ ಸಾಲುಗಳು ಚರ್ಚೆಯ ತುಂಬಾ ಮಿಂಚುತ್ತಿದ್ದವು.

ಈ ಮೂಲಕ ಒಂದು ಮಠದ ಮೇಲಿನ ದೂರನ್ನು ‘ದೇಗುಲಗಳು’ ಎಂದು ಚಾನಲ್ ಜನರಲೈಸ್ ಮಾಡಿತು. 'ಧೈರ್ಯ ಇದ್ದರೆ ಚರ್ಚು ಮಸೀದಿ ಮುಟ್ಟಲಿ' ಎಂದು ಅದಕ್ಕೊಂದು ಧಾರ್ಮಿಕ ವಿಷ ಲೇಪ ಹಚ್ಚುವ ಕೆಲಸ ಮಾಡಿತು. ಇದಕ್ಕೆಂದೇ ಚರ್ಚೆಯಲ್ಲಿ ಪ್ರಮೋದ್ ಮುತಾಲಿಕ್, ಇನ್ನೊಬ್ಬರು ಸ್ವಾಮೀಜಿಯನ್ನು, ಸುದ್ದಿ ಮತ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ತಂದು ಕೂರಿಸಿಕೊಂಡಿದ್ದರು. ಅವರ ಬಾಯಲ್ಲಿ ರಾಘವೇಶ್ವರ ಸ್ವಾಮಿ ಮತ್ತು ರಾಮಚಂದ್ರಾಪುರ ಮಠದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ‘ಹಿಂದೂ ಧರ್ಮದ ಮೇಲಿನ ದಾಳಿ’ ಎಂದು ಹೇಳುವ ಪ್ರಯತ್ನ ನಡೆಯಿತು.

ಸರಕಾರಕ್ಕೆ ಆಸ್ಪತ್ರೆ ನಡೆಸಲಾಗುತ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದನ್ನೇ ಕೈಗೆತ್ತಿಕೊಂಡರು ನಿರೂಪಕ ಅಜಿತ್, ಸರಕಾರದ ಕೆಲಸ ಆಸ್ಪತ್ರೆ ನಡೆಸೋದಾ? ದೇವಸ್ಥಾನ ನಡೆಸೋದಾ? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಈ ಮೂಲಕ ತಾವು ಯಾರ 'ಪರ' ಎಂಬುದನ್ನು ವೀಕ್ಷಕರಿಗೆ ನಿಚ್ಚಳವಾಗಿಸಿದರು.

ಕೊನೆಗೆ, ಕಾರಾವಾರದಿಂದ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ವಿ ದೇಶಪಾಂಡೆ, “ಮಠ ಉತ್ತಮ ಕೆಲಸ ಮಾಡುತ್ತಿದೆ. ಸರಕಾರದ ಮುಂದೆ ಆಡಳಿತಾಧಿಕಾರಿ ನೇಮಿಸುವ ಪ್ರಸ್ತಾವನೆ ಇಲ್ಲ. ನಾನು ಸಿಎಂಗೆ ಸಲಹೆ ನೀಡುತ್ತೇನೆ,” ಎಂದು ಹೇಳಿದರು. ಅಷ್ಟಾಗುತ್ತಿದ್ದಂತೆ 'ಸುವರ್ಣ ನ್ಯೂಸ್', ಇದು ತನ್ನಿಂದಾದ 'ಇಂಪಾಕ್ಟ್' ಎಂದು ಘೋಷಿಸಿತು.

ಒಂದು ಹಂತದಲ್ಲಿ ಈ ಪ್ಯಾನಲ್ ಡಿಸ್ಕಷನಿನಲ್ಲಿ ಮಠದ ವಕ್ತಾರ ಪ್ರಸನ್ನ ಮಾವಿನಕುಳಿಯವರಿಗೆ ಏನೂ ಕೆಲಸವೇ ಇರಲಿಲ್ಲ; ಅಷ್ಟರ ಮಟ್ಟಿಗೆ ವಾಹಿನಿಯೇ ಮುಂದೆ ನಿಂತು ಮಠದ ಪರವಾಗಿ, ಸ್ವಾಮಿ ಪರವಾಗಿ ಬ್ಯಾಟಿಂಗ್ ನಡೆಸಿತು.

ಮುಂದವರಿದ ಭಾಗ:

ಇದರ ಮುಂದುವರಿದ ಭಾಗ ಶುಕ್ರವಾರ ಬೆಳಗ್ಗಿನ ದಿನ ಪತ್ರಿಕೆಗಳಲ್ಲಿ ಕಂಡು ಬಂತು. 'ವಿಶ್ವವಾಣಿ' ಮತ್ತು 'ವಿಜಯವಾಣಿ' ಪತ್ರಿಕೆಗಳು ತಮ್ಮ ರಾಜ್ಯ ಪುಟಗಳಲ್ಲಿ 'ಸರಕಾರ ಮಠದ ವಿಚಾರಕ್ಕೆ ಬರಬಾರದು' ಎಂಬರ್ಥದಲ್ಲಿ ಸುದ್ದಿಗಳನ್ನು ಪ್ರಕಟಿಸಿದವು. ಈ ಎರಡೂ ಪತ್ರಿಕೆಗಳ ಸಂಪಾದಕರು ಹವ್ಯಕ ಸಮುದಾಯದಿಂದ ಬಂದವರು. ಮೇಲಾಗಿ ಮಠದ ಜತೆಗೆ 'ಸಂಬಂಧ'ವನ್ನು ಹೊಂದಿದವರು. ಗೋಕರ್ಣ ದೇವಾಲಯವನ್ನು ಸರಕಾರ ಮರಳಿ ಪಡೆಯುವ ವಿಚಾರದಲ್ಲಿ ಹಾಗೂ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಕುರಿತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಇವು ತಮ್ಮ ನಿಲುವುಗಳೇನು ಎಂಬುದನ್ನು ವರದಿಗಳ ಮೂಲಕ ಬಯಲಿಗಿಡುತ್ತಿವೆ.

ಇಷ್ಟಕ್ಕೂ ರಾಮಚಂದ್ರಾಪುರ ಮಠಕ್ಕ ಗೋಕರ್ಣ ದೇವಾಲಯದ ಮೇಲೆ ಯಾಕೆ ಅಷ್ಟು ಪ್ರೀತಿ? ಅದರಿಂದ ಶ್ರೀ ಮಠಕ್ಕೆ ಆಗುತ್ತಿರುವ ಲಾಭಗಳಾದರೂ ಏನಿವೆ? ಅದು ಸುದ್ದಿಯ ಇನ್ನೊಂದು ಆಯಾಮ. ಆದರೆ, ಇವ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದ ಕೆಲವು ಮಾಧ್ಯಮಗಳು ಅರ್ಧ ಸತ್ಯವನ್ನು ಮಾತ್ರವೇ ಸುದ್ದಿ ಮಾಡುವ ಮೂಲಕ ಓದುಗರ ಎದುರಿಗೆ ಬೆತ್ತಲಾಗುತ್ತಿವೆ.