'ಸುಪ್ರಿಂ ಕೋರ್ಟ್ v/s ಕರ್ನಾಟಕ': ಸಾಂವಿಧಾನಿಕ ಬಿಕ್ಕಟ್ಟಿನತ್ತ ಕಾವೇರಿ ನೀರು ಹಂಚಿಕೆ ವಿವಾದ!
ಕಾವೇರಿ ವಿವಾದ

'ಸುಪ್ರಿಂ ಕೋರ್ಟ್ v/s ಕರ್ನಾಟಕ': ಸಾಂವಿಧಾನಿಕ ಬಿಕ್ಕಟ್ಟಿನತ್ತ ಕಾವೇರಿ ನೀರು ಹಂಚಿಕೆ ವಿವಾದ!

ಪಕ್ಷಭೇದವನ್ನು

ಮರೆತ ರಾಜಕೀಯ ಪಕ್ಷಗಳು, ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸದಿರಲು ಒಗ್ಗಟ್ಟಿನ ಮಂತ್ರ, ನಿರ್ವಹಣಾ ಮಂಡಳಿಗೆ ಸಹಜ ವಿರೋಧ, ನಾರಿಮನ್ ಕುರಿತು ಚರ್ಚೆ...

ಇವು ಶನಿವಾರ ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯ ಕೊನೆಯಲ್ಲಿ ಹೊರಬಿದ್ದ ತೀರ್ಮಾನಗಳು. ಈ ಬೆಳವಣಿಗೆಗಳು ದೇಶದಲ್ಲಿ ಈ ಕಾಲಘಟ್ಟದ ಸಾಂವಿಧಾನಿಕ ಬಿಕ್ಕಟ್ಟೊಂದು ಸೃಷ್ಟಿಸುವ ಸಾಧ್ಯತೆಗಳನ್ನು ಮುಂದಿಟ್ಟಿವೆ.

ಶುಕ್ರವಾರ ಕೊಂಚ 'ಗರಂ' ಆಗಿಯೇ ತೀರ್ಪು ನೀಡಿದ ಸುಪ್ರಿಂ ಕೋರ್ಟ್ "ಕರ್ನಾಟಕ ಕೂಡ ದೇಶದ ಒಂದು ರಾಜ್ಯ. ಸುಪ್ರಿಂ ಕೋರ್ಟ್ ನೀಡಿದ ಆದೇಶವನ್ನು ಪಾಲಿಸಲೇಬೇಕು,'' ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಕರ್ನಾಟಕ ಸರಕಾರ ಸರ್ವ ಪಕ್ಷ ಸಭೆಯನ್ನು ನಡೆಸುವ ಮೂಲಕ ನೀರು ಹರಿಸದಿರುವ ಕುರಿತು ಪರೋಕ್ಷವಾಗಿ ತೀರ್ಮಾನವನ್ನು ತೆಗೆದುಕೊಂಡಿದೆ. "ಹೀಗೊಂದು ಪರಿಸ್ಥಿತಿ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಈ ಹಿಂದೆ, ಕಾವೇರಿ ವಿಚಾರಗಳು ದೊಡ್ಡ ಮಟ್ಟದಲ್ಲಿ ಬಿಕ್ಕಟ್ಟನ್ನು ಸೃಷ್ಟಿದ್ದವು. ಆದರೆ, ಹೀಗೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ನೇರ ಕದನಗಳಿಗೆ ಯಾವತ್ತೂ ಎಡೆ ಮಾಡಿಕೊಟ್ಟಿರಲಿಲ್ಲ. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ತೆಗೆದುಕೊಳ್ಳಬಹುದು ಎಂಬುದನ್ನು ಕಾದು ನೋಡಬೇಕು,'' ಎನ್ನುತ್ತಾರೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು.

ಸುಪ್ರಿಂ ಕೋರ್ಟ್ ನಿಲುವು:

ದಿಲ್ಲಿ ಮೂಲದ ಕರ್ನಾಟಕದ ಹಿರಿಯ ವಕೀಲರು ಪರಿಸ್ಥಿತಿಯನ್ನು ಭಿನ್ನವಾಗಿಯೇ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಅವರು, "ಸುಪ್ರಿಂ ಕೋರ್ಟ್ ಕೂಡ ಈ ರೀತಿಯ ಪರಿಸ್ಥಿತಿಯನ್ನು ಮೊದಲ ಬಾರಿಗೆ ಎದುರಿಸುತ್ತಿದೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಧಿಕ್ಕರಿಸಿದ ಉದಾಹರಣೆಗಳು ಇತಿಹಾಸದಲ್ಲಿ ಸಿಗುವುದಿಲ್ಲ. ಅದರಲ್ಲೂ ಒಂದು ರಾಜ್ಯದ ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ನ್ಯಾಯಾಂಗದ ಆದೇಶವನ್ನು ಪಾಲಿಸದಿರಲು ತೀರ್ಮಾನ ತೆಗೆದುಕೊಳ್ಳುವುದು ಹೊಸ ಬೆಳವಣಿಗೆ. ಇದನ್ನು ಹೇಗೆ ನಿಭಾಯಿಸಬೇಕು ಎಂಬುದು ನ್ಯಾಯಾಲಯಕ್ಕೂ ತಲೆ ನೋವಾಗಿದೆ. ಹೀಗಾಗಿಯೇ, ಶುಕ್ರವಾರ ವಿಚಾರಣೆ ವೇಳೆಯಲ್ಲಿ 'ಕೊನೆಯ ಅವಕಾಶ' ಎಂದು ನ್ಯಾಯಾಲಯ ಹೇಳಿದೆ. ಇದು ಗಮನಾರ್ಹ ಬೆಳವಣಿಗೆ,'' ಎನ್ನುತ್ತಾರೆ.

"ಫಾಲಿ ನಾರಿಮನ್ ಸಂವಿಧಾನ ತಜ್ಞರು. ಅದಕ್ಕಿಂತ ಹೆಚ್ಚಾಗಿ ನ್ಯಾಯಾಲಯದ ವಯಸ್ಸಿನಷ್ಟೆಯೇ ಅವರಿಗೂ ವಯಸ್ಸಾಗಿದೆ. ಅವರು ಶುಕ್ರವಾರ ಯಾವುದೇ ವಾದ ಮಾಡದೇ ಕುಳಿತ ಬಗೆಯನ್ನು ನೋಡಿದರೆ, ದೂರಗಾಮಿ ನೆಲೆಯಲ್ಲಿ ನ್ಯಾಯಾಂಗದ ಮಿತಿಗಳನ್ನು ಜಾಹೀರು ಮಾಡುವ ತಂತ್ರವೂ ಇರಬಹುದು. ಹೀಗಂತ ಇವತ್ತು ಸುಪ್ರಿಂ ಕೋರ್ಟ್ ಆವರಣದಲ್ಲಿ ಚರ್ಚೆಗಳು ನಡೆಯುತ್ತಿವೆ,'' ಎಂದು ಅವರು ಮಾಹಿತಿ ನೀಡುತ್ತಾರೆ.

ರಾಜಕೀಯ ಕಾರಣ:

ಸದ್ಯದ ಬೆಳವಣಿಗೆಗಳನ್ನು ನೋಡಿದರೆ, ಕಳೆದ ಮೂರು ವರ್ಷಗಳ ಅಂತರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನಗೊಂಡವರೂ ಮರು ಆಲೋಚನೆ ಮಾಡುತ್ತಿದ್ದಾರೆ. "ಏನೇ ಹೇಳಿ, ನೀರು ಹರಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿರುವುದನ್ನು ಮೆಚ್ಚಬೇಕು,'' ಎಂದು ಕಂಪನಿಯ ಉದ್ಯೋಗಿಯೊಬ್ಬರು ಹೇಳುತ್ತಾರೆ. ಇದರ ಜತೆಗೆ, ಸುಪ್ರಿಂ ಕೋರ್ಟ್ ಆದೇಶವನ್ನು ಧಿಕ್ಕರಿಸಿಯೂ ಕಳೆದ 15 ದಿನಗಳ ಅಂತರಲ್ಲಿ ಯಾವುದೇ ಕ್ರಮ ಜರುಗದಂತೆ ಸಹಜ ಸ್ಥಿತಿಯನ್ನು ಕಾಪಾಡಿಕೊಂಡು ಬರುವ ಹಿಂದಿನ ತಂತ್ರಗಳ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ. ಆ. 6ರಂದು ಸುಪ್ರಿಂ ಕೋರ್ಟ್ ತೆಗೆದುಕೊಲ್ಳುವ ನಿಲುವು ಮತ್ತು ಪ್ರಕಟಿಸುವ ತೀರ್ಮಾನದತ್ತ ಕುತೂಹಲ ಮೂಡಿದೆ.

"ಒಂದು ವೇಳೆ ಕರ್ನಾಟಕದ ನಿಲುವನ್ನು ನ್ಯಾಯಾಂಗಕ್ಕೆ ಎಸಗಿದ ಅಪಚಾರ ಎಂದು ಧ್ವಿಸದಸ್ಯತ್ವ ಪೀಠ ತೀರ್ಮಾನ ತೆಗೆದುಕೊಂಡರೆ 'ಕಾವೇರಿದ ಕಣ' ಇನ್ನಷ್ಟು ರಂಗನ್ನು ಪಡೆದುಕೊಳ್ಳಲಿದೆ. ಇದರಿಂದ ಸಹಜವಾಗಿಯೇ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಲಾಭವನ್ನು ಆಡಳಿತ ಸರಕಾರ ಪಡೆದುಕೊಳ್ಳಲಿದೆ. ವಿಧಾನಸಭೆ ಚುನಾವಣೆಗೆ 2 ವರ್ಷಗಳ ಅಂತರ ಇರುವ ಈ ಸಮಯದಲ್ಲಿ ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿರುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಕಾವೇರಿಯ ಕಾವು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.