'ಕಾವೇರಿ ಕವರೇಜ್': ಸರ್ವ ಪಕ್ಷ ಸಭೆ ಆರಂಭ; ದೇವೇಗೌಡ ಉಪವಾಸ; ಬಿಜೆಪಿ ವಿರುದ್ಧ ಉಗ್ರಪ್ಪ ಆಕ್ರೋಶ
ಕಾವೇರಿ ವಿವಾದ

'ಕಾವೇರಿ ಕವರೇಜ್': ಸರ್ವ ಪಕ್ಷ ಸಭೆ ಆರಂಭ; ದೇವೇಗೌಡ ಉಪವಾಸ; ಬಿಜೆಪಿ ವಿರುದ್ಧ ಉಗ್ರಪ್ಪ ಆಕ್ರೋಶ

ಕಾವೇರಿ

ನದಿ ನೀರು ಹಂಚಿಕೆ ಸಂಬಂಧ ಸುಪ್ರಿಂ ಕೋರ್ಟ್ ನೀಡಿದ 'ಗರಂ' ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆ ಆರಂಭವಾಗಿದೆ. ಸುಪ್ರಿಂ ಕೋರ್ಟ್ ಶುಕ್ರವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದಿದೆ. ತಮಿಳುನಾಡಿಗೆ ನೀರು ಹರಿಸುವ ಹಾಗೂ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚೆ ನಡೆಸಲಿದೆ.

ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಖಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕುಮಾರ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ಮೇಲ್ಮನವಿಗೆ ನಿರ್ಧಾರ:

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಮಾರ್ಪಡಿಸುವಂತೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಯು. ಯು. ಲಲಿತ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ ಸೆ.20ರಂದು ತೀರ್ಪು ನೀಡಿ ನಾಲ್ಕು ವಾರಗಳ ಒಳಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿತ್ತು.

ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪುವನ್ನು ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಆಕ್ಷೇಪಣೆ ಸುಪ್ರೀಂಕೋರ್ಟ್‍ನ ಮೂರು ಜನರ ವಿಭಾಗೀಯ ಪೀಠದ ಮುಂದೆ ಅ.18ರಂದು ವಿಚಾರಣೆಗೆ ಬರಲಿದ್ದು, ಅದಕ್ಕೂ ಮೊದಲೇ ಇಬ್ಬರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶ ನೀಡಿರುವುದು ಸಾಧುವಲ್ಲ ಎಂಬ ಆಕ್ಷೇಪಣಾ ಅರ್ಜಿಯನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಲು ನಿರ್ಧರಿಸಿದೆ.

ದೇವೇಗೌಡ ಉಪವಾಸ:

"ಮೂರು ದಿನಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಏಕಾಏಕಿ ನೀಡಿರುವ ತೀರ್ಪು ಅಸಂವಿಧಾನಿಕವಾಗಿದ್ದು, ನ್ಯಾಯಾಂಗದ ವ್ಯಾಪ್ತಿಯನ್ನೂ ಮೀರಿದ್ದಾಗಿದೆ." ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಧಾನಸೌಧದ ಮುಂದಿನ ಮಹತ್ಮಾಗಾಂಧಿ ಪ್ರತಿಮೆ ಎದುರು ಇಂದು ಬೆಳಗ್ಗೆಯಿಂದ ಆರಂಭಿಸಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡಿದ ಕುಮಾರಸ್ವಾಮಿ, "ಸುಪ್ರೀಂಕೋರ್ಟ್‍ನ ತೀರ್ಪುಗಳು ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕೇ ಅಥವಾ ಹೊರ ಹೋಗಬೇಕೇ ಎಂಬ ಬಗ್ಗೆ ಚಿಂತನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ,'' ಎಂದರು.

ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಉಪವಾಸ ಸತ್ಯಾಗ್ರಹವನ್ನು ವಾಪಾಸು ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡರು. ಆದರೆ, ಇದಕ್ಕೆ ಒಪ್ಪದ ದೇವೇಗೌಡ ತಮ್ಮ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

ಇದೇ 18ರಂದು ಎಸ್‍ಎಲ್‍ಪಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ, ಅಲ್ಲಿಯವರೆಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯ ಹೇರದಂತೆ ಸುಪ್ರೀಂಕೋರ್ಟ್‍ಗೆ ಮನವಿ ಮಾಡುವಂತೆ ಸಾಲಿಸಿಟರ್ ಜನರಲ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ರ ಬರೆದಿದ್ದಾರೆ.

ಎಸ್‍ಎಲ್‍ಪಿ ವಿಚಾರಣೆ ಇದೇ 18ರಂದು ಇರುವುದರಿಂದ ಅಲ್ಲಿಯವರೆಗೆ ಸುಪ್ರೀಂಕೋರ್ಟ್ ನಿರ್ವಹಣಾ ಮಂಡಳಿ ಕುರಿತಂತೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದಿರಲು ಮನವಿ ಮಾಡಿ ಎಂದು ಪತ್ರದಲ್ಲಿ ಕೋರಿದ್ದಾರೆ. ಅದಕ್ಕಾಗಿ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕುವಂತೆಯೂ ಮನವಿ ಮಾಡಿದ್ದಾರೆ.

ಕೇಂದ್ರದ ವಿರುದ್ಧ ಆಕ್ರೋಶ: 

"ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಉದ್ಭವಿಸಿರುವ ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಹುನ್ನಾರ ನಡೆಸುತ್ತಿದೆ,'' ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಮಾತನ್ನೇ ಆಡದಿರುವುದು ಹಾಗೂ ಬಿಜೆಪಿಯವರು ಪ್ರಧಾನಿ ಮಧ್ಯಸ್ಥಿಕೆ ಬೇಡವೆಂದು ಹೇಳುತ್ತಿರುವುದು ನೋಡಿದರೆ ರಾಜ್ಯಕ್ಕೆ ಮರಣ ಶಾಸನ ಬರೆಯಲು ಸಿದ್ಧತೆ ನಡೆಸಿದ್ದಾರೆ ಎಂಬುದು ತಿಳಿಯುತ್ತದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾವೇರಿ ವಿಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಹೇಳಿದ್ದರು. 1995ರಲ್ಲಿ ಅಂದಿನ ವಿರೋಧಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಕಾವೇರಿ ವಿಚಾರದಲ್ಲಿ ಪ್ರಧಾನಮಂತ್ರಿಯವರು ಮುಖ್ಯಮಂತ್ರಿಗಳ ಸಭೆ ಕರೆದು ಇತ್ಯರ್ಥ ಪಡಿಸಬೇಕೆಂದು ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದರು. ಈ ಬಗ್ಗೆ ಸದನದಲ್ಲಿ ಅನುಮೋದನೆ ಸಹ ಸಿಕ್ಕಿತ್ತು. ಅದನ್ನು ದಾಖಲೆ ಸಹಿತ ಉಗ್ರಪ್ಪ ವಿವರಿಸಿದರು.