'ಗಾಯದ ಮೇಲೆ ಬರೆ': 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ 'ಗರಂ' ಆದೇಶ
ಕಾವೇರಿ ವಿವಾದ

'ಗಾಯದ ಮೇಲೆ ಬರೆ': 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ 'ಗರಂ' ಆದೇಶ

ಮತ್ತೆ

ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಶುಕ್ರವಾರ ಆದೇಶ ನೀಡಿದೆ.

ಆದೇಶ ಪಾಲಿಸದೆ ಇರುವ ರಾಜ್ಯಸರ್ಕಾರದತ್ತ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಮೂರು ದಿನಗಳೊಳಗೆ 'ನೀರು ನಿರ್ವಹಣಾ ಮಂಡಳಿ' ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು. ಯು. ಲಲಿತ್ ನ್ಯಾಯಪೀಠ ಆದೇಶ ನೀಡಿದೆ. ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್ ನಾಲ್ಕು ವಾರಗಳೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿತ್ತು.

ಸೆ.20 ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್ 27 ರವರೆಗೂ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದಿತ್ತು. ಸೆ.27ರಂದು ಮತ್ತೆ ಆದೇಶ ನೀಡಿ 3 ದಿಗಳವರೆಗೆ ಆರು ಸಾವಿರ ಕ್ಯೂಸೆಕ್‍ನಂತೆ 18 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಎರಡು ಬಾರಿ ಆದೇಶ ನೀಡಿತ್ತು. ಆದರೆ ನೀರಿನ ಕೊರತೆಯಿಂದಾಗಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ನಿರಾಕರಿಸಿತ್ತು.

ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿ ವಿಧಾನಮಂಡಲ ತುರ್ತು ಅಧಿವೇಶನ ಕರೆದು ಕಾವೇರಿ ಕೊಳ್ಳದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವುದಾಗಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ರಾಜ್ಯಸರ್ಕಾರದ ಈ ಜಾಣ ನಡೆ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಸುಪ್ರೀಂಕೋರ್ಟ್ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಶೀಘ್ರವೇ ರಚಿಸಲು ಸಾಧ್ಯವೇ ಎಂದು ಇಂದಿನ ವಿಚಾರಣೆ ವೇಳೆ ನ್ಯಾಯಾಧೀಶರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಸೆ.20ರ ಆದೇಶದ ಅನುಸಾರ ನಾಲ್ಕು ವಾರಗಳ ಕಾಲಾವಕಾಶ ಇರುವುದಾಗಿ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ನೆನಪಿಸಿದರಾದರೂ, ಅಲ್ಲಿಯವರೆಗೂ ಕಾಯದೆ ಮೂರು ದಿನಗಳೊಳಗಾಗಿ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಾಲಯದ ಆದೇಶದಂತೆ ಅಕ್ಟೋಬರ್ 4 ರೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾಗಬೇಕು. ನಾಳೆಯೊಳಗಾಗಿ ಕಾವೇರಿ ಕೊಳ್ಳದ ನಾಲ್ಕೂ ರಾಜ್ಯಗಳು ನಿರ್ವಹಣಾ ಮಂಡಳಿಯನ್ನು ಪ್ರತಿನಿಧಿಸುವ ತಮ್ಮ ಪ್ರತಿನಿಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು.

ಅ.5ರೊಳಗಾಗಿ ಕಾವೇರಿ ಕೊಳ್ಳದ ಜಲಾನಯನ ವ್ಯಾಪ್ತಿಯಲ್ಲಿನ ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿದೆ.

ನ್ಯಾಯಾಲಯ ಘನತೆಗೆ ಧಕ್ಕೆ:

ಇಂದಿನ ವಿಚಾರಣೆ ವೇಳೆ ಕರ್ನಾಟಕ ಪರ ವಕೀಲ ನಾರಿಮನ್ ಅವರ ಕೇವಲ ಟಿಪ್ಪಣಿಯನ್ನು ಪ್ರಕಟಿಸುವುದು ಹೊರತುಪಡಿಸಿ ಬೇರೆ ಯಾವುದೇ ವಾದ-ವಿವಾದಗಳಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದರು. ಆದರೆ ಈ ನಡುವೆಯೇ ನ್ಯಾಯಾಧೀಶರು ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಮತ್ತು ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದ್ದಲ್ಲದೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ನ ತೀರ್ಪನ್ನು ಪಾಲಿಸದೆ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕ ಭಾರತದಲ್ಲೇ ಇರುವ ರಾಜ್ಯಗಳಲ್ಲಿ ಒಂದು. ದೇಶದ ಎಲ್ಲಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲೇಬೇಕು. ಇದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವಿಚಾರಣೆ ಅ.6ರ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ.

ಬರಸಿಡಿಲಿನ ಆದೇಶ:

ನ್ಯಾಯಾಲಯದ ಈ ತೀರ್ಪು ರಾಜ್ಯಕ್ಕೆ ಮಹಾಲಯ ಅಮಾವಾಸ್ಯೆಯಂದು ಬರಸಿಡಿಲಿನಂತೆ ಬಂದೆರಗಿದೆ. ತನ್ನ ಆದೇಶ ಪಾಲಿಸಿಲ್ಲ ಎಂಬ ಸಿಟ್ಟಿಗೆ ಪೂರ್ವಾಗ್ರಹ ಪೀಡಿತವಾಗಿ ಪರಿಷ್ಕøತ ಆದೇಶ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಇದೇ ನ್ಯಾಯಪೀಠ ನೀಡಿದ್ದ ನಾಲ್ಕು ವಾರದ ಕಾಲಾವಕಾಶವನ್ನು ಬದಿಗಿಟ್ಟು, ಮೂರು ದಿನಗಳೊಳಗಾಗಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿರುವುದು ಕರ್ನಾಟಕದ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ ಎಂದು ಆರೋಪಗಳು ಕೇಳಿ ಬಂದಿದೆ.

ನ್ಯಾಯಾಧೀಶರು ಪ್ರತಿಷ್ಠೆಗೆ ಬಿದ್ದವರಂತೆ ಕರ್ನಾಟಕದ ಜೊತೆ ಸಂಘರ್ಷಕ್ಕಿಳಿದಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನ್ಯಾಯಾಂಗ ತನ್ನ ಮಿತಿಯಲ್ಲೇ ಕೆಲಸ ಮಾಡಬೇಕು. ಶಾಸಕಾಂಗ ಕೂಡ ತನ್ನದೇ ಪರಿಧಿಯಲ್ಲಿರಬೇಕು. ಆದರೆ ಸುಪ್ರೀಂಕೋರ್ಟ್‍ನ ಈ ತೀರ್ಪು ಹಳಿ ತಪ್ಪಿದಂತಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಆಗ್ರಹ: 

ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಮಧ್ಯ ಪ್ರವೇಶಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸೂಚಿಸುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪುಗಳು ಮತ್ತು ನಿನ್ನೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತದ ಸಭೆ ವಿಫಲ, ಕರ್ನಾಟಕ ರಾಜ್ಯ ವಿಧಾನಮಂಡಲದಲ್ಲಿ ತೆಗೆದುಕೊಂಡ ಸರ್ವಾನುಮತದ ನಿರ್ಣಯ ಮತ್ತು ಸರ್ವ ಪಕ್ಷ ಸಭೆಯ ಅಭಿಪ್ರಾಯ ಇವುಗಳೆಲ್ಲವನ್ನು ಲಗತ್ತಿಸಿ ಮನವಿ ಸಲ್ಲಿಸಿರುವ ಮುಖ್ಯಮಂತ್ರಿಯವರು ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಮುನ್ನಾ ಪ್ರಧಾನ ಮಂತ್ರಿಯವರು ಮಧ್ಯ ಪ್ರವೇಶಿಸಿ ಸೌಹಾರ್ದಯುತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಕೋರಿದ್ದಾರೆ. ರಾಜ್ಯದ ಜಲಾಶಯಗಳಲ್ಲಿ ದಾಸ್ತಾನಿರುವ ನೀರು ಕುಡಿಯುವ ಉದ್ದೇಶಕ್ಕೆ ಸಾಕಾಗಲಿದೆ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದನ್ನು ಪಾಲಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿ ಅವರ ಗಮನಕ್ಕೆ ತರಲಾಗಿದೆ.

ಎಲ್ಲದಕ್ಕೂ ಸಿದ್ದವಾಗಿ ನಿಂತಿರುವ ರಾಜ್ಯ ಸರ್ಕಾರ:

ಕುಡಿಯಲಿಕ್ಕೆ ನೀರಿಲ್ಲ ಎಂದಾಗಲೂ ಸುಪ್ರೀಂಕೋರ್ಟ್ ತಮಿಳುನಾಡಿನ ಸಾಂಬ ಬೆಳೆಗೆ ನೀರು ಬಿಡಿ ಎಂದು ಒತ್ತಡ ಏರುತ್ತಿರುವುದರಿಂದ ಕನಲಿ ಹೋಗಿರುವ ರಾಜ್ಯ ಸರ್ಕಾರ ಸೆ.20 ಮತ್ತು ಸೆ.27ರ ಎರಡು ಆದೇಶಗಳನ್ನು ಪಾಲಿಸದೆ ಏನಾಗುತ್ತೋ ಆಗಲಿ ನೋಡೇ ಬಿಡೋಣ ಎಂಬ ನಿರ್ಧಾರಕ್ಕೆ ಬಂದಿದೆ.

ವಾಸ್ತವ ಸ್ಥಿತಿ ಗತಿ ಆಧರಿಸಿ ತಮಿಳುನಾಡಿಗೆ ನೀರು ನಿಲ್ಲಿಸಿರುವ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ನ ಎಲ್ಲಾ ಅಸ್ತ್ರಗಳಿಗೂ ಎದೆಯೊಡ್ಡಿ ನಿಂತಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸದೇ ಇರುವುದರಿಂದ ಎದುರಾಗಬಹುದಾದ ಸಂಭವನೀಯ ಅಪಾಯಗಳ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ದೆಹಲಿಯಲ್ಲಿ ರಾಜ್ಯದ ಪರ ವಕೀಲ ನಾರಿಮನ್ ಅವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರ ಎಲ್ಲದಕ್ಕೂ ಸಿದ್ದವಾಗಿದೆ. ಸಂದರ್ಭ ಬಂದರೆ ರಾಜ್ಯದ ಜನರಿಗಾಗಿ ನಾನು ಜೈಲಿಗೆ ಹೋಗಲು ಸಿದ್ದ. ನೀವು ಕರ್ನಾಟಕ ವಿಧಾನಮಂಡಲದ ಸರ್ವಾನುಮತದ ನಿರ್ಣಯ ಮತ್ತು ಸರ್ವಪಕ್ಷಗಳ ಸಭೆಯಲ್ಲಿನ ಅಭಿಪ್ರಾಯಕ್ಕೆ ಪೂರಕವಾಗಿ ವಾದ ಮಾಡಿ. ಅದರ ಮೇಲ್ಪಟ್ಟು ಯಾವುದೇ ಆದೇಶ ಬಂದರೂ ಎದುರಿಸಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಕೆಆರ್‍ಎಸ್‍ಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದೇ ರೀತಿ ನೀರು ಹರಿದು ಬಂದು ಜಲಾಶಯ ತುಂಬಿದರೆ ತಮಿಳುನಾಡಿಗೆ ನೀರು ಬಿಡಲು ನಮ್ಮ ಅಭ್ಯಂತರವಿಲ್ಲ, ಆದರೆ ಕರ್ನಾಟಕ ವಿಧಾನಮಂಡಲದ ನಿರ್ಣಯವನ್ನು ಉಲ್ಲಂಘಿಸಿ ಕುಡಿಯುವ ನೀರಿಗೆ ಸಮಸ್ಯೆ ಮಾಡಿಕೊಂಡು ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯಿಲ್ಲ. ನಿನ್ನೆ ಕೇಂದ್ರ ಸಚಿವೆ ಮಾಭಾರತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ನಾವು ಇದನ್ನೆ ಪ್ರತಿಪಾದಿಸಿದ್ದೇವೆ. ಜಲಾಶಯ ಮತ್ತು ಅವುಗಳ ಅಚ್ಚುಕಟ್ಟು ಪ್ರದೇಶದಲ್ಲಿ ವಸ್ತು ಸ್ಥಿತಿ ಅಧ್ಯಯನಕ್ಕೆ ತಜ್ಞರ ತಂಡ ಕಳುಹಿಸಲಿ, ವಾಸ್ತವ ಚಿತ್ರಣ ಪಡೆದ ನಂತರ ಸುಪ್ರೀಂಕೋರ್ಟ್ ಆದೇಶ ನೀಡಿದರೆ ಅದು ಸಾಧುವಾಗುತ್ತದೆ. ವಾಸ್ತವ ಚಿತ್ರಣವನ್ನು ಬದಿಗಿಟ್ಟು ನೀರು ಹರಿಸಿ ಎಂದರೆ ಅದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಕೀಲ ನಾರಿಮನ್ ಅವರೊಂದಿಗಿನ ಚರ್ಚೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಕಾವೇರಿ ನ್ಯಾಯಾಧಿಕರಣದ ಆದೇಶವನ್ನು ಸಂಕಷ್ಟ ಸಮಯದಲ್ಲೂ ಪಾಲಿಸಬೇಕು ಎಂದು ವಾದಿಸುವುದು ಸರಿಯಲ್ಲ. ಹಾಗೇ ನೋಡಿದರೆ ಕರ್ನಾಟಕಕ್ಕೆ ತನ್ನ ಪಾಲಿನ ನೀರೇ ಈವರೆಗೂ ಪೂರ್ತಿಯಾಗಿ ಸಿಕ್ಕಿಲ್ಲ, ಇದನ್ನು ನಾವು ಯಾರ ಬಳಿ ಕೇಳುವುದು ಎಂದು ಮುಖ್ಯಮಂತ್ರಿ ಅಸಮಾಧಾನ ತೋಡಿಕೊಂಡಿದ್ದಾರೆ.