ಕೇಂದ್ರ ಕರೆದ ಸಭೆಯ ನಂತರವೇ ತಮಿಳುನಾಡಿಗೆ ನೀರು: ಸಿಎಂ ಸಿದ್ದರಾಮಯ್ಯ
ಕಾವೇರಿ ವಿವಾದ

ಕೇಂದ್ರ ಕರೆದ ಸಭೆಯ ನಂತರವೇ ತಮಿಳುನಾಡಿಗೆ ನೀರು: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಸಭೆಯ ನಂತರವೇ ತಮಿಳುನಾಡಿಗೆ ನೀರು ಹರಿಸುವ ಕುರಿತು ಆಲೋಚನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸಿತ್ತು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, "ಪ್ರಸ್ತುತ ನಮ್ಮ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಲು ಮಾತ್ರ ಎಂದು ಸೆಪ್ಟೆಂಬರ್ 23ರಂದು ಸದನದಲ್ಲಿ ನಿರ್ಣಯ ಕೈಗೊಡಿದ್ದೇವೆ. ಹೀಗಾಗಿ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡುವುದಿಲ್ಲ,'' ಎಂದರು.

ಈ ಮೂಲಕ ಸುಪ್ರಿಂ ಕೋರ್ಟ್ ಆದೇಶವನ್ನು ಪಾಲಿಸದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಹಿನ್ನೆಲೆ:

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮಂಗಳವಾರ ಸುಪ್ರಿಂ ಕೋರ್ಟ್ ನೀಡಿದ ತೀರ್ಪು ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟೊಂದನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.

ಒಂದು ತಿಂಗಳ ಅಂತರದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಇದೇ ವಿಚಾರದಲ್ಲಿ ನೀಡಿದ ಮೂರನೇ ಆದೇಶದಲ್ಲಿಯೂ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ. ಸೆ. 28, 29 ಹಾಗೂ 30 ನೇ ತಾರೀಖಿನವರೆಗೆ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ನ್ಯಾಯಾಲಯ ಹೇಳಿದೆ.

ಅದಕ್ಕೂ ಮೊದಲು ನಡೆದ ವಿಚಾರಣೆ ವೇಳೆಯಲ್ಲಿ, ನ್ಯಾಯಾಲಯ ಕರ್ನಾಟಕ ಸೆ. 23ರಂದು ವಿಶೇಷ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಪ್ರಜ್ಞಾಪೂರ್ವಕವಾಗಿಯೇ ಪಕ್ಕಕ್ಕಿಟ್ಟಿದೆ. ಈ ಮೂಲಕ ಸುಪ್ರಿಂ ಕೋರ್ಟ್ ತಮಿಳುನಾಡಿನ ಪಕ್ಷಪಾತಿ ಎಂದು ಈ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಆರೋಪಕ್ಕೆ ಇನ್ನಷ್ಟು ಇಂಬು ನೀಡಿದಂತಾಗಿದೆ.

ನ್ಯಾಯಾಲಯದಲ್ಲೇನಾಯಿತು?:

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠವು, ರಾಜ್ಯ ಸರಕಾರ ತನ್ನ ಪ್ರಜೆಗಳ ಹಿತ ಕಾಯುವುದು ಮಾತ್ರವಲ್ಲ, ಗಣತಂತ್ರ ವ್ಯವಸ್ಥೆಯಲ್ಲಿ ಇತರೆ ರಾಜ್ಯಗಳ ಬಗ್ಗೆಯೂ ಆಲೋಚನೆ ಮಾಡಬೇಕು ಎಂದು ಹೇಳಿತು. ಈ ಮೂಲಕ ರಾಜ್ಯ ಸರಕಾರಕ್ಕೆ ಕಾವೇರಿ ನೀರನ್ನು ಕುಡಿಯಲು ಮಾತ್ರವೇ ಬಳಸಬೇಕು ಎಂಬ ನಿರ್ದೇಶನ ನೀಡಿದ್ದ ಅಧಿವೇಶನದ ನಿರ್ಣಯವನ್ನು ಪಕ್ಕಕ್ಕೆ ಸರಿಸಿತು. ನ್ಯಾ. ದೀಪಕ್ ಮಿಶ್ರಾ ಹಾಗೂ ನ್ಯಾ. ಯು. ಯು. ಲಲಿತ್ ಅವರಿದ್ದ ಪೀಠವು, ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರಿಗೆ ಎರಡೂ ರಾಜ್ಯಗಳ 'ವ್ಯವಸ್ಥಾಪಕ ಮುಖ್ಯಸ್ಥ'ರನ್ನು ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮಾತುಕತೆಗೆ ಅನುವು ಮಾಡಿಕೊಡುವಂತೆ ಸೂಚಿಸಿತು. ಅದಕ್ಕೆ ಒಪ್ಪಿದ ರೋಹ್ಟಗಿ ಕೇಂದ್ರ ಸರಕಾರ 'ಇಬ್ಬರೂ ಬರಲು ಒಪ್ಪಿದರೆ' ಸಭೆಯನ್ನು ಆಯೋಜನೆ ಮಾಡುವುದಾಗಿ ತಿಳಿಸಿದರು.

ನ್ಯಾಯಾಲಯದ ವರಸೆ:

ಇದಕ್ಕಿಂತಲೂ ವಿಚಾರಣೆಯಲ್ಲಿ ಗಮನ ಸೆಳೆದದ್ದು ಸುಪ್ರಿಂ ಕೋರ್ಟ್ ನಡೆದುಕೊಂಡ ಬಗೆ. 'ಗಣತಂತ್ರ ವ್ಯವಸ್ಥೆ'ಯನ್ನು ಗಮನದಲ್ಲಿ ಇಟ್ಟುಕೊಂಡು ಶಾಂತಿಯುತವಾಗಿ ಮೂರೂ ರಾಜ್ಯಗಳು ಒಪ್ಪಂದಕ್ಕೆ ಬರಲಿ ಎಂಬ ಕಾರಣಕ್ಕೆ ಸಭೆಯನ್ನು ಆಯೋಜಿಸಲು ತಿಳಿಸಲಾಗಿದೆ. ಅದನ್ನು ಹೊರತು ಪಡಿಸಿ ಸುಪ್ರಿಂ ಕೋರ್ಟ್ಗೆ ಅಧಿಕಾರ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ನ್ಯಾಯಾಲಯ ಹೇಳಿದಾಗ, ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಗಟ್ಟಿ ಮಾತುಗಳಲ್ಲಿ ವಿರೋಧಿಸಿದರು. "ಇದು ನೇರ ಹಣಾಹಣಿ. ಕರ್ನಾಟಕ ಸಂವಿಧಾನಬದ್ಧವಾಗಿ ಜಂಟಿ ಆಧಿವೇಶನದಲ್ಲಿ ನಿರ್ಣಯ ತೆಗೆದುಕೊಂಡಿದೆ,'' ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ, "ಸರಿ, ಈಗ ಕರ್ನಾಟಕ ನ್ಯಾಯಾಲಯಕ್ಕೇ ನಿರ್ದೇಶನ ನೀಡುತ್ತಿದೆ. ಒಳ್ಳೆಯದು, ನಾವೂ ನೇರ ಹಣಾಹಣಿಗೆ ಇಳಿಯೋಣ. ಕರ್ನಾಟಕದ ವರ್ತನೆ ನೋಡಿದರೆ ಸಭೆಯ ಅಗತ್ಯವಿದೆಯೇ?" ಎಂದು ಪ್ರಶ್ನಿಸಿದರು. ಹೀಗೆ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠವು ಶಾಂತಿ ತರಲು ಪ್ರಯತ್ನ ನಡೆಸಿತು.

'ದೇವರಿಚ್ಚೆ' ಎಂದ ನಾರಿಮನ್:

ಈ ಸಮಯದಲ್ಲಿ ಕರ್ನಾಟಕ ಸರಕಾರ ನವೆಂಬರ್ ಕೊನೆಯಲ್ಲಿ ತಮಿಳುನಾಡಿಗೆ ನೀರು ಹರಿಸುವುದಾಗಿ ತಿಳಿಸಿದೆ. ಇದಕ್ಕಾಗಿ ರಾಜ್ಯ ಮಾಡಿಕೊಂಡಿರುವ ಸಿದ್ಧತೆಗಳೇನಿವೆ ಎಂದು ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ಅವರನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಾರಿಮನ್, "ದೇವರಿಚ್ಚೆ (By God's will)," ಎಂದಷ್ಟೆ ಉತ್ತರಿಸಿದರು. ಇದನ್ನು ನ್ಯಾಯಪೀಠದ ಗಮನಕ್ಕೆ ತಂದ ತಮಿಳುನಾಡು ಪರ ವಕೀಲ ನಾಫಡೆ, "ಇದು ಕರ್ನಾಟಕ ವರ್ತನೆಯನ್ನು ತೋರಿಸುತ್ತಿದೆ,'' ಎಂದರು. "ಕರ್ನಾಟಕದ ವಾದವನ್ನು ಆಲಿಸಬೇಡಿ. ಕ್ಯೂಸೆಕ್ಸ್ ವಿಚಾರ ಪಕ್ಕಕ್ಕಿರಲಿ, ಇಂತಹ ವರ್ತನೆ ನ್ಯಾಯಾಲಯದ ಘನತೆಯನ್ನು ತಗ್ಗಿಸುತ್ತದೆ,'' ಎಂದು ನಾಫಡೆ ಹೇಳಿದರು.

ಮುಂದೇನು?:

ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಸುಪ್ರಿಂ ಕೋರ್ಟ್ ಮೂರು ಪ್ರತ್ಯೇಕ ಆದೇಶಗಳನ್ನು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಿಳಿಸಿದೆ. ಎರಡನೇ ಆದೇಶ ಪಾಲನೆ ಬದಲಿಗೆ ಕರ್ನಾಟಕ ಜಂಟಿ ಅಧಿವೇಶನ ಕರೆದು 'ಕುಡಿಯುವ ನೀರನ್ನು ಉಳಿಸಿಕೊಳ್ಳುವ' ನಿರ್ಣಯವನ್ನು ತೆಗೆದುಕೊಂಡಿದೆ. ಇದಾದ ನಾಲ್ಕು ದಿನಗಳಿಗೆ ಮಂಗಳವಾರ ಸುಪ್ರಿಂ ಕೋರ್ಟ್ ಮೂರನೇ ಆದೇಶ ನೀಡಿದೆ. ಇಲ್ಲಿಯೂ ಕೂಡ 6 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಹೇಳಿದೆ. ಇದನ್ನು ರಾಜ್ಯ ಸರಕಾರ ಪಾಲನೆ ಮಾಡುತ್ತಾ? ಇಲ್ಲ, ಮತ್ತೆ ಅಧಿವೇಶನದ ಮೊರೆ ಹೋಗುತ್ತಾ? ಎಂಬ ಪ್ರಶ್ನೆ ಎದ್ದಿದೆ. ಏನೇ ಆಗಲಿ, ಮತ್ತೆ ಅಧಿವೇಶನ ಕರೆದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದರ ನಡುವೆ, ಸೆ. 30ಕ್ಕೆ ಮತ್ತೆ ನ್ಯಾಯಾಲಯ ವಿಚಾರಣೆಯ ದಿನಾಂಕವನ್ನು ನೀಡಿದೆ. ಅದಕ್ಕೂ ಮೊದಲು ನ್ಯಾಯಾಲಯದ ನಿರ್ದೇಶನದಂತೆ ಉಬಯ ರಾಜ್ಯಗಳ ಮುಖ್ಯಸ್ಥರ ಸಭೆಯನ್ನು ಸೆ. 29ರಂದು ಬೆಳಗ್ಗೆ 11. 30ಕ್ಕೆ ದಿಲ್ಲಿಯ ಶ್ರಮಶಕ್ತಿ ಭವನದಲ್ಲಿ ಕರೆಯಲಾಗಿದೆ. ಈ ಕುರಿತು ಮಂಗಳವಾರ ಸಂಜೆ ವೇಳೆಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಕಳುಹಿಸಲಾಗಿದೆ.

ಸದ್ಯ, ರಾಜ್ಯ ಸರಕಾರ ಬುಧವಾರ ಇಡುವ ಎಚ್ಚರಿಕೆಯ ನಡೆಗಳ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಅದರಾಚೆಗೆ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟೊಂದು ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಿವೆ. ಈ ನಡುವೆ ಮಂಗಳವಾರ 'ದಿ ಹಿಂದೂ' ಪತ್ರಿಕೆ, ಕರ್ನಾಟಕದ ಜಂಟಿ ಅಧಿವೇಶನ ಕಾವೇರಿ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯವೇ ಸಂವಿಧಾನ ಬಾಹಿರ ಎಂಬ ವಿಶ್ಲೇಷಣಾತ್ಮಕ ವರದಿಯೊಂದನ್ನು ಪ್ರಕಟಿಸಿದೆ. (ವರದಿ ಇಲ್ಲಿದೆ)