samachara
www.samachara.com
ಕಾವೇರಿ ವಿಚಾರದಲ್ಲಿ ಬದಲಾಗದ 'ಸುಪ್ರಿಂ ನ್ಯಾಯ': 6,000 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ
ಕಾವೇರಿ ವಿವಾದ

ಕಾವೇರಿ ವಿಚಾರದಲ್ಲಿ ಬದಲಾಗದ 'ಸುಪ್ರಿಂ ನ್ಯಾಯ': 6,000 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ

ಮೇಲಿಂದ

ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡುತ್ತಿರುವ ಸುಪ್ರಿಂ ಕೋರ್ಟ್, ಮಂಗಳವಾರದ ತನ್ನ ತೀರ್ಪಿನಲ್ಲಿಯೂ 6, 000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ.

ಇಂದಿನಿಂದ ಮೂರು ದಿನಗಳ ಕಾಲಾವಧಿಯಲ್ಲಿ 6,000 ಕ್ಯೂಸೆಕ್ಸ್ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕಕ್ಕೆ ಹೇಳಿದೆ. ಇದರ ನಡುವೆ ಕೇಂದ್ರ ಸರಕಾರ ವಿವಾದಕ್ಕೆ ಅಂತ್ಯಹಾಡಲು ಮಧ್ಯಪ್ರವೇಶಿಸುವುದಾಗಿ ಸುಪ್ರಿಂ ಕೋರ್ಟಿಗೆ ತಿಳಿಸಿದೆ. ಸೆ. 23ರಂದು ವಿಶೇಷ ಅಧಿವೇಶನ ಕರೆದು ಶಾಸಕಾಂಗದ ಅಧಿಕಾರವನ್ನು ಬಳಸಿದ್ದ ರಾಜ್ಯದ ನಡೆಯ ಬೆನ್ನಲ್ಲೇ ಸುಪ್ರಿಂ ಕೋರ್ಟ್ ತೀರ್ಮಾನ ಹೊರಬಿದ್ದಿದೆ. ಹೀಗಾಗಿ, ಮತ್ತೆ ರಾಜ್ಯ ಸರಕಾರ ವಿಶೇಷ ಅಧಿವೇಶನವನ್ನು ಕರೆದು ಜನರ ಹಿತ ಕಾಯುವ ನಿರ್ಣಯವನ್ನು ಅಂಗೀಕರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಂಗಳವಾರ ಸುಪ್ರಿಂ ಕೋರ್ಟಿನಲ್ಲಿ ಕಾವೇರಿ ಜಲವಿವಾದದ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಉದಯ್ ಲಲಿತ್ ಅವರಿದ್ದ ನ್ಯಾಯಾಪೀಠ ವಿಚಾರಣೆ ನಡೆಸಿ ಸೆಪ್ಟೆಂಬರ್ 28, 29 ಮತ್ತು 30ರಂದು ನೀರು ಬಿಡಲು ಆದೇಶ ನೀಡಿದ್ದು ಮುಂದಿನ ವಿಚಾರಣೆಯನ್ನು ಶುಕ್ರವಾರ ಅಂದರೆ ಸೆಪ್ಟೆಂಬರ್ 30, ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ.

ವಿಚಾರಣೆ ವೇಳೆ ಕರ್ನಾಟಕ ವಿಧಾನಸಭೆಯಲ್ಲಿ ತೆಗೆದುಕೊಂಡಿರುವ ನಿಲುವನ್ನು ಸುಪ್ರಿಂ ಕೋರ್ಟಿಗೆ ಮನವರಿಕೆ ಮಾಡಿದೆ. ‘ಕುಡಿಯುವ ನೀರಿಗಲ್ಲದೇ ಬೇರಾವ ಬಳಕೆಗೂ ನೀರು ಬಿಡಲು ಸಾಧ್ಯವಿಲ್ಲ,’ ಎಂಬ ತನ್ನ ನಿರ್ಧಾರವನ್ನು ನ್ಯಾಯಾಧೀಶರ ಮುಂದಿಟ್ಟಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಸುಪ್ರಿಂ ಕೋರ್ಟ್, ಒಕ್ಕೂಟ ವ್ಯವಸ್ಥೆಗೆ ವಿಧೇಯನಾಗದೇ ಇರುವುದು ಸಮಸ್ಯೆಗೆ ಪರಿಹಾರವಲ್ಲ. ನಿಮ್ಮ ವಿಧೇಯತೆಯನ್ನು ತೋರಿಸಿ ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ.

ಇದರ ಮಧ್ಯೆ ಕೇಂದ್ರ ಸರಕಾರ ಎರಡೂ ರಾಜ್ಯಗಳ ನಡುವೆ ಸಂಧಾನಕ್ಕೆ ಮುಂದಾಗಿದೆ. ವಿಚಾರಣೆ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಕೋರ್ಟಿಗೆ ಮಾಹಿತಿ ನೀಡಿದ್ದು, ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಲಿದೆ ಎಂದಿದ್ದಾರೆ. ಎರಡೂ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಬುಧವಾರ ಅಥವಾ ಗುರುವಾರ ಸಭೆ ಕರೆಯಲಾಗುವುದು ಎಂದು ರೋಹಟಗಿ ಕೋರ್ಟಿನ ಗಮನಕ್ಕೆ ತಂದಿದ್ದಾರೆ. ಸದ್ಯ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶ ನೀಡಿದೆ.

ಸಭೆ ಮುಗಿದ ನಂತರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಮಾಹಿತಿಯನ್ನು ಮುಂದಿನ ವಿಚಾರಣೆಗೂ ಮೊದಲು ಸುಪ್ರಿಂ ಕೋರ್ಟಿಗೆ ನೀಡುವಂತೆ ರೋಹಟಗಿ ಅವರಿಗೆ ಸೂಚನೆ ನೀಡಲಾಗಿದೆ.

ಈ ಹಿಂದೆ ಸುಪ್ರೀ ಕೋರ್ಟ್ ಸೆಪ್ಟೆಂಬರ್ 20 ರಿಂದ 26ರವರೆಗೆ 6,000 ಕ್ಯೂಸೆಕ್ಸ್ ನೀರು ಹರಿಸಲು ಆದೇಶಿಸಿತ್ತು. ಆದರೆ ವಿಶೇಷ ಅಧಿವೇಶನ ಕರೆದ ಕರ್ನಾಟಕ ಸರಕಾರ 'ಕುಡಿಯುವುದಕ್ಕೆ ಬಿಟ್ಟು ಬೇರಾವ ಉದ್ದೇಶಕ್ಕೂ ನೀರು ಬಿಡಲು ಸಾಧ್ಯವಿಲ್ಲ' ಎಂದು ಹೇಳಿತ್ತು.

ಪ್ರತಿಭಟನೆಗೆ ಸಿದ್ಧತೆ:

ಸುಪ್ರಿಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮಂಡ್ಯದಲ್ಲಿ ನಾಳೆ ಅಂದರೆ ಬುಧವಾರ ರೈತರ ಹಕ್ಕೊತ್ತಾಯ ಸಭೆ ನಡೆಯಲಿದೆ. ಕರ್ನಾಟಕ ಜನಶಕ್ತಿ ಮತ್ತು ರೈತ ಹೋರಾಟ ಸಮಿತಿ ಮಂಡ್ಯದ ‘ರೈತ ಸಭಾಂಗಣ’ದಲ್ಲಿ ಬೆಳಿಗ್ಗೆ 10:30 ಕ್ಕೆ ಸಭೆ ಕರೆದಿದೆ. ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಯಲಿದೆ.

ಬಿಗಿ ಬಂದೋಬಸ್ತ್

ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಮಂಗಳವಾರ ಬೆಂಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಂಡ್ಯ, ಬೆಂಗಳೂರಿನ ಅತ್ತಿಬೆಲೆ, ಆನೇಕಲ್ ಭಾಗದಲ್ಲಿ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇನ್ನು ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೂ ವಿಶೇಷ ಭದ್ರತೆ ಒದಗಿಸಲಾಗಿತ್ತು.