samachara
www.samachara.com
'ಕಷ್ಟದಲ್ಲಿದ್ದೇವೆ; ನೀರು ಬಿಡುವುದಿಲ್ಲ': ಸುಪ್ರಿಂ ತೀರ್ಪಿಗೆ ಸೆಡ್ಡು ಹೊಡೆದ ಶಾಸಕಾಂಗ!
ಕಾವೇರಿ ವಿವಾದ

'ಕಷ್ಟದಲ್ಲಿದ್ದೇವೆ; ನೀರು ಬಿಡುವುದಿಲ್ಲ': ಸುಪ್ರಿಂ ತೀರ್ಪಿಗೆ ಸೆಡ್ಡು ಹೊಡೆದ ಶಾಸಕಾಂಗ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

'ಕುಡಿಯುವ ನೀರು ಬಿಟ್ಟು, ಬೇರೆ ಯಾವುದೇ ಕಾರಣಕ್ಕೂ ನೀರು ಒದಗಿಸಲು ಸಾಧ್ಯವಿಲ್ಲ' 

ಹೀಗೊಂದು ದೃಢ ನಿರ್ಧಾರವನ್ನು ರಾಜ್ಯದ ಪರವಾಗಿ ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಮೊದಲಿಗೆ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ರವಿ ನಿರ್ಣಯ ಮಂಡಿಸಿದರು. ಇದನ್ನು ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅನುಮೋದಿಸಿದರು. ಈ ನಿರ್ಣಯವನ್ನು ಸ್ಪೀಕರ್ ಡಿ.ಎಚ್. ಶಂಕರಮೂರ್ತಿ ಅಂಗೀಕರಿಸಿ, ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

ಇನ್ನು ವಿಧಾನ ಸಭೆಯಲ್ಲಿ ಮೊದಲೇ ತೀರ್ಮಾನಿಸಿದಂತೆ, ವಿಧಾನಸಭೆ ಕಾರ್ಯಕಲಾಪಗಳ ನಿಯಮ 159ರ ಅಡಿಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇಂಗ್ಲೀಷ್ ಭಾಷೆಯಲ್ಲಿ ನಿರ್ಣಯ ಮಂಡಿಸಿದರು. "ದೇಶದಾದ್ಯಂತ ಈ ಅಧಿವೇಶನವನ್ನು ನೋಡುತ್ತಿರುವುದರಿಂದ ಇಂಗ್ಲೀಷ್ ಭಾಷೆಯಲ್ಲಿ ನಿರ್ಣಯ ಮಂಡಿಸುತ್ತಿದ್ದೇನೆ. ನೆಲಜಲದ ಹಿತದೃಷ್ಠಿಯಿಂದ ಈ ನಿರ್ಣಯ ಮಂಡಿಸುತ್ತಿದ್ದೇನೆ," ಎಂದು ಶೆಟ್ಟರ್ ಹೇಳಿದರು. ಇದನ್ನು ಜೆಡಿಎಸ್ ನಾಯಕ ವೈಎಸ್ವಿ ದತ್ತಾ ಅನುಮೋದಿಸಿದರು.

ನಂತರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ಕಾವೇರಿ ಸಮಸ್ಯೆಯ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು. ನಮ್ಮಲ್ಲಿ ಎಷ್ಟು ನೀರಿದೆ, ನೀರು ಬಿಟ್ಟರೆ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಕೋರ್ಟಿನಲ್ಲಿ ಈ ವಿವಾದ ಹೇಗೆ ನಡೆದು ಬಂದಿದೆ ಎನ್ನುವ ಎಲ್ಲಾ ವಿವರಗಳನ್ನು ಸದನದ ಮುಂದಿಟ್ಟರು.

ನಂತರ ಚರ್ಚೆಯಲ್ಲಿ ಮಾತನಾಡಿದ ರೈತಸಂಘದ ಪುಟ್ಟಣ್ಣಯ್ಯ, "ಈ ಎಲ್ಲಾ ವಿವಾದಗಳು ಮುಗಿದ ನಂತರ ಕರ್ನಾಟಕದ ತಜ್ಞರು ಮತ್ತು ರೈತರು ಹಾಗೂ ತಮಿಳುನಾಡಿನ ರೈತರು ಮತ್ತು ತಜ್ಞರ ಸಮಿತಿ ಕುಳಿತುಕೊಂಡು ಚರ್ಚೆ ಮಾಡಲಿ. ಇದಕ್ಕೆ ಸರಕಾರಗಳೇ ಬೆನ್ನೆಲುಬಾಗಿ ನಿಂತುಕೊಳ್ಳಲಿ," ಎಂದು ಸಲಹೆ ನೀಡಿದರು. "ಕರ್ನಾಟಕದ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯ. ಭಾರತದಲ್ಲಿ ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿ ಹಿಡಿಯುತ್ತಿರುವ ಆರೋಗ್ಯಕರ ಬೆಳವಣಿಗೆ. ಸಿದ್ಧರಾಮಯ್ಯನವರು ಧೈರ್ಯವಾಗಿರಿ, ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯಬೇಡಿ. ನಾವೆಲ್ಲಾ ಜೊತೆಗಿದ್ದೇವೆ," ಎಂದು ಧೈರ್ಯ ತುಂಬಿದರು.

ಇದಾದ ಬಳಿಕ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, "ಇಂದು ಅತ್ಯಂತ ದುರಾದೃಷ್ಟದಿಂದ ಈ ನಿರ್ಣಯ ಮಂಡಿಸಬೇಕಾಗಿ ಬಂದಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಎಲ್ಲರೂ ಈ ವ್ಯವಸ್ಥೆಯನ್ನು, ಸಂವಿಧಾನವನ್ನು, ನ್ಯಾಯಾಲಯಗಳು ನೀಡಿದ ತೀರ್ಪನ್ನು ಗೌರವಿಸಬೇಕಾದ ಪರಿಸ್ಥಿತಿ ಇದೆ. ಇವತ್ತು ನ್ಯಾಯಾಲಯ ನೀಡಿದ ತೀರ್ಪನ್ನು ಪಾಲಿಸಲಾಗದ ಅನಿವಾರ್ಯ ಪರಿಸ್ಥಿತಿಗೆ ನಮ್ಮನ್ನು ದೂಡಿದ್ದಾರೆ," ಎಂದು ಹೇಳಿದರು. 1991ರಲ್ಲೂ ಇದೇ ರೀತಿ ಪರಿಸ್ಥಿತಿ ಸೃಷ್ಟಿಯಾದಾಗ ಸುಗ್ರಿವಾಜ್ಞೆ ಹೊರಡಿಸಬೇಕಾಗಿ ಬಂದಿತ್ತು ಅಂತ ಕುಮಾರಸ್ವಾಮಿ ನೆನಪಿಸಿಕೊಂಡರು.

ಚರ್ಚೆಯ ಮಧ್ಯೆ ಮೂರು ಗಂಟೆ ಸಮೀಪಿಸಿದ್ದನ್ನು ನೋಡಿ ಮಧ್ಯಾಹ್ನದ ಊಟವನ್ನು ಆರೋಗ್ಯ ಸಚಿವ ಎಸ್ ರಮೇಶ್ ಕುಮಾರ್ ನೆನಪಿಸಿದರು. ಆಗ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3:30ಕ್ಕೆ ಮುಂದೂಡಿದರು.

ಭೋಜ ವಿರಾಮದ ನಂತರ ಸದನ ಆರಂಭವಾದಾಗ ಕುಮಾರಸ್ವಾಮಿ ಮತ್ತೆ ತಮ್ಮ ಮಾತನ್ನು ಮುಂದುವರಿಸಿದರು. "ಈ ಹಿಂದೆ ಸುಪ್ರಿಂ ಕೋರ್ಟ್ ನೀಡಿದ ಎಲ್ಲಾ ಆದೇಶಗಳನ್ನುಗೌರವಯುತವಾಗಿ ಪಾಲಿಸಿದ್ದೇವೆ. ಇಲ್ಲಿ ಕಂಟೆಮ್ಟ್ ಪ್ರಶ್ನೆಯೇ ಬರುವುದಿಲ್ಲ. ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ವಿಧಾನಸಭೆಯ ಕಲಾಪ ಸಂಘರ್ಷಕ್ಕೆ ಎಡೆಮಾಡಿಕೊಡುತ್ತೆ ಎಂದು ಬರೆದಿದ್ದಾರೆ. ಆದರೆ ಸಂಘರ್ಷಕ್ಕಾಗಿ ಈ ನಿರ್ಣಯ ಕೈಗೊಳ್ಳುತ್ತಿಲ್ಲ. ನ್ಯಾಯಾಂಗ ಮತ್ತು ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಮ್ಮಿಂದ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗಿಲ್ಲ. ನಿಮ್ಮ ಎಲ್ಲಾ ತೀರ್ಪನ್ನೂ ರಾಜ್ಯದ ಜನತೆಗೆ ಅನ್ಯಾಯ ಆದ್ರೂ ಪರವಾಗಿಲ್ಲ ಎಂದು ಪಾಲಿಸಿದ್ದೇವೆ; ಗೌವರಿಸಿದ್ದೇವೆ. ಆದರೆ ಗೌರವ ನೀಡಿದ್ದನ್ನೇ ವೀಕ್ನೆಸ್ ಎಂದು ತಿಳಿದುಕೊಂಡು ಪದೇ ಪದೇ ಈ ರೀತಿಯ ತೀರ್ಮಾನ ಕೊಡೋದಾದ್ರೆ ನಾವು ಕಠಿಣವಾದ, ಅಂತಿಮವಾದ ಕೆಲವು ನಿರ್ಧಾರಗಳನ್ನು ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ದೂಡಬೇಡಿ. ಈ ಸಂದೇಶ ಹೋಗಬೇಕು ಎಂಬ ನಿಟ್ಟಿನಲ್ಲಿ ಈ ಮಾಹಿತಿಗಳನ್ನು ಸದನದ ಮಂದಿಟ್ಟಿದ್ದೇನೆ," ಎಂದು ಕುಮಾರಸ್ವಾಮಿ ಮಾತು ಮುಗಿಸಿದರು.

ಇದಾದ ನಂತರ ವಿಧಾನ ಸಭೆಯಲ್ಲಿ ಕಾವೇರಿ ವಿಚಾರವಾಗಿ ಬಿಸಿಬಿಸಿ ಚರ್ಚೆ ಮುಂದುವರಿದಿದೆ.

ಈ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿಗೆ ವ್ಯತಿರಿಕ್ತ ನಿಲುವನ್ನು ಕರ್ನಾಟಕ ಶಾಸಕಾಂಗ ಪ್ರಕಟಿಸಿದೆ. ಇದು ದೇಶದಲ್ಲಿ ಹೊಸ ಸಾಂವಿಧಾನಿಕ ಬಿಕ್ಕಟ್ಟಿಗೆ ನಾಂದಿ ಹಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ವಿಧಾನ ಪರಿಷತ್ತಿನಲ್ಲಿ ಮೊದಲು ಅಧಿವೇಶನ ಆರಂಭವಾಯಿತು. ವಂದೇ ಮಾತರಂ ಹಾಡಿನೊಂದಿಗೆ ಅಧಿವೇಶನಕ್ಕೆ ಚಾಲನೆ ನೀಡಲಾಯಿತು. ಮಡಿದ ಮಾಜಿ ಸದಸ್ಯರು ಹಾಗೂ ಕಾಶ್ಮೀರದಲ್ಲಿ ಹುತಾತ್ಮರಾದ ರಾಜ್ಯದ ಸೈನಿಕರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸುಪ್ರಿಂ ಕೋರ್ಟಿಗೆ ಮೊರೆ ಹೋದ ಉಭಯ ರಾಜ್ಯಗಳು

ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ಸೂಚನೆಗೆ ತಮಿಳುನಾಡು ಸುಪ್ರಿಂ ಕೋರ್ಟಿನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಸಾಂಬಾ ಬೆಳೆಗೆ ನೀರು ಅಗತ್ಯವಿದೆ. ಕರ್ನಾಟಕಕ್ಕೆ ಬಿಡುಗಡೆ ಮಾಡಲು ಹೇಳಿರುವ 3,000 ಕ್ಯೂಸೆಕ್ಸ್ ನೀರು ಎಲ್ಲಿಗೂ ಸಾಲುವುದಿಲ್ಲ. 17.5 ಟಿಎಂಸಿ ಹೆಚ್ಚಿನ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ತನ್ನ ಆಕ್ಷೇಪಣಾ ಅರ್ಜಿಯಲ್ಲಿ ತಮಿಳುನಾಡು ಕೇಳಿಕೊಂಡಿದೆ. ಕರ್ನಾಟಕ ನೀರನ್ನು ವ್ಯವಸಾಯಕ್ಕೂ ಬಳಸುತ್ತಿದೆ ಎಂದು ಸುಪ್ರಿಂ ಕೋರ್ಟ್ ತನ್ನ ಅರ್ಜಿಯಲ್ಲಿ ದೂರಿದೆ.

ಮೇಲುಸ್ತುವಾರಿ ಸಮಿತಿಯ ಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಕರ್ನಾಟಕವೂ ಆಕ್ಷೇಪಣೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

ಸದನ ಸಲಹಾ ಸಮಿತಿ ನಿರ್ಣಯ

ಅಧಿವೇಶನ ಆರಂಭಕ್ಕೂ ಮುನ್ನ ಸದನ ಸಲಹಾ ಸಮಿತಿ ಸಭೆ ಸೇರುವುದು ರೂಢಿ. ಅದರಂತೆ ವಿಶೇಷ ಅಧಿವೇಶನಕ್ಕೂ ಮೊದಲು 10:30ಕ್ಕೆ ಸರ್ವ ಪಕ್ಷಗಳು ಸಭೆ ಸೇರಿದವು. ಅಧಿವೇಶನದಲ್ಲಿ ಸರಕಾರದ ಕಡೆಯಿಂದ ಒಂದು ಸಾಲಿನ ನಿರ್ಣಯ ಮಂಡಿಸುವುದು ಅದಕ್ಕೆ ಎಲ್ಲಾ ಪಕ್ಷಗಳು ಅನುಮೋದನೆ ನೀಡುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಯಾವುದೇ ಕಾರಣಕ್ಕೂ ನ್ಯಾಯಾಂಗದ ವಿರುದ್ಧ ಹೇಳಿಕೆಗಳನ್ನು ನೀಡದಂತೆ ಗಮನ ಹರಿಸಬೇಕು. ಹೆಚ್ಚಿನ ಸಮಯ ಚರ್ಚೆ ಮಾಡಬಾರದು ಎಂದು ಸದನ ಸಲಹಾ ಸಮಿತಿ ಚರ್ಚೆಯಲ್ಲಿ ಸರ್ವ ಪಕ್ಷಗಳು ನಿರ್ಧರಿಸಿವೆ. ಎಲ್ಲಾ ನಾಯಕರಿಗೆ ಕೇವಲ 5 ನಿಮಿಷಗಳ ಮಾತಿಗಷ್ಟೇ ಅವಕಾಶ ನೀಡಲಾಗಿದೆ.

ಅಧಿವೇಶನಕ್ಕೂ ಮೊದಲು, ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಜೆಡಿಎಸ್ ಬಂಡಾಯ ಶಾಸಕರು ಸುಪ್ರಿಂ ಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿದರು.

ನಿಗದಿಯಂತೆ 11 ಗಂಟೆಗೆ ಆರಂಭವಾಗಬೇಕಿದ್ದ ಉಭಯ ಸದನಗಳ ಕಲಾಪ ಎಚ್.ಡಿ ರೇವಣ್ಣರ ರಾಹುಕಾಲ ಸಲಹೆಯಿಂದಾಗಿ 12.30 ಕ್ಕೆ ಆರಂಭಿಸಲು ನಿರ್ಧರಿಸಲಾಯಿತು. ಆದರೆ ನಿರ್ಣಯದ ಕರಡು ಪ್ರತಿ ಸಿದ್ಧತೆಯಿಂದಾಗಿ ತಡವಾಗಿ ಅಧಿವೇಶನ ಆರಂಭವಾಗುತ್ತಿದೆ ಎಂದು ಸರಕಾರದ ಮೂಲಗಳು ಹೇಳಿವೆ.

ವಿಶೇಷ ಅಧಿವೇಶನ ಇತಿಹಾಸ

1991 ರಿಂದ ಇಲ್ಲೀವರೆಗೆ ಒಟ್ಟು ಏಳು ಬಾರಿ ವಿಶೇಷ ಅಧಿವೇಶನಗಳು ನಡೆದಿವೆ. ಇವುಗಳಲ್ಲಿ ಮೂರು ಅಧಿವೇಶನಗಳು ಕಾವೇರಿ ವಿಚಾರವಾಗಿಯೇ ನಡೆದಿವೆ. ಇತ್ತೀಚೆಗೆ ನಡೆದ ವಿಶೇಷ ಅಧಿವೇಶನಗಳು ಹೀಗಿವೆ,

1998, ಜನವರಿ 27: ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆ ಮಾಡಿ ಮತಕ್ಕೆ ಹಾಕಲಾಗಿತ್ತು.

2005, ನವೆಂಬರ್ 20: ಸುವರ್ಣ ಕರ್ನಾಟಕ ವಿಶೇಷ ಅಧಿವೇಶನ; ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂರಿಂದ ಸದನ ಉದ್ದೇಶಿಸಿ ಭಾಷಣ.

2009, ಸೆಪ್ಟೆಂಬರ್ 9,10,11,14,15,16: ಕೃಷಿ ಗ್ರಾಮೀಣಾಭಿವೃದ್ಧಿ ಕುರಿತು ಚರ್ಚೆ.

2015, ಏಪ್ರಿಲ್ 20,23,27: ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ವಿಧೇಯಕ 2015ರ ಕುರಿತು ಚರ್ಚೆ.

ಸಾಂದರ್ಭಿಕ ಚಿತ್ರ