samachara
www.samachara.com
ಕಚೇರಿ ತೆರವು ಮಾಡುತ್ತಿದ್ದ ಮಧ್ಯರಾತ್ರಿ ದೇವೇಗೌಡರು. (ಚಿತ್ರ: ಸಮಾಚಾರ)
ಕಾವೇರಿ ವಿವಾದ

‘ಗೌಡರ ಬದುಕಿನ ಅದೊಂದು ದಿನ’: ಧೂಳಿನಿಂದ ಎದ್ದು ಬರುತ್ತೀನಿ ಅಂದವರು; ಬಂದೇ ಬಿಟ್ಟರು!

ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವ, ರಾಜ್ಯದ ಮೊದಲ ಪ್ರಧಾನಿ ಮತ್ತಿತರ ಅಂಶಗಳನ್ನು ಬೆನ್ನಿಗಿಟ್ಟುಕೊಂಡೇ ತೆರವು ಮಾಡಬೇಕಾದ ಕಚೇರಿ ಅಂಗಳದಲ್ಲಿ ಕುಸಿದು ಕುಳಿತಿದ್ದರು.

''ನಾನು ನೋವನ್ನು ಉಂಡಿದ್ದೀನಿ. ಧೂಳಿನಿಂದ ಎದ್ದು ಬರುತ್ತೀನಿ,'' ಹೀಗಂತ ಹೇಳಿದ್ದವರು ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ.

ಅವತ್ತು 2015 ರ ಫೆಬ್ರವರಿ 15ನೇ ತಾರೀಖು; ಭಾನುವಾರ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಅಂಚಿನಲ್ಲಿದ್ದ ಜೆಡಿಎಸ್ ಕಚೇರಿಯನ್ನು ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳಾಂತರಿಸುವ ಕೆಲಸ ಆರಂಭವಾಗಿತ್ತು. ಬೆಳಗ್ಗೆ ಶುರುವಾದ ಕೆಲಸ ಮುಗಿದದ್ದು ಮಧ್ಯರಾತ್ರಿ 1. 45 ರ ಸುಮಾರಿಗೆ.

ಹೆಚ್ಚು ಕಡಿಮೆ ಅಷ್ಟೂ ಅವಧಿಯನ್ನು ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ, ಕಚೇರಿಯ ಮುಂದೆ ಫೈಬರ್ ಕುರ್ಚಿಯೊಂದರ ಮೇಲೆ ಕುಳಿತುಕೊಂಡು, ತುಂಬುತ್ತಿದ್ದ ಲಗೇಜುಗಳನ್ನು ನೋಡಿಕೊಳ್ಳುತ್ತ, ಒಳಗೂ ಹೊರಗೂ ಓಡಾಡಿಕೊಳ್ಳುತ್ತ ಕಳೆದರು.

ಆಗ ಅವರಿಗೆ ಸುಮಾರು 84 ವರ್ಷ. ಆ ಇಳೀ ವಯಸ್ಸಿನಲ್ಲಿಯೂ ಪಕ್ಷದಿಂದ ಕೈಬಿಟ್ಟು ಹೋದ ಕಚೇರಿಯನ್ನು ಸ್ಥಳಾಂತರಿಸುವ ಕೆಲಸವನ್ನು ಅವರೇ ಖುದ್ದಾಗಿ ವಹಿಸಿಕೊಂಡಿದ್ದರು. ಅವತ್ತು ಜತೆಗಿದ್ದರು ಪಕ್ಷದ ಕೆಲವೇ ಕೆಲವು ನಿಷ್ಟಾವಂತ ಕಾರ್ಯಕರ್ತರು.

ಕೆಲವು ದಿನಗಳ ಹಿಂದೆ ಖಾಸಗಿ ಹೆಲಿಕಾಪ್ಟರ್ಗೆ ಹಣ ಸುರಿದು ಕಾವೇರಿ ಕಣಿವೆ ಜಿಲ್ಲೆಗಳ ರೈತ ಭೂಮಿಯನ್ನು ನೋಡಿಕೊಂಡು ವಾಪಾಸ್ ಬಂದವರು ಗೌಡರು. ನಂತರ ಸಿಎಂ ಸಿದ್ದರಾಮಯ್ಯ ಬಿಗುಮಾನ ಮರೆತು ಗೌಡ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆ, ಮತ್ಸದ್ಧಿ ರಾಜಕಾರಣಿಯಂತೆ ಸಂಕಷ್ಟ ಕಾಲದಲ್ಲಿ ಸರಕಾರದ ಬೆನ್ನಿಗೆ ನಿಂತವರು ದೇವೇಗೌಡ.

ಇವತ್ತು, ಕಾವೇರಿ ವಿಚಾರದಲ್ಲಿ ನ್ಯಾಯಾಂಗ ಹೋರಾಟ ಏನು ನಡೆಯಿತು? ಬಿಜೆಪಿಯವರು ಮುಗ್ಗರಿಸಿದ್ದು ಎಲ್ಲಿ? ಸರಕಾರ ಎಡವಿದ್ದು ಯಾವ ಹಂತದಲ್ಲಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟ ಜನ, ದೇವೇಗೌಡರು ಪ್ರದರ್ಶಿಸಿದ ರಾಜಕೀಯ ಇಚ್ಚಾಶಕ್ತಿಗೆ ಮಾರು ಹೋಗಿದ್ದಾರೆ.

ಶುಕ್ರವಾರ 'ಸಮಾಚಾರ'ದ ಜತೆ ಅನೌಪಚಾರಿಕ ಮಾತಕತೆಗೆ ಸಿಕ್ಕ ಮಾಜಿ ಸಂಸದೆ ರಮ್ಯಾ ಕೂಡ, "ಹಿ ಇಸ್ ಎ ಟ್ರೂ ಸ್ಟೇಟ್ಸ್ಮನ್,'' (ಅವರು ನಿಜವಾದ ಮತ್ಸದ್ಧಿ ರಾಜಕಾರಣಿ) ಎಂದು ಗೌಡರ ಬಗ್ಗೆ ಮೆಚ್ಚುಗೆಯ ತುಂಬಿದ ಮಾತುಗಳನ್ನಾಡಿದರು.

ತೆರವಿನ ದಿನ:

ಇವತ್ತಿಗೆ ಹೋಲಿಸಿದರೆ ಹೆಚ್ಚು ಕಡಿಮೆ ಒಂದುವರೆ ವರ್ಷಗಳ ಹಿಂದೆ, ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರು ಎಲ್ಲವನ್ನೂ ಕಳೆದುಕೊಂಡವರಂತೆ ನಿಂತಿದ್ದರು. ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವ, ರಾಜ್ಯದ ಮೊದಲ ಪ್ರಧಾನಿ ಮತ್ತಿತರ ಅಂಶಗಳನ್ನು ಬೆನ್ನಿಗಿಟ್ಟುಕೊಂಡೇ ತೆರವು ಮಾಡಬೇಕಾದ ಕಚೇರಿ ಅಂಗಳದಲ್ಲಿ ಕುಸಿದು ಕುಳಿತಿದ್ದರು.

"ಸುದೀರ್ಘ ಹೋರಾಟದ ನಂತರ ನಮ್ಮ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಬೇಕಾಗಿತ್ತು. ಅಂತಹ ಸಮಯದಲ್ಲಿ ಸ್ಥಳಾಂತರ ಮಾಡಲು ಖುದ್ದಾಗಿ ಗೌಡರೇ ಬಂದರು. ಆ ಕಚೇರಿಯ ಜತೆ ಅವರಿಗೆ ಭಾವನಾತ್ಮಕ ಸಂಬಂಧ ಬೆಳೆದಿತ್ತು. ಆರಂಭದಲ್ಲಿ ಕಚೇರಿ ಸಿಬ್ಬಂದಿಗಳಿಗೆ ಸಂಬಳವನ್ನು ಸಾಲ ಮಾಡಿ ಕೊಟ್ಟಿದ್ದರು. ಹಾಗಾಗಿ ಅವತ್ತು ಕಚೇರಿಯನ್ನು ತೆರವು ಮಾಡುವ ಸಮಯದಲ್ಲಿ ಅವರು ಹಳೆಯ ನೆನಪುಗಳು ಅವರ ಮುಖದಲ್ಲಿ ಭಾವನೆಗಳಾಗಿ ವ್ಯಕ್ತವಾಗುತ್ತಿದ್ದವು,'' ಎನ್ನುತ್ತಾರೆ ಜೆಡಿಎಸ್ ವಕ್ತಾರ ರಮೇಶ್ ಬಾಬು.

ಅವತ್ತು ಕಚೇರಿ ತೆರವುಗೊಳಿಸುವವರೆಗೂ ಗೌಡರ ಜತೆಗಿದ್ದು, ಮಾರನೇ ದಿನ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಮನೆಗೆ ಹೋಗಿ ಕಚೇರಿ ಕೀಗಳನ್ನು ಹಸ್ತಾಂತರಿಸಿ ಬಂದವರು ರಮೇಶ್ ಬಾಬು.

ಹಳೇ ಟ್ರಂಕ್:

"ಕಚೇರಿಯನ್ನು ಸ್ಥಳಾಂತರ ಮಾಡುವ ಸಮಯದಲ್ಲಿ ದೇವೇಗೌಡರು ಒಳಗೆ ಹೊರಗೆ ಓಡಾಡಿಕೊಂಡಿದ್ದರು. ಅಲ್ಲಿನ ಚಿಕ್ಕಪುಟ್ಟ ವಸ್ತುಗಳನ್ನೂ ಎತ್ತಿಕೊಂಡು ನೋಡಿ ಕೆಳಗೆ ಇಡುತ್ತಿದ್ದರು. ಹಳೆಯ ಫೊಟೋಗಳನ್ನು ತೆಗೆಯುವಾಗ ಅವರ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಹಸಿರು ಬಣ್ಣದ ಹಳೆಯ ಕಬ್ಬಿಣದ ಟ್ರಂಕ್ ಒಂದು ಸಿಕ್ಕಾಗ ಅವರು ಭಾವೋದ್ವೇಗಕ್ಕೆ ಒಳಗಾದರು. ಇದರಲ್ಲಿಯೇ ನೋಡಿ ನಾವು ಹಣ ಇಡುತ್ತಿದ್ದದ್ದು. ಅವತ್ತು ನಮ್ಮ ಹತ್ತಿರ ಹಣ ಕೂಡ ಇರುತ್ತಿರಲಿಲ್ಲ ಎಂದು ನಮಗೆ ಹೇಳಿದರು,'' ಎಂದು ನೆನಪು ಮಾಡಿಕೊಳ್ಳುತ್ತಾರೆ ಟಿವಿ 9 ವಾಹಿನಿಯ ಹಿರಿಯ ವರದಿಗಾರ ಡಿ. ಎಚ್. ಸುಕೇಶ್.

ಅವರು ಕಚೇರಿ ಸ್ಥಳಾಂತರ ಆಗುವ ಕೊನೆಯ ಕ್ಷಣದವರೆಗೂ ಸ್ಥಳದಲ್ಲಿ ಇದ್ದವರು. ದೇವೇಗೌಡರ ಪ್ರತಿ ಚಲನೆಯನ್ನೂ ಸೂಕ್ಷ್ಮವಾಗಿ ಗಮನಿಸಿದವರು. "ವಸ್ತುಗಳನ್ನು ಪ್ಯಾಕ್ ಮಾಡುವಾಗ ಎರಡು ಹಳೆಯ ತಾಮ್ರದ ಪೆನ್ಗಳು ಸಿಕ್ಕವು. ಅವುಗಳನ್ನು ಕೈಲಿ ಹಿಡಿದುಕೊಂಡು ಗೌಡರು ಮಕ್ಕಳಂತೆ ಅವುಗಳನ್ನು ನೋಡುತ್ತಿದ್ದಾಗ ಎಂತವರಿಗೂ ಸಂಕಟ ಅನ್ನಿಸುತ್ತಿತ್ತು,'' ಎನ್ನುತ್ತಾರೆ ಸುಕೇಶ್.

ಹಿನ್ನೆಲೆ:

ಸುಮಾರು 25 ವರ್ಷಗಳ ಕಾಲ ರೇಸ್ ಕೋರ್ಸ್ ರಸ್ತೆಯ 'ಕಾಂಗ್ರೆಸ್ ಭವನ' ಜೆಡಿಎಸ್ ಪಕ್ಷದ ಕಚೇರಿಯಾಗಿತ್ತು. ಅದಕ್ಕಾಗಿ ಕಾನೂನು ಹೋರಾಟ ಆರಂಭವಾಗಿದ್ದು 1992ರಲ್ಲಿ. ಈ ಕುರಿತು 'ದಿ ಹಿಂದೂ' ಪತ್ರಿಕೆ ಪ್ರಕಟಿಸಿದ್ದ ಟೈಮ್ ಲೈನ್ ಗ್ರಾಫಿಕ್ಸ್ ಇಲ್ಲಿದೆ.

‘ಗೌಡರ ಬದುಕಿನ ಅದೊಂದು ದಿನ’: ಧೂಳಿನಿಂದ ಎದ್ದು ಬರುತ್ತೀನಿ ಅಂದವರು; ಬಂದೇ ಬಿಟ್ಟರು!

ಎದ್ದು ಬಂದರು:

"ದೇವೇಗೌಡರು ಇರುವುದೇ ಹಾಗೆ. ಎಂತಹ ಸಮಯದಲ್ಲಿಯೂ ಅವರು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಅವರು ನಂಬಿರುವುದು ಜನರನ್ನು. ಕಾವೇರಿ ಸೇರಿದಂತೆ ನೀರಾವರಿ ಅವರ ನೆಚ್ಚಿನ ವಿಚಾರ. 1962ರಲ್ಲಿ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸಮಯದಲ್ಲಿಯೇ ಕಾವೇರಿ ಕುರಿತು ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದವರು. ಕಾಂಗ್ರೆಸ್ ಪಕ್ಷದ ಹಠಕ್ಕೆ ಕಚೇರಿಯನ್ನು ಬಿಟ್ಟು ಕೊಡಬೇಕಾಗಿ ಬಂದಾಗಲೂ ಅವರಿಗೆ ಬೇಸರವಾಗಿದ್ದರೂ ಹೊರಗೆ ತೋರಿಸಿಕೊಳ್ಳಲಿಲ್ಲ. ಹಾಗಂತ ಆ ಬೇಜಾರನ್ನು ಅವರು ಕಾವೇರಿ ವಿಚಾರದಲ್ಲಿ ತೋರಿಸಲಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಬಿಡಿ, ಬೇರೆ ಯಾರೇ ಇದ್ದರು ಅವರು ಈಗ ವಹಿಸಿದ್ದ ಪಾತ್ರವನ್ನೇ ವಹಿಸುತ್ತಿದ್ದರು,'' ಎನ್ನುತ್ತಾರೆ ರಮೆಶ್ ಬಾಬು.

ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡವರು ದೇವೇಗೌಡ. ಅವುಗಳಲ್ಲಿ ಕೆಲವು ಇನ್ನೇನು ಮುಗಿದೇ ಹೋಯಿತು ಎಂಬಂತಹ ಸನ್ನಿವೇಶಗಳು. ಅಂತವುಗಳಲ್ಲಿ ಒಂದು ಜೆಡಿಎಸ್ ಪಕ್ಷದ ಕಚೇರಿ ತೆರವು ವಿಚಾರ. ಅದನ್ನೂ ದಾಟಿ ಬಂದಿರುವ ಗೌಡರು ಇವತ್ತು ತಮ್ಮ ರಾಜಕೀಯ ಅನುಭವದ ಶಕ್ತಿ ಏನು ಎಂಬುದನ್ನು ತೋರಿಸಿದ್ದಾರೆ. ಇದು ಅವರ ಮುಂದಿನ ರಾಜಕೀಯಕ್ಕೆ, ಜೆಡಿಎಸ್ ಪಕ್ಷಕ್ಕೆ ಹೇಗೆ ನೆರವಾಗಲಿದೆ ಎಂಬುದನ್ನು ಜನ ಮತ್ತು ಕಾಲ ನಿರ್ಧರಿಸಲಿದ್ದಾರೆ.