ಶುಕ್ರವಾರ ಸದನದಲ್ಲಿ ‘ಕಾವೇರಿ ವಿವಾದ’; ಅಂತಿಮ ತೀರ್ಮಾನಕ್ಕೆ ಬರಲು ಸಂಪುಟ ಸಭೆ ವಿಫಲ
ಕಾವೇರಿ ವಿವಾದ

ಶುಕ್ರವಾರ ಸದನದಲ್ಲಿ ‘ಕಾವೇರಿ ವಿವಾದ’; ಅಂತಿಮ ತೀರ್ಮಾನಕ್ಕೆ ಬರಲು ಸಂಪುಟ ಸಭೆ ವಿಫಲ

ದೇವೇಗೌಡ-ಸಿದ್ದರಾಮಯ್ಯ ‘ಫೋನ್’ ಚರ್ಚೆ.. ಮಂತ್ರಿ ಪರಿಷತ್ತಿನಲ್ಲಿ ಹೊರ ಬೀಳದ ಸೂಕ್ತ ನಿರ್ಧಾರ.. ದೇವೇಗೌಡರ ಮನೆಗೆ ದೌಡಾಯಿಸಿದ ಮುಖ್ಯಮಂತ್ರಿ.. ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ.. ಕಾವೇರಿ ನಿರ್ಧಾರವನ್ನು ಸದನಕ್ಕೆ ಬಿಟ್ಟ ಅಹೋರಾತ್ರಿಯ ಸಂಪುಟ ಸಭೆ..

ಇವು ಕಾವೇರಿ ಸುತ್ತ ಮುತ್ತ ನಡೆದ ದಿನದ ಬೆಳವಣಿಗೆಗಳ ಹೈಲೈಟ್ಸ್.

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಸುತ್ತ ಮುತ್ತ ಬುಧವಾರ ದಿನಪೂರ್ತಿ ಚರ್ಚೆ, ಸಮಾಲೋಚನೆ, ಸಭೆಗಳು ನಡೆದವು. ಹೀಗಿದ್ದೂ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಮಾತ್ರ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಶುಕ್ರವಾರ ಸದನದಲ್ಲಿ ‘ಕಾವೇರಿ ವಿಚಾರವಾಗಿ’ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಯಿತು.

ರಾತ್ರಿ 10:25ರ ಸುಮಾರಿಗೆ ಕೊನೆಗೊಂಡು ಸಂಪುಟ ಸಭೆಯ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತೆರೆದಿಟ್ಟರು.

ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯ ಪೂರ್ಣಪಾಠ

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ “ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದರೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸರ್ವಪಕ್ಷ ಸಭೆಯಲ್ಲಿ ಜೆಡಿಎಸ್’ನವರು ಮಾತ್ರ ಹಾಜರಾಗಿದ್ದರು. ಜೆಡಿಎಸ್ ನಿಂದ ದೇವೇಗೌಡರು, ಕುಮಾರಸ್ವಾಮಿ, ಹೊರಟ್ಟಿ, ದತ್ತ ಹಾಜರಾಗಿದ್ದರು. ರೈತಸಂಘದಿಂದ ಪುಟ್ಟಣ್ಣಯ್ಯ ಹಾಗೂ ನಮ್ಮ (ಕಾಂಗ್ರೆಸ್) ಹಾಗೂ ಜೆಡಿಎಸ್’ನ ಎಲ್ಲಾ ಎಂಪಿಗಳು ಭಾಗವಹಿಸಿದ್ದರು. ಬಿಜೆಪಿಯ ಎಂಪಿಗಳು, ಮಂತ್ರಿಗಳು ಬರಲಿಲ್ಲ. ವಿರೋಧ ಪಕ್ಷದ ನಾಯಕರೂ ಬರಲಿಲ್ಲ,” ಎಂದು ದಿನದ ಬೆಳವಣಿಗೆಗಳ ಸಂಕ್ಷಿಪ್ತ ಮಾಹಿತಿ ನೀಡಿದರು.

“ಅವರ (ಸರ್ವಪಕ್ಷ) ಅಭಿಪ್ರಾಯ ಕೇಳಿದ ಮೇಲೆ ನಾವು ಕ್ಯಾಬಿನೆಟ್ ಸಭೆ ಸೇರಿ ಸುಧೀರ್ಘವಾಗಿ ಚರ್ಚೆ ನಡೆಸಿ ಒಂದು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಎರಡೂ ಸದನಗಳನ್ನು ಕರೆಯಬೇಕು ಎಂಬ ಇನ್ನೊಂದು ಪ್ರಮುಖ ಸಲಹೆಯೂ ಕೇಳಿ ಬಂತು. ಇವೆಲ್ಲದರ ಹಿನ್ನಲೆಯಲ್ಲಿ ಒಂದು ನಿರ್ಣಯವನ್ನು ಅಂಗೀಕಾರ ಮಾಡಿದ್ದೇವೆ. ಇದೊಂದು ಕ್ಯಾಬಿನೆಟ್ ನಿರ್ಧಾರ, ಸರ್ವಾನುಮತದಿಂದ ಇದನ್ನು ಅಂಗೀಕರಿಸಲಾಗಿದೆ,” ಎಂದು ಕ್ಯಾಬಿನೆಟ್ ನಿರ್ಧಾರವನ್ನು ಮಾಧ್ಯಮಗಳ ಮುಂದೆ ಓದಿ ಹೇಳಿದರು.

"ಮಾನ್ಯ ಸರ್ವೋಚ್ಛ ನ್ಯಾಯಾಲಯವು ದಿ.20.09.2016ರಂದು ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸರ್ಕಾರವು ಇಂದು ಸರ್ವಪಕ್ಷಗಳ ಸಭೆಯನ್ನು ಕರೆದು ಸವಿಸ್ತಾರವಾಗಿ ಚರ್ಚಿಸಿತು. ಸರ್ವಪಕ್ಷಗಳ ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ದಿ.23.09.2016ರಂದು ಬೆಳಿಗ್ಗೆ 11 ಗಂಟೆಗೆ ಉಭಯ ಸದನಗಳ ಸಭೆಯನ್ನು ಕರೆಯುವಂತೆ ಘನತೆವೆತ್ತ ರಾಜ್ಯಪಾಲರನ್ನು ಕೋರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯ್ತು. ಮುಂದುವರೆದು ಸದನದ ತೀರ್ಮಾನವಾಗುವವರೆಗೂ ನೀರು ಬಿಡುವ ವಿಚಾರವನ್ನು ಮುಂದೂಡಲಾಯ್ತು,” ಎಂದು ಸಚಿವ ಸಂಪುಟದ ನಿರ್ಣಯವನ್ನು ಓದಿ ಹೇಳಿದರು.

ಸದನದ ಅಂಗಳ ತಲುಪಿದ ‘ಕಾವೇರಿ’ ಚಂಡು

ಸಚಿವ ಸಂಪುಟದ ಈ ನಿರ್ಧಾರದೊಂದಿಗೆ ಇದೀಗ ಎಲ್ಲರ ಚಿತ್ತ ಶುಕ್ರವಾರ ನಡೆಯಲಿರುವ ಉಭಯ ಸದನಗಳ ಅಧಿವೇಶನದತ್ತ ನೆಟ್ಟಿದೆ.

ಒಂದೊಮ್ಮೆ ಈ ಅಧಿವೇಶನದಲ್ಲಿ ಸುಪ್ರಿಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ನೀರು ಬಿಡದಿರಲು ನಿರ್ಣಯ ಕೈಗೊಂಡರೆ ರಾಜ್ಯದಲ್ಲಿ ‘ಸಾಂವಿಧಾನಿಕ ಬಿಕ್ಕಟ್ಟು’ ಸೃಷ್ಟಿಯಾಗಲಿದೆ. ಒಂದೊಮ್ಮೆ ನೀರು ಬಿಟ್ಟರೆ ಜನರು ಏನು ಮಾಡುತ್ತಾರೆ ಎಂಬುದನ್ನೂ ಕಾದು ನೋಡಬೇಕಾಗಿದೆ. ಹೀಗಾಗಿ ಶುಕ್ರವಾರದ ಸದನ ಸದ್ಯಕ್ಕೆ ಕಾವೇರಿ ಭವಿಷ್ಯವನ್ನು ತೀರ್ಮಾನಿಸಲಿದೆ.

ಬುಧವಾರದ ಪ್ರಮುಖ ಬೆಳವಣಿಗೆಗಳು:

ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುವಂತೆ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರಿಂ ಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿ ಬುಧವಾರ ರಾಜ್ಯದಲ್ಲಿ ಹಲವು ಬೆಳವಣಿಗೆಗಳು ನಡೆದವು.

ಬೆಳಿಗ್ಗೆ ನಡೆದ ಮಂತ್ರಿ ಪರಿಷತ್ ಸಭೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಕೊನೆಗೊಂಡಿತು. ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯುಬೇಕು, ರಾಷ್ಟ್ರಪತಿಯನ್ನು ಭೇಟಿಯಾಗಬೇಕು, ಶನಿವಾರ ಒಂದು ದಿನದ ವಿಶೇಷ ಅಧಿವೇಶನ ಕರೆಯೋಣ ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು. ಕೊನೆಗೆ ಶುಕ್ರವಾರಕ್ಕೆ ಅಧಿವೇಶನ ಕರೆಯುವ ನಿರ್ಧಾರಕ್ಕೆ ಬರಲಾಯಿತು.

ದೇವೇಗೌಡ-ಸಿದ್ಧರಾಮಯ್ಯ ಸಮಾಲೋಚನೆ

ಶುಕ್ರವಾರ ಸದನದಲ್ಲಿ ‘ಕಾವೇರಿ ವಿವಾದ’; ಅಂತಿಮ ತೀರ್ಮಾನಕ್ಕೆ ಬರಲು ಸಂಪುಟ ಸಭೆ ವಿಫಲ

ಮಂತ್ರಿ ಪರಿಷತ್ ಸಭೆ ಬೆನ್ನಲ್ಲೇ ಸಲಹೆ ಪಡೆಯಲು ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭನಗರ ನಿವಾಸದ ಹೊಸ್ತಿಲನ್ನು ಮುಖ್ಯಮಂತ್ರಿ ದಾಟಿ ಬಂದರು. ದೇವೇಗೌಡರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ಸುಮಾರು ಒಂದು ಗಂಟೆ ಕಾಲ ಕಾವೇರಿ ನದಿ ನೀರಿನ ವಿವಾದ ಮತ್ತು ಸುಪ್ರೀಂಕೋರ್ಟ್ ತೀರ್ಪು ಕುರಿತು ಮಾತುಕತೆ ನಡೆಸಿದರು.  ಈ ಸಂದರ್ಭ ಮುಖ್ಯಮಂತ್ರಿಗಳಿಗೆ ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ ಮತ್ತು ಸಚಿವ ಮಹದೇವಪ್ಪ ಸಾಥ್ ನೀಡಿದರು. ಈ ವೇಳೆ ಬುಧವಾರ ಸಂಜೆ ನಡೆಯಲಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಸಿದ್ಧರಾಮಯ್ಯ ನೀಡಿದ ಆಹ್ವಾನವನ್ನು ದೇವೇಗೌಡರು ಸ್ವೀಕರಿಸಿ ಬರಲೊಪ್ಪಿದ್ದಾರೆ.

ಸಿದ್ಧರಾಮಯ್ಯ ಭೇಟಿ ಬಗ್ಗೆ ಮಾತನಾಡಿದ ದೇವೇಗೌಡರು"1996ರ ನಂತರ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ವಿಧಾನಸೌಧಕ್ಕೆ ತೆರಳಬೇಕಾದ ಸಂಧರ್ಭ ನಿರ್ಮಾಣವಾಗಿದೆ. ರಾಜ್ಯದ ಹಿತದೃಷ್ಠಿಗಾಗಿ ಐಕ್ಯತೆ ಸಂದೇಶ ರವಾನಿಸುವ ಉದ್ದೇಶದಿಂದ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ." ಎಂದು ತಿಳಿಸಿದರು.

ಸರ್ವಪಕ್ಷ ಸಭೆ

ಸಂಜೆ 6:00ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ಆರಂಭವಾಯಿತು. ಇದರಿಂದ ಪ್ರತಿಪಕ್ಷ ಬಿಜೆಪಿ ದೂರ ಉಳಿಯಿತು. ‘ಕಳೆದ ಸರ್ವಪಕ್ಷ ಸಭೆಯಲ್ಲಿ ತಾವು ನೀಡಿದ ಸಲಹೆಯನ್ನು ಸರಕಾರ ಸ್ವೀಕರಿಸಿಲ್ಲ,’ ಎಂದು ಕೇಸರಿ ಪಕ್ಷ ಸಬೂಬು ಹೇಳಿತ್ತು.

ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಕೇಂದ್ರ ಮಂತ್ರಿಗಳಾದ ಕೆ.ಎಚ್. ಮುನಿಯಪ್ಪ, ಆಸ್ಕರ್ ಫೆರ್ನಾಂಡಿಸ್, ರೆಹಮಾನ್ ಖಾನ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಸೇರಿದಂತೆ ಹಿರಿಯ ಅಧಿಕಾರಿಗಳು, ಕಾಂಗ್ರೆಸ್ ಸಂಸದರು, ಸಚಿವರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ಶಕ್ತಿ ಕೇಂದ್ರಕ್ಕೆ ಬಿಗಿ ಭದ್ರತೆ

ಹಲವು ಸುತ್ತಿನ ಚರ್ಚೆ, ಸಭೆಗಳು ನಡೆಯುತ್ತಿದ್ದುದರಿಂದ ರಾಜ್ಯದ ಆಡಳಿತ ನಿಯಂತ್ರಣ ಕೇಂದ್ರಕ್ಕೆ ವಿಶೇಷ ಭದ್ರತೆ ಒದಗಿಸಲಾಗಿತ್ತು. ಮಧ್ಯಾಹ್ನ ವೇಳೆ ಕನ್ನಡ ಪರ ಸಂಘಟನೆಗಳು ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದವು. ಆದರೆ ವಾಟಾಳ್ ನಾಗರಾಜ್ರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರಿಂದ ಪ್ರತಿಭಟನೆ ನಡೆಯಲಿಲ್ಲ.

ಇನ್ನು ಮಂಡ್ಯದಲ್ಲಿ ನಿಷೇದಾಜ್ಞೆ ನಡುವೆಯೂ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಶಾಂತಿಯುತ ಪ್ರತಿಭಟನೆಗಳು ನಡೆದವು. ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮನೆಗೆ ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಕೆಲ ಕಾಲ ತಡೆದೂ ತಮ್ಮ ಆಕ್ರೋಷ ಹೊರಹಾಕಿದರು.

ಖಡ್ಜು ಖಡಕ್ ಟ್ವೀಟ್

ಸುಪ್ರಿಂ ಕೋರ್ಟ್ ಆದೇಶದ ಚರ್ಚೆ ರಾಜ್ಯದಲ್ಲಿ ಜಾರಿಯಲ್ಲಿರುವಾಗಲೇ ಟ್ವೀಟ್ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ‘ಕಾನೂನು ಕತ್ತೆ’ ಎಂಬುದನ್ನು ದೀಪಕ್ ಮಿಶ್ರಾ ನಿಜವಾಗಿಸಿದ್ದಾರೆ ಎಂದು ಹೇಳಿದ್ದಾರೆ.

“ಕಾವೇರಿ ಜಲವಿವಾದ ಆದೇಶದ ಮೂಲಕ ನ್ಯಾಯಮೂರ್ತಿ ದೀಪಕ್ ಮಿಶ್ರಾ ಡಿಕೆನ್ಸ್ರ ‘ಕಾನೂನು ಕತ್ತೆ’ (‘Oliver Twist’ನ “The law is a ass”) ಎಂಬ ಮಾತನ್ನು ನಿಜವಾಗಿಸಿದ್ದಾರೆ,” ಎಂದು ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಸದನದಲ್ಲಿ ‘ಕಾವೇರಿ ವಿವಾದ’; ಅಂತಿಮ ತೀರ್ಮಾನಕ್ಕೆ ಬರಲು ಸಂಪುಟ ಸಭೆ ವಿಫಲ

ನ್ಯಾಯದಾನ ಏಕಪಕ್ಷೀಯವಾದ ಸಂದರ್ಭಗಳಲ್ಲಿ ಇಂಗ್ಲಿಷ್‌ನಲ್ಲಿ ಈ ನುಡಿಗಟ್ಟನ್ನು ಬಳಸುವುದು ಸಾಮನ್ಯ. ಈಗ ಮಾರ್ಕಂಡೇಯ ಖಟ್ಜು ಕೂಡಾ ಇದೇ ವಾಕ್ಯವನ್ನು ದೀಪಕ್ ಮಿಶ್ರಾ ಆದೇಶವನ್ನು ಟೀಕಿಸಲು ಬಳಸಿದ್ದಾರೆ. ಈ ಮೂಲಕ ಕಾವೇರಿ ವಿಚಾರದಲ್ಲಿ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಉದಯ್‌ ಲಲಿತ್‌ ಪೀಠ ಏಕಪಕ್ಷೀಯ ಆದೇಶ ನೀಡಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.