samachara
www.samachara.com
ಕೇಂದ್ರದ ಅಂಗಳಕ್ಕೆ 'ಕಾವೇರಿ ಚೆಂಡು'; 42 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸುಪ್ರಿಂ ಸೂಚನೆ
ಕಾವೇರಿ ವಿವಾದ

ಕೇಂದ್ರದ ಅಂಗಳಕ್ಕೆ 'ಕಾವೇರಿ ಚೆಂಡು'; 42 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸುಪ್ರಿಂ ಸೂಚನೆ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಜತೆಗೆ ಸೆಪ್ಟೆಂಬರ್ 21ರಿಂದ 27ರವರೆಗೆ ತಮಿಳುನಾಡಿಗೆ ದಿನಕ್ಕೆ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆಯೂ ಕರ್ನಾಟಕ ಸರಕಾರಕ್ಕೆ ಕೋರ್ಟ್ ಆದೇಶ ನೀಡಿದೆ.

4 ವಾರಗಳ ಒಳಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಸಮಿತಿ ರಚಿಸಿದ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸುವಂತೆ ನ್ಯಾ. ದೀಪಕ್ ಮಿಶ್ರಾ, ನ್ಯಾ. ಲಲಿತ್ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ.

ನದಿ ನೀರು ಹಂಚಿಕೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ನಲ್ಲಿ ಮಂಗಳವಾರ ಸುದೀರ್ಘ ವಿಚಾರಣೆ ನಡೆಯಿತು. ಮಧ್ಯಾಹ್ನ ಆರಂಭಗೊಂಡ ವಿಚಾರಣೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಸರಕಾರದ ವಾದ-ಪ್ರತಿವಾದವನ್ನು ಆಲಿಸಿ, ಕೋರ್ಟ್ ಈ ಆದೇಶ ನೀಡಿದೆ.

ಕರ್ನಾಟಕದ ಪರವಾಗಿ ಹಿರಿಯ ವಕೀಲರಾದ ಫಾಲಿ ಎಸ್ ನಾರಿಮನ್ ವಾದ ಮಂಡಿಸಿದರು. ರಾಜ್ಯದ ಪರವಾಗಿ ಮತ್ತೊಬ್ಬ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಲು ಯತ್ನಿಸಿದರಾದರೂ ಅವರಿಗೆ ಅವಕಾಶ ನಿರಾಕರಿಸಲಾಯಿತು. ಮುಖ್ಯವಾಗಿ ನಮಗೆ ತಾತ್ಕಾಲಿಕ ಆದೇಶ ನೀಡಬೇಡಿ ಎಂದು ನ್ಯಾಯಪೀಠದ ಮುಂದೆ ಕರ್ನಾಟಕ ವಾದಿಸಿತು. ಈ ವೇಳೆ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಕೋರ್ಟ್ ಹಾಲ್ ನಲ್ಲೇ ಉಪಸ್ಥಿತರಿದ್ದರು.

ಸುಪ್ರಿಂ ಕೋರ್ಟ್ ಆದೇಶದ ಕುರಿತು ಟಿವಿ9 ಜೊತೆ ಮಾತನಾಡಿದ ಕರ್ನಾಟಕದ ವಕೀಲ ಆರ್.ಎಸ್.ರವಿ, “ನಾವು ಸೂಪರ್ ವೈಸರಿ ಕಮಿಟಿಯ ತೀರ್ಮಾನವನ್ನು ವಿರೋಧಿಸಿ ವಾದ ಮಂಡಿಸಿದ್ದೆವು. ಮುಖ್ಯವಾಗಿ ಸಮಿತಿ ಬಿಡಲು ಹೇಳಿದ 3,000 ಕ್ಯೂಸೆಕ್ಸ್ ನೀರು ಬಿಡಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚು ನೀರು ಬಿಡಿ ಎಂದರೆ ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ಪರವಾಗಿ ಫಾಲಿ ಎಸ್ ನಾರಿಮನ್ ಸಮರ್ಥವಾಗಿ ವಾದ ಮಂಡಿಸಿದರು. ಕಾವೇರಿ ನೀರು ನಿರ್ವಹಣಾ ಮಂಡಳಿಗೂ ಕರ್ನಾಟಕ ವಿರೋಧ ವ್ಯಕ್ತಪಡಿಸಿತು,” ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕಾವೇರಿ ನೀರು ನಿರ್ವಹಣಾ ಮಂಡಳಿ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಿರ್ವಹಣಾ ಮಂಡಳಿ ರಚನೆಯಾಗುತ್ತಿದ್ದಂತೆ ಕಾವೇರಿ ಕೊಳ್ಳದ ಕೆಆರ್ಎಸ್, ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳ ನಿಯಂತ್ರಣ ಮಂಡಳಿಯ ಪಾಲಾಗಲಿದೆ. ಈ ಮಂಡಳಿ ನೀರು ಬಿಡುವ ತೀರ್ಮಾನಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲಿದೆ. ನಿರ್ವಹಣಾ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಕೇಂದ್ರ ಸರಕಾರ ನೇಮಿಸಲಿದೆ. ಜೊತೆಗೆ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯದ ಪ್ರತಿನಿಧಿಗಳು ಈ ಮಂಡಳಿಯಲ್ಲಿ ಸದಸ್ಯರಾಗಿ ಇರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಜಯಲಲಿತಾ ಉತ್ತಮ ಸಂಬಂಧದಿಂದ ಇಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗಲಿದೆಯಾ ಎಂಬ ಭಯ ಕಾವೇರಿ ಕೊಳ್ಳದ ಜನರಲ್ಲಿ ಮೂಡಿದೆ.

ಈ ಹಿಂದಿನಿಂದಲೂ ತಮಿಳುನಾಡು ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಆದರೆ ಕೇಂದ್ರ ಸರಕಾರದ ಮೇಲಿನ ತಮಿಳುನಾಡು ಸರಕಾರದ ಪ್ರಭಾವದ ಹಿನ್ನಲೆಯಲ್ಲಿ ಕರ್ನಾಟಕ ಮಂಡಳಿಯ ರಚನೆಗೆ ಆರಂಭದಿಂದಲೇ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಇದೀ ಮಂಡಳಿ ರಚನೆಗೆ ಆದೇಶ ನೀಡಿರುವುದರಿಂದ, ಮಂಡಳಿಯ ತೀರ್ಮಾನಗಳ ಮೇಲೆ ಕಾವೇರಿ ಕೊಳ್ಳದ ರೈತರ ಭವಿಷ್ಯ ನಿಂತಿದೆ.

ಇನ್ನು ಸೆಪ್ಟೆಂಬರ್ 21ರಿಂದ 30ರ ತನಕ 3,000 ಕ್ಯೂಸೆಕ್ಸ್ ನೀರು ಹರಿಸುವಂತೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ಅವರು ಕರ್ನಾಟಕಕ್ಕೆ ಸೋಮವಾರ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೆಂಗಳೂರು ಮತ್ತು ಮಂಡ್ಯದಲ್ಲಿ ಮುಂಜಾಗ್ರತೆ ಕ್ರಮ

ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಸೆ.20, 21ರಂದು ಮದ್ಯದಂಗಡಿಗಳನ್ನು ತೆರೆಯದಂತೆ ಆದೇಶಿಸಲಾಗಿದೆ. ರಾಜ್ಯ ಮೀಸಲು ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ನಗರ ಶಸಸ್ತ್ರ ಮೀಸಲು ಪಡೆ ಸೇರಿದಂತೆ ಹದಿನೈದು ಸಾವಿರ ಪೊಲೀಸರನ್ನು ಬೆಂಗಳೂರು ನಗರದಲ್ಲಿ ಭದ್ರತೆಗೆ ನೇಮಿಸಲಾಗಿದೆ.

ಸೆ.25ರವರೆಗೆ ರಾಜಧಾನಿಯಲ್ಲಿ ಸೆಕ್ಷನ್ 144 ಹೇರಲಾಗಿದೆ. ಮಂಡ್ಯದಲ್ಲಿ ಕಳೆದ 15 ದಿನಗಳಿಂದ ಜಿ ಮಾದೇಗೌಡ ನೇತೃತ್ವದ ಕಾವೇರಿ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸುತ್ತಿದೆ.

ಸುಪ್ರಿಂ ತೀರ್ಪಿಗೆ ವಿರೋಧ

ಸುಪ್ರಿಂ ಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಜನಶಕ್ತಿ ಸಂಘಟನೆ, “ಕಾವೇರಿ ಕುರಿತ ಸುಪ್ರೀಂಕೋರ್ಟಿನ ತೀರ್ಪು ತಿರಸ್ಕರಿಸಲು ಸಾಂವಿಧಾನಿಕ ಮತ್ತು ನ್ಯಾಯಿಕ ಕಾರಣಗಳಿವೆ,” ಅಂತ ಹೇಳಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜನಶಕ್ತಿ ಸಂಘಟನೆ, “ಕಾವೇರಿ ವಿವಾದದ ಬಗ್ಗೆ ಇಂದು ಸುಪ್ರೀಂ ಕೋರ್ಟು ನೀಡಿರುವ ತೀರ್ಮಾನ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಅಸಾಂವಿಧಾನಿಕ ಮತ್ತು ನ್ಯಾಯಬಾಹಿರವಾಗಿದ್ದು, ಒಕ್ಕೂಟ ವ್ಯವಸ್ಥೆಯಲ್ಲೂ ತಿರಸ್ಕರಿಸಲು ಯೋಗ್ಯವಾಗಿದೆ,” ಎಂದು ಹೇಳಿದೆ.

“ಕಾವೇರಿ ಮೇಲುಸ್ತುವಾರಿ ಮಂಡಳಿ ಮಳೆ ಪ್ರಮಾಣ, ಡ್ಯಾಂಗಳ ನೀರಿನ ಮಟ್ಟ, ನೀರಿನ ಹರಿವು , ಅಗತ್ಯ ಇತ್ಯಾದಿಗಳೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಂಕಿ ಅಂಶಗಳ ಸಮೇತ ದಿನವಿಡೀ ಕೂತುಕೊಂಡು ಚರ್ಚೆ ಮಾಡಿ ಒಂದು ಸೂತ್ರ ಮತ್ತು ಆಧಾರದನ್ವಯ ದಿನಕ್ಕೆ ೩,೦೦೦ ಕ್ಯೂಸೆಕ್ಸ್ ಬಿಡಬೇಕೆಂದು ತೀರ್ಮಾನ ಕೊಟ್ಟಿತು. ಇದು ಸಹ ಸರಿಯಲ್ಲ ಎಂದು ಅದಕ್ಕೆ ಬೇಕಾದ ವೈಜ್ಞಾನಿಕ ತರ್ಕ ಮತ್ತು ಅಂಕಿ ಅಂಶಗಳನ್ನು ಕೊಟ್ಟು ಎರಡೂ ರಾಜ್ಯಗಳು ವಾದಿಸಬಹುದು.  ಅವುಗಳಲ್ಲಿರುವ ಅಂಶಗಳು ಮನವರಿಕೆಯಾಗುವಂತೆ ಇದ್ದರೆ ಮಾತ್ರ ಮೇಲುಸ್ತುವಾರಿ ಸಮಿತಿ ಕೊಟ್ಟ ತೀರ್ಮಾನವನ್ನೂ ಸಹ ಉನ್ನತ ನ್ಯಾಯ ಸ್ಥಾನವಾದ ಸುಪ್ರೀಂ ಕೋರ್ಟು ಬದಲಿಸುವ ಅಧಿಕಾರವನ್ನು ಹೊಂದಿದೆ.”

ಆದರೆ “ಸುಪ್ರಿಂ ಕೋರ್ಟ್ ಗಣಿತದ ಲೆಕ್ಕಚಾರದಲ್ಲಿ ನೀರು ಬಿಡಲು ಆದೇಶ ನೀಡಿದೆ. ಯಾವುದನ್ನು ಆಧಾರವಾಗಿಟ್ಟುಕೊಂಡು ನೀರು ಬಿಡಲು ಹೇಳಿದ್ದೇವೆ ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಿಲ್ಲ,” ಎಂದು ತಮ್ಮ ಅಸಮಧಾನ ವ್ಯಕ್ತಪಡಿಸುತ್ತಾರೆ ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕರ್ತರಾದ ಡಾ. ವಾಸು.

ಕಾವೇರಿ ನಿರ್ವಹಣಾ ಮಂಡಳಿಗೂ ವಿರೋಧ

ಈ ತೀರ್ಪಿನಲ್ಲಿ ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಲಿ ರಚಿಸಬೇಕೆಂದಿರುವುದೂ ಎಲ್ಲಕ್ಕಿಂತ ಅಸಾಂವಿಧಾನಿಕ ಮತ್ತು ಅನ್ಯಾಯಯುತವಾದ ಆದೇಶ ಅಂತ ಅದು ಹೇಳಿದೆ.

“ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಎನ್ನುವುದು ನ್ಯಾಯಮಂಡಲಿಯ ಅಂತಿಮ ಆದೇಶಗಳಲ್ಲಿ ಒಂದು. ಕರ್ನಾಟಕ ಮತ್ತು ತಮಿಳುನಾಡು ಎರಡೂ ಕೂಡ ಇಡೀ ಈ ಅಂತಿಮ ಆದೇಶವನ್ನೇ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿವೆ. ಸುಪ್ರೀಂ ಕೋರ್ಟು ಮೇಲ್ಮನವಿಯನ್ನು ಅಂಗೀಕರಿಸಿರುವುದಲ್ಲದೆ ಅದನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿಯ ರಚನೆಯೂ ಒಳಗೊಂಡಂತೆ ಇಡೀ ಅಂತಿಮ ಆದೇಶ ಈಗ ದ್ವಿಸದಸ್ಯ ಪೀಠಕ್ಕಿಂತ ಉನ್ನತವಾದ ತ್ರಿಸದಸ್ಯ ಪೀಠದ ಮುಂದಿದೆ. ಹೀಗಿರುವಾಗ ಕಾವೇರಿ ಮಂಡಲಿ ರಚಿಸಲು ದ್ವಿಸದಸ್ಯ ಪೀಠ ತೀರ್ಮಾನ ಕೊಟ್ಟಿರುವುದೇ ಅಸಾಂವಿಧಾನಿಕ.” ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಹೇಳಿದೆ.

"ಕರ್ನಾಟಕ ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕು. ಎಲ್ಲಾ ಎಂಪಿ ಮತ್ತು ಶಾಸಕರ ನಿಯೋಗ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಬಳಿ. ಯಾವ ಕಾರಣಕ್ಕೂ ತ್ರಿಸದಸ್ಯ ಪೀಠದ ಆದೇಶ ಬರುವ ತನಕ ಕಾವೇರಿ ನಿರ್ವಹಣಾ ಮಂಡಳಿ ಆಗಕೂಡದೆಂದು ಒತ್ತಾಯ ಪಡಿಸಬೇಕು; ಒಪ್ಪದಿದ್ದರೆ ಸಾಮೂಹಿಕ ರಾಜೀನಾಮೆ ನೀಡಬೇಕು. ಪ್ರಧಾನಿಯವರು ಯಾವ ಕಾರಣಕ್ಕೂ ಈಗಲೇ ಕಾವೇರಿ ಮಂಡಳಿ ಸಾಧ್ಯ್ಯವಿಲ್ಲವೆಂದು ಸುಪ್ರಿಂ ಕೋರ್ಟಿಗೆ ಅಫಿಡವಿಟ್ ಮಂಡಿಸಲು ಆಗ್ರಹಿಸಬೇಕು. ತಜ್ಞರ ಸಮಿತಿ ಭೇಟಿ ಮಾಡಿ ಮರು ಪರಿಶೀಲನೆ ಮಾಡದ ಹೊರತು ೬೦೦೦ ಕ್ಯುಸೆಕ್ಸ್ ಹರಿಸುವುದಿಲ್ಲವೆಂಬ ತೀರ್ಮಾನವನ್ನು ಕರ್ನಾಟಕ ಸರಕಾರ ತೆಗೆದುಕೊಳ್ಳಬೇಕು," ಎಂದು ಸಂಘಟನೆ ಆಗ್ರಹಿಸಿದೆ.