ಕಾವೇರಿಗೆ ‘ಗೌಡರ ಗಂಗಾ ಸೂತ್ರ’: ಮೋದಿ ಮಧ್ಯಸ್ಥಿಕೆಯ ಅಗತ್ಯವನ್ನು ನೆನಪು ಮಾಡಿಕೊಟ್ಟ ಮಾಜಿ ಪ್ರಧಾನಿ!
ಕಾವೇರಿ ವಿವಾದ

ಕಾವೇರಿಗೆ ‘ಗೌಡರ ಗಂಗಾ ಸೂತ್ರ’: ಮೋದಿ ಮಧ್ಯಸ್ಥಿಕೆಯ ಅಗತ್ಯವನ್ನು ನೆನಪು ಮಾಡಿಕೊಟ್ಟ ಮಾಜಿ ಪ್ರಧಾನಿ!

ಇವತ್ತಿಗೂ ಭಾರತದಲ್ಲಿ ಜಲವಿವಾದಗಳು ಎದ್ದಾಗ ದೇವೇಗೌಡರ ಹೆಸರು ಅಲ್ಲಲ್ಲಿ ಕೇಳಿ ಬರುತ್ತದೆ. ಅದಕ್ಕೆ ಕಾರಣ ಗೌಡರು ಪ್ರಧಾನಿಯಾಗಿದ್ದಾಗ ಬಗೆಹರಿಸಿದ ಅಂತರಾಷ್ಟ್ರೀಯ ಮಟ್ಟದ ಭಾರತ-ಬಾಂಗ್ಲಾದೇಶ ನಡುವಿನ ಗಂಗಾ ಜಲವಿವಾದ.

‘ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು’; ಹೀಗೊಂದು ಅಭಿಪ್ರಾಯ ಜಾರಿಯಲ್ಲಿರುವ ಹೊತ್ತಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹಳೆಯ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ. "ಗಂಗಾ ನದಿ ವಿಚಾರದಲ್ಲಿ ನಾನು ಮಾಡಿದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಗೆ ಕಾವೇರಿ ವಿಚಾರದಲ್ಲಿ ಮಾಡಲು ಯಾಕೆ ಸಾಧ್ಯವಿಲ್ಲ?” ಎಂದು ‘ಎಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ಕಾವೇರಿ ಜಲವಿವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದ ಅಗತ್ಯವಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ. ನಾನು ಪ್ರಧಾನಿಯಾಗಿದ್ದಾಗ 1996ರಲ್ಲಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿಗಳ ಸಭೆ ಕರೆದಿದ್ದೆ. ಇದರಲ್ಲಿ ನರ್ಮಾದಾ ಅಣೆಕಟ್ಟಿನ ಎತ್ತರಕ್ಕೆ ಸಂಬಂಧಿಸಿದ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡೆವು. ಉತ್ತರಖಂಡದ ‘ತೆಹ್ರಿ ಡ್ಯಾಂ’ ಕಟ್ಟುವ ಸಂದರ್ಭ ನಾನು ಪರಿಸರವಾದಿ ಸುಂದರಲಾಲ್ ಬಹುಗುಣರನ್ನು ಭೇಟಿಯಾಗಿ 'ಭೂ ಕುಸಿತ ಸುರಕ್ಷಾ ತಂತ್ರಜ್ಞಾನ'ವನ್ನು ಮನವರಿಕೆ ಮಾಡಿ ಯೋಜನೆ ಮುಂದುವರಿಸುವಲ್ಲಿ ಸಹಕರಿಸಿದ್ದೆ. ಇದೇ ಆಸಕ್ತಿ, ಉತ್ಸಾಹವನ್ನು ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾಕೆ ತೋರಿಸುತ್ತಿಲ್ಲ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇವತ್ತಿಗೂ ಭಾರತದಲ್ಲಿ ಜಲವಿವಾದಗಳು ಎದ್ದಾಗ ದೇವೇಗೌಡರ ಹೆಸರು ಅಲ್ಲಲ್ಲಿ ಕೇಳಿ ಬರುತ್ತದೆ. ಅದಕ್ಕೆ ಕಾರಣ ಗೌಡರು ಪ್ರಧಾನಿಯಾಗಿದ್ದಾಗ ಬಗೆಹರಿಸಿದ ಅಂತರಾಷ್ಟ್ರೀಯ ಮಟ್ಟದ ಭಾರತ-ಬಾಂಗ್ಲಾದೇಶ ನಡುವಿನ ಗಂಗಾ ಜಲವಿವಾದ.

ಗಂಗಾ ಜಲ ವಿವಾದ:

ನೇಪಾಳದಲ್ಲಿ ಹುಟ್ಟುವ ಗಂಗೆ ತನ್ನ 2,525 ಕಿಲೋಮೀಟರ್ ಉದ್ದದ ದಾರಿಯಲ್ಲಿ ಬಾಂಗ್ಲಾದಲ್ಲಿ 113 ಕಿಲೋಮೀಟರ್ ಹರಿಯುತ್ತದೆ. ಭಾರತ ಮತ್ತು ಬಾಂಗ್ಲಾ ನಡುವೆ 129 ಕಿಲೋಮೀಟರ್ ಉದ್ದದ ಗಂಗಾ ನದಿ ಗಡಿಯೂ ಇದೆ. ಹೀಗಾಗಿ ಗಂಗಾ ನೀರಿನಲ್ಲಿ ಬಾಂಗ್ಲಾದೇಶಕ್ಕೂ ಪಾಲು ಪಡೆಯುವ ಹಕ್ಕಿದೆ.

ಬಾಂಗ್ಲಾ ಮತ್ತು ಭಾರತದ ನಡುವೆ ಜಲ ವಿವಾದಗಳು ನಡೆಯುತ್ತಲೇ ಬಂದಿತ್ತಾದರೂ, ನಿಜವಾದ ಸಮಸ್ಯೆ ಆರಂಭವಾಗಿದ್ದು 1974ರಲ್ಲಿ; ಬಾಂಗ್ಲಾ ಗಡಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ 'ಫರಕ್ಕಾ ಬ್ಯಾರೇಜ್' ನಿರ್ಮಾಣ ಮಾಡಿದ ಭಾರತ ಗಂಗೆಯ ಚಲನೆಯನ್ನೇ ಬದಲಾಯಿಸಲು ಹೊರಟಿತು. ಬ್ಯಾರೇಜಿನ ನೀರನ್ನು ಭಾಗೀರಥಿ ನದಿಗೆ ಹರಿಸಿ ಅಲ್ಲಿಂದ ಬರಗಾಲದ ಸಂದರ್ಭ ಹೂಗ್ಲಿ ನದಿಗೆ ಹರಿಸುವ ಮುಂದಾಲೋಚನೆಯಲ್ಲಿ ಭಾರತ ಈ ಅಣೆಕಟ್ಟನ್ನು ನಿರ್ಮಾಣ ಮಾಡಿತ್ತು.

ಬಾಂಗ್ಲಾದೇಶ ತಗಾದೆ:

ಬಾಂಗ್ಲಾದೇಶಕ್ಕೆ ಗಂಗೆಯೂ ಸೇರಿ ಒಟ್ಟು 54 ನದಿಗಳು ಭಾರತದಿಂದ ಹರಿಯುತ್ತವೆ. ಹಲವು ನದಿಗಳು ಮುಂದೆ ಗಂಗೆಯನ್ನೇ ಸೇರಿ ಒಟ್ಟಾರೆ 350 ಕಿಲೋಮೀಟರ್ ಉದ್ಧದ ನದಿ ಮುಖಜ ಭೂಮಿ ಸೃಷ್ಟಿಯಾಗುತ್ತದೆ; ಇದು ಬಾಂಗ್ಲಾದ ಅತೀ ದೊಡ್ಡ ಸಂಪತ್ತು. ಹೀಗಾಗಿ ಗಂಗಾ ನದಿಯಿಂದ ಸ್ವಲ್ಪ ಏರುಪೇರಾದರೂ ಬಾಂಗ್ಲಾಗೆ ಅದು ದೊಡ್ಡ ನಷ್ಟ ಉಂಟು ಮಾಡುವುದರಲ್ಲಿ ಅನುಮಾನವೇ ಇರಲಿಲ್ಲ.

ಇದನ್ನು ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ 'ಫರಕ್ಕಾ ಬ್ಯಾರೇಜ್' ಕೆಲಸ ಆರಂಭವಾಗುವುದಕ್ಕೂ ಮೊದಲು ಭಾರತ ಮತ್ತು ಬಾಂಗ್ಲಾ ನಡುವೆ ದ್ವಿಪಕ್ಷೀಯ ಒಪ್ಪಂದ ಏರ್ಪಟ್ಟಿತು. ಭಾರತದ ಪ್ರಧಾನಿ ಇಂದಿರಾಗಾಂಧಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಕ್ ಮುಜಿಬುರ್ ರೆಹ್ಮಾನ್ ನಡುವೆ ನದಿ ನೀರಿನ ಹಂಚಿಕೆಗಾಗಿ ‘ಜಂಟಿ ನದಿ ಆಯೋಗ’ ರಚಿಸುವ ಒಪ್ಪಂದ ಏರ್ಪಟ್ಟಿತು.

ಆದರೆ ಸೆಪ್ಟೆಂಬರ್ 1976ರಲ್ಲಿ ಶೇಖ್ ಮುಜಿಬುರ್ ರೆಹಮಾನ್ ಸಾವಿನ ನಂತರ ಒಪ್ಪಂದ ಮುರಿದು ಬಿತ್ತು. ಮತ್ತೆ ವಿವಾದ ಹುಟ್ಟಿಕೊಂಡಿತು. ಮುಂದೆ 1977ರಲ್ಲಿ ಉಭಯ ದೇಶಗಳ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ ಮತ್ತು ಝಯಾಉರ್ ರೆಹಮಾನ್ ನಡುವೆ ನಡೆದ ಐದು ವರ್ಷಗಳ ಅವಧಿಯ ಒಪ್ಪಂದ. ಅದೂ 1982ರಲ್ಲಿ ಕೊನೆಯಾಯಿತು.

ಮತ್ತೆ ಯಥಾ ಪ್ರಕಾರ ವಿವಾದ ಆರಂಭವಾಯಿತು. ಭಾರತ ವಿರುದ್ಧ ಬಾಂಗ್ಲಾದೇಶ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಲಾಬಿ ಮಾಡಲು ಆರಂಭಿಸಿತು. ಹೀಗಿದ್ದಾಗಲೇ, ಕೆಲವೇ ತಿಂಗಳುಗಳ ಕಾಲ ಪ್ರಧಾನಿಯಾದ ದೇವೇಗೌಡರು ಅಷ್ಟೂ ವಿವಾದಗಳಿಗೆ ಒಂದೇ ಏಟಿಗೆ ಅಂತ್ಯಹಾಡಿದ್ದರು.

ಐತಿಹಾಸಿಕ ‘ಕರಾರು 1996’:

1996ರಲ್ಲಿ ಶೇಖ್ ಮುಜಿಬುರ್ ರೆಹಮಾನ್ ಪುತ್ರಿ ಶೇಖ್ ಹಸೀನಾ ಆಡಳಿತಕ್ಕೆ ಬರುತ್ತಿದ್ದಂತೆ ನಿಂತುಹೋಗಿದ್ದ ಭಾರತ ಮತ್ತು ಬಾಂಗ್ಲಾ ನಡುವಿನ ಮಾತುಕತೆಗಳು ಮತ್ತೆ ಚಾಲ್ತಿಗೆ ಬಂದವು. ಅಕ್ಟೋಬರ್ 29ರಿಂದ ಭಾರತ ಮತ್ತು ಬಾಂಗ್ಲಾ ನಡುವೆ ಹೊಸ ಬಿರುಸಿನ ಮಾತುಕತೆಗಳು ಆರಂಭವಾದವು. ಬಾಂಗ್ಲಾದೇಶದ ಜಲಸಂಪನ್ಮೂಲ ಮಂತ್ರಿ ಅಬ್ದುಲ್ ರಝಾಕ್ ತಮ್ಮ ತಂಡದೊಂದಿಗೆ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಜಲಸಂಪನ್ಮೂಲ ಸಚಿವ ಜನೇಶ್ವರ್ ಮಿಶ್ರಾ ಜತೆಗೆ ಮಾತುಕತೆ ನಡೆಸಿದರು.


       ಭಾರತ ಮತ್ತು ಬಾಂಗ್ಲಾ ನಡುವೆ ನಡೆದ ಕರಾರಿನ ನೀರು ಹಂಚಿಕೆ ಸೂತ್ರ
ಭಾರತ ಮತ್ತು ಬಾಂಗ್ಲಾ ನಡುವೆ ನಡೆದ ಕರಾರಿನ ನೀರು ಹಂಚಿಕೆ ಸೂತ್ರ

ಚರ್ಚೆಗಳು, ಸಂಧಾನ ಮಾತುಕತೆಗಳು ನಿತಂತರವಾಗಿ ನಡೆಯಿತು. ಕೊನೆಗೆ ನವದೆಹಲಿಯಲ್ಲಿ ಡಿಸೆಂಬರ್ 12ರಂದು ಶೇಖ್ ಹಸೀನಾ ಮತ್ತು ಭಾರತದ ಪ್ರಧಾನಿ ಎಚ್.ಡಿ ದೇವೇಗೌಡ ಮಹತ್ವದ ಕರಾರಿಗೆ ಸಹಿ ಹಾಕಿದರು; ಹಿಂದಿನ ಒಪ್ಪಂದಗಳಿಗೆ ಬದಲಾಗಿ ಈ ಬಾರಿ ಹೆಚ್ಚು ಪ್ರಾಮುಖ್ಯವಿರುವ ‘ಕರಾರು’ ಪತ್ರಕ್ಕೆ ಎರಡೂ ದೇಶಗಳು ಮುಂದಾಗಿದ್ದವು. 30 ವರ್ಷಗಳ ನದಿ ನೀರು ಹಂಚಿಕೆಯ ಕರಾರು ಜಾರಿಗೆ ಬಂತು. ನದಿ ಪಾತ್ರದ ಕೆಳಗಿರುವ ಬಾಂಗ್ಲಾದೇಶದ ನೀರಿನ ಹಕ್ಕನ್ನು ಭಾರತ ಗೌರವಿಸಿತು. ಇಡೀ ಕರಾರಿನಲ್ಲಿ ಪಶ್ಚಿಮ ಬಂಗಾಳ, ಭಾರತ ಮತ್ತು ಬಾಂಗ್ಲಾದೇಶ ಯಾರಿಗೂ ನಷ್ಟವಾಗದಂತ ನಾಜೂಕಾಗಿ ಸಂಧಾನ ಸೂತ್ರ ಹೆಣೆಯಲಾಗಿತ್ತು. ಪ್ರತೀ ತಿಂಗಳಿನ ದಿನಗಳ ಲೆಕ್ಕದಲ್ಲಿ ಒಳಹರಿವಿನ ಆಧಾರದಲ್ಲಿ ನೀರಿನ ಹಂಚಿಕೆಗೆ ಕರಾರು ಮಾಡಿಕೊಳ್ಳಲಾಯಿತು. ಹೀಗೆ ದೀರ್ಘ ಕಾಲದ ವಿವಾದವೊಂದು ಅಂತ್ಯ ಕಂಡಿತು. ಅವತ್ತು ಜಾರಿಗೊಂಡ ಈ ಕರಾರು ಸಣ್ಣ ಪುಟ್ಟ ತಕರಾರುಗಳ ನಡುವೆ ಇವತ್ತಿಗೂ ಗಟ್ಟಿಯಾಗಿ ನಿಂತಿದೆ.

ಇಂಥಹದ್ದೊಂದು ಕರಾರಿಗೆ ಎರಡೂ ದೇಶಗಳ ರಾಜಕೀಯ ನೇತಾರರ ಇಚ್ಛಾಶಕ್ತಿಯೇ ಕಾರಣ ಎಂದು Conflict and Cooperation on South Asia's International Rivers ಪುಸ್ತಕದಲ್ಲಿ ಸಲ್ಮಾನ್ ಎಮ್.ಎ, ಸಲ್ಮಾನ್ ಮತ್ತು ಕಿಶೋರ್ ಉಪ್ರೆಟಿ ವಿಶ್ಲೇಷಣೆ ಮಾಡುತ್ತಾರೆ. ಬಹುಶಃ ಇದೇ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಗೆ ಏನು ಅಡ್ಡಿ ಎಂಬ ಪ್ರಶ್ನೆಯನ್ನು ಕಾವೇರಿ ಹೋರಾಟಗಾರರು ಕೇಳುತ್ತಿದ್ದಾರೆ.

ಅವತ್ತು ಈ ಸಂಧಾನದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಮತ್ತು ವಿದೇಶಾಂಗ ಮಂತ್ರಿ ಐ.ಕೆ ಗುಜ್ರಾಲ್ ಪ್ರಮುಖ ಪಾತ್ರ ವಹಿಸಿದ್ದರು. ‘ವಾರಗಟ್ಟಲೆ ಸಂಧಾನದ ನಂತರ ಕರಾರು ಏರ್ಪಟ್ಟಾಗ ಭಾರತದ ಎಲ್ಲಾ ಪಕ್ಷಗಳು ಸಂತೋಷಗೊಂಡರೇ ಬಿಜೆಪಿ ಮಾತ್ರ ಇದನ್ನು ವಿರೋಧಿಸಿತ್ತು’. ಎಂದು ತಮ್ಮ Relation of NDA & UPA with neighbours ಪುಸ್ತಕದಲ್ಲಿ ರಾಜ್ ಕುಮಾರ್ ಉಲ್ಲೇಖಿಸುತ್ತಾರೆ.

ಒಟ್ಟಾರೆ ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿರುವ ಹೊತ್ತಲ್ಲೇ ಪ್ರಧಾನಿಯಾಗಿ ತಾವು ನಿಭಾಯಿಸಿದ ಜಲವಿವಾದಗಳನ್ನು ದೇವೇಗೌಡರು ನೆನಪು ಮಾಡಿಕೊಂಡಿದ್ದಾರೆ. ಇದನ್ನು ನೋಡಿಯಾದರೂ ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡ್ತಾರಾ ಕಾದು ನೋಡಬೇಕು.