‘ಕ್ಯೂಸೆಕ್ಸ್ ಮೇಲೆ ಕ್ಯೂಸೆಕ್ಸ್ ಬರೆ’: ಮತ್ತೆ 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ತೀರ್ಮಾನ
ಕಾವೇರಿ ವಿವಾದ

‘ಕ್ಯೂಸೆಕ್ಸ್ ಮೇಲೆ ಕ್ಯೂಸೆಕ್ಸ್ ಬರೆ’: ಮತ್ತೆ 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ತೀರ್ಮಾನ

ನವದೆಹಲಿಯಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿಯಲ್ಲಿ ಇನ್ನೂ 10 ದಿನಗಳ ಕಾಲ ದಿನಕ್ಕೆ 3,000 ಕ್ಯೂಸೆಕ್ಸಿನಂತೆ ಒಟ್ಟು 2.72 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಆದೇಶ ನೀಡಿದೆ.

ಸೆಪ್ಟೆಂಬರ್ 21 ರಿಂದ 30 ರವರೆಗೆ ಮೂರು ಸಾವಿರ ಕ್ಯೂಸೆಕ್ಸಿನಂತೆ ಒಟ್ಟು 30,000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸುವಂತೆ ಸರಕಾರಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ಆದೇಶ ನೀಡಿದ್ದಾರೆ.

ಸೋಮವಾರ ಬೆಳಗ್ಗೆ 11.30ಕ್ಕೆ ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್‌ ನೇತೃತ್ವದಲ್ಲಿ ಸಭೆ ಆರಂಭವಾಯಿತು. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಸೇರಿದಂತೆ, ಕಾವೇರಿ ಕೊಳ್ಳದ ರಾಜ್ಯಗಳಾದ ತಮಿಳುನಾಡು, ಕೇರಳ, ಪುದುಚೇರಿಯ ಮುಖ್ಯಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇಂದಿನ ಸಭೆಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ನೀರು ಹರಿಸಿದ್ದೇವೆ ಎಂದು ಕರ್ನಾಟಕ ಮೇಲುಸ್ತುವಾರಿ ಸಮಿತಿಗೆ ಮಾಹಿತಿ ನೀಡಿತ್ತು. ಈ ವರ್ಷದ್ದೂ ಸೇರಿದಂತೆ ಕಳೆದ 29 ವರ್ಷಗಳ ನೀರಿನ ಬಳಕೆಯ ಸರಾಸರಿ ಮಾಹಿತಿಯನ್ನುಉಳಿದ ರಾಜ್ಯಗಳು ಕೇಳಿದ್ದವು. ಹೀಗಾಗಿ ಆ ಮಾಹಿತಿಗಳನ್ನು ಕರ್ನಾಟಕ ಸರಕಾರ ಸಭೆಯ ಮುಂದಿಟ್ಟಿತ್ತು. ಮುಖ್ಯವಾಗಿ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಬಳಸಿರುವ ನೀರಿನ ಪ್ರಮಾಣದ ಮಾಹಿತಿಗಳಿಗಾಗಿ ಉಳಿದ ರಾಜ್ಯಗಳು ಕೋರಿಕೆ ಸಲ್ಲಿಸಿದ್ದವು. “ವಾಸ್ತವ ಸ್ಥಿತಿಗಳ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರ ಸಭೆಯಲ್ಲಿ ಚರ್ಚೆ ನಡೆಸಿದೆ,” ಎನ್ನುತ್ತಾರೆ  ‘ಡಬ್ಲ್ಯೂಆರ್ಡಿಒ’ ಕಾವೇರಿ ಯುನಿಟ್ ಎಂಜಿನಿಯರ್ ರಮ್ಯ.

ಈ ಮಾಹಿತಿಗಳನ್ನು ಆಧರಿಸಿ ಸಭೆಯಲ್ಲಿ ಶಶಿಶೇಖರ್ ಕಾವೇರಿ ಒಳಹರಿವನ್ನು ಹಂಚಿಕೊಳ್ಳುವ ಸೂತ್ರವನ್ನು ಕರ್ನಾಟಕ ಮತ್ತು ತಮಿಳುನಾಡು ಮುಂದಿಟ್ಟಿದ್ದರು. ಅದರ ಆಧಾರದಲ್ಲಿ ಈ ಆದೇಶ ನೀಡಿದ್ದಾರೆ. "ಒಂದೊಮ್ಮೆ ಆದೇಶದ ಬಗ್ಗೆ ತಕರಾರುಗಳಿದ್ದರೆ ಸುಪ್ರಿಂ ಕೋರ್ಟ್ ಮೊರೆ ಹೋಗಲು ಅವಕಾಶಗಳಿವೆ," ಎಂದೂ ಅವರು ಹೇಳಿದ್ದಾರೆ. ನಾಳೆ ಸುಪ್ರಿಂ ಕೋರ್ಟಿನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರಣೆ ನಡೆಯಲಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಎದುರು ನೋಡಲಾಗುತ್ತಿದೆ.

ಬಂದ್ ಇಲ್ಲ, ಎಲ್ಲೆಲ್ಲೂ ಬಿಗಿ ಬಂದೋಬಸ್ತ್

ಸಭೆ ಹಿನ್ನಲೆಯಲ್ಲಿ ಸೋಮವಾರ ಬೆಂಗಳೂರು, ಮಂಡ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯವಾಗಿ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಾದ ಹೊಸೂರು ರಸ್ತೆ, ಮೈಸೂರು ರಸ್ತೆ, ರಾಜಾಜಿನಗರ, ವಿಜಯನಗರ, ಚಂದ್ರಾ ಲೇಔಟ್, ದೀಪಾಂಜಲಿನಗರ ಮತ್ತು ನೈಸ್ ರಸ್ತೆಯಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ಕಳೆದ ಸೋಮವಾರ ಇದೇ ಪ್ರದೇಶಗಳಲ್ಲಿ ಹೆಚ್ಚಿನ ಗಲಭೆ ಉಂಟಾಗಿದ್ದರಿಂದ ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇದಲ್ಲದೇ ಮಂಡ್ಯ, ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಆನೇಕಲ್ ಭಾಗದಲ್ಲೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. “ಕಾವೇರಿ ನದಿ ನೀರು ಹಂಚಿಕೆಯಲ್ಲಿ ಈ ಬಾರಿಯೂ ರಾಜ್ಯಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ. ರೈತರಿಗೆ ಆಗಿರುವ ನಷ್ಟಕ್ಕೆ ಸರಕಾರ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರು ದಂಗೆ ಏಳುತ್ತಾರೆ” ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಗುಡುಗಿದ್ದರು.

ಇನ್ನು ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದರಿಂದ ವಶಕ್ಕೆ ಪಡೆಯಲಾಗಿತ್ತು.

ಇನ್ನು ನಾಳೆ (ಮಂಗಳವಾರ) ಬಂದ್ ಇಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ತಿಳಿಸಿದ್ದಾರೆ. “ನಾಳೆ ಬಂದ್ ಇದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ,” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನು ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಮೇಘರಿಕ್ ಹೇಳಿದ್ದಾರೆ.

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ಬರುತ್ತಿದ್ದಂತೆ ಮಂಡ್ಯದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಹೋರಾಟಗಾರರು ನಗರದ ಸಂಜಯ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.