samachara
www.samachara.com
'ಕ್ಷಮಿಸು ಕಾವೇರಿ': ಈ ಹೊತ್ತಿನಲ್ಲಿ ಹಿರಿಯ ವಕೀಲ ಫಾಲಿ ನಾರಿಮನ್ ನಮಗೇಕೆ ಮುಖ್ಯವಾಗಬೇಕು?
ಕಾವೇರಿ ವಿವಾದ

'ಕ್ಷಮಿಸು ಕಾವೇರಿ': ಈ ಹೊತ್ತಿನಲ್ಲಿ ಹಿರಿಯ ವಕೀಲ ಫಾಲಿ ನಾರಿಮನ್ ನಮಗೇಕೆ ಮುಖ್ಯವಾಗಬೇಕು?

ಕಾವೇರಿ

ವಿಚಾರದಲ್ಲಿ ಟಿವಿ ಚಾನಲ್ಗಳು ಹೊತ್ತಿಸಿದ ಕಿಚ್ಚು ತಣ್ಣಗಾಗುತ್ತಿದ್ದಂತೆ 'ನಾರಿಮನ್ ಬದಲಾಯಿಸಿ' ಎಂಬ ಅರಚಾಟಗಳು ಶುರುವಾಗಿವೆ.

ಕಳೆದ ಮೂರು ದಶಕಗಳಿಂದ ಕರ್ನಾಟಕ ಹಲವು ಹಲವು ಜಲ ವಿವಾದಗಳಲ್ಲಿ, ಗಡಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಮುಂದೆ ವಾದ ಮಂಡಿಸುತ್ತ ಬಂದವರು 87 ವರ್ಷದ ಫಾಲಿ ಸ್ಯಾಮ್ ನಾರಿಮನ್.

ಇವರಿಗೆ ರಾಜ್ಯ ಸರಕಾರ ಕೋಟ್ಯಾಂತರ ರೂಪಾಯಿ ಶುಲ್ಕ ನೀಡಿದೆ; ಕಾವೇರಿಗಾಗಿ ನಡೆಯುತ್ತಿರುವ ನ್ಯಾಯಾಂಗ ಹೋರಾಟವನ್ನು ಕೆಲವರು 'ಅಕ್ಷಯ ಪಾತ್ರೆ' ಮಾಡಿಕೊಂಡಿದ್ದಾರೆ, ಸುಪ್ರಿಂ ಕೋರ್ಟ್ನಲ್ಲಿ ರಾಜ್ಯದ ಕಡೆಯಿಂದ ಸರಿಯಾಗಿ ವಾದ ಮಂಡಿಸಿಲ್ಲ, ರಾಜ್ಯದ ವಕೀಲರ ತಂಡ ಸೋತಿದೆ, ವಯಸ್ಸಾಗಿರುವ ನಾರಿಮನ್ ವಾದ ಮಾಡಲು ಅಸಮರ್ಥರು, ಹಿಂದೆ ತಮಿಳುನಾಡು ಜಯಲಲಿತಾಗೆ ವಕಾಲತ್ತು ವಹಿಸಿದ್ದವರು ನಾರಿಮನ್... ಹೀಗೆ ಹತ್ತು ಹಲವು ಬೀಸು ಆರೋಪಗಳನ್ನು ಅವರ ವಿರುದ್ಧ ಮಾಡಲಾಗುತ್ತಿದೆ.

ಈ ಸಮಯದಲ್ಲಿ 'ಸಮಾಚಾರ' ಕಾವೇರಿ ವಿಚಾರದಲ್ಲಿ ನಾರಿಮನ್ ಬದಲಾವಣೆ ಪರಿಣಾಮಗಳ ಕುರಿತು ಮತ್ತೊಂದು ಆಯಾಮವನ್ನು ಇಲ್ಲಿ ತೆರೆದಿಡುತ್ತಿದೆ.

ಭಾವನೆಗೆ ಬೆಲೆ:

ಕನ್ನಡ, ಕರ್ನಾಟಕ, ಕಾವೇರಿ ವಿಚಾರಗಳು ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಾವೇರಿ ಕೊಳ್ಳದ ಜಿಲ್ಲೆಗಳ ಮತ್ತು ಬೆಂಗಳೂರಿನ ಜನರಿಗೆ ಭಾವನಾತ್ಮಕ ವಿಚಾರಗಳು. ಇದರ ಸುತ್ತ ನಡೆದು ಬಂದ ಕಾನೂನು ಹೋರಾಟ, ಇತಿಹಾಸ ಮತ್ತು ವಾಸ್ತವಗಳನ್ನು ಮಾಧ್ಯಮಗಳೂ ಕೂಡ ಪಕ್ಕಕ್ಕಿಟ್ಟು, ಭಾವನಾತ್ಮಕ ಸಂಗತಿಯಾಗಿ ಬದಲಿಸಿದ್ದರ ಪರಿಣಾಮ ಕಣ್ಮುಂದೆ ಇದೆ; ಎರಡು ಹೆಣಗಳ ಚಿತೆ ಉರಿದಿದೆ. ಇದರ ನೆರಳಿನಲ್ಲಿಯೇ; ಕಾವೇರಿ ವಿಚಾರದಲ್ಲಿ ರಾಜ್ಯ ಕಾನೂನು ಹೋರಾಟ ನಡೆಸುವಲ್ಲಿ ಸೋತು ಹೋಗಿದೆ. ಹೀಗಾಗಿ ರಾಜ್ಯ ಪರವಾಗಿ ವಕಲಾಲತ್ತು ವಹಿಸುತ್ತಿರುವ ನಾರಿಮನ್ ಅವರನ್ನು ಬದಲಿಸಿ ಎಂಬ ಅರಚಾಟ ಶುರುವಾಗಿದೆ. ನಾರಿಮನ್ ನಿಜಕ್ಕೂ ಸೋತು ಹೋಗಿದ್ದಾರಾ? ಹೀಗೊಂದು ಪ್ರಶ್ನೆಯನ್ನು ದಿಲ್ಲಿಯಲ್ಲಿ ಹಿರಿಯ ವರದಿಗಾರರ ಮುಂದಿಟ್ಟರೆ ನೀಡುವ ಉತ್ತರ ಬೇರೆಯದೇ ಇದೆ.

"ಸಚಿನ್ ತೆಂಡೂಲ್ಕರ್ ಎಲ್ಲಾ ಪಂದ್ಯಗಳಲ್ಲಿಯೂ ಸೆಂಚುರಿ ಹೊಡೆದಿಲ್ಲ. ಭಾರತ ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿಲ್ಲ. ಹಾಗಂತ ತೆಂಡೂಲ್ಕರ್ ಒಳ್ಳೆ ಆಟಗಾರ ಅಲ್ಲ; ಭಾರತ ಒಳ್ಳೆ ತಂಡ ಅಲ್ಲ ಅಂತ ಹೇಳಲು ಸಾಧ್ಯವೇ?,'' ಎಂಬ ಪ್ರಶ್ನೆಯ ಜತೆಗೆ ಮಾತುಕತೆ ಆರಂಭಿಸಿದ ಅವರು, "ನಿಜ, ಸುಪ್ರಿಂ ಕೋರ್ಟ್ ಮತ್ತು ಅಲ್ಲಿ ನಡೆಯುತ್ತಿರುವ ಕಾನೂನು ಹೋರಾಟವನ್ನು ಕ್ರಿಕೆಟ್ ಪಂದ್ಯಗಳಿಗೆ ಹೋಲಿಸಬೇಕಾಗಿಲ್ಲ. ಆದರೆ ಸರಳ ಸಾಮಾನ್ಯ ಜ್ಞಾನ ಏನು ಎಂದರೆ, ನಾರಿಮನ್ ಈವರೆಗೆ ಕರ್ನಾಟಕಕ್ಕಾಗಿ ನಡೆಸಿದ ಕಾನೂನು ಹೋರಾಟಗಳಲ್ಲಿ ಬಹುತೇಕ ಸಫಲವಾಗಿವೆ ಎಂಬುದನ್ನು ಗಮನಿಸಬೇಕಿದೆ. ಅವರಿಂದಾಗಿಯೇ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ ಹರಿದು ಹೋಗುವ ನೀರಿನ ಪ್ರಮಾಣ 380 ಟಿಎಂಸಿಯಿಂದ 192 ಟಿಎಂಸಿಗೆ ಕಡಿಮೆಯಾಗಿದೆ ಎಂಬುದನ್ನು ಮರೆಯಬಾರದು,'' ಎನ್ನುತ್ತಾರೆ.

ಇದರ ಜತೆಗೆ, ಮೊನ್ನೆ ಸುಪ್ರಿಂ ಕೋರ್ಟ್ಗೆ ಸಲ್ಲಿಸಿದ್ದ ರಾಜ್ಯ ಸರಕಾರ ಅಫಿಡವಿಟ್ನಲ್ಲಿದ್ದ ಎಡವಟ್ಟೊಂದು ನಾರಿಮನ್ ಇದ್ದ ಕಾರಣಕ್ಕಾಗಿಯೇ ಸರಿದೂಗಿದೆ ಎಂಬುದನ್ನು ಗಮನಿಸಬೇಕಿದೆ.

ಅವರಿಗೆ ನಷ್ಟವಿಲ್ಲ:

"ನಾರಿಮನ್ ಬದಲಾವಣೆಯಿಂದ ಅವರಿಗೆ ನಷ್ಟವಿಲ್ಲ. ಬೇರೆ ಪ್ರಕರಣಗಳಲ್ಲಿ ಅವರಿಗೆ ಸುಮಾರು 20 ಲಕ್ಷ ರೂಪಾಯಿಗಳು ಒಂದು ಅಪಿಯರೆನ್ಸ್ಗೆ ಬರುತ್ತದೆ. ಕರ್ನಾಟಕ ನೀಡುತ್ತಿರುವುದು 4. 5 ಲಕ್ಷ ಅಷ್ಟೆ. ಇವತ್ತು ಅವರಷ್ಟು ಆಳವಾಗಿ ಕಾವೇರಿ ವಿಚಾರವನ್ನು ತಿಳಿದುಕೊಂಡವರು ಇನ್ನೊಬ್ಬರಿಲ್ಲ. ಅವರನ್ನು ಬದಲಿಸಿದರೆ ನಷ್ಟ ನಮಗೇ ಹೊರತು, ನಾರಿಮನ್ ಅವರಿಗಲ್ಲ,'' ಎನ್ನುತ್ತಾರೆ ರಾಜ್ಯ ಸಕರಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ.

ನಾರಿಮನ್ ಅವರಿಗೆ ಬೆಂಗಳೂರಿನ ಫ್ರೇಝರ್ ಟೌನ್ನಲ್ಲಿಯೂ ಒಂದು ಮನೆ ಇದೆ. "ನಾರಿಮನ್ ವಿಚಾರದಲ್ಲಿ ನಮ್ಮ ಮಾಧ್ಯಮಗಳು ಬಳಸುತ್ತಿರುವ ಬಾಷೆಯೇ ಕೀಳುಮಟ್ಟದಲ್ಲಿದೆ. ಸುಳ್ಳುಗಳನ್ನು ತೇಲಿಬಿಡಲಾಗುತ್ತಿದೆ. ಇದರಲ್ಲಿ ತಮಿಳುನಾಡಿನ ವಕೀಲರು ಉಚಿತವಾಗಿ ವಕಾಲತ್ತು ವಹಿಸಿದ್ದಾರೆ ಎಂಬುದು. ಸ್ವಲ್ಪ ಹುಡುಕಿದರೂ ಸಾಕಿತ್ತು, ವೈದ್ಯನಾಥನ್ ಎಂಬ ವಕೀಲರಿಗೆ ತಮಿಳುನಾಡು ಪಾವತಿಸಿರುವ 6. 5 ಕೋಟಿ ಶುಲ್ಕದ ವಿವರ ಸಿಗುತ್ತಿತ್ತು. ಎಲ್ಲವೂ ಮೇಲ್ಮಟ್ಟದಲ್ಲಿ, ಬೀಸು ಹೇಳಿಕೆಗಳಿಗೆ ಸೀಮಿತವಾಗಿರುವಾಗ ಯಾರು ಏನು ಹೇಳಲೂ ಸಾಧ್ಯವಿಲ್ಲ. ನಾರಿಮನ್ ಅವರಿಗೆ ಬೆಂಗಳೂರಿನ ನಂಟೂ ಇರುವುದರಿಂದ, ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ, ಅವರೇ ಕಾವೇರಿ ವಿಚಾರದಲ್ಲಿ ಹೊರಕ್ಕೆ ನಡೆದರೆ ಅಚ್ಚರಿ ಏನಿಲ್ಲ. ಅದರಿಂದ ನಷ್ಟ ಅವರಿಗಂತೂ ಆಗುವುದಿಲ್ಲ,'' ಎನ್ನುತ್ತಾರೆ ಕಾಳಪ್ಪ.

ವಾಸ್ತವ ಏನು?:

ನದಿ ನೀರು ಹಂಚಿಕೆ ವಿವಾದಗಳಾಗುವುದು ಕೇವಲ ಕರ್ನಾಟಕ, ಕಾವೇರಿಗೆ ಮಾತ್ರವೇ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಇಂತಹದ್ದೇ ಜಲವಿವಾದಗಳು ಇವತ್ತಿಗೂ ನಡೆದುಕೊಂಡು ಬರುತ್ತಿವೆ. ಅದಕ್ಕಾಗಿಯೇ 'ಹೆಲ್ಸಂಕಿ ಸೂತ್ರ' ಎಂಬ ಯೂನಿವರ್ಸಲ್ ಆಗಿರುವ ಸೂತ್ರವೊಂದನ್ನು ವಿಶ್ವಸಂಸ್ಥೆ ರೂಪಿಸಿದೆ (

). "ನದಿ ನೀರು ಹಂಚಿಕೆ ವಿಚಾರಗಳು ಬಂದಾಗ ನದಿಯ ಮೇಲ್ಭಾಗದಲ್ಲಿ ಇರುವವರು ಯಾವಾಗಲೂ ಖಳನಾಯಕರಂತೆಯೇ ಚಿತ್ರಿತವಾಗುತ್ತಾರೆ. ಕೆಳಭಾಗದಲ್ಲಿ ಇರುವವರಿಗೆ ಸಹಾನುಭೂತಿ ಸಿಗುತ್ತದೆ. ದುರಾದೃಷ್ಟ ಕರ್ನಾಟಕ ಕಾವೇರಿ ನದಿಯ ಮೇಲ್ಭಾಗದಲ್ಲಿದೆ,'' ಎನ್ನುತ್ತಾರೆ ತಜ್ಞರೊಬ್ಬರು.

ಇದರ ಜತೆಗೆ, ಹೆಲ್ಸಂಕಿ ಸೂತ್ರದ ಅನ್ವಯ ತೀರ್ಪು ನೀಡಿದ ಕಾವೇರಿ ನ್ಯಾಯಾಧಿಕರಣ, ಅದರಲ್ಲಿರುವ 'ಪ್ರಿಯರ್ ಅಪ್ರೊಪ್ರಿಯೇಶನ್ ರೈಟ್ಸ್'ನ್ನು ಬಳಸಿಕೊಂಡಿದೆ. ಅಂದರೆ, ತಲೆ ತಲಾಂತರಗಳಿಂದ ಬಳಸಿಕೊಂಡು ಬಂದ ನೀರಿನ ಹಕ್ಕನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸಾಂಬಾ ಬೆಳೆಗೆ ನೀರು ಹರಿಸುವ ವಿಚಾರದಲ್ಲಿ ಅವರಿಗಿರುವ ತಲೆತಲಾಂತರ ಹಕ್ಕುಗಳನ್ನು ನ್ಯಾಯಾಧಿಕರಣ ಗಣನೆಗೆ ತೆಗೆದುಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಸುಪ್ರಿಂ ಕೋರ್ಟ್ನಲ್ಲಿ ಕರ್ನಾಟಕದ ಪರವಾಗಿ ತೀರ್ಪು ಬರಬೇಕು ಎಂದು ಬಯಸುವುದು ಈ ಹೊತ್ತಿನಲ್ಲಿ ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ಇದಕ್ಕೆ ನಾರಿಮನ್ ಅವರನ್ನು ಹೊಣೆಗಾರಿಸುವ ಹಿಂದೆ ದುರುದ್ದೇಶ ಮತ್ತು ವೈಭವೀಕರಣದ ಮೂಲಕ ವ್ಯಕ್ತಿಗತ ತೇಜೋವಧೆಗೆ ಇಳಿಯುವ ಹುನ್ನಾರ ಢಾಳಾಗಿ ಕಾಣಿಸುತ್ತಿದೆ.

ಈ ಹೊತ್ತಿಗಾದರೂ, ಭಾವನೆಗಳನ್ನು ಪಕ್ಕಕ್ಕಿಟ್ಟು ಕಾವೇರಿ ಮತ್ತು ಕರ್ನಾಟಕಕ್ಕಾಗಿ ಫಾಲಿ ಸ್ಯಾಮ್ ನಾರಿಮನ್ ತರಹದ ಹಿರಿಯ ವಕೀಲರನ್ನು ರಾಜ್ಯ ಉಳಿಸಿಕೊಳ್ಳುವುದು ತುರ್ತು ಅಗತ್ಯ.

ಚಿತ್ರ:

ಔಟ್ ಲುಕ್.