samachara
www.samachara.com
ಹೆಣ ಬೀಳಿಸಿದ ಸುದ್ದಿ ವಾಹಿನಿಗಳ ಮನೆಯಲ್ಲೀಗ ಸೂತಕದ ಛಾಯೆ!
ಕಾವೇರಿ ವಿವಾದ

ಹೆಣ ಬೀಳಿಸಿದ ಸುದ್ದಿ ವಾಹಿನಿಗಳ ಮನೆಯಲ್ಲೀಗ ಸೂತಕದ ಛಾಯೆ!

ಎರಡು

ಹೆಣಗಳು ಬಿದ್ದ ನಂತರವೂ ಕನ್ನಡ ದೃಶ್ಯ ಮಾಧ್ಯಮಗಳ ಅತೃಪ್ತ ಆತ್ಮಗಳು ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕನ್ನಡದಲ್ಲಿ 24/7 ಸುದ್ದಿ ವಾಹಿನಿಗಳು ಪ್ರಾರಂಭವಾದ ದಶಕದ ಅಂತದಲ್ಲಿ, ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಾನಲ್ಗಳ ವಿರುದ್ಧ ವಿಡಂಭನೆ, ಟೀಕೆ, ಪ್ರತಿರೋಧ, ಕೋಪ, ಕುಹಕ ಹಾಗೂ ಪ್ರಬುದ್ಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಾವೇರಿ ‘ಹೋರಾಟ’ದ ಹೆಸರಿನಲ್ಲಿ ನಿರಂತರ ಕಿಚ್ಚು ಹೊತ್ತಿಸಿದ ವಾಹಿನಿಗಳು, ಟಿಆರ್ಪಿ ಅಮಲಿನಲ್ಲಿ ತೇಲುತ್ತಾ ಇಬ್ಬರ ಹೆಣ ಉರುಳಲು ಕಾರಣವಾದ ಘಟನೆಗೆ ದೇಶವೇ ಸಾಕ್ಷಿಯಾಗಿದೆ. ಈ ಕುರಿತು ಸಾರ್ವಜನಿಕ ವಿಶ್ಲೇಷಣೆಗಳ ಮಧ್ಯೆ, ಮಂಗಳವಾರ ಸಂಜೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವೂ ಮಾಧ್ಯಮಗಳಿಗೆ ಸುದ್ಧಿ ಪ್ರಸಾರದ ಬಗ್ಗೆ ಜಾಗ್ರತೆ ವಹಿಸುವಂತೆ ಎಚ್ಚರಿಕೆಯನ್ನೂ ನೀಡಿದೆ. ಈ ಸಮಯದಲ್ಲಿ ಕನ್ನಡ ಸುದ್ದಿವಾಹಿನಿಗಳ ಅತಿರೇಖದ ವರ್ತನೆ ಮತ್ತು ಕಾವೇರಿ ವಿಚಾರದಲ್ಲಿ ಸೋಮವಾರ ಮತ್ತು ಮಂಗಳವಾರ ಸುದ್ದಿ ವಾಹಿನಿಗಳಲ್ಲಿ ಬಂದ ಕವರೇಜಿನ 'ಶವ ಪರೀಕ್ಷೆ' ಇಲ್ಲಿದೆ.

ಪುಂಡರ ಹುಂಬತನ: 

ಕಾವೇರಿ ಗಲಭೆ ಹುಟ್ಟಿನ ಮೂಲ ಇರುವುದು ಸೆಪ್ಟೆಂಬರ್ 9ರ ಬಂದ್ ದಿನದಂದು. ಅವತ್ತು ಬಂದ್ ಬೆಂಬಲಿಸಿ ಮೆರವಣಿಗೆ ಬಂದ ಕನ್ನಡ ನಟರಲ್ಲಿ ಕೆಲವರು ನೀವೂ 'ಗಂಡಸರಾ?' ಎಂಬ ಪ್ರಶ್ನೆ ಎತ್ತಿದ್ದಾರೆ. ಇದು ತಮಿಳಿನ 'ಸನ್ ಟಿವಿ'ಯಲ್ಲಿ ನೇರ ಪ್ರಸಾರವಾಗಿದೆ. ಇದನ್ನು ನೋಡಿದ ತಮಿಳು ಮೂಲದ ಬೆಂಗಳೂರಿನ ಗಿರಿನಗರದಲ್ಲಿ ವಾಸವಿರುವ ಸಂತೋಷ್, ಕನ್ನಡ ನಟರ ಚಿತ್ರ ಬಳಸಿ 'ಮೆಮೆ'ಗಳನ್ನು ಮಾಡಿ ಫೇಸ್ಬುಕ್ನಲ್ಲಿ ಹರಿಯಬಿಟ್ಟಿದ್ದಾರೆ. ಇದಾದ ನಂತರ ಸಂತೋಷ್ರನ್ನು ಹುಡುಕಿಕೊಂಡು ಹೋಗಿ ಒಂದಷ್ಟು ಯುವಕರು ಹಲ್ಲೆ ನಡೆಸಿದ್ದಾರೆ. ಅಚ್ಚರಿ ಎಂಬಂತೆ ಈ ಸಮಯದಲ್ಲಿ ಒಂದು ಚಾನಲ್ ಕ್ಯಾಮೆರಾ ಸ್ಥಳದಲ್ಲಿದೆ.

ಕನ್ನಡ ನಟರನ್ನು ಕುಚೇಷ್ಟೆ ಮಾಡಿದವನಿಗೆ ಹೊಡೆತ ನೀಡಿದ ವೀಡಿಯೋ ಕೈಗೆ ಸಿಗುತ್ತಲೇ, ಕನ್ನಡ ವಾಹಿನಿಗಳು ಮೇಲಿಂದ ಮೇಲೆ ಪ್ರಸಾರ ಮಾಡಿವೆ. ಯಾರೋ ನಾಲ್ಕು ಜನ ಕನ್ನಡ ಪರ ಹೋರಾಟಗಾರರು (ಚಾನಲ್ ಪ್ರಕಾರ) ಕಾನೂನು ಕೈಗೆ ತೆಗೆದುಕೊಂಡರೆ ಅದನ್ನೇ ‘ಸಾಧನೆ’, ‘ಕನ್ನಡಿಗರ ಹೆಮ್ಮೆ’ ಎಂಬಂತೆ ಚಾನಲ್ಗಳು ಬಿಂಬಿಸಿದವು. ಟಿವಿ9 'ಯುವಕನಿಗೆ ಧರ್ಮದೇಟು ಬಿದ್ದಿದೆ, ಎಂಥವರಿಗೂ ಕೂಡಾ ಇದು ಎಚ್ಚರಿಕೆ' ಎಂದು ಇದನ್ನು ಕರೆಯಿತು. ಸುವರ್ಣ ನ್ಯೂಸ್ 'ಯುವಕನಿಗೆ ಸಖತ್ತಾಗೇ ಬಿತ್ತು ಗೂಸಾ' ಅಂತ ಸಂಭ್ರಮಿಸಿತು. ಬಿಟಿವಿಯ ಆಂಕರ್ ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿ, ‘ಗಿರಿನಗರದಲ್ಲಿ ಸಿಕ್ಕ ಕಿರಾತಕನಿಗೆ ಸರಿಯಾಗಿಯೇ ಗೂಸಾ ನೀಡಿದ್ದಾರೆ' ಎಂದು ನಗುಮುಖದ ಸಂಭ್ರಮದಲ್ಲಿ ನ್ಯೂಸ್ ಓದಿ ಮುಗಿಸಿದರು. ಈ ವೀಡಿಯೋಗಳನ್ನು ತಮ್ಮ ತಮ್ಮ ಫೇಸ್ಬುಕ್ ಪೇಜುಗಳಿಂದಲೇ ‘ಜವಾಬ್ದಾರಿಯುತ’ ಮಾಧ್ಯಮಗಳು ಶೇರ್ ಮಾಡಿದವು. ಅಲ್ಲಿಂದ ಅವೆಲ್ಲಾ ವೈರಲ್ ಆಗಿ ಕೊನೆಗೆ ಇಂಗ್ಲೀಷ್ ತಮಿಳು ವಾಹಿನಿಗಳಲ್ಲೆಲ್ಲಾ ಪ್ರಸಾರವಾಯಿತು. ಅತ್ತ, ಹೆಚ್ಚು ಕಡಿಮೆ ಇದೇ ಮನಸ್ಥಿತಿಯಿಂದ ತಮಿಳು ಚಾನೆಲ್‌ಗಳು ‘ತಮಿಳರ’ ಮೇಲೆ ‘ಕನ್ನಡಿಗರ ಹಲ್ಲೆ’ ಎಂದು ಪ್ರಸಾರ ಮಾಡಿದವು. ಬೆಂಗಳೂರಿನಲ್ಲಿ ತಮಿಳರು 'ಅನ್ ಸೇಫ್' ಎಂದವು. ಅಲ್ಲಿ ಭಾರಿ ರಾಡಿಯನ್ನೇ ಎಬ್ಬಿಸಿದವು.

ಅಲ್ಲೊಂದು ಪುಂಡರ ಗುಂಪು: 

ಈಗ ಕನ್ನಡ ಚಾನಲ್ ಗಳ ಸರದಿ. ಭಾನುವಾರ ವೈರಲ್ ಆದ ವೀಡಿಯೋಗಳಿಗೆ ಪ್ರತ್ಯುತ್ತರದ ವೀಡಿಯೋ ಸೋಮವಾರ ತಮಿಳುನಾಡು ಕಡೆಯಿಂದ ಬಂತು. ಅಲ್ಲಿ ಮಂಜುನಾಥ್ ಎಂಬ ಕನ್ನಡಿಗನಿಗೆ ತಮಿಳರ ಗುಂಪು ಹಲ್ಲೆ ನಡೆಸಿದ್ದನ್ನು ಇಲ್ಲಿನ ವಾಹಿನಿಗಳ ತಿರು ತಿರುಗಿ ಪ್ರಸಾರ ಮಾಡಿ ಜನರ ತಲೆ ತಿರುಗಿಸಿದವು. ಇಲ್ಲಿ, ಇದೇ ರೀತಿಯ ಕೃತ್ಯವನ್ನು ಎಸಗಿದ ಕನ್ನಡಿಗರಿಗೆ ಹೋರಾಟಗಾರರು ಎಂದು ಬಳಸಿದ ಪದ, ತಮಿಳರ ವಿಚಾರ ಬಂದಾಗ 'ದುಷ್ಕರ್ಮಿಗಳು' ಎಂದು ಬದಲಾಗಿತ್ತು. ಅಲ್ಲಿ ಏಟು ತಿಂದ ಮಂಜುನಾಥ್ರನ್ನು ಬಿಟಿವಿ ವಾಹಿನಿ 'ವೀರ ಕನ್ನಡಿಗ', 'ಜಗ್ಗದ ಕೆಚ್ಚೆದೆ ಕನ್ನಡಿಗ' ಎಂದೆಲ್ಲಾ ಸಂಬೋಧಿಸಿದರೆ, ಪಬ್ಲಿಕ್ ಟಿವಿ, 'ಕನ್ನಡಿಗರ ಮೇಲೆ ತಮಿಳುನಾಡಿನಲ್ಲಿ ದರ್ಪ, ಕನ್ನಡಿಗರ ಮೇಲೆ ಮನಬಂದಂತೆ ಹಲ್ಲೆ' ಎಂದು ಸುದ್ದಿ ಪ್ರಸಾರ ಮಾಡಿತು.

ಅತೀ ಹಚ್ಚು ವೀಕ್ಷಕರನ್ನು ಹೊಂದಿರುವ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದ್ದ ಟಿವಿ 9 ನಾವ್ಯಾಕೆ ಹಿಂದೆ ಅಂತ, 'ತಮಿಳುನಾಡಿನಲ್ಲಿ ಪುಂಡಾಟ, ಪುಂಡರ ರಂಪಾಟ' ಎಂದಿತು. ನೋಡುವವರ ಮನಸ್ಥಿತಿ ಏನಾಗಬೇಡ? ಮೇಲಿಂದ ಮೇಲೆ ಟಿವಿ 9 ಈ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಟಿವಿ ಅಂಗಡಿಗಳ ಮುಂದೆಲ್ಲಾ ಜನ ಸೇರಿ ಗುಂಪಿನಲ್ಲಿ ನೋಡುತ್ತಿದ್ದರು; ಮರು ಕ್ಷಣ ಕನ್ನಡ, ಕರ್ನಾಟಕ ಪದ ಪುಂಜಗಳಿಗೆ ಅವರ ರಕ್ತಗಳು ಕುದಿಯಲು ಆರಂಭವಾಯಿತು.

ಆರಂಭವಾದ ಹಿಂಸಾಚಾರ:

ತಮಿಳುನಾಡಿನಲ್ಲಿ ಮಂಜುನಾಥ್ ಮೇಲಿನ ಹಲ್ಲೆಯ ದೃಶ್ಯಗಳು ಬೆಳಿಗ್ಗೆ ಸುಮಾರು ಹತ್ತು ಗಂಟೆಯಿಂದ ಪ್ರಸಾರವಾದರೆ, ಪ್ರತಿಕ್ರಿಯೆಗಳು ಮಧ್ಯಾಹ್ನದ ಹೊತ್ತಿಗೆ ಆರಂಭವಾದವು. ಅಷ್ಟೊತ್ತಿಗೆ ಎಲ್ಲಾ ಚಾನಲ್ಲುಗಳು, OB (ಔಟ್ ಸೈಟ್ ಬ್ರಾಡ್ಕಾಸ್ಟಿಂಗ್), ಬ್ಯಾಕ್ ಪ್ಯಾಕ್ ರೆಡಿ ಮಾಡಿಕೊಂಡು ಲೈವಿಗೆ ಸಿದ್ಧವಾಗಿ ನಿಂತಿದ್ದವು. ಏರು ದನಿಯ ಆಂಕರ್ಗಳು ಟಿವಿ ಸ್ಕ್ರೀನ್ ಅಲಂಕರಿಸಿದರು. ಲೈವ್ ದೃಶ್ಯಗಳ ಪ್ರಸಾರ ಆರಂಭವಾಯಿತು. ಕ್ಯಾಮೆರಾ ಹಿಡಿಯುತ್ತಿದ್ದಂತೆ ಕಲ್ಲು ಹೊಡೆಯುವುವವರ ಸಂಖ್ಯೆ, ಆಕ್ರೋಶ ಹೆಚ್ಚಾಯಿತು. ಅರ್ಧ ಕಲ್ಲು ಹೊಡೆದು ಸಾಕು ಎಂದೆನಿಸಿದಾಗ ಕ್ಯಾಮೆರಾಗಳ ಮುಂದೆ ಮುಖ ತೋರಿಸಿ ತಮ್ಮ ತಮ್ಮ ವೇದಿಕೆ, ಸೇನೆಗಳ ಧ್ವಜಗಳನ್ನು ಪ್ರದರ್ಶಿಸಿ ತಮ್ಮ ಸೇನೆಗೆ ಜಯವಾಗಲಿ ಎಂದು ಘೋಷಣೆ ಕೂಗಿ, ಸಂಭ್ರಮಾಚರಣೆ ಮಾಡಿದ್ದು ನೇರವಾಗಿ ಪ್ರಸಾರವಾಯಿತು.

ಅಡ್ಯಾರ್ ಆನಂದ್ ಭವನ್, ಪೂರ್ವಿಕ ಮೊಬೈಲ್ಸ್ ತಮಿಳರಿಗೆ ಸೇರಿದ್ದೆಂದೂ, ಟಿಎನ್ ನಂಬರ್ ಪ್ಲೇಟ್ ನೋಡಿದರೆ ತಮಿಳರ ವಾಹನಗಳೆಂದು ಟಿವಿ ಚಾನಲ್ಗಳೇ ಪದೇ ಪದೇ ಒತ್ತಿ ಹೇಳಿ 'ನೀವು ದಾಳಿ ಮಾಡಬೇಕಾಗಿದ್ದು ಇಲ್ಲಿ' ಎಂಬ ಹಿಂಟ್ಗಳನ್ನು ಕರ್ನಾಟಕ ರಾಜ್ಯದ್ಯಂತ ಪ್ರಚುರಪಡಿಸಿದವು. ವಾಹನಗಳಿಗೆ ಬೆಂಕಿ ಹಚ್ಚುವ ಹೋರಾಟಗಾರರು (?) ಕ್ಷಣ ಮಾತ್ರದಲ್ಲಿ ಹುಟ್ಟಿಕೊಂಡರು.

ಸೂಕ್ಷ್ಮ ಸಮಯ:

ಸಾಮಾನ್ಯವಾಗಿ ಟಿವಿ 9 ಯೂಟ್ಯೂಬ್ ವೀಕ್ಷಕರ ಸಂಖ್ಯೆ 2,000 ದಾಟುವುದೇ ಅಪರೂಪ, ಅಂಥಹದ್ದರಲ್ಲಿ ಒಮ್ಮಿಂದೊಮ್ಮೆ 20,000 ದಾಟಿತು. ಪಬ್ಲಿಕ್ ಟಿವಿ ಯೂ ಟ್ಯೂಬ್ ಚಾನಲ್ಲಿಗೆ 10,000 ಕ್ಕಿಂತ ಹೆಚ್ಚಿನ ವೀಕ್ಷಕರು ಹರಿದು ಬಂದರು. ಈ ಸಮಯದಲ್ಲಾದರೂ ಸಮಯದ ಸೂಕ್ಷ್ಮತೆಯನ್ನು ವಾಹಿನಿಗಳು ಅರ್ಥ ಮಾಡಿಕೊಳ್ಳಬಹುದಿತ್ತು.

ವಿಪರ್ಯಾಸ ಏನೆಂದರೆ, ಆರಂಭದಿಂದಲೂ ಸಮಚಿತ್ತ ಕಾಯ್ದುಕೊಂಡು ಶಾಂತಿ ಮಂತ್ರ ಜಪಿಸಿದ ಸುವರ್ಣ ನ್ಯೂಸ್ ಯೂ ಟ್ಯೂಬ್ ವೀಕ್ಷಕರ ಸಂಖ್ಯೆ ಈ ಸಮಯದಲ್ಲಿ 1000ವೂ ದಾಟಲಿಲ್ಲ. ಅತ್ತ ಇನ್ನೂ ಸಂಯಮದಿಂದ ವರ್ತಿಸಿದ ತಮಿಳು ಮೂಲದ ರಾಜ್ ನ್ಯೂಸ್ ಕನ್ನಡ, ಜನರ ಅಭಿನಂದನೆಗೆ ಮಾತ್ರ ಪಾತ್ರವಾಯಿತು.

ಯಾವಾಗ ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಪರಿಸ್ಥಿತಿ ಕೈ ಮೀರುವ ಸೂಚನೆಗಳು ಸಿಗಲಾರಂಭಿಸಿದವೋ, ಆಗ ಎಲ್ಲಾ ಚಾನಲುಗಳೂ ‘ಕಾವೇರಿ ಭಾವನಾತ್ಮಕ ವಿಷಯ, ಚಾನಲ್ ನಿಮ್ಮ ಪರವಾಗಿದೆ, ಶಾಂತಿಯಿಂದ ವರ್ತಿಸಿ,’ ಎಂದು ಹೇಳಲು ಶುರುವಿಟ್ಟುಕೊಂಡವು. ಹಾಗಂತ ಕಿಚ್ಚು ಹೊತ್ತಿಸುವ ಮಾತುಗಳು, ಲೈವ್ ದೃಶ್ಯಗಳ ಪ್ರಸಾರವೇನೂ ನಿಲ್ಲಲಿಲ್ಲ. ಬದಲಿಗೆ ಬ್ರೇಕ್ ತೆಗೆದುಕೊಳ್ಳುವ ಮುಂಚೆ, 'ಶಾಂತಿ ಕಾಪಾಡಿ' ಎನ್ನುವ ಸಂಪ್ರದಾಯ ಪಾಲನೆಯಾಯಿತು. ಇದೊಂದು ರೀತಿಯಲ್ಲಿ 'ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ'ದಂತೆ ಭಾಸವಾಗುತ್ತಿತ್ತು.

ಇದನ್ನೆಲ್ಲಾ ಮೊದಲೇ ಗ್ರಹಿಸಿಯೋ ಏನೋ, ಹಿರಿಯ ಪತ್ರಕರ್ತ ಟಿ. ಕೆ. ತ್ಯಾಗರಾಜ್ ಸೆಪ್ಟೆಂಬರ್ 9ರ ಬಂದ್ ದಿನದಂದೇ ತಮ್ಮ ಫೇಸ್ಬುಕ್ ವಾಲ್ನಲ್ಲಿ, “ಖಾಸಗಿ ಕನ್ನಡ ಸುದ್ದಿ ವಾಹಿನಿಗಳ ನಿರೂಪಕರ ಬಾಯಲ್ಲೇ ಬೆಂಕಿ, ಪೆಟ್ರೋಲ್ ಸೀಮೆಣ್ಣೆ ಎಲ್ಲ ಇರುವಂತಿದೆ. ರಾಜ್ಯದ ನೆಮ್ಮದಿ ಹಾಳುಮಾಡುವ ವಿಚಾರದಲ್ಲಿ ರಾಜಕಾರಣಿಗಳೇ ಹಿಂದೆ ಬಿದ್ದಿದ್ದಾರೆ,” ಎಂದು ಬರೆದಿದ್ದರು.

ದಾರಿ ತೋರಿದ ಇಂಗ್ಲೀಷ್ ವಾಹಿನಿಗಳು

ಹಾಗೆ ನೋಡಿದರೆ ಸೋಮವಾರದ ದಿನ ಸದಾ ಅಬ್ಬರಿಸಿ ಬೊಬ್ಬಿರಿವ ಅರ್ನಾಬ್ ಗೋಸ್ವಾಮಿಯೇ ಒಂದು ಹಂತಕ್ಕೆ ಸಂಯಮದಿಂದಿದ್ದರು. ಆದರೆ ಅವರನ್ನೇ ಅನುಸರಿಸುವ ಕನ್ನಡದ ಅರ್ನಾಬ್ಗಳು ಮಾತ್ರ ತಣ್ಣಗಾಗಿರಲಿಲ್ಲ. ಟೈಮ್ಸ್ ನೌ ವಾಹಿನಿ ಮೇಘನಾ ರಾಜ್, ರಘು ದೀಕ್ಷಿತ್ ಮುಂತಾದವರಿಂದ ಶಾಂತಿ ಸಂದೇಶ ಪ್ರಸಾರ ಆರಂಭಿಸಿತು. ಇಂಡಿಯಾ ಟುಡೇ ಯಾವ ಯಾವ ರಸ್ತೆಗಳನ್ನೆಲ್ಲಾ ಅವೈಡ್ ಮಾಡಿ ಅಂತ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿತು. ಆದರೆ ಕನ್ನಡದ ಯಾವ ಚಾನಲ್ಲುಗಳಿಗೂ ಇದೆಲ್ಲಾ ತಲೆ ಹೊಕ್ಕಲೇ ಇಲ್ಲ.

ಎಲ್ಲಾ ವಿಚಾರಗಳಿಗೂ ಇಂಗ್ಲೀಷ್ ವಾಹಿನಿಗಳ ಕಡೆ ನೋಡುವ ಕನ್ನಡ ವಾಹಿನಿಗಳಿಗೆ, ನಮ್ಮೂರಿನಲ್ಲಿ ನಡೆದ ಅಘೋಷಿತ ಬಂದ್ ಹಾಗೂ ಉದ್ರೇಕಕಾರಿ ಪ್ರತಿಕ್ರಿಯೆಗಳನ್ನು ಹೇಗೆ ಸುದ್ದಿ ಮಾಡಬೇಕು ಎಂಬುದನ್ನೂ ಅವರೇ ಬಂದು ಹೇಳಬೇಕಾಯಿತು. ಇದೆಲ್ಲಾ ಕಳೆದು ಅರಿವನ ಬೆಳಕು ವಾಹಿನಿಗಳ ತಲೆ ಹೊಕ್ಕಾಗ ಎರಡು ಹೆಣ ಬಿದ್ದಾಗಿತ್ತು. ಎಲ್ಲಾ ಹೊತ್ತಿ ಉರಿದ ಮೇಲೆ ಮಂಗಳವಾರಕ್ಕೆ ಸೆಲೆಬ್ರಿಟಿಗಳ ಮೂಲಕ ಶಾಂತಿ ಮಂತ್ರದ ಪಠಣೆ ಆರಂಭಿಸಿದವು.

ಚರ್ಚೆಯಾಚೆಗಿನ ಪರಿಹಾರ:

ಅದಾಗಲೇ ರಾಜಕಾರಣಿಗಳಿಗೂ ಗಲಭೆಗೆ ಕಾರಣ ಮಾಧ್ಯಮಗಳೇ ಎಂಬುದು ಅರ್ಥವಾಗಿತ್ತು. ರಾಜ್ಯ ಗೃಹ ಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಮಾಧ್ಯಮಗಳು 'ಹಿಂಸೆಗೆ ಪ್ರೇರಣೆ' ನೀಡಬಾರದು ಎಂದು ಪದೇ ಪದೇ ಹೇಳಿದರು. ಆಗ ಇದೇ ಕನ್ನಡದ ವಾಹಿನಿಗಳು ಇದೆಲ್ಲಾ ತಮಗೆ ಹೇಳಿದ್ದೇ ಅಲ್ಲವೇನೋ ಎನ್ನುವಂತೆ ನಡೆದುಕೊಂಡವು. ಮಂಗಳವಾರ ಸಂಜೆ ವೇಳೆಗೆ ಸುದ್ದಿ ಮಾಧ್ಯಮಗಳು ಸಮಚಿತ್ತದಿಂದ ವರ್ತಿಸಬೇಕು ಎಂಬ ಸುತ್ತೋಲೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದರೂ ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಮಾಧ್ಯಮಗಳ ಜವಾಬ್ದಾರಿಯುತ ನಡೆಯ ಬಗ್ಗೆ ಪ್ರಶ್ನೆ ಎದ್ದಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದೆ 26/11ರ ಮುಂಬೈ ದಾಳಿ ನಂತರದ ದಿನಗಳಲ್ಲಿ ಕೇಂದ್ರ ಸರಕಾರ ಟಿವಿ ಮಾಧ್ಯಮಗಳ ಸುದ್ದಿ ಪ್ರಸಾರ ಹೇಗಿರಬೇಕು ಎಂದು ಹೊಸ ಪಾಲಿಸಿಯನ್ನೇ ಜಾರಿ ಮಾಡಿತ್ತು. ಎನ್’ಬಿಎ(ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್) ‘ಕೋಡ್ ಆಫ್ ಎತಿಕ್ಸ್’ ನಲ್ಲೇ, ಸಾರ್ವಜನಿಕ ಅಭಿಪ್ರಾಯವನ್ನು ಚಾನಲ್ಲುಗಳು ಸೃಷ್ಟಿಸುವುದರಿಂದ ವಿಶೇಷ ಜವಾಬ್ದಾರಿಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಭಾವನಾತ್ಮಕ ವಿಚಾರಗಳು ಬಂದಾಗ ಪ್ರಚೋದಿಸುವಂತೆ ಸುದ್ದಿ ಪ್ರಸಾರ ಮಾಡಬಾರದು, ಬಳಸುವ ಭಾಷೆ ಸುದ್ದಿಗಳು ನೇರವಾಗಿರಬೇಕು ಎಂದೆಲ್ಲಾ ವಿವರವಾಗಿ ಹೇಳಲಾಗಿದೆ.

ಎಂಬ ಪೀತ ಪತ್ರಿಕೋದ್ಯಮದ ಪಿತಾಮಹ 19ನೇ ಶತಮಾನದ ಆರಂಭದಲ್ಲೇ ಇದೇ ರೀತಿ ಜನರನ್ನು ಪ್ರೇರೇಪಿಸಿ ಸ್ಪೇನ್ ಮತ್ತು ಅಮೆರಿಕಾದ ನಡುವೆ ಯುದ್ಧವಾಗುವಂತೆ ಮಾಡಿದ್ದ. ಬಹುಶಃ ಕನ್ನಡಿಗರಿಗೂ ತಮಿಳರಿಗೂ, ಅತ್ತ ಮಹದಾಯಿ ವಿಚಾರದಲ್ಲಿ ಗೋವಾದವರಿಗೂ ಉತ್ತರ ಕರ್ನಾಟಕದವರ ನಡುವೆ ನ್ಯೂಸ್ ಚಾನಲ್ಗಳು ಯುದ್ಧ ಸೃಷ್ಟಿಸುವ ದುಸ್ಸಾಹಸಕ್ಕೆ ಕೈ ಹಾಕಲ್ಲ ಎಂದು ಈಗಂತೂ ಗಟ್ಟಿ ದನಿಯಲ್ಲಿ ಹೇಳುವುದು ಕಷ್ಟ.