samachara
www.samachara.com
ಸಾಂದರ್ಭಿಕ್ ಚಿತ್ರ 
ಕಾವೇರಿ ವಿವಾದ

ಬೇಕಿರುವುದು ಸಂಕಷ್ಟ ಪರಿಹಾರ ಅಲ್ಲ; ‘ಹೆಲ್ಸಂಕಿ ಸೂತ್ರ’ದ ನೆರಳಿನಲ್ಲಿ ‘ರಾಷ್ಟ್ರೀಯ ಜಲನೀತಿ’!

Summary

ನದಿ ನೀರು ಹಂಚಿಕೆ ಎಂದರೇನು? ಜಗತ್ತಿನಾದ್ಯಂತ ನದಿ ನೀರು ಹಂಚಿಕೆ ಸುತ್ತ ಎಲ್ಲರಿಗೂ ಅನ್ವಯವಾಗುವ ಸೂತ್ರವೇನಾದರೂ ಇದೆಯಾ? ಇದು ಕಾವೇರಿ ನೀರನ್ನು ತಮಿಳುನಾಡು- ಪುದುಚೇರಿ ಮತ್ತು ಕರ್ನಾಟಕ ನಡುವೆ ಹಂಚುವಾಗಲೂ ನ್ಯಾಯಾಧಿಕರಣ ಬಳಸಿಕೊಂಡಿತ್ತಾ? ಹೀಗೊಂದಿಷ್ಟು ಕುತೂಹಲಕಾರಿ ಪ್ರಶ್ನೆಗಳಿವೆ. ಅವುಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನದ ಭಾಗವಾಗಿಯೇ ‘ಹೆಲ್ಸಂಕಿ ಸೂತ್ರ’ ಎಂಬ ಜಗತ್ತಿನಾದ್ಯಂತ ಅಳವಡಿಸಿಕೊಂಡಿರುವ ಆಚರಣೆಯ ಕುರಿತು ‘ಸಮಾಚಾರ’ ಈ ವರದಿಯನ್ನು ನೀಡುತ್ತಿದೆ. ಇದು, ಕಾವೇರಿ ಮತ್ತು ಅದರ ನೀರು ಹಂಚಿಕೆಯ ಭವಿಷ್ಯದ ಕುರಿತು ಆಲೋಚನೆ ಮಾಡುವವರೆಲ್ಲರೂ ಓದಲೇಬೇಕಾದ ಸ್ಟೋರಿ…

ಕಾವೇರಿ ಗಲಭೆಗೆ ನಲುಗಿದ್ದ ರಾಜಧಾನಿ ಬೆಂಗಳೂರು ನಿಧಾನವಾಗಿ ಶಾಂತ ಸ್ಥಿತಿಗೆ ಮರಳುತ್ತಿದೆ. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ವಿಚಾರ ಕಾವೇರಿ- ನದಿ ನೀರು ಹಂಚಿಕೆ. ಇದರೊಳಗಿನ ಅಂಕಿ ಅಂಶಗಳು, ನ್ಯಾಯಾಲಯದ ಕಾನೂನಿನ ತೀರ್ಪುಗಳ ಒಳಸುಳಿಗಳು, ಇತಿಹಾಸ ಹೀಗೆ ಹತ್ತು ಹಲವು ಆಯಾಮಗಳು ಈವರೆಗೆ ಬಂದು ಹೋಗಿವೆ. ಇದೀಗ ‘ಸಂಕಷ್ಟಗಳ ಸಮಯದಲ್ಲಿ ನೀರು ಹಂಚಿಕೆ’ ಕುರಿತು ಮಾತುಗಳು ಶುರುವಾಗಿವೆ.

ಒಂದೇ ಸೂತ್ರ:

ಈ ದೇಶದಲ್ಲಿ ಜಲವಿವಾದಗಳು ಭುಗಿಲೆದ್ದಾಗಲೆಲ್ಲಾ ‘ರಾಷ್ಟ್ರೀಯ ಜಲನೀತಿ’ಯ ಅಗತ್ಯತೆಯ ಚರ್ಚೆಯೊಂದು ಮೇಲೇಳುತ್ತದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಾವೇರಿ ವಿಚಾರದಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟಿಗೆ, ಶಾಶ್ವತ ಪರಿಹಾರ ಕಂಡುಕೊಳ್ಳಲು 'ರಾಷ್ಟ್ರೀಯ ಜಲ ನೀತಿ' ರೂಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇಷ್ಟೊಂದು ವಿಶಾಲ ದೇಶದಲ್ಲಿ ‘ರಾಷ್ಟ್ರೀಯ ಜಲನೀತಿ’ಯೇ ಇಲ್ಲದೆ, ನೀರು ಹಂಚಿಕೆಯೊಂದು ಹೇಗೆ ನಡೆಯುತ್ತಿದೆ? ಸದ್ಯಕ್ಕೆ ನಮ್ಮಲ್ಲಿ ರಾಷ್ಟ್ರೀಯ ಜಲನೀತಿಯೊಂದು ಇಲ್ಲದೆ ಇರಬಹುದು, ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನದಿ ನೀರು ಹಂಚಿಕೆ ವಿಚಾರ ಬಂದಾಗ 'ಹೆಲ್ಸಂಕಿ ಸೂತ್ರ' ಬಳಕೆಯಾಗುತ್ತದೆ. ಕಾವೇರಿ ವಿಚಾರದಲ್ಲಿಯೂ ನ್ಯಾಯಾಧಿಕರಣ ತನ್ನ ತೀರ್ಪು ನೀಡುವ ಮುಂಚೆ, ಇದೇ ಸೂತ್ರವನ್ನು ಬಳಸಿಯೇ ಯಾರ್ಯಾರಿಗೆ ಎಷ್ಟೆಷ್ಟು ನೀರು ಬಿಡಬೇಕು ಎಂದು ಹೇಳಿತ್ತು.

ಏನಿದು ‘ಹೆಲ್ಸಿಂಕಿ ಸೂತ್ರ’?:

ಹೆಲ್ಸಿಂಕಿ ಎನ್ನುವುದು ಫಿನ್ಲ್ಯಾಂಡ್ ದೇಶದ ಪ್ರಮುಖ ನಗರ. ಜಗತ್ತಿನ ಮೂರು ಪ್ರಮುಖ ನಗರಗಳಿಗೆ ಸಮೀಪದಲ್ಲಿರುವ ಹೆಲ್ಸಂಕಿಯ ಜನಸಂಖ್ಯೆಯೇ ನಮ್ಮ ಬೆಂಗಳೂರಿನ ಎರಡರಷ್ಟಿದೆ. ಈ ನಗರದಲ್ಲಿ ವಿಶ್ವಸಂಸ್ಥೆ ನದಿ ನೀರು ಹಂಚಿಕೆ ಸಂಬಂಧಪಟ್ಟಂತೆ ಮಹತ್ವದ ಒಪ್ಪಂದವೊಂದನ್ನು ಅನುಮೋದನೆ ಪಡೆದುಕೊಂಡಿತು. ಅಂತರಾಷ್ಟ್ರೀಯ ಕಾನೂನು ಒಕ್ಕೂಟ 1966ರಲ್ಲಿ ಇದನ್ನು ಮಾನ್ಯ ಮಾಡಿತು. ಅಲ್ಲಿಂದಾಚೆಗೆ, ಯಾವುದೇ ನದಿ ನೀರು ಹಂಚಿಕೆ ವಿಚಾರ ಬಂದರೂ, ವಿಶ್ವಸಂಸ್ಥೆ ಅನುಮೋದನೆ ಪಡೆದುಕೊಂಡಿರುವ 'ಹೆಲ್ಸಂಕಿ ಸೂತ್ರ' ಎಂದೇ ಜನಪ್ರಿಯವಾಗಿರುವ ನಿಯಮವನ್ನು ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಂಡು ಪಾಲಿಸಲಾಗುತ್ತಿದೆ.

‘ಹೆಲ್ಸಿಂಕಿ ಸೂತ್ರ’ (The Helsinki Rules on the Uses of the Waters of International Rivers) ಅಂತಾರಾಷ್ಟ್ರೀಯ ಗಡಿ ದಾಟಿ ಹೋಗುವ ನದಿ ಮತ್ತು ಅವುಗಳಿಗೆ ಸಂಬಂಧಿಸಿದ ಅಂತರ್ಜಲವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಮಾರ್ಗದರ್ಶಿ ಸೂತ್ರದಂತೆ ಕೆಲಸ ಮಾಡುತ್ತದೆ. ಇದರ ಸುಧಾರಿತ ಮಾದರಿಗಳೂ ಮುಂದೆ ಬಂದವಾದರೂ, ಇವತ್ತಿಗೂ ಮೂಲ ಮಾದರಿಯೇ ವಿವಾದದ ಸಂದರ್ಭಗಳಲ್ಲಿ ಪರಿಗಣನೆಗೆ ಒಳಪಡುತ್ತದೆ.

2004ರಲ್ಲಿ ಇದನ್ನು ಮತ್ತಷ್ಟು ಉನ್ನತೀಕರಿಸಿ ‘ಬರ್ಲಿನ್ ರೂಲ್ಸ್ ಆನ್ ವಾಟರ್ ರಿಸೋರ್ಸಸ್’ ಜಾರಿಗೆ ಬಂದಿದೆ.ಹೆಲ್ಸಿಂಕಿ ಸೂತ್ರದಲ್ಲಿ ಒಟ್ಟು 6 ಅಧ್ಯಾಯಗಳಿದ್ದು 37 ಆರ್ಟಿಕಲ್ ಗಳಿವೆ. ಎರಡು ಪ್ರದೇಶಗಳ ನಡುವಿನ ಜಲ ವಿವಾದವನ್ನು ಯಾವ ಆಧಾರದಲ್ಲಿ ಮತ್ತು ಹೇಗೆ ಪರಿಹರಿಸಬಹುದು ಎಂಬುದನ್ನು ಇದು ವಿವರಿಸುತ್ತದೆ. ಇದರ ಸಂಕ್ಷಿಪ್ತ ರೂಪವನ್ನಷ್ಟೇ ಇಲ್ಲಿ ಪಟ್ಟಿ ಮಾಡಿದ್ದೇವೆ.

ಅಧ್ಯಾಯ – 1

ಅಂತಾರಾಷ್ಟ್ರೀಯ ಜಲಾನಯನ (ನದಿಗೆ ನೀರು ಹರಿದು ಬರುವ ಭೂ ಭಾಗ) ಪ್ರದೇಶಗಳಿಗೆ ಅನ್ವಯವಾಗುವ ಸೂತ್ರವಿದು ಎಂಬುದನ್ನು ಮೊದಲಿಗೆ ಹೇಳಲಾಗಿದೆ. ‘ಜಲಾನಯನ ಪ್ರದೇಶ’ ಎಂದು ಬಂದಾಗ ಅಲ್ಲಿ ಭೂಮಿ ಮೇಲೆ ಹರಿಯುವ ಮತ್ತು ಅಂತರ್ಜಲದ ಮೂಲಕ ಹರಿಯುವ ನೀರೂ ಪರಿಗಣಿಸಲ್ಪಡುತ್ತದೆ. ಇಲ್ಲಿ ನದಿಗೆ ನೀರು ಹರಿದು ಬರುವ ರಾಜ್ಯಗಳನ್ನು ‘ಜಲಾನಯನ ರಾಜ್ಯ’ ಎಂದು ಕರೆಯುತ್ತಾರೆ.

ಅಧ್ಯಾಯ -2

ಕರ್ನಾಟಕ ಮತ್ತು ತಮಿಳುನಾಡು ಮೂಲಕ ಹಾದು ಹೋಗುವ ಕಾವೇರಿಯ ಜಲಾನಯನ ಪ್ರದೇಶಗಳನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಗಮನಿಸಬಹುದು.
ಕರ್ನಾಟಕ ಮತ್ತು ತಮಿಳುನಾಡು ಮೂಲಕ ಹಾದು ಹೋಗುವ ಕಾವೇರಿಯ ಜಲಾನಯನ ಪ್ರದೇಶಗಳನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಗಮನಿಸಬಹುದು.

ಪ್ರತಿ ‘ಜಲಾನಯನ ರಾಜ್ಯ’ ಕೂಡಾ ಸಮಂಜಸ ಮತ್ತು ನ್ಯಾಯ ಸಮ್ಮತ ನೀರಿನ ಪಾಲನ್ನು ಪಡೆಯಲು ಅರ್ಹವಾಗಿರುತ್ತವೆ.ಇಲ್ಲಿ 'ನ್ಯಾಯ ಸಮ್ಮತ' ಮತ್ತು 'ಸಮಂಜಸ' ಎಂದು ನಿರ್ಧರಿಸಲು ಒಂದಷ್ಟು ಮಾನದಂಡಗಳನ್ನು ಇಡಲಾಗಿದೆ. ಅವುಗಳಲ್ಲಿ ಜಲಾನಯನ ಪ್ರದೇಶದ ಭೌಗೋಳಿಕ ಸ್ಥಿತಿ, ಅಲ್ಲಿನ ಭೂಮಿಯ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ನದಿ ನೀರಿಗೆ ಆ ಪ್ರದೇಶದ ಮೂಲಕ ಹರಿದು ಬರುವ ನೀರಿನ ಪ್ರಮಾಣ, ಅಲ್ಲಿನ ಹವಾಮಾನ, ಅಲ್ಲಿನ ಪ್ರದೇಶ ಹಿಂದೆ ಬಳಸುತ್ತಿದ್ದ ನೀರಿನ ಪ್ರಮಾಣ, ಆಯಾ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಅಗತ್ಯಗಳು, ಆಯಾ ಪ್ರದೇಶದಲ್ಲಿ ನದಿ ನೀರನ್ನು ನಂಬಿ ಬದುಕುತ್ತಿರುವ ಜನ ಸಂಖ್ಯೆಯನ್ನು ನೀರು ಹಂಚಿಕೆಯ ವೇಳೆ ಗಮನದಲ್ಲಿಟ್ಟುಕೊಳ್ಳಬೇಕು.

ಇದಲ್ಲದೇ ಆಯಾ ರಾಜ್ಯದ ಜನರ ಆರ್ಥಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸಲು ಇರುವ ಪರ್ಯಾಯ ಮಾರ್ಗಗಳೇನು? ಅವುಗಳಿಗೆ ತಗುಲುವ ಖರ್ಚು, ಪರ್ಯಾಯ ಸಂಪನ್ಮೂಲಗಳ ಲಭ್ಯತೆ, ಪರಸ್ಪರ ರಾಜ್ಯಗಳ ನಡುವೆ ನೀರಿನ ಬಳಕೆಯಲ್ಲಿನ ಪೋಲನ್ನು ತುಲನೆ ಮಾಡಿ, ಬಳಕೆದಾರರ ನಡುವಿನ ಸಮಸ್ಯೆ ಉದ್ಭವಿಸದಂತೆ ನೀರಿನ ಹಂಚಿಕೆ ಮಾಡಬೇಕು ಎಂದು ಈ ಸೂತ್ರ ಹೇಳುತ್ತದೆ. ಇದಲ್ಲದೇ ಪಕ್ಕದ ರಾಜ್ಯಕ್ಕೆ ತೊಂದರೆಯಾಗದಂತೆ ಇನ್ನೊಂದು ರಾಜ್ಯವನ್ನು ತೃಪ್ತಿ ಪಡಿಸಬಹುದು ಎಂದೂ ಸೂತ್ರದಲ್ಲಿ ತಿಳಿಸಲಾಗಿದೆ.

ಇದನ್ನು ಹೊರತಾಗಿ ಆಯಾ ಪ್ರದೇಶದಲ್ಲಿ ಕುಡಿಯಲು ನೀರು ಅಗತ್ಯವಾಗಿದ್ದರೆ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪರಸ್ಪರ ರಾಜ್ಯಗಳ ನೀರಿನ ಬಳಕೆಯಿಂದ ಆರ್ಥಿಕವಾಗಿ ಎಷ್ಟು ಲಾಭವಾಗುತ್ತದೆ, ಒಂದೊಮ್ಮೆ ಪಕ್ಕದ ರಾಜ್ಯಕ್ಕೆ ಪರಿಹಾರ ನೀಡಿ ಸಂಧಾನ ಹಂಚಿಕೆ ಸೂತ್ರ ಮಾಡಲು ಸಾಧ್ಯವೇ ಎಂಬುದನ್ನೂ ವಿವಾದ ಬಗೆಹರಿಸುವಾಗ ಪರಿಗಣಿಸಬೇಕಾಗುತ್ತದೆ.

ಎರಡೂ ರಾಜ್ಯಗಳ ನಡುವೆ ನೀರಿನ ಅಗತ್ಯವನ್ನೂ ಹೋಲಿಸಿ ನೋಡಬೇಕಾಗುತ್ತದೆ.ಇದಲ್ಲದೇ ಪಕ್ಕದ ರಾಜ್ಯಕ್ಕೆ ಭವಿಷ್ಯದಲ್ಲಿ ನೀರು ಬೇಕಾಗುತ್ತದೆ ಎಂಬ ಕಾರಣಕ್ಕೆ ಆಯಾ ಜಲಾನಯನ ಪ್ರದೇಶದ ಜನರ ಬಳಕೆಯನ್ನು ರಾಜ್ಯಗಳು ನಿಯಂತ್ರಿಸುವಂತಿಲ್ಲ. ಅಣೆಕಟ್ಟಿನಂಥಹ ನಿರ್ಮಾಣಕ್ಕೂ ಮೊದಲು ಆಯಾ ನದಿ ಪಾತ್ರದ ಜನರು ಬಳಸುತ್ತಿದ್ದ ನೀರಿನ ಪ್ರಮಾಣವನ್ನು ನಂತರವೂ ಪರಿಗಣಿಸಬೇಕು ಎಂದು ಹೇಳುತ್ತದೆ ಈ ಹೆಲ್ಸಿಂಕಿ ಸೂತ್ರ.

ಅಧ್ಯಾಯ – 3

ನೀರಿನ ಬಳಕೆಯಲ್ಲಾಗುತ್ತಿರುವ ಪೋಲಿನ ಬಗ್ಗೆ ಈ ಸೂತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಸುಖಾಸುಮ್ಮನೆ ಹರಿದುಹೋಗುವ ನೀರಿನ ಜೊತೆಗೆ ಆಯಾ ಪ್ರದೇಶದಲ್ಲಿ ಸೂಕ್ತವಲ್ಲದ ಬೆಳೆ ಬೆಳೆಯುವುದರ ಮೂಲಕ ಉಂಟಾಗುವ ನೀರಿನ ನಷ್ಟವನ್ನೂ ಪೋಲು ಎಂದೇ ಪರಿಗಣಿಸಲಾಗುತ್ತದೆ. . ಯಾವುದೇ ಕಾರಣಕ್ಕೂ ನೀರಿನ ಪೋಲನ್ನು ರಾಜ್ಯಗಳು ಮಾಡಲೇ ಕೂಡದು ಎನ್ನುತ್ತದೆ ಈ ಸೂತ್ರ.ಒಂದೊಮ್ಮೆ ಒಂದು ರಾಜ್ಯ ನಿಯಮ ಮುರಿದು ನೀರಿನ ಬಳಕೆಯನ್ನು ಮಾಡಿದಲ್ಲಿ ಪಕ್ಕದ ರಾಜ್ಯಕ್ಕೆ ಹಾನಿಯಾದರೆ ಅದನ್ನೂ ನಷ್ಟ ಉಂಟು ಮಾಡಿದ ರಾಜ್ಯವೇ ತುಂಬಿಕೊಡಬೇಕು ಎಂಬುದಾಗಿಯೂ ನಿಯಮಗಳಲ್ಲಿ ಹೇಳಲಾಗಿದೆ.

ಅಧ್ಯಾಯ – 4 & 5

ಒಂದೊಮ್ಮೆ ನದಿ ಆಯಾ ರಾಜ್ಯದಲ್ಲಿ ಹರಿದು ಹೋಗದೇ ಇದ್ದರೆ, ಅಲ್ಲಿ ನೀರನ್ನು ಬಳಸಲು ಅವಕಾಶವಿಲ್ಲ. ಒಂದೊಮ್ಮೆ ಕ್ಯಾನಲ್ ಹರಿದು ಹೋದರೆ ಅದನ್ನು ನದಿ ಎಂದು ಪರಿಗಣಿಸಲಾಗುವುದಿಲ್ಲ. ಇನ್ನು ಆಯಾ ರಾಜ್ಯಗಳು ಅಗತ್ಯ ನೀರಿದ್ದಲ್ಲಿ ಜಲಸಾರಿಗೆಯನ್ನು ನಡೆಸಬಹುದು. ತಮ್ಮಲ್ಲಿ ಹರಿದು ಹೋಗುವ ನದಿಯ ನೀರನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಣೆ ಮಾಡುವುದ ಆಯಾ ರಾಜ್ಯದ ಕರ್ತವ್ಯವಾಗಿರುತ್ತದೆ.

ಯುದ್ಧ ರೀತಿಯ ತುರ್ತು ಪರಿಸ್ಥಿತಿಗಳಲ್ಲಿ ಆಯಾ ರಾಜ್ಯಗಳು (ದೇಶಗಳು) ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಇನ್ನು ನದಿಯನ್ನು ಸಾರಿಗೆ ಸೇರಿದಂತೆ ಇತರ ಬಳಕೆಗಳ ನಿಯಮಗಳನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ನದಿಯಲ್ಲಿ ಹರಿದು ಬರುವ ಮರ ಮಟ್ಟುಗಳು, ಇತರ ವಸ್ತುಗಳು ಯಾರಿಗೆ ಸೇರಿದ್ದು ಯಾರು ಬಳಸಬೇಕು ಎಂಬುದನ್ನೂ ಇದರಲ್ಲಿ ವಿವರಿಸಲಾಗಿದೆ.

ಅಧ್ಯಾಯ – 6

ನೀರಿನ ಹಂಚಿಕೆಯ ವಿಚಾರದಲ್ಲಿ ವಿವಾದಗಳು ಉದ್ಭವಿಸಿದಾಗ ಹೇಗೆ ನಿವಾರಿಸಬೇಕು ಎಂಬುದನ್ನು ಆರನೇ ಅಧ್ಯಾಯದಲ್ಲಿ ಹೇಳಲಾಗಿದೆ. ಏನೇ ವಿವಾದಗಳಾದರೂ ಶಾಂತಿಯುತ ಮಾರ್ಗದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತದೆ ಹೆಲ್ಸಿಂಕಿ ಸೂತ್ರ. ಆದಷ್ಟು ಎರಡು ಪ್ರದೇಶಗಳ ನಡುವೆ ಉಂಟಾಗಬಹುದಾದ ಗೊಂದಲ ನಿವಾರಣೆಗಾಗಿ ಆಯಾ ರಾಜ್ಯಗಳ ತಮ್ಮ ಭೂಭಾಗದ ಪೂರ್ಣ ಪ್ರಮಾಣದ ನೀರಿನ ಸಂಬಂಧಿತ ಮಾಹಿತಿಯನ್ನು ಸಿದ್ದಪಡಿಸಿಟ್ಟುಕೊಂಡಿರಬೇಕು ಎಂದು ಈ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.ಹೆಲ್ಸಿಂಕಿ ಜಲ ನೀತಿಯ ಪ್ರಕಾರ ಒಂದೊಮ್ಮೆ ಯಾವುದಾದರೂ ರಾಜ್ಯಕ್ಕೆ ತಕರಾರುಗಳು ಇದ್ದಲ್ಲಿ ಮೂರನೇ ಸಂಸ್ಥೆಯ ಮೊರೆ ಹೋಗಿ, ವಿವರವಾದ ಸಮೀಕ್ಷೆ ನಡೆಸಿ ಈ ವಿವಾದವನ್ನು ಪರಿಹರಿಸಿಕೊಳ್ಳಬೇಕಾಗಿದೆ.

ವಿಶಾಲ ದೇಶ; ಜಲನೀತಿಯಲ್ಲಿ ಶೂನ್ಯ!

'ಹೆಲ್ಸಂಕಿ ಸೂತ್ರ' ಎಂಬುದು ಅಂತಾರಾಷ್ಟ್ರೀಯ ಜಲನೀತಿಯಾದರೆ, ಭಾರತದಂತಹ ಒಕ್ಕೂಟ ವ್ಯವಸ್ಥೆಯ ವಿಶಾಲ ರಾಷ್ಟ್ರಕ್ಕೆ ತನ್ನದೇ ಆದ ಜಲನೀತಿ ಇಂದಿನವರೆಗೂ ಇಲ್ಲ.2 ಶತಮಾನದಷ್ಟು ಹಿಂದಿನಿಂದಲೇ ಕರ್ನಾಟಕ-ತಮಿಳುನಾಡಿನ ನಡುವೆ ಇರುವ ಕಾವೇರಿ ಜಲ ವಿವಾದದಂತೆಯೇ, ದೇಶದ ಇತರೆ ರಾಜ್ಯಗಳ ನಡುವೆಯೂ ಜಲ ವಿವಾದಗಳಿವೆ. ಅವ್ಯಾವವೂ ಇಂದಿನವರೆಗೆ ಸೂಸೂತ್ರವಾಗಿ ಬಗೆಹರಿದಿಲ್ಲ ಎಂಬುದನ್ನು ಗಮನಿಸಬೇಕಿದೆ.

ದೇಶದಲ್ಲಿ ಇವತ್ತು ಕೇಂದ್ರ ಸರ್ಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ಮುಂದೆ ಹತ್ತಕ್ಕೂ ಹೆಚ್ಚು ಅಂತಾರಾಜ್ಯ ಜಲ ವಿವಾದಗಳಿವೆ. ಪಂಜಾಬ್-ಹರ‍್ಯಾಣ ರಾಜ್ಯಗಳ 'ಸಟ್ಲೇಜ್‌' ನದಿ ನೀರು ಹಂಚಿಕೆ ವಿವಾದ, ಹರ‍್ಯಾಣ, ಜಮ್ಮು-ಕಾಶ್ಮೀರ, ಪಂಜಾಬ್ ಮತ್ತು ರಾಜಸ್ತಾನ್ ರಾಜ್ಯಗಳ ನಡುವಿನ 'ರಾವಿ-ಬಿಯಾಸ್‌' ನದಿ ನೀರು ವಿವಾದ, ದೆಹಲಿ, ಹರ‍್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳ ನಡುವೆ 'ಯಮುನಾ' ನದಿ ನೀರಿನ ಹಂಚಿಕೆ ಗೊಂದಲ, ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಇರುವ ಕೃಷ್ಣ-ಗೋದಾವರಿ ನದಿ ನೀರಿನ ವಿವಾದಗಳು ಇವುಗಳಲ್ಲಿ ಪ್ರಮುಖವಾದವು.

ಅಂತಾರಾಜ್ಯ ನದಿ ನೀರಿನ ವಿವಾದ ಉಂಟಾದಾಗಲೆಲ್ಲಾ ‘ಕೇಂದ್ರ ಅಂತಾರಾಜ್ಯ ನದಿ ನೀರು ಹಂಚಿಕೆ ಕಾಯ್ದೆ - 1956' ರ ಅನ್ವಯ ನ್ಯಾಯಾಧೀಕರಣ ರಚನೆ ಮಾಡಿ ಇಲ್ಲವೇ ಸರ್ವೋಚ್ಚ ನ್ಯಾಯಾಲಯದ ಅಂಗಳಕ್ಕೆ ವಿವಾದಿಂದ ಕೈ ತೊಳೆದುಕೊಳ್ಳುತ್ತದೆ. ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದ ತಾರಕ್ಕೇರಿದ ನಂತರ, ರಾಜೀನಾಮೆ ಮಾತುಗಳನ್ನು ಹಿಂತೆಗೆದುಕೊಂಡು 'ಕಾವೇರಿದ ಚೆಂಡು'ನ್ನು ಪ್ರಧಾನಿ ಮೋದಿ ಅಂಗಳಕ್ಕೆ ಎಸೆದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ (ಚಿತ್ರ ಕೃಪೆ:  ಫಸ್ಟ್ ಪೋಸ್ಟ್ )
ಪ್ರಧಾನ ಮಂತ್ರಿ ನರೇಂದ್ರ ಮೋದಿ (ಚಿತ್ರ ಕೃಪೆ: ಫಸ್ಟ್ ಪೋಸ್ಟ್ )

ಅತ್ತ 'ಹೆಲ್ಸಂಕಿ ಸೂತ್ರ'ವನ್ನೂ ಸರಿಯಾಗಿ ಅರ್ಥೈಸಿಕೊಳ್ಳದೆ, ಪರ್ಯಾಯವಾಗಿ 'ರಾಷ್ಟ್ರೀಯ ಜಲ ನೀತಿ'ಯನ್ನೂ ರೂಪಿಸದ ದೇಶದಲ್ಲಿ ವಿವಾದಕ್ಕೊಂದು ತಾರ್ಕಿಕ ಅಂತ್ಯ ಬೇಕು ಎಂದು ಸಿನೆಮಾ ನಟ- ನಟಿಯರು, ಮಾಧ್ಯಮಗಳು, ರಾಜಕಾರಣಿಗಳು ಕೊನೆಗೆ ಸಾಮಾನ್ಯ ಜನ ಕೂಡ ಬಯಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಇವರೆನ್ನೆಲ್ಲಾ ಒಟ್ಟಿಗೆ ಕೂರಿಸಿಕೊಂಡು, ಬೇಕಿರುವುದು ಸಂಕಷ್ಟ ಕಾಲದ ಪರಿಹಾರ ಸೂತ್ರ ಮಾತ್ರವೇ ಅಲ್ಲ; 'ಹೆಲ್ಸಂಕಿ ಸೂತ್ರ' ಎಂಬುದನ್ನು ಯಾರಾದರೂ ತಿಳಿ ಹೇಳಬೇಕಿದೆ.