samachara
www.samachara.com
'ಎವರಿಬಡಿ ಲವ್ಸ್ ಎ ಗುಡ್ ಬಂದ್': ಪ್ರತಿಭಟನಾ ವಿಧಾನವೊಂದರ ಮತ್ತೊಂದು ಮುಖ!
ಕಾವೇರಿ ವಿವಾದ

'ಎವರಿಬಡಿ ಲವ್ಸ್ ಎ ಗುಡ್ ಬಂದ್': ಪ್ರತಿಭಟನಾ ವಿಧಾನವೊಂದರ ಮತ್ತೊಂದು ಮುಖ!

'ಬಂದ್'...

ಹೀಗೊಂದು ಪದ ಕಳೆದ ಒಂದು ತಿಂಗಳ ಅಂತರದಲ್ಲಿ ರಾಜ್ಯವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಮಹಾದಾಯಿ, ಸಾರಿಗೆ ನೌಕರರ ಮುಷ್ಕರದಿಂದ ಆರಂಭವಾಗಿ ಕಾವೇರಿ ವಿವಾದದವರೆಗೆ 'ಬಂದ್' ಎಂಬ, ದಕ್ಷಿಣ ಏಷಿಯಾ ದೇಶಗಳಲ್ಲಿ ಮಾತ್ರವೇ ಚಲಾವಣೆಯಲ್ಲಿರುವ ಪ್ರತಿಭಟನಾ ರೂಪವೊಂದನ್ನು ಕೊಂಚ ಹೆಚ್ಚಾಗಿಯೇ ಸಾರ್ವಜನಿಕರಿಗೆ ತಟ್ಟಿದೆ.

ಅದರಲ್ಲೂ ಕಾವೇರಿ ವಿಚಾರದಲ್ಲಿ ಕರೆ ನೀಡಿದ್ದ ಬಂದ್ ಬಿಸಿ ಆರುವ ಮುನ್ನವೇ ಸುಪ್ರಿಂ ಕೋರ್ಟ್ ನೀಡಿದ ಮಾರ್ಪಾಟು ತೀರ್ಪು ಹೊರಬೀಳುತ್ತಿದ್ದಂತೆ ರಾಜಧಾನಿ ಬೆಂಗಳೂರು 'ಅಘೋಷಿತ ಬಂದ್' ಆಚರಿಸಿತು. ಅದು ಒಂದು ಹಂತದಲ್ಲಿ ಪ್ರಚೋದನೆಗೆ ಒಳಗಾಗಿ ವಿಕೋಪಕ್ಕೂ ತಿರುಗಿತು. ವಾಹನಗಳು ಬೆಂಕಿಗೆ ಆಹುತಿಯಾದವು; ಆಸ್ತಿ ಪಾಸ್ತಿ ಹಾನಿಯಾಯಿತು. ಕೊನೆಗೆ, ಪೊಲೀಸರು ಸ್ವಯಂ ರಕ್ಷಣೆಗೆ ಮೋರೆ ಹೋಗಿ ಗೋಲಿಬಾರ್ ಕೂಡ ನಡೆಸಿದರು. ಪರಿಣಾಮ, ಒಬ್ಬರು ಗುಂಡೇಟಿಗೆ ಸತ್ತರೆ, ಇನ್ನೊಬ್ಬರು ಕಟ್ಟಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡರು. ಈ ಎಲ್ಲಾ ಆಯಾಮಗಳ ಆಚೆಗೂ 'ಬಂದ್' ಮೂಡಿಸಿರುವ ಪರಿಣಾಮಗಳು ಏನಿರಬಹುದು?

ಮನೋವೈದ್ಯರು ಬೇರೆಯದೇ ಸಾಧ್ಯತೆಗಳನ್ನು ಮುಂದಿಡುತ್ತಾರೆ.

ಮನೆಗಳಲ್ಲಿ ಒಂದು ದಿನ:

ಕಳೆದ ಒಂದು ದಶಕದ ಅಂತರದಲ್ಲಿ ಬೆಂಗಳೂರು ಭಾರಿ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಇಲ್ಲಿನ ಜನಸಂಖ್ಯೆಯೇ ಸುಮಾರು 1 ಕೋಟಿ ಮೀರಿದೆ. ಇಲ್ಲಿರುವ ಬಹುಸಂಖ್ಯಾತ ಜನ ದಿನಾ ದುಡಿದು ತಿನ್ನಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇವರಿಗೆ ಸಿಗುವ ವಾರದ ಒಂದು ದಿನದ ರಜೆಯನ್ನೂ ಶಾಪಿಂಗ್, ಮಾಲ್, ಸುತ್ತಾಟಗಳಿಗೆ ಕಳೆದು ಹೋಗುತ್ತದೆ. ಮನೆಯಲ್ಲಿ ಹೆಚ್ಚು ಸಮಯಕ್ಕಿಂತ ಹೊರಗೆ ಜಾಸ್ತಿ ಸಮಯವನ್ನು ಕಳೆಯುತ್ತಿದ್ದಾರೆ. "ಇಂತವರಿಗೆ ಒಂದು ದಿನ ಬಂದ್ ಮಾಡಿ ಎಲ್ಲಯೂ ಹೋಗುವಂತಿಲ್ಲ, ಮನೆಯಲ್ಲಿಯೇ ಇರಬೇಕು,'' ಎಂಬುದು ಒಂದು ರೀತಿಯ ಸಕಾರಾತ್ಮಕ ಪರಿಣಾಮಗಳನ್ನು ಬೀರಬಲ್ಲದು,'' ಎನ್ನುತ್ತಾರೆ ಬೆಂಗಳೂರು ಮೂಲಕ ಮನೋವೈದ್ಯ ಡಾ. ಮಹೇಶ್.

"ಬಂದ್ ನಡೆದಾಗ ಒಂದಷ್ಟು ಜನ ಕಿಡಿಗೇಡಿಗಳು ಬೀದಿಗೆ ಇಳಿದು ಆಸ್ತಿ ಪಾಸ್ತಿಗಳನ್ನು ಹಾನಿ ಮಾಡುತ್ತಾರೆ. ಅದಕ್ಕೆ ಅವರಿಗೆ ಯಾರೋ ಪ್ರೇರಣೆ ನೀಡಬೇಕು. ಅಂತಹ ಪ್ರೇರಣೆಯನ್ನು ಈ ಬಾರಿ ನೀಡಿದ್ದು ಟಿವಿ ವಾಹಿನಿಗಳು ಎಂಬುದು ಸ್ಪಷ್ಟ. ಅಂತವರು ಹೆಚ್ಚು ಆಲೋಚನೆ ಮಾಡದೆ ಬೀದಿಗೆ ಇಳಿದು ಹಾನಿಗಳನ್ನು ಮಾಡುತ್ತಾರೆ. ಈ ಸಂಖ್ಯೆ ಬೆರಳೆಣಿಕೆಯಷ್ಟಿರಬಹುದು,'' ಎನ್ನುತ್ತಾರೆ ವೈದ್ಯರು.

"ಆದರೆ, ಮನೆಯಲ್ಲಿಯೇ ಉಳಿಯುವ ಮೂಲಕ ಕೌಟುಂಬಿಕ ಸಂಬಂಧಗಳು ಇನ್ನಷ್ಟು ಹತ್ತಿರವಾಗಬಹುದು. ಅಂತಹದೊಂದು ಸಾಧ್ಯತೆ ನಮಗಂತೂ ಕಾಣಿಸುತ್ತಿದೆ,'' ಎನ್ನುತ್ತಾರೆ ಮನೋವೈದ್ಯರು.

ರಿಫ್ರೆಶಿಂಗ್ ಸಮಯ: 

"ಹಾಗೆ ನೋಡಿದರೆ ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಕೆಲಸ ನಡೆಯುತ್ತಿಲ್ಲ. ಆದರೆ, ಈ ಬಂದ್ ಕರೆಗಳಿಂದ ರಜೆಯಂತೂ ಸಿಗುತ್ತಿದೆ. ಅದರಲ್ಲೂ ಮಂಗಳವಾರ ಕಚೇರಿಗೆ ಬರಬೇಡಿ ಎಂದು ಆಡಳಿತ ಮಂಡಳಿ ತಿಳಿಸಿದ್ದರಿಂದ ಒಂದು ದಿನ ಮನೆಯಲ್ಲಿ ಅರಾಮಾಗಿ ಕಳೆಯುವಂತಾಯಿತು. ಹೆಂಡತಿ ಮಕ್ಕಳ ಜತೆ ಹಾಗೆ ದಿನವೊಂದನ್ನು ಕಳೆಯದೇ ಎಷ್ಟೋ ವರ್ಷಗಳಾಗಿತ್ತು,'' ಎನ್ನುತ್ತಾರೆ ಸಾಫ್ಟ್ವೇರ್ ಉದ್ಯೋಗಿಯೊಬ್ಬರು. ಹೆಸರನ್ನು ಬಹಿರಂಗಪಡಿಸಬಾರದು ಎಂಬ ಕೋರಿಕೆ ಮೇರಿಗೆ 'ಸಮಾಚಾರ' ಜತೆ ಮಾತನಾಡಿದ ಅವರು, "ಏನೇ ಹೇಳಿ, ಬಂದ್ ಮಾಡುವುದು ತಪ್ಪಲ್ಲ. ಇಷ್ಟು ದೊಡ್ಡ ದೇಶದಲ್ಲಿ ಆಡಳಿತ ನಡೆಸುವವರಿಗೆ ಬಿಸಿ ಮುಟ್ಟಲು ಶಾಂತಿಯುವ ಬಂದ್ ನಡೆಯಬೇಕು. ಆದರೆ ಅದು ಪ್ರಾಣಹಾನಿ, ಆಸ್ತಿ ಹಾನಿಗಳಾಗದಂತೆ ಇರಬೇಕು,'' ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ಪ್ರತಿಭಟನೆಗಳಿಂದ ಆರಂಭವಾಗುವ ಬೇಡಿಕೆಗಳು ಕೊನೆಗೆ ಬಂದ್ ಮೂಲಕ ಕೊನೆಯಾಗುತ್ತವೆ. "ಬಂದ್ ನಡೆದಾದ ಒಬ್ಬೊಬ್ಬರಿಗೆ ಒಂದೊಂದು ದೃಷ್ಟಿಕೋನ ಇರುತ್ತದೆ. ಆಯೋಜಕರಿಗೆ ತಮ್ಮ ಬೇಡಿಕೆಗಳನ್ನು ಮುಂದಿಡಬೇಕು ಅಂತಿದ್ದರೆ, ಬಂದ್ ವೇಳೆಯಲ್ಲಿ ತಮ್ಮ ಬೇಳೆಕಾಳು ಹೇಗೆ ಬೇಯಿಸಬೇಕು ಎಂದು ಕಾಯುವ ವರ್ಗವೊಂದು ಇರುತ್ತದೆ. ಹಾಗೆಯೇ ಸರಕಾರಕ್ಕೂ ಕೂಡ ಅದರದ್ದೇ ಆದ ರಾಜಕೀಯ ಇದ್ದೇ ಇರುತ್ತದೆ. ಒಟ್ಟಾರೆ ಬಂದ್ ನಡೆಯುತ್ತದೆ. ಆದರೆ ಅದು ಅಶಾಂತಿಗೆ ಕಾರಣವಾಗಬಾರದು,'' ಎನ್ನುತ್ತಾರೆ ಹಿರಿಯ ಪತ್ರಕರ್ತ ಕೆ. ಎನ್. ನಾಗೇಶ್.

ನಮ್ಮದೇ ಪರಿಕಲ್ಪನೆ:

ಬಂದ್ ಎಂಬ ಕಲ್ಪನೆ ನಮ್ಮಲ್ಲಿ ಮಾತ್ರವೇ ಕಾಣಸಿಗುವಂತದ್ದು. ಅದರಲ್ಲೂ ದಕ್ಷಿಣ ಏಷಿಯಾ ದೇಶಗಳಾದ ನೆರೆಯ ಪಾಕಿಸ್ತಾನ, ನೇಪಾಳ, ಶ್ರೀಲಂಕಾಗಳಲ್ಲಿ ಬಂದ್ ಎಂಬ ಪ್ರತಿಭಟನಾ ರೂಪವನ್ನು ಜನ ಬಳಸಿಕೊಳ್ಳುತ್ತಾರೆ. "ಯುರೋಪ್ ಮತ್ತಿತರ ಕಡೆಗಳಲ್ಲಿ ಬಂದ್ ಎಂಬ ಕಲ್ಪನೆ ಇಲ್ಲ. ಇಲ್ಲಿ ಮಾತ್ರವೇ ಬಂದ್ ನಡೆಯುತ್ತದೆ. ನೆರೆಯ ಬರ್ಮಾದಲ್ಲಿ ಕಳೆದ 40 ವರ್ಷಗಳಿಂದ ಬಂದ್ ನಡೆದಿಲ್ಲ. ಅಲ್ಲಿ ಮಿಲಿಟರಿ ಆಳ್ವಿಕೆ ಇರುವ ಹಿನ್ನೆಲೆ ಇದಕ್ಕೆ ಕಾರಣ. ನಮ್ಮಲ್ಲಿ ಹಾಗಲ್ಲ; ಇದು ಪ್ರಜಾಪ್ರಭುತ್ವ,'' ಎನ್ನುತ್ತಾರೆ ಐಎಫ್ಎಸ್ ಅಧಿಕಾರಿಯೊಬ್ಬರು.

ಒಟ್ಟಾರೆ, ರಾಜ್ಯ ಸರಣಿ ಬಂದ್ಗಳಿಂದಾಗಿ ಕಳೆದ ಒಂದು ತಿಂಗಳ ಅಂತರದಲ್ಲಿ ಪ್ರತಿಭಟನಾ ಘೋಷಣೆಗಳಿಗೆ ಕಿವಿಯಾಗುತ್ತಲೇ ಇದೆ. ಸದ್ಯ ಕಾವೇರಿ ವಿಚಾರದಲ್ಲಿ ಮುಂದಿರುವ ಸಾಧ್ಯತೆಗಳನ್ನು ನೋಡದರೆ, ಇನ್ನೊಂದಿಷ್ಟು ಬಂದ್ಗಳು ನಡೆದರೂ ಅಚ್ಚರಿ ಏನಿಲ್ಲ. ಇವುಗಳಿಂದ 25 ಸಾವಿರ ಕೋಟಿ ಲಾಸ್ ಆಯಿತು, ವ್ಯಾಪಾರ ನಿಂತು ಹೋಯಿತು ಹೀಗೆ ಹಲವು ಆಯಾಮಗಳಲ್ಲಿ ಚರ್ಚೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಅದೇ ವೇಳೆ, ಬಂದ್ ಎಂಬುದು ಒಂದಷ್ಟು ಜನರಿಗಾದರೂ ಖುಷಿ ತರಬಲ್ಲದು, ಆರೋಗ್ಯಕರ ಅಡ್ಡಪರಿಣಾಮಗಳನ್ನು ಬೀರಬಲ್ಲದು ಎಂಬುದಕ್ಕೆ ಹಲವು ಸಾಕ್ಷಿಗಳೂ ಸಿಗುತ್ತವೆ.

ಎವರಿಬಡಿ ಲವ್ಸ್ ಎ ಗುಡ್ ಬಂದ್!

ಚಿತ್ರ:

ನ್ಯೂಸ್18.