samachara
www.samachara.com
ಪ್ರಧಾನಿ ಅಂಗಳಕ್ಕೆ 'ಕಾವೇರಿದ ಚಂಡು': ಇನ್ನೊಂದು ಸಾವು, ಸಹಜ ಸ್ಥಿತಿಗೆ ರಾಜಧಾನಿ ಬೆಂಗಳೂರು!
ಕಾವೇರಿ ವಿವಾದ

ಪ್ರಧಾನಿ ಅಂಗಳಕ್ಕೆ 'ಕಾವೇರಿದ ಚಂಡು': ಇನ್ನೊಂದು ಸಾವು, ಸಹಜ ಸ್ಥಿತಿಗೆ ರಾಜಧಾನಿ ಬೆಂಗಳೂರು!

ಕಾವೇರಿ

ವಿವಾದದಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿದ್ದ 'ಮಾಯಾಲೋಕ'ದಲ್ಲಿ ಮಂಗಳವಾರ ಸಂಜೆ ಬಿದ್ದ ಮಳೆ ಇಳೆಯನ್ನು ತಂಪಾಗಿಸಿದೆ. ಹಾಗೆಯೇ, ಕಾವೇರಿ ಗಲಭೆಯನ್ನೂ...

ದಿನದ ಆರಂಭ: 

ಗುಂಡೇಟಿನಿಂದ ಮೃತರಾದ ಉಮೇಶ್ಗೆ ನೀಡಿದ ಪರಿಹಾರ ಸಾಲಲಿಲ್ಲ; ನಾವು ಆಸ್ಪತ್ರೆ ಬಿಟ್ಟು ಕದಲಲ್ಲ ಎನ್ನುವ ಪೋಷಕರ ಪ್ರತಿಭಟನೆಯಿಂದಲೇ ಮಂಗಳವಾರದ ದಿನ ಆರಂಭವಾಯಿತು. ಇದರ ಮಧ್ಯೆಯೂ ಗೋಲಿಬಾರ್ ನಡೆದಿದ್ದ ಹೆಗ್ಗನಹಳ್ಳಿಯಲ್ಲಿ ಒಂದಷ್ಟು ದುಷ್ಕರ್ಮಿಗಳು ರಸ್ತೆಗೆ ಬಂದು ಬೆಂಕಿ ಹಚ್ಚಲು ಯತ್ನಿಸಿದರಾದರೂ, ಅಷ್ಟರಲ್ಲಾಗಲೇ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು.

ಬೆಳಿಗ್ಗೆ 2 ಗಂಟೆಗಳ ಕಾಲ ಮುಸ್ಲಿಂ ಧರ್ಮೀಯರ ಈದ್ ಪ್ರಾರ್ಥನೆಗೆ ಕರ್ಫ್ಯೂ ನಡೆಯುವೆಯೂ ಅವಕಾಶ ನೀಡಲಾಯಿತು.

ಅಲ್ಲಿಂದ ಇಡೀ ರಾಜ್ಯದ ಚಿತ್ತ ನಡೆಯಲಿದ್ದ ಹಿರಿಯ ನಾಯಕರ ಮತ್ತು ಸಂಪುಟ ಸಭೆಯತ್ತ ಹೊರಳಿತು. ಇದರ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರುಗಳಿಗೆ ಕರೆ ಮಾಡಿ ರಾಜ್ಯದ ವಸ್ತು ಸ್ಥಿತಿಯ ಮಾಹಿತಿ ನೀಡಿದರು.

ಹಿರಿಯ ನಾಯಕರ ಸಭೆ: 

ನಂತರ ನಿಗದಿಯಂತೆ 9 ಗಂಟೆ ವೇಳೆಗೆ ಕಾವೇರಿ ವಿಚಾರದಲ್ಲಿ ಮುಂದಿನ ನಡೆ ಕುರಿತು ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಮುಖ್ಯಮಂತ್ರಿ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್, ವೀರಪ್ಪ ಮೊಯ್ಲಿ, ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮಾರ್ಗರೇಟ್ ಆಳ್ವಾ, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಕೇಂದ್ರ ಸಚಿವರಾದ ರೆಹಮಾನ್ ಖಾನ್, ಆಸ್ಕರ್ ಫೆರ್ನಾಂಡಿಸ್, ಗೃಹ ಸಚಿವ ಪರಮೇಶ್ವರ್, ರಾಜ್ಯ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ಅಡ್ವೊಕೇಟ್ ಜನರಲ್ ಮಧುಸೂಧನ್ ನಾಯಕ್ ಭಾಗಿಯಾಗಿದ್ದರು.

ಸಭೆಯ ನಂತರ ಮಾತನಾಡಿದ ಖರ್ಗೆ, “ಕಾವೇರಿ ನೀರು ಅಂತಾರಾಜ್ಯ ವಿವಾದವಾಗಿರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಬಗೆಹರಿಸಬೇಕು,” ಎಂದು ಆಗ್ರಹಿಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ, ಕರ್ನಾಟಕ, ತಮಿಳುನಾಡು, ಪಾಂಡಿಚೆರಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿ. ಪ್ರಮುಖವಾಗಿ ತಮಿಳುನಾಡು ಸಿಎಂ ಜಯಲಲಿತಾ ಅವರೊಂದಿಗೆ ಮಾತುಕತೆ ನಡೆಸಲಿ. ನಮ್ಮದು ಒಕ್ಕೂಟ ವ್ಯವಸ್ಥೆಯಾಗಿರುವುದರಿಂದ ಅಂತಾರಾಜ್ಯ ಜಲವಿವಾದಗಳನ್ನು ಬಗೆಹರಿಸುವ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ,” ಎಂದು ಖರ್ಗೆ ಅಭಿಪ್ರಾಯಪಟ್ಟರು.

ಜತೆಗೆ, ಇದಕ್ಕೂ ಮೊದಲೇ ಪ್ರಸ್ತಾಪವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ಸಭೆಯ ನಂತರ ಕೈಬಿಟ್ಟಂತೆ ಕಂಡುಬಂತು.

ಮಂತ್ರಿ ಪರಿಷತ್ ಸಭೆ:

ಇದಾದ ನಂತರ ಮಂತ್ರಿ ಪರಿಷತ್ ಸಭೆ ವಿಧಾನಸೌಧದಲ್ಲಿ ಆರಂಭವಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, “ನೆರೆ ರಾಜ್ಯಕ್ಕೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಹೀಗಂತ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆರೋಪ ಕೇಳಿಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ನೀರು ಬಿಡುವುದರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲುನಿರ್ಧರಿಸಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮಾಡಲು ತೀರ್ಮಾನಿಸಲಾಗಿದೆ,” ಎಂದು ತಿಳಿಸಿದರು.

“ಸೆ.5ರಂದು ಹಾಗೂ ಸೆ.12 ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಕಷ್ಟವಾಗಿದ್ದರೂ ನ್ಯಾಯಾಂಗ ನಿಂದನೆ ಆರೋಪ ಕೇಳಿಬರುವ ಸಾಧ್ಯತೆ ಇರುವುದರಿಂದ ಎಲ್ಲಾ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ಪಾಲಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವು ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ,” ಎಂದ ಮುಖ್ಯಮಂತ್ರಿ,  ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

“ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೆ ಮನವಿ ಮಾಡಲಾಗಿದೆ. ಇದೇ ವಿಚಾರವಾಗಿ ಮತ್ತೊಮ್ಮೆ ಮನವಿ ಮಾಡಲು ಪ್ರಧಾನಿ ಮೋದಿ ಅವರ ಭೇಟಿಗಾಗಿ ಸಮಯ ಕೇಳಲಾಗಿದ್ದು, ನಾಳೆ(ಸೆ.14ರಂದು) ಪ್ರಧಾನಿ ಕಚೇರಿಯಿಂದ ಸಮಯ ನಿಗದಿಯಾಗಿದೆ. ಪ್ರಧಾನಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುತ್ತೇವೆ,” ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

“ಹೆಗ್ಗನಹಳ್ಳಿ ಪ್ರದೇಶದಲ್ಲಿ ಮಾತ್ರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಉಳಿದೆಡೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕರ್ನಾಟಕದಲ್ಲಿರುವ ತಮಿಳರ ಜೀವ ಹಾನಿ ಮತ್ತು ಆಸ್ತಿ ಹಾನಿಯಾಗದಂತೆ ಸರಕಾರ ರಕ್ಷಣೆ ನೀಡಲಿದೆ,” ಎಂದು ಭರವಸೆ ನೀಡಿದರು.

ಇನ್ನು ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬರೆದ ಪತ್ರಕ್ಕೆ ಪ್ರತಿಯಾಗಿ ಮಂಗಳವಾರ ಜಯಲಲಿತಾ ಕೂಡಾ ಪತ್ರ ಬರೆದಿದ್ದು ತಮಿಳರಿಗೆ ರಕ್ಷಣೆ ನೀಡುವಂತೆ ಕೋರಿಕೊಂಡಿದ್ದಾರೆ.

ಇದಾದ ನಂತರ ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್, ಡಿಜಿಪಿ ಓಂ ಪ್ರಕಾಶ್, ಬೆಂಗಳೂರು ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಭೆಯನ್ನೂ ನಡೆಸಿದರು.

ಮತ್ತೊಂದು ಸಾವು: 

ಮಧ್ಯಾಹ್ನದ ವೇಳೆಗೆ, ಸೋಮವಾರ ಹಿಂದೂಪುರದಲ್ಲಿ ಲಾಠಿ ಚಾರ್ಜ್ ವೇಳೆ ಮೂರನೇ ಮಹಡಿಯಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಅವರಿಗೆ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಸರಕಾರ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದೆ.

ಗುಂಡೇಟಿನಿಂದ ಮೃತಪಟ್ಟ ಮತ್ತೊಬ್ಬ ತುಮಕೂರು ಮೂಲದ ಉಮೇಶ್ ಅಂತ್ಯಸಂಸ್ಕಾರ ಸಾವಿರಾರು ಜನರ ಸಮ್ಮುಖದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಸಿಂಗೋನಹಳ್ಳಿಯಲ್ಲಿ ಸಂಜೆ ವೇಳೆ ನಡೆಯಿತು. ಅವರಿಗೆ ಸರಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು.

ಕೊನೆಗೂ ಬಾಯ್ಬಿಟ್ಟ ಪ್ರಧಾನಿ

ಇವೆಲ್ಲಾ ಬೆಳವಣಿಗೆ ಮಧ್ಯೆ ಮಧ್ಯಾಹ್ನದ ವೇಳೆಗೆ ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ನಡೆಯುತ್ತಿರುವ ಕಾವೇರಿ ಜಲ ವಿವಾದ ಮತ್ತು ಕರ್ನಾಟಕದಲ್ಲಿನ ಗಲಭೆ, ಹಿಂಸಾಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲಬಾರಿಗೆ ಮೌನ ಮುರಿದು ಟ್ವೀಟ್ ಮಾಡಿದರು.

ಪ್ರಧಾನಿ ಅಂಗಳಕ್ಕೆ 'ಕಾವೇರಿದ ಚಂಡು': ಇನ್ನೊಂದು ಸಾವು, ಸಹಜ ಸ್ಥಿತಿಗೆ ರಾಜಧಾನಿ ಬೆಂಗಳೂರು!

''ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಯಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ. ಹಿಂಸಾಚಾರದಿಂದ ಯಾವುದೇ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಮಾತುಕತೆ ಮೂಲಕ ಮಾತ್ರ ಈ ವಿವಾದವನ್ನು ಬಗೆಹರಿಸಿಕೊಳ್ಳಬಹುದಷ್ಟೆ. ಕಾನೂನನ್ನು ಮುರಿಯುವುದು ಅದಕ್ಕೆ ಪರ್ಯಾಯ ಮಾರ್ಗವಲ್ಲ. ಪ್ರಜಾಪ್ರಭುತ್ವದಲ್ಲಿ, ಸಂಯಮ ಮತ್ತು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು.  ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ, ಗಲಭೆಗಳಿಂದ ಬಡಜನತೆಗೆ ನಷ್ಟ, ತೊಂದರೆಯುಂಟಾಗುತ್ತಿದ್ದು, ದೇಶದ ಆಸ್ತಿ-ಪಾಸ್ತಿಗೆ ಹಾನಿಯಾಗುತ್ತಿದೆ,” ಎಂಬ ಸರಣಿ ಟ್ವೀಟ್ಗಳನ್ನು ಪಿಎಂ ಕಚೇರಿಯ ಟ್ವಿಟ್ಟರ್ ಅಕೌಂಟಿನಿಂದ ಮಾಡಲಾಯಿತು. “ಈ ಸಂದರ್ಭದಲ್ಲಿ ಜನರು ತಮ್ಮ ನಾಗರಿಕ ಜವಾಬ್ದಾರಿಗಳನ್ನು ಅರಿತು ಸೂಕ್ಷ್ಮವಾಗಿ ನಡೆದುಕೊಳ್ಳಬೇಕೆಂದು ಎರಡೂ ರಾಜ್ಯದ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ,” ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದರು.

ತಹಬದಿಗೆ ಬಂದ ಪರಿಸ್ಥಿತಿ

ಪ್ರಧಾನಿ ಅಂಗಳಕ್ಕೆ 'ಕಾವೇರಿದ ಚಂಡು': ಇನ್ನೊಂದು ಸಾವು, ಸಹಜ ಸ್ಥಿತಿಗೆ ರಾಜಧಾನಿ ಬೆಂಗಳೂರು!

ಸೋಮವಾರ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪೊಲೀಸರು ಮಂಗಳವಾರ ಸಂಜೆವರೆಗೆ ಹುಡುಕಿ ಹುಡುಕಿ ಬಂಧಿಸುತ್ತಿದ್ದರು. ಒಟ್ಟಾರೆ ಸಂಜೆ ವೇಳೆಗೆ 350ಕ್ಕೂ ಹೆಚ್ಚು ಜನ ಬಂಧಿತರಾಗಿದ್ದರು. ಇಡೀ ದಿನ ಅಲ್ಲಲ್ಲಿ ಪುಂಡ ಪೋಕರಿಗಳು ಕಲ್ಲು ತೂರಾಟ, ಬೆಂಕಿ ಹಚ್ಚುವ ಯತ್ನಗಳನ್ನು ನಿರಂತರವಾಗಿ ಮಾಡಿದರೂ, ಸಂಜೆ ವೇಳೆಗೆ ಪರಿಸ್ಥಿತಿ ಬಹುತೇಕ ಹತೋಟಿಗೆ ಬಂತು. ಬೆಂಗಳೂರಿನ ಹಲವು ಭಾಗಗಳಲ್ಲಿ ಸಂಚಾರ ನಿಧಾನವಾಗಿ ಆರಂಭವಾಯಿತು. ಗಲಭೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಕೆಎಸ್ಆರ್ಟಿಸಿ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಸೂಚನೆ ಮೇರೆಗೆ ಬಸ್ಸುಗಳು ರಸ್ತೆಗೆ ಇಳಿದವು. ಮೆಟ್ರೋ ರೈಲುಗಳ ಸಂಚಾರವೂ ನಿಧಾನವಾಗಿ ಆರಂಭವಾಯಿತು.

ಒಂದಷ್ಟು ಭಾಗಗಳಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ನಾಳೆ ಎಂದಿನಂತೆ ಬೆಂಗಳೂರಿನಲ್ಲಿ ಶಾಲೆ ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ ಅಂತ ಜಿಲ್ಲಾಧಿಕಾರಿ ವಿ. ಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಮೈಸೂರಿನಲ್ಲಿಯೂ ಇಂದು ಶಾಂತಿಯುತ ವಾತಾವರಣ ಇತ್ತು, ಹೀಗಾಗಿ ನಾಳೆ ಶಾಲೆ ಕಾಲೇಜಿಗೆ ರಜೆ ಇಲ್ಲ ಅಂತ ಜಿಲ್ಲಾಧಿಕಾರಿ ರಂದೀಪ್ ಪ್ರಕಟಣೆ ಹೊರಡಿಸಿದ್ದಾರೆ. ಅತ್ತ ಕಾವೇರಿ ಕೊಳ್ಳದ ಇನ್ನೊಂದು ಜಿಲ್ಲೆ ಮಂಡ್ಯದಲ್ಲಿ ಮಾತ್ರ ಸೆಪ್ಟೆಂಬರ್ 17ರವರೆಗೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಎರಡೂ ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಹೀಗೆ ಬಂದಷ್ಟೇ ವೇಗದಲ್ಲಿ ಕಾವೇರಿ ಕಿಚ್ಚು ರಾಜಧಾನಿ ಬೆಂಗಳೂರಿನಲ್ಲಿ ಆರಿದೆ. ಆದರೆ ಬೂದಿ ಮುಚ್ಚಿದ ಕೆಂಡ ಮತ್ಯಾವಾಗ ಭುಗಿಲೇಳುತ್ತೋ ಗೊತ್ತಿಲ್ಲ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗರಂ

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹಾಗೂ ದ್ವೇಷ ಹಬ್ಬಿಸುವ ಸುದ್ದಿ ಮತ್ತು ಕಾರ್ಯಕ್ರಮಗಳನ್ನು ಪದೇ ಪದೇ ಪ್ರಸಾರ ಮಾಡಿರುವ ಟಿವಿ ಚಾನೆಲ್‌ಗಳ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿರುವ ಗಂಭೀರ ಬೆಳವಣಿಗೆ ನಡೆದಿದೆ.

ಈ ರೀತಿ ವರದಿ ಪ್ರಸಾರ ಮಾಡಿದಲ್ಲಿ ಎರಡೂ ರಾಜ್ಯಗಳಲ್ಲಿ ಉದ್ವಿಗ್ನತೆ ಹೆಚ್ಚಲಿದೆ. ಸ್ಥಳೀಯ ಮಾಧ್ಯಮಗಳು, ಕೇಬಲ್ ನೆಟ್‌ವರ್ಕ್‌ಗಳು ದೇಶದ ಹಿತದೃಷ್ಟಿಯಿಂದ ಹಿಂಸೆ, ಗಲಭೆಗಳ ವರದಿ ಪ್ರಸಾರದಲ್ಲಿ ಮಾಧ್ಯಮ ಧರ್ಮ ಪಾಲಿಸಬೇಕು. ಹಿಂಸೆಗೆ ಪ್ರೇರಣೆ ನೀಡಬಲ್ಲ ಯಾವುದೇ ಸುದ್ದಿ ಅಥವಾ ಕಾರ್ಯಕ್ರಮ ಪ್ರಸಾರ ಮಾಡಬಾರದು. ಹಿಂಸೆ ಮತ್ತು ಹಾನಿಯ ದೃಶ್ಯಗಳ ಪ್ರಸಾರ ಮತ್ತು ಪದ ಬಳಕೆಯಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸಲಹೆ ನೀಡಿದೆ.

ಯಾವುದೇ ಕಾರಣಕ್ಕೂ ಸಂಯಮ ಪಾಲಿಸುವಂತೆ ಸಲಹೆ ನೀಡಿರುವ ಇಲಾಖೆ ಹಿಂಸೆ ಅಥವಾ ಗಲಭೆ ಘಟನೆಗಳ ನೇರ ಅಥವಾ ಫೈಲ್ ಕ್ಲಿಪ್ಪಿಂಗ್‌ಗಳ ಪ್ರಸಾರ ಮಾಡದಂತೆಯೂ ಹೇಳಿದೆ.

ಚಿತ್ರ ಕೃಪೆ:

ಪ್ರಜಾವಾಣಿ, ದಿ ಹಿಂದೂ