samachara
www.samachara.com
'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?
ಕಾವೇರಿ ವಿವಾದ

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

ಸೋಮವಾರ

ಬೆಳಿಗ್ಗೆಯಿಂದ ನಡೆದ ‘ಕಾವೇರಿ’ ಸುತ್ತಮುತ್ತಲಿನ ಬೆಳವಣಿಗೆಗಳು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು ಭಾಗಗಳನ್ನು ಸ್ಥಬ್ಧ ಮಾಡಿ ಹಾಕಿವೆ. ಬೆಂಗಳೂರಿನ ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ; ಸಂಜೆ ವೇಳೆಗೆ ಧಗಧಗಿಸುವ ಬೆಂಕಿ ಆವರಿಸಿತ್ತು. ಕ್ಷಣದಿಂದ ಕ್ಷಣಕ್ಕೆ ರಾಜ್ಯದಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಬದಲಾದ ಪರಿಸ್ಥಿತಿಗಳ 'Time Line' ಸ್ಟೋರಿಯನ್ನು 'ಸಮಾಚಾರ' ಇಲ್ಲಿ ನಿಮ್ಮ ಮುಂದಿಡುತ್ತದೆ.

ಬೆಳಿಗ್ಗೆ..

7:00 – ಬೆಂಗಳೂರು ವಾತಾವರಣ ಪ್ರಶಾಂತವಾಗಿತ್ತು. ಎಂದಿನ ಮುಂಜಾವಿನಂತೆ ತಣ್ಣನೆ ಗಾಳಿ ಬೀಸುತ್ತಿತ್ತು. ಸಂಜೆ ವೇಳೆಗೆ ಮಹಾಗಂಡಾಂತರ ಕಾದಿದೆ ಎಂಬ ಯಾವ ಮುನ್ಸೂಚನೆಗಳೂ ಇರಲಿಲ್ಲ.

9:00 – ದಿನನಿತ್ಯದ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಗಳೂ ಇರಲಿಲ್ಲ. ಸೂರ್ಯ ಎಂದಿನಂತೆ ಮೇಲೇರುತ್ತಿದ್ದ. ಬೆಂಗಳೂರಿನ ಹವೆ ನಿಧಾನಕ್ಕೆ ಬಿಸಿಯೇರುತ್ತಿತ್ತು.

10:20 – ಜನ ಏಕಾಏಕಿ ಟಿವಿ ಚಾನಲ್ಲುಗಳನ್ನು ಮುಗಿಬಿದ್ದು ನೋಡುತ್ತಿದ್ದುದು ಅಲ್ಲಲ್ಲಿ ಕಂಡು ಬಂತು. ಚೆನ್ನೈನಲ್ಲಿ ಕನ್ನಡಿಗರ ವುಡ್ ಲ್ಯಾಂಡ್ ಹೊಟೇಲಿನ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದೃಶ್ಯಗಳು, ರಾಮೇಶ್ವರ ಮುಂತಾದೆಡೆ ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಿದಾಡಿದವು. ಮುಖ್ಯವಾಗಿ ಕನ್ನಡಿಗನೊಬ್ಬನ ಮೇಲೆ ಹಲ್ಲೆ ಮಾಡಿದ ವೀಡಿಯೋ ವೈರಲ್ ಆಯಿತು.

10:30 – ಸುಪ್ರಿಂ ಕೋರ್ಟಿನಲ್ಲಿ ತುರ್ತು ಅರ್ಜಿ ವಿಚಾರಣೆ ಹಾಗೂ ತಮಿಳುನಾಡಿನಲ್ಲಿ ಕನ್ನಡಿಗರ ಉದ್ಯಮಗಳಿಗೆ ಸೂಕ್ತ ರಕ್ಷಣೆ ನೀಡಿರುವ ವಿಚಾರವೂ ಮಾಧ್ಯಮಗಳ ಮೂಲಕ ಜನಕ್ಕೆ ತಲುಪಿತು. ಕನ್ನಡಿಗರ ಮೇಲಿನ ದಾಳಿ ಸಂಬಂಧ ತಮಿಳುನಾಡು ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದೂ ಸುದ್ದಿಗಳಲ್ಲಿ ಜಾಗ ಪಡೆದಿತ್ತು. ಹೀಗಿದ್ದೂ ಜನ ಒಳಗಿಂದೊಳಗೆ ಆಕ್ರೋಶಕೊಂಡಿದ್ದು ಟಿವಿ ನೋಡುತ್ತಿದ್ದವರ ಮುಖ ಚಹರೆಯಲ್ಲಿ ಗುರುತಿಸಬಹುದಾಗಿತ್ತು.

12:00 – ತಮಿಳುನಾಡಿನಲ್ಲಿ ನಡೆದ ಯಾವ ಘಟನೆಗಳೂ ಮಧ್ಯಾಹ್ನದವರೆಗೆ ಕರ್ನಾಟಕದಲಿ ಯಾವ ಪರಿಣಾಮಗಳನ್ನು ಬೀರಿರಲಿಲ್ಲ. ಆದರೆ ಮಧ್ಯಾಹ್ನದ ವೇಳೆಗ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಸೆಪ್ಟೆಂಬರ್ 20ರವರೆಗೆ ದಿನಂಪ್ರತಿ 12 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿತು.

ಮಧ್ಯಾಹ್ನ..

12:30 – ತಮಿಳುನಾಡಿನಲ್ಲಿ ಕನ್ನಡಿಗರ ಹಲ್ಲೆಗೆ ಮೊದಲ ಆಕ್ರೋಶ ಮೈಸೂರಿನಿಂದ ವರದಿಯಾಯಿತು. ಮೈಸೂರಿನ ಕಂಸಾಳೆ ಮಹದೇವಯ್ಯ ವೃತ್ತದ ಬಳಿ ತಮಿಳುನಾಡಿನವರಿಗೆ ಸೇರಿದ ಟೊಯೋಟಾ ಕ್ವಾಲಿಸ್ ಕಾರಿಗೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬೆಂಕಿ ಇಟ್ಟು ಹೊತ್ತಿಸಿ ಹಾಕಿದರು. ಮಂಡ್ಯದಲ್ಲಿ ತಮಿಳುನಾಡಿನ ರೆಜಿಸ್ಟ್ರೇಷನ್ ಹೊಂದಿದ ಬಸ್ಗಳಿಗೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈಯಲಾಯಿತು.

12:40 – ವಾಟಾಳ್ ನಾಗರಾಜ್ ಎಂದಿನಂತೆ ಸೆಪ್ಟೆಂಬರ್ 15ರಂದು ‘ಕರ್ನಾಟಕ ಬಂದ್’ಗೆ ಕರೆ ನೀಡಿದರು. ಅಂದು ರೈಲು ತಡೆ ನಡೆಸಲಾಗುವುದು ಎಂದು ಘೋಷಣೆ ಮಾಡಿದರು.

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

1:15 – ಮೈಸೂರಿನ ನಂಜನಗೂಡಿನಲ್ಲಿ ತಮಿಳುನಾಡಿನ ಲಾರಿಗೆ ಬೆಂಕಿ ಇಡಲಾಯಿತು. ಲಾರಿ ಹೊತ್ತಿ ಉರಿದು ಕರಕಲಾಯಿತು. ಲಾರಿಗೆ ಬೆಂಕಿ ಇಟ್ಟ ಮೊದಲ ಪ್ರಕರಣವಿದು.

1:45 – ಬೆಂಗಳೂರಿನ ವಿಜಯನಗರದಲ್ಲಿ ತಮಿಳುನಾಡಿನ ಕಾರ್ ಒಂದನ್ನು ಮಗುಜಿ ಹಾಕಿ ಜಖಂ ಮಾಡಲಾಯಿತು. ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆಯ ವಿರುದ್ಧದ ಪ್ರತಿಭಟನೆ ರಾಜಧಾನಿಗೂ ಕಾಲಿಟ್ಟಿತು.

2:00 – ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿದ್ದ ಅಡಿಯಾರ್ ಆನಂದ್ ಭವನ್ಗೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದಾಗ ರ್ಯಾಪಿಡ್ ಆಕ್ಷನ್ ಫೋರ್ಸ್ ಮತ್ತು ಪೊಲೀಸ್ ಪಡೆಗಳು ಎರಡೆರಡು ಬಾರಿ ಲಾಠಿ ಚಾರ್ಚ್ ಮಾಡಿದರು. ಇಡೀ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹಿಂಸೆ ಮನೆ ಮಾಡಿತ್ತು. ಪ್ರಯಾಣಿಕರೆಲ್ಲಾ ನಿಲ್ದಾಣ ಬಿಟ್ಟು ಹೊರ ನಡೆದರು.

2:10ನ- ತಮಿಳುನಾಡು ಮುಖ್ಯಂತ್ರಿ ಜಯಲಲಿತಾಗೆ ಪತ್ರ ಬರೆಯುವುದಾಗಿ ಸಿದ್ಧರಾಮಯ್ಯ ಹೇಳಿಕೆ ನೀಡಿದರು. ತಮಿಳುನಾಡಿನಲ್ಲಿರುವ ಕರ್ನಾಟಕದವರ ರಕ್ಷಣೆ ನಿಮ್ಮ ಹೊಣೆ ಎಂಬ ಸಂದೇಶವನ್ನು ಜಯಲಲಿತಾಗೆ ರವಾನಿಸಿದರು. ಜೊತೆಗೆ ಶಾಂತಿಯಿಂದ ಇರುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡರು.

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

2:44 – ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ನಿಷೇಧಾಜ್ಞೆ (ಸೆಕ್ಷನ್ – 144) ಜಾರಿಗೊಳಿಸಿಲ್ಲ ಎಂದು ಬೆಂಗಳೂರು ಸಿಟಿ ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಯಿತು.

3:00 – ಬೆಂಗಳೂರಿನಾದ್ಯಂತ ವಿಷಮ ಪರಿಸ್ಥಿತಿ. ಮುನ್ನೆಚ್ಚರಿಕೆ ಕ್ರಮವಾಗಿ ಮೆಟ್ರೋ ಸೇವೆ ಸಂಪೂರ್ಣ ಸ್ಥಗಿತ. ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಕರನ್ನು ಹೊರಗೆ ಕಳುಹಿಸಿ ಬೀಗ ಹಾಕಿದ ಸಿಬ್ಬಂದಿಗಳು. ಅತ್ತ ಇಂದಿರಾನಗರ ಮತ್ತು ಶ್ರೀನಗರದ ಪೂರ್ವಿಕ ಮೊಬೈಲ್ ಶಾಪ್ ಮೇಲೆ ಕನ್ನಡಪರ ಸಂಘಟನೆಗಳಿಂದ ದಾಳಿ.

3:10 – ಬೆಂಗಳೂರಿನ ಶಾಲೆ – ಕಾಲೇಜುಗಳಿಗೆ ರಜೆ ಘೋಷಣೆ; ಖಾಸಗಿ ಕಂಪೆನಿಗಳಿಗೂ ರಜೆ. ಮನೆಗೆ ತೆರಳುವವರ ಜನಜಂಗುಳಿಯಿಂದ ಮೆಜೆಸ್ಟಿಕ್, ಎಂ.ಜಿ ರಸ್ತೆ, ಹೊಸೂರು ರೋಡ್, ರಿಚ್ಮಂಡ್, ಬೊಮ್ಮನಹಳ್ಳಿ ಮುಂತಾದಡೆ ವಿಪರೀತ ಟ್ರಾಫಿಕ್ ಜಾಂ.

3:15 – ಕೆಆರ್’ಎಸ್ ಗೆ ಪದೇ ಪದೇ ಮುತ್ತಿಗೆ ಯತ್ನ. ಮಂಡ್ಯದ ಗೆಜ್ಜೆಲೆಗೆರೆಯಲ್ಲಿ ಟಾಟಾ ಸುಮೋ ವಾಹನಕ್ಕೆ ಬೆಂಕಿ. ಮಂಡ್ಯದ ಪಾಂಡವಪುರದಲ್ಲಿ ತಮಿಳುನಾಡಿನ ಅಂಗಡಿಗಳ ಮೇಲೆ ದಾಳಿ; ಹಾಲಿನ ಲಾರಿಗೆ ಬೆಂಕಿ. ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸಿದ್ದ ನಿವೃತ್ತ ನ್ಯಾಯಾಧೀಶ ಶಿವಪ್ಪರ ಪಾಂಡವಪುರ ಮನೆ ಜಖಂ.

3:20 – ಹಿಂಸಾಚಾರ, ಗಲಭೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಸೆಪ್ಟೆಂಬರ್ 13 ರಂದು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ತುರ್ತು ಸಚಿವ ಸಂಪುಟ ಸಭೆಯ ಪ್ರಕಟಣೆ.  

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

4:00 – ನಾಯಂಡಹಳ್ಳಿ, ನೈಸ್ ರಸ್ತೆ, ಬೆಂಗಳೂರು – ಮೈಸೂರು ಹೆದ್ದಾರಿಯ ಟೋಲ್ ಗೇಟ್ ಸೇರಿ ಹಲವೆಡೆ ಲಾರಿಗಳಿಗೆ ಬೆಂಕಿ. ಕನ್ನಡ ಪರ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರಿಂದ ಹರಸಾಹಸ.

4:30 – ನ್ಯೂ ಟಿಂಬರ್ ಯಾರ್ಡ್ ಲೇ ಔಟಿನಲ್ಲಿ ಗೋಕುಲ್ ದಾಸ್ ಟ್ರಾನ್ಸ್ ಪೋರ್ಟಿಗೆ ಸೇರಿದ ಲಾರಿಗಳಿಗೆ ಬೆಂಕಿ. ಆವಲಹಳ್ಳಿಯಲ್ಲೂ 3 ಲಾರಿ, 3 ಖಾಸಗಿ ವಾಹನಗಳಿಗೆ ಬೆಂಕಿ. ಪೀಣ್ಯದ ಗಾರ್ಮೆಂಟ್ ಫ್ಯಾಕ್ಟರಿಗಳು ಬಂದ್. ಅತ್ತಿಬೆಲೆಯಲ್ಲಿ ಕೆಎಸ್ಆರ್ಟಿವಿ ಬಸ್ಗಳ ನಿಲುಗಡೆ.

5:00 – ಬೆಂಗಳೂರು ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ರಿಂದ ರಾಜಧಾನಿಯಾದ್ಯಂತ ನಿಷೇದಾಜ್ಞೆ ಜಾರಿ. ಮಂಡ್ಯ, ಮೈಸೂರು, ಹಾಸನ, ಕೆಆರ್’ಎಸ್, ಕಬಿನಿ, ಗೊರೂರು, ನಂಜನಗೂಡು, ಶ್ರೀರಂಗಪಟ್ಟಣ ಪ್ರದೇಶದಲ್ಲಿಯೂ ಸೆಕ್ಷನ್ 144 ಜಾರಿ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಹೇಳಿಕೆ.

5:05 – ರಾಜಾಜಿನಗರ ಮೂರನೇ ಬ್ಲಾಕ್, ನವರಂಗ್ ನಲ್ಲಿ ತಮಿಳರಿಂದ ಕನ್ನಡಿಗರನ್ನು ಬೆಂಬಲಿಸಿ ಪ್ರತಿಭಟನೆ.

5:20 - ಮಂಡ್ಯ ತಾಲೂಕಿನ ಮದ್ದೂರಿನ ಗೆಜ್ಜಲಗೆರೆಯಲ್ಲೂ ನಿಷೇದಾಜ್ಞೆ ಜಾರಿ ಮಾಡಿ ಎಸಿ ಅರುಳ್ ಕುಮಾರ್ ಆದೇಶ. ಮಂಡ್ಯದಲ್ಲಿ ಮಧ್ಯ ಮಾರಾಟ ನಿಷೇಧಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ.

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

5:30 – ಗೋಕುಲ್ ದಾಸ್ ಟ್ರಾನ್ಸ್ ಪೋರ್ಟಿಗೆ ಸೇರಿದ 25 ಕ್ಕೂ ಹೆಚ್ಚು ಲಾರಿಗಳು ಬೆಂಕಿಗಾಹುತಿ. ತಮಿಳುನಾಡಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿಗೆ ನೈಸ್ ರಸ್ತೆಯಲ್ಲಿ ಬೆಂಕಿ ಇಟ್ಟ ಹೋರಾಟಗಾರರು. ನಾಯಂಡಹಳ್ಳಿ ಸುತ್ತಮುತ್ತ ಬಿಗುವಿನ ವಾತಾವರಣ.

5:45 – ನಾಯಂಡಹಳ್ಳಿ ಶೆಡ್ಗಳಲ್ಲಿ ನಿಲ್ಲಿಸಿದ್ದ ಕೆಪಿಎನ್ ಸಂಸ್ಥೆಗೆ ಸೇರಿದ ಬಸ್ಸುಗಳಿಗೆ ಬೆಂಕಿ.

ಸಂಜೆ..

6:00 – ಹೆಚ್ಚಿನ ಎಲ್ಲಾ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ ಬಿಎಂಟಿಸಿ ಬಸ್. ಮೈಸೂರು ರಸ್ತೆ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರವೂ ಬಂದ್.

6:30 – ಕೆಪಿಎನ್ ಸಂಸ್ಥೆಯ 30ಕ್ಕೂ ಹೆಚ್ಚು ಬಸ್ಸುಗಳಿಗೆ ಪಸರಿಸಿದ ಬೆಂಕಿ. ಧಗಧಗಿಸುವ ಕಿಚ್ಚು ಆರಿಸಲು ಹರಸಾಹಸ. ಅಕ್ಕಪಕ್ಕದ ಮನೆಗಳಿಂದ ಜನರ ಸ್ಥಳಾಂತರ.

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

7:45 – ರಾಜಗೋಪಾಲನಗರ ಠಾಣೆ ಪ್ರದೇಶದಲ್ಲಿ, ಲಗ್ಗೆರೆ ಸಮೀಪ ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ನಿಂದ ಗುಂಡಿನ ದಾಳಿ. ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಲು ಬಂದವರ ಮೇಲೆ ಗುಂಡು, ಮೂವರಿಗೆ ಗಾಯ.

8:30 – ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಸೆಪ್ಟೆಂಬರ್ 12ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 14ರ ವರೆಗೆ ನಿಷೇದಾಜ್ಞೆ. ಮೈಸೂರು ಪೊಲೀಸ್ ಆಯುಕ್ತ ಬಿ. ದಯಾನಂದರಿಂದ ಆದೇಶ.

9:24 – ಹೆಗ್ಗನಹಳ್ಳಿಯಲ್ಲಿ ಗಾಯಗೊಂಡಿದ್ದ ತುಮಕೂರು ಮೂಲದ ಉಮೇಶ್ ಎಂಬವವರು ಸಾವು. ಗಾಯಗೊಂಡಿರುವ ಪ್ರದೀಪ್, ಚಂದ್ರಮೋಹನ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ.

10:00 – ನಾಯಂಡಹಳ್ಳಿಯ 60ಕ್ಕೂ ಹೆಚ್ಚು ಕೆಪಿಎನ್ ಬಸ್ಸುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮ. ಸುಮಾರು 4-5 ಗಂಟೆಯ ನಂತರ ಹತೋಟಿಗೆ ಬಂದ ಬೆಂಕಿಯ ತೀವ್ರತೆ.

10:25 – ರಾಜಾಗೋಪಾಲನಗರ, ಕಾಮಾಕ್ಷಿ ಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗಡಿ, ರಾಜಾಜಿನಗರ ಸೇರಿ ಒಟ್ಟು ಎಂಟು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ.

'ಹತೋಟಿಗೆ ಸಿಗದ ಕಿಚ್ಚು': ಸೋಮವಾರದ Time Line; ಎಲ್ಲೆಲ್ಲಿ? ಏನೇನು ನಡೆಯಿತು?

11:30 – ನಂದಿನಿ ಲೇ ಔಟ್, ಜ್ಞಾನಭಾರತಿ, ಯಶವಂತಪುರ, ಮಹಾಲಕ್ಷ್ಮೀ ನಗರ, ಪೀಣ್ಯ, ಆರ್’ಎಂಸಿ ಯಾರ್ಡ್, ಕೆ.ಪಿ ಅಗ್ರಹಾರ, ಚಂದ್ರಾ ಲೇಔಟ್ ಸೇರಿ ಮತ್ತಷ್ಟು ಪ್ರದೇಶಗಳಿಗೆ ಕರ್ಫ್ಯೂ ವಿಸ್ತರಣೆ. ಒಟ್ಟು 16 ಪ್ರದೇಶಗಳಲ್ಲಿ ಕರ್ಫ್ಯೂ ಹೇರಿ ಬೆಂಗಳೂರು ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಆದೇಶ.

ಚಿತ್ರ ಕೃಪೆ:

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ದಿ ಹಿಂದೂ