ಗೋಲಿಬಾರ್- 2016: ಜೀವನದಿ ವಿಚಾರದಲ್ಲಿ ಜೋಭದ್ರಗೇಡಿತನ ಮೆರೆದವರು ಯಾರು?
ಕಾವೇರಿ ವಿವಾದ

ಗೋಲಿಬಾರ್- 2016: ಜೀವನದಿ ವಿಚಾರದಲ್ಲಿ ಜೋಭದ್ರಗೇಡಿತನ ಮೆರೆದವರು ಯಾರು?

'ಕನ್ನಡ

ನಾಡಿನ ಜೀವ ನದಿ- ಈ ಕಾವೇರಿ' ಎನ್ನಿಸಿಕೊಂಡಿದ್ದ ಕಾವೇರಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಪೊಲೀಸರ ಗುಂಡಿಗೆ ಸೋಮವಾರ ಜೀವ ಕಳೆದುಕೊಂಡಿದ್ದಾರೆ.

ವಾರದ ಆರಂಭದ ದಿನ, ಮುಂಜಾನೆಯಿಂದಲೇ ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆಗಳನ್ನು ನೀಡಿದ್ದ ವಾತಾವರಣವನ್ನು ಹೊಂದಿತ್ತು. ಸಂಜೆ ಹೊತ್ತಿಗೆ ಅದು ವಿಕೋಪಕ್ಕೆ ತಿರುಗಿತು. ಖಾಸಗಿ ಬಸ್ ಸಂಸ್ಥೆಗೆ ಸೇರಿದ್ದ ಮಲ್ಟಿ ಆಕ್ಸೆಲ್ ಬಸ್ಗಳು ಧಗಧಗ ಹೊತ್ತಿ ಉರಿದವು. ಸಣ್ಣ ಪುಟ್ಟ ವಾಹನಗಳೂ ಕಿಡಿಗೇಡಿಗಳ ಕೈಯಲ್ಲಿ ಪುಡಿಪುಡಿಯಾದವು. ಹೆಚ್ಚು ಕಡಿಮೆ ಇದೇ ಚಿತ್ರಣ ಬೆಂಗಳೂರಿನ ಕೆಲವು ಭಾಗಗಳಲ್ಲಿ ಹಾಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿತ್ತು (ಕಾವೇರಿ ಕಿಚ್ಚಿನ ಟೈಮ್ ಲೈನ್

.)

ಸಂಜೆ ಕಳೆಯುವ ಹೊತ್ತಿಗೆ ಬೆಂಗಳೂರಿನ ಹೆಗ್ಗನಹಳ್ಳಿಗೆ ಪ್ರದೇಶದಲ್ಲಿ ನಡೆದ ಪೊಲೀಸರ ಗೋಲಿಬಾರ್ನಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಮೃತ, 25 ವರ್ಷದ ತುಮಕೂರು ಮೂಲದ ಉಮೇಶ್ ಎಂದು ಗುರುತಿಸಲಾಗಿದೆ. ಉಮೇಶ್ ಖಾಸಗಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದು ಪುಟ್ಟ ಮಗುವನ್ನು ಹೊಂದಿರುವ ಅವರ ಪತ್ನಿ ಇನ್ನೊಂದು ಮಗುವಿಗೆ ಗರ್ಭಿಣಿಯಾಗಿದ್ದರು. "ಪ್ರೇಮ ವಿವಾಹವಾಗಿದ್ದ ಆತ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಕೆಲಸ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ,'' ಎಂದು ಮೃತರ ಸಂಬಂಧಿಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಇನ್ನೂ ಇಬ್ಬರು ಪೊಲೀಸರ ಗುಂಡೇಟಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

 ಈ ಸಾವು ನ್ಯಾಯವೇ?:

ಹಾಗೆ ನೋಡಿದರೆ, ಕಾವೇರಿ ವಿಚಾರ ಕಳೆದ ಒಂದು ವಾರದಿಂದ ಈಚೆಗೆ ಸುದ್ದಿಕೇಂದ್ರದಲ್ಲಿಯೇ ಇದ್ದ ವಿಚಾರ. ಸುಪ್ರಿಂ ಕೋರ್ಟ್ ತೀರ್ಪು, ಸರಕಾರದ ಮನವಿ, ಫಾಲಿ ನಾರಿಮನ್, ಬಂಗಾರಪ್ಪ, 1991ರಲ್ಲಿ ನಡೆದ ಕಾವೇರಿ- ತಮಿಳರ ಮೇಲಿನ ಗಲಭೆ ಹೀಗೆ ಹಲವು ವಿಚಾರಗಳು ಚರ್ಚೆಗೆ ಒಳಗಾಗಿದ್ದವು. ಈ ಸಮಯದಲ್ಲಿಯೇ, ಸುಪ್ರಿಂ ಕೋರ್ಟ್ ಸಂಕಷ್ಟದ ಸಮಯದಲ್ಲಿ ನೀರು ಹರಿಸುವಂತೆ ಆದೇಶ ನೀಡಿದ್ದನ್ನು ಮರುಪರಿಶೀಲನೆಗೆ ರಾಜ್ಯ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ಇಂದು ತನ್ನ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿ ಹೊಸ ತೀರ್ಪನ್ನು ನೀಡಿದೆ (ಇದರ ತಾಂತ್ರಿಕ ವಿವರಗಳಿಗಾಗಿ 'ಲೈವ್ ಲಾ' ಪ್ರಕಟಿಸಿದ ಈ ವರದಿ

). ಇದಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಗಳ ಜಿಲ್ಲೆಗಳಲ್ಲಿ ಘರ್ಷಣೆ ಆರಂಭವಾಗಿದೆ. ಈ ಸಮಯಕ್ಕಾಗಿಯೇ ಸಿದ್ಧತೆ ಮಾಡಿಕೊಂಡವರಂತೆ ಒಂದಷ್ಟು ಕಿಡಿಗೇಡಿಗಳು ಕಾವೇರಿ ವಿಚಾರದಲ್ಲಿ ತಮಿಳುನಾಡಿನ ನೋಂದಣಿ ಇರುವ ವಾಹನಗಳನ್ನು, ತಮಿಳುನಾಡು ಮೂಲದ ಹೋಟೆಲ್ ಉದ್ಯಮವನ್ನು ಹಾಗೂ ಮೊಬೈಲ್ ಹ್ಯಾಂಡ್ ಸೆಟ್ ಮಾರಾಟ ಉದ್ಯಮವನ್ನು ಗುರಿಯಾಗಿಸಿಕೊಂಡಿದ್ದಾರೆ. ಖಾಸಗಿ ಬಸ್ ಸಂಸ್ಥೆಯ ಮೇಲೆ ವ್ಯವಸ್ಥಿಯ ದಾಳಿ ನಡೆದಿದೆ. ಇವೆಲ್ಲದರ ಒಟ್ಟು ಪರಿಣಾಮ ಎಂಬಂತೆ ಸಂಜೆ ವೇಳೆಗೆ ಗೋಲಿಬಾರ್ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಯಾವುದಕ್ಕೂ ಸಂಬಂಧವಿಲ್ಲದ, ಕಾವೇರಿಗೆ ಯಾವ ರೀತಿಯಲ್ಲೂ ಪ್ರಾದೇಶಿಕ ಸಂಬಂಧವನ್ನೇ ಹೊಂದಿರದ ತುಮಕೂರು ಮೂಲದ ಯುವಕ ಸಾವನ್ನಪ್ಪಿದ್ದಾನೆ.

"ಮುನ್ನೆಚ್ಚರಿಕಾ ಕ್ರಮವನ್ನು ಸರಕಾರ ತೆಗೆದುಕೊಂಡಿದ್ದರೆ ಖಂಡಿತಾ ಈ ಘಟನೆಯನ್ನು ತಪ್ಪಿಸಬಹುದಿತ್ತು,'' ಎನ್ನುತ್ತಾರೆ ಹೈ ಕೋರ್ಟ್ನ ಹಿರಿಯ ವಕೀಲರಾದ ಬಿ. ಟಿ. ವೆಂಕಟೇಶ್. ಸುಪ್ರಿಂ ಕೋರ್ಟ್ ಆದೇಶದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸುವ ಅವರು, ಅದಕ್ಕಿಂತ ಹೆಚ್ಚಾಗಿ ರಾಜ್ಯದ ಗೃಹ ಸಚಿವರು ತಮ್ಮ ಹೊಣೆಗಾರಿಕೆಯನ್ನು ಪ್ರದರ್ಶಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ,'' ಎಂದರು. "ಸಿಎಂ ಸಿದ್ದರಾಮಯ್ಯ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಬೇಕು ಎನ್ನುವುದಕ್ಕಿಂತ ನಾಡಿನ ಜನರ ಹಿತಕ್ಕಾಗಿ ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಿತ್ತು. ಕನಿಷ್ಟ ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರವೇ ಪೊಲೀಸ್ ಇಲಾಖೆಗೆ ಸೂಚನೆಗಳನ್ನು ರವಾನಿಸಿದ್ದರೆ ಸಾಕಾಗುತ್ತಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಪ್ರಮಾಣದಲ್ಲಿ ಹದಗೆಟ್ಟಿದೆ ಎಂಬುದಕ್ಕೆ ಇದೊಂದು ಉದಾಹರಣೆ,'' ಎಂದು ಬಿ. ಟಿ. ವೆಂಕಟೇಶ್ ವಿಶ್ಲೇಷಿಸಿದರು.

ಬೆಂಕಿ ಬಿದ್ದ ನಂತರ:

ಬೆಂಗಳೂರಿನಲ್ಲಿ ಗೋಲಿಬಾರ್ ನಡೆಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹಾಗೂ ಬೆಂಗಳೂರು ನಗರ ಕಮಿಷನರ್ ಮೇಘರಿಕ್ ಅವರುಗಳನ್ನು ಮನೆಗೆ ಕರೆಸಿಕೊಂಡರು. ಈ ಕುರಿತು ರಾತ್ರಿ ಟಿವಿ9ಗೆ 'ಫೋನೊ' ನೀಡಿದ ವರದಿಗಾರರು, "ಸಿಎಂ ಸಿದ್ದರಾಮಯ್ಯ ಇಬ್ಬರು ಅಧಿಕಾರಿಗಳ ಕೆಲಸಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ,'' ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲೇ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ನಿಯಂತ್ರಿಸಲು ಸೇನೆ ಕಳುಹಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ ಎಂದು ಸುದ್ದಿ ಹೊರಬಿದ್ದಿತ್ತು. ಸಿಎಂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಅಂತಿಮವಾಗಿ ಇವೆಲ್ಲವೂ 'ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಪ್ರಯತ್ನ'ದಂತೆಯೇ ಕಂಡು ಬಂದವು.

ಇವೆಲ್ಲವುಗಳ ಪರಿಣಾಮ ಎಂಬಂತೆ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಯಿತು. 

ಇದಕ್ಕೆ ಹೋಲಿಸಿದರೆ, ತಮಿಳುನಾಡು ಸರಕಾರ ಭಾನುವಾರ ರಾತ್ರಿಯೇ ಕರ್ನಾಟಕಕ್ಕೆ ಹೊರಡುವ ಅಂತರಾಜ್ಯ ಬಸ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ, ರಾಜ್ಯದ ಸರಕಾರಿ ಸ್ವತ್ತುಗಳ ಹಾನಿಯನ್ನು ಸರಕಾರದ ಸಕಾಲಿಕ ನಿರ್ಧಾರ ತಪ್ಪಿಸಿತು.

ಹೊಣೆ ಯಾರು?:

"ಕಾವೇರಿ ಕಿಚ್ಚು ಹೊತ್ತಿಕೊಳ್ಳುತ್ತದೆ ಎಂಬ ಗುಪ್ತಚರ ದಳದ ಮಾಹಿತಿಯೂ ಇರಲಿಲ್ಲವಾ?'' ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು. ಸುಪ್ರಿಂ ಕೋರ್ಟ್, ತೀರ್ಪು, ತಾಂತ್ರಿಕ ವಿಚಾರಗಳು ಜನರಿಗೆ ಅರ್ಥಪಡಿಸುವುದು ಕಷ್ಟ. ಕೊನೆ ಪಕ್ಷ ಜನ ರೊಚ್ಚಿಗೇಳಬಹುದು, ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಬಹುದು ಎಂಬ ಮಾಹಿತಿಯನ್ನೂ ಕಲೆ ಹಾಕಿರಲಿಲ್ಲವಾ? ಹಾಕಿದ್ದರೆ, ಅದಕ್ಕೆ ತೆಗೆದುಕೊಂಡ ಕ್ರಮಗಳೇನು?, ಸರಕಾರ ಯಾಕೆ ಘರ್ಷಣೆ ಹುಟ್ಟಿಕೊಳ್ಳುವ ಮುನ್ಸೂಚನೆ ಸಿಗುತ್ತಿದ್ದಂತೆ ಪೊಲೀಸ್ ಇಲಾಖೆಯ ಶಕ್ತಿಯನ್ನು ಬಳಸಿಕೊಳ್ಳಲಿಲ್ಲ?,'' ಎಂಬ ಪ್ರಶ್ನೆಗಳನ್ನು ಅವರು ಮುಂದಿಡುತ್ತಾರೆ.

"ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುವುದು, ಕಿಡಿಗೇಡಿಗಳಿಂದ ಆಸ್ತಿ ಪಾಸ್ತಿಗಳಿಗೆ ಹಾನಿಯಾಗುತ್ತಿರುವುದು ಇದು ಮೊದಲೇನೂ ಅಲ್ಲ. ಹಿಂದೆ ಗಾರ್ಮೆಂಟ್ಸ್ ಫ್ಯಾಕ್ಟರಿ ಪ್ರತಿಭಟನೆ ನಡೆದಾಗಲೂ ಇದೇ ನಡೆಯಿತು. ಆ ಸಮಯದಲ್ಲಿ ಬಡಪಾಯಿ ಗಾರ್ಮೆಂಟ್ಸ್ ನೌಕರರ ಮೇಲೆ ಕೇಸು ದಾಖಲಿಸಿದರು. ನಂತರ ಮೊನ್ನ ನಡೆದ ಬಂದ್. ಈಗ ಇಷ್ಟು ದೊಡ್ಡ ಗಲಭೆ ನಡೆಯಿತು. ಬಂದ್ ವೇಳೆ ಹಿಂಸೆಗೆ ಇಳಿಯುವವರನ್ನು ಬಂಧಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ,'' ಎನ್ನುತ್ತಾರೆ ವಕೀಲ ಬಿ. ಟಿ. ವೆಂಕಟೇಶ್.

ಈ ಗಾಗಲೇ ಕರ್ನಾಟಕದಲ್ಲಿ ಹೊತ್ತಿಕೊಂಡಿರುವ ಕಿಚ್ಚು ರಾಷ್ಟ್ರೀಯ ಸುದ್ದಿಯಾಗಿ ಬದಲಾಗಿದೆ. ಬಹುತೇಕ ಇಂಗ್ಲಿಷ್ ವಾಹಿನಿಗಳ ಸೋಮವಾರ ಪ್ರೈಂ ಟೈಮ್ ಇದೇ ವಿಚಾರಕ್ಕೆ ಮೀಸಲಿಡಲಾಗಿತ್ತು. ಮಂಗಳವಾರದ ಹೊತ್ತಿಗೆ ಸರಕಾರ ಮತ್ತು ಪೊಲೀಸ್ ಇಲಾಖೆ ಇಡುವ ಹೆಜ್ಜೆಗಳ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

ನಾವು ಅರಾಮು:

ತಮಿಳುನಾಡಿನಲ್ಲಿ ಸೋಮವಾರ ಮುಂಜಾನೆಯೇ ಕನ್ನಡಿಗರ ಮೇಲೆ ಹಲ್ಲೆ ಎಂಬ ಸುದ್ದಿ ಹೊರಬಿದ್ದಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳಲ್ಲಿ ಕಿಡಿಗೇಡಿಗಳು ಬೀದಿಗೆ ಇಳಿದಿದ್ದರು. ಬಿಟ್ಟರೆ ರಾಜಧಾನಿ ಚೆನ್ನೈ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಶಾಂತಿ ನೆಲೆಸಿತ್ತು. "ನಾವೀಗ ತಲೆ ಎತ್ತಿ ಓಡಾಡು ಸ್ಥಿತಿಯೂ ಇಲ್ಲಿಲ್ಲ. ಏನ್ರೀ ನಿಮ್ಮವರು ಗಲಾಟೆ ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡ್ತಿದ್ದಾರೆ,'' ಎಂದು ಬೆಂಗಳೂರು ಮೂಲದ ಚಂದನ್ 'ಸಮಾಚಾರ'ಕ್ಕೆ ತಿಳಿಸಿದರು. ಸದ್ಯ ಚೆನ್ನೈನಲ್ಲಿರುವ ಅವರು, "ಇಲ್ಲಿ ಕನ್ನಡಿಗರಿಗೆ ಯಾವುದೇ ಸಮಸ್ಯೆಯಾಗಿಲ್ಲ,'' ಎಂದರು. ಇದೇ ರೀತಿಯ ಮಾಹಿತಿಯನ್ನು ಚೆನ್ನೈನ ತೀನಂಪೇಟ್ ಬಳಿ ಇರುವ ತೀರ್ಥಹಳ್ಳಿ ಮೂಲದ ಸೌಮ್ಯ ಗುರುರಾಜ್ ಕೂಡ ತಿಳಿಸಿದರು. "ಮಗಳಿಗೆ ನಾಳೆ ಕರಾಟೆ ತರಗತಿ ಇದೆ. ಇಲ್ಲಿ ನಮಗೇನು ಸಮಸ್ಯೆಯಾಗಿಲ್ಲ. ಅಲ್ಲಿನ ಪರಿಸ್ಥಿತಿಯೇ ಚಿಂತೆ ಮೂಡಿಸುತ್ತಿದೆ,'' ಎಂದರು. ಕರ್ನಾಟಕದ ಕೆಲವು ಭಾಗಗಳಲ್ಲಿಯೂ ತಮಿಳರಿಗೆ ಕನ್ನಡಿಗರು ಸಹಾಯ ಮಾಡಿದ ವರದಿಯನ್ನು 'ಜನಶ್ರೀ' ವಾಹಿನಿ ಪ್ರಸಾರ ಮಾಡಿತ್ತು.

ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್.