samachara
www.samachara.com
'ಅಮ್ಮ'ಗೆ ಜಾಮೀನು; ಕಾವೇರಿಗಾಗಿ ಕಾನೂನು ಹೋರಾಟ: ಯಾರಿವರು ಫಾಲಿ ಸ್ಯಾಮ್ ನಾರಿಮನ್?
ಕಾವೇರಿ ವಿವಾದ

'ಅಮ್ಮ'ಗೆ ಜಾಮೀನು; ಕಾವೇರಿಗಾಗಿ ಕಾನೂನು ಹೋರಾಟ: ಯಾರಿವರು ಫಾಲಿ ಸ್ಯಾಮ್ ನಾರಿಮನ್?

ಕಾವೇರಿ

ವಿವಾದಲ್ಲಿ ರಾಜ್ಯಕ್ಕೆ ಸೋಲಾಗಿದೆ ಎಂಬ ವಿಚಾರದಲ್ಲಿ ಪ್ರತಿಭಟನಾಕಾರರ ಆಕ್ರೋಶ ಇದೀಗ ವಕೀಲರತ್ತ ಹೊರಳಿದೆ. ಮುಖ್ಯವಾಗಿ 25 ಜನರ ರಾಜ್ಯ ವಕೀಲರ ತಂಡದಲ್ಲಿರುವ ಕೆಲವು ‘ಗಂಜಿ ಗಿರಾಕಿ’ಗಳು ಮತ್ತು ಹಿರಿಯ ನ್ಯಾಯವಾದಿ ಫಾಲಿ ಸ್ಯಾಮ್ ನಾರಿಮನ್ ಮೇಲೆ ವೈಯಕ್ತಿಕ ಮಟ್ಟದ ದಾಳಿಗಳು ನಡೆಯುತ್ತಿವೆ. ಈ ಹೊತ್ತಲ್ಲಿ ಫಾಲಿ ನಾರಿಮನ್ ಯಾರು? ಅವರ ಬಗ್ಗೆ ವಕೀಲರ ಸಮುದಾಯದಲ್ಲಿ ಇರುವ ಅಭಿಪ್ರಾಯಗಳೇನು ಎನ್ನುವ ವರದಿಯನ್ನು ‘ಸಮಾಚಾರ’ ಇಲ್ಲಿ ಮುಂದಿಡುತ್ತಿದೆ.

“ಫಾಲಿ ಎಸ್ ನಾರಿಮನ್ ಅವರನ್ನು ಬದಲಾಯಿಸಿ ಕಮಿಟೆಡ್ ಟೀಂ ನೇಮಕ ಮಾಡುವುದು ಸೂಕ್ತ. ಹೋಗಿ ಕಾಟಾಚಾರಕ್ಕೆ ನಾಲ್ಕು ಸೆಂಟೆನ್ಸ್ ಹೇಳಿ ಬಂದರೆ ಸಾಲದು. ಆಕ್ರೋಶ ಭರಿತವಾಗಿರುವ ರಾಜ್ಯದ ಜನರ ಭಾವನೆಯನ್ನು ಮನವರಿಕೆ ಮಾಡಿಕೊಡಬೇಕು. ದುಡ್ಡು ಎಣಿಸಿಕೊಂಡು ಹೋಗುವುದಲ್ಲ,” ಎನ್ನುತ್ತಾರೆ ಹಿರಿಯ ವಕೀಲ ದೊರೈ ರಾಜು. ಹಾಗಾದರೆ ನಾರಿಮನ್ ಅಸಮರ್ಥರಾ ಎಂದು ಕೇಳಿದರೆ, “ನಾರಿಮನ್ ಹಿರಿಯರು ಅವರ ಬಗ್ಗೆ ಗೌರವ ಇದೆ. ಜ್ಞಾನ ಇದ್ದರಷ್ಟೇ ಸಾಲದು,” ಎನ್ನುತ್ತಾರೆ ದೊರೈರಾಜು. ಅದು ಫಾಲಿ ಎಸ್ ನಾರಿಮನ್ ಕಾಪಿಟ್ಟುಕೊಂಡು ಬಂದ ಅವರ ಟ್ರ್ಯಾಕ್ ರೆಕಾರ್ಡ್.

ಇಷ್ಟಕ್ಕೂ ನಾರಿಮನ್ ಯಾರು?

ಫಾಲಿ ಸ್ಯಾಮ್ ನಾರಿಮನ್..

ಮ್ಯಾನ್ಮಾರಿನಲ್ಲಿ ಹುಟ್ಟಿ, ಬಾಂಬೆ ಲಾ ಕಾಲೇಜಿನಲ್ಲಿ 1950ರಲ್ಲಿ ವಕೀಲ ಪದವಿ ಅಭ್ಯಾಸ ಮುಗಿಸಿ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಂತರ ದೇಶದಲ್ಲಿ ವಕೀಲಿಕೆ ಆರಂಭಿಸಿದವರು. ಇವರ ತಂದೆಗೆ, ಮಗ ಫಾಲಿ ದೇಶದ ಆಡಳಿತ ಸೇವೆ ಪ್ರವೇಶಿಸಬೇಕು ಎಂಬ ಆಸೆ ಇತ್ತು. ಕೊನೆಗೆ ಇವರು ವಕೀಲಿ ವೃತ್ತಿಗೆ ಕಾಲಿಟ್ಟರು. ದೇಶದ ಸಂವಿಧಾನ ತಜ್ಞರು ಮತ್ತು ನದಿ ನೀರಿನ ಹಂಚಿಕೆಯ ವಿವಾದಗಳಲ್ಲಿ ಪಳಗಿರುವ ಕೆಲವೇ ಕೆಲವು ಪ್ರಮುಖರಲ್ಲಿ ನಾರಿಮನ್ ಒಬ್ಬರು.

ಇವತ್ತಿಗೆ ಅವರಿಗೆ 87 ವರ್ಷ ವಯಸ್ಸು. ಹಾಗಂಥ ಅವರಿಗೆ ವಯೋ ಸಹಜ ಖಾಯಿಲೆಗಳೇನೂ ಅಷ್ಟಾಗಿ ಇಲ್ಲ. “ಫಸ್ಟ್ ಕ್ಲಾಸ್ ಆಗಿದ್ದಾರೆ. ಅವರೊಬ್ಬ ನಂಬರ್ ವನ್ ಲಾಯರ್. ದೇಶದಲ್ಲೇ ದಿ ಬೆಸ್ಟ್ ವಕೀಲರು. ಕರ್ನಾಟಕದ ಪರವಾಗಿ ಅವರು ವಾದ ಮಾಡುತ್ತಿರುವುದು ನಮ್ಮ ಪಾಲಿನ ಸೌಭಾಗ್ಯ. ಅವರನ್ನು ಬದಲಾಯಿಸಬೇಕು ಎನ್ನುವವರಿಗೆ ಅವರ ಬಗ್ಗೆ ತಿಳಿದಿಲ್ಲ ಅನಿಸುತ್ತದೆ,” ಎನ್ನುತ್ತಾರೆ ಇವರ ಜತೆಗೆ ವಾದಗಳಲ್ಲಿ ಪಾಲ್ಗೊಂಡಿರುವ ಬ್ರಿಜೇಶ್ ಕಾಳಪ್ಪ.

ನ್ಯಾಯಾಂಗ ವ್ಯವಸ್ಥೆಯೊಳಗೆ ನಾರಿಮನ್ ರದ್ದು 5 ದಶಕಗಳಿಗೂ ಹೆಚ್ಚಿನ ಅನುಭವ. ಇವತ್ತಿಗೂ ಇವರೇನಾದರೂ ಒಂದು ವಿಚಾರಣೆಗೆ ಹಾಜರಾಗಬೇಕಾದರೆ 8-15 ಲಕ್ಷ ಪಾವತಿಸಬೇಕು. ಅಷ್ಟರ ಮಟ್ಟಿಗೆ ಇನ್ನೂ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ.

ಕರ್ನಾಟಕದ ವಿವಾದಗಳಿಗೂ ನಾರಿಮನ್ ಗೂ ವಿಶೇಷ ಸಂಬಂಧ. ಕರ್ನಾಟಕ, ಮಹಾರಾಷ್ಟ್ರದ ನಡುವೆ ನಡೆಯುತ್ತಿದ್ದ ಬೆಳಗಾವಿ ಗಡಿ ವಿವಾದದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದವರು ನಾರಿಮನ್. ಇದರ ಜೊತೆಗೆ ಮಹದಾಯಿ ವಿವಾದ, ಕಾವೇರಿ ವಿವಾದಗಳನ್ನೂ ಮುನ್ನಡೆಸುತ್ತಿರುವವರು ಇವರೇ. ಇವರ ತಂಡದಲ್ಲಿ ಹಿರಿಯ ನ್ಯಾಯವಾದಿಗಳಾದ ಮೋಹನ್‌ ಕಾತರಕಿ, ಮಧುಸೂದನ್‌ ನಾಯಕ್‌, ಎಂ.ಬಿ. ಝಿರಲಿ, ನಿಶಾಂತ ಪಾಟೀಲ ಮೊದಲಾದವರಿದ್ದಾರೆ.

ಕಾವೇರಿ ನೀರಿನ ಹಂಚಿಕೆ ಪ್ರಕರಣ ‘ಕಾವೇರಿ ನ್ಯಾಯಾಧಿಕರಣ’ದ ಮೆಟ್ಟಿಲು ಹತ್ತಿದಾಗ ರಾಜ್ಯದ ಪರವಾಗಿ ವಾದ ಹೂಡಿದ್ದ ಇವರಿಗೆ ಕರ್ನಾಟಕ ಸರಕಾರ 2.08 ಕೋಟಿ ಹಣ ಪಾವತಿಸಿತ್ತು. ಇವರ ತಂಡದವರಿಗೆ ಪ್ರತ್ಯೇಕ ಪಾವತಿಗಳನ್ನು ಮಾಡಲಾಗಿತ್ತು.

ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ನಾರಿಮನ್ ಒಂದು ಅಧ್ಯಾಯವಾಗಿ ಗುರುತಿಸಿಕೊಳ್ಳುತ್ತಾರೆ. ದೇಶದ ಕಾನೂನು ವಿಚಾರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅವರು. ಸಂವಿಧಾನದಲ್ಲಿದ್ದ ಕೆಲವು ನ್ಯೂನ್ಯತೆಯನ್ನೂ ಪ್ರಶ್ನಿಸುತ್ತಾ ಭಾರತ ಸಂವಿಧಾನದ ಪರೋಕ್ಷ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆಯನ್ನೂ ನೀಡಿದವರು ಇವರು. ಹಲವಾರು ಪ್ರಖ್ಯಾತ ಪ್ರಕರಣಗಳಲ್ಲಿ ವಾದ ಮಂಡಿಸಿದವರು. 1991ರಿಂದ ಇವರೇ 'ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ'ದ ಅಧ್ಯಕ್ಷರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1972 ರಿಂದ 1975ರವರೆಗೆ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿದ್ದರು. ಆದರೆ ಶ್ರೀಮತಿ ಗಾಂಧಿ ‘ತುರ್ತು ಪರಿಸ್ಥಿತಿ’ ಘೋಷಿಸಿದಾಗ ರಾಜೀನಾಮೆ ನೀಡಿ ಹೊರ ನಡೆದಿದ್ದರು. 1999ರಲ್ಲಿ ಇವರನ್ನು ರಾಜ್ಯಸಭೆಗೆ ಆಗಿನ ಅಟಲ್ ಬಿಹಾರಿ ಸರಕಾರ ನಾಮ ನಿರ್ದೇಶನ ಮಾಡಿ ಕಳುಹಿಸಿತ್ತು.

'ಅಮ್ಮ'ಗೆ ಜಾಮೀನು; ಕಾವೇರಿಗಾಗಿ ಕಾನೂನು ಹೋರಾಟ: ಯಾರಿವರು ಫಾಲಿ ಸ್ಯಾಮ್ ನಾರಿಮನ್?

ಇವರ ನ್ಯಾಯಾಂಗ ಸೇವೆಗೆ ಹಲವು ಪುರಸ್ಕಾರ ಗೌರವಗಳು ಸಂದಿವೆ. 1991ರಲ್ಲಿ ಪದ್ಮ ಭೂಷಣ ಮತ್ತು 2007ರಲ್ಲಿ ದೇಶದ ಎರಡನೇ ಅತ್ಯುಚ್ಛ ಪುರಸ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿದೆ. ‘ವಿಲ್ಲೆಮ್ ಸಿ ವಿಸ್ ಮೂಟ್’ ಎಂಬ ಅಂತರಾಷ್ಟ್ರೀಯ ಸಂಸ್ಥೆ ನ್ಯಾಯಾಂಗ ವಿಷಯಕ್ಕೆ ಸಂಬಂಧಿಸಿದಂತೆ ‘ಫಾಲಿ ನಾರಿಮನ್ ಅವಾರ್ಡ್’ ಕೂಡಾ ನೀಡುತ್ತದೆ.

ಹಾಗಂಥ ನಾರಿಮನ್ ವಿರುದ್ಧ ಆರೋಪಗಳೇ ಬಂದಿಲ್ಲ ಎಂದಲ್ಲ. ‘ಡವ್ ಕೆಮಿಕಲ್ಸ್’ ಪರವಾಗಿ ವಾದಸಿದವರು ಇದೇ ನಾರಿಮನ್. ಈ ‘ಡವ್ ಕೆಮಿಕಲ್ಸ್’ ‘ಭೋಪಾಲ್ ಗ್ಯಾಸ್ ಟ್ರಾಜೆಡಿ’ಯ ಸೂತ್ರದಾರ ‘ಯೂನಿಯನ್ ಕಾರ್ಬೈಡ್’ ಕಂಪೆನಿಗೆ ಸೇರಿತ್ತು. ಕೊನೆಗೆ ತಮ್ಮ ನಡವಳಿಗೆ ಪಶ್ಚಾತಾಪ ಎಂಬಂತೆ ಕೋರ್ಟ್ ಹೊರಗೆ 470 ಮಿಲಿಯನ್ ಡಾಲರ್ ಪರಿಹಾರವನ್ನು ಸಂತ್ರಸ್ತರಿಗೆ ಇದೇ ನಾರಿಮನ್, ಕಂಪೆನಿ ಕಡೆಯಿಂದ ಕೊಡಿಸಿದರು

ಪಾಲಿ ನಾರಿಮನ್ ತಮ್ಮ ಕಾನೂನು ನಿರ್ಧಾರಗಳಾಚೆಗೂ ತಮ್ಮ ನಡತೆಗಳಿಂದ ಜನಪ್ರಿಯರಾದವರು. ನರ್ಮದಾ ಪುನರ್ವಸತಿ ವಿಚಾರದಲ್ಲಿ ನಾರಿಮನ್ ಅವತ್ತಿನ ನರೇಂದ್ರ ಮೋದಿಯ ಗುಜರಾತ್ ಸರಕಾರವನ್ನು ಕೋರ್ಟಿನಲ್ಲಿ ಪ್ರತಿನಿಧಿಸುತ್ತಿದ್ದರು. ಆದರೆ ಅಲ್ಲಿನ ಸ್ಥಳೀಯ ಕ್ರಿಶ್ಚಿಯನ್ನರ ಮೇಲೆ ಸರಕಾರದಿಂದ ದಾಳಿಯಾದಾಗ ನಾರಿಮನ್ ವಾದದಿಂದಲೇ ಹಿಂದೆ ಸರಿದಿದ್ದರು.

ಇವತ್ತು ತಮಿಳುನಾಡಿನ ಜಯಲಲಿತಾ ಸರಕಾರದ ವಿರುದ್ಧವೇ ವಾದಿಸುತ್ತಿರುವ ನಾರಿಮನ್,  2014ರ ಅಕ್ಟೋಬರ್ 17ರಂದು ಅಕ್ರಮ ಆಸ್ತಿ ಸಂಪಾದನೆಯಲ್ಲಿ ಅಪರಾಧಿಯಾಗಿದ್ದ ಜಯಲಲಿತಾಗೆ ಬೇಲ್ ಕೊಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ನಾರಿಮನ್ ಅವರಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ ರೋಹಿನ್ಟನ್‌ ನಾರಿಮನ್‌ ಕೂಡಾ ನ್ಯಾಯಾಂಗ ವೃತ್ತಿಯಲ್ಲಿದ್ದು, ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್‌ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಇವರು ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿದ್ದಾರೆ.

ಇಂತಹದೊಂದು ಅಪೂರ್ವವಾದ ಟ್ರ್ಯಾಕ್ ರೆಕಾರ್ಡ್ ಹೊಂದಿರುವ, ಅವರ ವಿರೋಧಿಗಳೂ ಬೌದ್ಧಿಕತೆಯ ವಿಚಾರ ಬಂದಾಗ ಗೌರವದಿಂದಲೇ ಮಾತನಾಡುವ ವ್ಯಕ್ತಿತ್ವ ಫಾಲಿ ಎಸ್ ನಾರಿಮನ್ ಅವರದ್ದು. ಅವರನ್ನೀಗ ಬದಲಿಸಿ ಎಂಬ ಮಾತುಗಳು ಕೇಳಿಬರುತ್ತಿವೆ. ಅದು ಸರಕಾರಕ್ಕೆ, ತಜ್ಞರ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಯಾರನ್ನೇ ಆಗಲೀ, ಯಾವುದನ್ನೇ ಆಗಲೀ, ವಿರೋಧಿಸುವ ಮುನ್ನ ಅದರ/ ಅವರ ಕುರಿತು ಕನಿಷ್ಟ ಮಾಹಿತಿ ಇಟ್ಟುಕೊಳ್ಳುವುದು ಸೂಕ್ತ.