ಮೊದಲು ಬೆಂಗಳೂರು ಬೆಳವಣಿಗೆಯನ್ನು ನಿಯಂತ್ರಿಸಿ; ಪ್ರಾಮಾಣಿಕ ಕನ್ನಡ ಪ್ರೇಮ ಮೆರೆಯಿರಿ!
ಕಾವೇರಿ ವಿವಾದ

ಮೊದಲು ಬೆಂಗಳೂರು ಬೆಳವಣಿಗೆಯನ್ನು ನಿಯಂತ್ರಿಸಿ; ಪ್ರಾಮಾಣಿಕ ಕನ್ನಡ ಪ್ರೇಮ ಮೆರೆಯಿರಿ!

ಸರಕಾರ ಪ್ರಾಯೋಜಿತ ಶುಕ್ರವಾರದ 'ಕಾವೇರಿ ಬಂದ್' ಯಶಸ್ವಿಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಜನ ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ತಮಿಳುನಾಡು ಸಿಎಂ ಜಯಲಲಿತಾ ತಿಥಿ ಕಾರ್ಯ ನಡೆದಿದೆ. ಕನ್ನಡದ ಪರ ಹೋರಾಟಗಾರರು ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲಿ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದ್ದಾರೆ. ಐಟಿ ಕಂಪನಿಗಳನ್ನು ಮುಚ್ಚಿಸುವ ಮೂಲಕ ಕೆಲವರು ಕನ್ನಡ ಪ್ರೇಮವನ್ನು ಹಂಚುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ವಿಶೇಷವಾಗಿ, ಮಂಡ್ಯ ಭಾಗದ ಸಾವಿರಾರು ರೈತರು ಸ್ವಯಂಪ್ರೇರಕವಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಮುಚ್ಚಿಸಲು ಹೋಗಿ ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಮಂಡ್ಯ ನಗರದಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಸುಮಾರು 300 ರೈತರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇತರೆ ತಾಲೂಕುಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ.

ಅಷ್ಟೆ, ಇವತ್ತು ಶನಿವಾರ. ಕಾವೇರಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದಾಳೆ. ನಮ್ಮ ಆಕ್ರೋಶವೂ ಇಳಿದು ಹೋಗುತ್ತದೆ. ಭಾನುವಾರದ ರಜೆ ಕಳೆದು ಸೋಮವಾರದ ಹೊತ್ತಿಗೆ ಕರ್ನಾಟಕ ಮತ್ತೆ ಮೊದಲಿನಂತಾಗುತ್ತದೆ. ಯಥಾಸ್ಥಿತಿಗೆ ಮರಳುತ್ತದೆ ಅಥವಾ ಹೊಸ ವಿಚಾರದ ಬೆನ್ನತ್ತಿಕೊಂಡು ಹೋಗುತ್ತದೆ. ಕಾವೇರಿ ವಿಚಾರದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗದ ನ್ಯಾಯಾಂಗದ ತಾಂತ್ರಿಕ ವಿವರಗಳನ್ನು ಪಕ್ಕಕ್ಕಿಟ್ಟು, ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಬೇಕು ಎಂದು ಕೆಲವರು ಈ ಸಮಯದಲ್ಲಿ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಶಾಶ್ವತ ಪರಿಹಾರ ಎಂದರೇನು?

ಇದು ಈ ಸಮಯದಲ್ಲಿ ನಾವು ಕೇಳಿಕೊಳ್ಳಬೇಕಿರುವ ಪ್ರಶ್ನೆ.ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ವಿಮಾನ ನಿಲ್ದಾಣ ನಗರದ ಒಳಗಡೆಯೇ ಇತ್ತು. ಅದನ್ನು ದೂರದ ದೇವನಹಳ್ಳಿಗೆ ಸ್ಥಳಾಂತರ ಮಾಡಿದವರು ನಾವು. ಇವತ್ತು ಬೆಂಗಳೂರಿನ ಚಾಲುಕ್ಯ ವೃತ್ತದಿಂದ ದೇವನಹಹಳ್ಳಿ ಮಾರ್ಗದಲ್ಲಿ ಹೊರಟರೆ ಬೆಂಗಳೂರು ಬೆಳೆಯುತ್ತಿರುವ ಪರಿ ಏನೆಂದು ಅರ್ಥವಾಗುತ್ತದೆ. ಇತ್ತ ಮೈಸೂರು ರಸ್ತೆಯಲ್ಲಿ ಕೆಂಗೇರಿ, ಕೆಂಗೇರಿ ಉಪನಗರಗಳನ್ನು ದಾಟಿ ನಗರ ಬೆಳೆದಿದೆ. ಬೆಂಗಳೂರು ಮತ್ತು ತುಮಕೂರು ರಸ್ತೆಯ ಬೆಳವಣಿಗೆ ಹೀಗೆ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಎರಡರ ನಡುವೆ ಅಂತರವೂ ಮಾಯವಾಗುತ್ತದೆ. ಹೊಸೂರು ರಸ್ತೆಯ ಉದ್ದಕ್ಕೂ ಇವತ್ತು ಬೆಂಗಳೂರನ್ನು ನಾವು ಕಟ್ಟಿ ನಿಲ್ಲಿಸಿದ್ದೇವೆ. ಹೀಗೆ, ಅಗಾಧ ಪ್ರಮಾಣದಲ್ಲಿ; ರಾಕ್ಷಸ ಗಾತ್ರದಲ್ಲಿ ಬೆಳೆಯುತ್ತಿರುವ ಮಹಾನಗರಕ್ಕೆ ಕುಡಿಯುವ ನೀರಿನ ಮೂಲ ಯಾವುದು? ಇದ್ದಬದ್ದ ಕೆರೆಗಳನ್ನು ನಾವು ನುಂಗಿ ಅಪಾರ್ಟ್ಮೆಂಟ್ಗಳನ್ನು ಕಟ್ಟಿ ನಿಲ್ಲಿಸಿದ್ದೇವೆ. ಮಳೆ ನೀರು ಇಂಗಲು ಅವಕಾಶವೇ ಇಲ್ಲದಂತೆ ಕಾಂಕ್ರಿಟ್ ಕಾಡನ್ನು ನಿರ್ಮಿಸಿದ್ದೇವೆ. ಅಂತರ್ಜಲವನ್ನೂ ಕಿಮಿಕಲ್ ನೀರನ್ನಾಗಿ ಪರಿವರ್ತಿಸಿದ್ದೇವೆ. ಉಳಿದಿರುವುದು ಒಂದೇ ದಾರಿ; ಕಾವೇರಿ. ಇವತ್ತು ನಾವು ತಮಿಳುನಾಡಿನ ರೈತರಿಗೆ ನೀರು ಬಿಟ್ಟಾಗ ಹೋರಾಟಕ್ಕೆ ಇಳಿಯುತ್ತಿದ್ದೀವಲ್ಲ; ಅದೇ ಕಾವೇರಿ.

ಹಿಂದೆ, 1991ರಲ್ಲಿ ಕಾವೇರಿ ನ್ಯಾಯಮಂಡಳಿ ಕಾವೇರಿ ನೀರು ಹಂಚಿಕೆಯಲ್ಲಿ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ಅಗತ್ಯ ನೀರು ಎಷ್ಟು ಬೇಕು ಎಂದು ಪಟ್ಟಿ ಮಾಡಿತ್ತು. ಅದರ ಪ್ರಕಾರ, ಸುಮಾರು 100 ಕಿ. ಮೀ ದೂರದ ಬೆಂಗಳೂರು ನಗರಕ್ಕೆ 1. 7 ಟಿಎಂಸಿ ನೀರನ್ನು ಕಾವೇರಿಯಿಂದ ಹಂಚಿಕೆ ಮಾಡಲು ಹೇಳಿತ್ತು. ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ನಗರಗಳನ್ನು ಸೇರಿಸಿಕೊಂಡು ಒಟ್ಟು 17 ಟಿಎಂಸಿ ನೀರನ್ನು ಕರ್ನಾಟಕದ ನಾನಾ ನಗರಗಳ ಜನರ ಬಳಕೆಗಾಗಿ ವಿಭಾಗಿಸಲಾಗಿತ್ತು. ಇವತ್ತು ಬೆಂಗಳೂರು ನಗರವೊಂದೇ ಸುಮಾರು 20 ಟಿಎಂಸಿ ನೀರಿನ ದಾಹವನ್ನು ಹೊಂದಿದೆ. ಬೆಂಗಳೂರು ಬೆಳೆಯುತ್ತಿರುವ ಪ್ರಮಾಣದ ಅನುಪಾತವನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಇಲ್ಲಿನ ಕಾವೇರಿ ನೀರಿನ ಬಳಕೆ ದ್ವಿಗುಣಗೊಳ್ಳುತ್ತದೆ. ಅವತ್ತು ಇದೇ ಮಂಡ್ಯ, ಮೈಸೂರಿನ ರೈತರು, 'ಬೆಂಗಳೂರಿಗೆ ನೀರು ನೀಡಲು ಸಾಧ್ಯವಿಲ್ಲ' ಎಂದು ಹೋರಾಟಕ್ಕೆ ಇಳಿಯುತ್ತಾರೆ. ಆಗ ನಾವು ಯಾವ ರಾಜ್ಯದ ವಿರುದ್ಧ ಘೋಷಣೆ ಕೂಗೋಣ? ಯಾವ ಮುಖಮಂತ್ರಿಯ ತಿಥಿ ನಡೆಸೋಣ? ಯಾರ ವಿರುದ್ಧ ಹೋರಾಟ ಮಾಡೋಣ? ಹೀಗೊಂದು ಪರಿಸ್ಥಿತಿ ಬರಲು ಹೆಚ್ಚಿನ ದಿನಗಳು ಬಾಕಿ ಇಲ್ಲ ಎನ್ನುತ್ತವೆ ತಳಮಟ್ಟದ ಪರಿಸ್ಥಿತಿಗಳು. ಆದರೆ, ಇಂತಹದೊಂದು ವಾಸ್ತವನ್ನು ಮುಚ್ಚಿಟ್ಟುಕೊಂಡು, ಕಾವೇರಿ ವಿಚಾರವನ್ನು ಭಾವನಾತ್ಮಕ ವಿಚಾರವಾಗಿ ನಾವು ಬದಲಿಸಿದ್ದೇವೆ. ಅದರ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದೇವೆ

”ಕಾವೇರಿ ವಿಚಾರ ಬಂದಾಗೆಲ್ಲ ಮಂಡ್ಯ, ಮೈಸೂರು ಜಿಲ್ಲೆಗಳ ರೈತರಲ್ಲಿ ಇವತ್ತಿಗೂ ಭಾವನೆಗಳು ಕೆರಳುತ್ತವೆ. ಅವರಿಗೆ ಕಾವೇರಿ ಎಂಬುದು ಭಾವನಾತ್ಮಕ ವಿಚಾರ. ಹೀಗಾಗಿ ರಾಜಕೀಯದ ದಾಳವಾಗಿರುವ, ಆಳುವ ಪಕ್ಷಗಳ ಕೈಗೊಂಬೆಯಾಗಿರುವ ‘ಕಾವೇರಿ ಹಿತರಕ್ಷಣಾ ವೇದಿಕೆ’ ಬಂದಿಗೆ ಕರೆ ನೀಡಲಿ, ಬಿಡಲಿ ಜನ ಬೀದಿಗೆ ಇಳಿಯುತ್ತಾರೆ. ಅದು ರೈತರ ಪ್ರಾಮಾಣಿಕ ಪ್ರತಿಭಟನೆ. ಅದೇ ಪ್ರಮಾಣದ ಪ್ರಾಮಾಣಿಕತೆ ಬೆಂಗಳೂರಿನಲ್ಲಿ ಬಂದ್ ನಡೆಸುವವರಿಗೆ ಇದೆ ಎಂದು ಅನ್ನಿಸುವುದಿಲ್ಲ,’’
ಎಂ.ಬಿ.ನಾಗಣ್ಣ, ‘ಹಳೇ ಮೈಸೂರು’ ಸ್ಥಳೀಯ ಪತ್ರಿಕೆಯ ಸಂಪಾದಕ.

       ಕೆಆರ್ಎಸ್ ಮುತ್ತಿಗೆ ಹಾಕಲು ಯತ್ನಿಸಿದವರ ಮೇಲೆ ಲಾಠಿ ಚಾರ್ಜ್ (ಚಿತ್ರ: ಲೈವ್ ಕನ್ನಡ)
ಕೆಆರ್ಎಸ್ ಮುತ್ತಿಗೆ ಹಾಕಲು ಯತ್ನಿಸಿದವರ ಮೇಲೆ ಲಾಠಿ ಚಾರ್ಜ್ (ಚಿತ್ರ: ಲೈವ್ ಕನ್ನಡ)

ಹಳೇ ಮೈಸೂರು ಭಾಗದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಗಳಿಗೂ, ರಾಜ್ಯದ ಇತರೆ ಭಾಗಗಳಲ್ಲಿ ಸಾಂಕೇತಿಕವಾಗಿ ನಡೆಯುವ ಕಾವೇರಿ ಹೋರಾಟಗಳಿಗೂ ಸಮನ್ವಯತೆ ಇಲ್ಲದಿರುವ ವಿಚಾರವನ್ನು ಅವರು ಪ್ರಸ್ತಾಪಿಸುತ್ತಾರೆ.

“ಪ್ರತಿ ವರ್ಷವೂ ಕಾವೇರಿಯಿಂದ ತಮಿಳುನಾಡಿಗೆ ವಾಡಿಕೆಯಂತೆ ನೀರು ಹರಿದು ಹೋಗುತ್ತಲೇ ಇರುತ್ತದೆ. ಆದರೆ, ಮಳೆ ಕಡಿಮೆಯಾದ ವರ್ಷಗಳಲ್ಲಿ, ಜಯಲಲಿತಾ ತರಹದ ರಾಜಕಾರಣಿ ಇರುವ ಸಮಯದಲ್ಲಿ ಮಾತ್ರವೇ ವಿವಾದ ಹುಟ್ಟಿಕೊಳ್ಳುತ್ತದೆ. ಈ ಸಮಯದಲ್ಲಿ ಕನ್ನಡ ಪರ ಹೋರಾಟಗಾರರು ಬೀದಿಗಳಿದು ಬಂದ್ ನಡೆಸಿ, ತಮ್ಮ ಪ್ರಚಾರ ಪ್ರಿಯತೆಯನ್ನು ತಣಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಹೋರಾಟ ಮಾಡುವ ಈ ಭಾಗದ ರೈತರು ಕೇಸು ಹಾಕಿಸಿಕೊಂಡು ಕೋರ್ಟ್, ಕಚೇರಿ ಅಲೆಯಲು ಶುರುಮಾಡುತ್ತಾರೆ. ಮುಂದೊಂದು ದಿನ ಈ ಹೋರಾಟ ಬೆಂಗಳೂರಿನ ವಿರುದ್ಧವೇ ತಿರುಗಿದರೂ ಅಚ್ಚರಿ ಇಲ್ಲ,”
ಎಂ.ಬಿ.ನಾಗಣ್ಣ.

ಬೆಂಗಳೂರಿನ ಬೆಳವಣಿಗೆಯನ್ನು ನಿಯಂತ್ರಿಸಲು ಪ್ರಾಮಾಣಿಕ ರಾಜಕೀಯ ಪ್ರಯತ್ನ ನಡೆಯದ ಹೊರತು ಭವಿಷ್ಯದ ಈ ಆಂತರಿಕ ಬಿಕ್ಕಟ್ಟನ್ನು ತಪ್ಪಿಸುವುದು ಕಷ್ಟ ಎಂಬುದು ಇವರ ಮಾತುಗಳಲ್ಲಿ ಪ್ರಸ್ತಾಪವಾಗುತ್ತದೆ.

ಅಖಂಡ ಕರ್ನಾಟಕದ ಒಂದು ಮೂಲೆಯಲ್ಲಿರುವ ಬೆಂಗಳೂರನ್ನು, ಅವೈಜ್ಞಾನಿಕವಾಗಿ ರಾಜಧಾನಿ ಮಾಡಿಕೊಂಡಾಗಿದೆ. ಇದಕ್ಕೆ ಪರಿಹಾರ ಎಂಬಂತೆ ಬೆಳಗಾವಿಯಲ್ಲೊಂದು 'ಮಿನಿ ವಿಧಾನಸೌಧ'ವನ್ನೂ ಕಟ್ಟಿ ನಿಲ್ಲಿಸಿದ್ದೇವೆ. ಹೈ ಕೋರ್ಟ್ನ ಪೀಠವೊಂದನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಿದ್ದೇವೆ. ಆದರೆ, ಆಡಳಿತ ಕೇಂದ್ರದ ವಿಕೇಂದ್ರಿಕರಣ ನಡೆದಿದೆಯಾ? ಇವತ್ತಿಗೂ ಕರ್ನಾಟಕದ ಸಮಸ್ತ ಇಲಾಖೆಗಳು, ನಿಗಮ ಮಂಡಳಿಗಳು ಬೆಂಗಳೂರನ್ನೇ ನೆಚ್ಚಿಕೊಂಡು ಕುಳಿತಿವೆ. ಉತ್ತರ ಕರ್ನಾಟಕದ ಅಭಿವೃದ್ಧಿ ನಿಗಮಕ್ಕೆ ಬೆಂಗಳೂರಿನಲ್ಲೇನು ಕೆಲಸ? ಎಂದು ಒಮ್ಮೆಯೂ ನಾವು ಕೇಳಿಕೊಳ್ಳುವುದಿಲ್ಲ. ಬಂದರು ಮತ್ತು ಮೀನುಗಾರಿಕೆ ಇಲಾಖೆಗೂ ಬೆಂಗಳೂರಿಗೂ ಏನು ಸಂಬಂಧ? ಹೀಗೊಂದು ಪ್ರಶ್ನೆಯನ್ನು ಗಟ್ಟಿ ದನಿಯಲ್ಲಿ ಕೇಳಿಕೊಳ್ಳುವುದಿಲ್ಲ.

ಹೀಗೇ ಮುಂದುವರಿದರೆ ಮುಂದೊಂದು ದಿನ ಉತ್ತರ ಕರ್ನಾಟಕವೂ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಡಲಿದೆ. ಸದ್ಯಕ್ಕೆ ಈ ವಿಚಾರವನ್ನು ಪಕ್ಕಕ್ಕಿಟ್ಟು ಕಾವೇರಿಗೆ ಸೀಮಿತವಾಗಿ ನೋಡುವುದಾದರೆ, ಜೀವನದಿಯ ಉಗಮ ಸ್ಥಾನ ಕೊಡಗಿನಲ್ಲಿ ಪರಿಸರ ನಾಶ ನಿರಂತರವಾಗಿ ನಡೆಯುತ್ತಿದೆ. ಕಾವೇರಿ ಕೊಳ್ಳದ ನಗರಗಳೂ ಬೆಳೆಯುತ್ತಿವೆ. ಹಿಡುವಳಿ ಪ್ರದೇಶಗಳೂ ಹೆಚ್ಚುತ್ತಿವೆ. ಸಹಜವಾಗಿಯೇ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹೀಗಿರುವಾಗ, ತಮಿಳುನಾಡಿನ ಜತೆಗಿನ ಬಿಕ್ಕಟ್ಟು ಬಂದಾಗ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ. ಒಂದೆರಡು ದಿನ ಬಾಯಿ ಬಡಿದುಕೊಳ್ಳುತ್ತೇವೆ. ಬಂದ್ ನಡೆಸಿ, ನಾವೆಷ್ಟು ಕನ್ನಡ ಪ್ರೇಮಿಗಳು ಎಂದು ತೋರಿಸಿಕೊಳ್ಳುತ್ತೇವೆ. ನೈತಿಕತೆ ಇದ್ದರೆ ಮೊದಲು ಬೆಂಗಳೂರು ಬೆಳವಣಿಗೆಯನ್ನು ನಿಯಂತ್ರಿಸಲು ಹೋರಾಟ ರೂಪಿಸಬೇಕಿದೆ. ನಮ್ಮ ಕನ್ನಡ ಪ್ರೇಮ ಪ್ರಾಮಾಣಿಕವಾಗಿದ್ದೇ ಆದರೆ, ಅಧಿಕಾರ ವಿಕೇಂದ್ರಿಕರಣಕ್ಕಾಗಿ ಒತ್ತಾಯಿಸಬೇಕಿದೆ. ಬೇಳೆ ಬೇಯಿಸಿಕೊಳ್ಳುವ ಅಗತ್ಯವಿಲ್ಲ ಅನ್ನುವುದಾದರೆ, ಮೊದಲು ರಾಜ್ಯದ ಒಳಗಡೆಯೇ ಬೆಂಕಿ ಏಳದಂತೆ ತಡೆಯಬೇಕಿದೆ.

ಇದು, ಕಾವೇರಿ ಸುತ್ತ ಇಷ್ಟೆಲ್ಲಾ ಅರಚಾಟ ನಡೆಸಿ, ಭಾವನೆಗಳನ್ನು ಕೆರಳಿಸಿ, ತಾರ್ಕಿಕ ಅಂತ್ಯ ಕಾಣುವ ಮುಂಚೆಯೇ ವೀಕೆಂಡ್ ರಜೆಯ ಮೂಡಿಗೆ ಹೋಗಿರುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ. ಅದನ್ನು ನೆನಪಿಸುವ ಹಿನ್ನೆಲೆಯಲ್ಲಿ ಹೀಗೊಂದಿಷ್ಟು ತಳಮಟ್ಟದ ವಾಸ್ತವಗಳನ್ನು ಬರೆಯಬೇಕಾಯಿತು, ಅಷ್ಟೆ.