‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!
ಕಾವೇರಿ ವಿವಾದ

‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!

ಅದೇ ಕರಿ ಟೋಪಿ, ಕಪ್ಪು ಕನ್ನಡಕ, ಉಬ್ಬು ಹಲ್ಲು, ಮಾತೆತ್ತಿದರೆ ಕನ್ನಡ; ಕರ್ನಾಟಕ; ಹೋರಾಟ ಮತ್ತು ತಮಾಷೆಯ ಒಂದಷ್ಟು ರಂಜನೀಯ ಭಾಷಣಗಳು.ಇವರು ಈ ಬಾರಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ಪ್ರತಿ ಬಾರಿ ಬೀದಿಗೆ ಬರಲು ಕಾರಣ ಹುಡುಕುವ ಇವರಿಗೆ ಈ ಬಾರಿ 'ಗಂಜಿ' ನೀಡಿದ್ದು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಇವರ ಸಂಬಂಧವಿಲ್ಲದ ಭಾಷಣಗಳಿಗೆ ಧ್ವನಿಯಾಗಲು ಅದಾಗಲೇ ನ್ಯೂಸ್ ಚಾನಲ್ಗಳು OB ರೆಡಿ ಮಾಡಿಕೊಂಡು ನಿಂತಿದ್ದಾರೆ. ಸಂಶಯವೇ ಇಲ್ಲ ನಾವು ಇಷ್ಟು ಹೊತ್ತು ಹೇಳಿದ್ದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಬಗ್ಗೆ.

ಬಹುಶಃ ಹೋರಾಟ, ಅದರಲ್ಲೂ ಕನ್ನಡ ಹೋರಾಟವನ್ನೇ ಕಸುಬಾಗಿ ಸ್ವೀಕರಿಸಿ, ಅದರಲ್ಲೇ ಬದುಕು ಕಂಡುಕೊಂಡವರಲ್ಲಿ ಪ್ರಮುಖರು ವಾಟಾಳ್ ನಾಗರಾಜ್. ಅವರ ಹೋರಾಟಗಳದ್ದು ಐದು ದಶಕಗಳಷ್ಟು ಸುದೀರ್ಘ ಇತಿಹಾಸ. ಮೂರು ಬಾರಿ ವಿಧಾನ ಸಭೆ ಪ್ರವೇಶ, ಕನ್ನಡದ ಮೇರು ಪತ್ರಕರ್ತ ಲಂಕೇಶ್ ಜೊತೆಗಿನ ಗುದ್ದಾಟ, ಹೀಗೆ ಹತ್ತು ಹಲವು ಸ್ವಾರಸ್ಯಕರ ಕಥನಗಳ ಜತೆಗೆ ತಳುಕು ಹಾಕಿಕೊಂಡಿರುವವರು ವಾಟಾಳ್.

ಇದೀಗ ಮತ್ತೆ ಬೆಂಗಳೂರಿನ ಬೀದಿಗೆ ಇಳಿದು, ಮಾಲ್ಗಳಿಂದ ಮಾಲ್ಗಳಿಗೆ ಸುತ್ತುತ್ತಿರುವ ವಾಟಾಳ್ ನಾಗರಾಜ್ ಕುರಿತು ಅವರ ಒಂದು ಕಾಲದ ಸಂಗಾತಿಗಳು, ಹಿರಿಯ ಪತ್ರಕರ್ತರು ಹಾಗೂ ಕೆಲವು ದಾಖಲೆಗಳನ್ನು ಇಟ್ಟುಕೊಂಡು ಈ ಸ್ವಾರಸ್ಯಕರ ವರದಿಯನ್ನು 'ಸಮಾಚಾರ' ಪ್ರಕಟಿಸುತ್ತಿದೆ.

ಕನ್ನಡಾಂಬೆಯ ಕಂದ:

ಇವತ್ತಿಗೆ ಕರಿ ಟೋಪಿ ಕಪ್ಪು ಕನ್ನಡಕದಲ್ಲಿ ನೆನಪಾಗುವ ವಾಟಾಳ್ ನಾಗರಾಜ್ ಪ್ರತಿಭಟನೆ ಆರಂಭಿಸಿದ್ದು 1962ರ ಸೆಪ್ಟೆಂಬರ್ 7ರಂದು. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಕನ್ನಡ ಚಿತ್ರಗಳ ದುಃಸ್ಥಿತಿಯ ಬಗ್ಗೆ ಹೋರಾಟಕ್ಕಿಳಿದಿದ್ದರು ವಾಟಾಳ್. ಅವತ್ತಿಗಾಗಲೇ ಹೋರಾಟಗಾರ ಎಂದು ಹೆಸರಾಗಿದ್ದ ಮಾ. ರಾಮಮೂರ್ತಿ ಜೊತೆ ಇವರ ಪ್ರತಿಭಟನೆ ಪರ್ವ ಆರಂಭವಾಯಿತು.

ಕನ್ನಡದ ಹೆಸರು ಹೇಳಿಕೊಂಡೇ, ನಾಗರಾಜ್ ಕಾರ್ಪೋರೇಟರ್ ಆದರು. ಹೀಗಿದ್ದಾಗ ಒಂದು ಘಟನೆ ನಡೆಯಿತು.ಕನ್ನಡ ಚಳವಳಿ ಎಂದರೆ ನೆನಪಾಗುವ ವಾಟಾಳ್ ಆಗೆಲ್ಲಾ ನವೆಂಬರ್ ಬಂದರೆ ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವ ನಡೆಸುತ್ತಿದ್ದರು. ಹೀಗೆ 1980ರಲ್ಲಿ ಇವತ್ತಿನ ಸರಕಾರಿ ವಿಜ್ಞಾನ ಕಾಲೇಜಿನ ಪಕ್ಕದ ಕಾವೇರಿ ಭವನ ಸ್ಥಳದಲ್ಲಿ ನಾಗರಾಜ್ ಕಡೆಯಿಂದ ಕನ್ನಡ ರಾಜ್ಯೋತ್ಸವ ನಡೆಸಲು ಸಿದ್ಧತೆ ನಡೆದಿತ್ತು.

ಇವರಿಗೆ ಪ್ರತಿಸ್ಪರ್ಧೆ ರೂಪದಲ್ಲಿ ಇವತ್ತಿನ ಶಾಸಕರ ಭವನದ ಜಾಗದ ನೃಪತುಂಗ ಮಂಟಪದಲ್ಲಿ ಜಿ. ನಾರಾಯಣ ಕುಮಾರ್ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಯೋಜನೆಯಾಗಿತ್ತು. ಇವತ್ತಿನ ಹಾಗೆಯೇ ಅವತ್ತಿಗೂ ಕನ್ನಡದ ಹೆಸರಿನಲ್ಲಿ ಚಂದಾ ಎತ್ತುವ ಕೆಲಸ ಭರದಿಂದ ಸಾಗಿತ್ತು. ಕೊನೆಗದು ಮಿತಿ ಮೀರಿದಾಗ, “ಇವರ ವಿರುದ್ಧ ಅವತ್ತಿಗೆ ಲಂಕೇಶ್ ಪತ್ರಿಕೆಯಲ್ಲಿ, ‘ವಾಚಾಳ ಗುರುವಿನ ಚಾಂಡಾಲ ಮಾಫಿಯಾ’ ಹೆಸರಿನಲ್ಲಿ ವರದಿ ಪ್ರಕಟವಾಯಿತು,” ಎನ್ನುತ್ತಾರೆ ಅವತ್ತಿಗೆ 'ಲಂಕೇಶ್ ಪತ್ರಿಕೆ'ಯಲ್ಲೇ ಇದ್ದ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ.

ಲಂಕೇಶ್ ಮೇಲೆಯೇ ಹಲ್ಲೆ:

ಪಿ.ಲಂಕೇಶ್
ಪಿ.ಲಂಕೇಶ್

ಈ ಲೇಖನ ಪ್ರಕಟವಾದ ತರುವಾಯ ನವೆಂಬರ್ 4 ರಂದು “ಅಲಸೂರು ಕೆರೆ ಪಕ್ಕದಲ್ಲಿರುವ ತಮಿಳು ಸಂಘಂನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಲಂಕೇಶ್ ಅವರನ್ನು ಅಹ್ವಾನಿಸಿದ್ದರು; ಜೊತೆಗೆ ನಾನೂ ಇದ್ದೆ. ಲಂಕೇಶ್ ಭಾಷಣ ಮುಗಿಯುತ್ತಿದ್ದಂತೆ ವಾಟಾಳ್ ಶಿಷ್ಯ ಲಕ್ಕಣ್ಣ ನೇತೃತ್ವದಲ್ಲಿ 25 ಜನ ಏಕಾಏಕಿ ನುಗ್ಗಿ ಹಲ್ಲೆ ಮಾಡಿದರು. ಕೊನೆಗೆ ಅವರನ್ನು ಅಲ್ಲಿಂದ ಲೋಕವಾಣಿ ಪತ್ರಿಕೆಗೆ ಕರೆದೊಯ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು,” ಎಂದು ತಮ್ಮ ಹಳೆಯ ನೆನಪುಗಳ ಮೂಟೆ ಬಿಚ್ಚಿಡುತ್ತಾರೆ ರೇಷ್ಮೆ.

'ಲಂಕೇಶ್ ಪತ್ರಿಕೆ' ಆರಂಭವಾಗಿ 4-5 ತಿಂಗಳು ಕಳೆದಿತ್ತಷ್ಟೇ. ಅವತ್ತಿಗೆ ಈ ದಾಳಿ ಖಂಡಿಸಿ ರಾಜ್ಯಾದ್ಯಂತ ಸಾಹಿತಿಗಳು, ಪತ್ರಕರ್ತರು ಪ್ರತಿಭಟನೆಗೆ ಇಳಿದಿದ್ದರು. ಇದರ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ 1983ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆಯಿಂದ ಸ್ಪರ್ಧಿಸಿದ ವಾಟಾಳ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಷ್ಟೇ ಅಲ್ಲ; ಠೇವಣಿಯನ್ನೂ ಕಳೆದುಕೊಂಡರು.

ಅವರ ನೇತೃತ್ವದ ಕನ್ನಡ ಹೋರಾಟದ ಹವಾ ಜರ್ರೆಂದು ಇಳಿದು ಹೋಯಿತು. ಮುಂದೆ ವಾಟಾಳ್ ಬೆಂಗಳೂರನ್ನೇ ಬಿಡಬೇಕಾಯಿತು.ಕೊನೆಗೆ ಲಿಂಗಾಯುತರ ಪ್ರಾಭಲ್ಯವಿರುವ ಚಾಮರಾಜನಗರಕ್ಕೆ ಹೋಗಿ ಆರು ವರ್ಷಗಳ ನಂತರ 1989ರಲ್ಲಿ ಚುನಾವಣೆ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿದರು (ನಂತರ ಅಲ್ಲಿಂದಲೇ 1994, 2004ರ ಚುನಾವಣೆ ಗೆದ್ದರು ಕೂಡ). ನಾಗರಾಜರ ಈ ಎಲ್ಲಾ ರಾಜಕೀಯ ಸಾಧನೆಗೂ ನೀರು, ಗೊಬ್ಬರ ನೀಡಿದ್ದು ಮತ್ತದೇ ಕನ್ನಡ ಹೋರಾಟ, ಕರ್ನಾಟಕ ಎನ್ನುವ ಸೆಂಟಿಮೆಂಟು.

ಆಳುವ ಸರಕಾರಗಳ ಆಪ್ತ:

‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!

ಅರಸು ಕಾಲದಲ್ಲಿ ತಣ್ಣಗೆ ಹೋರಾಟಗಳನ್ನು ಮಾಡುತ್ತಾ ಬಂದ ವಾಟಾಳ್ ವೈಯಕ್ತಿಕ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದೆಲ್ಲಾ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ. ಅವರು ಮತ್ತು ಗುಂಡೂರಾವ್ ಸ್ನೇಹ ಎಷ್ಟು ಅನ್ಯೋನ್ಯವಾಗಿತ್ತು ಎನ್ನಲು ಈ ಒಂದು ಉದಾಹರಣೆ ಸಾಕು. 1982ರ ಏಪ್ರಿಲ್ ತಿಂಗಳಿನಲ್ಲಿ ಗೋಕಾಕ್ ಚಳುವಳಿ ನಡೆಯುವಾಗ, ಕನ್ನಡ-ಕರ್ನಾಟಕ ಎನ್ನುವ ವಾಟಾಳ್ ಚಳುವಳಿಗೆ ವಿರುದ್ಧವಾಗಿ ಗುಂಡೂರಾವ್ ಪರ ನಿಂತು ಬಿಟ್ಟರು. ಇವರೊಂದಿಗೆ ಹಾ. ಮಾ. ನಾಯಕ್ ಮತ್ತು ಹಂಪನಾ ಜೊತೆಯಾದರು. ಆಗ ಈ ತ್ರಿಮೂರ್ತಿಗಳಿಗೆ ‘ಲಂಕೇಶ್ ಪತ್ರಿಕೆ’ ನೀಡಿದ ಹೆಡ್ಲೈನ್ ‘ಹಾಮಾನಾ- ಹಂಪಾನಾ- ವಾಟಾನಾ’ ಅಂತ.

ಅಲ್ಲಿಂದ ಮುಂದೆ ವಾಟಾಳ್ ಯಾವತ್ತೂ ಆಳುವ ಪಕ್ಷ ಜತೆಗೇ ನಿಲ್ಲುತ್ತಾರೆ ಎಂಬ ಆರೋಪ ಕಾಲಕಾಲಕ್ಕೆ ಗಟ್ಟಿಗೊಳ್ಳುತ್ತಲೇ ಬಂದಿದೆ. “ವಾಟಾಳ್ ಹೋರಾಟದ ವೇಷದಲ್ಲಿರುವ ರಾಜಕಾರಣಿ. ನಿರಂತರವಾಗಿ ಎಲ್ಲಾ ಮುಖ್ಯಮಂತ್ರಿಗಳಿಗೂ ಮೈಸೂರು ಪೇಟ, ಗದೆ ಕೊಟ್ಟುಕೊಂಡು ಬಂದವರೇ,” ಎನ್ನುತ್ತಾರೆ ರೇಷ್ಮೆ.

ಆಕ್ರಮಣಕಾರಿಯಾಗಿದ್ದ ನಾಗರಾಜ್ ಬರಬರುತ್ತಾ ಮೆದುವಾದರು. ಪ್ರಮುಖವಾಗಿ ಲಂಕೇಶ್ ಮೇಲಿನ ಹಲ್ಲೆ ನಂತರ ನಿಧಾನವಾಗಿ ಶಾಂತ, ‘ವಿನೂತನ’ ಪ್ರತಿಭಟನೆಗಳತ್ತ ಮನಸ್ಸು ಮಾಡಿದರು. ಕನ್ನಡ, ಕರ್ನಾಟಕ ಎಂಬ ಪದಗಳು ಬೆಂಬಲ ಗಿಟ್ಟಿಸುತ್ತೋ, ಬಿಡುತ್ತೋ? ಪ್ರತಿರೋಧವಂತೂ ಹುಟ್ಟುವುದಿಲ್ಲ ಎನ್ನುವುದು ಅವರಿಗೆ ನಿಧಾನವಾಗಿ ಅರ್ಥವಾಗಿತ್ತು.

'ಲಂಕೇಶ್- ವಾಟಾಳ್' ಜುಗಲ್ ಬಂದಿ:

ಲಂಕೇಶ್ ಮತ್ತು ವಾಟಾಳ್ರದ್ದು ಒಂದು ರೀತಿಯ ಅವಿನಾಭಾವ ಸಂಬಂಧ. 1980ರ ಹಲ್ಲೆಯ ನಂತರ ಲಂಕೇಶ್ ಹಿಗ್ಗಾ ಮುಗ್ಗಾ ಝಾಡಿಸಿ ವಾಟಾಳ್ ವಿರುದ್ಧ ಬರೆಯುತ್ತಿದ್ದರು. ಅದಕ್ಕೆಲ್ಲಾ ಲಂಕೇಶ್ ಒಂದೇ ಫೊಟೋ ಬಳಸುತ್ತಿದ್ದರು. ಟೊಪ್ಪಿ, ಕನ್ನಡಕ ಇಲ್ಲದ ಅಪರೂಪದ ಕಪ್ಪು ಬಿಳುಪಿನ ಫೊಟೋವೊಂದು ಲಂಕೇಶ್ ಬಳಿಯಲ್ಲಿತ್ತು. ಆ ಫೋಟೋದಲ್ಲಿ ವಾಟಾಳ್ ಹಲ್ಲು ಮಾತ್ರ ಕಾಣಿಸುತ್ತಿತ್ತು.

“ಕೊನೆಗೊಂದು ದಿನ ‘ಲಂಕೇಶ್ ಪತ್ರಿಕೆ’ ಕಚೇರಿಗೆ ಚೆಂದದ ನಾಲ್ಕು ಫೋಟೋ ಕೊಟ್ಟು ಬರಲು ವಾಟಾಳ್ ತಮ್ಮ ಜನ ಕಳುಹಿಸಿದ್ದರು. ಏನೇ ಬರೆಯಿರಿ ಆದರೆ ನನ್ನ ಹಳೇ ಫೋಟೋ ಮಾತ್ರ ಬಳಸಬೇಡಿ ಎಂದು ವಾಟಾಳ್ ಬೆಂಬಲಿಗಲಿಗರ ಬಳಿ ಹೇಳಿ ಕಳಿಸಿದ್ದರು. ಆದರೆ ಲಂಕೇಶ್ ಹಳೇ ಫೊಟೋ ಬಳಸುವುದನ್ನು ಮಾತ್ರ ನಿಲ್ಲಿಸಲಿಲ್ಲ,” ಎನ್ನುತ್ತಾರೆ ದೀರ್ಘ ಕಾಲ ಲಂಕೇಶ್ ಪತ್ರಿಕೆಯ ಜತೆಗಿದ್ದ ಮತ್ತೊಬ್ಬ ಹಿರಿಯ ಪತ್ರಕರ್ತ ಸತ್ಯಮೂರ್ತಿ ಆನಂದೂರು.

ಲಂಕೇಶ್ ಇರುವಷ್ಟು ದಿನ ತಮ್ಮ ವರದಿಗಳ ಮೂಲಕ ನಾಗರಾಜ್ರನ್ನು ಸರಿಯಾಗಿ ಕಾಲೆಳೆಯುತ್ತಿದ್ದರು. ‘ವಾಚಾಳಿ ನಾಗರಸ’ ಎನ್ನುವಲ್ಲಿಂದ ಹಿಡಿದು ‘ಕನ್ನಡ ತಾಯಿ ಬಸುರಾಗುವ ಮೊದಲೇ ಹುಟ್ಟಿದ ಕೂಸು’ ಎನ್ನುವಲ್ಲಿವರೆಗೆ, ವಾಟಾಳರನ್ನು ಲಂಕೇಶ್ ಗೋಳು ಹೊಯ್ದುಕೊಳ್ಳುತ್ತಿದ್ದರು. ಲಂಕೇಶ್ ಪಾಲಿಗೆ ವಾಟಾಳ್ ‘ಕಾಮಿಡಿ ಪೀಸ್’ ಆಗಿದ್ದರು.

ವಾಟಾಳ್ ಪಾತ್ರ ಇಟ್ಟುಕೊಂಡು ಲಂಕೇಶ್ ಒಂದು ನಾಟಕವನ್ನೂ ಬರೆದಿದ್ದರು. ಅವತ್ತಿಗೆ ವಾಟಾಳ್ ‘ಸಮಸ್ತ’ ಮಾಹಿತಿಯನ್ನೂ ಲಂಕೇಶ್‌ಗೆ ತಲುಪಿಸುತ್ತಿದ್ದವರು ಜಾಣಗೆರೆ ವೆಂಕಟರಾಮಯ್ಯ ಮತ್ತು ಕೆ. ರಾಮಯ್ಯ ಎನ್ನುತ್ತಾರೆ ಅವತ್ತಿನ ಲಂಕೇಶ್ ಪತ್ರಿಕೆಯ ನರನಾಡಿಗಳನ್ನು ಬಲ್ಲವರು. ಲಂಕೇಶ್- ವಾಟಾಳ್ ಒಡನಾಟ ಹೀಗಿದ್ದಾಗೇ ಅನಿರೀಕ್ಷಿತ ನಡೆಯೊಂದನ್ನು ತೆಗೆದುಕೊಂಡು ವಾಟಾಳ್ ಸುದ್ದಿಯಾದರು.

"1998 ರಲ್ಲಿ ನಾನು 'ಲಂಕೇಶ್ ಪತ್ರಿಕೆ'ಯಲ್ಲಿ ಬರೆದ 'ಶಾಸಕಿಯರ ಕಾಲಹರಣ' ವಿವಾದಕ್ಕೆ ಕಾರಣವಾಗಿ ಸಂಪಾದಕರಾದ ಪಿ.ಲಂಕೇಶ್ ಮತ್ತು ನನ್ನ ವಿರುದ್ಡ ವಿಧಾನ ಮಂಡಲದಲ್ಲಿ ಹಕ್ಕುಚ್ಯುತಿ ಮಂಡನೆಯಾಯಿತು. ಇಡಿ ಸದನವೇ ನಮ್ಮ ಪತ್ರಿಕೆ ವಿರುದ್ಧ ನಿಂತಾಗ ವಾಟಾಳರೂ ಸಂದರ್ಭದ ಲಾಭ ಪಡೆದು ಪತ್ರಿಕೆ ವಿರುದ್ಧ ಸೇಡು ತೀರಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು.

ಆದರೆ ವಾಟಾಳರು ಪಕ್ಕಾ ನಿಯಮ ಪಾಲಕರಂತೆ ವರ್ತಿಸಿ ' ಈ ಲೇಖನ ಹಕ್ಕುಚ್ಯುತಿ ವ್ಯಾಪ್ತಿಗೆ ಒಳಪಡುವುದಿಲ್ಲ, ಅಗತ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಬಹುದು' ಎಂದು ತರ್ಕಬದ್ಧವಾಗಿ ವಾದಿಸಿದರು," ಎಂಬುದಾಗಿ ಸ್ವತಃ ಟಿ.ಕೆ ತ್ಯಾಗರಾಜ್ ಹಿಂದೊಮ್ಮೆ ತಮ್ಮ ಫೇಸ್ಬುಕ್ ಗೋಡೆ ಮೇಲೆ ಬರೆದುಕೊಂಡಿದ್ದರು.

“ನಮ್ಮಿಬ್ಬರ ನಡುವೆ ಏನೇ ನಡೆದಿರಬಹುದು. ಆದರೆ ಲಂಕೇಶ್ರ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸಬೇಕು. ಲಂಕೇಶ್ ಪರವಾಗಿ ನಿಲ್ಲುವುದು ಸೂಕ್ತ” ಎಂದು ಅವತ್ತು ವಾಟಾಳ್ ಅಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ ರೇಷ್ಮೆ. ಇದೇ ರೀತಿ, ಪತ್ರಕರ್ತರ ಹಕ್ಕುಚ್ಯುತಿ ವಿಚಾರ ಬಂದಾಗಲೆಲ್ಲಾ ವಾಟಾಳ್ ಜತೆಗೆ ನಿಂತ ಹಲವು ನಿದರ್ಶನಗಳೂ ಇವೆ.

ಹೋರಾಟದ ವಿದೂಷಕ:

‘ಕಾವೇರಿ ಕವರೇಜ್’: ಮುಖ್ಯಮಂತ್ರಿಗಳ ಆಪ್ತ; ಗೋಕಾಕ್ ಚಳವಳಿ ವಿರೋಧಿ ‘ವಾಚಾಳಿ ವಾಟಾಳ್’!

ವಿದೂಷಕನಾಗಿ ಆಗಾಗ ಪ್ರತ್ಯಕ್ಷರಾಗುವ ವಾಟಾಳ್ ಪ್ರತಿಭಟನೆಗೂ ಒಂದು ಸ್ಟೈಲ್ ಮೊದಲಿನಿಂದಲೂ ಬೆಳೆದು ಬಂದಿದೆ. “ವಾಟಾಳ್ ಮತ್ತು ಪೊಲೀಸರ ನಡುವೆ ಮೊದಲೇ ಸೆಟ್ಟಿಂಗ್ ನಡೆದಿರುತ್ತಿತ್ತು. ಮಾಧ್ಯಮದವರೆಲ್ಲಾ ಬರುವವರೆಗೆ ಕಾಯುವುದು. ಬರುತ್ತಿದ್ದಂತೆ ಉಗ್ರ ಪ್ರತಿಭಟನೆ ನಡೆಸಿದ ವಾಟಾಳರನ್ನು ಬಂಧಿಸಿದಂತೆ ಮಾಡುವುದು. ನಂತರ ಮಾತಿನಂತೆ ಬಿಡುಗಡೆ ಮಾಡುವುದು ಅವರ ಹೋರಾಟ,” ಎನ್ನುತ್ತಾರೆ ವಾಟಾಳ್ ಗರಡಿಯಲ್ಲಿದ್ದು ಹೊರ ಬಂದ ಮಾಜಿ ಹೋರಾಟಗಾರರೊಬ್ಬರು.

ಹಾಗಂತ ವಾಟಳ್ರಿಂದ ಉಪಯೋಗನೇ ಆಗಿಲ್ಲ ಎಂದಲ್ಲ. ವಾಟಾಳ್ ಏನೇ ಮಾಡಿದರೂ, ಕನ್ನಡದ ಎಚ್ಚರವನ್ನು ನಿರಂತರವಾಗಿ ಕಾಯ್ದಿಟ್ಟುಕೊಂಡು ಬಂದರು. ಅವತ್ತಿಗೆ ಬೆಂಗಳೂರಿನಲ್ಲಿ ಕನ್ನಡ ಬೋರ್ಡುಗಳೇ ಇರುತ್ತಿರಲಿಲ್ಲ. “ಅನ್ಯ ಭಾಷೆಯ ಬೋರ್ಡುಗಳಿಗೆ ಟಾರು ಬಳಿದ ಪರಿಣಾಮ ಇವತ್ತು ಕನ್ನಡ ಬೋರ್ಡುಗಳು ಉಳಿದುಕೊಂಡಿವೆ. ಒಂದು ಕಾಲದಲ್ಲಿ ಬೂಟುಗಾಲಿನ ಹೊಡೆತ ತಿಂದು ಬಂದವರು ವಾಟಾಳ್. ಆದರೆ ನಂತರ ಅವರು ದೊಡ್ಡ ಹೋರಾಟಗಾರರಾಗಲಿಲ್ಲ,” ಎನ್ನುತ್ತಾರೆ ರೇಷ್ಮೆ.

ವಾಟಾಳ್ ಕೇಡಿಯಲ್ಲ; ವಿಡಂಬನಾತ್ಮಕ, ವಿನೋದ ಪ್ರಜ್ಞೆಯಿಂದ ಹೋರಾಟ ಮಾಡುವವರು ಎನ್ನುವುದು ಅವರ ಅಭಿಪ್ರಾಯ. ಸಂಪಗಿ ರಾಮನಗರದಲ್ಲಿರುವ 'ಮದ್ರಾಸ್ ವುಡ್ ಲ್ಯಾಂಡ್ ಹೊಟೇಲ್' ವಾಟಾಳ್ ನಾಗರಾಜರ ಖಾಯಂ ಸ್ಥಳ. ಆಗಾಗ ಬಂದಿಗೆ ಕರೆ ನೀಡುವುದರಿಂದ ಹಿಡಿದು ಪ್ರೆಸ್ ಮೀಟ್ ವರೆಗೆ ವಾಟಾಳ್ ‘ಸಮಸ್ತ’ ಚಟುವಟಿಕೆಗಳು ನಡೆಯುವುದೂ ಇಲ್ಲೇ. ಹೋಟೆಲ್ ಮಾಲೀಕರಿಗೆ ವಾಟಾಳ್ ನೀಡಿದ ಚಿಕ್ಕದೊಂದು ಸಹಾಯಕ್ಕೆ ಪ್ರತಿಯಾಗಿ ಇವತ್ತಿಗೂ ವಾಟಾಳ್ಗೆ ಅಲ್ಲಿ ಉಚಿತ ಸೇವೆ ಸಿಗುತ್ತಿವೆ.

ಇಷ್ಟೆಲ್ಲಾ ಹಿನ್ನೆಲೆ ಇರುವ ವಾಟಾಳ್, ಈಗ ಮತ್ತೆ ಸಪ್ಟೆಂಬರ್ 9 ರಂದು ಬಂದಿಗೆ ಕರೆ ನೀಡಿದ್ದಾರೆ. ಜೊತೆಗೆ ಇನ್ನೊಬ್ಬರಿದ್ದಾರೆ; ಅವರು ಸಾ. ರಾ. ಗೋವಿಂದು. ಕನ್ನಡ ಹೋರಾಟವನ್ನೇ ವೃತ್ತಿಯಾಗಿ ಬದುಕಿದವರಲ್ಲಿ ಅವರೂ ಒಬ್ಬರು. ಕಾವೇರಿ ಪ್ರತಿಭಟನೆಯ ಕಾವು ಇರುವವರೆಗೂ ವಾಟಾಳ್ ಟೀವಿಗಳಲ್ಲಿ ವಿಚಿತ್ರ ಮ್ಯಾನರಿಸಂ ಮೂಲಕ ಜನರ ಗಮನ ಸೆಳೆಯುತ್ತಾರೆ.

ಏನೂ ಇಲ್ಲದಿದ್ದರೆ, ಟಾಯ್ಲೆಟ್ ಕಟ್ಟಿಸಿ ಎಂದು ಕಮೋಡ್ ಹಿಡಿದು ರಸ್ತೆಗೆ ಇಳಿಯುತ್ತಾರೆ. ಹೀಗೆ ಕಳೆದ ಐದು ದಶಕಗಳ ಅಂತರದಲ್ಲಿ ಈ ಕಾವೇರಿ ಮತ್ತು ಕನ್ನಡ 'ಓರಾಟಗಾರ' (ಲಂಕೇಶ್ ಹೇಳುವಂತೆ) ನೊಬ್ಬನನ್ನು ಈ ನಾಡಿಗೆ ನೀಡಿದೆ. ಬೆಳವಣಿಗೆ ವೇಗದಲ್ಲಿರುವ ಈ ದಿನಗಳಲ್ಲೂ ವಾಟಾಳ್ ತಮ್ಮನ್ನು ತಾವು ಕನ್ನಡದ ಜತೆ ಅಂಟು ಹಾಕಿಕೊಳ್ಳುವ ನಿರಂತರ ಪ್ರಯತ್ನದಲ್ಲಿದ್ದಾರೆ.

(ಈ ವರದಿಗಾಗಿ ವಾಟಾಳ್ ಅವರನ್ನು 'ಸಮಾಚಾರ' ಸಂಪರ್ಕಿಸಿತಾದರೂ, ಬಂದ್ ಸಿದ್ಧತೆಯ ಹಿನ್ನೆಲೆಯಲ್ಲಿ ಮಾತುಕತೆ ಸಾಧ್ಯವಾಗಲಿಲ್ಲ.)