ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಗುಣಗಾನ: 1991ರಲ್ಲಿ ನಿಜಕ್ಕೂ ನಡೆದಿದ್ದೇನು?
ಕಾವೇರಿ ವಿವಾದ

ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಗುಣಗಾನ: 1991ರಲ್ಲಿ ನಿಜಕ್ಕೂ ನಡೆದಿದ್ದೇನು?

ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಹೇಗೆ ನಡೆದುಕೊಂಡರು ಎಂಬುದನ್ನು ಇತಿಹಾಸ ದಾಖಲಸಿಕೊಂಡಿದೆ. ಅದನ್ನು ತಿದ್ದುವ ಕೆಲಸ ನಡೆಯಬಾರದು ಎಂಬುದಕ್ಕಷ್ಟೆ ಈ ಮಾಹಿತಿ.

ಕಾವೇರಿ ವಿಚಾರದಲ್ಲಿ 1991ರ ಸುಪ್ರೀಂ ಕೋರ್ಟ್ ತೀರ್ಮಾನವನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಗಟ್ಟಿ ನಿಲುವು ತೆಗೆದುಕೊಂಡಿದ್ದರು. ಇವತ್ತಿನ ಸಿದ್ಧರಾಮಯ್ಯ ಸರಕಾರದ ಕೈಲಿ ಯಾಕೆ ಸಾಧ್ಯವಿಲ್ಲ? ಹೀಗೆ ಒಂದಷ್ಟು ಪ್ರಶ್ನೆಗಳು, ಮಾಜಿ ಮುಖ್ಯಮಂತ್ರಿಯನ್ನು ಗುಣಗಾನ ಮಾಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಾಗಾದರೆ ನಿಜಕ್ಕೂ ಬಂಗಾರಪ್ಪ 1991ರಲ್ಲಿ ತೆಗೆದುಕೊಂಡ ನಿಲುವೇನು? ಮುಂದೆ ಆ ನಿರ್ಧಾರ ಏನಾಯ್ತು? ಹುಡುಕಿಕೊಂಡು ಹೊರಟಾಗ ‘ಸಮಾಚಾರ’ಕ್ಕೆ ಸಿಕ್ಕ ಮಾಹಿತಿಗಳಿಷ್ಟು.ಜೂನ್ 2, 1990. ಎರಡೂ ರಾಜ್ಯಗಳ ಜಲವಿವಾದ ಪರಿಹರಿಸಲು ‘ಕಾವೇರಿ ನ್ಯಾಯಾಧಿಕರಣ’ ಆರಂಭವಾಗಿತ್ತು. ಹಾಗೆ ಆರಂಭವಾದ ನ್ಯಾಯಧಿಕರಣ 1991ರಲ್ಲಿ ಮಧ್ಯಂತರ ತೀರ್ಪೊಂದನ್ನು ನೀಡಿತ್ತು. ತಮಿಳುನಾಡಿಗೆ ತಕ್ಷಣ 205 ಟಿಎಂಸಿ ನೀರು ಬಿಡುವಂತೆ ಈ ಆದೇಶದಲ್ಲಿ ಹೇಳಲಾಗಿತ್ತು. ಇದರಲ್ಲಿ 6 ಟಿಎಂಸಿ ನೀರನ್ನು ತಮಿಳುನಾಡು ಪುದುಚೇರಿಗೆ ನೀಡಬೇಕು ಎಂದೂ ಹೇಳಲಾಗಿತ್ತು.

ನ್ಯಾಯಾಧಿಕರಣದ ಆದೇಶ ಬರುತ್ತಿದ್ದಂತೆ ಕರ್ನಾಟಕದಲ್ಲಿ ಭಾರಿ ಪ್ರತಿಭಟನೆಗಳು ಆರಂಭವಾದವು. ಜನರ ಪ್ರತಿಕ್ರಿಯೆ, ನ್ಯಾಯಾಧಿಕರಣದ ಆದೇಶವನ್ನು ನೋಡಿದ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ, ಕಾನೂನು ತಜ್ಞರು, ನೀರಾವರಿ ತಜ್ಞರು, ಹಿರಿಯರೊಂದಿಗೆಲ್ಲಾ ಸಮಾಲೋಚನೆ ಮಾಡಿ ಅಧಿವೇಶನದಲ್ಲಿ ನ್ಯಾಯಾಧಿಕರಣದ ತೀರ್ಮಾನವನ್ನು ಧಿಕ್ಕರಿಸುವ ಘೋಷಣೆ ಮಾಡಿದರು. ನ್ಯಾಯಾಧಿಕರಣದ ಆದೇಶಕ್ಕೆ ತಡೆ ನೀಡುವಂತೆ ಕೇಂದ್ರ ಸರಕಾರವನ್ನು ಕೋರಿಕೊಂಡರು. ಕೊನೆಗೆ ಜುಲೈ 25, 1991ರಂದು ‘ಕಾವೇರಿ ಸುಗ್ರೀವಾಜ್ಞೆ’ ಹೊರಡಿಸಿ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬ ತೀರ್ಮಾನ ಹೊರ ಹಾಕಿದರು. ಆ ತೀರ್ಮಾನ ಬಂಗಾರಪ್ಪರನ್ನು ‘ಗಟ್ಟಿ ನಾಯಕ’ ಎಂಬುದಾಗಿ ಬಿಂಬಿಸಿತ್ತು.

ಆದರೆ ಬಂಗಾರಪ್ಪನವರ ಈ ನಿರ್ಧಾರ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಷ್ಟ್ರೀಯ ಮಾಧ್ಯಮಗಳು ಬಂಗಾರಪ್ಪನವರನ್ನು ಹಿಗ್ಗಾ ಮುಗ್ಗಾ ಟೀಕಿಸಿದವು.ನ್ಯಾಯಾಧಿಕರಣದ ತೀರ್ಪನ್ನು ಸರಾ ಸಗಾಟಾಗಿ ತಿರಸ್ಕರಿಸಿದನ್ನು ನೋಡಿ, ಬೆಚ್ಚಿ ಬಿದ್ದ ಅವತ್ತಿನ ರಾಷ್ಟ್ರಪತಿ ವೆಂಕಟರಾಮನ್, ಪ್ರಕರಣವನ್ನು ಸುಪ್ರೀಂ ಕೋರ್ಟಿನ ಗಮನಕ್ಕೆ ತಂದರು. ಅದಾದ ನಾಲ್ಕು ತಿಂಗಳ ನಂತರ, ನವೆಂಬರಿನಲ್ಲಿ ಸುಪ್ರಿಂ ಕೋರ್ಟ್, ಕರ್ನಾಟಕದ ಸರಕಾರದ ಸುಗ್ರೀವಾಜ್ಞೆ ಕಾನೂನುಬಾಹಿರ ಎಂದು ಹೇಳಿ ನ್ಯಾಯಾಧಿಕರಣದ ತೀರ್ಪನ್ನು ಎತ್ತಿ ಹಿಡಿಯಿತು.ಮುಂದೆ ನಡೆದ ಘಟನೆಗಳೆಲ್ಲಾ ಕರ್ನಾಟಕದ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ದಾಖಲಾದವು.

ಅವತ್ತಿಗೆ ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೂ, ಸುಪ್ರೀಂ ಕೋರ್ಟ್ ತೀರ್ಮಾನ ವಿರೋಧಿಸಿ ರಾಜ್ಯ ಬಂದ್ಗೆ ಕರೆನೀಡಲಾಯಿತು. ಇದಕ್ಕೆ ಸ್ವತಃ ಮುಖ್ಯಮಂತ್ರಿ ಬಂಗಾರಪ್ಪ ಸರಕಾರದ ಪ್ರತ್ಯಕ್ಷ ಸಹಕಾರವೂ ಇತ್ತು. ಶಾಲೆ ಕಾಲೇಜುಗಳಿಗೆ 10 ದಿನ ರಜೆ ಘೋಷಿಸಿದರು. ಡಿಸೆಂಬರ್ 24-27ರ ನಡುವೆ ತಮಿಳರ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿಗಳು ನಡೆದವು. 90 ಸಾವಿರದಷ್ಟು ತಮಿಳರು ಏಕಾಏಕಿ ಬೆಂಗಳೂರು ಬಿಟ್ಟು ಹೊರ ನಡೆಯಬೇಕಾಯಿತು. ರಾಜ್ಯದ ಗಡಿಭಾಗಗಳಲ್ಲೂ ತಮಿಳು ಮಹಿಳೆಯರು ಮಕ್ಕಳ ಮೇಲೆ ಹಲ್ಲೆಗಳು ನಡೆದವು. ಕರ್ನಾಟಕ ಬಂದಿಗೆ ಪ್ರತಿಯಾಗಿ ಡಿಸೆಂಬರ್ 27ರಂದು ತಮಿಳುನಾಡಿನಲ್ಲೂ ಬಂದ್ಗೆ ಕರೆ ನೀಡಲಾಯಿತು. ಹೀಗೆ ಎರಡೂ ರಾಜ್ಯಗಳಲ್ಲಿ ಹಿಂಸೆ, ಪ್ರತಿಭಟನೆಗಳಿಂದ ಅಪಾರ ಆಸ್ತಿ ಹಾನಿ ಜೀವ ಹಾನಿ ಸಂಭವಿಸಿತು.

ಇಷ್ಟೆಲ್ಲಾ ನಡೆದ ನಂತರವೂ, ಕರ್ನಾಟಕ ತಮಿಳುನಾಡಿಗೆ ನೀರು ಬಿಡಲೇಬೇಕಾಯಿತು. ಸುಪ್ರೀಂ ಕೋರ್ಟ್ ತೀರ್ಮಾನ ವಿರೋಧಿಸಿದ್ದಕ್ಕಾಗಿ ಬಂಗಾರಪ್ಪ ನ್ಯಾಯಾಂಗ ನಿಂದನೆ ಎದುರಿಸಬೇಕಾಯಿತು. ಕೊನೆಗೆ ಕೋರ್ಟ್ ಕ್ಷಮೆ ಕೇಳಿದರು. ತಮಿಳುನಾಡಿಗೆ ನ್ಯಾಯಾಧಿಕರಣದ ನಿರ್ಧಾರದಂತೆ ನೀರು ಬಿಟ್ಟರು. "ಬಂಗಾರಪ್ಪನವರ ಅವತ್ತಿನ ನಿರ್ಧಾರ ಗಟ್ಟಿತನದ್ದಾಗಿರಲಿಲ್ಲ; ಬದಲಿಗೆ ಮೊಂಡುತನದ, ಭಂಡತನದ ನಿರ್ಧಾರವಾಗಿತ್ತು,'' ಎನ್ನುತ್ತಾರೆ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ.

ಹೆಚ್ಚು ಕಡಿಮೆ 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಕೂಡ ಇಂತಹದ್ದೇ ಜನಪ್ರಿಯತೆಗೆ ಕಟ್ಟುಬಿದ್ದು ಕಾವೇರಿ ನೀರು ಹರಿಸಲು ಮೀನಾಮೇಷ ಎಣಿಸಿದ್ದರು. ಕೆಆರ್ಎಸ್ ಕಣೆಕಟ್ಟಿಗೆ ಪಾದಯಾತ್ರೆ ನಡೆಸಿದ್ದರು. ಕೊನೆಗೆ, ನ್ಯಾಯಾಂಗ ನಿಂದನೆಯಾದ ಹಿನ್ನೆಲೆಯಲ್ಲಿ ನೀರು ಹರಿಸುವುದು ಅನಿವಾರ್ಯವಾಗಿತ್ತು.

ಅದನ್ನು ಪಕ್ಕಕ್ಕಿಟ್ಟು ನೋಡಿದರೆ, ಕಾವೇರಿ ವಿವಾದ ಉಂಟಾದಗೆಲ್ಲಾ ಬಂಗಾರಪ್ಪರ ಹೆಸರು ಕೇಳಿಬರುತ್ತದೆ. ಅವರು ತೋರಿಸಿದ 'ಗಟ್ಟಿತನ'ದ ಗುಣಗಾನ ನಡೆಯುತ್ತದೆ. ಹಲವು ವಿಚಾರಗಳಲ್ಲಿ ಬಂಗಾರಪ್ಪ ನಡೆಸಿದ ಆಡಳಿತ ಮತ್ತು ಅವರ ರಾಜಕೀಯ ನಡೆಗಳು ಪ್ರಸಂಶೆಗೆ ಅರ್ಹವಾದವೇ ಇರಬಹುದು. ಆದರೆ ಕಾವೇರಿ ವಿಚಾರದಲ್ಲಿ ಬಂಗಾರಪ್ಪ ಹೇಗೆ ನಡೆದುಕೊಂಡರು ಎಂಬುದನ್ನು ಇತಿಹಾಸ ದಾಖಲಸಿಕೊಂಡಿದೆ. ಅದನ್ನು ತಿದ್ದುವ ಕೆಲಸ ನಡೆಯಬಾರದು ಎಂಬುದಕ್ಕಷ್ಟೆ ಈ ಮಾಹಿತಿ.