‘ನಕಲಿ ಜಾತಿ ಪ್ರಮಾಣ ಪತ್ರ’: ಚುನಾವಣಾ ಕಣದಿಂದ ಕೊತ್ತನೂರು ಮಂಜು ಔಟ್!
BREAKING NEWS

‘ನಕಲಿ ಜಾತಿ ಪ್ರಮಾಣ ಪತ್ರ’: ಚುನಾವಣಾ ಕಣದಿಂದ ಕೊತ್ತನೂರು ಮಂಜು ಔಟ್!

ಕೋಲಾರ ಜಿಲ್ಲೆ, ಮುಳಬಾಗಿಲು ಕ್ಷೇತ್ರದಿಂದ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಿ. ಮಂಜುನಾಥ್ (ಕೊತ್ತನೂರು ಮಂಜು) ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಸ್ಪರ್ಧೆಯಿಂದ ಮಂಜು ಹೊರಗುಳಿಯಲಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ಬಿಸಿ ಏರುತ್ತಿರುವ ಹೊತ್ತಿಗೆ, ಹೈಕೋರ್ಟ್‌ ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.

ಕೋಲಾರ ಜಿಲ್ಲೆ, ಮುಳಬಾಗಿಲು ಕ್ಷೇತ್ರದಿಂದ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಿ. ಮಂಜುನಾಥ್ ಅಲಿಯಾಸ್ ಕೊತ್ತನೂರು ಮಂಜು ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ.

2013ರ ಚುನಾವಣೆಯಲ್ಲಿ ತಗವು ಬುಡಗ ಜಂಗಮ (ಎಸ್‌ಟಿ) ಸಮುದಾಯಕ್ಕೆ ಸೇರಿದವರು ಎಂದು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಮಂಜು ಸ್ಪರ್ದೆ ಮಾಡಿದ್ದರು. 73,146 ಮತಗಳನ್ನು ಪಡೆಯುವ ಮೂಲಕ ಮಂಜು ವಿಧಾನಸಭೆಯನ್ನು ಪ್ರವೇಶಿಸಿದ್ದರು.

ಚುನಾವಣೆಯಲ್ಲಿ ಪರಾಭವಗೊಂಡ ಜೆಡಿಎಸ್‌ ಅಭ್ಯರ್ಥಿ ಎಂ. ಮುನಿಅಂಜಪ್ಪ ಎಂಬುವವರು ಕೊತ್ತನೂರು ಮಂಜು ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದರು ಎಂದು ಅವರು ದೂರಿದ್ದರು. ಅದಕ್ಕೆ ಮಂಜು ಅವರ ಶಾಲಾ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸಿದ್ದರು.

ಐದು ವರ್ಷಗಳ ಕಾಲ ಈ ಚುನಾವಣಾ ದಾವೆಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ, ಅದೂ ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಗಡುವು ಮುಗಿದ ಮಾರನೇ ದಿನ ಎಂಬುದು ವಿಶೇಷ.

ನ್ಯಾ. ಎ. ಎಸ್. ಬೋಪಣ್ಣ, “ಕೊತ್ತನೂರು ಮಂಜು ಬುಡಗ ಜಂಗಮ ಸಮುದಾಯಕ್ಕೆ ಸೇರಿಲ್ಲ. ಬದಲಿದೆ ಬೈರಾಗಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೀಸಲು ಕ್ಷೇತ್ರ ಮುಳಬಾಗಿಲಿನಿಂದ ಸ್ಪರ್ಧೆ ಮಾಡುವಂತಿಲ್ಲ ಎಂದು ತೀರ್ಪು ನೀಡಿದ್ದಾರೆ,’’ ಎಂದು ನ್ಯಾಯಾಲಯದ ಮೂಲಗಳು ‘ಸಮಾಚಾರ’ಕ್ಕೆ ಮಾಹಿತಿ ನೀಡಿವೆ.

ಯಾರು ಈ ಮಂಜು?:

ವಿದೇಶಗಳಲ್ಲಿ ಜ್ಯೋತಿಷ್ಯ ಹೇಳುವ ಮೂಲಕ ಶ್ರೀಮಂತಿಕೆಯನ್ನು ಕಂಡ ಕೊತ್ತನೂರು ಮಂಜು ವಿಶಿಷ್ಟ ವ್ಯಕ್ತಿತ್ವ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರುವ ಮಂಜು, ರಾಜ್ಯ ಅತ್ಯಂತ ಹಿಂದುಳಿದ ಸಮುದಾಯ ಬುಡಗ ಜಂಗಮಕ್ಕೆ ಸೇರಿದವರು ಎಂದು ಹೇಳಿಕೊಳ್ಳುತ್ತಿದ್ದರು. ಕಳೆದ ಚುನಾವಣೆಯಲ್ಲಿ ಸುಮಾರು 3. 75 ಕೋಟಿ ರೂ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಬುಡಗ ಜಂಗಮ ಸಮುದಾಯದವರ ಇಷ್ಟದ ಆಹಾರ ಬೆಕ್ಕು. ವರ್ಷದಲ್ಲಿ ಆರು ತಿಂಗಳು ವಿದೇಶಗಳಿಗೆ ಹೋಗಿ ಭವಿಷ್ಯ ನುಡಿಯುತ್ತಾರೆ. ಅದೇ ಅವರ ಆದಾಯ ಮೂಲ ಕೂಡ. ಇವತ್ತಿಗೂ ಮುಕ್ತ ವೈವಾಹಿಕ ಸಂಪ್ರದಾಯಗಳನ್ನು ಅನುಸರಿಸುವ ಈ ಸಮುದಾಯ ಗಮನ ಸೆಳೆಯುತ್ತಿದೆ.

ಇದೀಗ ಮಂಜು ಬುಡಗ ಜಂಗಮ ಅಲ್ಲ, ಬದಲಿಗೆ ಬೈರಾಗು ಸಮುದಾಯಕ್ಕೆ ಸೇರಿದವರು ಎಂದು ಹೇಳುವ ಮೂಲಕ ಹೈಕೋರ್ಟ್‌ ನೀಡಿದ ಆದೇಶ ಮುಳಬಾಗಿಲು ಚುನಾವಣಾ ಕಣದ ಚಿತ್ರಣವನ್ನೇ ಬದಲಿಸಿದೆ. ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡವು ಮುಗಿದಿದೆ. ಹೀಗಾಗಿ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಬೇಕಾಗಿದೆ. ಗೆಲುವಿನ ವಿಶ್ವಾಸದಲ್ಲಿದ್ದ ಇನ್ನೊಂದು ಕ್ಷೇತ್ರ ಕೈ ತಪ್ಪಿದಂತಾಗಿದೆ.