samachara
www.samachara.com
'ಬಾಳಿಗ ಫೈಲ್ಸ್': ಅನಧಿಕೃತ ಪಾರ್ಕಿಂಗ್ ವಿಚಾರವನ್ನು ಬೆನ್ನತ್ತಿದ್ದ ಬಾಳಿಗ ಬಲಾಢ್ಯರ ಅಕ್ರಮಗಳನ್ನು ಬಯಲಿಗೆಳೆಯುವ ಹಾದಿಯಲ್ಲಿದ್ದರು!
ಬಾಳಿಗ ಫೈಲ್ಸ್

'ಬಾಳಿಗ ಫೈಲ್ಸ್': ಅನಧಿಕೃತ ಪಾರ್ಕಿಂಗ್ ವಿಚಾರವನ್ನು ಬೆನ್ನತ್ತಿದ್ದ ಬಾಳಿಗ ಬಲಾಢ್ಯರ ಅಕ್ರಮಗಳನ್ನು ಬಯಲಿಗೆಳೆಯುವ ಹಾದಿಯಲ್ಲಿದ್ದರು!

samachara

samachara

ಮಂಗಳೂರಿನಲ್ಲಿ

ಹತ್ಯೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗ ಅವರ ಆಸಕ್ತಿ ಮತ್ತು ಹೋರಾಟದ ವ್ಯಾಪ್ತಿ ಕೇವಲ ವೆಂಕಟರಮಣ ದೇವಸ್ಥಾನ ಮತ್ತು ಕಾಶಿ ಮಠಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ.

ಯಾಕೆ ಎಂದರೆ, ನಾಲ್ಕು ವರ್ಷಗಳ ಹಿಂದೆ ಬಾಳಿಗ ತಮ್ಮ ಕೋಡಿಯಾಲ್ ಬೈಲ್ ಮನೆ ಹಾದಿಯನ್ನು ಸಂಪರ್ಕಿಸುವ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳು, ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಮುದಾಯ ಭವನಗಳ ವಿರುದ್ಧ ಸಮರವನ್ನು ಶುರು ಮಾಡಿದ್ದರು. ಅಲ್ಲಿ ನಡೆಯುತ್ತಿದ್ದ ಅಕ್ರಮ ಪಾರ್ಕಿಂಗ್ ಪ್ರಶ್ನೆ ಮಾಡಲು ಹೋಗಿ ಹಲವು ಅಕ್ರಮಗಳನ್ನು ಬಯಲಿಗೆಳೆಯುವ ಹಂತದಲ್ಲಿ ಅವರಿದ್ದರು ಎನ್ನುತ್ತವೆ 'ಬಾಳಿಗ ಫೈಲ್ಸ್'.

ವಿನಾಯಕ್ ಬಾಳಿಗ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಂಡಿದ್ದ ದಾಖಲೆಗಳ ಕಣದಿಂದ 'ಸಮಾಚಾರ' ಪ್ರಸ್ತುತ ಪಡಿಸುತ್ತಿರುವ ಎರಡನೇ ದೊಡ್ಡ ವರದಿ ಇದು. ರಸ್ತೆಯ ಮೇಲೆ ನಿಂತಿರುತ್ತಿದ್ದ ಅಕ್ರಮ ವಾಹನಗಳ ವಿರುದ್ಧ ಆರಂಭಗೊಂಡಿದ್ದ ಅವರ ಹೋರಾಟ ದೊಡ್ಡಮಟ್ಟದ ಅಕ್ರಮವನ್ನು ಬಯಲಿಗೆಳೆಯುವ ಹಾದಿಯಲ್ಲಿ ಸಾಗಿತ್ತು. ಆದರೆ ಅದಕ್ಕೊಂದು ತಾರ್ಕಿಕ ಅಂತ್ಯ ಸಿಗುವ ಮುನ್ನವೇ ಮಾ. 21ರ ಮುಂಜಾನೆ ಬಾಳಿಗ ಹತ್ಯೆಯಾದರು.

ಒಬ್ಬ ಮಾಹಿತಿ ಹಕ್ಕು ಕಾರ್ಯಕರ್ತ ಅಕ್ರಮಗಳ ವಿರುದ್ಧ ದನಿ ಎತ್ತಲು ಶುರುಮಾಡಿದರೆ, ಕವಲುಗಳು ಎಂತೆಂತ ಅಕ್ರಮಗಳ ತೊರೆಗಳ ಕಡೆಗೆ ತೆಗೆದುಕೊಂಡು ಹೋಗುತ್ತವೆ ಮತ್ತು ಅಕ್ರಮ ಎಸಗಿದವರಿಗೆ ಯಾವ ಮಟ್ಟದಲ್ಲಿ ಬಿಸಿ ಮುಟ್ಟುತ್ತದೆ ಎಂಬುದಕ್ಕೆ ಕ್ಲಾಸಿಕ್ ಉದಾಹರಣೆಯಂತಿದೆ ಈ ಪ್ರಕರಣ.

ಏನಿದು ಹೊಸ ಮಾಹಿತಿ?:

ವಿನಾಯಕ್ ಬಾಳಿಗ ವಾಸ ಮಾಡುತ್ತಿದ್ದ ಮಂಗಳೂರಿನ ಕೋಡಿಯಾಲ್ ಬೈಲ್ ಮನೆಯ ದಾರಿಯನ್ನು ಸಂಪರ್ಕಿಸುವ ಎರಡು ಪ್ರಮುಖ ರಸ್ತೆಗಳಿವೆ. ಗಿರಿಧರ್ ರಾವ್ ರಸ್ತೆ ಹಾಗೂ ಪಿವಿಎಸ್ ಕಲಾಕುಂಜ್ ರಸ್ತೆಗಳಲ್ಲಿ ಐದು ಶಿಕ್ಷಣ ಸಂಸ್ಥೆಗಳು, ಒಂದು ಅಪಾರ್ಟ್ಮೆಂಟ್ ಹಾಗೂ ಮೂರು ಸಮುದಾಯ ಭವನಗಳು ಬರುತ್ತವೆ. ಆದರೆ ಇವ್ಯಾವುದರಲ್ಲೂ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ದೊಡ್ಡ ಸಂಖ್ಯೆಯ ವಾಹನಗಳು ಇವೆರಡೂ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಲಿದ್ದವು. ಕೆಲವು ಸಾರಿ, ಸಾಮಾನ್ಯ ಜನ ಓಡಾಡುವುದಕ್ಕೆ ಕಷ್ಟವಾಗುವಂತಿತ್ತು ಪರಿಸ್ಥಿತಿ.

ಈ ಹಿನ್ನೆಲೆಯಲ್ಲಿ ಸೆ. 4, 2012ರಲ್ಲಿ ವಿನಾಯಕ್ ಬಾಳಿಗ ಮಂಗಳೂರು ಟ್ರಾಫಿಕ್ ಪೊಲೀಸರಿಗೆ ಈ ಕುರಿತು ಮಾಹಿತಿ ಕೋರಿ ಅರ್ಜಿಯನ್ನು ಸಲ್ಲಿಸುತ್ತಾರೆ. 'ಡಾ. ಗಿರಿಧರ್ ರಾವ್ ರಸ್ತೆಯಲ್ಲಿರುವ ಶಾರದಾ ವಿದ್ಯಾಸಂಸ್ಥೆಗೆ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆಯೇ?' ಎಂಬುದು ಬಾಳಿಗ ಕೇಳುವ ಮೊದಲ ಪ್ರಶ್ನೆ. ಇದಕ್ಕೆ ಉತ್ತರಿಸುವ ಟ್ರಾಫಿಕ್ ಪೊಲೀಸರು ಮಂಗಳೂರು ಮಹಾನಗರ ಪಾಲಿಕೆಯಿಂದ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸುತ್ತಾರೆ. ಹೀಗೆ, ಬಾಳಿಗ ಅವರು ದೊಡ್ಡದೊಂದು ಅಕ್ರಮವನ್ನು ಬಯಲಿಗೆಳೆಯುವ ಹಾದಿಯಲ್ಲಿ ಮೊದಲ ಹೆಜ್ಜೆಯನ್ನು ಇಡುತ್ತಾರೆ.

ಆರಂಭವಾದ ಹೋರಾಟ:

ಇದಾಗಿ ಒಂದು ತಿಂಗಳ ನಂತರ ಬಾಳಿಗ ಅವರಿಗೆ ಮಹಾನಗರ ಪಾಲಿಗೆಯಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಉತ್ತರ ಸಿಗುತ್ತದೆ. 'ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಯಾವ ಕಟ್ಟಡಗಳಿಗೂ ನಾವು ಅನುಮತಿ ನೀಡಿಲ್ಲ. ಒಂದು ವೇಳೆ ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಪೊಲೀಸರು ಕ್ರಮ ಕೈಗೊಳ್ಳಬೇಕು' ಎಂದು ಪಾಲಿಕೆ ಹೇಳಿತು. ಇದೇ ವೇಳೆಗೆ, ಬಾಳಿಗ ಸಾರಿಗೆ ಇಲಾಖೆಯಿಂದ 'ರಸ್ತೆ ಸುರಕ್ಷತಾ ನಡಾವಳಿ'ಯನ್ನು ಪಡೆದುಕೊಂಡರು. 2008ರಲ್ಲಿ ಮಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚನೆಗೊಂಡಿದ್ದ 'ನಡಾವಳಿ'ಗಳಲ್ಲಿಯೂ ರಸ್ತೆ ಬದಿಯಲ್ಲಿ ಅಕ್ರಮ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದು ಈ ಮೂಲಕ ಬಾಳಿಗ ಅರ್ಥ ಮಾಡಿಕೊಂಡರು. ಅವರ ಮುಂದಿನ ನಡೆ ಕುತೂಹಲಕಾರಿಯಾಗಿದೆ.

ಹೀಗೆ, ಟ್ರಾಫಿಕ್ ಪೊಲೀಸರು, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸಾರಿಗೆ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಟ್ಟಿಕೊಂಡು ಬಾಳಿಗ ಮಂಗಳೂರಿನ ವಕೀಲರೊಬ್ಬರನ್ನು ಸಂಪರ್ಕಿಸುತ್ತಾರೆ. ಅವರಿಂದ ಗಿರಿಧರ್ ರಾವ್ ರಸ್ತೆ ಹಾಗೂ ಪಿವಿಎಸ್ ಕಲಾಕುಂಜ್ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ, ಸಮುದಾಯ ಭವನಗಳಿಗೆ ಹಾಗೂ ಅಪಾರ್ಟ್ಮೆಂಟ್ ಮಾಲೀಕರಿಗೆ ನೋಟಿಸ್ ಕೊಡಿಸುತ್ತಾರೆ. ಇದರಲ್ಲಿ, ನೀವೆಲ್ಲರೂ ಅಕ್ರಮ ಎಸಗುತ್ತಿದ್ದೀರಿ; ಪ್ರಭಾವ ಮತ್ತು ಹಣ ಬಲವನ್ನು ಉಪಯೋಗಿಸಿಕೊಂಡು ಕಾನೂನನ್ನು ಗಾಳಿಗೆ ತೂರುತ್ತಿದ್ದೀರಿ' ಎಂದು ನೇರವಾಗಿಯೇ ಆರೋಪ ಮಾಡುತ್ತಾರೆ.

ದಾಖಲೆ ಸಮೇತ ದೂರು:


       ಮಂಗಳೂರಿನ ಶಾರದ ವಿದ್ಯಾಲಯ. (ಎಫ್ಬಿ ಇಮೇಜ್)
ಮಂಗಳೂರಿನ ಶಾರದ ವಿದ್ಯಾಲಯ. (ಎಫ್ಬಿ ಇಮೇಜ್)

ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದ ಬಾಳಿಗ ಕೇವಲ ಮಾಹಿತಿ ಕೋರಲು ಮಾತ್ರವೇ ಸೀಮಿತರಾಗಿರಲಿಲ್ಲ ಎಂಬುದು ಮುಂದಿನ ಈ ನಡೆಗಳ ಮೂಲಕ ಸ್ಪಷ್ಟವಾಗುತ್ತಿದೆ. ಹೀಗೆ, ಅಕ್ರಮ ಪಾರ್ಕಿಂಗ್ ವ್ಯವಸ್ಥೆಯ ಬೆನ್ನತ್ತಿದ ಅವರು, ಅಷ್ಟೂ ಮಾಹಿತಿ ಕ್ರೋಢಿಕರಿಸಿಕೊಂಡು ಒಂದು ವರ್ಷದ ನಂತರ ಮಂಗಳೂರು ಪೊಲೀಸ್ ಇಲಾಖೆಗೆ, ಅಗ್ನಿ ಶಾಮಕ ಇಲಾಖೆ, ಸಾರಿಗೆ ಇಲಾಖೆ ಹೀಗೆ ಸಂಬಂಧಪಟ್ಟ ಎಲ್ಲರಿಗೂ ಅಕ್ಟೋಬರ್, 2013ರಲ್ಲಿ ಒಂದು ಸುದೀರ್ಘ ಪತ್ರವನ್ನು ಬರೆಯುತ್ತಾರೆ. ಅದರಲ್ಲಿ ಗಿರಿಧರ್ ರಾವ್ ರಸ್ತೆಯಲ್ಲಿ ಬರುವ ಶಾರದಾ ವಿದ್ಯಾಲಯ, ಎಕ್ಸ್ ಪರ್ಟ್ ಕಾಲೇಜ್, ಬೆಸೆಂಟ್ ಗ್ರೂಪ್ ಆಫ್ ಇನ್ಸಿಸ್ಟಿಟ್ಯೂಷನ್, ಕೆನರಾ ಗ್ರೂಪ್ ಆಫ್ ಇನ್ಸಿಸ್ಟಿಟ್ಯೂಷನ್ ಹಾಗೂ ಬಾಸ್ಕೋ ಇನ್ಸಿಸ್ಟಿಟ್ಯೂಟ್ಗಳ ಮುಂದೆ ಸದರಿ ಶಿಕ್ಷಣ ಸಂಸ್ಥೆಗಳ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಜತೆಗೆ, ಹಾದಿಯಲ್ಲಿರುವ ಸಿಬಿಇಯು ಗೋಲ್ಡನ್ ಜ್ಯೂಬಿಲಿ ಹಾಲ್ ಹಾಗೂ ಸಿಬಿಓಓ ಕೇಂದ್ರಗಳಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಲ್ಲಿಗೆ ಬರುವವರಿಗೂ ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡುತ್ತಿದ್ದಾರೆ. ಹಾಗೆಯೇ, ಇತ್ತೀಚೆಗೆ ನಿರ್ಮಾಣಗೊಂಡಿರುವ ಜನತಾ ಕನ್ಸ್ ಸ್ಟ್ರಕ್ಷನ್ ಸಂಸ್ಥೆಯ ಅಪಾರ್ಟ್ಮೆಂಟ್ ಕೂಡ ರಸ್ತೆಯಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ ಮಾಡಿದೆ ಎಂದು ದಾಖಲೆ ಸಮೇತ ದೂರು ನೀಡುತ್ತಾರೆ. ಬಾಳಿಗ ಹತ್ಯೆಯಾದ ಸಮಯದಲ್ಲಿ ಕೇಳಿಬಂದ ಹೆಸರುಗಳ ಪೈಕಿ ಈ ಜನತಾ ನಿರ್ಮಾಣ ಸಂಸ್ಥೆಯ ಮಾಲೀಕ, ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಕುಮಾರ್ ಹೆಸರಿತ್ತು ಎಂಬುದು ಗಮನಾರ್ಹ.

ರಮೇಶ್ ಕುಮಾರ್ ಅವರನ್ನು 'ಸಮಾಚಾರ' ಸಂಪರ್ಕಿಸಲು ಪ್ರಯತ್ನಿಸಿತಾದರೂ, "ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಕಚೇರಿಗೆ ಬರುತ್ತಿಲ್ಲ,'' ಎಂಬ ಉತ್ತರ ಸಿಕ್ಕಿತು.

ತೆಗೆದುಕೊಂಡ ತಿರುವು:

ವಿನಾಯಕ್ ಬಾಳಿಗ ಅಕ್ರಮ ಪಾರ್ಕಿಂಗ್ ಕುರಿತು ಮಾಹಿತಿ ಕೋರುವ ಮೂಲಕ ಶುರುವಾದ ಈ ವಿಚಾರ, ಹೋರಾಟದ ತಿರುವನ್ನು ಒಂದು ವರ್ಷದ ಅಂತರದಲ್ಲಿ ತೆಗೆದುಕೊಂಡಿತು. "ಪಾರ್ಕಿಂಗ್ ಅಕ್ರಮದ ಜತೆಗೆ ಶಿಕ್ಷಣ ಸಂಸ್ಥೆಗಳ ಭೂ ಒತ್ತುವರಿ ವಿಚಾರ ಹೊರಗೆ ಬಂತು. ಶಾರದಾ ವಿದ್ಯಾಲಯ ಒಟ್ಟು 1044. 48 ಚದರ ಮೀಟರ್ ಹೆಚ್ಚುವರಿ ಭೂಮಿಯಲ್ಲಿ ಕಟ್ಟಡಗಳನ್ನು ಕಟ್ಟಿದ್ದು ಬೆಳಕಿಗೆ ಬಂತು,'' ಎನ್ನುತ್ತಾರೆ ವಿನಾಯಕ್ ಬಾಳಿಗ ಅವರ ವಕೀಲರು. ಈ ಕುರಿತು ಪ್ರತಿಕ್ರಿಯಿಸಿದ ಶಾರದಾ ವಿದ್ಯಾಲಯದ ಪ್ರತಿನಿಧಿ ಎಂ. ಬಿ. ಪುರಾಣಿಕ್, "ನಾವು ಮಾತ್ರವೇ ಅಕ್ರಮ ನಡೆಸಿಲ್ಲ. ಎಲ್ಲರೂ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿನಾಯಕ್ ಬಾಳಿಗ ಕೇಳುತ್ತಿದ್ದದ್ದು ಕೇವಲ ರಸ್ತೆ ಪಾರ್ಕಿಂಗ್ ಕುರಿತು ಮಾತ್ರ. ಆದರೆ ಇದೀಗ ವಿದ್ಯಾಸಂಸ್ಥೆಯನ್ನೇ ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನನ್ನನ್ನೂ ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನ ಪಟ್ಟರು,'' ಎಂದರು.

ಇದರ ಜತೆಗೆ, ದಾಖಲೆಗಳು ಕಲೆಹಾಕುತ್ತ ಹೋದಂತೆ ರಿಯಲ್ ಎಸ್ಟೇಟ್ ಅಕ್ರಮವೂ ಹೊರಗೆ ಬಿದ್ದಿತ್ತು. "ಜನತಾ ಕನ್ಸ್ ಸ್ಟ್ರಕ್ಷನ್ಸ್ ಕಟ್ಟಿದ್ದ ಅಪಾರ್ಟ್ಮೆಂಟ್ ತ್ಯಾಜ್ಯ ಸಂಸ್ಕರಣ ಘಟಕವನ್ನೇ ನಿರ್ಮಿಸಿಲ್ಲ ಎಂಬುದು ಗೊತ್ತಾಗಿತ್ತು. ಮೂಲ ನಕ್ಷೆಯನ್ನು ಗಾಳಿ ತೂರಿ ಅಪಾರ್ಟ್ಮೆಂಟ್ ನಿರ್ಮಾಣವಾಗಿತ್ತು. ಜತೆಗೆ, ವಸತಿ ಸಂಕೀರ್ಣದ ತ್ಯಾಜ್ಯ ನೀರನ್ನು ನೇರವಾಗಿ ಮಹಾನಗರ ಪಾಲಿಕೆ ಒಳಚರಂಡಿಗೆ ಹರಿಯಬಿಡಲಾಗುತ್ತಿತ್ತು,'' ಎನ್ನುತ್ತಾರೆ ಬಾಳಿಗ ಪರ ವಕೀಲರು.

ಸದ್ಯ ಶಾರದಾ ವಿದ್ಯಾಲಯದ ಭೂ ಒತ್ತುವರಿ ವಿಚಾರ ಮಹಾನಗರ ಪಾಲಿಕೆ ಅಂಗಳದಲ್ಲಿದೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಕುಮಾರ್ ನಡೆಸಿದ ಅಕ್ರಮಗಳ ಕತೆ ಮುಂದೆ ಏನಾಯಿತು ಎಂಬ ಕುರಿತು ಮಾಹಿತಿ ಸಿಗುತ್ತಿಲ್ಲ. "ಇವ್ಯಾವುವೂ ಬಾಳಿಗ ಹತ್ಯೆ ಪ್ರಕರಣದ ಕಾರಣಗಳಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ,'' ಎನ್ನುತ್ತಾರೆ ಮಂಗಳೂರು ಅಪರಾಧ ವಿಭಾಗದ ಡಿಸಿಪಿ ಸಂಜೀವ್.

ಬಹುಶಃ ಬಾಳಿಗ ಬದುಕಿದ್ದಿದ್ದರೆ, ಈ ಎಲ್ಲಾ ಪ್ರಕರಣಗಳನ್ನು ಯಾವ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯತ್ತಿದ್ದರು; ಊಹೆಯಷ್ಟೆ ಈ ಸಮಯದಲ್ಲಿ ಸಾಧ್ಯ.