samachara
www.samachara.com
'ಬಾಳಿಗ ಫೈಲ್ಸ್': ಹತ್ಯೆಯಾದ ಮಾಹಿತಿ ಹಕ್ಕು ಹೋರಾಟಗಾರನ ಕಣಜದಿಂದ ಸ್ಫೋಟಕ ದಾಖಲೆಗಳ ಬಹಿರಂಗ!
ಬಾಳಿಗ ಫೈಲ್ಸ್

'ಬಾಳಿಗ ಫೈಲ್ಸ್': ಹತ್ಯೆಯಾದ ಮಾಹಿತಿ ಹಕ್ಕು ಹೋರಾಟಗಾರನ ಕಣಜದಿಂದ ಸ್ಫೋಟಕ ದಾಖಲೆಗಳ ಬಹಿರಂಗ!

samachara

samachara

ವಿನಾಯಕ ಪಾಂಡುರಂಗ ಬಾಳಿಗ...

ಮಾರ್ಚ್ 21, 2016ರ ಮುಂಜಾನೆ ಮಂಗಳೂರಿನ ಕೋಡಿಯಾಲ್ ಬೈಲಿನಲ್ಲಿರುವ ತಮ್ಮ ಮನೆಯ ಬಳಿಯೇ ಕೊಲೆಯಾಗಿ ಹೋದ ನಂತರ ಹೊರಜಗತ್ತಿಗೆ ಪರಿಚಿತವಾದ ಹೆಸರು. ಅವರ ಐಡೆಂಟಿಟಿ ಇರುವುದೇ ಮಾಹಿತಿ ಹಕ್ಕು ಕಾಯ್ದೆಯನ್ನು ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದ ರೀತಿಯಲ್ಲಿ. ಅವರ ಕೊಲೆ ನಡೆದ ನಂತರ ಮಂಗಳೂರಿನ ಬರ್ಕೆ ಪೊಲೀಸರು ಅವರ ಮನೆಯಲ್ಲಿದ್ದ ಸಾವಿರಾರು ಪುಟಗಳ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಸುಮಾರು 7 ಸಾವಿರ ಪುಟಗಳಿರಬಹುದು ಎಂಬುದು ಒಂದು ಅಂದಾಜು. ಅವುಗಳಲ್ಲಿ ಸುಮಾರು ಒಂದು ದಶಕಗಳ ಕಾಲ ಬಾಳಿಗ ಸರಕಾರದ ನಾನಾ ಇಲಾಖೆಗಳಿಗೆ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗಳು, ಅವುಗಳಿಗೆ ಬಂದ ಉತ್ತರಗಳ ಕಂತೆಯೇ ಇತ್ತು.

ಪ್ರಕರಣದ ತನಿಖೆ ನಡೆಯುತ್ತಿದೆ. 'ನಮೋ ಬ್ರಿಗೇಡ್' ಸಂಸ್ಥಾಪಕ ನರೇಶ್ ಶೆಣೈ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಇದೊಂದು ಸುಫಾರಿ ಹತ್ಯೆ ಎಂಬ ನಿರ್ಧಾರಕ್ಕೆ ಮಂಗಳೂರಿನ ಪೊಲೀಸರು ಬಂದಿದ್ದಾರೆ. ಆದರೆ ಕೊಲೆ ಮಾಡಲು ಹಂತಕರಿಗಿದ್ದ ಉದ್ದೇಶ (ಮೋಟಿವ್ ಆಫ್ ಮರ್ಡರ್) ಏನು? ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಪ್ರಕರಣದ ಕುರಿತು ಆರಂಭದಿಂದಲೂ ವರದಿ ಮಾಡಿಕೊಂಡ ಬಂದ ಆನ್ಲೈನ್ ಪತ್ರಕರ್ತರ ತಂಡವೊಂದು ಇದೀಗ ಬಾಳಿಗ ಅವರ ಮಾಹಿತಿ ಹಕ್ಕು ಕಾಯ್ದೆಯ ದಾಖಲೆಗಳನ್ನು ಕಲೆ ಹಾಕಿದೆ. ಅವುಗಳಲ್ಲಿ ಮಂಗಳೂರು ವಿದ್ಯುಕ್ಚಕ್ತಿ ನಿಗಮದಿಂದ ಶುರುವಾಗಿ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳವರೆಗೆ, ಅಧಿಕಾರಿಗಳಿಂದ ಶುರುವಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳವರೆಗೆ ಮಾಹಿತಿಗಳಿವೆ. ಅವುಗಳ ಮೇಲೊಂದು ಅಧ್ಯಯನ ನಡೆಸಿದ ತಂಡ ನಂತರ ಸಿಕ್ಕ ಮಾಹಿತಿಯನ್ನು ಸರಣಿ ರೂಪದಲ್ಲಿ ಪ್ರಕಟಿಸಲು ತೀರ್ಮಾನಿಸಿತು.

ಮಾಹಿತಿ ಹಕ್ಕು ಕಾಯ್ದೆಯನ್ನು ಅಸ್ತ್ರವಾಗಿ ಬಳಸುತ್ತಿದ್ದ ಬಾಳಿಗ ತಮ್ಮ 40ರ ವಯಸ್ಸಿನಲ್ಲಿಯೂ ಬ್ರಹ್ಮಚಾರಿಯಾಗಿಯೇ ಇದ್ದರು. ತಮ್ಮ ಸಮುದಾಯದ ಏಳ್ಗೆಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು. ಅಪ್ಪಟ ದೈವಭಕ್ತರಾಗಿದ್ದರು. ಅವರೊಳಗೊಬ್ಬ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಜಾಗೃತ ವ್ಯಕ್ತಿ ಇದ್ದ. ಅಂತವರು ಅಕಾರಣವಾಗಿ ಕೊಲೆಯಾಗಿ ಹೋದಾಗ, ಅವರ ನಡೆಸುತ್ತಿದ್ದ ಹೋರಾಟಕ್ಕೆ ಸಹಜ ಅಂತ್ಯ ಎಂದು ಅವರ ಸಾವನ್ನು ಬಯಸುತ್ತಿದ್ದ ಎಲ್ಲರಿಗೂ ಅನ್ನಿಸಿರಲಿಕ್ಕೂ ಸಾಕು. ಆದರೆ, ಕರ್ನಾಟಕದ ಪಾಲಿಗೆ ಅಪರೂಪದ, ಪ್ರಾಮಾಣಿಕ ಮಾಹಿತಿ ಹಕ್ಕು ಹೋರಾಟಗಾರರಾದ ವಿನಾಯಕ್ ಬಾಳಿಗ ಅವರ ಜಾಗೃತಿಯನ್ನು ಮುಂದಕ್ಕೆ ಕೊಂಡೊಯ್ಯಲೇಬೇಕಿದೆ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವುದು 'ಬಾಳಿಗ ಫೈಲ್ಸ್' ಪರಿಕಲ್ಪನೆ.

ಇವತ್ತು ತನಿಖಾ ಪತ್ರಿಕೋದ್ಯಮ ಸತ್ತೇ ಹೋಗಿದೆ ಎಂದು ಕೊರಗುವುದಕ್ಕಿಂತ ಇರುವ ಸಾಧ್ಯತೆಗಳನ್ನು ಮಿತಿಗಳ ಒಳಗೇ ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡುವುದು ಅನಿವಾರ್ಯ ಎಂದು ನಾವು ಅಂದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ 'ಬಾಳಿಗ ಫೈಲ್ಸ್' ಪ್ರಕಟವಾಗಲಿವೆ. ಆ ಮೂಲಕ ಬಾಳಿಗ ಅವರ ಹೋರಾಟಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಳ್ಳುವ ಪ್ರಯತ್ನವನ್ನು ನಡೆಸುತ್ತೇವೆ.

ನಿರೀಕ್ಷಿಸಿ...

(

'ಬಾಳಿಗ ಫೈಲ್ಸ್': ಆರೋಪಿ ನರೇಶ್ ಶೆಣೈಗೆ ಸಂಯಮೀಂದ್ರ ತೀರ್ಥರ ಕೃಪಾರ್ಶಿವಾದ ಇತ್ತಾ?)